ವಿಲಿಯಂ ಸ್ಟ್ಯಾನ್ಲಿ ಜೆವನ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಲಿಯಂ ಸ್ಟ್ಯಾನ್ಲಿ ಜೆವನ್ಸ್‌ (1835-1882). ಇಂಗ್ಲಿಷ್ ಅರ್ಥಶಾಸ್ತ್ರಜ್ಞ, ತರ್ಕಶಾಸ್ತ್ರಜ್ಞ.

ಬದುಕು[ಬದಲಾಯಿಸಿ]

ಜನನ ಲಿವರ್‍ಪೂಲಿನಲ್ಲಿ. ಲಂಡನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದ. ಅವನ ಅಧ್ಯಯನ ವಿಷಯಗಳು ರಸಾಯನವಿಜ್ಞಾನ ಮತ್ತು ಸಸ್ಯವಿಜ್ಞಾನ. ಆದರೆ ವಿದ್ಯಾಭ್ಯಾಸವನ್ನು ಮುಂದುವರಿಸಲಾರದೆ ಆತ ಆಸ್ಟ್ರೇಲಿಯದಲ್ಲಿ ಸಿಡ್ನಿಯ ಟಂಕಸಾಲೆಯಲ್ಲಿ 1854ರಲ್ಲಿ ಹುದ್ದೆಯೊಂದನ್ನು ಹಿಡಿಯಬೇಕಾಯಿತು. ಅಲ್ಲಿ ಐದು ವರ್ಷ ಅಧ್ಯಯನ ಹಾಗೂ ಏಕಾಂತಚಿಂತನೆ ನಡೆಸಿದ. ಅವನಿಗೆ ಅರ್ಥಶಾಸ್ತ್ರದಲ್ಲಿ ಅಭಿರುಚಿ ಹುಟ್ಟಿತು. 1859ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ. 1866ರಲ್ಲಿ ಮ್ಯಾಂಚೆಸ್ಟರಿನ ಓವೆನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ. 1876ರಲ್ಲಿ ಲಂಡನಿನ ಯೂನಿವರ್ಸಿಟಿ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬಂದನು. ಆದರೆ ಜೆವನ್ಸ್ ಬಹಳ ಕಾಲ ಬದುಕಲಿಲ್ಲ. ತನ್ನ 47ನೆಯ ವರ್ಷದಲ್ಲಿ ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ತೀರಿಕೊಂಡ.

ಸಾಧನೆ[ಬದಲಾಯಿಸಿ]

ಜೆವನ್ಸ್ ಅರ್ಥಶಾಸ್ತ್ರಜ್ಞನಾಗಿ ವಿಶೇಷವಾಗಿ ಖ್ಯಾತಿ ಗಳಿಸಿದ್ದರೂ ಅವನು ಗಣಿತ ಹಾಗೂ ತರ್ಕಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಜೆ. ಎಸ್. ಮಿಲ್ಲನ ಹಾಗೆ ಅವನೂ ತರ್ಕಶಾಸ್ತ್ರ ಕುರಿತ ಗ್ರಂಥವೊಂದನ್ನು ರಚಿಸಿದ. ಸಂಶೋಧನೆಗಳಲ್ಲಿ ಪ್ರಯೋಗಿಸಬಹುದಾದ ವೈಜ್ಞಾನಿಕ ಕ್ರಮಗಳ ಬಗ್ಗೆಯೂ ಅವನು ಬರೆದಿದ್ದಾನೆ. ದಿ ಪ್ರಿನ್ಸಿಪಲ್ಸ್ ಆಫ್ ಸೈನ್ಸ್ (1874) ಎಂಬುದು ಒಂದು ಗಮನಾರ್ಹ ಕೃತಿ. ಗಣಿತದಲ್ಲಿ ಅವನಿಗಿದ್ದ ಪಾಂಡಿತ್ಯ ಅವನಿಗೆ ಅರ್ಥಶಾಸ್ತ್ರದ ಅಧ್ಯಯನದಲ್ಲಿ ಗಣಿತೀಯ ಮಾರ್ಗವನ್ನು ಅನುಸರಿಸಲು ಅನುಕೂಲವಾಯಿತು. ಅವನು ಪ್ರತಿಪಾದಿಸಿದ ಆರ್ಥಿಕ ತತ್ತ್ವಗಳು ಬೀಜಗಣಿತ ಹಾಗೂ ರೇಖಾಗಣಿತದ ರೂಪದಲ್ಲಿ ವ್ಯಕ್ತವಾಗಿದೆ.

ವೈಜ್ಞಾನಿಕ ಮಾರ್ಗಗಳಲ್ಲಿ ಅವನಿಗಿದ್ದ ಪರಿಶ್ರಮದಿಂದಾಗಿ ಆರ್ಥಿಕ ಅಧ್ಯಯನ ಕ್ಷೇತ್ರಕ್ಕೆ ಅವನು ಅತ್ಯುತ್ತಮ ಕೊಡುಗೆ ನೀಡುವುದು ಸಾಧ್ಯವಾಯಿತು. ಆರ್ಥಿಕ ಸಮಸ್ಯೆಗಳ ಅಧ್ಯಯನದಲ್ಲಿ ಅವನು ಅನುಗಮನ ಕ್ರಮವನ್ನೇ ಹೆಚ್ಚಾಗಿ ಉಪಯೋಗಿಸಿದ್ದರೂ ನಿಗಮನ ಕ್ರಮದ ಮೂಲದ ಅನೇಕ ನಿರ್ದಿಷ್ಟ ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆ ಕೈಗೊಂಡವನು. ಈ ಬಗ್ಗೆ ಅವನು ಅನುಸರಿಸಿದ್ದು ಸಂಖ್ಯಾಕಲನೀಯ ಮಾರ್ಗ. ಆದಕಾರಣ ಅವನ್ನು ಸಂಖ್ಯಾಕಲನೀಯ ಮಾರ್ಗದ ಸ್ಥಾಪಕನೆಂದು ಪರಿಗಣಿಸಲಾಗಿದೆ.

ಆಸ್ಟ್ರೇಲಿಯದಿಂದ ಹಿಂದಿರುಗಿದ ಅನಂತರ ಜೆವನ್ಸ್ ಆರ್ಥಿಕ ತತ್ತ್ವಗಳನ್ನು ಮತ್ತು ಚಿನ್ನದ ಮೌಲ್ಯವನ್ನು ಕುರಿತು ಎರಡು ಲೇಖನಗಳನ್ನು ಬರೆದ. ಎರಡನೆಯ ಲೇಖನದ ವಿಷಯವನ್ನು ವಿಸ್ತರಿಸಿ, ಇನ್ವೆಸ್ಟಿಗೇಷನ್ಸ್ ಇನ್ ಕರೆನ್ಸಿ ಅಂಡ್ ಫಿನಾನ್ಸ್ ಎಂಬ ಪುಸ್ತಕವನ್ನು ಸ್ವಲ್ಪ ಕಾಲಾನಂತರ ಪ್ರಕಟಿಸಿದ. ಕ್ಯಾಲಿಫೋರ್ನಿಯ ಮತ್ತು ಆಸ್ಟ್ರೇಲಿಯಗಳಲ್ಲಿ ಚಿನ್ನದ ನಿಧಿಯನ್ನು ಕಂಡುಹಿಡಿದ ಮೇಲೆ ಬೆಲೆ ಮಟ್ಟದಲ್ಲಿ ಉಂಟಾದ ಏರಿಕೆಯನ್ನು ಅಳೆಯುವ ಪ್ರಯತ್ನವೇ ಈ ಪುಸ್ತಕ. ಇದು ಸೂಚ್ಯಂಕಗಳ ಸಿದ್ಧಾಂತಕ್ಕೆ ಅತ್ಯಮೂಲ್ಯವಾದ ಕೊಡುಗೆಯಾಗಿ ಪರಿಣಮಿಸಿತು. ಅನಂತರ ಬಳಕೆಯಲ್ಲಿ ಬಂದ ಸೀಮಾಂತ ತುಷ್ಟಿಗುಣ ಸಿದ್ಧಾಂತಕ್ಕೆ ಅವನ ಮೊದಲನೆಯ ಲೇಖನ ವಿವರಣೆಯಾಗಿದೆ. ಇದೇ ವಿಷಯವನ್ನು ವಿಸ್ತರಿಸಿ ತಿಯೊರಿ ಆಫ್ ಪೊಲಿಟಿಕಲ್ ಎಕಾನೊಮಿ ಎಂಬ ಪುಸ್ತಕವನ್ನು 1871ರಲ್ಲಿ ಜೆವನ್ಸ್ ಪ್ರಕಟಿಸಿದ. ಅವನು ಒಬ್ಬ ಸಿದ್ಧಾಂತಿ ಹಾಗೂ ಸಮಾಜ ವಿಜ್ಞಾನಿ ಎಂಬುದನ್ನು ಅವನ ಈ ಪುಸ್ತಕ ಸಿದ್ಧಪಡಿಸಿದೆ. ಅಲ್ಲದೆ ಆರ್ಥಿಕ ವಿಷಯವನ್ನು ವಿಷ್ಲೇಷಿಸಿ, ಅದನ್ನು ಅಧಿಕರಿಸುವ ನಿಯಮಗಳನ್ನು ನಿಷ್ಪನ್ನಮಾಡಲು ತೊಡಗಿದವರಲ್ಲಿ ಅವನೂ ಒಬ್ಬನೆನಿಸಿಕೊಂಡ.

ಬರೆದ ಪುಸ್ತಕಗಳು[ಬದಲಾಯಿಸಿ]

ಅವನು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಬರೆದ ಪುಸ್ತಕಗಳು ಅನೇಕ. ಅವುಗಳಲ್ಲಿ ಮುಖ್ಯವಾದುವು ದಿ ತಿಯೊರಿ ಆಫ್ ಪೊಲಿಟಿಕಲ್ ಇಕಾನಾಮಿ (1871), ದಿ ಕೋಲ್ ಕ್ವೆಶ್ಚನ್ (1865) ಮತ್ತು ದಿ ಸ್ಟೇಟ್ ಎನ್ ರಿಲೇಷನ್ ಟು ಲೇಬರ್ (1882).

ಅರ್ಥಶಾಸ್ತ್ರಕ್ಕೆ ಜೆವನ್ಸನ ಕೊಡುಗೆ[ಬದಲಾಯಿಸಿ]

ಅರ್ಥಶಾಸ್ತ್ರಕ್ಕೆ ಜೆವನ್ಸನ ಕೊಡುಗೆ ಮೌಲ್ಯನಿರ್ಧಾರಣ ಕ್ಷೇತ್ರದಲ್ಲಿ. ಅವನ ದೃಷ್ಟಿಯಲ್ಲಿ ಮೌಲ್ಯವನ್ನು ನಿರ್ಧರಿಸುವ ಅಂಶವೆಂದರೆ ತುಷ್ಟಿಗುಣ. ಆದ್ದರಿಂದ ಅವನು ತನ್ನ, ಮೇಲೆ ಹೇಳಿದ ಪುಸ್ತಕದಲ್ಲಿ ಇಳಿಮುಖ ತುಷ್ಟಿಗುಣ ನಿಯಮವನ್ನು ವಿವೇಚಿಸಿ, ಮೌಲ್ಯ ನಿರ್ಧಾರಣದಲ್ಲಿ ಈ ನಿಯಮದ ಪಾತ್ರವೇನು ಎಂಬುದನ್ನು ವಿವರಿಸಿದ್ದಾನೆ. ಈ ನಿಯಮವನ್ನು ಬೆಂತಾಮ್ ಕಂಡುಹಿಡಿದರೂ ಜೆವನ್ಸ್ ಅದನ್ನು ಮೌಲ್ಯ ನಿರ್ಧಾರದಲ್ಲಿ ಉಪಯೋಗಿಸಿಕೊಂಡವರಲ್ಲಿ ಪ್ರಮುಖ. ಅವನ ಪ್ರಕಾರ ತುಷ್ಟಿಗುಣ ಪದಾರ್ಥದಲ್ಲಿ ಅಡಗಿರುವ ಶಕ್ತಿಯಲ್ಲ. ಅದು ಬಯಕೆಗಳಿಗೆ ಸಾಪೇಕ್ಷವಾದ್ದು. ಯಾವುದೇ ಪದಾರ್ಥವನ್ನು ಹೆಚ್ಚು ಪರಿಮಾಣದಲ್ಲಿ ಬಳಸಿದಂತೆ ಅದರಿಂದ ಸಿಗುವ ತುಷ್ಟಿಗುಣ ಕಡಿಮೆಯಾಗುತ್ತ ಹೋಗುತ್ತದೆ ತುಷ್ಟಿಗುಣಕ್ಕೆ ಬದಲಾಗಿ ಅತುಷ್ಟಿ ಉಂಟಾಗುವ ಸಂಭವವಿದೆ. ಆದಕಾರಣ ಒಟ್ಟು ತುಷ್ಟಿಗುಣಕ್ಕೂ ಪದಾರ್ಥದ ಒಂದೊಂದೂ ಏಕಮಾನದಿಂದ ಸಿಗುವ ತುಷ್ಟಿಗುಣಕ್ಕೂ ವ್ಯತ್ಯಾಸ ಕಂಡುಬರುತ್ತದೆ. ತುಷ್ಟಿಗುಣದ ಕೊನೆಯ ಹಂತ, ಈಗ ನಾವು ಯಾವುದನ್ನು ಸೀಮಾಂತ ತುಷ್ಟಿ ಗುಣ ಎನ್ನುತ್ತೇವೆಯೊ ಅದು, ಯಾವುದೇ ವಸ್ತುವಿನ ಮೌಲ್ಯದ ನಿರ್ಧಾರಕ. ಒಟ್ಟು ತುಷ್ಟಿಗುಣ ಮತ್ತು ಕೊನೆಯ ತುಷ್ಟಿಗುಣಾಂಶ ಇವುಗಳ ವ್ಯತ್ಯಾಸವನ್ನು ತೋರಿಸುವುದರ ಮೂಲಕ ಜೆವನ್ಸ್ ಆಡಮ್ ಸ್ಮಿತ್ತನ ಮೌಲ್ಯದ ವಿರೋಧಾಭಾಸದ ವಿವರಣೆ ನೀಡುವುದರಲ್ಲಿ ಸಮರ್ಥನಾದ. ತುಷ್ಟಿಗುಣಕ್ಕೂ ಮೌಲ್ಯಕ್ಕೂ ಸಂಬಂಧ ಕಲ್ಪಿಸುವುದು ಕಷ್ಟವೆಂದು ತೋರಿಸುತ್ತ ಆಡಮ್ ಸ್ಮಿತ್, ನೀರು ಅತ್ಯಧಿಕ ತುಷ್ಟಿಗುಣ ಹೊಂದಿದ್ದರೂ ಅದಕ್ಕೆ ಮೌಲ್ಯವಿಲ್ಲ. ಆದರೆ ವಜ್ರದ ತುಷ್ಟಿಗುಣ ಕಡಿಮೆಯಿದ್ದರೂ ಅದರ ಮೌಲ್ಯ ಇತರ ಹಲವು ವಸ್ತುಗಳಿಗಿಂತಲೂ ಹೆಚ್ಚು-ಎಂದು ವಿವರಿಸಿ. ಮೌಲ್ಯಕ್ಕೆ ಸಂಬಂಧಿಸಿದಂತೆ ನೀರು ವಜ್ರಗಳ ವಿರೋಧಾಭಾಸವನ್ನು ಗುರುತಿಸಿದ. ಅಭಿಜಾತ ಅರ್ಥಶಾಸ್ತ್ರಜ್ಞರು ಈ ವಿರೋಧಾಭಾಸಕ್ಕೆ ಸಮಾಧಾನಕರವಾದ ವಿವರಣೆ ಕೊಡದೆಹೋದರು. ಜೆವನ್ಸ್ ತನ್ನ ಸೀಮಾಂತ ತುಷ್ಟಿಗುಣ ಪರಿಕಲ್ಪನೆಯನ್ನು ನೀಡಿ ಈ ವಿರೋಧಾಭಾಸಕ್ಕೆ ವಿವರಣೆ ನೀಡಿದ. ಅವನ ಪ್ರಕಾರ ವಸ್ತುವಿನ ಮೌಲ್ಯವನ್ನು ನಿರ್ಣಯಿಸುವ ಅಂಶ ಸೀಮಾಂತ ತುಷ್ಟಿಗುಣವೇ ಹೊರತು ಒಟ್ಟು ತುಷ್ಟಿಗುಣವಲ್ಲ. ನೀರಿನ ಒಟ್ಟು ತುಷ್ಟಿಗುಣ ಅನಂತವಾದದ್ದಾದರೂ ಅದು ವಿರಳವಲ್ಲದ ಕಾರಣ ಅದರ ಸೀಮಾಂತ ತುಷ್ಟಿಗುಣ ಶೂನ್ಯ. ಆದ್ದರಿಂದಲೇ ನೀರಿಗೆ ಮೌಲ್ಯವಿಲ್ಲ. ಆದರೆ ನೀರು ವಿರಳವಾದ ಪಕ್ಷದಲ್ಲಿ, ಅದರ ಸೀಮಾಂತ ತುಷ್ಟಿಗುಣ ಶೂನ್ಯಕ್ಕಿಂತ ಅಧಿಕವಾಗುವುದರಿಂದ ಅದಕ್ಕೆ ಮೌಲ್ಯವುಂಟಾಗುತ್ತದೆ. ಹಾಗೆಯೇ ವಜ್ರದ ಒಟ್ಟು ತುಷ್ಟಿಗುಣ ಕಡಿಮೆಯಿದ್ದರೂ ಅದು ತೀರ ವಿರಳವಾದ ವಸ್ತುವಾದ್ದರಿಂದ, ಅದರ ಸೀಮಾಂತ ತುಷ್ಟಿಗುಣ ಹೆಚ್ಚಾಗಿರುತ್ತದೆ. ಅಂತೆಯೇ ವಜ್ರದ ಮೌಲ್ಯ ಹೆಚ್ಚಾಗಿರುವುದು ಅದರ ವಿರಳತೆಯಿಂದಾಗಿ.

ಮೌಲ್ಯ ಹೇಗೆ ನಿರ್ಧಾರವಾಗುತ್ತದೆ ಎಂಬುದರ ಬಗ್ಗೆ ಬರೆಯುತ್ತ, ಮೌಲ್ಯವನ್ನು ನಿರ್ಧರಿಸುವುದು ತುಷ್ಟಿಗುಣವೇ ಎಂದು ಜೆವನ್ಸ್ ಸಾರಿದ. ಅವನ ಪ್ರಕಾರ, ಯಾವುದೇ ಪದಾರ್ಥಕ್ಕೆ ಅನುಭೋಗಿ ಕೊಡುವ ಬೆಲೆ ಆ ಪದಾರ್ಥದಿಂದ ಅವನಿಗೆ ಲಭಿಸುವ ಸೀಮಾಂತ ತುಷ್ಟಿಗುಣಕ್ಕೆ ಸಮವಾಗಿರುತ್ತದೆ. ಆದ್ದರಿಂದ ಎರಡು ಪದಾರ್ಥಗಳ ವಿನಿಮಯ ನಿಷ್ಪತ್ತಿ (ರೇಷಿಯೋ) ಆ ವಸ್ತುಗಳ ಸೀಮಾಂತ ತುಷ್ಟಿಗುಣಗಳ ವ್ಯುತ್ಕ್ರಮವಾಗಿರುತ್ತದೆ. ಉದಾಹರಣೆಗೆ, ಂ ಮತ್ತು ಃ ವಸ್ತುಗಳ ಸೀಮಾಂತ ತುಷ್ಟಿಗುಣ ಕ್ರಮಾವಾಗಿ 5 ಮತ್ತು 10 ಆಗಿದ್ದರೆ ಆ ವಸ್ತುಗಳು 2 : 1 ನಿಷ್ಪತ್ತಿಯಲ್ಲಿ ವಿನಿಮಯಗೊಳ್ಳುತ್ತವೆ.

ಮೌಲ್ಯ ನಿರ್ಧಾರದಲ್ಲಿ ತುಷ್ಟಿಗುಣದ ಪಾತ್ರ ಮುಖ್ಯವೆಂದು ಸಾರಿದ್ದಲ್ಲದೆ ಪ್ರಚಲಿತ ಶ್ರಮವೆಚ್ಚ ಮೌಲ್ಯ ಸಿದ್ಧಾಂತವನ್ನು ಅವನು ತೀವ್ರವಾಗಿ ಖಂಡಿಸಿದ. ಶ್ರಮವೆಚ್ಚದ ಆಧಾರದ ಮೇಲೆ ಮೌಲ್ಯ ನಿರ್ಧರಿಸಲ್ಪಡುತ್ತದೆ ಎಂಬುದನ್ನು ಅವನು ಒಪ್ಪಲಿಲ್ಲ. ಏಕೆಂದರೆ, ಅವನ ಪ್ರಕಾರ ಅತ್ಯಂತ ಹೆಚ್ಚು ಮೌಲ್ಯವನ್ನುಳ್ಳ ಪದಾರ್ಥಗಳು ಪುನರುತ್ಪಾದಕವಲ್ಲವಾದ್ದರಿಂದ ಅವುಗಳ ಉತ್ಪಾದನೆ ವೆಚ್ಚದ ನಿರ್ಣಯ ಸಾಧ್ಯವಿಲ್ಲ. ಎರಡನೆಯದಾಗಿ, ಮಾರುಕಟ್ಟೆಯಲ್ಲಿ ಪದಾರ್ಥಗಳ ಬೆಲೆಗಳು ಎಂದೂ ಅವುಗಳ ಉತ್ಪಾದನ ವೆಚ್ಚಕ್ಕೆ ಸಮನಾದುದಿಲ್ಲ. ಮೂರನೆಯದಾಗಿ, ಒಂದು ಪದಾರ್ಥದ ಮೇಲೆ ವಿನಿಯೋಗಿಸುವ ಶ್ರಮಕ್ಕೂ ಆ ಪದಾರ್ಥಕ್ಕೆ ಸಿಗುವ ಮೌಲ್ಯಕ್ಕೂ ಸಂಬಂಧ ಕಲ್ಪಿಸುವುದು ಸಾಧ್ಯವಿಲ್ಲ. ಉದಾಹರಣೆಗೆ, ಯಾವುದಾದರೊಂದು ಯಂತ್ರವನ್ನು ಬಹಳ ಶ್ರಮಪಟ್ಟು ತಯಾರಿಸಿದ್ದರೂ ಅದು ಕೆಲಸಕ್ಕೆ ಬಾರದಿದ್ದ ಪಕ್ಷದಲ್ಲಿ ಅದಕ್ಕೆ ಮೌಲ್ಯ ಬರಲಾರದು. ಆದ್ದರಿಂದ, ಪದಾರ್ಥವನ್ನು ಉತ್ಪಾದಿಸಲು ತಗಲುವ ವೆಚ್ಚ ಆ ಪದಾರ್ಥದ ಮೌಲ್ಯದ ಮೇಲೆ ಪ್ರಭಾವ ಬೀರುವುದಿಲ್ಲ, ಎಂಬುದು ಅವನ ಅಭಿಪ್ರಾಯ. ಆದರೂ ಅವನ ಮೌಲ್ಯನಿರ್ಧಾರ ಸಿದ್ಧಾಂತದಲ್ಲಿ ಮುಖ್ಯವೆನಿಸುವ ಸೀಮಾಂತ ತುಷ್ಟಿಗುಣದ ಪರಿಮಾಣ ಅವಲಂಬಿಸುವುದು ಪದಾರ್ಥದ ಸರಬರಾಜಿನ ಪರಿಮಾಣವನ್ನು ಹಾಗೂ ಸರಬರಾಜಿನ ಉತ್ಪಾದನವೆಚ್ಚವನ್ನು. ಎಂದರೆ, ಉತ್ಪಾದನ ವೆಚ್ಚವೂ ಮೌಲ್ಯದ ಮೇಲೆ, ಪರೋಕ್ಷವಾಗಿ ಆದರೂ ಪ್ರಭಾವ ಬೀರುತ್ತದೆ. ಸರಬರಾಜನ್ನು ಉತ್ಪಾದನವೆಚ್ಚವೂ ತುಷ್ಟಿಗುಣವನ್ನು ಸರಬರಾಜಿನ ಪರಿಮಾಣವೂ ಸೀಮಾಂತ ಮೌಲ್ಯವನ್ನು ಸೀಮಾಂತ ತುಷ್ಟಿಗುಣವೂ ನಿರ್ಧರಿಸುತ್ತವೆ-ಎಂಬುದನ್ನು ಜೆವನ್ಸ್ ಒಪ್ಪುತ್ತಾನೆ. ಸೀಮಾಂತ ತುಷ್ಟಿಗುಣಕ್ಕೂ ಮೌಲ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ತುಷ್ಟಿಗುಣವೇ ಮೌಲ್ಯನಿರ್ಧಾರಕ ಎಂಬುದು ಅವನ ವಾದ.

ದಿ ಸ್ಟೇಟ್ ಎನ್ ರಿಲೇಷನ್ ಟು ಲೇಬರ್ (1882) ಎಂಬುದು ಜೆವನ್ಸ್ ಆರ್ಥಿಕನೀತಿಯ ಕ್ಷೇತ್ರಕ್ಕೆ ನೀಡಿದ ಒಂದು ಕೊಡುಗೆ. ಆಡಂ ಸ್ಮಿತ್ತನ ದಿ ವೆಲ್ತ್ ಆಫ್ ನೇಷನ್ಸ್ ಗ್ರಂಥವನ್ನು ಸಂಪಾದಿಸಿ ಅದಕ್ಕೆ ಮುನ್ನುಡಿಯಾಗಿ ಆರ್ಥಿಕ ಚಿಂತನೆಯ ಇತಿಹಾಸದ ಅವಲೋಕನವೊಂದನ್ನು ನೀಡಬೇಕೆಂಬುದು ಅವನ ಯೋಜನೆಗಳಲ್ಲೊಂದಾಗಿತ್ತು. ಆದರೆ ಅವನ ಅಕಾಲಮೃತ್ಯುವಿನಿಂದಾಗಿ ಆ ಕೆಲಸ ಅರ್ಧಾಂತಿಕವಾಗಿ ಉಳಿಯಿತು. ಅವನ ಮರಣದಿಂದ ಅರ್ಥಶಾಸ್ತ್ರ ದೃಷ್ಟಿಯಿಂದ ಆದ ಬಲು ದೊಡ್ಡ ನಷ್ಟವೆಂದರೆ ಅವನು ತನ್ನ ಪ್ರಿನ್ಸಿಪಲ್ ಆಫ್ ಎಕಾನಾಮಿಕ್ಸ್ ಕೃತಿಯನ್ನು ಪೂರೈಸಲಾಗದೆ ಹೋದ್ದು. ಅದರ ಕೆಲವು ಭಾಗಗಳು 1905ರಲ್ಲಿ ಪ್ರಕಟವಾದುವು.