ವಿಷಯಕ್ಕೆ ಹೋಗು

ವೀರಗಲ್ಲುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೀರಗಲ್ಲುಗಳು

[ಬದಲಾಯಿಸಿ]

ವೀರಗಲ್ಲುಗಳು ಯೋಧನೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸಂಕೇತವಾಗಿ ಸ್ಥಾಪಿಸಲ್ಪಡುತ್ತವೆ. ಮಾಸ್ತಿಕಲ್ಲು ಮತ್ತು ವೀರಗಲ್ಲುಗಳು ಭಾರತದಾದ್ಯಂತ ಅನೇಕ ರೂಪಗಳಲ್ಲಿ ದೊರಕುತ್ತವೆ. ಕರ್ನಾಟಕದಲ್ಲಿ ಕದಂಬರ ಕಾಲದಿಂದಲೂ ವೀರಗಲ್ಲುಗಳನ್ನು ಸ್ಥಾಪಿಸುವ ವಾಡಿಕೆಯು ಮುಂದುವರಿದುಕೊಂಡು ಬಂದಿದೆ. ವೀರಗಲ್ಲುಗಳು ಶಿಲೆಯಿಂದ ನಿರ್ಮಿತವಾಗಿರುತ್ತವೆ ಮತ್ತು ಶಿಲೆಯ ತಳಭಾಗದಲ್ಲಿ ಯೋಧನು ವೀರಮರಣವನ್ನಪ್ಪಿದ ಕಾರಣವನ್ನು ಚಿಕ್ಕ ವಾಕ್ಯಗಳಲ್ಲಿ ಬರೆಯಲಾಗಿರುತ್ತದೆ. ಕರ್ನಾಟಕದಲ್ಲಿ ಸುಮಾರು ೨೬೫೦ ವೀರಗಲ್ಲುಗಳು ಕಂಡುಬಂದಿವೆ.

ರೂಪ/ವಿನ್ಯಾಸ

[ಬದಲಾಯಿಸಿ]

ವೀರಗಲ್ಲುಗಳು ಒಂದು ವಿಶಿಷ್ಟ ರೂಪದಲ್ಲಿ ಬೆಳೆದು ಬಂದಿವೆ. ಕಲ್ಲಿನ ಮೇಲಿರುವ (ಮೇಲ್ಭಾಗದ) ಚಿತ್ರವು ಪರಾಕ್ರಮದ ಸಂಕೆತದಂತೆ ತೋರುತ್ತದೆ. ಹೋರಾಟ ನೆಡೆದು ಅದರಲ್ಲಿ ನಾಯಕನು ಬಿದ್ದಂತೆಯೂ, ಸ್ವರ್ಗದಿಂದ ಅಪ್ಸರೆಯರು ಬಂದು ಅವನನ್ನು ವಿಮಾನದಲ್ಲಿಟ್ಟು ಕೊಂಡೊಯ್ಯುತ್ತಿರುವಂತೆಯೂ ಇರುವ ಚಿತ್ರಕಲೆಯಿಂದ ಶಿಲ್ಪವು ಅಲಂಕೃತವಾಗಿರುತ್ತದೆ. ಅನಂತರ ಕೆಳಗೆ ಶಾಸನವಿರುತ್ತದೆ. ಇದು ವೀರಗಲ್ಲುಗಳ ಒಂದು ನೋಟ. ಸಾಮಾನ್ಯವಾಗಿ ಗದ್ಯದ ನೇರ ನಿರೂಪಣೆಯಲ್ಲಿರುವ ವೀರಗಲ್ಲುಗಳೇ ಹೆಚ್ಚು ದೊರಕಿವೆ. ಇದರಲ್ಲಿ ಚಕ್ರವರ್ತಿ ಅಥವಾ ಸಾಮಂತ ಅರಸನ ಹೆಸರು, ಬಿರುದುಗಳು ಮತ್ತು ಶಾಸನವು ರಚಿತವಾದ ಕಾಲ ಮೊದಲು ಕಂಡುಬರುತ್ತದೆ. ಅನಂತರ ವೀರಗಲ್ಲಿನ ನಾಯಕನು ಎದುರಿಸಬೇಕಾಗಿ ಬಂದಿರುವ ಹೋರಾಟ ಮತ್ತು ಅದರಿಂದ ಆತ ಮಡಿದು ದೇವಲೋಕ ಪ್ರಾಪ್ತಿಯಾಗುವ ಬಗೆ-ಇವುಗಳ ನಿರೂಪಣೆಯು ಬರುತ್ತದೆ. ಚಿತ್ರಕಲೆಯಲ್ಲೇ ಇಡೀ ಶಾಸನದ ತಿರುಳನ್ನು ಹೇಳುವ ವೀರಗಲ್ಲುಗಳೇ ಹೆಚ್ಚು ಕಂಡುಬರುತ್ತದೆ. ಗದ್ಯ ನಿರೂಪಣೆಯ ವೀರಗಲ್ಲಿಗೆ ಹಲ್ಮಿಡಿ ಶಾಸನವು ಒಂದು ಉದಾಹರಣೆ.

ಸಾಮನ್ಯವಾಗಿ ವೀರಗಲ್ಲುಗಳ ಗದ್ಯ ನಿರೂಪಣೆಯು ಈ ಶ್ಲೋಕದಿಂದ ಮುಕ್ತಾಯವಾಗುತ್ತದೆ.

ಜಿತೇನ ಲಭ್ಯತೇ ಲಕ್ಷ್ಮೀಃ ಮೃತೇನಾಪಿ ಸುರಾಂಗನಾ | ಕ್ಷಣವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ

ಇದರ ಅರ್ಥ ಹೀಗಿದೆ - ಗೆದ್ದರೆ ಲಕ್ಷ್ಮಿಯು ಒಲಿಯುತ್ತಾಳೆ, ಮಡಿದರೆ ಅಪ್ಸರೆಯರು ಬರುತ್ತಾರೆ . ನಿಮಿಷದಲ್ಲಿ ಅಳಿಯುವ ಈ ದೇಹಕ್ಕೆ , ಕಾಳಗದಲ್ಲಿ ಅಳಿಯುವೆನೆಂಬ ಕೊರಗೇಕೆ ? ಇದು ಕನ್ನಡ ನಾಡಿನ ವೀರಯೋಧರ ಮಂತ್ರವಾಗಿತ್ತು. ಅಂತಹ ವೀರಮರಣವನ್ನು ವೀರಗಲ್ಲುಗಳು ಸಾದರಪಡಿಸುತ್ತವೆ.

ಚಿತ್ರಗಳು

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]

ಮಾಹಿತಿ ಮೂಲ : ಎಪಿಗ್ರಾಫಿಕಾ ಕರ್ನಾಟಕ

ಚಿತ್ರಗಳು http://en.wikipedia.org/wiki/Hero_stone