ವಿಷಯಕ್ಕೆ ಹೋಗು

ರಕ್ಷಣಾ ಸಚಿವಾಲಯ (ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Republic of India
Ministry of Defence
Emblem of India
Department overview
JurisdictionRepublic of India
HeadquartersSouth Block, ನವ ದೆಹಲಿ
Minister responsible
Websitemod.nic.in

ರಕ್ಷಣಾ ಸಚಿವಾಲಯ (ಎಂಓಡಿ) ವು ಬೃಹತ್ ಪ್ರಮಾಣದ ಯೋಜನಾ ಸಂಪನ್ಮೂಲವನ್ನು ಹೊಂದಿರುವ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸಶಸ್ತ್ರ ಸೇನೆಗಳಿಗೆ ನೇರವಾಗಿ ಸಂಬಂಧಿಸಿದ ಸರ್ಕಾರದ ಎಲ್ಲಾ ಏಜೆನ್ಸಿಗಳು ಮತ್ತು ಕಾರ್ಯಗಳನ್ನು ಸಹಯೋಜಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿರುವ ಭಾರತದ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಇಲಾಖೆಯಾಗಿದೆ.

ಭಾರತೀಯ ಸೈನ್ಯ (ಭಾರತೀಯ ಭೂಸೇನೆ, ಭಾರತೀಯ ವಾಯುಸೇನೆ ಮತ್ತು ಭಾರತೀಯ ನೌಕಾಸೇನೆ ಗಳನ್ನು ಒಳಗೊಂಡು) ಮತ್ತು ಭಾರತೀಯ ಕಿನಾರೆ ಕಾವಲು (ಭಾರತೀಯ ಪ್ಯಾರಾಮಿಲಿಟರಿ ಸೈನ್ಯದ ವಿಭಾಗ) ಇವುಗಳು ರಕ್ಷಣಾ ಸಚಿವಾಲಯದ ಆಡಳಿತಕ್ಕೆ ಒಳಪಟ್ಟಿರುತ್ತವೆ. ರಕ್ಷಣಾ ಸಚಿವಾಲಯವು ರಾಷ್ಟ್ರೀಯ ಸುರಕ್ಷತಾ ಮಂಡಳಿ ಮತ್ತು ಗೃಹ ಇಲಾಖೆಯ ಮಂತ್ರಿಯ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

ರಕ್ಷಣಾ ಸಚಿವಾಲಯವು ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ ಮತ್ತು ಅವುಗಳೆಂದರೆ ರಕ್ಷಣಾ ಇಲಾಖೆ (ಡಿಓಡಿ), ರಕ್ಷಣಾ ಉತ್ಪಾದನೆಯ ಇಲಾಖೆ (ಡಿಡಿಪಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಡಿಆರ್ &ಡಿ)ಇಲಾಖೆ ಮತ್ತು ಮಾಜಿ ಸೈನಿಕರ ಕಲ್ಯಾಣ ಇಲಾಖೆ ಮತ್ತು ಹಾಗೆಯೇ ಹಣಕಾಸು ವಿಭಾಗ.

ಇತಿಹಾಸ

[ಬದಲಾಯಿಸಿ]

ಸೈನ್ಯ ಇಲಾಖೆಯನ್ನು ೧೭೭೬ ರಲ್ಲಿ ಕೊಲ್ಕತ್ತಾದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಪ್ರಧಾನ ಸರ್ಕಾರದಲ್ಲಿ ರಚಿಸಲಾಯಿತು. ಇದರ ಮುಖ್ಯ ಕಾರ್ಯವು ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರದ ವಿವಿಧ ಇಲಾಖೆಗಳು ಜಾರಿ ಮಾಡುವ ಸೈನ್ಯಕ್ಕೆ ಸಂಬಂಧಿಸಿದ ಆದೇಶಗಳನ್ನು ಪರಿಶೀಲಿಸುವುದು ಮತ್ತು ದಾಖಲಿಸುವುದಾಗಿತ್ತು. ಸೈನ್ಯ ಇಲಾಖೆಯು ಪ್ರಾರಂಭದಲ್ಲಿ ಸಾರ್ವಜನಿಕ ಇಲಾಖೆಯ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸೈನಿಕರ ಪಟ್ಟಿಯನ್ನು ನಿರ್ವಹಣೆ ಮಾಡುತ್ತಿತ್ತು.

೧೮೩೩ ರ ವಿಶೇಷಾಧಿಕಾರ ಕಾಯಿದೆಯ ಮೂಲಕ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಆಡಳಿತ ಇಲಾಖೆಯನ್ನು ಮಿಲಿಟರಿ ಇಲಾಖೆಗಳನ್ನು ಒಳಗೊಂಡು ನಾಲ್ಕು ಇಲಾಖೆಗಳಾಗಿ ಮಾನ್ಯ ಮಾಡಲಾಯಿತು ಮತ್ತು ಪ್ರತಿಯೊಂದಕ್ಕೂ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿದ್ದರು. ಪ್ರಾಂತೀಯ ಸೈನ್ಯಗಳನ್ನು ಏಕೈಕ ಭಾರತೀಯ ಸೈನ್ಯವಾಗಿ ಏಕೀಕೃತವಾದ ಏಪ್ರಿಲ್ ೧೮೯೫ ರವರೆಗೆ ಬಂಗಾಳ, ಬಾಂಬೆ ಮತ್ತು ಮದ್ರಾಸ್‌ನ ಪ್ರಾಂತದಲ್ಲಿನ ಸೈನ್ಯವು ಅನುಕ್ರಮ ಪ್ರಾಂತಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಆಡಳಿತ ಅನುಕೂಲಕ್ಕೋಸ್ಕರ, ಅದನ್ನು ನಾಲ್ಕು ತುಕಡಿಗಳಾಗಿ ವಿಭಾಗಿಸಲಾಯಿತು, ಅವುಗಳೆಂದರೆ. ಪಂಜಾಬ್ (ವಾಯುವ್ಯ ಫ್ರಂಟೀಯರ್), ಬಂಗಾಳ (ಬರ್ಮಾ ಒಳಗೊಂಡು), ಮದ್ರಾಸ್ ಮತ್ತು ಬಾಂಬೆ (ಸಿಂಧ್, ಕ್ವೆಟ್ಟಾ ಮತ್ತು ಆಡೆನ್ ಒಳಗೊಂಡು).

ಭಾರತೀಯ ಸೈನ್ಯದ ಪರಮೋಚ್ಛ ಅಧಿಕಾರವು ರಾಜನ ನಿಯಂತ್ರಣಕ್ಕೆ ಒಳಪಟ್ಟು ಗವರ್ನರ್-ಜನರಲ್-ಇನ್-ಕೌನ್ಸಿಲ್ ಅವರ ವಶದಲ್ಲಿತ್ತು ಮತ್ತು ಅಧಿಕಾರವನ್ನು ಭಾರತಕ್ಕಾಗಿನ ವಿದೇಶಾಂಗ ಕಾರ್ಯದರ್ಶಿಯವರು ಪ್ರಯೋಗಿಸುತ್ತಿದ್ದರು. ಮಂಡಳಿಯ ಎರಡು ಸದಸ್ಯರು ಸೈನ್ಯ ಸಂಬಂಧಿತ ವ್ಯವಹಾರಗಳಿಗೆ ಜವಾಬ್ದಾರಿಯಾಗಿದ್ದರು, ಅವರಲ್ಲಿ ಒಬ್ಬರು ಎಲ್ಲಾ ಆಡಳಿತ ಮತ್ತು ಆರ್ಥಿಕ ವಿಷಯಗಳನ್ನು ಮೇಲ್ವಿಚಾರಣೆ ಮಾಡಿದ ಮಿಲಿಟರಿ ಸದಸ್ಯರಾಗಿದದ್ದರೆ ಮತ್ತೊಬ್ಬರು ಎಲ್ಲಾ ಕಾರ್ಯಾಚರಣೆ ಸಂಬಂಧಿತ ವಿಷಯಗಳ ಜವಾಬ್ದಾರಿಯನ್ನು ವಹಿಸಿದ್ದ ಕಮಾಂಡರ್-ಇನ್-ಚೀಫ್ ಆಗಿದ್ದರು. ೧೯೦೬ ರ ಮಾರ್ಚ್‌ನಲ್ಲಿ ಮಿಲಿಟರಿ ಇಲಾಖೆಯನ್ನು ರದ್ದುಪಡಿಸಲಾಯಿತು ಮತ್ತು ಅದರ ಬದಲು ಎರಡು ಪ್ರತ್ಯೇಕ ಇಲಾಖೆಗಳಾದ ಸೈನ್ಯ ಇಲಾಖೆ ಮತ್ತು ಮಿಲಿಟರಿ ಪೂರೈಕೆ ಇಲಾಖೆಗಳನ್ನು ಸ್ಥಾಪಿಸಲಾಯಿತು. ೧೯೦೯ ರ ಏಪ್ರಿಲ್‌ನಲ್ಲಿ ಮಿಲಿಟರಿ ಪೂರೈಕೆ ಇಲಾಖೆಯನ್ನು ರದ್ದುಪಡಿಸಲಾಯಿತು ಮತ್ತು ಅದರ ಕಾರ್ಯಗಳನ್ನು ಸೈನ್ಯ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಂಡಿತು. ೧೯೩೮ ರ ಜನವರಿಯಲ್ಲಿ ಸೈನ್ಯ ಇಲಾಖೆಯನ್ನು ರಕ್ಷಣಾ ಇಲಾಖೆಯಾಗಿ ಮರುನೇಮಿಸಲಾಯಿತು. ಆಗಸ್ಟ್ ೧೯೪೭ ರಲ್ಲಿ ರಕ್ಷಣಾ ಇಲಾಖೆಯು ಕ್ಯಾಬಿನೆಟ್ ಸಚಿವರ ಅಡಿಯಲ್ಲಿ ರಕ್ಷಣಾ ಸಚಿವಾಲಯವಾಯಿತು.

ಸ್ವಾತಂತ್ರ್ಯಾನಂತರ ಸಂಸ್ಥೆಯ ಸ್ಥಾಪನೆ ಮತ್ತು ಕಾರ್ಯಗಳು

[ಬದಲಾಯಿಸಿ]

೧೯೪೭ ರ ಆಗಸ್ಟ್ ೧೫ ರಂದು ಪ್ರತಿ ಸೈನ್ಯವನ್ನು ಅದರ ಸ್ವಂತ ಕಮಾಂಡರ್ ಇನ್ ಚೀಫ್ ಅವರ ಅಡಿಯಲ್ಲಿ ನೆಲೆಗೊಳಿಸಲಾಯಿತು. ಸಂವಿಧಾನದ ಅಡಿಯಲ್ಲಿ, ಸಶಸ್ತ್ರ ಸೇವೆಗಳ ಸರ್ವೋಚ್ಛ ಸೇನಾಧಿಪತಿಗಳು ರಾಷ್ಟ್ರಪತಿಯವರಾಗಿರುತ್ತಾರೆ. ೧೯೫೫ ರಲ್ಲಿ, ಕಮಾಂಡರ್ ಇನ್ ಚೀಫ್ ಪದವಿಯನ್ನು ರದ್ದುಗೊಳಿಲಾಯಿತು ಮತ್ತು ಮೂರು ಸೇವಾ ಮುಖ್ಯಸ್ಥರನ್ನು ಭೂಸೇನಾ ಮುಖ್ಯಸ್ಥ, ನೌಕಾ ಸೇನಾ ಮುಖ್ಯಸ್ಥ ಮತ್ತು ವಾಯುಸೇನಾ ಮುಖ್ಯಸ್ಥರೆಂದು ನಿಯುಕ್ತಗೊಳಿಸಲಾಯಿತು. ೧೯೬೨ ರ ನವೆಂಬರ್‌ನಲ್ಲಿ, ರಕ್ಷಣಾ ಸಾಮಗ್ರಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ನಿರ್ವಹಣೆ ಮಾಡಲು ರಕ್ಷಣಾ ಉತ್ಪಾದನೆಯ ಇಲಾಖೆಯನ್ನು ಸ್ಥಾಪಿಸಲಾಯಿತು. ೧೯೬೫ ರ ನವೆಂಬರ್‌ನಲ್ಲಿ, ರಕ್ಷಣಾ ಉದ್ದೇಶಗಳಿಗೆ ಅಗತ್ಯವಾದ ಪರ್ಯಾಯ ಬಳಕೆಗಳ ಆಮದು ಮಾಡಿಕೊಳ್ಳುವ ಯೋಜನೆಗಳ ಪೂರ್ವಸಿದ್ಧತೆ ಮತ್ತು ನಿರ್ವಹಣೆಗಾಗಿ ರಕ್ಷಣಾ ಪೂರೈಕೆಗಳ ಇಲಾಖೆಯನ್ನು ರಚಿಸಲಾಯಿತು. ಈ ಎರಡು ಇಲಾಖೆಗಳನ್ನು ನಂತರ ವಿಲೀನಗೊಳಿಸಿ ರಕ್ಷಣಾ ಉತ್ಪಾದನೆ ಮತ್ತು ಪೂರೈಕೆಗಳ ಇಲಾಖೆಯಾಗಿ ರೂಪಿಸಲಾಯಿತು. ೨೦೦೪ ರ ಜನವರಿಯಲ್ಲಿ, ರಕ್ಷಣಾ ಉತ್ಪಾದನೆ ಮತ್ತು ಪೂರೈಕೆಗಳ ಇಲಾಖೆಯನ್ನು ರಕ್ಷಣಾ ಉತ್ಪಾದನೆ ಇಲಾಖೆಯಾಗಿ ಮರುಹೆಸರಿಸಲಾಯಿತು. ರಕ್ಷಣಾ ಮಂತ್ರಿಗಳಿಗೆ ಸೈನ್ಯದ ಉಪಕರಣಗಳು, ಸಂಶೋಧನೆ ಮತ್ತು ಸಶಸ್ತ್ರ ಸೇನೆಗಳು ಬಳಸುವ ಉಪಕರಣದ ವಿನ್ಯಾಸದ ಕುರಿತಂತೆ ಸಲಹೆ ನೀಡಲು ವೈಜ್ಞಾನಿಕ ಸಲಹೆಗಾರರೊಬ್ಬರನ್ನು ನೇಮಿಸಲಾಯಿತು. ೧೯೮೦ ರಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯನ್ನು ರಚಿಸಲಾಯಿತು. ಹೆಚ್ಚಿನದಾಗಿ, ೨೦೦೪ ರಲ್ಲಿ ಮಾಜಿ-ಸೈನಿಕರ ಕಲ್ಯಾಣ ಇಲಾಖೆಯನ್ನು ರಚಿಸಲಾಯಿತು.

ಸಶಸ್ತ್ರ ಸೈನ್ಯಗಳು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಐಕ್ಯತೆಯನ್ನು ಖಾತ್ರಿ ಪಡಿಸಿಕೊಳ್ಳಲು ಜವಾಬ್ದಾರಿಯುತವಾಗಿರುತ್ತವೆ. ಭಾರತದ ರಾಷ್ಟ್ರಪತಿಯವರು ರಾಷ್ಟ್ರದ ಸಶಸ್ತ್ರ ಪಡೆಗಳ ಮಹಾದಂಡನಾಯಕರಾಗಿರುತ್ತಾರೆ. ರಕ್ಷಣಾ ಸಚಿವಾಲಯವು, ರಾಷ್ಟ್ರದ ರಕ್ಷಣೆಯ ಹಿನ್ನೆಲೆಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸಲು ಸಶಸ್ತ್ರ ಪಡೆಗಳಿಗೆ ನೀತಿ ಚೌಕಟ್ಟು ಮತ್ತು ಅನುಕೂಲತೆಗಳನ್ನು ಒದಗಿಸುತ್ತವೆ.

ಪಾತ್ರ ಮತ್ತು ಕಾರ್ಯನಿರ್ವಹಣೆ

[ಬದಲಾಯಿಸಿ]

ರಕ್ಷಣಾ ಸಚಿವಾಲಯವು ಭಾರತೀಯ ಗಣರಾಜ್ಯದ ಆಂತರಿಕ ಮತ್ತು ಬಾಹ್ಯ ಭದ್ರತೆಯ ಜವಾಬ್ದಾರಿಯನ್ನು ಹೊಂದಿದೆ. ಸಶಸ್ತ್ರ ಸೇನೆಗಳ ಮಹಾದಂಡನಾಯಕರು ಭಾರತದ ರಾಷ್ಟ್ರಪತಿಯವರಾಗಿರುತ್ತಾರೆ. ರಾಷ್ಟ್ರೀಯ ರಕ್ಷಣೆಯ ಜವಾಬ್ದಾರಿಯು ಸಚಿವ ಸಂಪುಟದ್ದಾಗಿರುತ್ತದೆ. ಇದನ್ನು ರಕ್ಷಣಾ ಸಚಿವಾಲಯದ ಮೂಲಕ ನಿರ್ವಹಿಸಲಾಗುತ್ತದೆ. ರಕ್ಷಣಾ ಸಚಿವಾಲಯವು ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಸಶಸ್ತ್ರ ಸೇನೆಗಳು ಅವುಗಳ ಜವಾಬ್ದಾರಿಗಳನ್ನು ನೆರವೇರಿಸಲಾಗುವಂತೆ ನೀತಿ ಚೌಕಟ್ಟು ಮತ್ತು ಅನುಕೂಲತೆಗಳನ್ನು ಒದಗಿಸುತ್ತದೆ. ರಕ್ಷಣಾ ಸಚಿವರು ರಕ್ಷಣಾ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ. ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸರ್ಕಾರದಿಂದ ನೀತಿ ನಿರ್ದೇಶನಗಳನ್ನು ಪಡೆಯುವುದು ಮತ್ತು ಅವುಗಳನ್ನು ಜಾರಿಗೆ ತರಲು ಸೇವಾ ಮುಖ್ಯಕೇಂದ್ರಗಳಿಗೆ, ಅಂತರ್-ಸೇವಾ ಸಂಸ್ಥೆಗಳು, ಉತ್ಪಾದನೆ ಸಂಸ್ಥಾಪನೆಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಮಾಹಿತಿ ನೀಡುವುದು ರಕ್ಷಣಾ ಸಚಿವಾಲಯದ ಮೂಲಭೂತ ಕಾರ್ಯವಾಗಿದೆ. ನಿಗದಿಪಡಿಸಿದ ಸಂಪನ್ಮೂಲಗಳ ಮಿತಿಯೊಳಗೆ ಸರ್ಕಾರದ ನೀತಿ ನಿರ್ದೇಶನಗಳ ಜಾರಿ ಮತ್ತು ಅನುಮೋದಿತ ಕಾರ್ಯಕ್ರಮಗಳ ನಿರ್ವಹಣೆಯನ್ನು ಖಾತ್ರಿ ಪಡಿಸಿಕೊಳ್ಳುವುದು ರಕ್ಷಣಾ ಸಚಿವಾಲಯಕ್ಕೆ ಅಗತ್ಯವಾಗಿರುತ್ತದೆ.

ಸಂಸ್ಥೆ

[ಬದಲಾಯಿಸಿ]

ರಕ್ಷಣಾ ಸಚಿವಾಲಯವು ಇದೀಗ ನಾಲ್ಕು ಇಲಾಖೆಗಳನ್ನು ಒಳಗೊಂಡಿದ್ದು ಅವುಗಳು ರಕ್ಷಣಾ ಸಚಿವಾಲಯ, ರಕ್ಷಣಾ ಉತ್ಪಾದನೆಯ ಇಲಾಖೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಮತ್ತು ಮಾಜಿ -ಸೈನಿಕರ ಕಲ್ಯಾಣ ಇಲಾಖೆಗಳಾಗಿವೆ. ರಕ್ಷಣಾ ಕಾರ್ಯದರ್ಶಿಯವರು ರಕ್ಷಣಾ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರು ಸಚಿವಾಲಯದಲ್ಲಿ ನಾಲ್ಕು ಇಲಾಖೆಗಳ ಚಟುವಟಿಕೆಗಳನ್ನು ಸಂಯೋಜಿಸುವ ಹೆಚ್ಚುವರಿ ಜವಾಬ್ದಾರಿಯನ್ನೂ ಸಹ ಹೊಂದಿರುತ್ತಾರೆ.

ನಾಲ್ಕು ಮುಖ್ಯ ಇಲಾಖೆಗಳ ಮೂಲಭೂತ ಕಾರ್ಯಚಟುವಟಿಕೆಗಳು ಈ ರೀತಿಯಾಗಿದೆ:

  • ರಕ್ಷಣಾ ಇಲಾಖೆಯು ಇಂಟೆಗ್ರೇಡೆಟ್ ಡಿಫೆನ್ಸ್ ಸ್ಟಾಫ್ (ಐಡಿಎಸ್) ಮತ್ತು ಮೂರು ಸೈನ್ಯಗಳು ಮತ್ತು ವಿವಿಧ ಇಂಟರ್-ಸರ್ವೀಸಸ್ ಆರ್ಗನೈಸೇಶನ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ರಕ್ಷಣಾ ಬಜೆಟ್, ಸಿಬ್ಬಂದಿಯ ವಿಷಯಗಳು, ರಕ್ಷಣಾ ನೀತಿ, ಪಾರ್ಲಿಮೆಂಟ್‌ಗೆ ಸಂಬಂಧಿಸಿದ ವಿಷಯಗಳು, ವಿದೇಶೀ ರಾಷ್ಟ್ರಗಳೊಡನೆ ರಕ್ಷಣಾ ಸಮನ್ವಯ ಮತ್ತು ಎಲ್ಲಾ ಚಟುವಟಿಕೆಗಳ ಸಂಯೋಜನೆಗೆ ಸಹ ಜವಾಬ್ದಾರಿಯಾಗಿರುತ್ತದೆ.
  • ಕಾರ್ಯದರ್ಶಿಯವರು ರಕ್ಷಣಾ ಉತ್ಪಾದನೆ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಇಲಾಖೆಯು, ರಕ್ಷಣಾ ಉತ್ಪಾದನೆ, ಆಮದು ಮಾಡಿಕೊಂಡ ಸಾಮಗ್ರಿಗಳ ಇಂಡೈಜೆನೈಸೇಶನ್, ಸಾಮಗ್ರಿಗಳು ಮತ್ತು ಬಿಡಿಭಾಗಗಳು, ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್‌ನ ಇಲಾಖಾ ಉತ್ಪಾದನೆ ಘಟಕಗಳ ಯೋಜನೆ ಮತ್ತು ನಿಯಂತ್ರಣೆ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳ (ಡಿಪಿಸಿಯುಗಳು) ಕಾರ್ಯನಿರ್ವಹಣೆಗಳನ್ನು ನೋಡಿಕೊಳ್ಳುತ್ತದೆ.
  • ಕಾರ್ಯದರ್ಶಿಯವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಇವರು ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹಾಗಾರರೂ ಸಹ ಆಗಿರುತ್ತಾರೆ. ಮಿಲಿಟರಿ ಸಾಧನಗಳು ಮತ್ತು ಸೈನಿಕ ವ್ಯವಸ್ಥಾಪನಾ ತಂತ್ರಗಳ ವೈಜ್ಞಾನಿಕ ಅಂಶಗಳ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನು ನೀಡುವುದು ಮತ್ತು ಸೈನ್ಯವು ಬಳಸುವ ಸಾಧನಕ್ಕೆ ಸಂಶೋಧನೆ, ವಿನ್ಯಾಸದ ಸೂತ್ರಗಳನ್ನು ಮತ್ತು ಅಭಿವೃದ್ಧಿ ಯೋಜನೆಗಳನ್ನು ತಿಳಿಸುವುದು ಇದರ ಕರ್ತವ್ಯವಾಗಿದೆ.
  • ಹೆಚ್ಚುವರಿ ಕಾರ್ಯದರ್ಶಿಯವರು ಮಾಜಿ ಸೈನಿಕ ಕಲ್ಯಾಣ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಇಲಾಖೆಯು ಎಲ್ಲಾ ಮಾಜಿ ಸೈನಿಕರಿಗೆ ಸಂಬಂಧಿಸಿದ ಮರು-ಪಾವತಿಸುವಿಕೆ, ಸಮಾಜಕಲ್ಯಾಣ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ವಿಷಯಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

ರಕ್ಷಣಾ ಕಾರ್ಯದರ್ಶಿ (ಹಣಕಾಸು) ಇವರು ರಕ್ಷಣಾ ಸಚಿವಾಲಯದ ಹಣಕಾಸು ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಇವರು ರಕ್ಷಣಾ ಬಜೆಟ್‌ನ ಖರ್ಚನ್ನು ಒಳಗೊಂಡ ಪ್ರಸ್ತಾಪಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ರಕ್ಷಣಾ ಆಯವ್ಯಯಗಳ ಆಂತರಿಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳಿಗೆ ಜವಾಬ್ದಾರರಾಗಿರುತ್ತಾರೆ. ಕೊನೆಯಲ್ಲಿ ಸೂಚಿಸಿದ ಕಾರ್ಯಗಳಿಗೆ, ಇವರಿಗೆ ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ (ಸಿಜಿಡಿಎ) ಇವರು ಸಹಾಯ ಮಾಡುತ್ತಾರೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
  • ಭಾರತೀಯ ನೌಕಾ ಅಕಾಡೆಮಿ

ಬಾಹ್ಯ ಕೊಂಡಿಗಳು

[ಬದಲಾಯಿಸಿ]