ವಿಷಯಕ್ಕೆ ಹೋಗು

ಲೀ ಕ್ವಾನ್ ಯೀವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೀ ಕ್ವಾನ್ ಯೀವ್


ಲೀ ಕ್ವಾನ್ ಯೀವ್ (ಜನನ ಹ್ಯಾರಿ ಲೀ ಕ್ವಾನ್ ಯೀವ್ ೧೬ ಸೆಪ್ಟೆಂಬರ್ ೧೯೨೩ - ೨೩ ಮಾರ್ಚ್ ೨೦೧೫), LKY ಎಂದೇ ಖ್ಯಾತರಾದ ಲೀ, ೧೯೫೫ರಿಂದ ೧೯೯೧ರವರೆಗೆ ಸ್ವತಂತ್ರ ಸಿಂಗಾಪುರ್ ದೇಶದ ಪ್ರಧಾನ ಮಂತ್ರಿಯಾಗಿ, ನಂತರ ೨೦ ವರುಷಗಳ ಕಾಲ ಹಿರಿಯ-ಸಲಹೆಗಾರರಾಗಿ ಸಿಂಗಾಪುರವನ್ನು ಶ್ರೀಮಂತ ರಾಷ್ಟ್ರವಾಗಿಸಿದರು. ಲೀ ಅವರ ನಾಯಕತ್ವದಲ್ಲಿ ಸಿಂಗಾಪುರ ಕೇವಲ ಒಂದು ತಲೆಮಾರಿನಲ್ಲಿಯೇ ಹಿಂದುಳಿದ ದೇಶದಿಂದ, ವಿಶ್ವದ ಸಂಪದ್ಯುಕ್ತ ರಾಷ್ಟ್ರವಾಗಿ ಬದಲಾಗಿದೆ.ನಾಲ್ಕು ಏಷ್ಯನ್ ಹುಲಿಗಳಲ್ಲಿ ಸಿಂಗಾಪುರ ಒಂದಾಗಿದೆ, ಇದು ಲೀ ಅವರ ಹೆಗ್ಗಳಿಕೆ.

ಜನನ[ಬದಲಾಯಿಸಿ]

ಲೀ ಚಿನ್ ಕೂನ್ ಮತ್ತು ಚುಆ ಜಿಮ್ ನಿಯೋ ದಂಪತಿಗಳಗೆ ೧೯೨೩ಸೆಪ್ಟೆಂಬರ್ ೧೬ರಂದು ಮೊದಲ ಮಗನಾಗಿ ಲೀ ಜನಿಸಿದರು. ಕ್ವಾನ್ ಯೀವ್ ಎಂದರೆ "ಬೆಳಕು ಮತ್ತು ಹೊಳಪು" . ಇದರ ಪರ್ಯಾಯ ಅರ್ಥ "ಪೂರ್ವಿಕರ ಮಹಾನ್ ವೈಭವವನ್ನು ಮರಳಿ ತರುವವ" ಎಂದೂ ಇದೆ. ಲೀಯವರ ಅಜ್ಜ ಲೀಯವರಿಗೆ ಹ್ಯಾರಿ ಎಂದು ಹೆಸರಿಟ್ಟರು.

ಕುಟುಂಬ ಮತ್ತು ಬಾಲ್ಯ[ಬದಲಾಯಿಸಿ]

ಲೀ ಕ್ವಾನ್ ಯೀವ್‌ರಿಗೆ ಮೂರು ಮಂದಿ ತಮ್ಮಂದಿರು. ವಕೀಲರಾದ ಡೆನ್ನಿಸ್ ಲೀ ಕಿಂ ಯೀವ್(೧೯೨೬-೨೦೦೩), ಶೇರುವರ್ತಕ ಫ಼್ರೆಡ್ಡಿ ಲೀ ಥಿಯಾಂ ಯೀವ್(೧೯೨೭-೨೦೧೨) ಮತ್ತು ಸಿಂಗಾಪುರ ವೈದ್ಯಕೀಯ ಸಮಿತಿಯ ಅಧ್ಯಕ್ಷ ಡಾ. ಲೀ ಸುವಾನ್ ಯೀವ್(೧೯೩೩-). ಲೀಯವರಿಗೆ ಮೋನಿಕಾ ಲೀ ಕಿಂ ಮೋನ್(೧೯೨೯-) ಎಂಬ ತಂಗಿಯೂ ಇದ್ದಾರೆ ೧೯೨೯ಬಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಾದ ಮಹಾ ಹಣದಿಳಿತದಲ್ಲಿ ಲೀ ಕುಟುಂಬದ ಆಸ್ತಿ ಬಹುವಾಗಿ ನಶಿಸಿತು. ಇದರಿಂದ ಲೀಯವರ ತಂದೆ ಲೀ ಚಿನ್ ಕೂನ್ ವರ್ತಕರಾಗಿ ದುಡಿಯಬೇಕಾಯಿತು. ತಮ್ಮ ತಂದೆಯ ಸಿಟ್ಟು,ಹಿರಿಯ ಮಗನಾದ ತಮ್ಮ ಮೇಲೆ ಸಣ್ಣ ವಯಸ್ಸಿನಲ್ಲಿ ಬಹುವಾಗಿ ಕಾಡಿತು ಎಂದೂ, ಆ ಅನುಭವದಿಂದಲೇ ಸಿಟ್ಟನ್ನು ನಿಯಂತ್ರಣದಲ್ಲಿ ಇಡುವುದು ಅವಶ್ಯ ಎಂದೂ ಅರಿತುದಾಗಿ ಲೀ ಬಣ್ಣಿಸುತ್ತಿದ್ದರು.


೧೯೫೦ರಲ್ಲಿ ಕ್ವಾ ಜಿಯೋಕ್ ಚೂ ರನ್ನು ವರಿಸಿದ ಲೀಲಿಗೆ ೩ ಮಕ್ಕಳು. ಹಿರಿಯ ಮಗ ಲೀ ಸೀನ್ ಲೂಂಗ್ ಸಿಂಗಾಪುರ ಸೇನೆಯಲ್ಲಿ ಬ್ರಿಗೇಡಿಯರ್ ಜನರಲ್ ಆಗಿ ಸೇವೆ ಸಲ್ಲಿಸಿ ೨೦೦೪ರಲ್ಲಿ ಸಿಂಗಾಪುರದ ೩ನೆ ಪ್ರಧಾನ ಮಂತ್ರಿಯಾದರು. ಅವರ ಕಿರಿಯ ಮಗ, ಲೀ ಸೀನ್ ಯಾಂಗ್ ಕೂಡ ಸಿಂಗಾಪುರ ಸೇನೆಯಲ್ಲಿ ಬ್ರಿಗೇಡಿಯರ್ ಜನರಲ್ ಆಗಿ,ನಂತರ ಸಿಂಗ್‌ಟೆಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ, ಪ್ರಸಕ್ತ ಸಿಂಗಪುರದ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಲೀಯವರ ಮಗಳು ಲೀ ವೈ ಲಿಂಗ್, ರಾಷ್ಟ್ರೀಯ ನ್ಯೂರೋಸೈನ್ಸ್ ಇನ್ಸ್ಟಿಟ್ಯೂಟ್ ಮುಖ್ಯಸ್ಥರಾಗಿರುತ್ತಾರೆ. ಲೀಯವರ ಸೊಸೆ ಅರ್ಥಾತ್ ಲೀ ಸೀನ್ ಲೂಂಗ್‌ರ ಪತ್ನಿ, ಹೋ ಚಿಂಗ್, ಟೆಮಾಸೆಕ್ ಹೋಲ್ಡಿಂಗ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ(ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೀರ ಪತ್ನಿ ಕ್ವಾ ಜಿಯೋಕ್ ಚೂ ತನ್ನ ನಿದ್ರೆಯಲ್ಲಿ ೨ ಅಕ್ಟೋಬರ್ ೨೦೧ಒ ರಂದು ನಿಧನರಾದರು.

ವಿದ್ಯಾಭ್ಯಾಸ[ಬದಲಾಯಿಸಿ]

೧೯೩೧ರಲ್ಲಿ ಟೆಲೋಕ್ ಕುರಾವು ಇಂಗ್ಲೀಷ್ ಶಾಲೆ ಸೇರಿದ ಲೀ, ೧೯೩೫ರಲ್ಲಿ ರಾಫ಼ೆಲ್ಸ್ ಶಾಲೆ ಸೇರಿದರು. ೩ ವರ್ಷ ಸ್ಕೌಟ್ಸ್ ನ ಭಾಗವಾದ ಲೀ, ಕ್ರಿಕೆಟ್, ಟೆನ್ನಿಸ್, ಚದುರಂಗ ಮತ್ತು ಭಾಷಣದಲ್ಲಿ ಹೆಸರು ಮಾಡಿದರು. ಜಾನ್ ಅಂಡರ್ಸನ್ ಸ್ಮಾರಕ ವಿದ್ಯಾರ್ಥಿವೇತನ ಪಡೆದು ರಾಫ಼ೆಲ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಲಿತರು. ೨ ವಿಶ್ವಯುದ್ಧದಲ್ಲಿ ೧೯೪೨-೪೫ವರೆಗೆ ಸಿಂಗಾಪುರ ಜಪಾನೀಯರ ವಶವಾದ ಕಾರಣ, ಲೀಯವರ ವಿದ್ಯಾಭ್ಯಾಸ ಪೂರ್ಣವಾಗುವುದು ತಡವಾಯಿತು.

ದ್ವಿತೀಯ ವಿಶ್ವಯುದ್ಧದಲ್ಲಿ ಲೀ[ಬದಲಾಯಿಸಿ]

ಯುದ್ಧದ ಸಮಯದಲ್ಲಿ, ೧೯೪೨ ರಿಂದ ೧೯೪೫ರವರೆಗೆ ಲೀ ಜವಳಿ ಆಮದು ಮಾಡುತ್ತಿದ್ದ ಶಿಮೋಡಾ ಎಂಬ ತನ್ನ ತಾತನ ಸ್ನೇಹಿತನ ಕಂಪನಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಹಲವು ಸಂಕಷ್ಟಗಳ ಮಧ್ಯೆಯೇ, ಜಪಾನಿ ಭಾಷೆ ಕಲಿತ ಲೀ, ಜಪಾನ್ ಪ್ರಚಾರ ಇಲಾಖೆಯಲ್ಲಿ ಬ್ರಿಟಿಷ್ ನೇತೃತ್ವದ ಮಿತ್ರರಾಷ್ಟ್ರಗಳ ಸಂದೇಶಗಳನ್ನು ಆಲಿಸಿ ಅನುವಾದ ಮಾಡುವ ಕಾರ್ಯ ನಿರ್ವಹಿಸಿದರು. ಲೀ ಬದುಕಲು ಯುದ್ಧದ ಸಮಯದಲ್ಲಿ ಖಾಸಗಿ ಸಣ್ಣ ಉದ್ಯಮಗಳನ್ನು ಕೂಡಾ ನಡೆಸಿದರು. ಸ್ಟಿಕ್ ಫ಼ಾಸ್ ಎಂಬ ಗೋಂದು ತಯಾರಿಸುವ ಕಂಪನಿ ಶುರು ಮಾಡಿದರು. ಲೀ ಜಪಾನಿಯರ ಸ್ವಾಧೀನದಲ್ಲಿ ಸುಕ್ ಚಿಂಗ್ ಹತ್ಯಾಕಾಂಡದಲ್ಲಿ ಕೊಲೆಯಾಗುವ ಅವಘಡದಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಯುದ್ಧದ ಕ್ರೂರ ಅನುಭವ ಲೀ ರನ್ನು ಕಟುಶಿಕ್ಷೆ ಮತ್ತು ಕರಾಳತೆಗಳನ್ನು ಪರಿಚಯಿಸಿತು.

ಬ್ರಿಟನ್ನಿನಲ್ಲಿ ಕಾನೂನು ಅಧ್ಯಯನ[ಬದಲಾಯಿಸಿ]

೧೯೪೫ರಲ್ಲಿ ಇಂಗ್ಲೆಂಡಿಗೆ ತೆರಳಿದ ಲೀ, ಮೊದಲು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದರು. ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಕಾನೂನು ಪದವಿ ಪಡೆವ ಹಂಬಲದಿಂದ ತಡವಾದರೂ ಸಹಿತ, ಲೀ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧೀನದ ಫಿಟ್ಜ್ ವಿಲಿಯಮ್ ಕಾಲೇಜು ಸೇರಿ ಕಾನೂನು ಪದವಿಯಲ್ಲಿ ಪ್ರಥಮ ದರ್ಜೆಯ ಆನರ್ಸ್ ಪಡೆದರು. ಕಾಲೇಜಿಗೆ ಮೊದಲಿಗರಾಗಿ ಪದವಿ ಪಡೆದ ಲೀಯವರಿಗೆ ಪ್ರತಿಷ್ಟಿತ ಮಿಡಲ್ ಟೆಂಪಲ್ ಬಾರ್ ನಲ್ಲಿ ವಕೀಲವೃತ್ತಿ ನಡೆಸಲು ಆಹ್ವಾನ ಬಂದಿತು. ೧೯೬೯ರಲ್ಲಿ ಫಿಟ್ಜ್ ವಿಲಿಯಂಸ್ ಕಾಲೇಜಿನ ಹಾನರರಿ ಫ಼ೆಲ್ಲೋ ಗೌರವಕ್ಕೆ ಲೀ ಪಾತ್ರರಾದರು

ವಕೀಲಿ ವೃತ್ತಿ[ಬದಲಾಯಿಸಿ]

೧೯೫೦ ರಲ್ಲಿ ಅವರು ಮಿಡಲ್ ಟೆಂಪಲ್‌ ಎಂಬ ಖ್ಯಾತ ಪ್ರದೇಶದಲ್ಲಿ, ತಮ್ಮ ಸೋದರ ಡೆನ್ನಿಸ್ ಮತ್ತು ಗೆಳೆಯ ಎಡ್ಮಂಡ್ ಬರ್ಕರ್ ಜೊತೆಗೂಡಿ ಹಲವು ವರುಷ ವಕೀಲ ವೃತ್ತಿ ನಡೆಸಿದರು. ಆ ಸಮಯದಲ್ಲಿ ಲೀ ಮಲಯಾ ರಾಷ್ಟ್ರದ ಭಾಗವಾಗಿದ್ದ ಸಿಂಗಾಪುರದ ಅಭಿವೃದ್ದಿಯ ಬಗ್ಗೆ ಸಕ್ರಿಯವಾಗಿ ಯೋಚಿಸುತ್ತಿದ್ದರು.೧೯೫೫ರವರೆಗೆ ಚೀನೀ ಭಾಷೆ ಅರಿಯದ ಲೀ, ತಮ್ಮ ೩೨ನೆಯ ವಯಸ್ಸಿನಲ್ಲಿ ಚೀನೀ ಭಾಷೆಯನ್ನು ಕಲಿತರು. ಶೀಘ್ರವಾಗಿ ಜಪಾನೀ ಭಾಷೆಯನ್ನೂ ಕಲಿತರು. ಅವರ ರಾಜಕೀಯ ಚಟುವಟಿಕೆಯ ಫಲವಾಗಿ ೧೯೫೪ರಲ್ಲಿ ಪೀಪಲ್ಸ್ ಆಕ್ಷನ್ ಪಾರ್ಟಿ ಸ್ಥಾಪನೆಯಾಯಿತು.


ರಾಜಕೀಯ[ಬದಲಾಯಿಸಿ]

ಯುದ್ಧದ ನಂತರ, ಇಂಗ್ಲೆಂಡ್ ನಲ್ಲಿ ಅಧ್ಯಯನ ನಡೆಸುವ ವೇಳೆ, ೧೯೪೫ರ ಚುನಾವಣೆಯಲ್ಲಿ ಲೀ ತಮ್ಮ ಸ್ನೇಹಿತ ಲೇಬರ್ ಪಕ್ಷದ ಡೇವಿಡ್ ವಿಡ್ಡಿಕೋಂಬ್ ರ ಪರ ಪ್ರಚಾರ ಮಾಡಿದರು. ಯುದ್ಧದ ನಂತರ ಸಿಂಗಾಪುರದ ಬವಣೆಯನ್ನು ಸಹಿಸದಾದ ಲೀ, ಸಿಂಗಾಪುರಕ್ಕೆ ಮರಳಲು ನಿರ್ಧರಿಸಿದರು. ಗೆಳೆಯರ ಮಧ್ಯೆ ಹ್ಯಾರಿ ಎಂದೂ ಗುರುತಿಸಿಕೊಂಡರೂ, ತಮ್ಮ ಹೆಸರಿನಿಂದ ಹ್ಯಾರಿ ಅನ್ನು ಬಿಟ್ಟು, ಲೀ ಕ್ವಾನ್ ಯೀವ್ ಎಂದು ತಮ್ಮನ್ನು ಕರೆದುಕೊಂಡರು.

ಸಿಂಗಾಪುರಕ್ಕೆ ಹಿಂದಿರುಗಿದ ನಂತರ, ಲೀ ತಿಂಗಳಿಗೆ $ ೫೦೦ ಸಂಬಳಕ್ಕೆ ಜಾನ್ ಲೇಕಾಕ್ ಕಾನೂನು ಸಂಸ್ಥೆಯಲ್ಲಿ ಕೆಲಸ. ವ್ಯಾಪಾರೀ ಒಕ್ಕೂಟ ಮತ್ತು ವಿದ್ಯಾರ್ಥಿ-ಸಂಘಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದರು. ಸಿಂಗಪುರದ ೧೯೫೧ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ರಿಟಿಷ್ ಪ್ರಗತಿಶೀಲ ಪಕ್ಷದ ಲೇಕಾಕ್ ಎಂಬುವವರ ಚುನಾವಣೆ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದರು.

ಸಿಂಗಪುರ್ ಚೀನೀ ಮಾಧ್ಯಮ ಶಾಲೆಗಳು ಒಕ್ಕೂಟದ ಸದಸ್ಯರು ೧೯೫೪ರ ರಾಷ್ಟ್ರೀಯ ಸೇವೆ ಸುಗ್ರೀವಾಜ್ಞೆಯ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆ ಶುರುಮಾಡಿದಾಗ, ಲೀ ಕ್ವಾನ್ ಯೀವ್ ಅಹಿಂಸಾತ್ಮಕ ಪ್ರತಿಭಟನೆಯ ಪರವಾಗಿ ನಿಂತರು. ಇದು ಔಪಚಾರಿಕವಾಗಿ ಲೀ ರಾಜಕೀಯ ಪ್ರವೇಶಿಸಲು ಕಾರಣವಾಯಿತು.

ಚೀನೀ ಭಾಷೆ ಮಾತನಾಡಲು ಸಹ ಬರದ ಲೀ, ೧೨ ನವೆಂಬರ್ ೧೯೫೪ರಲ್ಲಿ ಜನರ ಕ್ರಿಯಾತ್ಮಕ ಪಕ್ಷ (PAP) ವನ್ನು ಕಟ್ಟಿದರು. ಜನಮಾನಸದ ಭಾಷೆಯಾದ ಚೀನೀ ನುಡಿಯನ್ನು ಕಲಿತು, ಸ್ವಯಂಆಡಳಿತದ ಹೋರಾಟ ಮತ್ತು ಬ್ರಿಟಿಷ್ ವಸಾಹತು ಆಡಳಿತ ಕೊನೆಗಾಣಿಸುವ ಮಹತ್ವವನ್ನು ಸಾರಿ ಸಾರಿ ಹೇಳಿದರು. ೧೯೫೪ರಿಂದ ೧೯೯೨ರವರೆಗೆ ಸತತವಾಗಿ ೩೮ ವರ್ಷ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿದ್ದರು.

೧೯೫೫ರ ಚುನಾವಣೆಯಲ್ಲಿ ಶಾಸಕರಾದ ಲೀ, ಡೇವಿಡ್ ಸೌಲ್ ಮಾರ್ಷಲ್ ಸರ್ಕಾರದ ಎದುರು ವಿರೋಧ ಪಕ್ಷದ ನಾಯಕರಾದರು. ಸೌಮ್ಯವಾದಿ ನಾಯಕತ್ವವನ್ನು ಪ್ರತಿಪಾದಿಸಿದ ಲೀ, ೧೯೫೭ರ ಉಪಚುನಾವಣೆಯಲ್ಲಿ ಮತ್ತೆ ಗೆದ್ದರು.

ಸ್ವಯಂ ಆಡಳಿತದಲ್ಲಿ ಪ್ರಧಾನಿ[ಬದಲಾಯಿಸಿ]

೧೯೫೯ರ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದ ಜನರ ಕ್ರಿಯಾತ್ಮಕ ಪಕ್ಷದ ನಾಯಕರಾಗಿ, ಲೀ ಸಿಂಗಾಪುರದ ಪ್ರಧಾನಿ ಹುದ್ದೆಗೆ ಏರಿದರು. ವಿದೇಶಾಂಗ ವ್ಯವಹಾರ ಮತ್ತು ರಕ್ಷಣೆಯನ್ನು ಹೊರತು ಪಡಿಸಿ ಇತರ ವಿಷಯಗಳಲ್ಲಿ ಸಿಂಗಾಪುರಕ್ಕೆ ಸ್ವಾಯತ್ತತೆಯನ್ನುಮತ್ತು ಸ್ವಯಂ ಆಡಳಿತದ ಹೊಣೆ ನೀಡಲಾಗಿತ್ತು.

ಅಂದಿನ ಬ್ರಿಟಿಷ ಪ್ರಧಾನಿ ಹಾರೋಲ್ಡ್ ಮ್ಯಾಕ್ಮಿಲನ್ ಸಿಂಗಾಪುರ, ಮಲೇಶಿಯಾ ಪ್ರಾಂತ್ಯಗಳಿಗೆ ಸ್ವಾತಂತ್ರ್ಯ ನಿಡುವ ಬಗ್ಗೆ ಸಹಮತ ಹೊಂದಿದ್ದರು. ಲೀ, ಮಲೇಷಿಯಾದ ಪ್ರಧಾನಿ ತುಂಕು ಅಬ್ದುಲ್ ರೆಹಮಾನ ಜೊತೆಗೂಡಿ ಫೆಡರೇಷನ್ ಆಫ್ ಮಲೇಷ್ಯಾ ರೂಪಿಸುವ ಬಗ್ಗೆ ಮತ್ತು ಮಲಯಾ, ಸಿಂಗಪುರ, ಸಬಾಹ್ ಮತ್ತು ಸರವಾಕ್ ಪ್ರಾಂತ್ಯಗಳನ್ನುಒಳಗೊಂಡ ಒಂದು ಸಂಯುಕ್ತ ರಚನೆ ಪ್ರಸ್ತಾಪ ಸಲ್ಲಿಸಿದರು. ಮಲಯನ್ ಪ್ರಧಾನಿ ಟುಂಕು ಅಬ್ದುಲ್ ರಹಮಾನ್‌ರ ನೇತೃತ್ವದಲ್ಲಿ ೧೯೬೧ ರಲ್ಲಿ ಮಲಯಾ, ಸಿಂಗಪುರ, ಸಬಾಹ್ ಮತ್ತು ಸರವಾಕ್ ಒಳಗೊಂಡ ಒಂದು ಸಂಯುಕ್ತ ರಚನೆ ಪ್ರಸ್ತಾಪ ನಂತರ, ಲೀ ಬ್ರಿಟಿಷ್ ವಸಾಹತು ಆಡಳಿತಕ್ಕೆ ಅಂತ್ಯ ವಿಲೀನ ಪ್ರಚಾರ ಆರಂಭಿಸಿದರು. ಶೇಕಡ ೭೦ ಮಂದಿ ಹೊಸ ದೇಶರಚನೆಗೆ ಒಪ್ಪಿಗೆಯಿತ್ತರು.

ಲೀ ಕ್ವಾನ್ ಯೀವ್‌ರ ಕನಸು ನನಸಾಗಿ ೧೬ಸೆಪ್ಟಂಬರ್ ೧೯೬೩ರಲ್ಲಿ ರಂದು ಫೆಡರೇಷನ್ ಆಫ್ ಮಲೇಷ್ಯಾ ಜನ್ಮ ತಾಳಿತು.

ಮಲೇಷಿಯಾದಿಂದ ವಿಘಟನೆ[ಬದಲಾಯಿಸಿ]

ಮಲೇಷಿಯಾದ ಕೇಂದ್ರ ಸರ್ಕಾರದ ಯುನೈಟೆಡ್ ಮಲಯ ರಾಷ್ಟ್ರೀಯ ಸಂಸ್ಥೆ (UMNO) ಪಕ್ಷದ ಸದಸ್ಯರು, ಸಿಂಗಾಪುರ ಮೂಲದ ಚೀನೀಯರ ಸೇರ್ಪಡೆಯಿಂದ ಮೂಲಮಲೇಷ್ಯಾವಾಸಿಗಳಿಗೆ ಹಿನ್ನಡೆಯಾಗುವುದು ಎಂದು ಚಿಂತಿತರಾಗಿದ್ದರು. ಇದರ ದೆಸೆಯಿಂದ ಸಿಂಗಪುರದಲ್ಲಿ ೧೯೬೪ರ ಹೊತ್ತಿಗೆ ಜನಾಂಗೀಯ ಹಿಂಸಾಚಾರಗಳು ಆರಂಭಗೊಂಡವು. ಟುಂಕು ಅಬ್ದುಲ್ ರಹಮಾನ್ ಕೇಂದ್ರ ಸರ್ಕಾರಕ್ಕೆ ನಿಷ್ಠೆ ತೋರುತ್ತಿಲ್ಲ ಎಂದು ಮಲೇಷ್ಯಾ ನಿಂದ ಸಿಂಗಪುರವನ್ನು ಉಚ್ಚಾಟಿಸಲು ತೀರ್ಮಾನ ಕೈಗೊಂಡರು. ರಾಜಿ ಮಾತುಕತೆಗಳು ವಿಫಲವಾದ ಕಾರಣ ಸಿಂಗಾಪುರ ಸ್ವತಂತ್ರ ದೇಶವಾಗಬೇಕಾಯಿತು. ೭ ಆಗಸ್ಟ್ ೧೯೬೫ ರಂದು ಲೀ ಬೇರ್ಪಡೆ ಕಣ್ಣೀರಿನಿಂದ ಒಪ್ಪಂದಕ್ಕೆ ಸಹಿ ಹಾಕಿದರು. ರಕ್ತಸಂಬಂಧ, ಭೂಗೋಳ, ಅರ್ಥಶಾಸ್ತ್ರ ಮತ್ತು ಮಾನವ ಸಂಬಂಧ ಇವು ಎಲ್ಲದರಲ್ಲೂ ಒಂದೇ ಕುಟುಂಬದಂತೆ ಇದ್ದ ಮಲಯಾದಿಂದ ಸಂಪರ್ಕ ಕಡಿದುಕೊಂಡುದು ಈ ದುಃಖಕ್ಕೆ ಕಾರಣ. ಕುಡಿಯುವ ನೀರನ್ನೂ ಸಹಿತ ಆಮದು ಮಾಡಿಕೊಳ್ಳಬೇಕಾದ ಮಟ್ಟಿಗೆ ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಮಧ್ಯದಲ್ಲೇ ಮಲೇಷ್ಯಾ ಮತ್ತು ಸಿಂಗಾಪುರ ದೇಶಗಳು ಹುಟ್ಟಿಕೊಂಡವು. ಸೇನೆಯೇ ಮುಂತಾಗಿ ಯಾವ ಸಾಮರ್ಥ್ಯವೂ ಇಲ್ಲದೆಯೆ ಹುಟ್ಟಿದ ಮೊದಲ ರಾಷ್ಟ್ರ ಸಿಂಗಾಪುರ.

೬ ವಾರಗಳ ಕಾಲ ಅಙ್ಜಾತವಾಸದಲ್ಲಿದ್ದ ಲೀರನ್ನು ಬ್ರಿಟಿಷ ಪ್ರಧಾನಿ ಹಾರೋಲ್ಡ್ ಮ್ಯಾಕ್ಮಿಲನ್ ರ ಆತಂಕದ ಕರೆಮಾಡಿ ಸಂಪರ್ಕಿಸಿದರು. ಕರೆಗೆ ಓಗೊಟ್ಟು ಲೀ, ಸಿಂಗಾಪುರದ ಜನತೆ ತಮ್ಮ ಕ್ಷೇಮ ನೋಡಿಕೊಳ್ಳಲು ಸಮರ್ಥರು ಎಂದು ಉತ್ತರಿಸಿ, ದೇಶ ಕಟ್ಟುವ ಕೆಲಸಕ್ಕೆ ಮುಂದಾದರು. ಧಾರ್ಮಿಕ ಮತ್ತು ಜನಾಂಗಗಳ ಮಧ್ಯೆ ಒಮ್ಮತ ಮೂಡಿಸುವುದು ಲೀರ ಮೊದಲ ಆದ್ಯತೆಯಾಗಿತ್ತು. ಚೀನೀ, ತಮಿಳು ಮತ್ತು ಮಲಯ್ ಜನಾಂಗಗಳು ಒಂದಾಗಿ ಬೆರೆಯಲು ಇದು ಸಹಕಾರಿಯಾಯಿತು. ೧೮ ದಾಟಿದ ಎಲ್ಲಾ ಯುವಕರಿಗೂ ಕಡ್ಡಾಯ ಸೇನಾ ತರಬೇತಿ ಮತ್ತು ಸೇನಾ ಸೇವೆಯನ್ನು ವಿಧಿಸಿದರು. ಸಿಂಗಾಪುರದ ಸೇನೆಗೆ ತೈವಾನ್ ನೊಂದಿಗೆ ಸೇನಾ ತರಬೇತಿ ಪಡೆಯಲು ಒಪ್ಪಂದ ಮಾಡಿಕೊಂಡರು.

ಆರ್ಥಿಕ ಸುಧಾರಣೆ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಲೀ, ನಿರಂತರ ತರಬೇತಿ ಮತ್ತು ಉದಾರವಾದಿ ಕಾರ್ಮಿಕ ಕಾನೂನುಗಳನ್ನು ಸರ್ಕಾರದ ಮುಖ್ಯ ನಿಯಮಗಳನ್ನಾಗಿಸಿದರು. ಒಂದೇ ಬಗೆಯ ಕೆಲಸಕ್ಕೆ ಸೀಮಿತವಾಗದೆಯೇ, ಎಲ್ಲಾ ಬಗೆಯ ಕೆಲಸಕ್ಕೆ ಒಗ್ಗಬಲ್ಲ ಮನೋಭಾವವನ್ನು ನಾಗರೀಕರಲ್ಲಿ ತುಂಬಿದರು. ಉತ್ಪಾದನಾ ವಲಯದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮುಕ್ತ ಮಾರುಕಟ್ಟ್ತೆಯ ನಿಮಯಗಳು ಸಹಕಾರಿ ಎಂಬುದನ್ನು ಕಂಡುಕೊಂಡ ಲೀ, ವಿದೇಶೀ ಬಂಡವಾಳ ಹೂಡಿಕೆಗೆ ಸಿಂಗಾಪುರವನ್ನು ತೆರೆದಿಟ್ಟರು. ಬಹುರಾಷ್ಟ್ರೀಯ ಕಂಪನಿಗಳ ಸ್ಪರ್ಧಾತ್ಮಕ ನಿಮಯಗಳನ್ನು ಸರ್ಕಾರದ ಮಟ್ಟದಲ್ಲಿ ಕೂಡಾ ಅಳವಡಿಸಿಕೊಂಡರು. ಸ್ಪರ್ಧಾತ್ಮಕ ಮನೋಭಾವ, ಸುಶಿಕ್ಷಿತ ಕಾರ್ಮಿಕ ವರ್ಗ, ಸಾಮಾಜಿಕ ವಿಪ್ಲವಗಳು ಇಲ್ಲದ ಕಾನೂನು ವ್ಯವಸ್ಥೆ ಇವೇ ಮುಂತಾದ ಕಾರಣಗಳ ಪರಿಣಾಮವಾಗಿ ಅಮೇರಿಕಾ ಮೂಲದ ತಂತ್ರಞ್ಗಾನ ಕಂಪನಿಗಳು, ಯೂರೋಪ್ ಮೂಲದ ಬ್ಯಾಂಕುಗಳು, ಉಕ್ಕು ಫ಼ೌಂಡ್ರಿಗಳು, ಮಿಲ್ ಗಳು ಇವೇ ಮುಂತಾಗಿ ಜಗತ್ತಿನ ಎಲ್ಲೆಡೆಯ ಕಂಪನಿಗಳು ಸಿಂಗಾಪುರದೆಡೆ ಹೆಜ್ಜೆ ಹಾಕಲು ಮುಂದಾದವು. ಅಮೇರಿಕದ ಡಾಲರ್ ನೊಂದಿಗೆ ಸಿಂಗಾಪುರದ ಡಾಲರ್ ಅನ್ನು ಪೇರಿಸಿ ಮುಕ್ತ ವಿನಿಮಯ ವ್ಯವಸ್ಥೆಯನ್ನು ಲೀ ಪ್ರೇರೇಪಿಸಿದರು.

೧೯೭೪ರಿಂದ ಸಮುದ್ರದ ನೀರನ್ನು ಮರುಬಳಕೆ ಮಾಡುವ ತಂತ್ರಞ್ಗಾನಕ್ಕೆ ಹೆಚ್ಚು ಒತ್ತು ನೀಡಿದರು. ಇದರಿಂದ ಮಲೇಷಿಯಾದಿಂದ ನೀರು ಆಮದು ಮಾಡುವ ಅವಲಂಬನೆ ಕಡಿಮೆಯಾಯಿತು. ಹಸಿರು ಸಿಂಗಾಪುರ ಯೋಜನೆಯಿಂದ ಹೆಚ್ಚು ಹೆಚ್ಚು ಮರಗಳನ್ನು ನೆಡುವ ಕಾರ್ಯಕ್ರಮಕೈಗೊಂಡರು. ಮಲೇಷಿಯಾದ ಪ್ರಧಾನಿಯಾಗಿದ್ದ ಮಹಾತೀರ್ ಮೊಹಮದ್ ರೊಂದಿಗೆ ಸೌಹಾರ್ದ ಸಂಬಂಧ ಹೊಂದಿದರು. ಜೊಹೊರ್ ನದಿಗೆ ಆಣೆಕಟ್ಟೂ ಕಟ್ಟಲು ಇದು ಸಹಕಾರಿಯಾಯಿತು.

ಸಾಮಾಜಿಕ ಬದಲಾವಣೆ[ಬದಲಾಯಿಸಿ]

ಭ್ರಷ್ಟತೆಯನ್ನು ಕೊನೆಗಾಣಿಸಲು ಭ್ರಷ್ಟ ಅಭ್ಯಾಸಗಳ ವಿಚಾರಣಾ ಸಂಸ್ಥೆ(CPIB)ಯ ಮೂಲಕ ಆರ್ಥಿಕ ಅಪರಾಧಗಳ ಶಿಕ್ಷೆಗೆ ಲೀ ಮೊದಲ ಆದ್ಯತೆ ನೀಡಿದರು. ಉನ್ನತ ಅಧಿಕಾರಿವರ್ಗಕ್ಕೆ ಹೆಚ್ಚು ಸಂಬಳ-ಅಧಿಕಾರ ನೀಡುವ ಮೂಲಕ ಭ್ರಷ್ಟತೆಯನ್ನು ಕಡಿಮೆ ಮಾಡಬಹುದು ಎಂಬುದು ಲೀರ ನಂಬಿಕೆಯಾಗಿತ್ತು. ಇಬ್ಬರು ಮಕ್ಕಳು ಮಾತ್ರ ಎಂಬ ಜನಸಂಖ್ಯಾ ಸ್ಫೋಟ ತಡೆವ ನಿಯಮ ಜಾರಿಗೊಳಿಸಿದರು. ಮಹಿಳಾ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದು ಲೀರ ಹೆಗ್ಗಳಿಕೆ.

ಸ್ವಚ್ಚ್ಹತೆಯೇ ಮುಂತಾದ ಸಾಮಾಜಿಕ ತಪ್ಪುಗಳಿಗೆ ಛಡಿ ಏಟು ನೀಡುವ ಶಿಕ್ಷೆ ಜಾರಿಗೆ ತಂದರು. ASEAN ಸಂಘಟನೆಯಲ್ಲಿ ಸಿಂಗಾಪುರವನ್ನು ಇಂಡೋನೇಷಿಯಾದ ಸಹಕಾರದಿಂದ ಸೇರಿಸಿದರು.

ಸತತವಾಗಿ ೭ ಚುನಾವನೆಗಳಲ್ಲಿ ಗೆದ್ದ ನಂತರ, ೧೯೯೦ರಲ್ಲಿ ಗೊಹ್ ಚೊಕ್ ಟಾಂಗ್ ರಿಗೆ ಅಧಿಕಾರ ಹಸ್ತಾಂತರಿಸಿದರು.

೧೯೯೦ರಿಂದ ೨೦೧೧ರವರೆಗೆ ಸಿಂಗಾಪುರ ಸರ್ಕಾರಕ್ಕ್ಕೆ ಮಂತ್ರಸಲಹೆಗಾರರಾಗಿದ್ದ ಲೀ, ೨೦೧೫ರ ಮಾರ್ಚ್ ೧೫ರಂದು ನಿಧನರಾದರು.

ಬಾಲ್ಯದಲ್ಲಿ ಚೀನೀ ಆಚರಣೆಗಳಲ್ಲಿ ನಂಬಿಕೆಯಿದ್ದ ಲೀ, ವೈಯಕ್ತಿಕವಾಗಿ ನಿರೀಶ್ವರವಾದಿಯಾಗಿದ್ದರು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಸಂದರ್ಶನಗಳು[ಬದಲಾಯಿಸಿ]