ಲೀಲಾವತಿ ಬೈಪಡಿತ್ತಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೀಲಾವತಿ ಬೈಪಡಿತ್ತಾಯ ಅವರು ಯಕ್ಷಗಾನ ರಂಗದ ಮೊದಲ ಮಹಿಳಾ ವೃತ್ತಿಪರ ಭಾಗವತರು. ಇವರು ಕೇರಳ ರಾಜ್ಯದ ಕಾಸರಗೋಡಿನ ಮಧೂರಿನಲ್ಲಿ ೧೯೪೭ನೇ ಮೇ ೨೩ರಂದು ಜನಿಸಿದರು. ಇವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ.[೧]

ಆರಂಭಿಕ ಜೀವನ[ಬದಲಾಯಿಸಿ]

ಲೀಲಾವತಿ ಅವರು ಹುಟ್ಟಿ ಬೆಳೆದದ್ದು ಕೇರಳದ ಕಾಸರಗೋಡಿನ ಮುಳ್ಳೇರಿಯ ಸಮೀಪದ ಹಳ್ಳಿಯಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರಮಾವ ರಾಮಕೃಷ್ಣ ಭಟ್ ಮಧೂರು ದೇವಾಲಯದಲ್ಲಿ ದೇವನೃತ್ಯ ಕಲಾವಿದರು. ಬಡತನದಿಂದಾಗಿ ವಿದ್ಯಾಭ್ಯಾಸ ಪಡೆಯಲು ಲೀಲಾ ಅವರಿಗೆ ಸಾಧ್ಯವಾಗಲಿಲ್ಲ. ಮಧುರವಾಗಿ ಹಾಡುತ್ತಿದ್ದ ಅವರು ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತರು. ಅವರಿಗೆ ೨೩ ವರ್ಷವಿರುವಾಗ ತೆಂಕುತಿಟ್ಟಿನ ಚೆಂಡೆ-ಮದ್ದಳೆಯ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯರನ್ನು ಮದುವೆಯಾಗಿ ಸುಳ್ಯದ ಕಡಬಕ್ಕೆ ಹೋದರು. ಅವರ ಮಕ್ಕಳು ಅವಿನಾಶ್ ಹಾಗೂ ಗುರುಪ್ರಸಾದ್.[೨]

ಯಕ್ಷಗಾನ ಕ್ಷೇತ್ರ[ಬದಲಾಯಿಸಿ]

ಲೀಲಾವತಿ ಅವರ ಶಾಸ್ತ್ರೀಯ ಸಂಗೀತ ಗಾಯನ ಪ್ರತಿಭೆಯನ್ನು ಅರಿತ ಪತಿ ಹರಿನಾರಾಯಣರಿಗೆ ಯಕ್ಷಗಾನ ಹಾಡುಗಾರಿಕೆ ನಡೆಸಬಾರದೇಕೆ ಎಂದು ಅನಿಸಿತು. ಪತಿಯ ಮಾತು ಕೇಳಿ ಲೀಲಾ ಪ್ರಸಂಗವೊಂದರ ಕೃತಿ ಕೈಗೆತ್ತಿಕೊಂಡು ಹಾಡುಗಾರಿಕೆಯ ಭಾಗ ತೆರೆದು ಅಭ್ಯಾಸ ಮಾಡಿದರು. ಆರಂಭದಲ್ಲಿ ಅವರು ಕಡಬದ ಸುತ್ತಲಿನ ಶಾಲಾ ವಾರ್ಷಿಕೋತ್ಸವ, ಮದುವೆ, ಉಪನಯನ, ಇತರ ಸಮಾರಂಭಗಳಲ್ಲಿ ಆಯೋಜಿಸುವ ತಾಳಮದ್ದಲೆಯ ಪ್ರಸಂಗಗಳಲ್ಲಿ ಹಾಡುಗಾರಿಕೆ ನಡೆಸಿಕೊಟ್ಟರು.‘ಸೆಟ್ ಮೇಳ’ಗಳ ಪ್ರಸಂಗದಲ್ಲಿಯೂ ಹಾಡುಗಾರಿಕೆ ನಡೆಸಿದ್ದಾರೆ. ಬೆಳ್ತಂಗಡಿಯಲ್ಲಿ ಅರುವ ನಾರಾಯಣ ಶೆಟ್ಟಿ ‘ಆಳದಂಗಡಿ ಮೇಳ’ ಕಟ್ಟಿದ್ದರು. ಆ ಮೇಳದಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯರು ಚೆಂಡೆ-ತಾಳಮದ್ದಲೆ ನಿರ್ವಹಿಸುತ್ತಿದ್ದರು. ಲೀಲಾವತಿಯವರು ಭಾಗವತಿಕೆ ಮಾಡುತ್ತಿದ್ದರು. ಹಲವು ಯಕ್ಷಗಾನ ಕಲಾವಿದರ ಒಡನಾಟ ಲೀಲಾ ಅವರಿಗೆ ದೊರೆಯಿತು. ಕಾಳಿಂಗ ನಾವುಡ, ಎಂ.ಎಲ್. ಸಾಮಗ, ಪಾತಾಳ ವೆಂಕಟರಮಣ ಭಟ್, ಈಶ್ವರ ಭಟ್, ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಬಣ್ಣದ ಮಾಲಿಂಗ, ಪ್ರಭಾಕರ ಜೋಷಿ, ಬಲಿಪ ನಾರಾಯಣ ಭಾಗವತರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಇತರ ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರ ಒಡನಾಟ ಲೀಲಾ ಅವರ ಕಲಾಸೇವೆಗೆ ಸಹಕಾರವಾಯಿತು.[೩]

ಮೇಳಗಳು ಮತ್ತು ಪ್ರಸಂಗಗಳು[ಬದಲಾಯಿಸಿ]

ಲೀಲಾವತಿ ಅವರು ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿ ಭಾಗವತಿಕೆ ನಡೆಸಿದರು. ಪರಕೆದ ಪಿಂಗಾರ, ದೇವಿಮಹಾತ್ಮೆ, ದಕ್ಷಯಜ್ಞ, ಕರ್ಣಪರ್ವ, ಸುಧನ್ವ ಮೋಕ್ಷ, ವಜ್ರಕೋಗಿಲೆ ಮುಂತಾದ ಪ್ರಸಂಗಗಳಲ್ಲಿ ಇವರು ಹಾಡಿದ ಪದ್ಯಗಳು ಪ್ರಸಿದ್ಧವಾಗಿವೆ. ಆಳದಂಗಡಿ ಮೇಳದಲ್ಲಿ ಲೀಲಾ ಅವರು ಪ್ರಧಾನ ಭಾಗವತರು. ತೆಂಕು, ಬಡಗು ಶೈಲಿಗೆ ಮತ್ತು ಕನ್ನಡ, ತುಳು ಪ್ರಸಂಗಗಳಿಗೆ ಅವರು ಹಾಡುಗಾರಿಕೆ ನಿರ್ವಹಿಸುತ್ತಾರೆ.

ಪ್ರಶಸ್ತಿಗಳು[ಬದಲಾಯಿಸಿ]

  1. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೨೦೧೦)
  2. ಆಳ್ವಾಸ್ ನುಡಿಸಿರಿ ಪ್ರಶಸ್ತಿ
  3. ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ[೪]
  4. ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ ಹಾಗೂ ಪುರಸ್ಕಾರಗಳು

ಉಲ್ಲೇಖಗಳು[ಬದಲಾಯಿಸಿ]

  1. "ಸಂಸ್ಕೃತಿ ಸಲ್ಲಾಪ".
  2. http://bayalata.com/?1~22
  3. "ಆರ್ಕೈವ್ ನಕಲು". Archived from the original on 2019-07-04. Retrieved 2019-03-20.
  4. https://kannada.oneindia.com/literature/articles/2002/2612abbakka.html