ಶ್ರೀ ರಾಮಾಯಣ ದರ್ಶನಂ
"ಶ್ರೀ ರಾಮಾಯಣ ದರ್ಶನಂ"ವು ಮಹಾಕಾವ್ಯವಾದ ರಾಮಾಯಣವನ್ನು[೧]ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.[೨].
ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ. ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪುವ ಸೃಜಿಸಿದ’ ಮಹಾಕೃತಿಯೂ ಹೌದು. 'ಬಹಿರ್ಘಟನೆಯಂ ಪ್ರತಿಕೃತಿಸುವ ಲೌಕಿಕ ಚರಿತ್ರೆ ಮಾತ್ರವಲ್ಲದೆ, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ’ವೂ ಹೌದು. ಸುಮಾರು ಇಪ್ಪತ್ತೆಂಟು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಈ ಕಾವ್ಯ ರಚಿತವಾಗಿದೆ. 1949ರಲ್ಲಿ ಮೊದಲ ಭಾಗ ಮತ್ತು 1951ರಲ್ಲಿ ಎರಡನೆಯ ಭಾಗ ಪ್ರಕಟವಾದವು. ನಂತರ, ಎರಡೂ ಭಾಗಗಳನ್ನು ಸೇರಿಸಿ ಒಂದೇ ಗ್ರಂಥವನ್ನಾಗಿಸಿ ಪ್ರಕಟಿಸಲಾಯಿತು. ಇದುವರೆಗೆ ಸುಮಾರು 20ಕ್ಕು ಹೆಚ್ಚಿನ ಮರುಮುದ್ರಣಗಳಾಗಿವೆ. ಕಾವ್ಯದ ವಾಚನ, ವ್ಯಾಖ್ಯಾನಗಳಿಗೆ ಸಂಬಂದಿಸಿದಂತೆ ಹಲವಾರು ಧ್ವನಿಮುದ್ರಿಕೆಗಳು ಹೊರಬಂದಿವೆ. ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡು ಸಹೃದಯ ಓದುಗರನ್ನು ಸಂಪಾದಿಸಿದೆ.
ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪುರಸ್ಕಾರವನ್ನೂ ಒದಗಿಸಿಕೊಟ್ಟ ಕೃತಿರತ್ನವೂ ಇದಾಗಿದೆ. ಮಹಾಕಾವ್ಯದ ನಡೆಗೆ ಅನ್ವಯವಾಗುವಂತೆ ಸರಳರಗಳೆಯನ್ನು ಪುನರ್ ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಲಲಿತ ರಗಳೆಯ ಬಂಧದಲ್ಲಿ ಅಂತ್ಯ ಪ್ರಾಸವನ್ನು ತ್ಯಜಿಸಿ ಸರಳ ರಗಳೆಯಾಗಿ ಪರಿವರ್ತಿಸಿ ಮಹಾಛಂದಸ್ಸನ್ನು ಕವಿ ನಿರ್ಮಿಸಿಕೊಂಡಿದ್ದಾರೆ. ಕಾವ್ಯದ ನಡೆಗೆ ಹಲವಾರು ಮಹೋಪಮೆಗಳನ್ನೂ ಕವಿ ಬಳಸಿದ್ದಾರೆ. ಹೀಗೆ, ಪ್ರಸ್ತುತಿ, ಛಂದಸ್ಸು, ಅಲಂಕಾರ, ಯುಗ ಧರ್ಮ ಹೀಗೆ ಎಲ್ಲಾ ವಿಷಯಗಳಲ್ಲೂ ಇದೊಂದು ಆಚಾರ್ಯ ಕೃತಿಯೆನಿಸಿದೆ.
ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳ ಅಡಿಯಲ್ಲಿ ವಿಸ್ತರಿಸಿರುವ, ಒಟ್ಟು ಐವತ್ತು ಸಂಚಿಕೆಗಳಲ್ಲಿ, ಒಟ್ಟು ೨೨೨೯೧ ಸಾಲುಗಳ ಮಹಾಕಾವ್ಯ ಅಡಕವಾಗಿದೆ. ಕೃತಿಯ ಆರಂಭದಲ್ಲೇ, ಕವಿಯು ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಕಾವ್ಯವನ್ನು ಅರ್ಪಣೆ ಮಾಡಿದ್ದಾರೆ. ನಿತ್ಯ ಸತ್ಯವನ್ನು ಸಾರುವ ಕಾವ್ಯೋದ್ದೇಶವನ್ನು ಕೆಳಗಿನಂತೆ ಸ್ಪಷ್ಟಪಡಿಸಿದ್ದಾರೆ.
ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ!
ಹಳೆಯ ಕಥೆ ಹೊಸ ಯುಗಧಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಮಿಲ್ಟನ್ ಕವಿಯ ʼಪ್ಯಾರಡೈಸ್ ಲಾಸ್ಟ್ʼ ʼಪ್ಯಾರಡೈಸ್ ರಿಗೇನ್ಡ್ʼ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ -ಎಂದು ರಾಷ್ಟ್ರಕವಿ ಗೋವಿಂದ ಪೈ ಅವರು ಹೇಳಿದ್ದರೆ, ಶ್ರೀ ದೇವೇಂದ್ರ ಕುಮಾರ ಹಕಾರಿಯವರು ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ʼಶ್ರೀರಾಮಾಯಣ ದರ್ಶನಂʼ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ ಎಂದಿದ್ದಾರೆ.
ಅರ್ಪಣೆ
[ಬದಲಾಯಿಸಿ]ಮಹಾಕಾವ್ಯದ ಆರಂಭದಲ್ಲಿ, ಕವಿ ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡುವ ಮೂಲಕ ಕಾವ್ಯದ ಮೂಲ ನಿತ್ಯ ಸತ್ಯವನ್ನು ಸಾರುತ್ತ ಕಾವ್ಯೋದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಶ್ರೀ ವೆಂಕಣ್ಣಯ್ಯನವರಿಗೆ
ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.
ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,
ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ
ಧನ್ಯನಂ ಮಾಡಿ. ನೀಮುದಯರವಿಗೈತಂದು
ಕೇಳಲೆಳಸಿದಿರಂದು. ಕಿರುಗವನಗಳನೋದಿ
ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ
ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ ;
ರಾಮಾಯಣಂ ಅದು ವಿರಾಮಾಯಣಂ ಕಣಾ !”
ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ ;
ದಿಟದ ಮನೆಗೈದಿದಿರಿ !
ಇದೊ ಬಂದಿರುವೆನಿಂದು
ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ
ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ :
ಸಂಘಕೆ ಮಹಾಧ್ಯಕ್ಷರಲ್ತೆ ನೀಂ ? ಕಿರಿಯನಾಂ
ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ !
ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್
ಆಲಿಸಾ ಗುರುಕೃಪೆಯ ಶಿಷ್ಯ ಕೃತಿ ಸಂಕೀರ್ತಿಯಂ :
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ !
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ !
ವಾಗರ್ಥ ರಥವೇರಿ, ಭಾವದಗ್ನಿಯ ಪಥಂ
ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ
ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು
ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ !
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ ;-
ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;-
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ
ದೀಪ್ಯ ದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್ !
ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್ !
ಸಂಪುಟಗಳು
[ಬದಲಾಯಿಸಿ]ನಾಲ್ಕು ಸಂಪುಟಗಳನ್ನು ೫ ಸಂಚಿಕೆಗಳಲ್ಲಿ ಒಟ್ಟು ೨೨೨೯೧ ಸಾಲುಗಳಲ್ಲಿ ಬರೆದಿದ್ದಾರೆ.
ಅಯೋಧ್ಯಾ ಸಂಪುಟಂ
[ಬದಲಾಯಿಸಿ]- ಕವಿಕ್ರತು ದರ್ಶನಂ (೭೧೪)
- ಶಿಲಾ ತಪಸ್ವಿನಿ (೬೮೭)
- ಮಮತೆಯ ಸುಳಿ ಮಂಥರೆ (೬೨೯)
- ಊರ್ಮಿಳಾ (೫೯೩)
- ಭರತಮಾತೆ (೩೦೮)
- ಅಗ್ನಿಯಾತ್ರೆ (೩೪೨)
- ಚಿತ್ರಕೂಟಕೆ (೪೪೦)
- ಕುಣಿದಳುರಿಯ ಊರ್ವಶಿ (೨೫೦)
- ಪಾದುಕಾ ಕಿರೀಟಿ (೬೪೦)
- ಅತ್ರಿಯಿಂದಗಸ್ತ್ಯಂಗೆ (೪೭೯)
- ಪಂಚವಟಿಯ ಪರ್ಣಕುಟಿ (೪೧೧)
ಕಿಷ್ಕಿಂದಾ ಸಂಪುಟಂ
[ಬದಲಾಯಿಸಿ]- ಲಂಕೇಶನೊಲಿಸಿದನು ಮಾರೀಚನಂ (೪೩೮)
- ಓ ಲಕ್ಷ್ಮಣಾ! (೯೦೭)
- ಶಬರಿಗಾದನು ಅತಿಥಿ ದಾಶರಥಿ (೩೮೫)
- ಅತ್ತಲಾ ಕಿಷ್ಕಿಂಧೆಯೊಳ್ (೧೮೮)
- ಪೂಣ್ದೆನಗ್ನಿಯೆ ಸಾಕ್ಷಿ! (೪೧೬)
- ನೀಂ ಸತ್ಯವ್ರತನೆ ದಿಟಂ! (೪೬೫)
- ಸಂಸ್ಕೃತಿ ಲಂಕಾ (೩೧೧)
- ನಾನಕ್ಕನೆನ್ ನಿನಗೆ, ತಂಗೆ! (೨೧೨)
- ಸುಗ್ರೀವಾಜ್ಞೆ (೫೮೩)
- ಇರ್ದುದು ಮಹೇಂದ್ರಾಚಲಂ (೧೦೯೮)
- ಸಾಗರೋಲ್ಲಂಘನಂ (೪೪೧)
- ದಶಶಿರ ಕನಕಲಕ್ಷ್ಮಿ (೩೪೮)
ಲಂಕಾ ಸಂಪುಟಂ
[ಬದಲಾಯಿಸಿ]- ಕನಕಲಂಕಾನ್ವೇಷಣಂ (೭೫೨)
- ವನಮಂ ಪೊಕ್ಕನಶೋಕಮಂ (೨೯೪)
- ಕಂಡನಾ ಹದಿಬದೆಯರಧಿದೇವಿಯಂ (೩೫೩)
- ಅಶ್ರುಗಂಗೋತ್ರಿ (೭೧೭)
- ಕಿವಿಗೊಟ್ಟನವನಿಜಾ ರಮಣಂ (೨೯೪)
- ರಣವ್ರತರ್ ವಹ್ನಿರಂಹರ್ (೨೯೭)
- ಅತ್ತಲಾ ದೈತ್ಯ ಸಭೆಯೊಳ್ (೬೧೮)
- ನಿನ್ನಮಗಳಲ್ತೆನ್ನವಳ್ ಅನಲೆ! (೨೩೨)
- ಮರಣಮಥವಾ ಶರಧಿತರಣಂ! (೪೫೪)
- ಶುಕಂ ಸಾರಣಂವೆರಸಿ (೨೩೪)
- ಸಫಲಮಾಯ್ತಾ ರಾಯಭಾರಂ (೧೬೬)
- ಸೈನ್ಯ ಗುಪ್ತಿ (೩೦೫)
- ಸ್ವಪ್ನದೇವಿಗೆ ತಪೋಲಕ್ಷ್ಮಿ (೩೨೨)
- ಅದ್ವಿತೀಯಮಾ ದ್ವಿತೀಯಂ ದಿನಂ (೪೭೦)
ಶ್ರೀ ಸಂಪುಟಂ
[ಬದಲಾಯಿಸಿ]- ಕುಂಭಕರ್ಣನನೆಬ್ಬಿಸಿಮ! (೪೩೩)
- ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ! (೫೨೨)
- ದೂರಮಿರದಿನ್ ಸುಗತಿ! (೨೬೮)
- ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ (೬೬೧)
- ನೀಂ ಮಹಚ್ಛಿಲ್ಪಿ ದಿಟಂ! (೩೭೨)
- ಶ್ರೀರಾಮ ರಾವಣ ಚಿತ್‌ತಪಸ್‌ಶ್ರೀ (೪೬೧)
- ದಶಾನನ ಸ್ವಪ್ನಸಿದ್ಧಿ (೩೩೦)
- ಅರಾವಣಂ ವಾ ಅರಾಮಂ ದಿಟಂ! (೫೦೦)
- ಸೆರೆ ಸಿಲ್ಕಿದನೊ ವೈರಿ! (೨೬೨)
- ದೈತ್ಯನೇರ್ದನ್ ಚೈತ್ಯಮಂಚಮಂ (೩೮೫)
- ರಯಗೆ ಕರೆದೊಯ್, ಓ ಅಗ್ನಿ! (೬೦೮)
- ತಪಸ್ಸಿದ್ಧಿ (೪೫೮)
- ಅಭಿಷೇಕ ವಿರಾಟ್ ದರ್ಶನಂ (೨೩೮)
ಕೆಲವು ಅಭಿಪ್ರಾಯಗಳು
[ಬದಲಾಯಿಸಿ]ಯುಗದ ಕವಿಗೆ ಜಗದ ಕವಿಗೆ ಶ್ರೀ ರಾಮಾಯಣ ದರ್ಶನದಿಂದಲೇ ಕೈ ಮುಗಿದ ಕವಿಗೆ - ಮಣಿಯದವರು ಯಾರು? ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ ಕವನ ತತಿಗೆ ತಣಿಯದವರು ಆರು? ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ ಕವಿಯ ಜತೆಗೆ ಕುಣಿಯದವರು ಆರು? ಕನ್ನಡಿಸಲಿ ಶಿವ ಜೀವನ ಮುನ್ನಡೆಸಲಿ ಯುವ-ಜನ-ಮನ ಇದೆ ಪ್ರಾರ್ಥನೆ ನಮಗೆ ತಮವೆಲ್ಲಿದೆ ರವಿಯಿದಿರಿಗೆ? ಉತ್ತಮ ಕವಿ ನುಡಿ-ಚದುರಗೆ ಚಾರುತ್ವದ ಕುಂದಣದಲಿ ಚಾರಿತ್ರ್ಯದ ರತ್ನ ಚಾತುರ್ಯದ ಮಂತಣದಲಿ ಸತ್ಸಂಗದ ಯತ್ನ ಇದೆ ತೃಪ್ತಿಯು ನಿಮಗೆ - ದ.ರಾ. ಬೇಂದ್ರೆ
ಹಳೆಯ ಕಥೆ ಹೊಸ ಯುಗಧರ್ಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ, ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೇ ಒಂದು ಅನನ್ಯವಾದ ಸ್ಥಾನವಿದೆ. ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ ‘ಪ್ಯಾರಡೈಸ್ ರೀಗೇನ್ಡ್’ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ! - ಗೋವಿಂದ ಪೈ
ಐರೋಪ್ಯರಿಗೆ ಈ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗುಣಧರ್ಮ ತಿಳಿದಿದ್ದರೆ ನೋಬೆಲ್ ಪಾರಿತೋಷಕಕ್ಕೆ ಅದನ್ನು ಬಿಟ್ಟರೆ ಯಾವ ಕೃತಿಯೂ ಅರ್ಹವಲ್ಲ ಎಂದು ಅವರು ನಿರ್ಧರಿಸುತ್ತಿದ್ದರು. - ಪಾಟೀಲ ಪುಟ್ಟಪ್ಪ
The Vision and the rhetoric of this poem (Sri Ramayana Darshanam) have been enriched by wealth borrowed from epics of all times and all nations and yet are strikingly original. ....ಇಲ್ಲಿ ಬರುವ ಅತಿಪ್ರಾಕೃತಿಕ ಉದ್ದೇಶ, ದೃಷ್ಟಿ, ವಾಕ್ಸಂಪತ್ತಿ, ಪ್ರಾಚೀನ ಕಾವ್ಯಗಳ ಕಳೆಗಳನ್ನೆಲ್ಲಾ ತುಂಬಿಸಿಕೊಂಡು ಸ್ವಪ್ರಜ್ಞಾಲಂಕೃತವಾಗಿದೆ. ದರ್ಶನ ವೈವಿಧ್ಯವೇ ಯುಗಧರ್ಮವಾಗಿರುವ ಇಪ್ಪತ್ತನೆಯ ಶತಮಾನವನ್ನು ಯಾವ ಒಂದು ಕೃತಿಯೂ ಸಂಪೂರ್ಣವಾಗಿ ಪ್ರತಿನಿಧಿಸುವುದು ಅಸಾಧ್ಯ. ಆದರೆ ಭಾರತೀಯ ಸಂಸ್ಕೃತಿಯ ಮೂಲಗಳಲ್ಲೊಂದಾದ ರಾಮಾಯಣ ಕಥೆಯಲ್ಲಿ ತನ್ನ ಸಮನ್ವಯ ದೃಷ್ಟಿ ಮೂಲಕ ಹೊಸ ಚೈತನ್ಯವನ್ನು ತುಂಬಲೆತ್ನಿಸುವ ಶ್ರೀರಾಮಾಯಣ ದರ್ಶನಂ ಸಾರ್ಥಕ ಕೃತಿ ಎಂದೆನಿಸಿಕೊಳ್ಳುತ್ತದೆ. - ವಿ. ಸೀತಾರಾಮಯ್ಯ
ಶ್ರೀ ಕುವೆಂಪುರವರು ತಮ್ಮ ಮಹಾಕೃತಿಯಲ್ಲಿ ತಮ್ಮದೇ ಆದ ಒಂದು ಜಾಡಿನಲ್ಲಿ ಸಾಗಿ ರಾಮಾಯಣ ದರ್ಶನವನ್ನು ವಿರಚಿಸಿ ಕೀರ್ತಿ ಶೀಖರವನ್ನೇ ಮುಟ್ಟಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲಿರುವ ಒಂದೊಂದು ಕೀಳ್ಮೆಯ ಪಾತ್ರವನ್ನೂ ವಿಕಾಸದತ್ತ ಎಳೆದು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಮಂಗನಿಂದ ಮಾನವನಾದರೆ ಕೀಳೇ? ನಾಳೆ ಮೇಲಕ್ಕೇಕೆ ಏರಬಾರದು? ಎಂಬುದನ್ನು ತೋರಿಸಿದ್ದಾರೆ; ಅಲ್ಲದೆ ವಾಸ್ತವಿಕ ಚಿತ್ರಣಗಳ ಸೊಬಗನ್ನು ನಾವಲ್ಲಿ ಧಾರಾಳವಾಗಿ ಕಾಣಬಹುದು. ಅಂತೂ ಇದೊಂದು ವಿನೂತನ ಸೃಷ್ಟಿ; ಕಾಲಕ್ಕೆ ತಕ್ಕಂತಹ ವೈಚಾರಿಕ ನೋಟ. ಹೀಗಾಗಿ ನಿಜವಾಗಿಯೂ ರಾಮಾಯಣ ದರ್ಶನವೊಂದು ಮಹಾಕಾವ್ಯ. ರಾಷ್ಟ್ರಕವಿ ಕುವೆಂಪುರವರು ರಾಷ್ಟ್ರೀಯರೆಲ್ಲ ಹೆಮ್ಮೆಪಡತಕ್ಕಂತಹ ಮಹಾಕವಿ ಎಂಬುದಂತೂ ನಿರ್ವಿವಾದ. - ತಿರುಕ
ರಾಮಾಯಣ ದರ್ಶನಂ ಮಹಾಕಾವ್ಯ ನಮ್ಮ ಜನರ ಎಚ್ಚರಿಕೆಯ ಮತ್ತು ಆಳವಾದ ಅಧ್ಯಯನಕ್ಕೆ ಅರ್ಹವಾದ ಕಾವ್ಯವೆಂಬುದು ನನ್ನ ಅಭಿಮತ. ಅದರ ನಿರರ್ಗಳವಾದ ಕಾವ್ಯರಮ್ಯತೆ ಅದರ ಪ್ರಥಮಗುಣ. ಅದರ ವಾಚನ ಶ್ರವಣ ಒಂದು ಕಡೆಯೂ ಬೇಸರಿಕೆಯುಂಟುಮಾಡದೆ, ವಾಚಕನನ್ನೂ ಶ್ರೋತೃವನ್ನೂ ಕುತೂಹಲ ಮತ್ತು ಸುಖಾನುಭವದ ರಸದ ಅಲೆಗಳ ಮೇಲೆ ತೇಲಿಸಿಕೊಂಡು ಹೋಗುತ್ತದೆ.... ರಾಮಾಯಣ ದರ್ಶನ ಕಾವ್ಯವನ್ನು ನಾವು ಚೆನ್ನಾಗಿ ಅಧ್ಯಯನ ಮಾಡಬೇಕು; ಅದನ್ನು ಇತರ ರಾಮಾಯಣಗಳೊಂದಿಗೆ - ಕಂಬ, ತುಳಸಿ, ಆಂಧ್ರ ವಿಶ್ವನಾಥ ಸತ್ಯನಾರಾಯಣರ ರಾಮಾಯಣ ಕಲ್ಪವೃಕ್ಷಮು - ಮುಂತಾದವುಗಳೊಡನೆ ತೋಲನ ಮಾಡಬೇಕು. ಗುಣದೋಷಗಳನ್ನು ತೂಗಿ ನೋಡಬೇಕು. ನಿಷ್ಪಕ್ಷವಾದ ವಿಮರ್ಶೆ ಮಾಡಬೇಕು. ಆ ಕಾವ್ಯಕ್ಕೆ ಇದು ನಮ್ಮಿಂದ ನ್ಯಾಯವಾಗಿ ಸಲ್ಲಬೇಕಾದ ಕರ್ತವ್ಯ. - ಗೋರೂರು ರಾಮಸ್ವಾಮಿ ಅಯ್ಯಂಗಾರ್
ಸಂಸ್ಕೃತದಿಂದ ಕನ್ನಡಕ್ಕೆ ಒದಗತಕ್ಕ ಸೊಗಸು ಎಂಥದು ಎಂಬುದಕ್ಕೆ ಕುವೆಂಪು ಅವರ ಕಾವ್ಯ ಉತ್ತಮ ನಿದರ್ಶನ. ‘ಶ್ರೀರಾಮಾಯಣ ದರ್ಶನಂ’ ಅದನ್ನು ಸಾಧಿಸಿ ತೋರಿಸಿದೆ. - ತೀ.ನಂ.ಶ್ರೀ.
‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಸರ್ವವ್ಯಾಪಿ ‘ದರ್ಶನ’ದಲ್ಲಿಯೇ ಅದರ ಸಾರ್ವಕಾಲೀನ ಪ್ರಜ್ಞೆ ಸಂಯೋಗಗೊಂಡಿದೆ.... ಕೃತಿಯ ದರ್ಶನ ವಿಚಾರವಾಗಿ ಈವರೆಗೆ ನಡೆದಿರುವ, ಮುಂದೆ ನಡೆಯಲಿರುವ, ಸಮಾಲೋಚನೆಗಳಲ್ಲಿ ಈ ವಿ?ಂಂiಂಂzಂ ವಿವೇಚನೆ ಅಂಗಭೂತವಾಗಿ ಅನಿವಾರ್ಯವಾಗಿ ಇದ್ದೇ ಇರುತ್ತದೆ. ‘ಶ್ರೀರಾಮಾಯಣ ದರ್ಶನಂ’ ಕೃತಿಯಲ್ಲಿ ನವೋನವೀನವಾಗಿ ಉಇಚಿಂ?ಂUಇಂಂಡಿgಂಂವ ಆ ಸರ್ವ ಶುಭೋದಯ ‘ದರ್ಶನ’ವನ್ನು ಸಾರ್ವಕಾಲೀನ ಪ್ರಜ್ಞೆಯುಳ್ಳ ‘ರಸಋಷಿ’ ಮಾತ್ರ ಒಂದು ಕಾವ್ಯ ಪ್ರತಿಮೆಯ ರೂಪದಲ್ಲಿ ಕಂಡರಿಸಬಲ್ಲನು. - ಪ್ರೊ|| ಎಂ.ವಿ. ಸೀತಾರಾಮಯ್ಯ
ಕುವೆಂಪು ಅವರ ಪರಿಣತ ತಪಶ್ಯಕ್ತಿಗೆ, ಪಾರದರ್ಶಿತ್ವಕ್ಕೆ, ನವನವೋನ್ಮೇಷಶಾಲಿನಿಯಾದ ಪ್ರತಿಭಾ ಶಕ್ತಿಗೆ, ನವೋಜ್ಜ್ವಲ ಪಾಂಡಿತ್ಯಕ್ಕೆ ಶಾಶ್ವತಸಾಕ್ಷಿಯೆಂಬಂತೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಅವತಾರವಾಗಿದೆ. ಆಗಿನ ಜನಮನದ ಅಭೀಪ್ಸೆ ಶ್ರೀರಾಮನನ್ನು ಭೂಮಿಗೆಳೆದಂತೆ ಈಗಿನ ಜನಮನದ ಅಭೀಪ್ಸೆ ಶ್ರೀರಾಮಾಯಣದರ್ಶನ’ದ ಅವತಾರಕ್ಕೆ ಕಾರಣವಾಗಿದೆ..... ಕುವೆಂಪು ಅವರ ವಿಶ್ವಮಾನವ ಸಂದೇಶಕ್ಕೆ ‘ಶ್ರೀರಾಮಾಯಣ ದರ್ಶನಂ’ ಕಾವ್ಯಭಾಷೆಯಂತೆ ಇರುವುದರಿಂದ ಇದರ ಗ್ರಹಿಕೆಗೆ ಆ ಸಂದೇಶದ ಪೂರ್ಣಾಭ್ಯಾಸವೂ ಅನುಕೂಲವಾಗುತ್ತದೆ. - ದೇಜಗೌ
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ಶ್ರೀರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠಕೃತಿ.ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಇಂಂ?ಂuಇ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ’ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು. - ಕೆ. ಸಚ್ಚಿದಾನಂದನ್ ಮಲೆಯಾಳಿ ಕವಿ
ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ. ಜಾಳು ಜಾಳಾದ, ಲಘು ಈಡಿಪಸ್ ಕಾಂಪ್ಲೆಕ್ಸ್ ಅನುಭವಗಳನ್ನೇ ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಪರಿಭಾವಿಸಿ, ಹಸಿಬಿಸಿ ಅಪಕ್ವ ಭಾಷೆ ಭಾವನೆಗಳನ್ನು ಕಾವ್ಯಾನುಭವವೆಂದು ಬಗೆದ, ಕೆಲವು ಸಲ ಆಳವಿದ್ದು ವ್ಯಾಪ್ತಿಯಿಲ್ಲದ, ವ್ಯಾಪ್ತಿಯಿದ್ದು ಸಮಗ್ರತೆಯನ್ನು ಸ್ಪರ್ಶಿಸದ, ತಾವು ಬರೆದುದೇ ಕಾವ್ಯವೆಂದು ಬೆನ್ನು ತಟ್ಟಿ, ತಟ್ಟಿಸಿಕೊಳ್ಳುವ ಕೆಲವರಿಗೆ ‘ಶ್ರೀರಾಮಾಯಣ ದರ್ಶನಂ’ ಕಾವ್ಯದ ಮಹತಿ ಎಟುಕದೆ ಹೋದರೆ ಅಚ್ಚರಿಯಿಲ್ಲ.... ಚಿರಂತನ ಮೌಲ್ಯಗಳ ಅಖಂಡ ಜೀವನ ದರ್ಶನದ ವಿರಳ ಸಾಹಿತ್ಯ ಸಾಧನೆಗಳಲ್ಲಿ ಉಜ್ವಲವಾಗಿ ಹೊಳೆಯುವ, ಕನ್ನಡ ಸಾರಸ್ವತ ಪ್ರಪಂಚದ ಶಾಶ್ವತ ಕೃತಿ ‘ಶ್ರೀರಾಮಾಯಣ ದರ್ಶನಂ’. - ದೇವೇಂದ್ರ ಕುಮಾರ ಹಕಾರಿ
ಶ್ರೀ ಕುವೆಂಪು ಜಯಘೋಷ ದೆಹಲಿ, ಕವಿಗಿತ್ತಿರುವ ಅಕೆಡೆಮಿಯ ಬಹುಮಾನ ಮಿಗಿಲೇನು ನಮ್ಮೀ ಮಹಾಕವಿ ಕುವೆಂಪುವಿಗೆ? ತನ್ನ ಹಿರಿಮೆಯ ನೆಲದ ಜನಮನದ ಜಂiಂಂWಇಂಂ?ಂ-- ದೌನ್ನತ್ಯಕ್ಕೆರಿಪುದೇ ಈವೊಂದು ಹಿರಿ ಕೊಡುಗೆ? ಅಜ್ಞಾತ ಮಿತ್ರನಿಂದಕುಟಿಲ ಮನಸ್ಕನಿಂ ದರ್ಪಿಸುವ ಸಂಸ್ತುತಿಯ ರೂಪದಿಂ ಬಂಗಾಳ, ಭಕ್ತಿ ಪ್ರಣಾಮಮಂ ಸಂತಸದಿ ಸಲಿಸುತಿದೆ ಶ್ರೀ ರಾಮಾಯಣ ದರ್ಶನಂ ಮೇರುಕೃತಿಗೆ! -ನರೇಂದ್ರ ದೇವ್, ಕೋಲ್ಕತ್ತ
ವೈಯಕ್ತಿಕವಾಗಿ ಹೇಳುವುದಾದರೆ ನಾನು ಹಲವು ಭಾಷೆಗಳ ರಾಮಾಯಣಗಳನ್ನು ಓದಿದ್ದೇನೆ. ಅದು ಮೈಥಿಲಿ ಶರಣಗುಪ್ತರ ʻಸಾಕೇತʼ ಇರಬಹುದು; ತೆಲುಗಿನ ವಿಶ್ವನಾಥ ಸತ್ಯನಾರಾಯಣರ ಪ್ರಸಿದ್ಧವಾದಂತಹ ಪ್ರೌಢ ಚಂಪೂ ಕಾವ್ಯ ರಾಮಾಯಣ ಕಲ್ಪವೃಕ್ಷ ಇರಬಹುದು; ಹಾಗೆಯೇ ಬೇರೆ ಭಾಷೆಗಳ ರಾಮಾಯಣಗಳಿರಬಹುದು, ಕೃತ್ತಿವಾಸನ ರಾಮಾಯಣ ಇರಬಹುದು; ಮರಾಠಿಯಲ್ಲಿ ಮೋರೇಪಂಥರೇ ಬರೆದ ಅನೇಕ ಬಗೆಯ ರಾಮಾಯಣಗಳಿರಬಹುದು. ತೆಲುಗಿನ ಇಂದಿನ ರಾಮಾಯಣಗಳಿರಬಹುದು, ತಮಿಳಿನ ಕಂಬರಾಮಾಯಣ ಇರಬಹುದು, ಹಿಂದಿಯ ತುಳಸೀದಾಸರ ರಾಮಾಯಾಣ ಇರಬಹುದು… ಹೀಗೆ ಜೊತೆಗೆ ಸಂಸ್ಕೃತ ಮೂಲದಲ್ಲಿಯೇ ಇರತಕ್ಕಂತಹ ಅನೇಕ ರಾಮಾಯಣಗಳು… ಬೋಜ ಇರಬಹುದು, ಅಭಿನಂದ ಇರಬಹುದು, ಶ್ರವ್ಯಕಾವ್ಯಗಳಂತೆ ಭವಭೂತಿ ಮೊದಲಾದವರು ಬರೆದ ದೃಶ್ಯಕಾವ್ಯಗಳನ್ನೂ ಸಹ ಅವುಗಳ ಮೂಲದಲ್ಲಿಯೇ ಓದಿಕೊಂಡಿದ್ದೇನೆ. ಆದರೆ ಅಲ್ಲೆಲ್ಲಿಯೂ ಕಾಣಸಿಗದಂತಹ ವಿಶಿಷ್ಟ ಮನೋಹರವಾದ ಪ್ರತಿಭೆ, ಕಲ್ಪನಾಶಕ್ತಿ, ಮತ್ತು ಸಂದರ್ಭ ನಿರ್ಮಾಣ ನಾವೀನ್ಯತೆಯನ್ನು ನಾವು ಕುವೆಂಪು ಅವರಲ್ಲಿ ತುಂಬಾ ವಿಶೇಷವಾಗಿ ಕಾಣುತ್ತೇವೆ. ಇದು ಕನ್ನಡದ ಹೆಮ್ಮೆ ಎಂದು ನಾವು ಹೇಳಬೇಕು ಹಾಗೂ ರಾಮಾಯಣಕ್ಕೇ ಸಿಕ್ಕಿರತಕ್ಕಂತಹ ಒಂದು ವಿನೂತನವಾದ ಶೋಭೆ, ತಿರುವು, ಅಲಂಕಾರ ಎಂಬುದನ್ನು ಗಮನಿಸಬೇಕು. ಶತಾವಧಾನಿ ಡಾ. ಆರ್. ಗಣೇಶ
It is single integral ecstatic symphony in 22284 lines, running in to 877 pages in print. The poet was thirty two when he began and forty one when he put down his pen. The achievement is so grand and so disproportionate to the poet’s age that one can only be amazed by his consummate artistry and perfection. Every line is chiseled to attain an incremental harmony, hardly to be met with his lyrics. It converts every situation in to a wonderful sonal structure which perfectly echoes the germ motif. It is not a series of contexts but a single orchestral piece. Every line is a variation of the relevant thematic rhythm. No one could have imagined that Kannada language is capable of this complex musical quality. For the first time in this century Kannada was made a language worthy of Gods. - Shankar Mokashi Punekar
It is possible to identify three main reasons for the importance that Shri Ramayana Darshanam has acquired in the context of Indian literature: Kuvempu’s contribution to the continuation of the Ramayana kavya in Indian literature; the embodiment of a great vision of life based on an awareness of contemporary thought; and the presentation of the traditional mode of the Kannada Mahakavya and its enlargement through incorporation of elements borrowed from world epics. - GS Amur
... The theme is well known story of Rama, transfigured in poet’s vision. The cardinal element of this vision, which the poet calls Darshanam is poet’s (Kuvempu’s) realization that all creation is caused, pervaded, sustained and governed by the cosmic mind. Abounding in metaphors and Homeric similes introduced by the poet himself for the first time in Kannada, the epic brings home the truth that all beings, even the most wicked and sinful are destined to evolve and ultimately attain perfections. - Courtesy: Encyclopedia of Indian Literature Sasay to Zorgot by Madanlal (p4159)
'ರಾಮಾಯಣದರ್ಶನಂ' ಕಾವ್ಯದ ಶೈಲಿಯ ಪರಿಚಯ
[ಬದಲಾಯಿಸಿ]- ಉದಾಹರಣೆಗೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೆಲವು ಸಾಲುಗಳನ್ನು [[ಶಂಕರ ಮೊಕಾಶಿ ಪುಣೇಕರ|ಶಂಕರ ಮೊಕಾಶಿ ಪುಣೇಕರರ ಆಂಗ್ಲ ಅನುವಾದದ ಸಾಲುಗಳ ಜತೆ, ಅರ್ಥಸಹಿತ ಕೆಳಗೆ ಉಲ್ಲೇಖಿಸಿದೆ. ಕಾವ್ಯದ ಮೂಲ ಮತ್ತು ಅನುವಾದದ ಸೊಬಗನ್ನು ನೋಡಬಹುದು:-
- 1.ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆರಂಭದ ಐದು ಸಾಲುಗಳು
- -
- ಶ್ರೀ ರಾಮ ಕಥೆಯಂ ಮಹರ್ಷಿ ನಾರದ ವೀಣೆಯಿಂ
- ಕೇಳ್ದು, ಕಣ್ದಾವರೆಯೊಳಶ್ರುರಸಮುಗುವನ್ನೆಗಂ
- ರೋಮಹರ್ಷಂದಾಳ್ದು ಸಹೃದಯಂ ವಾಲ್ಮೀಕಿ ತಾಂ
- ನಡೆತಂದನಾತ್ಮಸುಖಿ, ಕೇಳ್, ತಮಸಾ ನದೀ ತಟಿಗೆ,
- ತೇಜಸ್ವಿ, ತರುಣಂ ತಪೋವಲ್ಕಲ ವಸ್ತ್ರ ಶೋಭಿ.
- ಅರ್ಥ: ಶ್ರೀರಾಮ ಕಥೆಯನ್ನು ಮಹರ್ಷಿ ನಾರದನ ವೀಣೆಯಿಂದ ಕೇಳಿ, ತಪಸ್ವಿಯೂ, ಸಹೃದಯನೂ, ತೇಜಸ್ವಿಯೂ ಆದ ತರುಣ ವಾಲ್ಮೀಕಿಯು ತನ್ನ ಕಮಲದಂತಹ ಕಣ್ಣುಗಳಲ್ಲಿ ಆನಂದಭಾಷ್ಪಗಳು ಉದುರುವಷ್ಟು ರೋಮಾಂಚನಗೊಂಡನು. ನಾರುಡೆಯನ್ನು ಧರಿಸಿದ್ದ ಅವನು ಆತ್ಮಾನಂದದಿಂದ ಸುಖಿಸುತ್ತಾ ತಮಸಾ ನದಿ ತೀರಕ್ಕೆ ನಡೆದು ಹೊರಟನು)
- ಇಂಗ್ಲಿಷ್ ಅನುವಾದ:-
- Sri Rama’s Tale recited in the dulcet voice
- By Sage Narada, moved poet Valmiki’s heart
- To soulful tears fill his lotus eyes overflowed;
- And hair stood on end from the roots. In profound
- Self-fulfilment, Valmiki, young, radiant, clad
- In ascetic bark, jogged to the banks of Tamasa
- To bathe...[೩]
ಬಾಹ್ಯ ಕೊಂಡಿಗಳು
[ಬದಲಾಯಿಸಿ]www.kannadadeevige.blogspot.in
ಉಲ್ಲೇಖಗಳು
[ಬದಲಾಯಿಸಿ]