ವಿಷ್ಣುಮೂರ್ತಿ ಒತ್ತೆಕೋಲ

ವಿಕಿಪೀಡಿಯ ಇಂದ
Jump to navigation Jump to search
ವಿಷ್ಣುಮೂರ್ತಿ ಪಾತ್ರಧಾರಿ
ಒತ್ತೆಕೋಲದ ಒಂದು ದೃಶ್ಯ

ತುಳುನಾಡಿನ ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗ ಭೂತಾರಾಧನೆ.ತುಳುವರು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಭೂತಾರಾಧನೆಯನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ಭೂತಾರಾಧನೆಯಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಅನೇಕ ವಿಧಗಳಿವೆ. ಆ ಎಲ್ಲಾ ವಿಧಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ.

ಮುನ್ನೋಟ[ಬದಲಾಯಿಸಿ]

ಈ ಎಲ್ಲಾ ಆಚರಣೆಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡು ಬರುವಂತಹ ಆಚರಣೆ ಒತ್ತೆ ಕೋಲ. ಸಾಮನ್ಯವಾಗಿ ತುಳುನಾಡಿನಲ್ಲೆಲ್ಲಾ ನಡೆಯುವ ಭೂತಾರಾಧನೆಗಳಂತಲ್ಲದೆ, ಈ ಒತ್ತೆ ಕೋಲ ಎಲ್ಲೆಡೆಯೂ ಕಂಡು ಬರುವುದಿಲ್ಲ. ಕೆಲವೇ ಕೆಲವು ಕಡೆಗಳಲ್ಲಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನ ಪ್ರದೇಶಗಳಲ್ಲಿ ಈ ಒತ್ತೆಕೋಲದ ಪ್ರಭಾವವನ್ನು ಹೆಚ್ಚು ಕಾಣಬಹುದು. ಈ ಅಚರಣೆಯನ್ನು ಮಂಗಳೂರಿಗಿಂತ ಹೆಚ್ಚಾಗಿ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಕಾಣಬಹುದು. ಇದನ್ನು ಕೇರಳಿಗರು ವಿಷ್ಣುಮೂರ್ತಿ ತೆಯ್ಯಂ ಎಂದು ಕರೆದರೆ ತುಳುವರು ಒತ್ತೆ ಕೋಲ ಎಂದು ಕರೆಯುತ್ತಾರೆ. ಕೇರಳದಲ್ಲಿ ಪ್ರಸಿದ್ದವಾಗಿರುವ ಆಚರಣೆಯಾದರೂ ಕರ್ನಾಟಕದಲ್ಲಿ ಇದರ ಪ್ರಭಾವ ಕಮ್ಮಿಯೇನಿಲ್ಲ. ಬೆಳಗಿನ ಜಾವದಲ್ಲಿ ನಡೆಯುವ ವಿಷ್ಣುಮೂರ್ತಿ ಕೆಂಡಸೇವೆ ಈ ಆಚರಣೆಯ ಪ್ರಮುಖ ಆಕರ್ಷಣೆ. ಕೆಂಡಸೇವೆ ಹಾಗೂ ಇದರ ಹಿಂದಿರುವ ಇತಿಹಾಸ ಒತ್ತೆ ಕೋಲವನ್ನು ಇತರ ಆಚರಣೆಗಳಿಗಿಂತ ಭಿನ್ನವಾಗಿರಿಸುತ್ತವೆ.[೧]

ಒತ್ತೆಕೋಲವನ್ನು ತುಳುನಾಡಿನ ಇತರ ಆರಾಧನೆಗಳಿಗಿಂತ ಭಿನ್ನವಾಗಿಸುವ ಇನ್ನೊಂದು ಮುಖ್ಯ ಅಂಶವಿದೆ. ಭೂತಾರಾಧನೆಗಳಲ್ಲಿ ಆರಾಧಿಸಲ್ಪಡುವ ದೈವಗಳಲ್ಲಿ ಅವುಗಳದ್ದೇ ಆದ ಪ್ರಬೇಧಗಳಿವೆ. ಹಿಂದೆ ತುಳುನಾಡಿನಲ್ಲೇ ನಲೆಸಿ ವಿವಿಧ ಕಾರಣಗಳಿಂದ ವೀರ ಮರಣವನ್ನು ಪಡೆದ ಕೆಲವು ವ್ಯಕ್ತಿಗಳಿಗೆ ತುಳುವರು ದೈವದ ಪಟ್ಟವನ್ನು ನೀಡಿದ್ದರೆ, ಇನ್ನೂ ಕೆಲವು ದೈವಗಳು ದೇವರ ಅಪ್ಪಣೆಯನ್ನು ಪಡೆದು ಭೂಲೋಕದಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಲು ಬಂದವಾಗಿವೆ. ಕನ್ನಡ ನಾಡಿನಿಂದ ಇಳಿದು ಬಂದು ತುಳುನಾಡಿನಲ್ಲೇ ನೆಲೆಸಿ ಕಾರಣಿಕವನ್ನು ತೋರಿದ ಕೆಲವು ಕನ್ನಡಿಗರಿಗೂ ತುಳುವರು ದೈವತ್ವವನ್ನು ನೀಡಿ ಆರಾಧಿಸುತ್ತಾ ಬಂದಿದ್ದಾರೆ. ಈ ಎಲ್ಲಾ ದೈವಗಳಿಗೂ ಕಾಲಕಾಲಕ್ಕೆ ತಕ್ಕಂತೆ ನೇಮ, ಕೋಲ, ಒಲಸರಿ, ಮೆಚ್ಚಿಗಳನ್ನು ತುಳುವರು ನಡೆಸಿಕೊಂಡು ಬಂದಿದ್ದಾರೆ. ಈ ಎಲ್ಲಾ ಕೋಲಗಳಲ್ಲಿ ಒತ್ತೆ ಕೋಲ ವಿಭಿನ್ನವಾಗಿ ನಿಲ್ಲುವುದು ಅದರಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿಯಿಂದಾಗಿ. ದೇವರನ್ನು ದೈವವಾಗಿ ತುಳುವರು ಆರಾಧಿಸುವುದು ಈ ಒತ್ತೆ ಕೋಲಗಳಲ್ಲಿ ಮಾತ್ರ. ಬೇರೆ ಯಾವುದೇ ಕೋಲಗಳಲ್ಲಿ ತ್ರಿಮೂರ್ತಿಗಳನ್ನು ಆರಾಧಿಸಲಾಗುವುದಿಲ್ಲ.

ಇತಿಹಾಸ[ಬದಲಾಯಿಸಿ]

ಈ ಆಚರಣೆಯ ಹಿಂದೆ ಒಂದು ಕಥೆಯಿದೆ.ಕೇರಳದ ಮಲಬಾರಿನಲ್ಲಿ ಪ್ರಸಿದ್ದವಾಗಿರುವ ಈ ಆಚರಣೆಯ ಇತಿಹಾಸದ ಕಥೆಯ ಬೇರುಗಳು ಕರ್ನಾಟಕದ ಮಂಗಳೂರಿಗೂ ಹಬ್ಬಿವೆ. ಲಭ್ಯವಿರುವ ಕಥೆಗಳ ಪ್ರಕಾರ ಈ ಆಚರಣೆಯ ಇತಿಹಾಸದ ಮೂಲವಿರುವುದು 'ಕೊಟ್ಟಪ್ಪುರಂ' ಎಂಬ ಒಂದು ಪ್ರಾಚೀನ ತರವಾಡಿನಲ್ಲಿ. ಈ ತರವಾಡಿನ ಮೂಲವಿದ್ದುದು ಕಾಸರಗೋಡಿನ ಸಮೀಪದ ನೀಲೇಶ್ವರದಲ್ಲಿ. ಇಂದಿಗೂ ಅದೇ ಹೆಸರಿರುವ ಈ ಊರಿನಲ್ಲಿ ತುಳುವರು ಹೆಚ್ಚಾಗಿ ನೆಲೆಸಿದ್ದಾರೆ.

ಅಂದಿನ ದಿನಗಳಲ್ಲಿ ಈ ತರವಾಡಿನ ಮುಖ್ಯಸ್ಥನಾಗಿದ್ದುದು ಕುರುವಟ್ಟ್ ಕುರುಪ್. ಆವನ ಮನೆಯಲ್ಲಿ ಕಣ್ಣನ್ ಎಂಬ ಹುಡುಗ ಸೇವಕನಾಗಿದ್ದ(ಅವನನ್ನು ಪಳಂತಯಿ ಕಣ್ಣನ್ ಎಂದೂ ಕರೆಯುತ್ತಾರೆ). ಮಹಾನ್ ವಿಷ್ಣು ಭಕ್ತನಾಗಿದ್ದ ಆತ ಒಂದು ದಿನ ಕುರುವಟ್ಟ್ ಕುರುಪ್ಪನ ಮಗಳೊಂದಿಗೆ ಆಟವಾಡುತ್ತಿದ್ದಾಗ ಅವನಿಂದಾಗಿ ಒಂದು ಮಾವಿನ ಹಣ್ಣು ಕುರುಪ್ಪನ ಮಗಳ ತಲೆಯ ಮೇಲೆ ಬಿತ್ತು. ಆಕಸ್ಮಿಕವಾಗಿ ಈ ಘಟನೆ ನಡೆದಿದ್ದರೂ ಕೆಲವು ಕುತಂತ್ರಿಗಳ ಕಾರಣದಿಂದಾಗಿ ಹಾಗೂ ಹಿಂದಿನ ಕೆಲವು ಘಟನೆಗಳಿಂದಾಗಿ ತನ್ನ ಮಗಳ ಜೀವಕ್ಕೆ ಅವನಿಂದ ಬೆದರಿಕೆಯಿದೆಯೆಂದು ತಿಳಿದು ಕುರುವಟ್ಟ್ ಬಾಲಕನ ಜೀವ ತೆಗೆಯುವಂತೆ ತನ್ನ ಅನುಚರರಿಗೆ ಆದೇಶಿಸುತ್ತಾನೆ. ಇದು ಒಂದು ಕಥೆಯಾದರೆ ಇನ್ನೂ ಕೆಲವರ ಪ್ರಕಾರ,ಕಣ್ಣನ್ ಕುರುಪ್ಪನ ತೋಟದಿಂದ ಮಾವಿನ ಹಣ್ಣನ್ನು ಕೀಳುವಾಗ ಸಿಕ್ಕಿ ಬೀಳುತ್ತಾನೆ. ಆದರಿಂದ ರೊಚ್ಚಿಗೇಳುವ ಕುರುಪ್ ತನ್ನ ಸಹಚರರಿಗೆ ಆತನನ್ನು ಕೊಲ್ಲುವಂತೆ ಆದೇಶಿಸುತ್ತಾನೆ. ಎರಡು ಕಥೆಗಳು ಭಿನ್ನವಾಗಿದ್ದರೂ ಕುರುಪ್ ಹಿಂದಿನ ದ್ವೇಷದಿಂದ ಹುಡುಗನನ್ನು ಕೊಲ್ಲಲು ಆದೇಶಿಸುವುದು ಮಾತ್ರ ಎರಡೂ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಇದರ ಸುಳಿವನ್ನು ಅರಿತ ಕೆಲವು ಹಿತೈಷಿಗಳು ಕಣ್ಣನ್ ನೀಲೇಶ್ವರ ಬಿಟ್ಟು ಬೇರೆ ಊರಿಗೆ ಹೋಗುವುದು ಕ್ಷೇಮವೆಂದು ಸಲಹೆಯನ್ನು ನೀಡುತ್ತಾರೆ.ಅದರಂತೆ ಕಣ್ಣನ್ ನೀಲೇಶ್ವರವನ್ನು ಬಿಟ್ಟು ಮಂಗಳೂರಿನ ಜೆಪ್ಪು ಎಂಬ ಊರಿಗೆ ಬರುತ್ತಾನೆ. ಅಲ್ಲಿ ಆತ ಒಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಗಿದ್ದ ಎಂದು ಒಂದು ಕಥೆ ಹೇಳಿದರೆ, ದೇವಿ ಭಕ್ತೆಯಾದ ಒಬ್ಬಳು ಮುದುಕಿಯ ಮನೆಯಲ್ಲಿ ವಾಸವಾಗಿದ್ದ ಎಂದು ಇನ್ನೊಂದು ಕಥೆ ಹೇಳುತ್ತದೆ. ಒಟ್ಟಿನಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿ ಆತ ಇದ್ದ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಬಹಳ ವರ್ಷಗಳ ಕಾಲ ಅಲ್ಲಿಯೇ ತಂಗಿದ್ದ ಕಣ್ಣನ್ ಕೊನೆಗೊಂದು ದಿನ ತನ್ನವರನ್ನು ನೋಡುವ ಕಾತರತೆಯಿಂದ ಪುನಃ ನೀಲೇಶ್ವರಕ್ಕೆ ಬರುತ್ತಾನೆ.

ಕಣ್ಣನ್ ನೀಲೇಶ್ವರಕ್ಕೆ ಬಂದದ್ದನ್ನು ತಿಳಿದುಕೊಳ್ಳುವ ಕುರುಪ್ ಹಿಂದಿನ ದ್ವೇಷವನ್ನು ಹಾಗೂ ಸೋಲನ್ನು ನೆನಪಿಸಿಕೊಂಡು ತನ್ನ ಅನುಚರರೊಂದಿಗೆ ಹೊರಡುತ್ತಾನೆ. ಇದರ ಅರಿವಿಲ್ಲದ ಕಣ್ಣನ್ ಕಡಳಿ ಕೊಳಂನಲ್ಲಿ ಸ್ನಾನ ಮಾಡುತ್ತಿರುತ್ತಾನೆ(ಈ ಕೊಳ ಈಗ ನೀಲೇಶ್ವರದ ಸಂತೆಯ ಸಮೀಪದಲ್ಲಿದೆ). ಅಲ್ಲಿಗೆ ಬರುವ ಕಣ್ಣನ್ ತನ್ನ ಅನುಚರರೊಂದಿಗೆ ಕೂಡಿಕೊಂಡು ಅವನ ಕೊಲೆ ಮಾಡುತ್ತಾನೆ. ತನ್ನ ಭಕ್ತನ ಕೊಲೆ ನಡೆದುದನ್ನು ಕಂಡ ವಿಷ್ಣುಮೂರ್ತಿ ತನ್ನ ರೌದ್ರ ರೂಪವಾದ ನರಸಿಂಹ ರೂಪವನ್ನು ತಾಳಿ ಕುರುಪ್ಪನ ಬೆನ್ನ ಹಿಂದೆ ಬೀಳುತ್ತಾನೆ.

ಇದರಿಂದಾಗಿ ಕುರುಪ್ಪನ ಸಂಸಾರದಲ್ಲಿ ಅನೇಕ ಕಷ್ಟಗಳು ಕಾಣಿಸಿಕೊಳ್ಳುತ್ತವೆ. ಆತನ ಕುಟುಂಬಸ್ಥರಿಗೆ ಮಾನಸಿಕ ವ್ಯಾಧಿ ಶುರುವಾಗಿ ಆತ ತನ್ನೆಲ್ಲಾ ಗಳಿಕೆಯನ್ನೂ ಕಳೆದುಕೊಳ್ಳುತ್ತಾನೆ. ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತನಾಗುವ ಆತ ಜ್ಯೋತಿಷಿಗಳನ್ನು ಸಂರ್ಕಿಸಿದಾಗ ವಿಷ್ಣುಮೂರ್ತಿ ನರಸಿಂಹ ರೂಪದಲ್ಲಿ ಹಿಂದೆ ಬಿದ್ದಿರುವುದು ಗೊತ್ತಾಗುತ್ತದೆ. ಇದಕ್ಕೆ ಪರಿಹಾರವೇನೆಂದು ವಿಚಾರಿಸಲಾಗಿ ವಿಷ್ಣುಮೂರ್ತಿ ಶಾಂತವಾಗಲು ನರಸಿಂಹ ದೇವರ ಒಂದು ಗುಡಿ ಕಟ್ಟಿಸುವಂತೆ ಹಾಗೂ ದೇವರಿಗೆ ಕೆಂಡಸೇವೆಯನ್ನು ಕೊಡುವಂತೆ ಸಲಹೆಯನ್ನು ಜ್ಯೋತಿಷಿಗಳು ನೀಡುತ್ತಾರೆ. ಅದರಂತೆ ಕುರುಪ್ಪನು ನಡೆದುಕೊಳ್ಳುತ್ತಾನೆ.ಹೀಗೆ ಒತ್ತೆ ಕೋಲ ಅಥವಾ ಕೆಟ್ಟಿ ಕೋಲ ಪ್ರಾರಂಭವಾಗುತ್ತದೆ. ಜ್ಯೋತಿಷಿಗಳ ಸಲಹೆಯಂತೆ ನೀಲೇಶ್ವರದ ಕೊಟ್ಟಪುರಂನಲ್ಲಿ ವೈಕುಂಡೇಶ್ವರ ದೇವಾಲಯವನ್ನು ನಿರ್ಮಿಸಲಾಗುತ್ತದೆ. ಶಾಂತನಾದ ವಿಷ್ಣುಮೂರ್ತಿ ಅಲ್ಲೇ ನೆಲಸಿದನೆಂದು ಪ್ರತೀತಿ.

ಒತ್ತೆಕೋಲದ ಆಚರಣೆಗಳು[ಬದಲಾಯಿಸಿ]

ಒತ್ತೆಕೋಲದ ವಿಶೇಷತೆಯಿರುವುದೇ ಅದರ ಆಚರಣೆಯಲ್ಲಿ. ಅನೇಕ ಕ್ಲಿಷ್ಟಕರವಾದ ಆಚರಣೆಗಳನ್ನು ಇದು ಒಳಗೊಂಡಿದೆ. ತುಳುನಾಡಿನ ಎಲ್ಲಾ ಭೂತ ಕೋಲಗಳಲ್ಲಿಯೂ ದೈವದ ವೇಷವನ್ನು ಧರಿಸುವುದು ಎರಡೆ ಎರಡು ಪಂಗಡಗಳು. ಜಾತಿ ವ್ಯವಸ್ಥೆಯಲ್ಲಿ ಕೆಳಜಾತಿಯವರೆಂದು ಪರಿಗಣಿಸಲ್ಪಡುವ ನಲಿಕೆ ಹಾಗು ಪಂಬದರನ್ನು ಬಿಟ್ಟರೆ ಬೇರೆ ಯಾವ ಪಂಗಡಗಳಿಗೂ ಭೂತದ ವೇಷವನ್ನು ಕಟ್ಟುವ ಅವಕಾಶವಿಲ್ಲ. ಆದರೆ ವಿಷ್ಣು ಮೂರ್ತಿ ಒತ್ತೆಕೋಲ ಮಾತ್ರ ಇದಕ್ಕಿಂತ ವಿಭಿನ್ನ.ಇಲ್ಲಿ ವಿಷ್ಣು ಮೂರ್ತಿ ವೇಷವನ್ನು ಧರಿಸುವ ಅಧಿಕಾರವಿರುವುದು ಬೆಳ್ಚಡರೆಂಬ ಜನಾಂಗಕ್ಕೆ.ಇವರು ಈ ವೇಷವನ್ನು ಬಿಟ್ಟು ಬೇರೆ ಯಾವ ಭೂತಗಳ ವೇಷವನ್ನೂ ಧರಿಸುವುದಿಲ್ಲ. ಇವರ ಮಾತೃ ಭಾಷೆ ಮಲಯಾಳಂ.ಹೆಚ್ಚಿನ ಎಲ್ಲಾ ಭೂತಗಳ ನುಡಿಯಂತೆ ಒತ್ತೆಕೋಲದಲ್ಲಿ ನುಡಿಯನ್ನು ತುಳುವಿನಲ್ಲಿ ಅಥವಾ ಕನ್ನಡದಲ್ಲಿ ಹೇಳಲಾಗುವುದಿಲ್ಲ. ಬದಲಾಗಿ ಮಲಯಾಳಂನಲ್ಲಿ ನುಡಿಯನ್ನು ದೈವದ ಪಾತ್ರಧಾರಿ ಹೇಳುತ್ತಾನೆ.

ಈ ಆಚರಣೆ ಪ್ರಾರಂಭವಾಗುವುದು ಗೊನೆ ಮುಹೂರ್ತದಿಂದ. ಒತ್ತೆಕೋಲಕ್ಕೆ ಮುಹೂರ್ತವನ್ನು ಅಂದು ನಿಗದಿ ಪಡಿಸಲಾಗುತ್ತದೆ. ನಂತರ ಕೆಂಡ ಸೇವೆಗೆ ಬೇಕಾದ ಕಟ್ಟಿಗೆಯನ್ನು ಒಟ್ಟು ಮಾಡಲಾಗುತ್ತದೆ. ಎಲ್ಲಾ ಬಗೆಯ ಕಟ್ಟಿಗೆಗಳನ್ನು ಬಳಸಲು ಅವಕಾಶವಿಲ್ಲ. ಕೆಂಡ ಸೇವೆ ನಡೆಯುವುದು ಬೆಳಗಿನ ಜಾವದಲ್ಲಿ. ಆ ರಾತ್ರಿ ಪುಳಿಚ್ಚಾಟ್ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಪುಳಿಚ್ಚಾಟಿಗೆ ಮುನ್ನ ಬೃಹತ್ ಕಟ್ಟಿಗೆ ರಾಶಿಗೆ ಬೆಂಕಿ ಹಚ್ಚಲಾಗುತ್ತದೆ.[೨]

ಪುಳಿಚ್ಚಾಟಿನ ಮಹತ್ವ[ಬದಲಾಯಿಸಿ]

ನರಸಿಂಹ ಅವತಾರದ ಪರಿಕಲ್ಪನೆ ಹೊಂದಿರುವ ಹಿನ್ನಲೆಯಲ್ಲಿ ಈ ಆಚರಣೆಯಲ್ಲಿ ಮುಖ್ಯವಾಗಿ ಅದರ ಪ್ರಭಾವ ಕಂಡು ಬರುತ್ತದೆ. ಇದು ನಡೆಯುವುದು ಮಧ್ಯ ರಾತ್ರಿಯ ಸಮಯದಲ್ಲಿ. ಪುಳಿಚ್ಚಾಟಿನಲ್ಲಿ ಮುಖ್ಯವಾಗಿ ನರಸಿಂಹ ಹಿರಣ್ಯ ಕಶ್ಯಪುವಿನನ್ನು ಕೊಲ್ಲುವುದನ್ನು ಅಭಿನಯಿಸಲಾಗುತ್ತದೆ. ಚೆಂಡೆಯ ಹಿನ್ನಲೆ ಧ್ವನಿಯಿರುತ್ತದೆ. ಆ ಹಿನ್ನಲೆ ಧ್ವನಿಯಲ್ಲಿ ಪಾತ್ರಧಾರಿ ನರಸಿಂಹನಂತೆ ಅಭಿನಯಿಸುತ್ತಾನೆ. ಹಿರಣ್ಯ ಕಶ್ಯಪುವನ್ನು ಕೊಲ್ಲುವಂತೆ ಇದರಲ್ಲಿ ಅಭಿನಯಿಸಲಾಗುತ್ತದೆ. ನಂತರ ಪ್ರಹ್ಲಾದನನ್ನು ಸಮಾಧಾನ ಪಡಿಸುವುದನ್ನೂ ಅತ್ಯಂತ ಸುಂದರವಾಗಿ ಅಭಿನಯಿಸಲಾಗುತ್ತದೆ. ಅತ್ಯಂತ ಲಯಬದ್ದವಾಗಿ ಸಾಗುವ ಈ ನೃತ್ಯವನ್ನು ನೋಡುವುದೇ ಚಂದ.

ಪುಳಿಚ್ಚಾಟ್
ನರಸಿಂಹನಾಗಿ ಅಭಿನಯ

ಕೆಂಡ ಸೇವೆ[ಬದಲಾಯಿಸಿ]

ಪುಳಿಚ್ಚಾಟಿನ ನಂತರ ನಡೆಯುವುದೇ ಕೆಂಡ ಸೇವೆ. ಇದು ಬೆಳಗಿನ ಜಾವ ನಡೆಯುತ್ತದೆ. ಮರದ ದಿಣ್ಣೆಗಳ ರಾಶಿಗೆ ಪುಳಿಚಾಟಿನ ಸಂದರ್ಭದಲ್ಲಿ ರಾತ್ರಿಯೇ ಬೆಂಕಿಯನ್ನು ಹಾಕಲಾಗಿರುತ್ತದೆ. ಬೆಳಗಿನ ಜಾವದಲ್ಲಿ ಆ ಕಟ್ಟಿಗೆಯೆಲ್ಲಾ ಉರಿದು ಬೂದಿಯಾಗಿರುತ್ತದೆ. ರಾತ್ರಿ ನರಸಿಂಹನ ಪಾತ್ರವನ್ನು ಮಾಡಿದ ಪಾತ್ರಧಾರಿ ಬೆಳಿಗ್ಗಿನ ಜಾವದಲ್ಲಿ ತನ್ನ ವಿಶೇಷ ಉಡುಪನ್ನು ಧರಿಸಿ ಸಿದ್ದನಾಗಿರುತ್ತಾನೆ. ಕೆಲವು ಆಚರಣೆಗಳು ನಡೆದ ಮೇಲೆ ಕೆಲವು ಪಾತ್ರಿಗಳು ಆ ಕೆಂಡದ ಮೇಲೆ ಓಡುತ್ತಾರೆ.

ಇದೆಲ್ಲಾ ನಡೆದ ಮೇಲೆ ವಿಷ್ಣುಮೂರ್ತಿ ಪಾತ್ರಧಾರಿ ಓಡುತ್ತಾ ಬಂದು ಕೆಂಡದ ಮೇಲೆ ಬೀಳುತ್ತಾನೆ. ಹೀಗೆಯೇ ಹಲವು ಸಾರಿ ಆ ಕೆಂಡದ ಸುತ್ತ ಓಡುತ್ತಾ ಅದರ ಮೇಲೆ ಬೀಳುತ್ತಾನೆ. ಇದು ಭಕ್ತರ ಮೈಯಲ್ಲಿ ಪುಳಕವುಂಟು ಮಾಡುತ್ತದೆ. ಇದೇ ಕೆಂಡ ಸೇವೆ. ಇದು ಒತ್ತೆ ಕೋಲದ ಪ್ರಮುಖ ಆಚರಣೆ. ನರಸಿಂಹನನ್ನು ಕೊಂದ ಮೇಲೆ ಆದ ಮೈಲಿಗೆಯನ್ನು ತೊಳೆದುಕೊಳ್ಳುವುದಕ್ಕಾಗಿ ವಿಷ್ಣುಮೂರ್ತಿ ಈ ಬೆಂಕಿ ಸ್ನಾನವನ್ನು ಮಾಡುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಕೆಂಡ ಸ್ನಾನ ನಡೆದ ಮೇಲೆ ನುಡಿ ಹೇಳಿ ಅಭಯ ನೀಡಿ ದೈವದ ಪಾತ್ರಧಾರಿ ಪ್ರಸಾದವನ್ನು ಹಂಚುತ್ತಾನೆ.

ಕೆಂಡ ಸೇವೆ
ಉರಿಯುತ್ತಿರುವ ಕೆಂಡಕ್ಕೆ ಜಿಗಿಯುವ ಪಾತ್ರಧಾರಿ

ಪಾತ್ರಧಾರಿಯ ವೇಷ-ಭೂಷಣಗಳು[ಬದಲಾಯಿಸಿ]

ತುಳುನಾಡಿನಲ್ಲಿ ನಡೆಯುವ ಇತರ ಕೋಲಗಳಂತೆ ಒತ್ತೆ ಕೋಲದಲ್ಲಿನ ಪಾತ್ರಧಾರಿಯ ವೇಷ-ಭೂಷಣಗಳಿರುವುದಿಲ್ಲ. ಇಲ್ಲಿ ಕೇರಳದ ಮಲಬಾರ್ ಪ್ರದೇಶದಲ್ಲಿ ನಡೆಯುವ ತೆಯ್ಯಂನ ಸ್ಪಷ್ಟ ಪ್ರಭಾವವನ್ನು ಇಲ್ಲಿ ಕಾಣಬಹುದು. ಪುಳಿಚ್ಚಾಟಿನ ಸಂದರ್ಭದಲ್ಲಿ ಪಾತ್ರಧಾರಿಯ ವೇಷ-ಭೂಷಣಗಳು ತೆಯ್ಯಂ ಪಾತ್ರಧಾರಿಯ ಅಲಂಕಾರವನ್ನು ಹೋಲುತ್ತದೆ. ನರಸಿಂಹನನ್ನು ಬಿಂಬಿಸಬೇಕಾಗಿರುವುದರಿಂದ ಮೇಲುಡುಪಿನ ಬದಲಾಗಿ ಸಿಂಹದ ಚರ್ಮವನ್ನು ಹೋಲುವಂತಹ ಉಡುಪನ್ನು ಬಳಸಲಾಗುತ್ತದೆ. ಪಳಯಿ ಕೃಷ್ಣನ್ ಪರಪ್ಪನ್ ಎಂಬುವವರು ಮೊದಲನೆಯ ಬಾರಿಗೆ ಈ ಉಡುಪನ್ನು ವಿನ್ಯಾಸಗೊಳಿಸಿದರು ಹಾಗೂ ವಿಷ್ಣುಮೂರ್ತಿಯನ್ನು ಆವಾಹಿಸಿಕೊಂಡಿದ್ದರು ಎಂಬುದು ಪ್ರತೀತಿ. ಅವರ ಕನಸಿನಲ್ಲಿ ಬಂದು ನರಸಿಂಹ ವಸ್ತ್ರ ವಿನ್ಯಾಸವನ್ನು ಹೇಳಿಕೊಟ್ಟ ಎಂದು ನಂಬಲಾಗುತ್ತದೆ.

ಪುಳಿಚ್ಚಾಟಿನ ವೇಷಭೂಷಣಗಳು
ಸಿದ್ದನಾಗಿ ಕುಳಿತಿರುವ ಪಾತ್ರಧಾರಿ

ನಂತರ ನಡೆಯುವ ಕೆಂಡ ಸೇವೆಗೆ ಈ ವಿನ್ಯಾಸ ಸಂಪೂರ್ಣವಾಗಿ ಬದಲಾಗಿರುತ್ತದೆ. ಪಾತ್ರಧಾರಿಯು ಯಾವುದೇ ಮೇಲುಡುಪನ್ನು ಧರಿಸುವುದಿಲ್ಲ. ಬಿಸಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಆತನ ಮೈಮೇಲೆ,ಕೈಗಳಿಗೆ ಹಾಗೂ ಕಾಲುಗಳಿಗೆ ಅಕ್ಕಿಯ ಹಿಟ್ಟಿನ ಮಿಶ್ರಣವನ್ನು ಲೇಪಿಸಲಾಗುತ್ತದೆ(ಅದಕ್ಕೆಂದೇ ವಿಶೇಶವಾಗಿ ತಯಾರು ಮಾಡುವಂತದ್ದು). ನಂತರ ಆತನ ಸುತ್ತ ವಿಶೇಷವಾಗಿ ಕತ್ತರಿಸಿದ ತೆಂಗಿನ ಗರಿಗಳನ್ನು ಸುತ್ತಲಾಗುತ್ತದೆ. ಪೂರ್ತಿ ಮೈ ಮೇಲೆ,ತಲೆ ಮುಚ್ಚುವವರೆಗೂ ತೆಂಗಿನ ಗರಿಗಳ ಮೂರ್ನಾಲ್ಕು ಹಂತಗಳನ್ನು ಮಾಡುತ್ತಾರೆ. ಈ ತೆಂಗಿನ ಗರಿಗಳು ಪಾತ್ರಧಾರಿಯನ್ನು ಬಿಸಿಯಿಂದ ಸ್ವಲ್ಪ ಮಟ್ಟಿಗೆ ರಕ್ಷಿಸುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ ಗ್ರಂಥಗಳು[ಬದಲಾಯಿಸಿ]

  1. ಸಿ.ಗೋಪಾಲಕೃಷ್ಣ ಶಾಸ್ತ್ರಿ, ಮೂಡಂಬೈಲು, ‘ಒತ್ತೆಕೋಲ’(ಲೇಖನ), ‘ಸುದರ್ಶನ’, ಪು.೧೫೯ ಡಾ.ಟಿ.ಎಮ್.ಎ.ಪೈ ಅಭಿನಂದನ ಗ್ರಂಥ, ವಿಜಯ ಕಾಲೇಜ್ ಟ್ರಸ್ಟ್, ಮಾಲ್ಕಿ, ದ.ಕ., ೧೯೭೭
  2. ಪ್ರದೀಪ ಬೇಕಲ್, ವೈದಿಕ-ಜಾನಪದ ಆಚರಣೆಗಳ ಸಂಗಮ ‘ಒತ್ತೆಕೋಲ’ (ಲೇಖನ), ‘ಉದಯವಾಣಿ’ ೬-೧-೨೦೦೫, ಮಣಿಪಾಲ
  3. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ., ೧೯೯೮
  4. Dr. K.K.N.Kurup,’Teyyam’ Dept of Public Relation govt of Kerala, 1986

ಉಲ್ಲೇಖಗಳು[ಬದಲಾಯಿಸಿ]

  1. http://kanaja.in/archives/123720
  2. http://www.fwmails.com/2010/04/otte-kola.html