ವಿಷಯಕ್ಕೆ ಹೋಗು

ರೌಲತ್ ಕಾಯ್ದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೧೯ರಲ್ಲಿ ದೆಹಲಿಯ ಶಾಸಕಾಂಗ ಸಭೆಯಲ್ಲಿ ಅಂಗೀಕರಿಸಲಾದ ರೌಲತ್ ಕಾಯ್ದೆಯ ಕುರಿತಾಗಿ ಪ್ರಕಟವಾದ ವೃತ್ತ ಪತ್ರಿಕೆಯ ಸುದ್ದಿ

ಅರಾಜಕತೆ ಹಾಗು ಕ್ರಾಂತಿಕಾರಿ ದುಷ್ಕೃತ್ಯ ಕಾಯ್ದೆ, ೧೯೧೯ ರ ಅಡಿಯಲ್ಲಿ ಬ್ರಿಟಿಷ್ ಸರಕಾರ ೧೯೧೯ರಲ್ಲಿ ಭಾರತದಲ್ಲಿ ಜಾರಿ ಮಾಡಿದ ಕಾಯ್ದೆಯೇ ರೌಲತ್ ಕಾಯ್ದೆ ಅಥವಾ ಕಪ್ಪು ಕಾಯ್ದೆ.ಬ್ರಿಟಿಷ್ ಸರ್ಕಾರದಲ್ಲಿ ಪ್ರಮುಖ ನ್ಯಾಯಾಧೀಶರಾಗಿದ್ದ ಜಸ್ಟಿಸ್ ಸರ್.ಸಿಡ್ನಿ ಅರ್ಥರ್ ಟೇಲರ್ ರೌಲತ್ ಮುಖ್ಯಾಧಿಕಾರಿಯಾಗಿದ್ದ ಸಮಿತಿಯೊಂದು ಸಲ್ಲಿಸಿದ ವರದಿಯ ಆಧಾರದ ಮೇಲೆ ಕಾಯ್ದೆ ಜಾರಿಯಾಗಿದ್ದರಿಂದ ಈ ಕಾಯ್ದೆಗೆ ರೌಲತ್ ಕಾಯ್ದೆ ಎಂಬ ಹೆಸರೇ ಬಂದಿದೆ. ೧೯೧೯ರಲ್ಲಿ ಭಾರತದಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಚಳುವಳಿಗಳ ಅಧ್ಯಯನಕ್ಕೆಂದೇ ಬ್ರಿಟಿಷ್ ಸರ್ಕಾರ ರೌಲತ್ ಸಮಿತಿಯನ್ನು ನೇಮಿಸಿತ್ತು. ಆ ಸಮಿತಿಯ ವರದಿಗಳನ್ನು ಆಧರಿಸಿ ಮಾರ್ಚ್ ೧೦, ೧೯೧೯ರಂದು ದೆಹಲಿಯಲ್ಲಿ ಬ್ರಿಟಿಷ್ ಶಾಸಕಾಂಗ ಸಭೆಯಲ್ಲಿ ಅಂಗೀಕರಿಸಲಾಯಿತು.[೧]

ಹಿನ್ನೆಲೆ

[ಬದಲಾಯಿಸಿ]
ಸರ್.ಸಿಡ್ನಿ ಅರ್ಥರ್ ಟೇಲರ್ ರೌಲತ್

೧೯೧೫ರ ಪ್ರಥಮ ವಿಶ್ವ ಯುದ್ಧದ ಸಂಧರ್ಭದಲ್ಲಿ ಭಾರತದಲ್ಲಿ ಜಾರಿಯಲ್ಲಿದ್ದ ಭಾರತೀಯ ಸೇನಾ ಕಾಯ್ದೆ ಆಗ್ಗೆ ಭಾರತದಲ್ಲಿ ನಡೆಯುವ ಚಳುವಳಿಗಳನ್ನು, ಕ್ರಾಂತಿಕಾರಿ ಹೋರಾಟಗಳನ್ನು ಹತ್ತಿಕ್ಕುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿತ್ತು. ೧೯೧೯ ರ ವೇಳೆಗೆ ಆ ಕಾಯ್ದೆಯ ವಾಯಿದೆ ಮುಗಿಯುತ್ತಾ ಬಂದಿತ್ತು. ಬ್ರಿಟಿಷ್ ಸರ್ಕಾರ ಅಂತಹ ಕಾಯ್ದೆಗಳ ಮೂಲಕ ಭಾರತದಲ್ಲಿ ನಡೆಯುವ ಕ್ರಾಂತಿಕಾರಿ ಚಳುವಳಿಗಳನ್ನು, ಆಂದೋಲನಗಳನ್ನು ಸುಲಭವಾಗಿ ಹತ್ತಿಕ್ಕಬಹುದೆಂದು ಅದಾಗಲೇ ಮನಗಂಡಿತ್ತು.[೨]

ಬ್ರಿಟಿಷ್ ಸರ್ಕಾರದ ವಿರುದ್ಧ ನಡೆಯುವ ಪ್ರತಿಯೊಂದು ಘಟನಾವಳಿಗಳನ್ನು ರಾಜದ್ರೋಹದ, ಪಿತೂರಿಯ ಗುಂಪಿಗೆ ಸೇರಿಸಿ ಅದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲ್ಗೊಂಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಮುಖಾಂತರ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ನಿರಂಕುಶ ಪ್ರಭುತ್ವಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹಾಗು ಭಾರತದಲ್ಲಿ ಬೆಳೆಯುತ್ತಿರುವ ರಾಷ್ಟ್ರವಾದವನ್ನು ದಮನ ಮಾಡುವುದು ಬ್ರಿಟಿಷ್ ಪಾಳೆಯದ ಪ್ರಮುಖ ಅಂಶಗಳಲ್ಲೊಂದಾಗಿತ್ತು.

ಕಾಯ್ದೆಯ ಸ್ವರೂಪ

[ಬದಲಾಯಿಸಿ]

ರೌಲತ್ ಸಮಿತಿ ವರದಿಗಳನ್ನು ಆಧರಿಸಿ ಜಾರಿಯಾದ ಈ ಕಾಯ್ದೆಯಲ್ಲಿ ಬ್ರಿಟಿಷ್ ರಾಜ್ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಅಥವಾ ಸಿಡಿದೇಳಲು ಸಹಕಾರ ಮಾಡುವವರಿಗೆ ಯಾವ ವಾರಂಟ್ ಹಾಗು ಕೋರ್ಟಿನ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಶಿಕ್ಷೆ ವಿಧಿಸಬಹುದಾದ ಅನುಕೂಲಗಳನ್ನು ಬ್ರಿಟಿಷ್ ಅಧಿಕಾರಿ ವರ್ಗದವರಿಗೆ ಕಲ್ಪಿಸಿ ಕೊಡಲಾಯಿತು. ಮಾಧ್ಯಮಗಳ ಮೇಲೆ ಸಾಕಷ್ಟು ಒತ್ತಡ ಸೃಷ್ಟಿಯಾಗಿ ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಳ್ಳಲಾಯ್ತು. ಬ್ರಿಟಿಷ್ ಸರ್ಕಾರದ ವಿರುದ್ಧ ಲೇಖನ ಅಥವಾ ಪುಸ್ತಕ ಬರೆದು ಪ್ರಕಟಿಸುವರಿಗೆ ಅನಿರ್ದಿಷ್ಟಾವಧಿ ಕಾರಾಗೃಹವಾಸಕ್ಕೆ ತಳ್ಳಲಾಯಿತು.

ಬಂಧಿತರಾದ ಹೋರಾಟಗಾರರಿಗೆ ನ್ಯಾಯಿಕ ಪ್ರಕ್ರಿಯೆಗಳ ಮೂಲಕ ಶಿಕ್ಷೆಗಳಾಗುವ ಸಂಧರ್ಭದಲ್ಲಿ ಬಂಧಿತರ ಆಪಾದನೆಗೆ ಒದಗಿಸಿದ ಪುರಾವೆಗಳನ್ನು ಬಂಧಿತರ ಅರಿವಿಗೆ ಬರದಂತೆ ತಡೆಯಲಾಗುತ್ತಿತ್ತು. ಅಪಾದಿತರನ್ನು ಬಿಡುಗಡೆ ಮಾಡುವಾಗ ಭದ್ರತಾ ಪತ್ರಗಳನ್ನು ಸಲ್ಲಿಸಬೇಕಾಗಿತ್ತು ಹಾಗು ಬಿಡುಗಡೆಯಾದ ನಂತರ ಯಾವುದೇ ರಾಜಕೀಯ, ಶೈಕ್ಷಣಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಯಿತು.[೩]

ಪರಿಣಾಮಗಳು

[ಬದಲಾಯಿಸಿ]

ಕಾಯ್ದೆಯ ಸ್ವರೂಪವನ್ನು ಗಮನಿಸಿದ ಮಹಾತ್ಮ ಗಾಂಧೀಜಿ ಅದನ್ನು ಪ್ರಬಲವಾಗಿ ವಿರೋಧಿಸಿದರು. ರಾಜಕೀಯ ವಿರೋಧಾಭಾಸಗಳಿಗೆ ಕಾನೂನಾತ್ಮಕ ಶಿಕ್ಷೆ ಒಪ್ಪಿತವಲ್ಲವೆಂದು ತಮ್ಮ ವಾದ ಮುಂದಿರಿಸಿದರು.ಅದಕ್ಕಾಗಿ ಏಪ್ರಿಲ್ ೬, ೧೯೧೯ ರಂದು ಹರತಾಳವನ್ನು ಏರ್ಪಡಿಸಿದರು. ಭಾರತೀಯರೆಲ್ಲರೂ ಉಪವಾಸ ಆಚರಿಸಿ, ಪ್ರಾರ್ಥಿಸಿ ಕಾಯ್ದೆಯ ವಿರುದ್ಧ ಸಾರ್ವಜನಿಕ ಸಭೆಗಳನ್ನು ಏರ್ಪಡಿಸುವಂತೆ ಕರೆ ಕೊಟ್ಟರು. ಅದೇ ಸಂಧರ್ಭದಲ್ಲಿಯೇ ಬ್ರಿಟಿಷ್ ಸರ್ಕಾರಕ್ಕೆ ಅಸಹಕಾರ ಚಳುವಳಿಗೆ ನಾಂದಿ ಹಾದಿ ರೌಲತ್ ಕಾಯ್ದೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಮುಂದೆ ಅದೇ ಚಳುವಳಿ ನಾಗರೀಕ ಅಸಹಕಾರ ಚಳುವಳಿ ಎಂದು ಸ್ವಾತಂತ್ರ್ಯ ಹೋರಾಟಗಳಲ್ಲಿ ಬಹಳ ಪ್ರಸಿದ್ಧಿಯಾಯಿತು.

೧೯೧೯ರ ಮಾರ್ಚ್ ೩೦ರಂದು ದೆಹಲಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ನಡೆದಿದ್ದ ಹರತಾಳ ಅಹಿಂಸಾ ಮಾರ್ಗದಲ್ಲಿ ಸುಸೂತ್ರವಾಗಿ ನಡೆದಿತ್ತು, ಆದರೆ ಅದೇ ಸಮಯದಲ್ಲಿ ರೌಲತ್ ಕಾಯಿದೆಯ ಕಾರಣಕ್ಕೆ ಪಂಜಾಬ್ ಪ್ರಾಂತದಲ್ಲಿ ದಂಗೆ ಆರಂಭವಾಯಿತು. ಹಿಂಸಾಚಾರಕ್ಕೆ ತಿರುಗಿದ ದಂಗೆಯಿಂದ ವಿಚಲಿತರಾದ ಗಾಂಧೀಜಿ ಅಹಿಂಸೆಯೇ ಸತ್ಯಾಗ್ರಹದ ಅವಿಭಾಜ್ಯ ಅಂಗ ಹಾಗು ತಾವು ಅಹಿಂಸಾ ಮಾರ್ಗಕ್ಕೆ ಮಾತ್ರ ಬೆಂಬಲವೀಯುವುದಾಗಿ ಪ್ರಕಟಿಸಿ ರೌಲತ್ ಕಾಯ್ದೆಯ ವಿರುದ್ಧ ತಮ್ಮ ಚಳುವಳಿಯನ್ನು ಹಿಂತೆಗೆದುಕೊಂಡರು.

ರೌಲತ್ ಕಾಯ್ದೆಗೆ ಭಾರತದ ಇನ್ಯಾವ ಸ್ಥಳಗಳಿಗಿಂತಲೂ ಪ್ರಬಲ ವಿರೋಧ ವ್ಯಕ್ತವಾಗಿದ್ದು ಪಂಜಾಬ್ ಪ್ರಾಂತದಲ್ಲಿ. ೧೯೧೯ರ ಮಾರ್ಚನಲ್ಲಿ ಜಾರಿಯಾದ ಕಾಯ್ದೆಗೆ ವಿರೋಧವೊಡ್ಡಿ ಪಂಜಾಬ್ ನ ಪ್ರಮುಖ ರಾಜಕೀಯ ನಾಯಕರುಗಳನ್ನು ಬಂಧಿಸಿ ಗುಟ್ಟಾಗಿ ಧರ್ಮಶಾಲೆಯ ಕಾರಾಗೃಹಕ್ಕೆ ಕೊಂಡೊಯ್ಯಲಾಗಿತ್ತು. ದಂಗೆಯ ತೀವ್ರತೆ ಹೆಚ್ಚಾಗುತ್ತಿದ್ದುದನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಪಂಜಾಬ್ ಗೆ ತನ್ನ ಸೇನೆಯನ್ನು ಅಟ್ಟಿತು. ೧೩ ಏಪ್ರಿಲ್ ೧೯೧೯, ಅಂದು ಸಿಖ್ಖರ ಪ್ರಮುಖ ಹಬ್ಬಗಳಲ್ಲೊಂದಾದ ಬೈಸಾಕಿ ಆಚರಣೆಯನ್ನು ಪಂಜಾಬ್ ನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅಮೃತಸರದಲ್ಲಿರುವ ಸ್ವರ್ಣ ಮಂದಿರದ ಬಳಿ ಹಲವಾರು ಸಿಖ್ಖರು ಪರ್ವದ ಆಚರಣೆಗೂ ಹಾಗು ಪಂಜಾಬ್ ನಾಯಕರ ಬಂಧನದ ಕುರಿತಾದ ಸಭೆ ನಡೆಸಲು ಸೇರಿದ್ದರು. ಮಾಹಿತಿ ದೊರೆಯುತ್ತಿದಂತೆ ಅಲ್ಲಿಗೆ ಆಗಮಿಸಿದ ಬ್ರಿಟಿಷ್ ಅಧಿಕಾರಿಗಳು, ಸೇನೆ ಹಾಗು ಪೊಲೀಸ್ ರು ಜನರಲ್. ಡೈಯರ್ ನ ನೇತೃತ್ವದಲ್ಲಿ ನಿಶ್ಯಸ್ತ್ರರಾಗಿದ್ದ ಜನಗಳ ಗುಂಪಿನ ಮೇಲೆ ಗುಂಡುಗಳ ಮಳೆಗರೆದು ಅತೀ ದೊಡ್ಡ ಮಾರಣ ಹೋಮ ನಡೆಸಿದ್ದರು. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವೆಂದೇ ಕುಖ್ಯಾತವಾಗಿದೆ.[೪]

ಮುಂದೆ ಭಾರತದಾದ್ಯಂತ ತೀವ್ರ ತರದ ಚಳುವಳಿಗಳು ನಡೆದಾಗ ಮತ್ತೊಂದು ಸಮಿತಿ ರೆಪ್ರೆಸ್ಸಿವ್ ಲಾಸ್ ಕಮಿಟಿ ರೌಲತ್ ಕಾಯ್ದೆಯಲ್ಲಿದ್ದ ಲೋಪ ದೋಷಗಳನ್ನು ಬ್ರಿಟಿಷ್ ಸರ್ಕಾರದ ಮುಂದೆ ಎತ್ತಿ ಹಿಡಿಯಿತು. ವರದಿಯನ್ನು ಒಪ್ಪಿಕೊಂಡ ಬ್ರಿಟಿಷ್ ಭಾರತ ಸರ್ಕಾರ ರೌಲತ್ ಕಾಯ್ದೆ, ಪತ್ರಿಕಾ ಸ್ವಾತಂತ್ರ್ಯ ಕಾಯ್ದೆ ಹಾಗು ಇನ್ನು ಮುಂತಾದ ಇಪ್ಪತ್ತೆರಡು ಕಾಯ್ದೆಗಳನ್ನು ಕೈಬಿಟ್ಟಿತು.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ರೌಲತ್ ಕಾಯ್ದೆಯ ಕುರಿತಾದ ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾ ದ ಆಂಗ್ಲ ಮಾಹಿತಿ".
  2. "ಬ್ರಿಟಿಷ್ ಭಾರತದ ಇತಿಹಾಸ : ಆಂಗ್ಲ ಅವತರಣಿಕೆಯ ಪುಸ್ತಕ. ಲೇಖಕ: ಜಾನ್ ಎಫ್. ರಿಡಿಕ್".
  3. "ದಿ ಮೇಕಿಂಗ್ ಆಫ್ ಇಂಡಿಯಾ: ಎ ಹಿಸ್ಟಾರಿಕಲ್ ಸರ್ವೇ".ಲೇಖಕ. ರಣಬೀರ್ ವೋಹ್ರಾ. ಎರಡನೇ ಸಂಚಿಕೆ. ಪು.126
  4. "ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ".