ಶಿಲುಬೆಯಾತ್ರೆ

ವಿಕಿಪೀಡಿಯ ಇಂದ
Jump to navigation Jump to search

[೧]ಶಿಲುಬೆಯಾತ್ರೆ ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ. ಈ ಸ್ಮರಣೆಯು ಗಾಢವಾಗಿರುವಂತೆ ಮಾಡಲು ಅವರು ಯೇಸುಕ್ರಿಸ್ತ ನ ಆ ಅಂತಿಮ ಕ್ಷಣಗಳ ವೃತ್ತಾಂತವನ್ನು ಪಾರಾಯಣ ಮಾಡುವ ಇಲ್ಲವೇ ಅಭಿನಯಿಸುವ ಪರಿಪಾಠವೂ ಇದೆ. ಶಿಲುಬೆಯಾತ್ರೆ ಯ ವಿವಿಧ ಹಂತಗಳನ್ನು ಸೂಚಿಸುವ ಹದಿನಾಲ್ಕು ಚಿತ್ರಪಟಗಳ ಮುಂದೆ ಮೊಣಕಾಲೂರಿ ಪಾರಾಯಣ ಮಾಡುವ ಸಂಪ್ರದಾಯ, ಕ್ರೈಸ್ತಭಕ್ತರು ತಾವೇ ವಿಧಿಸಿಕೊಂಡ ಒಂದು ಕಡ್ಡಾಯ ಪದ್ಧತಿ. ಚರ್ಚಿನ ನಿಯಮವಿಲ್ಲದೆಯೂ ಈ ಶಿಲುಬೆಯಾತ್ರೆ ದೇಶ ಕಾಲಗಳನ್ನು ಮೀರಿ ನಡೆದುಕೊಂಡು ಬಂದಿದೆ. ಆ ಹದಿನಾಲ್ಕು ಚಿತ್ರಪಟಗಳ ದೃಶ್ಯ ಹಾಗೂ ಶೀರ್ಷಿಕೆಗಳಲ್ಲಿ ಏಕರೂಪತೆ ಇದ್ದರೂ ಪಾರಾಯಣ ಮಾಡುವ ಪಠ್ಯ ಹಾಗೂ ವ್ಯಾಖ್ಯಾನಗಳಲ್ಲಿ ಭಿನ್ನತೆ ಇದೆ. ದೇವಾಲಯಗಳಲ್ಲಿ, ಮನೆಗಳಲ್ಲಿ, ಗುಡ್ಡಗಳಲ್ಲಿ, ರಂಗದಲ್ಲಿ, ಏಕಾಂತದಲ್ಲಿ, ಮೌನದಲ್ಲಿ ಯೇಸುಕ್ರಿಸ್ತಶಿಲುಬೆಯಾತ್ರೆ ಯನ್ನು ಧ್ಯಾನಿಸುತ್ತಾ ಕ್ರಿಸ್ತನ ನೋವು ಸಂಕಟಗಳಲ್ಲಿ ತಾವೂ ಭಾಗಿಯಾಗುವ ಮತ್ತು ತನ್ಮೂಲಕ ಆತ್ಮಶೋಧನೆಗೂ ಆತ್ಮೋನ್ನತಿಗೂ ಕಾರಣವಾಗುವ ಈ ಪ್ರಕ್ರಿಯೆ ಕ್ರೈಸ್ತ ಜೀವನದ ಅವಿಭಾಜ್ಯ ಅಂಗ.

  1. https://en.wikipedia.org/w/index.php?title=Special:Search&profile=default&fulltext=Search&search=Stations+of+the+Cross&searchToken=cawshvfv6hx6yrtfthf00gmnj