ಲೋಳೆ
ಲೋಳೆಯು ಒಂದು ಪಾಲಿಮರ್. ಇದು ಲೋಳೆ ಪೊರೆಗಳು ಉತ್ಪಾದಿಸುವ ಮತ್ತು ಅವುಗಳನ್ನು ಆವರಿಸುವ ಜಾರುವ ಗುಣವುಳ್ಳ ಜಲೀಯ ಸ್ರಾವ. ಸಾಮಾನ್ಯವಾಗಿ ಲೋಳೆ ಗ್ರಂಥಿಗಳಲ್ಲಿ ಕಂಡುಬರುವ ಜೀವಕೋಶಗಳು ಇದನ್ನು ಉತ್ಪಾದಿಸುತ್ತವಾದರೂ, ಇದು ಸೀರಮ್ ಹಾಗೂ ಲೋಳೆ ಕೋಶಗಳು ಎರಡನ್ನೂ ಹೊಂದಿರುವ ಮಿಶ್ರ ಗ್ರಂಥಿಗಳಿಂದಲೂ ಜನ್ಯವಾಗಬಹುದು. ಇದು ಅಕಾರ್ಬನಿಕ ಲವಣಗಳು, (ಲೈಸೊಜ಼ೈಮ್‍ಗಳಂತಹ) ನಂಜುನಿರೋಧಕ ಕಿಣ್ವಗಳು, ಪ್ರತಿಕಾಯಗಳು ಮತ್ತು ಲೋಳೆಪೊರೆಗಳು ಹಾಗೂ ಸಬ್‍ಮ್ಯುಕೋಸಲ್ ಗ್ರಂಥಿಗಳಲ್ಲಿನ ಗಿಂಡಿ ಜೀವಕೋಶಗಳಿಂದ ಉತ್ಪತ್ತಿಗೊಂಡ ಲ್ಯಾಕ್ಟೊಫ಼ೆರಿನ್[೧] ಹಾಗೂ ಮ್ಯೂಸಿನ್‍ಗಳಂತಹ ಗ್ಲೈಕೊಪ್ರೋಟೀನ್‍ಗಳನ್ನು ಹೊಂದಿರುವ ಜಿಗುಟಾದ ಕಲಿಲವಾಗಿದೆ. ಲೋಳೆಯು ಶಿಲೀಂಧ್ರ, ಬ್ಯಾಕ್ಟೀರಿಯ, ವೈರಾಣುಗಳಂತಹ ಸೋಂಕುತರುವ ವಸ್ತುಗಳ ವಿರುದ್ಧ ಶ್ವಾಸಕೋಶ, ಜಠರಗರುಳು, ಮೂತ್ರಜನನೇಂದ್ರಿಯ, ದೃಶ್ಯ ಮತ್ತು ಶ್ರವಣೇಂದ್ರಿಯ ವ್ಯವಸ್ಥೆಗಳಲ್ಲಿನ ಎಪಿತೀಲಿಕ ಜೀವಕೋಶಗಳು, ಉಭಯಚರಗಳಲ್ಲಿ ಹೊರಕವಚವನ್ನು, ಮತ್ತು ಮೀನುಗಳಲ್ಲಿನ ಕಿವಿರುಗಳನ್ನು ರಕ್ಷಿಸುವ ಕಾರ್ಯನಿರ್ವಹಿಸುತ್ತದೆ.