ಯಾಮಿನಿ ಪರ್ವತ ಶ್ರೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾಮಿನಿ ಪರ್ವತ ಶ್ರೇಣಿ (ಆಂಗ್ಲ: Yamini Mountain Range ) ಇದು ಭಾರತದಲ್ಲಿ ಕಂಡುಬರುವ ಜಗತ್ತಿನ ಅತಿ ಪುರಾತನ ಪರ್ವತ ಶ್ರೇಣಿಗಳಲ್ಲೊಂದು. ಈ ಪರ್ವತ ಶ್ರೇಣಿಯು ಕರ್ನಾಟಕದ ಈಶಾನ್ಯ ಭಾಗದ ಬಳ್ಳಾರಿ ಜಿಲ್ಲೆಯಿಂದ ಶುರುವಾಗಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡು ನೆರೆಯ ಆಂಧ್ರ ಪ್ರದೇಶ ರಾಜ್ಯದ ವಾಯುವ್ಯ ಭಾಗದವರೆಗೆ ವಿಸ್ತರಿಸಲ್ಪಟ್ಟಿದೆ. ಭೂವಿಜ್ಞಾನಿಗಳ ಸಂಶೋದನೆಯ ಪ್ರಕಾರ ಈ ಪರ್ವತ ಶ್ರೇಣಿಯು ಸುಮಾರು ೪ ಶತಕೋಟಿ ವರ್ಷಗಳಷ್ಟು ಹಳೆಯದು. ಅರಾವಳಿ ಪರ್ವತ ಶ್ರೇಣಿಯ ಹಾಗೆ ೪ ಶತಕೋಟಿ ವರ್ಷಗಳಿಂದ ಈ ಪರ್ವತ ಶ್ರೇಣಿಯಲ್ಲಿ ನೈಸರ್ಗಿಕ ವ್ಯತ್ಯಯಗಳಿಂದಾಗಿ ಸವಕಳಿ ಉಂಟಾಗಿ ಇದು ಈಗ ಬೆಟ್ಟ ಗುಡ್ಡಗಳಾಗಿ ಪರಿವರ್ತಿಸಲ್ಪಟ್ಟಿದೆ. ಹಿಮಾಲಯ ಹಾಗೂ ನೀಲಗಿರಿ ಪರ್ವತ ಶ್ರೇಣಿಗಳಂತೆ ಇದು ಕೂಡ ವನ್ಯಜೀವಿಗಳ ಆವಾಸವಾಗಿದೆ. ಹಂಪಿಯಿಂದ ಸುಮಾರು ೧೩ ಕಿಲೋಮೀಟರ್ ದೂರವಿರುವ ದರೋಜಿ ಕರಡಿ ಧಾಮ ಯಾಮಿನಿ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಪ್ರಮುಖ ವನ್ಯಜೀವಿ ಧಾಮವಾಗಿದೆ.