ವಿಷಯಕ್ಕೆ ಹೋಗು

ಉಗಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯುಗಾಂಡ ಇಂದ ಪುನರ್ನಿರ್ದೇಶಿತ)
ಉಗಾಂಡ
Jamhuri ya Uganda
ಜಮ್ಹುರಿ ಯ ಉಗಾಂಡ
Flag of ಉಗಾಂಡ
Flag
Coat of arms of ಉಗಾಂಡ
Coat of arms
Motto: "For God and My Country"
(ಆಂಗ್ಲ ಭಾಷೆಯಲ್ಲಿ: ದೇವರಿಗೆ ಮತ್ತು ದೇಶಕ್ಕೆ)
Anthem: Oh Uganda, Land of Beauty
Location of ಉಗಾಂಡ
Capitalಕಂಪಾಲ
Largest cityರಾಜಧಾನಿ
Official languagesಆಂಗ್ಲ, ಸ್ವಾಹಿಲಿ
Demonym(s)Ugandan
Governmentಪ್ರಜಾತಾಂತ್ರಿಕ ಗಣರಾಜ್ಯ
• ರಾಷ್ಟ್ರಪತಿ
ಯೊವೆರಿ ಮುಸೆವೆನಿ
• ಪ್ರಧಾನ ಮಂತ್ರಿ
ಅಪೊಲೊ ನ್ಸಿಬಂಬಿ
ಸ್ವಾತಂತ್ರ್ಯ 
• ಗಣರಾಜ್ಯ
ಅಕ್ಟೋಬರ್ ೯ ೧೯೬೨
• Water (%)
15.39
Population
• ಜುಲೈ ೨೦೦೫ estimate
27,616,0001 (39th)
• ೨೦೦೨ census
24,442,084
GDP (PPP)೨೦೦೫ estimate
• Total
$45.97 billion (೮೩ನೇ)
• Per capita
$1,700 (153rd)
HDI (೨೦೦೪)0.502
low · 145th
Currencyಉಗಾಂಡಾದ ಶಿಲ್ಲಿಂಗ್ (UGX)
Time zoneUTC+3 (EAT)
• Summer (DST)
UTC+3 (not observed)
Calling code256
Internet TLD.ug
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.
2Rank based on 2005 figures.
3 006 from Kenya and Tanzania.

ಉಗಾಂಡ ಗಣರಾಜ್ಯ ಪೂರ್ವ ಆಫ್ರಿಕಾದ ಒಂದು ಭೂಆವೃತ ದೇಶ. ಪೂರ್ವಕ್ಕೆ ಕೀನ್ಯಾ, ಉತ್ತರಕ್ಕೆ ಸುಡಾನ್, ಪಶ್ಚಿಮಕ್ಕೆ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ, ನೈರುತ್ಯಕ್ಕೆ ರ್ವಾಂಡ ಮತ್ತು ದಕ್ಷಿಣಕ್ಕೆ ತಾಂಜೇನಿಯ ದೇಶಗಳಿವೆ. ಉಗಾಂಡ ತನ್ನ ದಕ್ಷಿಣ ಪ್ರದೇಶದಲ್ಲಿ ವಿಕ್ಟೊರಿಯ ಸರೋವರದ ಬಹುಬಾಗವನ್ನು ಹೊಂದಿದೆ. ಉಗಾಂಡವು ಮಧ್ಯ ಆಫ್ರ್ರಿಕದ ಪೂರ್ವದಲ್ಲಿರುವ ಒಂದು ಗಣರಾಜ್ಯ. ದಕ್ಷಿಣ ಅಕ್ಷಾಂಶ 10 ಯಿಂದ ಉತ್ತರ ಅಕ್ಷಾಂಶ 40 ಮತ್ತು ಪು.ರೇ. 290-350 ಗಳ ನಡುವೆ ಇರುವ ದೇಶ. ಉತ್ತರದಲ್ಲಿ ಸೂಡಾನ್, ಪೂರ್ವದಲ್ಲಿ ಕೀನ್ಯ, ದಕ್ಷಿಣದಲ್ಲಿ ಟಾಂಜಾನಿಯ (ತಾನ್ಜನಿಯ) ಮತ್ತು ರುವಾಂಡ, ಪಶ್ಚಿಮದಲ್ಲಿ ಕಾಂಗೋ ಗಣರಾಜ್ಯ ಇವುಗಳ ನಡುವೆ ಇರುವ ಈ ದೇಶದ ಒಟ್ಟು ವಿಸ್ತೀರ್ಣ 2,36,037 ಚಕಿಮೀ. ಜನಸಂಖ್ಯೆ 22,824,000 (2002). ರಾಜಧಾನಿ ಕಂಪಾಲ ಜನಸಂಖ್ಯೆ 7,73,463 (2002). ಈ ರಾಷ್ಟ್ರದ ಮಧ್ಯದಲ್ಲಿನ ಆಧಿಪತ್ಯದ ಹೆಸರಾದ ಬುಗಾಂಡವೇ 19ನೆಯ ಶತಮಾನದಲ್ಲಿ ಸ್ವಾಹಿಲಿ ಭಾಷೆ ಆಡುವವರ ಬಾಯಲ್ಲಿ ಉಗಾಂಡ ಆಯಿತು.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಪೂರ್ವ ಪಶ್ಚಿಮ ಅಂಚುಗಳಲ್ಲಿ ಪರ್ವತ, ನಡುವೆ 1,300 ಮೀ ಎತ್ತರದ ಪ್ರಸ್ಥಭೂಮಿ. ದಕ್ಷಿಣದ ವಿಕ್ಟೋರಿಯ ಸರೋವರ ಈ ವಿಶಾಲ ಪ್ರಸ್ಥಭೂಮಿಯ ಅಂಚಿಗೆ ತಾಕಿ, ಈ ದೇಶದ ಗಡಿಯನ್ನೂ ದಾಟಿ ದಕ್ಷಿಣಕ್ಕೆ ವಿಸ್ತರಿಸಿದೆ. ಆಲ್ಬರ್ಟ್, ಎಡ್ವರ್ಡ್ ಮತ್ತು ಜಾರ್ಜ್ ಇಲ್ಲಿರುವ ಇತರೆ ಸರೋವರಗಳು. ಪರ್ವತಶಿಖರಗಳ ಪೈಕಿ ಎಲ್ಗನ್ (4321.ಮೀ) ಮಾರ್ಗೊರಿಟ ಪರ್ವತ (5,109.ಮೀ) ಎತ್ತರವಿದೆ. ಪೂರ್ವದಲ್ಲೂ ರೂವಂಜೋರಿ ಪಶ್ಚಿಮದಲ್ಲೂ ಇವೆ. ರೂವಂಜೋರಿ ಹಿಮಾಚ್ಛಾದಿತವಾದದ್ದು. ನೈಲ್ ನದಿಯ ಉಗಮ ಈ ದೇಶದಲ್ಲೇ ಅನೇಕ ನದಿಗಳು ಇಲ್ಲಿ ಆಳವಾದ ಕಣಿವೆ ಕೊರೆದಿವೆ.

ವಾಯುಗುಣ, ಸಸ್ಯವರ್ಗ

[ಬದಲಾಯಿಸಿ]

ಸಮಭಾಜಕವೃತ್ತದ ಆಚೀಚೆ ಹಬ್ಬಿರುವ ಈ ದೇಶದ ಬಹು ಭಾಗ ಎತ್ತರ. ಆದ್ದರಿಂದ ಒಟ್ಟಿನಲ್ಲಿ ವಾಯುಗುಣ ಹಿತಕರ. ವಿಕ್ಟೋರಿಯ ಸರೋವರದ ಬಳಿಯಲ್ಲಿ ಮಳೆ ಧಾರಾಳ ವರ್ಷವಿಡೀ 116 ಸೆಂಮೀ ಮಳೆ ಆಗುತ್ತದೆ. ಇಲ್ಲಿನ ಉಷ್ಣತೆ ಎಲ್ಲ ತಿಂಗಳೂ ಹೆಚ್ಚುಕಡಿಮೆ ಒಂದೇ ಮಟ್ಟ. (23ಲಿ ಸೆ.) ಉಳಿದ ಕಡೆಗಳಲ್ಲಿ ಮಳೆ ವರ್ಷಕ್ಕೆ 100 ಸೆಂಮೀ.ಗಳಿಗಿಂತ ಕಡಿಮೆ. ಹೆಚ್ಚು ನೀರು ಸರಬರಾಜಿರುವ ಉಗಾಂಡ ಪ್ರಸ್ಥಭೂಮಿಯಲ್ಲಿ ಸವನ್ನ ಮಾದರಿಯ ಹುಲ್ಲುಗಾವಲಿದೆ. ಈಗ ಇಲ್ಲಿ ಮಾನವನಿರ್ಮಿತ ಬಾಳೆತೋಟ ಹಬ್ಬುತ್ತಿದೆ. ಪಶ್ಚಿಮದ ಎತ್ತರ ನೆಲದಲ್ಲಿ ತುಂಡು ಹುಲ್ಲು ಒತ್ತಾಗಿ ಬೆಳೆದಿದೆ. ಪರ್ವತದ ಇಳಿಜಾರಿನಲ್ಲಿ ಕಾಡುಗಳಿವೆ. ಈಶಾನ್ಯ ಭಾಗದಲ್ಲಿ ಜಾಲಿ ಮರಗಳ ಬುಡದಲ್ಲಿ ಹುಲ್ಲು ಬೆಳೆಯುತ್ತದೆ.

ಜನಸಾಂದ್ರತೆ, ಉದ್ಯೋಗ

[ಬದಲಾಯಿಸಿ]

ಉತ್ತರದ ಪ್ರಾಂತ್ಯ ಬಹಳ ಹಿಂದುಳಿದಿದೆ. ಸಂಚಾರ ಸಂಪರ್ಕವಿಲ್ಲದೆ ಮರುಭೂಮಿಯ ವಾತಾವರಣದಿಂದ ಕೂಡಿರುವ ಈ ಭಾಗದ ಜನ ದನಕರು ಮತ್ತು ಕುರಿಗಳನ್ನು ಸಾಕುತ್ತಾರೆ. ಪೂರ್ವ ಪ್ರಾಂತ್ಯ ಜನಭರಿತ. ಜನಸಾಂದ್ರತೆ ಚ.ಕೀ.ಗೆ 200ಕ್ಕೂ ಹೆಚ್ಚು. ಬುಗಾಂಡ ಪ್ರಾಂತ್ಯ ಹೆಚ್ಚು ಮುಂದುವರಿದಿದೆ. ವ್ಯವಸಾಯವೂ ದನಕರು ಕುರಿಗಳ ಪೋಷಣೆಯೂ ಇಲ್ಲಿನ ಜನರ ಮುಖ್ಯ ಕಸಬು. ಬಾಳೆಹಣ್ಣು, ನೆಲಗಡಲೆ ಮತ್ತು ಜೋಳ ಮುಖ್ಯ ಆಹಾರ ಬೆಳೆಗಳು. ಕಾಫಿ, ಹತ್ತಿ ಮತ್ತು ಹೊಗೆಸೊಪ್ಪು ಉಗಾಂಡದ ವಾಣಿಜ್ಯ ಬೆಳೆಗಳು. ಹತ್ತಿ, ಕಾಫಿ ಇವು ಮುಖ್ಯವಾದ ವಿದೇಶಿ ವಿನಿಮಯ ಸಂಪಾದಕ ವಸ್ತುಗಳು. ಕಾಫಿ ತೋಟಗಳು ಎಲ್ಗನ್ ಪರ್ವತಗಳ ಇಳಿಜಾರುಗಳಲ್ಲಿವೆ. ದಕ್ಷಿಣ ಮತ್ತು ಪೂರ್ವಭಾಗಗಳಲ್ಲಿ ಉತ್ತಮ ದರ್ಜೆಯ ಉದ್ದ ಎಳೆಯ ಹತ್ತಿ ಬೆಳೆಯುತ್ತದೆ. ರೂವಂಜೋರಿಯ ತಪ್ಪಲು ಪ್ರದೇಶದಲ್ಲಿ ಟೀ ತೋಟಗಳಿವೆ. ಹೆಚ್ಚಾಗಿ ಮಳೆ ಬೀಳುವ ವಿಕ್ಟೋರಿಯ ಸರೋವರದ ಸುತ್ತಮುತ್ತ ಕಬ್ಬು, ಗೆಣಸು, ಅವರೆ ಮತ್ತು ಬಟಾಣಿ ಬೆಳೆಯುತ್ತಾರೆ. ಸಿಮ್ಸಿಮ್ ಎಂಬುದು ಮತ್ತೊಂದು ಪ್ರಮುಖ ಬೆಳೆ. ಮೀನುಗಾರಿಕೆಯೂ ಒಂದು ಮುಖ್ಯ ಉದ್ಯೋಗ. ರೂವಂಜೋರಿ ಪ್ರದೇಶದಲ್ಲಿ ತಾಮ್ರ, ಕೋಬಾಲ್ಟ್‌, ಯುರೇನಿಯಂಗಳೂ ರೆಲೆಂಬಿಯ ಮತ್ತು ಟೋರೋರೋದಲ್ಲಿ ಕಬ್ಬಿಣದ ಅದಿರೂ ಫಾಸ್ಫೇಟುಗಳೂ ದೊರಕುತ್ತವೆ. ಜಿಂಜ ಉಗಾಂಡದ ಪ್ರಮುಖ ಕೈಗಾರಿಕಾಕೇಂದ್ರ. ಕೀನ್ಯ-ಉಗಾಂಡ ರೈಲುಮಾರ್ಗಗಳು ಇಲ್ಲಿ ಕೂಡುತ್ತವೆ. ಹತ್ತಿರದಲ್ಲಿರುವ ಓಪಿನ್ ಜಲಪಾತದಿಂದ ಹೇರಳವಾದ ವಿದ್ಯುತ್ತನ್ನು ತಯಾರಿಸುವುದರಿಂದ ಇಲ್ಲಿ ಈಚೆಗೆ ಕೈಗಾರಿಕೆ ಬೆಳೆದಿದೆ. ಸಿಮೆಂಟ್, ಹತ್ತಿ, ಜವಳಿ, ಸಕ್ಕರೆ, ತಾಮ್ರ ಕೈಗಾರಿಕೆಗಳು ಮುಖ್ಯ. ಅನುಭೋಗ ವಸ್ತುಗಳ ಕೈಗಾರಿಕೆಗಳೂ ಅಲ್ಪ ಪ್ರಮಾಣದಲ್ಲಿ ಸ್ಥಾಪಿತವಾಗಿವೆ. ಪೋರ್ಟ್ಬೆಲ್, ಟರೆವಾರೋ ಮತ್ತು ಬಾಲೆ ಈ ಕಾರ್ಖಾನೆಗಳ ಕೇಂದ್ರಗಳು. ವಿಕ್ಟೋರಿಯ ಸರೋವರದ ದಡದಲ್ಲಿರುವ ಎನ್ಟಿಬ್ಬೆ ಉಗಾಂಡದ ಪ್ರಮುಖ ನಗರ. ಇದು ವಿಮಾನ ನಿಲ್ದಾಣ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ವಾಯುಮಾರ್ಗ ಸಂಪರ್ಕ ಕಲ್ಪಿಸಿದೆ. ಕಂಪಾಲ ಮುಖ್ಯ ವಾಣಿಜ್ಯ ಕೇಂದ್ರ. ಮೊಂಬಾಸದೊಂದಿಗೆ ಇದಕ್ಕೆ ರೈಲ್ವೆ ಸಂಪರ್ಕ ವುಂಟು. ಕಂಪಾಲದ ಬಳಿ ಇರುವ ಮತಾತಿರೆ ಎಂಬುದು ಪೂರ್ವ ಆಫ್ರ್ರಿಕ ವಿಶ್ವವಿದ್ಯಾನಿಲಯ ಕೇಂದ್ರ. (ಎಸ್.ಎಲ್.ಎಂ.; ಎಚ್.ಆರ್.ಡಿ.)

ಆಡಳಿತ ವ್ಯವಸ್ಥೆ

[ಬದಲಾಯಿಸಿ]

ಉಗಾಂಡ ಸ್ವತಂತ್ರ ಸಾರ್ವಭೌಮ ರಾಜ್ಯ. ಬ್ರಿಟಿಷ್ ಕಾಮನ್ವೆಲ್ತಿನ ಸದಸ್ಯ ರಾಷ್ಟ್ರ. ಐದು ವರ್ಷಾವಧಿಗೆ ಆಯ್ಕೆಯಾಗುವ ಅಧ್ಯಕ್ಷನೇ ರಾಷ್ಟ್ರದ ಅಧಿಪತಿ. ಇಂದು ರಾಷ್ಟ್ರೀಯ ಸಭೆಯಲ್ಲಿ ಸಭಾಪತಿಯೂ 332 ಮಂದಿ ಚುನಾಯಿತ ಸದಸ್ಯರೂ ವಿಶೇಷ ರೀತಿಯಲ್ಲಿ ಆಯ್ಕೆಯಾದ 9 ಸದಸ್ಯರೂ ಇದ್ದಾರೆ. ಆಯ್ಕೆಯಾದ ಸದಸ್ಯರ ಪೈಕಿ 21 ಜನ ಉಗಾಂಡದ ಪ್ರತಿನಿಧಿಗಳು. ಈ ಸಭೆಯ ಅಧಿಕಾರಾವಧಿ ಐದು ವರ್ಷ. ರಾಷ್ಟ್ರದ ಅಧ್ಯಕ್ಷ ಅಲ್ಲಿನ ಮಂತ್ರಿಸಂಪುಟದ ಸಲಹೆಯಂತೆ ನಡೆಯುತ್ತಾನೆ. ಸಂಸತ್ತಿಗೆ ಈ ಸಂಪುಟದ ಸಾಮೂಹಿಕ ಹೊಣೆಗಾರಿಕೆಯಿರುತ್ತದೆ. ರಾಷ್ಟ್ರೀಯ ಸಭೆಯಲ್ಲಿ ಬಹುಮತ ಪಡೆದಿರುವಂತೆ ಕಂಡುಬರುವವನನ್ನು ಪ್ರಧಾನ ಮಂತ್ರಿಯನ್ನಾಗಿ ಅಧ್ಯಕ್ಷ ನೇಮಿಸುತ್ತಾನೆ. ರಾಜಕೀಯವಾಗಿ ಉಗಾಂಡವನ್ನು ನಾಲ್ಕು ಆಧಿಪತ್ಯಗಳನ್ನಾಗಿ (ಉಗಾಂಡ, ಅಂಕೋಲೆ, ಬುನ್ಯೋರೊ ಮತ್ತು ಟೋರೊ) ವಿಂಗಡಿಸಲಾಗಿದೆ. ಪ್ರತಿಯೊಂದು ಆಧಿಪತ್ಯವೂ ತನ್ನದೇ ಆದ ಶಾಸನಸಭೆಯನ್ನೂ ಮಂತ್ರಿ ಸಂಪುಟವನ್ನೂ ಹೊಂದಿದೆ. ಜಿಲ್ಲೆಗಳ ಆಡಳಿತ ನೋಡಿಕೊಳ್ಳಲು ಜಿಲ್ಲಾ ಮಂಡಲಿಗಳಿವೆ. ಉಗಾಂಡದ ಉಚ್ಚ ನ್ಯಾಯಾಲಯದ ಕ್ಷೇತ್ರಾಧಿಕಾರ ಇಡೀ ದೇಶಕ್ಕೆ ವ್ಯಾಪಿಸಿದ್ದು. ಬುಗಾಂಡದಲ್ಲಿನ ಉಚ್ಚ ನ್ಯಾಯಾಲಯಕ್ಕೆ ಆ ಆಧಿಪತ್ಯದೊಳಗೆ ಉಗಾಂಡದ ಉಚ್ಚ ನ್ಯಾಯಾಲಯದಷ್ಟೇ ಕ್ಷೇತ್ರಾಧಿಕಾರವುಂಟು. ಉಳಿದ ಆಧಿಪತ್ಯಗಳ ನ್ಯಾಯಾಲಯಗಳಿಗೆ ಇಷ್ಟು ಅಧಿಕಾರವಿಲ್ಲ. ಸಂಪ್ರದಾಯ ನ್ಯಾಯಕ್ಕೆ ಬದಲಾಗಿ ಲಿಖಿತನ್ಯಾಯ ಸ್ಥಾಪಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. *

ಉಗಾಂಡದ ಇತಿಹಾಸ

[ಬದಲಾಯಿಸಿ]

1850ರ ಹಿಂದಿನ ಉಗಾಂಡದ ಇತಿಹಾಸದ ಬಗ್ಗೆ ಲಿಖಿತ ದಾಖಲೆಗಳೇನೂ ಇಲ್ಲ. ವಿಕ್ಟೋರಿಯ ಸರೋವರದ ಉತ್ತರ ಭಾಗದಲ್ಲಿ ಬಲು ಹಿಂದಿನಿಂದಲೂ ಬ್ಯಾಂಟುಗಳು ವಾಸಿಸುತ್ತಿದ್ದಿರಬೇಕು. ನೈಲ್ ಪ್ರದೇಶವಾಸಿಗಳು (ನೈಲೋಟಿಕ್) ಇಲ್ಲಿಗೆ ಬಂದು ಬ್ಯಾಂಟುಗಳೊಂದಿಗೆ ಬೆರೆತರು. ಬಹುಶಃ 15ನೆಯ ಶತಮಾನದಲ್ಲಿ ಪಶ್ಚಿಮ ಉಗಾಂಡಕ್ಕೆ ಹಿಮ ಬುಡಕಟ್ಟಿನ ಜನ ಬಂದರು. ಈ ಜನರದ್ದು ಎತ್ತರ ನಿಲುವು. ಬಿಳಿಯ ತೊಗಲು, ಆಕರ್ಷಕ ರೂಪು. ಈ ದನಗಾಹಿಗಳು ಇಲ್ಲಿಗೆ ಬಂದೊಡನೆಯೆ ಒಡೆಯರಂತೆ ವರ್ತಿಸಿ ಇಲ್ಲಿನ ಮೂಲನಿವಾಸಿ ರೈತ ಜನರನ್ನು ಆಳುಗಳಂತೆ ಕಂಡರು. ಅನಂತರ ಬಂದ ನೈಲ್ ವಾಸಿಗಳಿಗೂ ಇವರಿಗೂ ಆಗಾಗ ಜಗಳವಾಗುತ್ತಿದ್ದುವು. 19ನೆಯ ಶತಮಾನದವರೆಗೆ ಬುನ್ಯೋರೊ-ಕಿಟಾರ ರಾಜ್ಯ ದಕ್ಷಿಣದ ಉಳಿದೆಲ್ಲ ರಾಜ್ಯಗಳಿಗಿಂತ ಅತ್ಯಂತ ಪ್ರಬಲವಾಗಿತ್ತು. ಅದು ತೀರ ಬೆಳೆದು, ಕೊನೆಗೆ ತನ್ನ ಭಾರದಿಂದ ತಾನೇ ಕುಸಿಯಿತು. ಬುನ್ಯೋರೋ-ಕಿಟಾರದ ಆಗ್ನೇಯಕ್ಕಿದ್ದ ಪುಟ್ಟ ರಾಜ್ಯ ಉಗಾಂಡ ಕ್ರಮೇಣ ಪ್ರಬಲವಾಗಿ ನೆರೆ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಉಗಾಂಡದ ಉಚ್ಛ್ರಾಯ ಕಾಲದಲ್ಲಿ ಇಲ್ಲಿಗೆ ಬಂದವರು ಅರಬ್ಬೀ ಜನ ದಂತ ಹಾಗೂ ಗುಲಾಮೀ ವ್ಯಾಪಾರ ಇವರ ಪ್ರಧಾನ ಉದ್ದೇಶ. ಐರೋಪ್ಯ ಸಾಹಸಿಗಳೂ ಸಂಶೋಧಕರೂ ಅನಂತರ ಬಂದರು. ಈ ವೇಳೆಗೆ ಈಜಿಪ್ಟ್‌ ನೈಲ್ ನದಿಯ ಉದ್ದಕ್ಕೂ ತನ್ನ ಪ್ರಾಬಲ್ಯ ಬೆಳೆಸಿಕೊಂಡಿತ್ತು. ಐರೋಪ್ಯ ಕ್ರೈಸ್ತ ಪಾದ್ರಿಗಳ ಮೊದಲ ತಂಡ ಉಗಾಂಡಕ್ಕೆ ಬಂದದ್ದು 1877ರಲ್ಲಿ. ಇವರು ಇಲ್ಲಿನ ರಾಜಕೀಯದಲ್ಲೂ ಕೈಹಾಕಲಾರಂಭಿಸಿದರು. ಸಾಮ್ರಾಜ್ಯಷಾಹಿ ಜರ್ಮನ್ನರಿಗೂ ಇಂಗ್ಲಿಷರಿಗೂ ನಡುವೆ ಸ್ಪರ್ಧೆ ಏರ್ಪಟ್ಟಿತು. 1890ರಲ್ಲಿ ಇವರ ನಡುವೆ ಏರ್ಪಟ್ಟ ಒಪ್ಪಂದದ ಪ್ರಕಾರ ದಕ್ಷಿಣ ಅಕ್ಷಾಂಶ 1ಡಿ. ಯ ಉತ್ತರಕ್ಕಿರುವ ಪ್ರದೇಶದಲ್ಲಿ ಬ್ರಿಟಿಷ್ ಪ್ರಭಾವವಲಯದೊಳಕ್ಕೆ ಬರತಕ್ಕದ್ದೆಂದಾಯಿತು. ಬ್ರಿಟಿಷ್ ಸರ್ಕಾರದ ಪರವಾಗಿ ಈ ಪ್ರದೇಶದ ಆಡಳಿತ ನಿರ್ವಹಿಸುವ ಹೊಣೆ ಹೊತ್ತ ಸಂಸ್ಥೆಯೇ ಬ್ರಿಟಿಷ್ ಈಸ್ಟ್‌ ಆಫ್ರಿಕ ಕಂಪನಿ. ಈ ಕಂಪನಿಯ ಪ್ರತಿನಿಧಿಯಾದ ಕ್ಯಾಪ್ಟನ್ ಲೂಗಾರ್ಡ್ ಈ ಪ್ರದೇಶದ ಮುಖಂಡರುಗಳೊಡನೆ ಕ್ರಮೇಣ ಒಪ್ಪಂದಮಾಡಿ ಕೊಂಡು ಇವನ್ನೆಲ್ಲ ತನ್ನ ಕಂಪನಿಯ ರಕ್ಷಣೆಯ ಕಕ್ಷೆಯೊಳಕ್ಕೆ ಸೇರಿಸಿಕೊಂಡ. ಆದರೆ ಹಣದ ಅಭಾವದಿಂದ ಈ ಕಂಪನಿ ತನ್ನ ಹೊಣೆ ನಿರ್ವಹಿಸಲಾರದೆ ಹೋಯಿತು. ಬ್ರಿಟಿಷ್ ಸರ್ಕಾರ ಈ ಆಯಕಟ್ಟಿನ ಪ್ರದೇಶವನ್ನು ಬಿಟ್ಟುಕೊಡಲೊಲ್ಲದೆ 1894ರಲ್ಲಿ ತಾನೇ ಇದರ ರಕ್ಷಣೆಯ ಭಾರ ಹೊತ್ತುಕೊಂಡಿತು. ಈ ಪ್ರದೇಶದಲ್ಲಿ ಆಗ ಅನೇಕ ಛಿದ್ರಕಾರಕ ಪ್ರವೃತ್ತಿಗಳಿದ್ದುವು. ಅಲ್ಲದೆ ಬ್ರಿಟಿಷ್ ಆಡಳಿತಗಾರರ ವಿರುದ್ಧ ಇದ್ದ ಅಸಮಾಧಾನವೂ ವಿಪರೀತ. ದಂಗೆಗಳು ಸಾಮಾನ್ಯವಾಗಿದ್ದುವು. 20ನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್ ಸರ್ಕಾರ ಈ ಪ್ರದೇಶದ ಮುಖ್ಯ ವಿಭಾಗಗಳ ನಾಯಕರೊಂದಿಗೆ ಕರಾರು ಮಾಡಿಕೊಂಡಿತು. ಅವರು ಬ್ರಿಟಿಷರಲ್ಲಿ ನಿಷ್ಠೆ ತೋರುತ್ತಿರುವ ವರೆಗೂ ಅಧಿಕಾರ ರಕ್ಷಿಸುವುದಾಗಿ ಬ್ರಿಟಿಷ್ ಸರ್ಕಾರ ಭರವಸೆ ನೀಡಲಾಗಿ ಇಲ್ಲಿ ವಾತಾವರಣ ಸ್ವಲ್ಪ ಸುಧಾರಿಸಿತು. 20ನೆಯ ಶತಮಾನದಲ್ಲಿ ಉಗಾಂಡದ ಆರ್ಥಿಕ ಬೆಳೆವಣಿಗೆ ಸಾಧ್ಯವಾದದ್ದು ತೋಟದ ಉದ್ಯಮದಿಂದ. ಅನೇಕ ಮಂದಿ ಐರೋಪ್ಯರು ಇಲ್ಲಿಗೆ ಬಂದು ನೆಲ ಪಡೆದು ಬೆಳೆ ತೆಗೆಯಲಾರಂಭಿಸಿದರು. ಈ ಕಾಲದ ಒಂದು ಮುಖ್ಯ ರಾಜಕೀಯ ಪ್ರಗತಿಯೆಂದರೆ 1921ರಲ್ಲಿ ಇಲ್ಲಿ ಸ್ಥಾಪಿತವಾದ ವಿಧಾನಪರಿಷತ್ತು. ಆದರೆ ಇದರ ಪ್ರಾತಿನಿಧ್ಯ ತೀರ ಸಂಕುಚಿತವಾಗಿದ್ದರಿಂದ ಇದು ದೇಶದ ಮೇಲೆ ಬೀರಿದ ಪ್ರಭಾವ ಅತ್ಯಲ್ಪ. ಇಲ್ಲಿನ ವಾಣಿಜ್ಯ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಿದ್ದವರೆಂದರೆ ಭಾರತೀಯರು. ಐರೋಪ್ಯರಿಗಿದ್ದಷ್ಟೇ ಪ್ರಾತಿನಿಧ್ಯ ಇವರಿಗೆ ದೊರಕಿರಲಿಲ್ಲ. ಆದ್ದರಿಂದ ಇವರು ಅಸಮಾಧಾನಗೊಂಡರು. ಆಫ್ರಿಕನ್ನರಲ್ಲಿ ಮಾತ್ರ ಸಾಕಷ್ಟು ಜಾಗ್ರತೆಯೇ ಇನ್ನೂ ಉದ್ಭವಿಸಿರಲಿಲ್ಲ. ಬುಗಾಂಡದ ಜನ ರಾಜಕೀಯವಾಗಿ ಸ್ವಲ್ಪ ಮುಂದುವರೆದಿದ್ದರಾದರೂ ಅವರಿಗೆ ಅವರದೇ ಆದ ಸಭೆ ಇದ್ದದ್ದರಿಂದ ಇಡೀ ಉಗಾಂಡದ ವಿಧಾನ ಪರಿಷತ್ತಿನಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ. ಈ ಪ್ರದೇಶದ ನಾನಾ ಭಾಗಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಅವರು ಸ್ವಾಗತಿಸಲಿಲ್ಲ. ಎರಡನೆಯ ಮಹಾಯುದ್ಧಕಾಲದಲ್ಲಿ ಹೊರನಾಡಿಗಳೊಂದಿಗೆ ವ್ಯಾಪಾರಕ್ಕೆ ತಡೆಬಿದ್ದದ್ದ ರಿಂದ ಉಗಾಂಡ ಸ್ವಯಂಪೂರ್ಣತೆ ಸಾಧಿಸಲು ಕ್ರಮಕೈಕೊಳ್ಳಬೇಕಾಯಿತು. ದೇಶದಲ್ಲಿ ಹೆಚ್ಚುತ್ತಿದ್ದ ಜಾಗೃತಿಗೆ ಅನುಸಾರವಾಗಿ 1945ರಲ್ಲಿ ಪ್ರಥಮ ಬಾರಿಗೆ ಇಲ್ಲಿನ ದೇಶೀಯರು ವಿಧಾನಪರಿಷತ್ತಿಗೆ ನಾಮಕರಣ ಪಡೆದರು. ಇವರ ಸಂಖ್ಯೆ ಕ್ರಮೇಣ ಹೆಚ್ಚಿತು. 1955ರಲ್ಲಿ ಮಂತ್ರಿಮಂಡಳಿಗೆ ಖಾಸಗಿ ಪ್ರತಿನಿಧಿಗಳನ್ನೂ ಸೇರಿಸಿಕೊಂಡಿದ್ದು ಈ ದೇಶದ ರಾಜಕೀಯ ಬೆಳವಣಿಗೆಯ ಇತಿಹಾಸದಲ್ಲಿ ಇನ್ನೊಂದು ಮುಖ್ಯ ಘಟನೆ. ಕ್ರಮೇಣ ಉಗಾಂಡದ ಜನರಲ್ಲಿ ಸ್ವಾತಂತ್ರ್ಯಪ್ರೇಮ ಬೆಳೆಯಿತು. ಕೆಲವು ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. 1962ರ ಅಕ್ಟೋಬರ್ 9ರಂದು ಉಗಾಂಡ ಸ್ವತಂತ್ರವಾಯಿತು. ಕಬಕ ಮುಟೇಸ ಉಗಾಂಡದ ಪ್ರಥಮ ಅಧ್ಯಕ್ಷ: ಮಿಲ್ಟನ್ ಓಬೋಟೆ ಪ್ರಧಾನಮಂತ್ರಿ. 1966ರ ಫೆಬ್ರವರಿಯಲ್ಲಿ ಓಬೋಟೆ ಸಂವಿಧಾನವನ್ನು ರದ್ದುಗೊಳಿಸಿ ಸಂಪೂರ್ಣ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡ. ಕಬಕ ಮುಟೇಸ ಇಂಗ್ಲೆಂಡಿಗೆ ಓಡಿಹೋದ. ಉಗಾಂಡದಲ್ಲಿ ದಂಗೆ ಉಂಟಾದಾಗ ಓಬೋಟೆ ಅದನ್ನು ಹತ್ತಿಕ್ಕಿ, ಒಂದು ಹೊಸ ಸಂವಿಧಾನವನ್ನು ಜಾರಿಗೆ ತಂದು, ಹಿಂದಿದ್ದ ಸಂಯುಕ್ತ ರಾಷ್ಟ್ರ ಸಂವಿಧಾನವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ. 1967ರಲ್ಲಿ ಅದರ ಸ್ಥಾನದಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು. ಈ ಸಂವಿಧಾನದ ಪ್ರಕಾರ ಓಬೋಟೆ ಉಗಾಂಡದ ಅಧ್ಯಕ್ಷನಾದ. ಉಗಾಂಡದಲ್ಲಿದ್ದ ಪಾಳೆಗಾರರ ಅಧಿಕಾರವನ್ನೆಲ್ಲ ರದ್ದುಪಡಿಸಲಾಯಿತು. (ಎಸ್.ಕೆ.ಎಸ್.) 1971 ರಲ್ಲಿ ಓಬೋಟೆಯನ್ನು ಪದಚ್ಯುತಗೊಳಿಸಿದ ದೇಶದ ಸೇನಾಧಿಪತಿ ಮೇಜರ್ ಜನರಲ್ ಇದಿ ಅಮಿನ್ ಅಧ್ಯಕ್ಷನಾಗಿ ಸೇನಾಡಳಿತ ತಂದ. 1972ರಲ್ಲಿ ಸು. 40,000- 50,000 ದವರೆಗಿನ ಏಷ್ಯ ಸಂಜಾತರನ್ನು ದೇಶದಿಂದ ಹೊರಹಾಕಿದ. ಇವನ ವಿರುದ್ಧವಾಗಿ ನಡೆದ ಸಾವಿರಾರು ಮಂದಿ ದೇಶೀಯರನ್ನು ಕೊಲ್ಲಿಸಿದ. 1978ರಲ್ಲಿ ತಾಂಜೆನೀಯದ ಜೊತೆ ದೇಶದ ಎಲ್ಲೆಯ ಬಗ್ಗೆ ಯುದ್ಧ ಮಾಡಬೇಕಾಗಿ ಬಂತು. 1980 ಡಿಸೆಂಬರಿನ ಚುನಾವಣೆಯಲ್ಲಿ ಓಬೋಟೆಯ ಪಕ್ಷ ಜಯಗಳಿಸಿ ಓಬೋಟೆ ಮತ್ತೆ ಅಧ್ಯಕ್ಷರಾದರು. 1985 ಜುಲೈನಲ್ಲಿ ಜನರಲ್ ಟಿಟೊ ಒಕೆಲ್ಲೊ ಅಧ್ಯಕ್ಷರಾದರು. 1986ರಲ್ಲಿ ಮುಸೇವೆನಿ ಅಧ್ಯಕ್ಷರಾಗಿ ಉಗಾಂಡದಲ್ಲಿ ಶಾಂತಿ ಸ್ಥಾಪಿಸಿದರು. 1996ರ ಚುನಾವಣೆಯಲ್ಲಿ ಮತ್ತೆ ಮುಸೇವೆನಿ ಅಧ್ಯಕ್ಷರಾಗಿ ಚುನಾಯಿತರಾದರು. 2001 ಮಾರ್ಚ್ ನಲ್ಲಿ ಯೊವೆರಿ ಕಗುಟ ಮುಸೇವೆನಿ ಚುನಾವಣೆಯಲ್ಲಿ ಜಯಗಳಿಸಿದರು. 2011 ಫೆಬ್ರವರಿ 18ರಂದು ನಡೆದ ಚುನಾವಣೆಯಲ್ಲಿ ಹೆಚ್ಚು ಮತಗಳಿಂದ ಮುಸೇವೆನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. *

ಉಗಾಂಡದ ಪುರಾತತ್ತ್ವ

[ಬದಲಾಯಿಸಿ]

ಆದಿಮಾನವ ಸಂಸ್ಕೃತಿಯ ಉಗಮ ಮತ್ತು ವಿಕಾಸಕ್ಕೆ ಇಲ್ಲಿ ಅತ್ಯಂತ ಪುರಾತನ ಆಧಾರಗಳು ದೊರಕಿವೆ. ಪ್ರಾಣಿ ಮಾನವನಾಗಿ ವಿಕಾಸಗೊಂಡ ಹೊಸದರಲ್ಲಿ ಅವನಿಂದ ನಿರ್ಮಿತವಾದ ಕಫೂವನ್ ಮತ್ತು ಓಲ್ಡೊವನ್ ಸಂಸ್ಕೃತಿಯ ಉಂಡೆಕಲ್ಲಿನಾಯುಧಗಳು ಇಲ್ಲಿ ದೊರಕಿವೆ. ಪೂರ್ವಶಿಲಾಯುಗದಲ್ಲಿ ಓಲ್ಡೊವನ್ ಸಂಸ್ಕೃತಿಯಿಂದ ಉಗಮಿಸಿದ ಅಬೆವಿಲಿಯನ್ ಅಷೂಲಿಯನ್ ಕೈಗೊಡಲಿ ಮತ್ತು ಚಕ್ಕೆಕಲ್ಲಿನಾಯುಧಗಳು ದೊರಕಿವೆ. ಕೈಕೊಡಲಿ ಸಂಸ್ಕೃತಿಯ ಉತ್ತರಾರ್ಧ ಕಾಲದಲ್ಲಿ ಕ್ಲಿವರ್ ಎಂಬ ಕೊಡಲಿಗಳೂ ಲೆವಾಲ್ವ ರೀತಿಯ ಚಕ್ಕೆಕಲ್ಲಿನಾಯುಧಗಳೂ ಬಳಕೆಗೆ ಬಂದುವು. ಅನಂತರ ಸಣ್ಣ ಅಥವಾ ಮಧ್ಯ ಗಾತ್ರದ, ದ್ವಿಮುಖವಾಗಿ ಚಕ್ಕೆಗಳನ್ನು ತೆಗೆದು ತಯಾರಿಸಿದ ಮೊನಚಾದ ಸಣ್ಣ ಕೈಕೊಡಲಿಗಳನ್ನು ಉಪಯೋಗಿಸುತ್ತಿದ್ದ, ಸ್ಟೀಲ್ ಬೇ ಮತ್ತು ಅಷೂಲಿಯನ್ ಸಂಸ್ಕೃತಿಯಿಂದ ಹುಟ್ಟಿ ಬಂದ, ಸಂಗೋವನ್ ಸಂಸ್ಕೃತಿಗಳು ರೂಢಿಯಲ್ಲಿದ್ದುವು. ಪೂರ್ವಶಿಲಾಯುಗದ ಅಂತ್ಯದಲ್ಲಿ ಮುಗೋಸಿಯನ್ ಸಂಸ್ಕೃತಿ ತಲೆದೋರಿ ಸೂಕ್ಷ್ಮ ಶಿಲಾಯುಧಗಳು ಬಳಕೆಗೆ ಬಂದುವು. ಅನಂತರದ ವಿಲ್ಟನ್ ಮತ್ತು ಲಂಪೆಂಬಾನ್ ಸಂಸ್ಕೃತಿಗಳಲ್ಲಿ ಸೂಕ್ಷ್ಮ ಶಿಲಾಯುಧಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿದ್ದದ್ದಲ್ಲದೆ ಇವು ನವಶಿಲಾಯುಗದ ಸಂಸ್ಕೃತಿಯತ್ತ ಮುನ್ನಡೆಯುವ ಪ್ರವೃತ್ತಿ ವ್ಯಕ್ತಪಡಿಸಿದುವು. ನವಶಿಲಾಯುಗದಲ್ಲಿ ಮುಖ್ಯ ಸಂಸ್ಕೃತಿಗಳಾದ ಗುಂಬಾನ್ ಎ ಮತ್ತು ಬಿ ಸಂಸ್ಕೃತಿಗಳಲ್ಲಿ ಕಲ್ಲಿನ ಪಾತ್ರೆ, ಮಡಕೆ, ನಾನಾವಿಧ ಫಲಕ, ಚಾಕು, ಒರೆಯುವ ಆಯುಧ, ಅರ್ಧ ಚಂದ್ರಾಕೃತಿಯ ಆಯುಧ ಮುಂತಾದ ಸೂಕ್ಷ್ಮಶಿಲಾಯುಧಗಳು ಬಳಕೆಯಲ್ಲಿದ್ದುವು. ಪ್ರ.ಶ. ಪು. ಮೊದಲನೆಯ ಸಹಸ್ರಮಾನದ ಪ್ರಾರಂಭದಲ್ಲಿ ಬಳಕೆಗೆ ಬಂದ ನ್ಜೋರೋನದಿಯ ಮತ್ತು ಅದರ ಹಿಂದಿನ ಗುಂಬಾನ್ ಸಂಸ್ಕೃತಿಗಳ ಕಾಲದಲ್ಲಿ ಈ ಪ್ರದೇಶ ಹಿಂದಿಳಿದಿತ್ತು. ಈಜಿಪ್ಟ್‌ ಮಾರ್ಗವಾಗಿ ಇಲ್ಲಿಗೂ ಪಶುಪಾಲನೆ ಹಾಗೂ ವ್ಯವಸಾಯ ಪದ್ಧತಿಗಳು ಕ್ರಮೇಣ ಹಬ್ಬಿರಬಹುದೆಂದು ಹೇಳಲಾಗಿದೆ. ಕಬ್ಬಿಣದ ಉಪಯೋಗ ಸು.ಪ್ರ.ಶ. 3ನೆಯ ಶತಮಾನದ ಅನಂತರ ಬಂದಿರಬಹುದು. ನವಶಿಲಾಯುಗ ಮತ್ತು ಕಬ್ಬಿಣ ಯುಗಗಳಲ್ಲೂ ಬೇಟೆ ಜನರ ಮುಖ್ಯ ಕಸಬುಗಳಲ್ಲೊಂದಾಗಿತ್ತು. ಅವರು ಕಾಡುಗಳಲ್ಲೂ ಗುಹೆಗಳಲ್ಲೂ ವಾಸಿಸುತ್ತಿದ್ದರು. ಇಲ್ಲಿನ ನಾನಾ ಬುಡಕಟ್ಟುಗಳು ಅಲೆಮಾರಿ ಜೀವನ ನಡೆಸುತ್ತಿದ್ದು 18-19ನೆಯ ಶತಮಾಗಳಲ್ಲಿ ಐರೋಪ್ಯರು ಇಲ್ಲಿ ಕಾಲಿಟ್ಟ ಅನಂತರ ಆಧುನಿಕ ನಾಗರಿಕತೆಯ ಪ್ರವೇಶವಾಯಿತು. (ಬಿ.ಕೆ.ಜಿ.)

"https://kn.wikipedia.org/w/index.php?title=ಉಗಾಂಡ&oldid=1079638" ಇಂದ ಪಡೆಯಲ್ಪಟ್ಟಿದೆ