ವಿ.ಗೋಪಾಲಸ್ವಾಮಿ ಅಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Pro. V. G Iyengar.jpg

ದಕ್ಷಿಣ ಬೆಂಗಳೂರಿನ 'ವಿಶ್ವೇಶ್ವರಪುರಂ'ನಲ್ಲಿ ಸ್ಥಾಪಿತವಾಗಿರುವ 'ಶ್ರೀ.ರಾಮಕೃಷ್ಣ ವಿದ್ಯಾರ್ಥಿನಿಲಯ'(ಆರ್.ಕೆ.ಎಸ್.ಹೋಂ') ವಿದ್ಯಾರ್ಥಿನಿಲಯದ ಸ್ಥಾಪಕರಲ್ಲಿ ವಿ.ಗೋಪಾಲಸ್ವಾಮಿ ಅಯ್ಯಂಗಾರ್ ಒಬ್ಬ ಪ್ರಮುಖವ್ಯಕ್ತಿಯಾಗಿದ್ದರು. ಎಲ್ಲರಿಂದಲೂ 'ವಿ.ಜಿ,' ಎಂದೇ ಪ್ರೀತಿಯಿಂದ ಸಂಬೋಧಿಸಲ್ಪಡುತ್ತಿದ್ದ ಅವರು, 'ಹೋಂನ ಕಾರ್ಯದರ್ಶಿ'ಯಾಗಿ, ಆಧಾರಸ್ಥಂಬವಾಗಿ ಹಲವು ದಶಕಗಳ ಸೇವೆಮಾಡಿದವರಲ್ಲಿ ಅತಿಮುಖ್ಯರು. ಆ ಸಮಯದಲ್ಲಿ ಅವರು ತೋರಿಸಿದ ಕಾರ್ಯವಿಚಕ್ಷಣೆ, ಶ್ರದ್ಧೆ, ನಿಸ್ಪೃಹತೆ, ಮತ್ತು ಮಾತು ನಡವಳಿಕೆಗಳಲ್ಲಿ ಸದಾ ಸ್ಪಷ್ಟತೆ, ವ್ಯಹಹಾರದ ಲೆಕ್ಖಾಚಾರಗಳಲ್ಲಿನ ವಿಷಯಗಳಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.ಶ್ರೀ.ರಾಮಕೃಷ್ಣ ವಿದ್ಯಾರ್ಥಿನಿಲಯದ ಯಾವ ಮೀಟಿಂಗ್ ಗೂ ಅವರು ತಪ್ಪಿಸಿಕೊಂಡವರಲ್ಲ. ಒಂದು ನಿಮಿಷವೂ ಲೇಟಾಗಿ ಬಂದವರಲ್ಲ. ಅವರು 'ಪೂರ್ವಾಚಾರ ನಿಷ್ಟ'ರೆಂದು ಅವರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಚಿಕ್ಕವರಾದ ಡಿ.ವಿ.ಜಿ.ಯವರು ಸದಾ ಸ್ಮರಿಸಿಕೊಳ್ಳುತ್ತಾರೆ. 'ರಾಮಾಯಣ ವ್ಯಾಸಂಗ,' ಹಾಗೂ 'ವೇದಪಾರಾಯಣ' ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತುಂಬಾ ಆಸಕ್ತಿಯಿಂದ ನೆರವೇರಿಸುತ್ತಿದ್ದರು. ಅತ್ಯಂತ ಸಾದಾ ಉಡುಪಿನ, ಸರಳ ನಡವಳಿಕೆಯ 'ವಿ.ಜಿ'.ಯವರು,ಮೇಲುಮನೋಟಕ್ಕೆ ತುಸು ಕಟುವಾಗಿ ಕಂಡರೂ ಉದಾರಮನಸ್ಸಿನ ವ್ಯಕ್ತಿಯಾಗಿ ಎಲ್ಲರ ಆದರ ಗೌರವಗಳಿಗೆ ಪಾತ್ರರಾಗಿದ್ದರು.

ಸೆಂಟ್ರೆಲ್ ಕಾಲೇಜಿನಲ್ಲಿ[ಬದಲಾಯಿಸಿ]

'ಸೆಂಟ್ರೆಲ್ ಕಾಲೇಜಿ'ನಲ್ಲಿ ಬಹಳವರ್ಷ ಗಣಿತಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಬೋಧಿಸಿ, ಕಾಲೇಜಿಗೆ ಕೀರ್ತಿತಂದ ಮಹನೀಯರವರು. ಪ್ರೊ.ಎಂ.ಟಿ.ನಾರಾಯಣ ಅಯ್ಯಂಗಾರ್ ರವರ ಶಿಷ್ಯರಾಗಿದ್ದ 'ವಿ.ಜಿ'.ಯವರು,ಅವರ ನಿವೃತ್ತಿಯ ಬಳಿಕ ಅದೇ ಸ್ಥಾನವನ್ನು ಅಲಂಕರಿಸಿ ಅತ್ಯುತ್ತಮ ಸೇವೆಯನ್ನು ಕೊಟ್ಟರು. 'ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್,' ಸಹ ಆಗಿದ್ದರು. 'ಶ್ರೀ.ಗೋಪಾಲಸ್ವಾಮಿ ಅಯ್ಯಂಗಾರ್,' ರವರು,

  • ೧೯೧೯-೩೦-'ನ್ಯಾಷನಲ್ ಎಜುಕೇಶನ್ ಸೊಸೈಟಿಯ ಸೆಕ್ರೆಟರಿ'ಯಾಗಿ
  • ೧೯೩೦-೪೩-'ಸದಸ್ಯರಾಗಿ',
  • ೧೯೪೩-೪೯-'ಖಜಾಂಚಿ'ಯಾಗಿ,
  • ೧೯೪೯-೬೩-'ಸೆಕ್ರೆಟರಿ'ಯಾಗಿ, ಕೆಲಸಮಾಡಿದರು.

'ವಿ.ಜಿ,'ಯವರ ದಿವ್ಯ-ವ್ಯಕ್ತಿತ್ವ'[ಬದಲಾಯಿಸಿ]

ತಮಿಳುಭಾಷೆಯಲ್ಲಿ ವಿಸ್ತಾರವಾದ ಸಾಹಿತ್ಯ ಪಾಂಡಿತ್ಯವನ್ನು ಹೊಂದಿದ್ದ ಅವರು,'ತಿರುವಾಯ್ಯೋಳಿ' ನಾಲಾಯಿರಂ, ಮೊದಲಾದ ಮತಗ್ರಂಥಗಳಲ್ಲಿ ಮಾತ್ರವೇ ಅಲ್ಲದೆ ಇತರ ತಮಿಳು ಸಾಹಿತ್ಯದಲ್ಲೂ ಜ್ಞಾನ ಸಂಪಾದನೆ ಮಾಡಿದ್ದರು. ಗೌರವ,ಭಯಮಿಶ್ರಿತವಾದ ಅವರ ಮುಖಭಂಗಿಯನ್ನು ನೋಡಿದವರೆಲ್ಲಾ ಅವರೊಬ್ಬ ಕಷ್ಟಸಾಧ್ಯದ ವ್ಯಕ್ತಿಯೆಂದು ಭಾವಿಸುತ್ತಿದ್ದರು.ಆದರೆ ಅವರ ಒಡನಾಟಕ್ಕೆ ಬಂದಮೇಲೆ ಅವರ ಸಹೃದಯತೆ, ಹಾಗೂ ವಿಶಾಲ ಮನೋಭಾವದ ಪರಿಚಯವಾಗುತ್ತಿತ್ತು. ಶ್ರೀವೈಷ್ಣವ ಸಂಪ್ರದಾಯದ, ಶ್ರೀವೈಷ್ಣವ ಲಾಂಛನ, ಶಿಸ್ತು, ಸಂಯಮ, ಅಚ್ಚುಕಟ್ಟುತನ ಅವರ ಮುಖದ ಮೇಲೆ ತಾಂಡವವಾಡುತ್ತಿತ್ತು. ಆಕಾರದಲ್ಲಿ ಅಷ್ಟೇನೂ ಎತ್ತರವಲ್ಲದ ಸ್ಥೂಲಶರೀರ,ದುಂಡುಮುಖದ ವರ್ಚಸ್ಸು,ಗಂಭೀರ ಮುಖಮುದ್ರೆ,ದಟ್ಟವಾಗಿ ಮೇಲೆದ್ದು ಕಾಣಿಸುತ್ತಿದ್ದ ಬಿಳಿಹುಬ್ಬುಗಳು,ಹೊಳೆಯುತ್ತಿದ್ದ ಕಣ್ಣುಗಳು,ಗರಿಗರಿಯಾದ ಶುಭ್ರಬಿಳುಪಿನ ಕಚ್ಚೆಪಂಚೆ,ಕುತ್ತಿಗೆಗೆ ಬಿಗಿದಪ್ಪಿದ ನಿಲುವಾದ ಬಿಳಿಯ ಕೋಟು,ಜರಿಪೇಟ,ಮತ್ತು ಉತ್ತರೀಯ, ಕೈಯಲ್ಲಿ ಬೆತ್ತದ ಕೋಲು,ಸಿಂಹನಡೆ, ಎಂಥವರನ್ನೂ ಮತ್ತೊಮ್ಮೆ ಅವರನ್ನು ನೋಡಲು ಪ್ರೇರೇಪಿಸುತ್ತಿತ್ತು.

'ನ್ಯಾಷನಲ್ ಕಾಲೇಜ್,' ಹಾಗೂ 'ಆರ್.ಕೆ.ಎಸ್. ಹೋಂ' ಅವರ ಪ್ರೀತಿಯ ಸಂಸ್ಥೆಗಳಾಗಿದ್ದವು[ಬದಲಾಯಿಸಿ]

'ನ್ಯಾಷನಲ್ ಎಜುಕೇಶನ್ ಸೊಸೈಟಿ'ಯಲ್ಲಿ ಪ್ರಾಂಶುಪಾಲರಾಗಿದ್ದರು; ಮತ್ತು ನ್ಯಾಷನಲ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಹತ್ತಿರದ ಚಾಮರಾಜಪೇಟೆಯ ೪ ನೇ ರಸ್ತೆಯಲ್ಲಿ ವಾಸವಾಗಿದ್ದ ವಿ.ಜಿ.ಯವರಿಗೆ,ಶ್ರೀ.ರಾಮಕೃಷ್ಣ ವಿದ್ಯಾರ್ಥಿನಿಲಯ ಬಲು ಪ್ರಿಯವಾದ ಸಂಸ್ಥೆಯಾಗಿತ್ತು. ಈ ಎರಡೂ ಸಂಸ್ಥೆಗಳಿಗೆ ಒಂದು ಶಾಶ್ವತ ಸ್ವರೂಪವನ್ನೂ, ಕಾರ್ಯ ಪಟುತ್ವವನ್ನೂ ತಂದುಕೊಟ್ಟ ಉಪಕಾರಿಗಳಲ್ಲಿ 'ವಿ.ಜಿ'.ಯವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.