ರಿಚರ್ಡ್ ಕಾಬ್ಡೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಚರ್ಡ್ ಕಾಬ್ಡೆನ್
Richard Cobden
ಜನನ(೧೮೦೪-೦೬-೦೩)೩ ಜೂನ್ ೧೮೦೪
ಮರಣ2 April 1865(1865-04-02) (aged 60)
ಮರಣಕ್ಕೆ ಕಾರಣAsthma and bronchitis
Resting placeWest Lavington, Sussex
ಇದಕ್ಕೆ ಖ್ಯಾತರುMember of the Anti-Corn Law League and peace campaigner
ರಾಜಕೀಯ ಪಕ್ಷIndependent Radical, Liberal


ರಿಚರ್ಡ್ ಕಾಬ್ಡೆನ್ (3 ಜೂನ್ 1804 – 2 ಎಪ್ರಿಲ್ 1865) ಇಂಗ್ಲೀಷ್ ಅರ್ಥಶಾಸ್ತ್ರಜ್ಞ, ವಿಕ್ಟೋರಿಯ ಆಳ್ವಿಕೆಯ ಆರಂಭಕಾಲದಲ್ಲಿ ಮುಕ್ತ ವ್ಯಾಪಾರವನ್ನು (ಫ್ರೀ ಟ್ರೇಡ್) ಪ್ರತಿಪಾದಿಸಿದವರಲ್ಲಿ ಅಗ್ರಗಣ್ಯ.[೧]

ಬಾಲ್ಯ[ಬದಲಾಯಿಸಿ]

ಸಸೆಕ್ಸಿನ ಮಿಡ್‍ಹಸ್ರ್ಟ್ ಬಳಿ ಡನ್‍ಫರ್ಡ್ ಕೃಷಿಕ್ಷೇತ್ರದಲ್ಲಿ 1804ರ ಜೂನ್ 3ರಂದು ಇವನ ಜನನ. ತಂದೆ ತಾಯಿಯರದು ಬಡತನದ ಜೀವನ. ಆದರೂ ಅವರಿಗೆ ಮಕ್ಕಳು ಹನ್ನೊಂದು ಜನ. ನಂಟರೇ ಇವರನ್ನೆಲ್ಲ ಸಾಕಿದರು. ರಿಚರ್ಡ್ ಕಾಬ್ಡೆನ್ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಲಂಡನಿನಲ್ಲಿ ಬಂಧುವೊಬ್ಬನ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ವಲ್ಪ ಕಾಲಾನಂತರ ಇವನೂ ಇನ್ನಿಬ್ಬರೂ ಸೇರಿ ಸ್ವಂತ ವ್ಯಾಪಾರವನ್ನಾರಂಭಿಸಿದರು. ಕ್ರಮೇಣ ಇವನಿಗೆ ರಾಜಕೀಯದ ಗೀಳು ಹತ್ತಿತು. ಈತ ವ್ಯಾಪಾರದಿಂದ ಬಿಡುಗಡೆ ಹೊಂದಿ ರಾಜಕಾರಣವನ್ನು ಪ್ರವೇಶಿಸಿದ.

ಜೀವನ[ಬದಲಾಯಿಸಿ]

ಚಿಕ್ಕಂದಿನಲ್ಲಿ ಚೆನ್ನಾಗಿ ಓದಲಿಲ್ಲವೆಂಬ ಕೊರತೆ ಕಾಬ್ಡೆನನಿಗೆ ಇದ್ದೇ ಇತ್ತು. ಆದ್ದರಿಂದ ಇವನು ಆಳವಾಗಿಯೂ ವಿಸ್ತಾರವಾಗಿಯೂ ವ್ಯಾಸಂಗ ಮಾಡಿದ. ಫ್ರಾನ್ಸ್, ಸ್ವಿಟ್‍ಜûರ್‍ರ್ಲೆಂಡ್, ಅಮೆರಿಕ ಸಂಯುಕ್ತಸಂಸ್ಥಾನ, ಪಶ್ಚಿಮ ಏಷ್ಯ ಮತ್ತು ಜರ್ಮನಿಗಳಲ್ಲಿ ಪ್ರವಾಸ ಮಾಡಿದ್ದರಿಂದ ಇವನ ಅನುಭವ ಬೆಳೆಯಿತು. 1835 ಮತ್ತು 1836ರಲ್ಲಿ ಅನುಕ್ರಮವಾಗಿ ಪ್ರಕಟವಾದ ಇವನ ಇಂಗ್ಲೆಂಡ್, ಐರ್ಲೆಂಡ್ ಅಂಡ್ ಅಮೆರಿಕ ಮತ್ತು ರಷ್ಯ ಎಂಬ ಹೊತ್ತಗೆಗಳು ಇವನ ವಿದ್ವತ್ತು ಅನುಭವಗಳ ದ್ಯೋತಕ. ಅಮೆರಿಕದ ಉತ್ಕರ್ಷೆ, ಶಕ್ತಿ ಸಮತೋಲದ ನವಕಲ್ಪನೆ, ಬ್ರಿಟನ್ನು ತನ್ನ ವಿದೇಶೀ ವ್ಯಾಪಾರವನ್ನು ವರ್ಧಿಸಿಕೊಳ್ಳುವುದರ ಆವಶ್ಯಕತೆ-ಮುಂತಾದ ಅನೇಕ ವಿಚಾರಗಳು ಆ ಪುಸ್ತಿಕೆಗಳಲ್ಲಿ ವಿವೇಚಿತವಾಗಿವೆ. ಸೈನ್ಯಬಲ ಮತ್ತು ಹಿರಿಮೆಯ ಡಂಭಗಳನ್ನು ಬಿಟ್ಟು ಮುಕ್ತವ್ಯಾಪಾರದಲ್ಲಿ ತೊಡಗುವುದರಿಂದಲೇ ದೇಶದ ಉನ್ನತಿ ಸಾಧಿಸುವುದೆಂಬುದು ಇವನ ವಾದವಾಗಿತ್ತು. ನಮ್ಮ ವಾಣಿಜ್ಯವನ್ನು ಬೆಳೆಸಿ ರಕ್ಷಿಸುವ ಸಾಧನವೆಂದರೆ ಕತ್ತಿಯಲ್ಲ, ಅಗ್ಗದ ಸರಕು-ಎಂದು ಕಾಬ್ಡೆನ್ ಬೋಧಿಸಿದ. ಬ್ರಿಟನ್ನು ವ್ಯಾಪಾರಿ ರಾಷ್ಟ್ರವಾಗಿ ಬೆಳೆಯುವುದರಿಂದ ಸರಕಿನ ಸುಸೂತ್ರ ಸಾಗಣೆ ಮತ್ತು ಸಂಪತ್ತಿನ ವೃದ್ಧಿ ಸಾಧಿಸುತ್ತದೆ; ಇದು ಹೊಸ ಅಂತರರಾಷ್ಟ್ರೀಯ ವ್ಯವಸ್ಥೆಯ ಸ್ಥಾಪನೆಗೆ ನಾಂದಿಯಾಗುತ್ತದೆ-ಎಂಬ ಕಾಬ್ಡೆನ್ ವಾಣಿ ಭವಿಷ್ಯದ ಮುನ್ನೋಟವಾಗಿತ್ತು.

ಧಾನ್ಯ ಕಾಯಿದೆ ವಿರುದ್ಧ ಹೋರಾಟ[ಬದಲಾಯಿಸಿ]

1838 ರಿಂದ 1846ರವರೆಗಿನ ಕಾಲದಲ್ಲಿ ಕಾಬ್ಡೆನನ ಗಮನ ಮುಖ್ಯವಾಗಿ ಹರಿದಿದ್ದುದು ಧಾನ್ಯ ಕಾಯಿದೆಗಳತ್ತ. ಬ್ರಿಟನಿನಲ್ಲಿ ಬೆಳೆಯುತ್ತಿದ್ದ ಧಾನ್ಯದ ಬೆಲೆಗಳು ಇಳಿಯದಂತೆ ರಕ್ಷಿಸುವಂತೆ ಸುಮಾರು ನಾನೂರು ವರ್ಷಗಳಿಂದಲೂ ಸರ್ಕಾರದ ಆಶಯವಾಗಿತ್ತು. ಇದಕ್ಕಾಗಿ ಅನ್ಯದೇಶಗಳಿಂದ ಆಮದಾಗುವ ಧಾನ್ಯಗಳ ಮೇಲೆ ಸುಂಕ ವಿಧಿಸಲಾಗುತ್ತಿತ್ತು. ಅಗ್ಗದ ಧಾನ್ಯ ಬ್ರಿಟನ್ನಿಗೆ ಬಾರದಂತೆ ತಡೆಗಟ್ಟಲಾಗಿತ್ತು. ಇದರಿಂದ ಕಷ್ಟ ಅನುಭವಿಸುತ್ತಿದ್ದವರು ಕಾರ್ಮಿಕಜನ, ಸಾಮಾನ್ಯಜನ. ಧಾನ್ಯ ಕಾಯಿದೆಗಳನ್ನು ಕಟುವಾಗಿ ವಿರೋಧಿಸಿ, ಅವನ್ನೆಲ್ಲ ಶಾಸನ ಕಡತದಿಂದ ತೊಡೆದುಹಾಕಿಸುವುದು ಕಾಬ್ಡೆನನ ಗುರಿಯಾಯಿತು. ಬ್ರಿಟನಿನಲ್ಲಿ ಸ್ಥಾಪಿತವಾದ ಧಾನ್ಯ ಕಾಯಿದೆ ವಿರೋಧಿ ಸಂಘದ ಮುಂದಾಳುಗಳಲ್ಲಿ ಕಾಬ್ಡೆನ್ ಪ್ರಮುಖ. ದರಿದ್ರರಲ್ಲಿ ಅತಿ ದರಿದ್ರರಾದವರಿಂದ ಕಿತ್ತುಕೊಂಡು ಶ್ರೀಮಂತರಲ್ಲಿ ಅತಿ ಶ್ರೀಮಂತರಿಗೆ ಹಣ ನೀಡುವುದೇ ಧಾನ್ಯ ಕಾನೂನು ಮಾಡುತ್ತಿರುವ ಕೆಲಸವೆಂದು ಕಾಬ್ಡೆನ್ ಹೇಳಿದ. ಇದು ನೈತಿಕ ಪಾತಕ, ಆರ್ಥಿಕವಾಗಿ ಅನುಚಿತ. ಇದರಿಂದ ಲಾಭ ಪಡೆಯುವವರು ಜಮೀನುಗಳ ಒಡೆಯರು. ಸಮಾಜದ ಕೊಳ್ಳೆ ಹೊಡಿದು ತುಂಬಿಕೊಳ್ಳುವ ಲಾಭವಿದು-ಎಂದು ಕಾಬ್ಡೆನನೂ ಇವನ ಅನುಯಾಯಿಗಳೂ ವಾದಿಸಿದರು. ಈ ವಾದ ಹೊಸದೇನೂ ಆಗಿರಲಿಲ್ಲ. ಆದರೆ ಇದನ್ನು ಆಳುವ ಜನಕ್ಕೆ ಮನದಟ್ಟು ಮಾಡಿಕೊಡಲು ಕಾಬ್ಡೆನ್ ಅನುಸರಿಸಿದ ಕ್ರಮ ತೀವ್ರವಾದ್ದಾಗಿತ್ತು. ಇವನ ಸಕಲ ಬುದ್ಧಿಯೂ ಇದಕ್ಕಾಗಿ ಮುಡಿಪಾಯಿತು. ಪಟ್ಟಣಗಳಲ್ಲಿ ಆರಂಭವಾಗಿ ಹಳ್ಳಿಯನ್ನೂ ದಾಳಿಯಿಟ್ಟ ಈ ವೈಚಾರಿಕ ಪ್ರಚಾರದಿಂದ ಸರ್ಕಾರ ತಬ್ಬಿಬ್ಬಾಯಿತು. 1841ರಲ್ಲಿ ಸ್ಟಾಕ್‍ಪೋರ್ಟಿನಿಂದ ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಆಯ್ಕೆಯಾಗಿ ಬಂದ ಕಾಬ್ಡೆನ್ ಗುಡುಗಿದ. ಕ್ರಮಕ್ರಮವಾಗಿ ಪೀಲ್ ಕಾಬ್ಡೆನನ ವಾದದ ಹಿಂದಿನ ಸತ್ಯವನ್ನು ಗುರುತಿಸಬೇಕಾಯಿತು. 1845ರಲ್ಲಿ ಐರ್ಲೆಂಡಿನಲ್ಲಿ ಭೀಕರವಾದ ಆಲೂಗಡ್ಡೆ ಕ್ಷಾಮ ಸಂಭವಿಸಿದಾಗ ಪೀಲ್‍ನ ಪರಿವರ್ತನೆ ಸಂಪೂರ್ಣವಾಯಿತು. ಆದರೆ ಧಾನ್ಯ ಕಾಯಿದೆಗಳನ್ನು ತೊಡಿದುಹಾಕುವ ಬಗ್ಗೆ ಸಂಪುಟದಲ್ಲಿ ಒಮ್ಮತ ಇರಲಿಲ್ಲ. ಪೀಲ್ನ ಸಂಪುಟ ಮುರಿದು ಬಿತ್ತು. ಸರ್ಕಾರವನ್ನು ರಚಿಸಲು ಲಾರ್ಡ್ ಜಾನ್ ರಸೆಲನಿಗೆ ಆಹ್ವಾನ ಬಂತು. ಆತ ಕಾಬ್ಡೆನನಿಗೂ ಸಚಿವತ್ವ ನೀಡಬಯಸಿದ. ಆದರೆ ಕಾಬ್ಡೆನ್ ಒಪ್ಪಲಿಲ್ಲ. ರಸೆಲ್ ಸಂಪುಟ ರಚಿಸಲು ಅಸಮರ್ಥನಾದಾಗ ಪೀಲ್ ಮತ್ತೆ ಅಧಿಕಾರಕ್ಕೆ ಬಂದ. ಅವನ ಅನುಯಾಯಿಗಳಲ್ಲಿ ಅನೇಕರು ಪೀಲನನ್ನು ತೊರೆದರು. ಆದರೆ ರಾಜಕೀಯ ವಿರೋಧಿಗಳನೇಕರು ಅವನಿಗೆ ಬೆಂಬಲ ನೀಡಿದರು.

ಧಾನ್ಯ ಕಾಯಿದೆಗಳನ್ನು ತೊಡೆದು ಹಾಕಲಾಯಿತು. ಆದರೆ ಬೇರೊಂದು ವಿಷಯದಲ್ಲಿ ಪೀಲನ ಸರ್ಕಾರಕ್ಕೆ ಪಾರ್ಲಿಮೆಂಟಿನಲ್ಲಿ ಸೋಲಾಯಿತು. 1846ರ ಜೂನ್ 29ರಂದು ಪೀಲ್ ಮಾಡಿದ ಅಂತಿಮ ಭಾಷಣದಲ್ಲಿ ಕಾಬ್ಟೆನನನ್ನು ಕೊಂಡಾಡಿದ. ಈ ಕ್ರಮದ ಯಶಸ್ಸಿಗೆ ಕಾರಣ ತಾನಲ್ಲ, ಕಾಬ್ಡೆನ್-ಎಂದು ಆತ ಹೊಗಳಿದ. ನಿಸ್ವಾರ್ಥದೃಷ್ಟಿ, ಅವಿರತಪ್ರಯತ್ನ, ಅದಮ್ಯಉತ್ಸಾಹ, ವಾದಚಾತುರ್ಯ, ವಾಗ್ಮಿತೆ: ಕಾಬ್ಡೆನನ ಗುಣಗಳಿವು-ಎಂದು ಪೀಲ್ ಹೇಳಿದ.

ಖಾಸಗಿ ಜೀವನ[ಬದಲಾಯಿಸಿ]

ಈ ಅಭೂತಪೂರ್ವ ವಿಜಯದ ನಡುವೆ ಕಾಬ್ಡೆನನ ಸ್ವಂತ ಆರ್ಥಿಕಸ್ಥಿತಿ ಚಿಂತಾಜನಕವಾಗಿತ್ತು. ಧಾನ್ಯ ಕಾಯಿದೆಗಳ ರದ್ದಿಗಾಗಿ ಹೋರಾಟದ ಕಣಕ್ಕಿಳಿಯುವ ಮುನ್ನ ವ್ಯಾಪಾರದಿಂದ ಈತ ಸಾಕಷ್ಟು ಐಶ್ವರ್ಯ ಗಳಿಸಿದ್ದ. ಅದೆಲ್ಲ ಕರಗಿ ಹೋಗಿತ್ತು. ಮೈಯೆಲ್ಲ ಸಾಲವಾಗಿತ್ತು. ಅದನ್ನು ತೀರಿಸಲು ಸಾರ್ವಜನಿಕರು ಚಂದಾ ನೀಡಿದರು (1847). ಬಂದ ಹಣದಲ್ಲಿ ಒಂದು ಭಾಗದಿಂದ ಡನ್‍ಫರ್ಡಿನಲ್ಲಿ ಕಾಬ್ಡೆನ್ ತನ್ನ ಹುಟ್ಟಿದ ಸ್ಥಳವಾದ ಕೃಷಿಕ್ಷೇತ್ರವನ್ನು ಕೊಂಡ. ಅದೇ ಇವನ ವಾಸ ಸ್ಥಳವಾಯಿತು. ಕಾಬ್ಡೆನ್ ವಿವಾಹವಾದದ್ದು 1840ರಲ್ಲಿ. ಕ್ಯಾದರೀನ್ ಆನೆ ವಿಲಿಯಮ್ಸ್ ಚೆಲುವೆ. ಒಬ್ಬನೇ ಮಗ ರಿಚರ್ಡ್ ಬ್ರೂಕ್ ಕಾಬ್ಡೆನ್ 15ನೆಯ ವರ್ಷದಲ್ಲಿ ಹಠಾತ್ತನೆ ತೀರಿಕೊಂಡ (1856). ಕಾಬ್ಡೆನ್ ದಂಪತಿಗಳ ಹೆಣ್ಣುಮಕ್ಕಳು ಐವರು. ಅವರಲ್ಲೊಬ್ಬಾಕೆ ಕಾದಂಬರಿಗಾರ್ತಿ: ಎಲೆನ್ ಮಿಲಿಸೆಂಟ್.

ಧಾನ್ಯ ಕಾಯಿದೆಗಳ ವಿಸರ್ಜನೆಯೊಂದಿಗೆ ಕಾಬ್ಡೆನ್ ರಾಜಕಾರಣದಿಂದ ನಿವೃತ್ತಿ ಹೊಂದಲಿಲ್ಲ. ಸ್ವಲ್ಪ ಕಾಲ ವಿಶ್ರಾಂತಿಗಾಗಿ ಸ್ಪೇನ್, ಇಟಲಿ, ರಷ್ಯಗಳಲ್ಲಿ ಪ್ರವಾಸ ಕೈಕೊಂಡ. 1847ರ ಚುನಾವಣೆಯಲ್ಲಿ ಮತ್ತೆ ಇವನಿಗೆ ವಿಜಯ ದೊರಕಿತು. ಮುಂದಣ ಹತ್ತು ವರ್ಷಗಳ ಕಾಲ ಈತ ಪಾರ್ಲಿಮೆಂಟ್ ಸದಸ್ಯನಾಗಿ ಮುಂದುವರಿದ. ಮುಕ್ತವ್ಯಾಪಾರದ ಸ್ಥಾಪನೆಗಾಗಿ ಪ್ರಚಾರ ಸಾಗಿಸಿದ. ಶಸ್ತ್ರಾಸ್ತ್ರಗಳ ಕಡಿತ, ಐರೋಪ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪದ ಅಂತ್ಯ, ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗೆ ವಿರೋಧ-ಇವಕ್ಕಾಗಿ ಹೋರಾಟ ಮುಂದುವರಿಯಿತು. ಪೀಲನ ಮರಣಾನಂತರ ಬ್ರಿಟಿಷ್ ರಾಜಕೀಯದಲ್ಲಿ ಪ್ರಧಾನ ಸ್ಥಾನ ಗಳಿಸಿದ್ದ ಲಾರ್ಡ್ ಪಾಮರ್‍ಸ್ಟನ್ ಕಾಬ್ಡೆನನ ಟೀಕೆಗಳನ್ನೆದುರಿಸಬೇಕಾಯಿತು. ಕಾಬ್ಡೆನನ ವಿಚಾರಗಳಿಗೆ ಹಲವು ಕಡೆ ಮನ್ನಣೆ ದೊರಕಿತು. ಅಂತರರಾಷ್ಟ್ರೀಯ ಶಾಂತಿ ಚಳುವಳಿಗೆ ಕಾಬ್ಡೆನನೂ ಒಬ್ಬ ಅಧ್ವರ್ಯುವಾದ. 1848ರಿಂದ 1851ರ ವರೆಗಿನ ಕಾಲದಲ್ಲಿ ಈತ ಅನೇಕ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸಿದ.

ಆದರೆ ಕಾಲಕ್ರಮದಲ್ಲಿ ದೇಶದ ವಿಚಾರಧಾರೆ ಬದಲಾಯಿತು. ಯುದ್ಧದ ಖರ್ಚಿಲ್ಲದ, ಶಾಂತಿಪ್ರಧಾನವಾದ ರಾಜನೀತಿಯಲ್ಲೂ ಮುಕ್ತ ವ್ಯಾಪಾರದಲ್ಲೂ ನಂಬಿಕೆ ಕಡಿಮೆಯಾಯಿತು. ಆದರೂ ಕಾಬ್ಡೆನ್ ಹಿಂದೆಗೆಯಲಿಲ್ಲ. ಗತಕಾಲದ ತಪ್ಪುಗಳನ್ನೆ ಮತ್ತೆ ಮಾಡಬಾರದೆಂದು ತನ್ನ ಹಸ್ತಪತ್ರಗಳಲ್ಲಿ ಎಚ್ಚರಿಸುತ್ತಲೇ ಇದ್ದ. ಫ್ರಾನ್ಸಿನೊಂದಿಗೆ ಯುದ್ಧ ಬೇಡವೆಂಬುದು ಇವನ ದೃಢ ನಿಲವು. ಕ್ರಿಮಿಯ ಯುದ್ಧ ಆರಂಭವಾಯಿತು. ವಾಟ್ ನೆಕ್ಸ್ಟ್-ಅಂಡ್ ನೆಕ್ಸ್ಟ್? ಎಂಬ ಪತ್ರದಲ್ಲಿ ಅವನು ತನ್ನ ನಂಬಿಕೆಯನ್ನು ಮತ್ತೆ ದೃಢೀಕರಿಸಿದ. ವ್ಯಾಪಾರ ಮತ್ತು ಮಾನವತೆಗಳಿಗಾಗಿ ರಷ್ಯದೊಂದಿಗೆ ಸ್ನೇಹ ಅವಶ್ಯ ಎಂದು ಬೋಧಿಸಿದ. ಆದರೆ ಇವನ ಸಮಕಾಲೀನರಲ್ಲಿ ಅನೇಕರು ಯುದ್ಧೋನ್ಮಾದಕ್ಕೆ ಸಿಲುಕಿದ್ದರು. 1857ರಲ್ಲಿ ಇವನ ಸೂಚನೆಯೊಂದಕ್ಕೆ ಪಾರ್ಲಿಮೆಂಟಿನಲ್ಲಿ ವಿಜಯ ದೊರಕಿತಾದರೂ ಅನಂತರ ನಡೆದ ಚುನಾವಣೆಯಲ್ಲಿ ಕಾಬ್ಡೆನ್ ಸೋತ.

ಈ ವೇಳೆಯಲ್ಲಿ ಕಾಬ್ಡೆನ್ ಅಮೆರಿಕಕ್ಕೆ ಹೋಗಿ ಬಂದ. 1859ರಲ್ಲಿ ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದ. ಹಿಂದೆ ಇವನ ವಿರೋಧಿಯಾಗಿದ್ದ ಲಾರ್ಡ್ ಪಾಮರ್‍ಸ್ಟನನೇ ಇವನನ್ನು ಸಂಪುಟಕ್ಕೆ ಸೇರಬೇಕೆಂದು ಆಹ್ವಾನಿಸಿದ. ವ್ಯಾಪಾರ ಮಂಡಳಿಯ (ಬೋರ್ಡ್ ಆಫ್ ಟ್ರೇಡ್) ಅಧ್ಯಕ್ಷನಾಗಬೇಕೆಂಬ ಅವನ ಆಹ್ವಾನವನ್ನು ಕಾಬ್ಡೆನ್ ಪುರಸ್ಕರಿಸಲಿಲ್ಲ. ಫ್ರಾನ್ಸಿನೊಂದಿಗೆ ಹೊಸ ವಾಣಿಜ್ಯ ಕೌಲೊಂದನ್ನು ಏರ್ಪಡಿಸಿಕೊಳ್ಳುವ ಬಗ್ಗೆ ಸಂಧಾನವೊಂದರಲ್ಲಿ ಕಾಬ್ಡೆನ್ ನಿರತನಾದ. 1860 ರಲ್ಲಿ ಅಂಥ ಕೌಲಿಗೆ ಎರಡೂ ದೇಶಗಳ ಸಹಿ ಬಿತ್ತು. ಬೇರೆ ದೇಶಗಳ ಸಹಿ ಸರಕುಗಳಿಗೆ ವಿಧಿಸದ ಯಾವ ಸುಂಕವನ್ನೂ ಈ ದೇಶಗಳು ಪರಸ್ಪರವಾಗಿ ವಿಧಿಸುವುದಿಲ್ಲವೆಂಬುದು ಈ ಕೌಲಿನ ಮುಖ್ಯ ಸೂತ್ರ. ಈ ಸೂತ್ರ ಅನಂತರ ಇತರ ಅನೇಕ ಕೌಲುಗಳಿಗೆ ತಳಹದಿಯಾಯಿತು. 1870ರ ಮತ್ತು 1880ರ ದಶಕಗಳಲ್ಲಿ ಮುಕ್ತ ವ್ಯಾಪಾರ ತತ್ತ್ವಕ್ಕೆ ಮತ್ತೆ ಪ್ರಾಮುಖ್ಯ ತಪ್ಪಿತಾದರೂ 1860ರಲ್ಲಿ ಸಹಿ ಹಾಕಲಾದ ಕೌಲು ಕಾಬ್ಡೆನನ ಹಿರಿಯ ಸಾಧನೆಗಳಲ್ಲೊಂದು.

1860ರ ಅನಂತರ ಕಾಬ್ಡೆನನ ಗಮನ ಸೆಳೆದ ವಿಚಾರವೆಂದರೆ ಅಮೆರಿಕನ್ ಅಂತರ್ಯುದ್ಧ. ಅಲ್ಲಿ ಯಾವ ಪಕ್ಷವನ್ನು ವಹಿಸಬೇಕೆಂಬ ಬಗ್ಗೆ ಕಾಬ್ಡೆನ ಮೊದಮೊದಲು ನಿರ್ಣಯಿಸಲಾರನಾಗಿದ್ದ. ಅನತಿಕಾಲದಲ್ಲೇ ಇವನ ನೈತಿಕ ಬೆಂಬಲ ಉತ್ತರದ ಪಕ್ಷಕ್ಕೆ ದೊರಕಿತು.

ನಿಧನ[ಬದಲಾಯಿಸಿ]

ಎಡೆಬಿಡದ ಹೋರಾಟ, ಬಿಡುವಿಲ್ಲದ ಸಂಧಾನ, ದುಡಿಮೆ-ಇವುಗಳಿಂದಾಗಿ ಕಾಬ್ಡೆನನ ಆರೋಗ್ಯ ಕೆಟ್ಟಿತು. ಪ್ಯಾರಿಸಿನ ಚಳಿಗಾಲದ ಹವ ಇವನಿಗೆ ವಿರೋಧಿಸಿತು. ಕಾಬ್ಡೆನನ ಜೀವನದ ಕೊನೆಯ ಐದು ವರ್ಷಗಳಲ್ಲಿ ಇವನ ಆರೋಗ್ಯ ತೀರ ಅಸಮರ್ಪಕವಾಗಿತ್ತು. ಹಾಗೂ ಕಾಬ್ಡೆನ್ ಪಾರ್ಲಿಮೆಂಟಿನ ಅಧಿವೇಶನಕ್ಕೆ ಹಾಜರಾಗಿ ಯುದ್ಧಕಾರ್ಯಗಳಿಗೆ ಸಂಬಂಧಿಸಿದ ವೆಚ್ಚದ ಸೂಚನೆಯೊಂದಕ್ಕೆ ವಿರೋಧವಾಗಿ ಮತ ನಿಡಿದ. ಆದರೆ ಇವನ ಮುದಿದೇಹ ಶ್ರಮವನ್ನು ಸಹಿಸಲಿಲ್ಲ. 1865ರ ಏಪ್ರಿಲ್ 2ರಂದು ಕಾಬ್ಡೆನ್ ದೈವಾಧೀನನಾದ.

ಪ್ರಾಮುಖ್ಯತೆ[ಬದಲಾಯಿಸಿ]

ಕಾಬ್ಡೆನ್ 19ನೆಯ ಶತಮಾನದ ಮಧ್ಯವರ್ಗದ ಪ್ರತಿನಿಧಿಸ್ವರೂಪ. ಕೈಗಾರಿಕಾ ಕ್ರಾಂತಿಯ ಶಿಶು. ಆ ಕ್ರಾಂತಿಯಿಂದುದ್ಭವಿಸಿದ ಸಮಸ್ಯಾವಿಶೇಷಗಳಿಗೆಲ್ಲ ಮುಕ್ತ ಆರ್ಥಿಕ ಸ್ವಾತಂತ್ರ್ಯವೇ ಮದ್ದೆಂಬುದು ಇವನ ಭಾವನೆಯಾಗಿತ್ತು. ಈ ಭಾವನೆಯನ್ನು ಈತ ಪರಮಾವಧಿಗೆ ಕೊಂಡೊಯ್ದ. ಪ್ರತಿಯೊಬ್ಬನಿಗೂ ಅವನವನ ಹಿತವನ್ನು ಸಾಧಿಸಿಕೊಳ್ಳುವ ಅವಕಾಶವಿರಲಿ. ಆಗ ಯಾರೂ ಯಾರ ಹಿತಕ್ಕೂ ವ್ಯತಿರಿಕ್ತವಾಗಿರುವುದು ಸಾಧ್ಯವಿಲ್ಲ-ಎಂಬುದು ಇವನ ವಾದಸಾರ. ಕಾರ್ಖಾನೆ ಕಾನೂನನ್ನೂ ಕೂಡ ಇವನು ವಿರೋಧಿಸಿದ. ಸರ್ಕಾರ ಇಂಥ ಕ್ಷೇತ್ರಗಳಲ್ಲಿ ಪ್ರವೇಶಿಸಬಾರದೆಂಬುದು ಕಾಬ್ಡೆನನ ಭಾವನೆ. ಕಾರ್ಮಿಕ ಸಂಘಗಳಿಗೂ ಕಾಬ್ಡೆನ್ ವಿರೋಧಿಯಾಗಿದ್ದ. ಮಧ್ಯವರ್ಗದ ಸಂಘತನೆಗಾಗಿಯೇ ಕಾಬ್ಡೆನ್ ಶ್ರಮಿಸಿದ್ದು. ಧಾನ್ಯ ಕಾಯಿದೆಗಳ ರದ್ದಿಗಾಗಿ ನಡೆಸಿದ ಚಳವಳಿ ಕೂಡ ಮಧ್ಯಮವರ್ಗದ ಚಳವಳಿಯೆಂದೇ ಇವನ ಭಾವನೆಯಾಗಿತ್ತು. ಊಳಿಗಮಾನ್ಯವ್ಯವಸ್ಥೆಯ ಆಡಳಿತವನ್ನು ಅಳಿಸಿ ಮಧ್ಯಮವರ್ಗಕ್ಕೆ-ವರ್ತಕರು ಮತ್ತು ತಯಾರಿಕೆದಾರರಿಗೆ- ಆಡಳಿತಾಧಿಕಾರ ಹಸ್ತಾಂತರವಾಗಲು ನಿಮಿತ್ತವಾದವನೀತ. ಆಗಿನ ಕಾಲದ ಆರ್ಥಿಕ ಹಿತಗಳನ್ನು ನೈತಿಕ ಸೂತ್ರಗಳಾಗಿ ಪರಿವರ್ತಿಸಿ, ಅವನ್ನು ಮಧ್ಯಮವರ್ಗಕ್ಕೆ ಬೋಧಿಸಿ, ಅವುಗಳ ಮೂಲಕ ಅಂತರರಾಷ್ಟ್ರೀಯ ಶಾಂತಿ ಸೌಹಾರ್ದಗಳ ಮೆಟ್ಟಲು ಕಟ್ಟಲು ಯತ್ನಿಸಿದ ಅಧ್ವರ್ಯುಗಳಲ್ಲಿ ಕಾಬ್ಢೆನ್ ಪ್ರಮುಖ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ರಿಚರ್ಡ್ ಕಾಬ್ಡೆನ್]]


ಉಲ್ಲೇಖಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

[೧] [೨] [೩] [೪]

  1. http://www.victorianweb.org/history/cobden.html
  2. http://spartacus-educational.com/PRcobden.htm
  3. https://en.wikiquote.org/wiki/Richard_Cobden
  4. https://www.encyclopedia.com/people/history/british-and-irish-history-biographies/richard-cobden