ವರ್ಗ:ಸಿಡುಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀತಾಳೆ ಸಿಡುಬು ಅಥವಾ ಚಿಕನ್ ಫಾಕ್ಸ್ ತೀವ್ರವಾದ ಸೋಂಕು ರೋಗವಾಗಿರುತ್ತದೆ. ಇದು ಬರಲು ವೈರಸೆಲ್ಲಾ ಜಾಸ್ಟರ್ ಕಾರಣ. ಇದರ ರೋಗ ಲಕ್ಷಣಗಳು ಕೆಲವರಲ್ಲಿ ಸೌಮ್ಯವಾಗಿರಬಹುದು. ಮತ್ತೆ ಕೆಲವರಲ್ಲಿ ಉಗ್ರವಾಗಿರಬಹುದು. ಸೀತಾಳೆ ಸಿಡುಬು ಭಾರತದಲ್ಲಿ ಸಾಮಾನ್ಯವಾದ ರೋಗವಾಗಿರುತ್ತದೆ. ಇದು ಸಾಂಕ್ರಾಮಿಕ ಅಥವಾ ಸ್ಥಾನಿಕ(ಎಂಡೆಮಿಕ್)ವಾಗಿ ಉಂಟಾಗಬಹುದು. ರೋಗ ಲಕ್ಷಣಗಳು ಕೆಲವು ರೋಗಿಗಳಲ್ಲಿ ಕೆಲವು ದದ್ದುಗಳು ಕಂಡುಬಂದು ಮಾಯವಾಗುವುದು. ಸ್ವಲ್ಪ ಜ್ವರವೂ ಇರಬಹುದು. ರೋಗ ಉಗ್ರವಾಗಿದ್ದರೆ

  • ಜ್ವರ ಇರುತ್ತದೆ.
  • ಬೆನ್ನು ನೋವು ಮತ್ತು ಚಳಿ ಇರುತ್ತದೆ.
  • ಮೈ ಕೈಯಲ್ಲಿ ನೋವಿರುವುದು
  • ಆಯಾಸವಿರುತ್ತದೆ.
  • ತ್ವಚೆ(ಮೈ ಚರ್ಮ)ಯಲ್ಲಿ ದದ್ದುಗಳು ಮೊದಲು ಎದೆಯ ಮೇಲ್ಭಾಗದಲ್ಲಿ ಹಾಗೂ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಅನಂತರ ಮುಖದ ಮೇಲೂ ಕಾಣಿಸಿಕೊಳ್ಳುತ್ತವೆ. ಕೊನೆಗೆ ಕೈ-ಕಾಲುಗಳ ಮೇಲೆ ದದ್ದು ಕಂಡುಬರುತ್ತದೆ. ಎದೆ ಹಾಗೂ ಹೊಟ್ಟೆಯ ಮೇಲೂ ಹೆಚ್ಚಾಗಿ ದದ್ದುಗಳು ಮೂಡುತ್ತವೆ. ಕೈ ಕಾಲುಗಳ ಮೇಲೆ ಕಡಿಮೆ ದದ್ದುಗಳು ಇರುತ್ತವೆ.
  • ಸೀತಾಳೆ ಸಿಡುಬು ರೋಗದಲ್ಲಿ ದದ್ದುಗಳು ತುರಿಕೆಯಿಂದ ಕೂಡಿರಬಹುದು.
  • ದದ್ದುಗಳು ಬಹುಬೇಗನೆ ಬದಲಾಗುತ್ತವೆ. ದದ್ದುಗಳು ದೊಡ್ಡದಾಗುತ್ತವೆ. ದದ್ದುಗಳ ಸುತ್ತಲೂ ಕೆಂಪು ಬಣ್ಣ ಕಾಣುತ್ತದೆ.
  • ರೋಗಿಗೆ ಸ್ವಲ್ಪ ಕೆಮ್ಮು ಇರಬಹುದು. ಹಸಿವು ಮಂದವಾಗಿರಬಹುದು.
  • ಕೆಲವೊಮ್ಮೆ ಸೀತಾಳೆ ಸಿಡುಬುನಿಂದ ತೊಡಕು ಗಳು ಉಂಟಾಗಬಹುದು. ವಯಸ್ಕರಲ್ಲಿ ತೊಡಕುಗಳು ಕಾಣುವುದು ಹೆಚ್ಚು.
  • ಕೆಲವು ಸಲ ರೋಗಿ ನ್ಯೂಮೋನಿಯಾದಿಂದ ನರಳಬಹುದು. ಇದರಿಂದ ಕ-ದಮ್ಮು ಬರಬಹುದು.
  • ಒಮ್ಮೆ ಸೀತಾಳೆ ಸಿಡುಬು ಬಂದು ಬಳಲಿದ ನಂತರ ರೋಗದಿಂದ ಮುಕ್ತವಾದ ನಂತರ ರೋಗ ನಿರೋಧಕತೆ ಜೀವನಪರ್ಯಂತ ಇರಬಹುದು.

ಸೋಂಕಿನ ಮೂಲ ಸೋಂಕಿನ ಮೂಲ ಸೀತಾಳೆ ಸಿಡುಬು ಹೊಂದಿರುವ ವ್ಯಕ್ತಿಯೇ ಆಗಿರುತ್ತಾನೆ. ವೈರಸ್, ರೋಗಿಯ ಮೂಗು ಮತ್ತು ಗಂಟಲಿನ ಸ್ರಾವಗಳಲ್ಲಿ ಮತ್ತು ಚರ್ಮದ ಗಾಯಗಳಲ್ಲಿ ಲೋಳೆಪೊರೆ ಮತ್ತು ರಕ್ತದಲ್ಲಿರುತ್ತದೆ.ಸೀತಾಳೆ ಸಿಡುಬು ಮುಖ್ಯವಾಗಿ ಹತ್ತು ವರ್ಷದೊಳಪಟ್ಟ ಮಕ್ಕಳಲ್ಲಿ ಬರುವುದು ಹೆಚ್ಚು. ಈ ರೋಗವು ತುಂತುರು ಸೋಂಕಿನ (droplet infection) ಮೂಲಕ ಹರಡುತ್ತದೆ. ರೋಗಿ ಉಪಯೋಗಿಸಿದ ಕಲುಷಿತ ವಸ್ತುಗಳೂ ಸೋಂಕನ್ನು ಹರಡಬಲ್ಲದು. ರೋಗ ಪರಿಪಕ್ವ ಅವಯೆಂದರೆ 14ರಿಂದ 17 ದಿನಗಳು. ನಿಯಂತ್ರಣ/ತಡೆಗಟ್ಟುವಿಕೆ ಸೀತಾಳೆ ಸಿಡುಬಿಗೆ ನಿರ್ದಿಷ್ಟ ಚಿಕಿತ್ಸೆಯೇನಿಲ್ಲ. ಸಾಮಾನ್ಯ ಪ್ರಬಂಧಕ ಕ್ರಮಗಳೆಂದರೆ,

  • ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಯವರಿಗೆ ವರದಿ ಮಾಡುವುದು
  • ರೋಗಿಯನ್ನು ಪ್ರತ್ಯೇಕವಾದ ರೂಮಿ ನಲ್ಲಿರಿಸುವುದು.
  • ರೋಗಿ ಉಪಯೋಗಿಸಿದ ವಸ್ತುಗಳನ್ನು ಸೋಂಕು ನಿವಾರಣೆ ಮಾಡುವುದು.

ಸೀತಾಳೆ ಸಿಡುಬು; ಮುಂಜಾಗ್ರತಾ ಕ್ರಮ ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳಲ್ಲಿ ಗೊಬ್ಬರ, ಗಣಜಲಿ (ಸೀತಾಳ ಸಿಡುಬು) ಚರ್ಮ ವ್ಯಾಧಿ ವ್ಯಾಪಕವಾಗಿ ಹರಡುತ್ತಿದ್ದು ಜನರು ರೋಗ ನಿವಾರಣೆಗೆ ದೇವರ ಮೊರೆ ಹೋಗುತ್ತಿದ್ದಾರೆ. ಆದರೆ, ರೋಗ ತಡೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನೀಡಬೇಕಾದ ವೈಜ್ಞಾನಿಕ ಲಸಿಕೆ ಜನಸಾಮಾನ್ಯರ ಕೈಗೆಟುಕುತ್ತಿಲ್ಲ.

ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ಮಾರಕವಾಗಿ ಪರಿಣಮಿಸಿದ್ದು, ಬಡ, ಮಧ್ಯಮ ಜನರ ಪಡಿಪಾಟಲು ಹೇಳತೀರದು. ಪರಿಣಾಮ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ. ಧಾರವಾಡ ಜಿಲ್ಲೆಯ ನೆಹರುನಗರ, ಯಾದವಾಡ, ನರೇಂದ್ರ, ಉಪ್ಪಿನಬೆಟಗೇರಿ, ಮುಮ್ಮಿಗಟ್ಟಿ, ಗಿರಣಿಚಾಳ, ಹಳೇಹುಬ್ಬಳ್ಳಿ, ಅದರಗುಂಚಿ ಸೇರಿದಂತೆ ಬಹುತೇಕ ಕಡೆ ಸೀತಾಳ ಸಿಡುಬು ಹೆಚ್ಚಾಗಿ ಕಂಡುಬಂದಿದೆ.

ಯಾವಾಗ ಬರುತ್ತದೆ ? ಸಾಂಕ್ರಾಮಿಕ ರೋಗವಾದ ಸೀತಾಳ ಸಿಡುಬು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಈಗ ಬೇಸಿಗೆಯಲ್ಲೂ ಹರಡುತ್ತಿರುವುದು ಆತಂಕ ಮೂಡಿಸಿದೆ. ಇದು ಮಕ್ಕಳ ಜೀವನ, ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುವುದಿಲ್ಲವಾದರೂ, ಸುಮಾರು 15- 20 ದಿನಗಳ ನೋವು ಚಿಕ್ಕ ಮಕ್ಕಳನ್ನು ಪರಿಪರಿಯಾಗಿ ಬಾಧಿಸುತ್ತಿದೆ.

ಲಕ್ಷಣಗಳು ರೋಗಕ್ಕೆ ತುತ್ತಾದ ಮಕ್ಕಳಲ್ಲಿ ಕೆಂಪು ಗುಳ್ಳೆ, ಜ್ವರ, ಶೀತ, ಚರ್ಮ ರೋಗ, ದದ್ದು, ಮೈ ಉರಿತ ಹೆಚ್ಚುತ್ತದೆ. ಮೈ ತುರಿತ, ಗುಳ್ಳೆಗಳನ್ನು ಕೆರೆದುಕೊಳ್ಳುವುದರಿಂದ ಶಾಶ್ವತ ಕಲೆಯಾಗಿ ಉಳಿಯುತ್ತವೆ. ಈ ರೋಗ ನಿಯಂತ್ರಣಕ್ಕೆ ಅಲೋಪಥಿ ಔಷಧವಿಲ್ಲ ಎಂಬ ಕಲ್ಪನೆ ಜನರಲ್ಲಿದ್ದದ್ದರಿಂದ ಅವರು ದ್ಯಾಮವ್ವ, ದರ್ಗವ್ವ ದೇವರಿಗೆ ದೀಪ ಹಚ್ವುವುದು, ಎಣ್ಣೆಕೊಟ್ಟು ನಮಿಸುವುದೊಂದೆ ನಂಬಿ ಕುಳಿತಿದ್ದಾರೆ. ರೋಗ ಕಾಣಿಸಿಕೊಂಡ 5ರಿಂದ 7 ದಿನಗಳೊಳಗೆ ಕ್ರಮೇಣ ಕಡಿಮೆಯಾಗುವುದರಿಂದ ದ್ಯಾಮವ್ವ ದುರ್ಗವ್ವಳೇ ರೋಗ ನಿವಾರಣೆ ಮಾಡಿದಳು ಎಂಬ ನಂಬಿಕೆ ಜನರಲ್ಲಿ ಗಟ್ಟಿಗೊಳ್ಳುತ್ತಿದ್ದು, ಮೂಢನಂಬಿಕೆಯನ್ನು ಪ್ರೇರೇಪಿಸುತ್ತದೆ. ನಂತರದ ಬಗ್ಗೆ ತಲೆ ಕೆಡಿಸಿಕೊಳ್ಳದ ಗ್ರಾಮೀಣ ಜನರು ಈ ಬಗ್ಗೆ ವೈದ್ಯರ ಸಲಹೆಯನ್ನೂ ಧಿಕ್ಕರಿಸಿ ನಡೆಯುತ್ತಿದ್ದಾರೆ.

ಏನಿದು ಸೀತಾಳ ಸಿಡುಬು? ಸೀತಾಳ ಸಿಡುಬು ಒಂದು ಬಗೆಯ ಚರ್ಮರೋಗ. ಇದನ್ನು ವೈಜ್ಞಾನಿಕವಾಗಿ ವಾರಿಸೆಲ್ಲ- ಜೊಸ್ಟರ್ ವೈರಸ್ ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇದನ್ನು ಗೊಬ್ಬರ, ಗಣಜಲಿ, ದದ್ದು ಎಂದು ಕರೆಯುತ್ತಾರೆ. ಇದು 15 ವರ್ಷದ ವರೆಗಿನ ಮಕ್ಕಳಿಗೆ ಬರುತ್ತದೆಯಾದರೂ 5ರಿಂದ 9 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಇತ್ತೀಚೆಗೆ ವಯಸ್ಕರರಲ್ಲೂ ಗೊಬ್ಬರ ಕಂಡು ಬಂದಿರುವುದು ಕುತೂಹಲಕರ ಸಂಗತಿ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವರದಿಯಾಗಿದೆ.

ವಾಯುಗಾಮಿ ಕಣಗಳ ಮೂಲಕ ಹರಡುವ ಜೋಸ್ಟರ್ ವೈರಸ್ ಮಕ್ಕಳ ದೇಹ ಸೇರಿದ 14-16 ದಿನಗಳ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 21ನೇ ದಿನಕ್ಕೆ ಮಕ್ಕಳಲ್ಲಿ ಕೆಂಪು ಗುಳ್ಳೆ, ಜ್ವರ ಕಾಣಿಸಿಕೊಂಡು ಬಾಧೆ ಹೆಚ್ಚಿಸುತ್ತದೆ. 102 ಡಿಗ್ರಿಯವರೆಗೂ ಜ್ವರ ಕಾಣಿಸಿಕೊಂಡು ಮಕ್ಕಳ ಜೀವಕ್ಕೆ ಆಪತ್ತು ಬರುವ ಸಾಧ್ಯತೆಗಳೂ ಇವೆ. ಎಷ್ಟೋ ಮಕ್ಕಳು ಈ ರೋಗದಿಂದ ಬಳಲುವ ಜತೆಗೆ ಆರೋಗ್ಯದ ಸ್ಥಿತ್ಯಂತರ ಕಳೆದುಕೊಂಡ ನಿದರ್ಶನಗಳೂ ಇವೆ.

ಗೊಬ್ಬರ ಸಾಂಕ್ರಾಮಿಕ ರೋಗವಾಗಿದ್ದರಿಂದ ಕುಟುಂಬ ಸದಸ್ಯರಲ್ಲಿ, ಶಾಲಾ ಸಹಪಾಠಿಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಿವೆ. ಸೀತಾಳ ಸಿಡುಬು ತಗುಲಿದ ಮಗುವಿನ ಬಟ್ಟೆಯನ್ನು ಮತ್ತೊಂದು ಮಗು ಧರಿಸುವುದರಿಂದ, ಮೈಮೇಲಿನ ಗುಳ್ಳೆಯ ದ್ರವ ಅಂಟಿಕೊಳ್ಳುವುದರಿಂದ ಈ ರೋಗ ಮತ್ತೊಬ್ಬರಿಗೆ ಹರಡುತ್ತದೆ ಎನ್ನುತ್ತಾರೆ ಡಾ.ಬಬ್ಬರವಾಡ.

ಮುನ್ನೆಚ್ಚರಿಕೆ ಕ್ರಮ ಏನು ? ಸೀತಾಳ ಸಿಡುಬು ರೋಗವನ್ನು ಸಂಪೂರ್ಣ ನಿವಾರಿಸಲು ವೈದ್ಯಕೀಯ ಔಷಧ ಇದೆ. ಅಮೆರಿಕದಂತಹ ದೇಶಗಳಲ್ಲಿ ಈ ಔಷಧ ಬಳಸಿ ಪ್ರತಿಶತವ 90ರಷ್ಟು ರೋಗಮುಕ್ತ ಸಮಾಜ ನಿರ್ಮಾಣ ಮಾಡಲಾಗಿದೆ.

ಮಗು ಒಂದು ವರ್ಷ ಪೂರ್ಣಗೊಳಿಸಿದಾಗ ಹಾಗೂ ನಾಲ್ಕನೆ ವರ್ಷ ಪೂರೈಸಿದಾಗ ಎರಡು ಸೀತಾಳ ಸಿಡುಬು ಲಸಿಕೆ ಹಾಕಿಸಿದರೆ, ಮಕ್ಕಳಿಗೆ ಜೀವನ ಪರ್ಯಂತ ಗೊಬ್ಬರ, ಗಣಜಲಿಯಂತಹ ಸಾಂಕ್ರಾಮಿಕ ಚರ್ಮರೋಗದಿಂದ ಮುಕ್ತಿ ನೀಡಬಹುದು. ಆದರೆ, ಭಾರತದ ಸರಕಾರಿ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿಲ್ಲ. ಆದರೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಯನ್ನು ಮಕ್ಕಳಿಗೆ ನೀಡುವುದು ಉತ್ತಮ.

ಸರಕಾರದ ಸಹಕಾರ ಅವಶ್ಯ ಕ್ಯಾನ್ಸರ್‌ನಂತ ರೋಗಕ್ಕೆ ಸಂಬಂಧಿಸಿದ ಔಷಧಗಳಿಗೆ ರಿಯಾಯಿತಿ ನೀಡಿದ ಕೇಂದ್ರ ಸರಕಾರ, ಜನಸಾಮಾನ್ಯರ ಮಕ್ಕಳ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸದಿರುವುದು ವಿಪರ‌್ಯಾಸ. ಅದೇ ರೀತಿ ಸೀತಾಳ ಸಿಡುಬಿನಿಂದ ಮಕ್ಕಳನ್ನು ಕಾಪಾಡಲು ಮುಂದಡಿ ಇಡಬೇಕಿದೆ. ಸದ್ಯ ಈ ರೋಗಕ್ಕೆ ಧಡಾರ ಲಸಿಕೆ ಇದೆಯಾದರೂ, ಅದರ ಬೆಲೆ 2ರಿಂದ 2.5 ಸಾವಿರ ರೂ. ಇರುವುದರಿಂದ ಬಡವರ ಪಾಲಿಗೆ ಗಗನಕುಸುಮವಾಗಿದೆ.

ಹೀಗಾಗಿ ಸರಕಾರ ಸೀತಾಳ ಸಿಡುಬು ಮಾರಣಾಂತಿಕ ರೋಗವಲ್ಲ ಎಂದು ನಿಷ್ಕಾಳಜಿ ತೋರದೆ ಇದು ಮಕ್ಕಳ ಬದುಕಿನಲ್ಲಿ ಎಷ್ಟು ಪರಿಣಾಮ ಬೀರಲಿದೆ ಎಂಬ ಸೂಕ್ಷ್ಮತೆ ಅರಿತುಕೊಳ್ಳಬೇಕು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ರಿಯಾಯತಿ ದರದಲ್ಲಿ ನೀಡುವ ಕೆಲಸಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ತೋರಬೇಕಿದೆ.

ದೇವರ ಕೊಟ್ಟ ಶಾಪವಲ್ಲ ಸೀತಾಳ ಸಿಡುಬು ದೇವರು ಕೊಟ್ಟ ಶಾಪವಲ್ಲ. ಇದು ಸ್ವಚ್ಛತೆ ಹಾಗೂ ವೈರಸ್‌ಗೆ ಸಂಬಂಧಿಸಿದ್ದು. ಹೀಗಾಗಿ ಈ ರೋಗದಿಂದ ಮುಕ್ತಿ ಪಡೆಯಲು ದ್ಯಾಮವ್ವ, ದುರ್ಗವ್ವ ದೇವರ ಮೊರೆ ಹೋಗದೇ ಮುಂಜಾಗ್ರತೆ ವಹಿಸುವುದು ಅವಶ್ಯ. ಮಕ್ಕಳಿಗೆ ಎರಡು ಬಾರಿ ಧಡಾರ ಲಸಿಕೆ ಹಾಕಿಸುವತ್ತ ಪಾಲಕರು ಗಮನ ಹರಿಸಬೇಕು. ಈ ರೋಗ ಅಂಟಿಕೊಂಡ 5-7 ದಿನಗಳೊಳಗೆ ಕ್ರಮೇಣ ಕಡಿಮೆಯಾಗುವುದು.

ಸ್ವಚ್ಛತೆಗೆ ಆದ್ಯತೆ ನೀಡಿ ಸೀತಾಳ ಸಿಡುಬು ಒಂದು ಸಾಂಕ್ರಾಮಿಕ ರೋಗ. ಈ ರೋಗ ತಡೆಗೆ ಪಾಲಕರು ಎಚ್ಚರ ವಹಿಸಬೇಕು. ದೇವರ ಮೊರೆ ಹೋಗದೆ ಅವಶ್ಯಕ ವೈದ್ಯಕೀಯ ಸಲಹೆ ಪಡೆದು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸ್ವಚ್ಛತೆ ಇಲ್ಲದ ಪ್ರದೇಶಗಳ ಮಕ್ಕಳಿಗೆ ಈ ರೋಗ ಕಂಡು ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆ, ಸುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ಗಮನ ಹರಿಸಬೇಕು.

ಸಂಗ್ರ್ತಹ : ಸಂಪತ್

"ಸಿಡುಬು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.