ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೯
ಮೈಸೂರು ' ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ'. ಮೈಸೂರು ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನ ಮೈಸೂರು ಸಂಸ್ಥಾನದ ರಾಜಧಾನಿ. ಇಲ್ಲಿ ಹಲವು ಸುಂದರ ಅರಮನೆಗಳಿರುವುದರಿಂದ ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯುತ್ತಾರೆ. ಭಾರತದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಇದೇ ನಗರದಲ್ಲಿದೆ. ಇತರ ಹೆಸರುವಾಸಿ ಸಂಶೋಧನಾ ಸಂಸ್ಥೆಗಳಾದ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಸಿಎಫ್ಟಿಆರ್ಐ), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್)ಗಳಿಗೂ ಮೈಸೂರು ಮನೆಯಾಗಿದೆ. ಕುವೆಂಪು, ಮೋಕ್ಷಗುಂಡಂ ವಿಶ್ವೇಶ್ವರಾಯ, ಬಿ ಎಂ ಶ್ರೀ, ಆರ್ ಕೆ ನಾರಾಯಣ್ ಮುಂತಾದ ಹಲವು ಪ್ರಮುಖರಿಗೆ ಮನೆಯಾಗಿದ್ದ ಈ ಊರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ರಾಜ ಮಹಾರಾಜರ ಸಂಸ್ಕೃತಿಯ ಸೊಗಡನ್ನು ಉಳಿಸಿಕೊಂಡಿರುವ ನಗರಗಳಲ್ಲಿ ಇದು ಮುಂಚೂಣಿಯಲ್ಲಿದೆ.
ಪ್ರವಾಸಿ ತಾಣಗಳು
ಅರಮನೆ: ಅರಮನೆಯ ನಿಜವಾದ ವೈಭೋಗವನ್ನು ಇಲ್ಲಿ ಕಾಣಬಹುದಾಗಿದೆ. ಅರಮನೆಯ ಕೆಲವು ಭಾಗಗಳಿಗೆ ಮಾತ್ರ ಸಾರ್ವಜನಿಕ ಪ್ರವೇಶವಿರುತ್ತದೆ.
ಮೃಗಾಲಯ: ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರಿನ ಮೃಗಾಲಯ ಅತ್ಯಂತ ವಿಶಾಲವಾಗಿದ್ಧು ಹಲವಾರು ಜಾತಿಯ ಪ್ರಾಣಿ ಪ್ರಭೇಧಗಳನ್ನು ಇಲ್ಲಿ ಕಾಣಬಹುದಾಗಿದೆ. ಅಳಿವಿನ ಅಂಚಿನಲ್ಲಿರುವ ಹಲವಾರು ಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ಇಲ್ಲಿ ಕಾಣಬಹುದು.
ಕೃಷ್ಣರಾಜ ಅಣೆಕಟ್ಟು : ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು ವಿಶ್ವೇಶ್ವರಯ್ಯನವರ ಕಾಲದಲ್ಲಿ ಕಟ್ಟಲ್ಪಟ್ಟಿರುತ್ತದೆ. ಇದಕ್ಕೆ ಹೊಂದಿಕೊಂಡಿರುವ ಉದ್ಯಾನವನ ಹಾಗೂ ಅದರಲ್ಲಿರುವ ಸಂಗೀತದ ಕಾರಂಜಿ ಎಲ್ಲರನ್ನೂ ಆಕರ್ಷಿಸುತ್ತದೆ.
ಚಾಮುಂಡಿ ಬೆಟ್ಟ: ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡಿ ದೇವಿಯ ದೇವಸ್ಠಾನ ಪುರಾತನವಾದುದಾಗಿದ್ದು, ಮಹಾರಾಜರ ಮನೆದೇವರಾಗಿರುತ್ತದೆ.
ಇದಲ್ಲದೆ ಸಮೀಪದಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ, ನಿಮಿಷಾಂಬ ದೇವಸ್ಥಾನ ಇವುಗಳು ನೋಡಲೇಬೇಕಾದ ಪ್ರವಾಸಿ ತಾಣಗಳಾಗಿರುತ್ತವೆ.