ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೫
ಗೋಚರ
ಚದುರಂಗ (ಚೆಸ್) ಇಬ್ಬರು ಆಟಗಾರರಿಂದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು ರಾಜ, ಒಂದು ಮಂತ್ರಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ ವಿಶಿಷ್ಟ ರೀತಿಯಲ್ಲಿ ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ.