ವಿಷಯಕ್ಕೆ ಹೋಗು

ಲೀಚ್ ಥೆರಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೇವವಿರುವ ತಾಣಗಳಿಗೆ ಹೋದಾಗ ತಮಗೆ ಅರಿವಾಗದಂತೆಯೇ ಜಿಗಣೆ(ಜಲೌಕ)ಗಳು ಅಂಟಿಕೊಂಡು ರಕ್ತ ಹೀರಿದರೂ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಕಾರಣ ಇದರ ವೇದನಾರಹಿತವಾಗಿ ರಕ್ತ ಹೀರುವ ಪ್ರವೃತ್ತಿ. ಈ ಜಲೌಕಾಗಳ ಲಾಲಾಸ್ರಾವದಲ್ಲಿರುವ ವಿಶಿಷ್ಟ ದ್ರವಗಳಿಂದ ಆ ಸ್ಥಾನದಲ್ಲಿ ತಡವಾಗಿ ರಕ್ತ ಹೆಪ್ಪುಗಟ್ಟುವುದು, ಕಚ್ಚಿದ ಸ್ಥಳದಲ್ಲಿ ಸಂಜ್ಞಾಹರಣ ನೀಡಿದಂತಾಗಿ ಕಚ್ಚಿದ್ದೂ ತಿಳಿಯಲಾರದು ಮತ್ತು ಇದು ಯಾಂತ್ರಿಕವಾಗಿರದೇ ರಕ್ತ ಹೀರುವ ಸ್ವಾಭಾವಿಕ ಪ್ರವೃತ್ತಿ ಹೊಂದಿರುವುದರಿಂದಲೇ ಇದನ್ನು ಎಲ್ಲ ರಕ್ತಮೋಕ್ಷಣ ವಿಧಗಳಲ್ಲೂ ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಶಸ್ತ್ರಕ್ರಿಯೆಗೆ ಹೆದರುವವರು ನಿರಾತಂಕವಾಗಿ ಬಳಸಬಹುದು. ಪಂಚಕರ್ಮ ಚಿಕಿತ್ಸೆಗಳಾದ ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣಗಳಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಯಾವುದೇ ವ್ಯಾಧಿಗೆ ಅಭ್ಯಂತರ ಔಷಧಿ ಪ್ರಯೋಗಿಸುವ ಮೊದಲು ಶರೀರದ ದೂಷಿತ ದೋಷಗಳನ್ನು ಹೊರಹಾಕಿ ಶರೀರ ಶುದ್ಧವಾದ ನಂತರವಷ್ಟೇ ಇತರೆ ಶಮನೌಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಈ ಶರೀರ ಶೋಧನಾ ಕ್ರಿಯೆಗಳೇ ಈ ಪಂಚಕರ್ಮಗಳು. ಸುಶ್ರುತ ಶಲ್ಯ ತಂತ್ರದಲ್ಲಿ ರಕ್ತಮೋಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾನೆ. ರಕ್ತಮೋಕ್ಷಣ ಎಂದರೆ ಶರೀರದಿಂದ ದೂಷಿತ ರಕ್ತವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊರಹಾಕುವುದು. ಇದರಲ್ಲಿ ಅನೇಕ ವಿಧಗಳುಂಟು. ಅವುಗಳಲ್ಲಿ ಜಲೌಕಾಗಳಿಂದ ರಕ್ತಮೋಕ್ಷಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅಸಾಧ್ಯವಾದ ಚರ್ಮವ್ಯಾಧಿಗಳ ಪ್ಲಾಸ್ಟಿಕ್ ಸರ್ಜರಿಯಲ್ಲಿ ಇವನ್ನು ಬಳಸುತ್ತಾರೆ.