ಲಲಿತ ಪ್ರಬಂಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಲಲಿತ ಪ್ರಬಂಧಗಳು ಅಥವಾ ಲಘು ಪ್ರಬಂಧಗಳು[ಬದಲಾಯಿಸಿ]


  • ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದು ಕರೆಯಬಹುದು. ಶ್ರೀ ನಾಡಿಗೇರ ಕೃಷ್ಣ್ರಾಯ , ಶ್ರೀ ನಾ. ಕಸ್ತೂರಿ ಮೊದಲಾದವರು ಈ ಬಗೆಯ ಪ್ರಬಂಧಕ್ಕೆ ಹೆಸರಾದವರು. ಹಿಂದೆ ಇದ್ದ ಕೊರವಂಜಿ ಹಾಸ್ಯ ಪತ್ರಿಕೆ ಹಾಸ್ಯ ಪ್ರಬಂಧಕ್ಕೆ ಹೆಸರಾಗಿತ್ತು. ಈ ಬಗೆಯೆ ಪ್ರಬಂಧಕ್ಕೆ ಉದಾಹರಣೆಯಾಗಿ ಕೆಳಗಡೆ ಒಂದೆರಡು ಲಘು ಹಾಸ್ಯ ಪ್ರಬಂಧಗಳನ್ನು ಕೊಟ್ಟಿದೆ.

ಲಲಿತ ಪ್ರಬಂಧದ ಲಕ್ಷಣಗಳು[ಬದಲಾಯಿಸಿ]

  • ಲಲಿತ ಪ್ರಬಂಧಗಳ ಲಕ್ಷಣಗಳನ್ನು ವಿವರಿಸುವುದು ಕಷ್ಟ. ಅದಕ್ಕಾಗಿ ಇಲ್ಲಿ ಲಲಿತ ಪ್ರಬಂಧಗಳ ಬಗೆಗೆ ವಿಮರ್ಶಕರ ಅಬಿಪ್ರಾಯ ಮತ್ತು ತೀರ್ಪುಗಾರರ ಟಿಪ್ಪಣಿಗಳನ್ನು ಕೊಟ್ಟಿದೆ ಅದರಿಂದ ಲಲಿತಪ್ರಬಂಧದ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದು. (ಪ್ರಜಾವಾಣಿ ಸ್ಪರ್ಧೆಯ ತೀರ್ಪುಗಾರರ ಹೇಳಿಕೆ)
  • ‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ ಭಾವಲೋಕವನ್ನು ಅನಾವರಣಗೊಳಿಸಿ’ ಎಂದು ‘ಭೂಮಿಕಾ’ ನೀಡಿದ ಲಲಿತ ಪ್ರಬಂಧ ಸ್ಪರ್ಧೆಗೆ 673 ಮಹಿಳೆಯರು ಸ್ಪಂದಿಸಿದರು ಎಂಬುದು ಇಂದಿನ ಕಾಲಮಾನದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ. ಈ ಎಲ್ಲ ಲೇಖಕಿಯರಿಗೆ ನಮ್ಮ ಅಭಿನಂದನೆಗಳು. ಇಷ್ಟೊಂದು ಮನಸುಗಳಿಗೆ ತಮ್ಮ ಭಾವನೆಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದ್ದು ಹಾಗೂ ಇದಕ್ಕಾಗಿ ಬರವಣಿಗೆಯ ಮಾರ್ಗವನ್ನು ನೆಚ್ಚಿಕೊಂಡಿದ್ದು ನಿಜಕ್ಕೂ ಕುತೂಹಲಕಾರಿ ಅಂಶ.
  • ಇವರಲ್ಲಿ ಬಹುತೇಕ ಮಹಿಳೆಯರು ಇದೇ ಮೊದಲ ಬಾರಿಗೆ ಬರಹದ ಲೋಕಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಅನ್ನಿಸುತ್ತದೆ. ಅದು ಬರವಣಿಗೆಯಲ್ಲಿಯೂ ಕಾಣುತ್ತದೆ. ನಮ್ಮನ್ನು ತಲುಪಿದ ಪ್ರಬಂಧಗಳ ಓರೆಕೋರೆಗಳು ಏನೇ ಇರಲಿ, ಬಹಳಷ್ಟು ಬರವಣಿಗೆಯಲ್ಲಿ ಒಂದು ಬಗೆಯ ತಾಜಾತನ ಇದ್ದುದನ್ನು ಒಪ್ಪಿಕೊಳ್ಳಲೇಬೇಕು.
  • ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಅದು ಹಗುರ ನಿರೂಪಣೆಯಿಂದ ಹರಟೆಯಾಗಿ ಬಿಡುವ, ಅಥವಾ ಸಂಕೀರ್ಣತೆಯಿಂದ ವೈಚಾರಿಕ ಪ್ರಬಂಧವಾಗುವ ಅಪಾಯದಿಂದ ಪಾರಾಗಬೇಕು. ಈಚಿನ ಎರಡು ಮೂರು ದಶಕಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಪ್ರಕಾರಗಳಲ್ಲಿ ಆದ ಬದಲಾವಣೆಗಳು ಲಲಿತ ಪ್ರಬಂಧ ಪ್ರಕಾರದಲ್ಲಿಯೂ ಆಗಿವೆ. ಕಥಾ ಪ್ರಬಂಧ, ಭಾವ ಪ್ರಬಂಧ, ಭಾವಗೀತಾತ್ಮಕ ಪ್ರಬಂಧ ಮುಂತಾಗಿ ಗುರುತಿಸಬಹುದಾದ ಪ್ರಬಂಧಗಳು ಕನ್ನಡದಲ್ಲಿ ಬಂದಿವೆ.
  • ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನಾವು ಓದಿದ ಪ್ರಬಂಧಗಳಲ್ಲಿಯೂ ಈ ಅಂಶಗಳು ಕ್ವಚಿತ್ತಾಗಿಯಾದರೂ ಇದ್ದವು.
  • ಇಲ್ಲಿಯ ಅನೇಕ ಬರಹಗಳು ಗಂಡು ಹೆಣ್ಣಿನ ಅಸಮ ನೆಲೆ, ದಾಂಪತ್ಯ, ಗೃಹಕೃತ್ಯ, ಸಮಯ ನಿರ್ವಹಣೆ ಮುಂತಾದ ವಸ್ತುಗಳನ್ನು ಒಳಗೊಂಡಿವೆ. ಕಲ್ಪನೆ ಅಥವಾ ಲಘಿಮಾ ಕೌಶಲಕ್ಕೆ ಇಲ್ಲಿ ಅವಕಾಶವೇ ಇಲ್ಲದಾಗಿದೆ. ನಾವು ಆಯ್ಕೆ ಮಾಡಿರುವ ಮೊದಲ ಮೂರು ಪ್ರಬಂಧಗಳಲ್ಲಿ, ‘ಅಲ್ಲಿ ಅವಳೇ ಇದ್ದಿದ್ದರೆ’ ಭಾವಗೀತಾತ್ಮಕವಾಗಿ ಆರಂಭವಾಗುತ್ತದೆ.
  • ‘ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ, ನೀಡುವಿಕೆಯ ಹಂಬಲದ ಅವನು, ಜ್ಞಾನದ ಹೊಸ್ತಿಲಲ್ಲಿ ನಿಂತು ರಾತೋರಾತ್ರಿ ಹೊರಟ’ ಸಿದ್ದಾರ್ಥನ ಪಕ್ಕದಲ್ಲಿಯೇ ಇದ್ದ ‘ಅವಳು’ ‘ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ ಇದ್ದು ತೋರಿಸುತ್ತಿದ್ದಳೇನೋ’ ಎಂಬ ಬೀಜಭಾವ ಹೊತ್ತ ಪ್ರಬಂಧ, ಸ್ವಗತದ ಧಾಟಿಯಲ್ಲಿದೆ. ಇದು ಮಧ್ಯದಲ್ಲಿ ಭಾವಲೋಕವನ್ನು ತೊರೆದು ಭಾಷಣದ ಮಟ್ಟಕ್ಕೆ ಇಳಿದುಬಿಡುತ್ತದೆ. ಆದರೂ ಇದೊಂದು ಅತ್ಯುತ್ತಮ ಪ್ರಯತ್ನ ಎಂಬ ಕಾರಣಕ್ಕಾಗಿ ಮೂರನೆಯ ಸ್ಥಾನ ಪಡೆದಿದೆ.
  • ಪ್ರಾಣಿ ದಯೆ, ಜೀವಪ್ರೀತಿ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಯುವತಿಯೊಬ್ಬಳ ಶ್ವಾನಪ್ರೀತಿ ಸ್ನೇಹ ಸಖ್ಯ ಮಮಕಾರ ಸಹಜ, ಲಲಿತಮಯ ನಿರೂಪಣೆಯೊಂದಿಗೆ ಕಥೆ ಹೇಳುವಂತೆ ಸಾಗುವ ‘ಕೈ ಮಗು’ ಒಂದು ವಿಶಿಷ್ಟ ಯತ್ನ. ಹೀಗಾಗಿ ಇದು ಎರಡನೆಯ ಬಹುಮಾನ ಪಡೆದಿದೆ. ಸಾಂಪ್ರದಾಯಿಕ ಲಲಿತಪ್ರಬಂಧದ ಶೈಲಿಯಲ್ಲಿಯೇ ಇರುವ ‘ಸಿರಿಗಂಧಮಯ ಈ ನನ ಹೃದಯ ಏತಕೆ...’ ಅತ್ಯಂತ ಲವಲವಿಕೆಯಿಂದ ಕೂಡಿದೆ.
  • ‘ಲಲಿತ ಅಂದ ಕೂಡ್ಲೆ.. ಬರೇ ಒಂದು ಪದ ನನಗ ಎಷ್ಟೆಲ್ಲ ನೆನಪುಗಳ ಮಳೀಗರೀಲಿಖತ್ತದ...’ ಎಂದು ಲಹರಿಯ ಬೆನ್ನೇರಿ ಲಲಿತಮಯವಾಗಿ ಬಿಚ್ಚಿಕೊಳ್ಳುತ್ತ ಮನಸಿಗೆ ಮುದ ನೀಡುತ್ತದೆ. ಆಡು ಮಾತಿನಲ್ಲಿ ಆಪ್ತವಾಗಿ ಎದುರು ಕೂರಿಸಿಕೊಂಡು ಆ – ಈ ಸುದ್ದಿ ಹೇಳುತ್ತ ತನ್ನ ನೆನಪಿನಂಗಳದಲ್ಲಿ ವಿಹರಿಸುವ ಮನದ ಭಿತ್ತಿ ಚಿತ್ರ ಈ ಪ್ರಬಂಧ. ಹರಡಿಕೊಳ್ಳುವ ಈ ಬರಹ ಮೊದಲ ಸ್ಥಾನದಲ್ಲಿದೆ. (ಮೂರು ಪ್ರಬಂಧಗಳನ್ನು ಉತ್ತಮವೆಂದು ಆಯ್ಕೆ ಮಾಡಿದ್ದಾರೆ.ಕೆಳಗೆ ಮೂರು ಪ್ರಬಂಧಗಳ ಯುಆರೆಲ್ ಕೊಟ್ಟದೆ)
  • (ಬಹಳ(ಅಷ್ಟೊಂದು) ಸಂಖ್ಯೆಯಲ್ಲಿ ವಿಶೇಷ ಉತ್ಸಾಹದಿಂದ ಪಾಲ್ಗೊಂಡ ಎಲ್ಲ ಮಹಿಳೆಯರಿಗೂ ಹಾರ್ದಿಕ ಅಭಿನಂದನೆಗಳನ್ನು ತೀರ್ಪುಗಾರರು ಅರ್ಪಿಸಿದ್ದಾರೆ.)

[೧] [೨][೩]

ನಿದ್ದೆಯ ಬಹುರೂಪ[ಬದಲಾಯಿಸಿ]


  • (ಉದಾಹರಣೆಯ ಪ್ರಬಂಧಗಳು)
  • ನಿದ್ದೆ ಒಂದು ರಹಸ್ಯಮಯ ಸ್ಥಿತಿ. ಅದನ್ನು ಮುಖ್ಯವಾಗಿ ನಾಲ್ಕು ವಿಶಿಷ್ಟ ಬಗೆ ಎಂದು ಹೇಳಬಹುದು. ನಿದ್ರೆ ಹೋಗುವುದು, ನಿದ್ದೆ ಮಾಡುವುದು, ನಿದ್ದೆ ಹೊಡೆಯುವುದು, ಕವಿಭಾಷೆಯಲ್ಲಿ ನಿದ್ರಾಲಿಂಗನಕ್ಕೊಳಗಾಗುವುದು. ನಿದ್ದೆ ಹೋಗುವುದು ಕೆಲವರಿಗೆ ದೈವದತ್ತ ವರ. ಕುಳಿತಲ್ಲಿಯೇ ನಿದ್ದೆ.; ಬಸ್ಸಿನಲ್ಲಿ ಕುಳಿತಾಗ ಪಕ್ಕದವರಿಗೆ ಒರಗಿ ಅರಾಮ ನಿದ್ದೆ ಹೋಗುತ್ತಾರೆ. ಅದೂ ಪಕ್ಕದಲ್ಲಿ ಕುಳಿತವರು ಹೆಂಗಸರಾದರೆ, ಕುಳಿತವನಿಗೆ ನಿದ್ದೆ ತೂಕಡಿಕೆ ಹೆಚ್ಚು. ಕೆಲವೊಮ್ಮೆ ನಿದ್ದೆಯೋ ನಟನೆಯೋ ತಿಳಿಯುವುದು ಕಷ್ಟ . ಕೆಲವರಿಗೆ ಮಲಗಿದ ತಕ್ಷಣ ನಿದ್ದೆ ಹತ್ತುತ್ತದೆ. ಆ ಪಣ್ಯಾತ್ಮರು ಪಕ್ಕದಲ್ಲಿ ಮಲಗಿದ್ದಾರೆಂದು ನೀವು ಮಾತನಾಡುತ್ತಿದ್ದರೆ, ಅದೆಲ್ಲಾ ಸ್ವಗತ ವಾಗಿರುತ್ತೆ. ಮಗುವಿನ ನಿದ್ದೆಯಂತೂ ಬಹಳ ವಿಸ್ಮ ಯಕಾರಿ. ಹೊತ್ತರೂ ಪರಿವೆಯಿಲ್ಲ ; ಎತ್ತಿ ಎತ್ತ ಮಲಗಿಸಿದರೂ ಅದರ ನಿದ್ದೆಗೆ ಭಂಗವಿಲ್ಲ. ಅದರ ನಿದ್ದೆಯಲ್ಲಿನ ಮುಗುಳ್ನಗುವಿನ ಚಂದಕ್ಕೆ ಸಾಟಿಯಿಲ್ಲ.
  • ನಿದ್ದೆ ಮಾಡುವುದು ನನ್ನಂತಹರಿಗೆ ಸೇರಿದ್ದು. ಮಾಡುವುದು ಎನ್ನುವ ಪದದಲ್ಲಿಯೇ ಅದರ ಪ್ರಯತ್ನದ ತ್ರಾಸು ಅಡಗಿದೆ. ಮೆತ್ತನೆಯ ಹಾಸಿಗೆಯೇ ಬೇಕು; ಸೊಳ್ಳೆ , ತಿಗಣೆಯಕಾಟವಿದ್ದರೆ ಬೆಳಗಿನ ವರೆಗೆ ಜಾಗರಣೆ; ಸಣ್ಣ ಸದ್ದೂ ನಿದ್ದೆ ಕೆಡಿಸುತ್ತದೆ. ಮಲಗಿ ಹರಳಾಡಿ, ಬೇರೆ ಬೇರೆ ಭಂಗಿಗಳಲ್ಲಿ ಮಲಗಿ ಪ್ರಯೋಗ ಮಾಡುತ್ತಲೇ ಇರಬೇಕು. ಕೊನೆಗೆ ನಿದ್ದೆ ಹತ್ತಿದರೆ ಪುಣ್ಯ.
  • ಕೆಲವರು ಕುರಿಗಳನ್ನು ಕಲ್ಪಿಸಿಕೊಂಡು ಎಣಿಸಿದರು; ಕೆಲವರು ಎಣಿಕೆ ಮಾಡುತ್ತಾ ಕನಸು ಕಟ್ಟುವರು ಮತ್ತೆ ಕೆಲವರು ಎದ್ದು ಮನೆ ತುಂಬಾ ಓಡಾಡಿ ಬೇರೆಯವರ ನಿದ್ದೆ ಕೆಡಿಸಿ ಬೈಸಿಕೊಳ್ಳುವರು ; ಯಾರಾದರೂ ಹರಟೆ ಹೊಡೆಯುವವರು ಸಿಕ್ಕಿದರೆ, ಬೆಳತನಕ ಇವರು ಹರಟೆ ಹೊಡೆದಾರು. ಇಂಥವರಿಗೆ ನಿದ್ದೆ ಒಂದು ತ್ರಾಸ ದಾಯಕ ಹೋರಾಟ.
  • ಮಿತ್ರ ಏನು ಮಾಡುತ್ತಿದ್ದಾನೆ, ಎಂದು ಕೇಳಿದರೆ, ಅವನಿಗೇನು , ನಿದ್ದೆ ಹೊಡೆಯುತ್ತಿದ್ದಾನೆ, ಎನ್ನುತ್ತಾರೆ. ಏನೂ ಕೆಲಸವಿಲ್ಲದೆ ಚಿಂತೆ ಇಲ್ಲದೆ, ಜಜವಾಬ್ದಾರಿ ಇಲ್ಲದ ಸುಖ ನಿದ್ದೆ. ನಿದ್ದೆ ಹೊಡೆಯುವುದು, ಗೊರಕೆ ಹೊಡೆಯುವುದು, ಹತ್ತಿರದ ಪದಗಳು, ನಿದ್ದೆ ಮತ್ತು ಗೊರಕೆ, ಕೇವಲ ಸಂಬಂಧಿಗಳು. ಗೊರಕೆ ಒಂದು ಬಗೆಯ ರೌದ್ರ ಭೀಕರ ಸಂಗೀತ ! ಗೊರಕೆ ಹೊಡೆಯುವವರಿಗೆ ಅದರ ಮಾಧುರ್ಯ ಅರಿವಾಗದು. ಅದನ್ನು ಅನುಭವಿಸುವ ಇತರರಿಗೆ ಆಸಂಗೀತದ ವೈವಿಧ್ಯತೆ ಭೀಕರತೆಯ ಅರಿವಾಗುತ್ತದೆ. ಗೊರಕೆ ಸಣ್ಣದಾಗಿ ಪ್ರಾರಂಭವಾಗಿ ಕ್ರಮೇಣ ತಾರಕಕ್ಕೇರುತ್ತದೆ. ಉಸಿರು ಎಳೆಯುವಾಗ ಒಂದು ಬಗೆಯ ನಾದ ; ಬಿಡುವಾಗ ಮತ್ತೊಂದು ಬಗೆಯ ಭೋಂಕಾರ. ಉಶ್ವಾಸ ನಿಶ್ವಾಸಕ್ಕೆ ಬೇರೆ ಬೇರೆ ಶೃತಿ. ನಿಶ್ಶಬ್ಧದ ಅರ್ಧರಾತ್ರಿಯ ಈ ನಾದದ ಮಾಧುರ್ಯದ ಸವಿ ಅನುಭವಿಸಿದವರಿಗೇ ಗೊತ್ತು. ಗೊರಕೆ ಸಂಗೀತದ ಪಟುಗಳು ಒಂದೇ ಕಡೆಯೇ ಇದ್ದರೆ, ಒಬ್ಬರಿಗೊಬ್ಬರು ಉತ್ತರ ಕೊಟ್ಟಂತೆ - ಸ್ಪರ್ಧೆಯ ರೌದ್ರ ಸಂಗೀತ ಕಛೇರಿಯಾಗಿ ಉಳಿದವರ ನಿದ್ದೆಯೆಲ್ಲಾ ಹಾರಿ ಹೋಗುತ್ತದೆ. ರಾತ್ರಿಯಾದ್ದರಿಂದ ಎಲ್ಲಿಯಾದರೂ ಓಡಿ ಹೋಗುವಂತೆಯೂ ಇಲ್ಲ !
  • ಎಷ್ಟೋ ಸಲ ನಾನು ಕ್ಯಾಂಪುಗಳೀಗೆ ಹೋದಾಗ ನಾಲ್ಕಾರುಜನ ಗೊರಕೆ ಪ್ರವೀಣರ ಮಧ್ಯೆ ಸಿಕ್ಕಿಕೊಂಡು ಈ ನಾದ ಸೌರಭವನ್ನು ಅನುಭವಿಸುತ್ತಾ ಹಾಸಿಗೆಯ ಮೇಲೆ ಕುಳಿತು ಬೆಳಗು ಮಾಡಿದ್ದಿದೆ !
  • ಕವಿಗಳು ನಿದ್ರೆ ಹೋದವರನ್ನು ನಿದ್ರಾtjದೇವಿಯ ಆಲಿಂಗನಕ್ಕೊಳಗಾದರು ಎಂದು ಬಣ್ಣಿಸುತ್ತಾರೆ. ಈ ಪುರುಷ ಕವಿಗಳು ನಿದ್ದೆಯನ್ನು ನಿದ್ರಾದೇವಿ ಎಂದು ಕರೆದು ನಿದ್ದೆಯನ್ನು ಹೆಣ್ಣಿಗೆ ಹೋಲಿಸಿದ್ದಾರೆ. ಪ್ರೇಯಸಿಯ ಆಲಿಂಗನಕ್ಕೊಳಗಾದ ಪ್ರೇಮಿಗೆ ಹೊರಜಗತ್ತಿನ ಅರಿವೆಲ್ಲಿರುತ್ತದೆ! ರಸಿಕ ಮಹಾಕವಿ ತನ್ನ ಅನುಭವವನ್ನು ನಿದ್ದೆಯ ಸುಖಕ್ಕೆ ಹೋಲಿಸಿದ್ದಾನೆ. ನಿದ್ರಾದೇವಿಯ ವಶನಾದನು ನಿದ್ರಾದೇವಿಯ ಆಲಿಂಗನಕ್ಕೊಳಗಾದನು ಎಂದು ಬಣ್ಣಿಸಿ ತನ್ನ ಪ್ರೇಯಸಿಯ ಆಲಿಂಗನ ಸುಖದ ಅನುಭವವನ್ನು ಹೊರಗೆಡಹಿದ್ದಾನೆ.
  • ಒಟ್ಟಿನಲ್ಲಿ ನಿದ್ದೆಯು ಆನಂದದ ಅನುಭವವೋ ವಿಸ್ಮ ತಿಯೋ ತಿಳಿಯದು. ಆದರೆ ಅದು ನಮಗೆ ಪ್ರಕೃತಿ ದತ್ತ ವರ.

ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ.[ಬದಲಾಯಿಸಿ]


  • ಈಗ ಎಲ್ಲೆಲ್ಲೂ ಸ್ತ್ರೀ ಸಮಾನತೆ - ಸ್ವಾತಂತ್ರ್ಯ - ವಿಮೊಚನಾ ಚಳುವಳಿಯ ಧ್ವನಿ ವಿಜ್ರಂಭಿಸುತ್ತಿದೆ. ಇದರಿಂದ ಪುರುಷರಿಗೆ ಒಳಗೊಳಗೆ ಕಂಪನ. ಈಗ ಇರುವ ಅಲ್ಪ-ಸ್ವಲ್ಪ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುವ ಕಾಲ ಬರಹುದೇ ಎಂಬ ಭಯ. ಅನೇಕ ದೊಡ್ಡ ದೊಡ್ಡ ಅಧಿಕಾರ ಸ್ಥಾನಗಳಲ್ಲಿ ಪುರುಷರೇ ತುಂಬಿದ್ದರೂ, ನಿಜವಾಗಿ ಅಧಿಕಾರ ನೆಡೆಸುತ್ತಿರುವವರು ಯಾರು? -ಪರುಷರೋ ಮಹಿಳೆಯರೋ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಅಷ್ಟು ಸುಲಭವಲ್ಲ.
  • ಪುರುಷ ವಿಮೋಚನಾ ಚಳುವಳಿಯು ಎಂದಾದರೂ ನಡೆದಿದ್ದಿದೆಯೇ? ಎಂಬ ಪ್ರಶ್ನೆಯನ್ನು ಕೆಲವರು ಎತ್ತಬಹುದು. ಪುರು ವಿಮೋಚನೆ ಪ್ರಯತ್ನ -ಚಳುವಳಿ ಸೃಷ್ಟಿಯ ಆದಿಕಾಲದಿಂದಲೂ ನಡೆಯುತ್ತಿರುವುದು ನಮ್ಮ ಪರಾನೇತಿಹಾಸಗಳಿಂದ ತಿಳಿಯುವುದು. ಜಗದೊಡೆಯನಾದ ಪರಮೇಶ್ವರನು ತನ್ನ ಪತ್ನಿ ದಾಕ್ಷಾಯಣಿಯ ವಿಯೋಗಾನಂತರ ನೆಮ್ಮದಿಯಿಂದ ಧ್ಯಾನಕ್ಕೆ ಕುಳಿತವನು ಸಾವಿರಾರು ವರ್ಷ ಏಳಲಿಲ್ಲ. ನಂತರ ದೇವತೆಗಳು ಅವನು ನೆಮ್ಮದಿಯಿಂದ ಇರುವುದನ್ನು ನೋಡಲಾರದೆ, ಅವನ ದ್ಯಾನವನ್ನು ಕೆಡಿಸಿ, ಪಾರ್ವತೀ ದೇವಿಯನ್ನು ಅವನ ಕೊರಳಿಗೆ ಕಟ್ಟಿದರು. ಶಿವನು ಸಿಟ್ಟಿನಿಂದ ಮನ್ಮಥನನ್ನೇ ಭಸ್ಮ ಮಾಡಿದನು. ಆದರೇನು ಪಾರ್ವತೀ ದೇವಿಯು ಶಿವನ ಅರ್ಧ ದೇಹವನ್ನೇ ಆಕ್ರಮಿಸಿ ಅವನ ಸ್ವಾತಂತ್ರ್ಯವನ್ನೇ ಹರಣ ಮಾಡಿದಳು. ಇಂದಿಗೂ ಅವನು ಅವಳಿಂದ ತಪ್ಪಿಸಿಕೊಂಡ ಧಾಖಲೆ ಇಲ್ಲ. ಇದರಿಂದ ಶಿವನಿಗೆ ತಲೆ ಬಿಸಿಯಾಯಿತು. ಮೊದಲೇ ಅವನು ತನ್ನ ಹಣೆಗಣ್ಣೊಳಗೆ ಪ್ರಳಯ-ಬೆಂಕಿಯುಂಡೆಯನ್ನು ಇಟ್ಟುಕೊಂಡವನು. ಜೊತೆಯಲ್ಲಿ ಪಾರ್ವತೀ ದೇವಿ ಕೆಲವೊಮ್ಮೆ ಕಾಳಿ ಕರಾಳಿಯಾಗಿ ವಿಜ್ರಂಭಿಸುವಳು. ಈ ತಲೆ ಬಿಸಿಯಲ್ಲಿ ಅವನು ಕೇಳಿದವರಿಗೆ ಏನೇನೋ ವರದಾನ ಮಾಡಿದ್ದುಂಟು.
  • ಒಮ್ಮೆ ರಾವಣನು ಗೌರಿ ಬೇಕೆಂದು ವರ ಕೇಳಿದಾಗ ಸಂತೋಷದಿಂದ ಅವಳನ್ನು ಅವನೊಡನೆ ಕಳುಹಿಸಿ ನಿರಾಲಂಬನಾದ. ಆದರೆ ಅವನ ನೆಮ್ಮದಿ ಬಹುಕಾಲ ಉಳಿಯಲಿಲ್ಲ. ಸ್ವಲ್ಪ ಸಮಯದಲ್ಲಿಯೇ ಗೌರಿ ವಾಪಾಸು ಬಂದು ಶಿವನನ್ನು ಸೇರಿದಳು. ಶ್ರೀಮನ್ನಾರಾಯಣನು ( ಅವನ ಕಾಲು ಹೆಬ್ಬೆಟ್ಟಿನಿಂದ ಹುಟ್ಟಿದವಳು ಗಂಗೆ ). ಶಿವನ ತಲೆ ಬಿಸಿಯನ್ನು ನೋಡಲಾರದೆ ತಂಪಾದ ಗಂಗೆಯನ್ನು ಶಿವನ ಬಳಿಗೆ ಕಳುಹಿಸಿದ. ಶಿವನು ಅವಳನ್ನು ವರಿಸಿ ತಲೆಯಮೇಲೆ ಇಟ್ಟುಕೊಂಡ. ಆವಳು ಶಿವನ ತಲೆಯಲ್ಲೇ ನೆಲೆಯೂರಿದಳು. ಶಿವನು ಇವರ ಉಪಟಳದಿಂದ ಪಾರಾಗಲು ಅನೇಕ ಸಲ ಭೂಮಿಯ ಮೇಲೆ ಅವತರಿಸಿ, ಬ್ರಹ್ಮಚಾರಿಯಾಗಿದ್ದನು. ಮಾರುತಿ ಮತ್ತು ದೂರ್ವಾಸರು ಸಹ ಅವನ ಅವತಾರವೇ. ಶಿವನು ಲಯಕರ್ತನಾದರೂ ಅವನ ಅಧಿಕಾರವನ್ನೆಲ್ಲಾ ಗಂಗಾದೇವಿಯೂ ಪಾರ್ವತೀದೇವಿಯೂ ಪ್ರಕೃತಿ ವಿಕೋಪ ಮಾಡಿ ಆ ಅಧಿಕಾರ ಚಲಾಯಿಸುತ್ತಿದ್ದಾರೆ.
  • ಶ್ರೀಮನ್ನಾರಾಯಣನಾದರೋ ಲಕ್ಷ್ಮೀದೇವಿ ಪಕ್ಕದಲ್ಲೇ ಇದ್ದರೂ ಆದಿಶೇಷನ ಮೇಲೆ ಮಲಗಿ ಸದಾ ಯೋಗ ನಿದ್ರೆಯಲ್ಲಿ ಇರುವನು. ಸಂಪತ್ತು, ಸಂಮೃದ್ಧಿಯ ದೇವತೆಯಾದ ಮಹಾಲಕ್ಷ್ಮಿಯೇ ಸ್ಥಿತಿ ಕಾರ್ಯವಾದ ಶ್ರೀಮಹಾವಿಷ್ಣುವಿನ ಕಾರ್ಯಭಾರವನ್ನು ನೆಡೆಸುತ್ತಿದ್ದಾಳೆ. ಮಹಾವಿಷ್ಣುವಿಗೆ ಕೇವಲ ಗೌರವಾಧ್ಯಕ್ಷ ಸ್ಥಾನ. ಒಮ್ಮೆ ಮಹಾವಿಷ್ಣು ಲಕ್ಷ್ಮಿಯಿಂದ ಪಾರಾಗಿ ಒಬ್ಬಂಟಿಯಾಗಿ ಭೂಮಿಗೆ ಬಂದನು. ಅಲ್ಲಿ ಪದ್ಮಾವತಿಯ ಪ್ರೇಮಪಾಶದಲ್ಲಿ ಸಿಲುಕಿದನು. ಕಡೆಗೆ ಇಬ್ಬರು ಪತ್ನಿಯರಿಂದ ತಪ್ಪಿಸಿಕೊಳ್ಳಲು. ತಿರುಪತಿ ಬೆಟ್ಟದ ಮೇಲೆ ಕಲ್ಲಾಗಿ ಭಕ್ತ ಪರಾಧೀನನಾದನು. ಶಿವ ವಿಷ್ಣು ಇಬ್ಬರೂ ಅಳಿಯ ಸಂತಾನಕ್ಕೆ ಸೇರಿದವರೆಂದು ಕಾಣುವುದು. ಶಿವನು ತನ್ನ ಮಾವನ ಮನೆಯಾದ ಹಿಮಾಲಯದಲ್ಲೇ ವಾಸ. ಮಹಾವಿಷ್ಣು, ಲಕ್ಷ್ಮಿದೇವಿ ಜನಿಸಿದ ಕ್ಷೀರ ಸಮುದ್ರದಲ್ಲೇ ವಾಸ. ಅದರಿಂದಲೇ ಅವರು ಅನೇಕ ಬಾರಿ ಭೂಮಿಗಿಳಿದು ಬಂದ ಉದಾಹರಣೆಗಳಿವೆ.
  • ಭಾರತ ದೇಶಲ್ಲಿ ಅವತಾರವೆತ್ತಿದ ವಿಷ್ಣು ಶಿವರು; ವಾಮನ ಮೂರ್ತಿಯಾಗಲೀ, ದತ್ತಾತ್ರೇಯ ಅವಧೂತರಾಗಲೀ, ದೂರ್ವಾಸರಾಗಲೀ ಬ್ರಹ್ಮಚಾರಿಗಳಾ ಗಿದ್ದುಕೊಂಡು ಸ್ತ್ರೀವ್ಯಾಮೋಹ, ಪ್ರೇಮ ಪಾಶಗಳಿಂದ ದೂರವಿರಬೇಕೆಂದು ಬೋಧಿಸುತ್ತಾ ಪುರುಷ ಸ್ವಾತಂತ್ರ್ಯಕಾಗಿ ಹೋರಾಡಿರುವುದು ಪುರಾಣ ಪ್ರಸಿದ್ಧ. ಇದೇ ಪುರುಷ ವಿಮೋಚನಾ ಚಳುವಳಿಯ ಆದಿ ಎಂದು ಹೇಳಬಹದು.
  • ಅನಂತರ ಬಂದ ಅನೇಕ ಋಷಿ ಮುನಿಗಳು, ಸಾಧು ಸಂತರು, ಸಂನ್ಯಾಸಿಗಳು, ಗೌತಮ ಬುದ್ಧ, ಮಹಾವೀರ, ಮೊದಲಾದವರು ಈ ಪುರುಷ ವಿಮೋಚನಾ ಚಳುವಳಿಯನ್ನು ಮುಂದುವರಿಸಿದರು. ಮೋಕ್ಷ ಸಾಧನೆಯೇ ಜೀವನದ ಗುರಿಯೆಂದೂ, ಸ್ತ್ರೀ ವ್ಯಾಮೋಹದಿಂದ ದೂರವಿರಬೇಕೆಂದೂ ಸಾರಿ ಸಾರಿ ಹೇಳಿದರು. ಶಂಕರ ಮಧ್ವ ರಾಮಾನುಜರು ಇನ್ನೂ ಮುಂದುವರಿಸಿ ಮಠ ಮಾನ್ಯಗಳನ್ನು ಸ್ಥಾಪಿಸಿ ಈ ಚಳುವಳಿಗೆ ಹೊಸ ರೂಪ ಕೊಟ್ಟರು.
  • ಈಗಲೂ ಅನೇಕ ಸಾಧು ಸಂತರು ಈ ಪುರುಷ ವಿಮೋಚನಾ ಚಳುವಳಿಯನ್ನು ಹೆಚ್ಚಿನ ಭರಾಟೆಯಿಂದ ನೆಡೆಸುತ್ತಿದ್ದಾರೆ. ಪತ್ರಿಕಾಮಾದ್ಯಮ, ರೇಡಿಯೋ ಟಿ.ವಿ. ಮೂಲಕ ಲೇಖನ, ಪ್ರವಚನ ಕೊಡುತ್ತಿದ್ದಾರೆ. ಅದಕ್ಕಾಗಿಯೇ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿದ್ದಾರೆ. ಪುರುಷರನ್ನು ಹೇಗಾದರೂ ಮಾಡಿ ಸ್ತ್ರೀಯರ ಕಪಿಮುಷ್ಠಿಯಿಂದ, ಪ್ರೇಮ ಕಟಾಕ್ಷದಿಂದ ಪಾರುಮಾಡಿ ಮೋಕ್ಷ ಮಾರ್ಗಕ್ಕೆ ಎಳೆಯಬೇಕೆಂಬುದೇ ಇವರೆಲ್ಲರ ಹೋರಾಟದ ಪ್ರಯತ್ನಗಳ ಸಾರ. ಸಂಸ್ಕ ತದಲ್ಲಿ ಮೋಕ್ಷವೆಂದರೆ ಬಿಡುಗಡೆ ಎಂದು ಅರ್ಥ. ಭಾರತದ ವೀರ ಸಂನ್ಯಾಸಿ ವಿವೇಕಾನಂದರು, ಏಳು, ಎದ್ದೇಳು, ಗುರಿ ಮುಟ್ಟುವವರೆಗೂ ನಿಲ್ಲದಿರು ಎಂದು ಕರೆ ಕೊಟ್ಟರು.
  • ಆದರೆ ಪರುಷ ವರ್ಗ ಏಳಲಿಲ್ಲ, ಎಚ್ಚರಗೊಳ್ಳಲಿಲ್ಲ. ಅವರ ಅಂತರಂಗದ ಸಿದ್ದಾಂತವೇ ಬೇರೆ ಇದ್ದಂತೆ ಕಾಣುತ್ತದೆ. ಈ ಪುರುಷ ವರ್ಗಕ್ಕೆ ಸ್ತ್ರೀಯರ ಪ್ರೇಮ ಕಟಾಕ್ಷದಿಂದ ಸ್ವಾತಂತ್ರ್ಯ ಗಳಿಸಿಕೊಳ್ಳುವುದರಲ್ಲಿ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಉಪದೇಶಗಳನ್ನೆಲ್ಲಾ ಒಂದು ಕಿವಿಯಲ್ಲಿ ಕೇಳಿ, ಮತ್ತೊಂದು ಕಿವಿಯಲ್ಲಿ ಬಿಡುತ್ತಿದ್ದಾರೆ. ಮೋಕ್ಷ ಮಾರ್ಗದಲ್ಲಿ ಶ್ರದ್ಧೆ ಇಲ್ಲ. ಕೋಮಲಾಂಗಿಯರ ಪ್ರೇಮ ಪಾಶದಲ್ಲಿ ಸಿಕ್ಕಿ ಅವರ ಬಾಹು ಬಂಧನದಲ್ಲಿ ಸಿಕ್ಕಿ ನಲಗುವುದೇ ಮೋಕ್ಷಕ್ಕಿಂತ ಕ್ಷೇಮವೆಂದು ಪರುಷರ ಅಂತರಂಗದ ಸಿದ್ಧಾಂತವಿರಬಹುದು. ಹೀಗೆ ಪುರುಷ ವಿಮೋಚನಾ ಚಳವಳಿಯನ್ನು ವಿಫಲಗೊಳಿಸಿ , ಪರುಷರೇ ಸ್ತ್ರೀ ವಿಮೋಚನಾ ಚಳವಳಿಗೆ ಬೆಂಬಲ ನೀಡುತ್ತಿರುವದೇ, ಈ ಚಳುವಳಿಯ ಅಂತ್ಯವಾಗಿದೆ, ದುರಂತವಾಗಿದೆ..

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಹೇಮಾ ಪಟ್ಟಣಶೆಟ್ಟಿ ಮತ್ತು ಚಂದ್ರಶೇಖರ ಆಲೂರು - ಪ್ರಜಾವಾಣಿ
  2. ಸಿರಿ ಗಂಧಮಯ ಈ ನನ ಹೃದಯ..ಏತಕೆ..-[ಶಾಶ್ವತವಾಗಿ ಮಡಿದ ಕೊಂಡಿ]
  3. "ಸರ್ಪವಿಷಹರ ಮದ್ದು;ಪ್ರಜಾವಾಣಿ ;26 Mar, 2017". Archived from the original on 2017-03-25. Retrieved 2017-03-26.