ಲಾರ್ಡ್ ಡಫರಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾರ್ಡ್ ಡಫರಿನ್ (1826-1902. ಬ್ರಿಟಿಷ್ ಆಡಳಿತಗಾರ, ಭಾರತದ ವೈಸ್‍ರಾಯ್ ಮತ್ತು ಗವರ್ನರ್-ಜನರಲ್ (1884-88).

ಆರಂಭಿಕ ಜೀವನ[ಬದಲಾಯಿಸಿ]

ಜನನ ಫ್ಲಾರನ್ಸ್‍ನಲ್ಲಿ. ತಂದೆ ಪ್ರೈಸ್‍ಬ್ಲ್ಯಾಕ್‍ವೂಡ್. ಇವನಿಗೆ 15 ವರ್ಷ ಆಗಿದ್ದಾಗ ತಂದೆ ತೀರಿಕೊಂಡ. ಈತ ತಾಯಿಯಾದ ಹೆಲೆನಳ ಪೋಷಣೆಯಲ್ಲಿ ಬೆಳೆದ; ಆಕೆಯಿಂದ ಪ್ರಭಾವಿತನಾದ. ಈತನ ವಿದ್ಯಾಭ್ಯಾಸ ಈಟನ್ ಮತ್ತು ಆಕ್ಸ್‍ಫರ್ಡಿನ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲಿ. ಈತ 1862ರಲ್ಲಿ ಹ್ಯಾರಿಯಟ್ ರೋಮ್ ಹ್ಯಾಮಿಲ್ಟನಳನ್ನು ಮದುವೆಯಾದ. 1864-66ರಲ್ಲಿ ಬ್ರಟಿನ್ನಿನ ಉಪಕಾರ್ಯದರ್ಶಿಯಾಗಿದ್ದು ಕ್ರಮೇಣ ಮೇಲಕ್ಕೇರಿದ ಈತ 1871ರಲ್ಲಿ ಡಫರಿನ್‍ನ ಅರ್ಲ್ ಆದ. ಮುಂಚೆ ಈತನ ಹೆಸರು ಫ್ರೆಡರಿಕ್ ಟೆಂಪಲ್ ಹ್ಯಾಮಿಲ್ಟನ್ ಟೆಂಪಲ್ ಬ್ಲ್ಯಾಕ್‍ವೂಡ್ ಎಂದಿತ್ತು.

1872-1878ರಲ್ಲಿ ಈತ ಕೆನಡದ ಗವರ್ನರ್-ಜನರಲ್ ಆಗಿದ್ದ. ಈತನದು ಗಂಭೀರ ವ್ಯಕ್ತಿತ್ವ. ಇವನ ಒಳ್ಳೆಯ ವಾಗ್ಮಿ. ಹೊಣೆಗಾರಿಕೆಯನ್ನು ನಿರ್ವಹಿಸುವುದರಲ್ಲಿ ಹಿಂದೆಗೆಯುತ್ತಿರಲಿಲ್ಲ. ಆದ್ದರಿಂದ ಒಳ್ಳೆಯ ಹೆಸರು ಗಳಿಸಿದ. ಕೆನಡವನ್ನು ಏಕೀಕರಿಸಲು ಬಹಳ ಶ್ರಮಿಸಿ ಯಶಸ್ವಿಯಾದ. ಅನಂತರ ಎರಡು ವರ್ಷ ಈತ ರಷ್ಯದಲ್ಲಿ ರಾಯಭಾರಿಯಾಗಿದ್ದ. ಆಮೇಲೆ ಈಜಿಪ್ಟಿನ ವ್ಯವಹಾರಗಳಲ್ಲಿ ಬ್ರಿಟನ್ನಿನ ಪರವಾಗಿ ಪ್ರವೇಶಿಸಿ ಬಹಳಮಟ್ಟಿಗೆ ಬ್ರಿಟನ್ನಿನ ಹಿತಗಳನ್ನು ರಕ್ಷಿಸಿ ಬೆಳೆಸಿದ. ಇವನ ರಾಯಭಾರಕೌಶಲದಿಂದಾಗಿ ಸೂಯೆಜ್ ಮತ್ತು ಕೈರೋದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಕಾಲೂರಲು ನೆಲೆ ದೊರಕಿತು.

ಭಾರತದಲ್ಲಿ ವೈಸ್‍ರಾಯ್ ಮತ್ತು ಗವರ್ನರ್-ಜನರಲ್ ಆಗಿ[ಬದಲಾಯಿಸಿ]

1884ರಲ್ಲಿ ಲಾರ್ಡ್ ರಿಪನನ ಅನಂತರ ಭಾರತದ ವೈಸ್‍ರಾಯಿಯಾಗಿ ನೇಮಕಗೊಂಡ. ಈತ ನಾಲ್ಕು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದ. ಇವನ ಆಡಳಿತಕಾಲ ಸಾಮಾನ್ಯವಾಗಿ ಶಾಂತಿಯುತವಾಗಿತ್ತು. ಇವನು ಭಾರತೀಯರೊಂದಿಗೂ ಭಾರತದಲ್ಲಿದ್ದ ಇಂಗ್ಲಿಷರೊಂದಿಗೂ ಏಕರೀತಿಯಾಗಿ ಸ್ನೆಹದಿಂದ ಇರಲು ಯತ್ನಿಸಿದ. 1885-86ರಲ್ಲಿ ಬರ್ಮ ಯುದ್ಧ ನಡೆಯಿತು. ಮೇಲಣ ಬರ್ಮ ಬ್ರಿಟಿಷ್ ಭಾರತ ಸಾಮ್ರಾಜ್ಯಕ್ಕೆ ಸೇರಿತು. ರಷ್ಯ-ಆಫ್ಘನ್ ಗಡಿಯಲ್ಲಿದ್ದ ಪಂಚ್‍ದೆಯನ್ನು ರಷ್ಯನರು ಆಕ್ರಮಿಸಿಕೊಂಡಾಗ ರಷ್ಯದೊಂದಿಗೆ ಯುದ್ಧ ಸಂಭವಿಸಬಹುದಿತ್ತು. ಆದರೆ ಅದು ಹೇಗೋ ನಿವಾರಿಸಲ್ಪಟ್ಟಿತು. ರಷ್ಯ ಮತ್ತು ಆಫ್ಘಾನಿಸ್ತಾನಗಳೊಡನೆ ಸಂಬಂಧ ಉತ್ತಮಪಡಿಸಲು ಇವನು ಯತ್ನಿಸಿದ. ರೈತರಿಗೆ ಹೆಚ್ಚು ಭದ್ರತೆ ನೀಡುವ ಮತ್ತು ನೆಲದೊಡೆಯರು ಗೇಣಿದಾರರನ್ನು ಉಚ್ಚಾಟಿಸುವುದನ್ನು ತಡೆಯುವ ಉದ್ದೇಶದ ಬಂಗಾಲ ಗೇಣಿದಾರಿಕೆ ಅಧಿನಿಯಮ ಜಾರಿಗೆ ಬಂದದ್ದು ಈತನ ಆಡಳಿತದ ಕಾಲದಲ್ಲಿ. ಇದೇ ಬಗೆಯ ಅಧಿನಿಯಮಗಳು ಔಧ್ ಮತ್ತು ಪಂಜಾಬಿನಲ್ಲೂ ಜಾರಿಗೆ ಬಂದುವು. ಭಾರತದ ಸಿವಿಲ್ ಸರ್ವಿಸ್ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ಮತ್ತು ಅವುಗಳ ಅಭ್ಯರ್ಥಿಗಳಿಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ಮತ್ತು ಅವುಗಳ ಅಭ್ಯರ್ಥಿಗಳಿಗೆ ಭಾರತದಲ್ಲಿ ಸ್ಪರ್ಧಾ ಪರೀಕ್ಷೆಗಳನ್ನು ನಡೆಸುವುದನ್ನು ಕುರಿತ ಸಮಸ್ಯೆಯನ್ನು ಪರಿಶೀಲಿಸಲು ಲಾರ್ಡ್ ಡಫರಿನ್ 1886ರಲ್ಲಿ ಒಂದು ಲೋಕಸೇವೆಗಳ ಆಯೋಗವನ್ನು ನೇಮಿಸಿದ. ಇದರ ಶಿಫಾರಸುಗಳಂತೆ ಹಲವು ಸುಧಾರಣೆಗಳಾದವು.

ಡಫರಿನನ ಆಡಳಿತದ ಕಾಲದ ಎಲ್ಲಕ್ಕೂ ಮಹತ್ವದ ಘಟನೆಯೆಂದರೆ ಭಾರತ ರಾಷ್ಟ್ರೀಯ ಕಾಂಗ್ರೆಸ್ 1885ರಲ್ಲಿ ಮುಂಬಯಿಯಲ್ಲಿ ಪ್ರಥಮ ಅಧಿವೇಶನ ನಡೆಸಿದ್ದು. ಮುಂದೆ ರಾಜಕೀಯದಲ್ಲಿ ಪ್ರಾಮುಖ್ಯ ಪಡೆದ ಈ ಸಂಸ್ಥೆಯ ಪ್ರಥಮ ಅಧಿವೇಶನದಲ್ಲಿ ಡಫರಿನನ ಸರ್ಕಾರದ ಪ್ರತಿನಿಧಿಗಳು ಪಾಲುಗೊಂಡಿದ್ದರು. ಈ ಅಧಿವೇಶನಕ್ಕೆ ಬಂದಿದ್ದ ಪ್ರತಿನಿಧಿಗಳಿಗಾಗಿ ಡಫರಿನ್ ಒಂದು ಸಂತೋಷಕೂಟವನ್ನೂ ಏರ್ಪಡಿಸಿದ್ದ. ಆದರೆ ಮುಂದಿನ ಎರಡು ವರ್ಷಗಳಲ್ಲಿ ಡಫರಿನನ ಧೋರಣೆ ಬದಲಾಯಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಚಟುವಟಿಕೆಗಳು ಇವನಿಗೆ ಒಪ್ಪಿಗೆಯಾಗಲಿಲ್ಲ. ಇವನು ಈ ಬಗ್ಗೆ ತನ್ನ ಅಸಂತುಷ್ಟಿಯನ್ನು ವ್ಯಕ್ತಪಡಿಸಿದ. ಇವನ ಇಂಗಿತವನ್ನು ಅರಿತ ಅಧಿಕಾರಿಗಳು ಕ್ರಮೇಣ ಅದರಿಂದ ದೂರ ಸರಿದರು. ಅದರ ಬಗ್ಗೆ ಸರ್ಕಾರ ತನ್ನ ಧೋರಣೆಯನ್ನು ಬದಲಾಯಿಸಿತು. ಬರ್ಮವನ್ನು ಸೇರಿಸಿಕೊಂಡು. ಬ್ರಿಟಿಷ್ ಆಡಳಿತದ ಪ್ರದೇಶಗಳನ್ನು ಒಂದುಗೂಡಿಸುವುದಕ್ಕಾಗಿ ಲಾರ್ಡ್ ಡಫರಿನ್ ಸಲ್ಲಿಸಿದ ಸೇವೆಗಾಗಿ ಇವನಿಗೆ ಡಫರಿನ್ ಮತ್ತು ಆವಾದ ಮಾಕ್ರ್ವಿಸ್ ಎಂಬ ಗೌರವ ಸಂದಿತು (1888). ಆಗ ಇವನು ಭಾರತದಲ್ಲಿ ಗವರ್ನರ್-ಜನರಲ್ ಹುದ್ದೆಯಿಂದ ನಿವೃತ್ತನಾದ.

ನಂತರದ ಬದುಕು[ಬದಲಾಯಿಸಿ]

1889-91ರಲ್ಲಿ ಈತ ರೋಮಿನಲ್ಲೂ ಅನಂತರ ನಾಲ್ಕು ವರ್ಷ ಪ್ಯಾರಿಸಿನಲ್ಲೂ ರಾಯಭಾರಿಯಾಗಿದ್ದ. 1896ರಲ್ಲಿ ನಿವೃತ್ತಿ ಹೊಂದಿ ಅಲ್ಸ್ಟರಿನಲ್ಲಿ ತನ್ನ ನಿವಾಸಕ್ಕೆ ಹಿಂದಿರುಗಿದ. 1902ರಲ್ಲಿ ಈತ ತೀರಿಕೊಂಡ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: