ವಿಜಯನಾರಸಿಂಹ

ವಿಕಿಪೀಡಿಯ ಇಂದ
Jump to navigation Jump to search
ವಿಜಯನಾರಸಿಂಹ
ಜನನಜುಲೈ ೧೨, ೧೯೨೭
ಮರಣಅಕ್ಟೋಬರ್ ೩೧, ೨೦೦೧
ವೃತ್ತಿಚಿತ್ರ ಸಾಹಿತಿ, ಗೀತ ರಚನಕಾರರು, ಕಥೆಗಾರರು
ವಿಷಯಕನ್ನಡ ಚಲನಚಿತ್ರರಂಗ

ವಿಜಯನಾರಸಿಂಹ ಕನ್ನಡ ಚಲನಚಿತ್ರರಂಗದ ಶ್ರೇಷ್ಠ ಗೀತರಚನಕಾರರಲ್ಲಿ ಒಬ್ಬರು. ಅವರು ಚಲನಚಿತ್ರಗಳಿಗೆ ರಚಿಸಿದ ಶ್ರೇಷ್ಠ ಗೀತೆಗಳು ಹಲವಾರು ದಶಕಗಳಿಂದ ಕನ್ನಡಿಗರ ಮನೆ ಮಾತಾಗಿವೆ.

ಜೀವನ[ಬದಲಾಯಿಸಿ]

ಕನ್ನಡದ ಮರೆಯಲಾಗದ ಚಿತ್ರ ಸಾಹಿತಿಗಳ ಆಗ್ರಪಂಕ್ತಿಯಲ್ಲಿ ಚಿರವಿರಾಜಿತರಾದ ವಿಜಯನಾರಸಿಂಹ ಅವರು ಜನಿಸಿದ ದಿನ ಜುಲೈ ೧೨, ೧೯೨೭. ಪುಟ್ಟಣ್ಣ ಕಣಗಾಲ್‌, ಸಿದ್ಧಲಿಂಗಯ್ಯ ಮುಂತಾದ ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಚಿತ್ರ ನಿರ್ದೇಶಕರ ಅವಿಸ್ಮರಣೀಯ ಚಿತ್ರಗಳಿಗೆ ತಮ್ಮ ಚಿತ್ರಗೀತೆಗಳ ಮೂಲಕ ಶೋಭೆ ತಂದವರು ವಿಜಯನಾರಸಿಂಹ.

ವಿಜಯನಾರಸಿಂಹ ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಹಳ್ಳಿಯವರು. ಚಿಕ್ಕಂದಿನಿಂದಲೇ ನಾಟಕ-ಕಾದಂಬರಿ ಬರೆವ ಗೀಳು ಅಂಟಿಸಿಕೊಂಡ ವಿಜಯನಾರಸಿಂಹ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಪು.ತಿ.ನ, ಗೋಪಾಲ ಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರ ಕರ್ತರಾಗಿಯೂ ದುಡಿದರು.

ಓಹಿಲೇಶ್ವರ[ಬದಲಾಯಿಸಿ]

೧೯೫೩ರಲ್ಲಿ ಜಿ. ಕೆ. ವೆಂಕಟೇಶ್ ಓಹಿಲೇಶ್ವರ ಚಿತ್ರಕ್ಕೆ ವಿಜಯನಾರಸಿಂಹ ಅವರನ್ನು ಚಿತ್ರಸಾಹಿತಿಯಾಗಿ ಕರೆತಂದರು. ಆ ಚಿತ್ರಕ್ಕೆ ವಿಜಯನಾರಸಿಂಹರು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’ ಎಂಬುದು ಇಂದಿಗೂ ಪ್ರಸಿದ್ಧಿ. ಬಸ್ ಸ್ಟಾಂಡಿನಲ್ಲಿ ಬಿಡುಗಾಸನ್ನರಸುವ ಭಿಕ್ಷುಕರಿಂದ, ಆಧ್ಯಾತ್ಮಿಕ ಲೋಕದಲ್ಲಿ ಆತ್ಮವನ್ನರಸುವ ಭಕ್ತವರೇಣ್ಯರವರೆಗೆ ಈ ಹಾಡು ಮಾಡಿರುವ ಮೋಡಿ ಅನನ್ಯವಾದುದು.

ಒಂದಕ್ಕಿಂತ ಒಂದು ಶ್ರೇಷ್ಠ ಗೀತೆಗಳು[ಬದಲಾಯಿಸಿ]

ಮುಂದೆ ಅವರು ಬರೆದ ಹಾಡುಗಳು ಒಂದಕ್ಕಿಂತ ಒಂದು ಮಹತ್ವಪೂರ್ಣವಾದುದು. ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’, 'ನೋಡು ಬಾ ನೋಡು ಬಾ ನಮ್ಮೂರ', ‘ಪಂಚಮವೇದ ಪ್ರೇಮದ ನಾದ’, ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಆಸೆಯ ಭಾವ ಒಲವಿನ ಜೀವ’, ‘ವಸಂತ ಬರೆದನು ಒಲವಿನ ಓಲೆ’, ‘ವಿರಹಾ ನೂರು ನೂರು ತರಹ’, ‘ಆಡೋಣಾ ನೀನು ನಾನು’, ‘ನೀತಿವಂತ ಬಾಳಲೇ ಬೇಕು’, ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’, ‘ಭಾರತ ಭೂಶಿರ ಮಂದಿರ ಸುಂದರಿ’, ‘ಆ ದೇವರೆ ನುಡಿದ ಮೊದಲ ನುಡಿ’, ‘ಯಾವ ತಾಯಿಯು ಹಡೆದ ಮಗಳಾದರೇನು’, ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’, ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’, ‘ಸಂದೇಶ ಮೇಘ ಸಂದೇಶ’, ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನಿಲ್ಲು ನಿಲ್ಲೇ ಪತಂಗ’, ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ಥಿ ನಮ್ಮ ಬಾಳಿಗೆ’, ‘ಕಾಪಾಡು ಶ್ರೀ ಸತ್ಯನಾರಾಯಣ’, ‘ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ’, ‘ಸಂಗಮ ಅನುರಾಗ ತಂದ ಸಂಗಮ’, ‘ಸೇವಂತಿಗೆ ಚಂಡಿನಂತ ಮುದ್ದು ಕೋಳಿ’, ‘ನಗುವಿನ ಅಳುವಿನ ಸಂಕೋಲೆ’, ‘ಬಂದಿದೆ ಬದುಕಿನ ಬಂಗಾರದಾ ದಿನ’, ‘ಹನಿ ಹನಿಗೂಡಿದ್ರೆ ಹಳ್ಳ’ , ‘ಏನೇ ಸುಬ್ಬಿ ತುಂಬ ಕೊಬ್ಬಿ’, ‘ಹಿಂದೂಸ್ಥಾನವು ಎಂದೂ ಮರೆಯದ’, ‘ನೀನೇ ಸಾಕಿದಾ ಗಿಣಿ’, ‘ಕೇಳು ಮಗುವೆ ಕಥೆಯಾ ಆಸೆ ತಂದ ವ್ಯಥೆಯಾ’, 'ಸಕಲ ಕಾರ್ಯ ಕಾರಣಗೆ ಸಾಷ್ಟಾಂಗ ವಂದನೆ' ಮುಂತಾದ ಸಹಸ್ರಾರು ಹಾಡುಗಳನ್ನು ವಿಜಯನಾರಸಿಂಹ ಬರೆದರು. ನನಗೆ ವೈಯಕ್ತಿಕವಾದ ಇಂಥಹ ಪ್ರಿಯವಾದ ಹಾಡುಗಳೇ ಇನ್ನೂ ನೂರಾರು ಸಿಗುತ್ತವೆ.

ಪ್ರಖ್ಯಾತ ಭಕ್ತಿಗೀತೆಗಳು[ಬದಲಾಯಿಸಿ]

ಭಕ್ತಿಗೀತೆಗಳಲ್ಲಿ ಇವತ್ತಿಗೂ ನಂಬರ್ ಆನ್ ಎನಿಸಿಕೊಂಡಿರುವ `ಗಜಮುಖನೆ ಗಣಪತಿಯೆ ನಿನಗೆ ವಂದನೆ’ಯನ್ನು ಬರೆದವರು ಇದೇ ವಿಜಯನಾರಸಿಂಹ. ಬಹುಶಃ ಇಂದೂ ಹೆಚ್ಚಿನ ರೀತಿಯಲ್ಲಿ ಪ್ರಚಲಿತವಿರುವ ‘ಭಾದ್ರಪದ ಶುಕ್ಲದ ಚೌತಿ’ಯಷ್ಟು ಖರ್ಚಾದ ಭಕ್ತಿಗೀತೆಯ ಕ್ಯಾಸೆಟ್ ಸಿ ಡಿ ಮತ್ತೊಂದು ಕನ್ನಡನಾಡಿನಲ್ಲಿ ಇರಲಾರದು. ಗಣೇಶನ ಹಬ್ಬ ನಮ್ಮ ಊರುಗಳಲ್ಲಿ ಈ ಹಾಡುಗಳಿಲ್ಲದೆ ನಡೆಯುವುದೇ ಇಲ್ಲ ಎಂದರೂ ಸರಿಯೇ. ಶರಣು ಶರಣಯ್ಯ ಶರಣು ಬೆನಕ ಈ ಕ್ಯಾಸೆಟ್ಟಿನ ಮತ್ತೊಂದು ಪ್ರಖ್ಯಾತ ಗೀತೆ. ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಎಂಬುದು ಅವರ ಮತ್ತೊಂದು ಪ್ರಖ್ಯಾತ ಗೀತೆ.

ಪ್ರಖ್ಯಾತ ಬರಹಗಳು[ಬದಲಾಯಿಸಿ]

ವಿಜಯನಾರಸಿಂಹ ಅವರು ಕಾದಂಬರಿಕಾರರೂ ಹೌದು. ಅವರ ಪ್ರಸಿದ್ಧ ಕಾದಂಬರಿಗಳಾದ ಬದುಕಿನ ಭೈರಾಗಿ, ಶ್ರೀಮಾನ್ ಚಕ್ರಾಯಣ ಮತ್ತು ಪುಟ್ಟಣ್ಣ ಕಣಗಾಲ್ ಬದುಕಿನ ಚರಿತ್ರೆ ಪ್ರಖ್ಯಾತಗೊಂಡಿವೆ.

ಜೊತೆಗೂಡಿದ ಬಡತನ[ಬದಲಾಯಿಸಿ]

ಹೀಗೆ ಸುಮಾರು ನಾಲ್ಕು ಸಹಸ್ರ ಗೀತೆಗಳನ್ನು ಬರೆದ ವಿಜಯನಾರಸಿಂಹರು ಸಾಹಿತ್ಯ ರಚಿಸಿದ ಕೊನೆಯ ಸಿನಿಮಾ ‘ಒಡಹುಟ್ಟಿದವರು’. ಇಷ್ಟೆಲ್ಲಾ ಸಾಧಿಸಿದರೂ ಇಂಥಹ ಮಹತ್ವದ ಕಲಾವಿದರು ಜೀವನದಲ್ಲಿ ಬಡತನದ ರೇಖೆಯಿಂದ ಮೇಲೇರಾಗಲಿಲ್ಲ ಎಂಬುದು ಬದುಕಿನ ದೊಡ್ಡ ವಿಪರ್ಯಾಸ.

ವಿದಾಯ[ಬದಲಾಯಿಸಿ]

ಈ ಮಹಾನ್ ಸಾಹಿತಿಗಳು ೩೧ ಅಕ್ಟೋಬರ್ ೨೦೦೧ರಂದು ಈ ಲೋಕವನ್ನಗಲಿದರು.