ವಿಷಯಕ್ಕೆ ಹೋಗು

ಮೋತಿಲಾಲ್ (ಹಿಂದೀ ಚಿತ್ರ ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Motilal
ಜನನ
ಮೋತಿಲಾಲ್ ರಾಜ್ವಂಶ್
Motilal Rajvansh

(೧೯೧೦-೧೨-೦೪)೪ ಡಿಸೆಂಬರ್ ೧೯೧೦
ಶಿಮ್ಲಾ, ಭಾರತ
ಮರಣ17 June 1965(1965-06-17) (aged 54)[]
ಮುಂಬಯಿ, ಮಹಾರಾಷ್ಟ್ರ, ಭಾರತ
ಸಕ್ರಿಯ ವರ್ಷಗಳು1934–1965
ಪ್ರಶಸ್ತಿಗಳುಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ: ದೇವದಾಸ್ (1955); ಪರಖ್ (1960)

ಮೋತೀಲಾಲ್ (೧೯೧೦-೧೯೬೫) ಭಾರತೀಯ ಚಿತ್ರ ನಟ. ಅವರ ಪೂರ್ಣ ಹೆಸರು ಮೋತೀಲಾಲ್ ರಾಜವಂಶ್. ಹಿಂದಿ ಚಿತ್ರರಂಗದಲ್ಲಿ ಸ್ವಾಭಾವಿಕ ಅಭಿನಯವನ್ನು ತೆರೆಗೆ ತಂದ ಮೊದಲ ನಟನೆಂದು ಗುರುತಿಸಲಾಗುತ್ತದೆ.

ಜನನ, ಬಾಲ್ಯ ಮತ್ತು ಯೌವನ

[ಬದಲಾಯಿಸಿ]

೪ನೇ ಡಿಸೆಂಬರ್ ೧೯೧೦ರಲ್ಲಿ ಶಿಮ್ಲಾದಲ್ಲಿ ಜನಿಸಿದ ಮೋತೀಲಾಲ್ ದಿಲ್ಲಿಯ ಸುಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರ ತಂದೆ ಖ್ಯಾತಿವೆತ್ತ ಶಿಕ್ಷಣತಜ್ಞರಾಗಿದ್ದರು. ಆದರೆ ಮೋತೀಲಾಲರು ಒಂದು ವರ್ಷದ ಮಗುವಾಗಿದ್ದಾಗಲೇ ಅವರು ತೀರಿಕೊಂಡರು. ಆ ಕಾರಣದಿಂದಾಗಿ ಉತ್ತರಪ್ರದೇಶದ ಹೆಸರುವಾಸಿ ಸಿವಿಲ್ ಸರ್ಜನರಲ್ಲೊಬ್ಬರಾಗಿದ್ದ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಶಿಮ್ಲಾದ ಶಾಲೆಯಲ್ಲಿ ಪ್ರಾಥಮಿಕ ಇಂಗ್ಲಿಷ ವಿದ್ಯಾಭ್ಯಾಸದ ಬಳಿಕ ದಿಲ್ಲಿಯಲ್ಲಿ ಮಾಧ್ಯಮಿಕ ಹಾಗೂ ಕಾಲೇಜ್ ಶಿಕ್ಷಣವನ್ನು ಪಡೆದರು.

ಚಲನಚಿತ್ರರಂಗ

[ಬದಲಾಯಿಸಿ]

ಕಾಲೇಜ್ ಮುಗಿಸಿದ ನಂತರ ಅವರು ನೌಕಾಪಡೆಯನ್ನು ಸೇರಲು ಮುಂಬೈಗೆ ಬಂದರು. ಆದರೆ ಅನಾರೋಗ್ಯದ ನಿಮಿತ್ತ ಅವರು ಪ್ರವೇಶ ಪರೀಕ್ಷೆಗೆ ಕೂರಲಾಗಲಿಲ್ಲ. ಒಮ್ಮೆ ಅಲ್ಲಿಯ ಸಾಗರ್ ಸ್ಟೂಡಿಯೊದಲ್ಲಿ ಚಿತ್ರೀಕರಣವೊಂದನ್ನು ನೋಡಲು ಹೋಗಿದ್ದರು. ಆ ಚಿತ್ರದ ನಿರ್ದೇಶಕರಾಗಿದ್ದ ಕಾಳೀಪ್ರಸಾದ್ ಘೋಷರು ಉಚ್ಚ ಸುಸಂಸ್ಕೃತ ಉಡುಪಿನಲ್ಲಿದ್ದ ಮೋತೀಲಾಲರನ್ನು ಗಮನಿಸಿ, ತಮ್ಮ ಶಹರ್ ಕಾ ಜಾದೂ (೧೯೩೪) ಚಿತ್ರದಲ್ಲಿ ನಾಯಕನ ಪಾತ್ರವನ್ನಿತ್ತರು. ಹೀಗೆ ಸಾಗರ್ ಫಿಲ್ಮ್ ಕಂಪೆನಿಯನ್ನು ಸೇರಿದಾಗ ಮೊತೀಲಾಲರ ವಯಸ್ಸು ೨೪. ೧೯೩೫ರಲ್ಲಿ ಸಬಿತಾದೇವಿಯೊಡನೆ ಡಾಕ್ಟರ್ ಮಾಧುರಿಕಾ ಮತ್ತು ೧೯೩೭ರಲ್ಲಿ ಕುಲವಧು ಚಿತ್ರಗಳ ನಂತರ ರಣಜೀತ್ ಸ್ಟೂಡಿಯೊವನ್ನು ಸೇರಿ ಅಲ್ಲಿ ಜಾಗಿರ್ದಾರ್(೧೯೩೭), ಹಮ್, ತುಮ್ ಔರ್ ವಹ್ (೧೯೩೮), ಅರ್ಮಾನ್ (೧೯೪೨), ತಕ್ದೀರ್ (೧೯೪೩) ಮತ್ತು ಕಲಿಯಾಂ (೧೯೪೪) ಚಿತ್ರಗಳಲ್ಲಿ ಅಭಿನಯಿಸಿದರು. ಆರ್ ಕೆ ನಾರಾಯಣರ ಕಾದಂಬರಿ ಮಿ ಸಂಪತ್ ಯನ್ನಾಧರಿಸಿ ಅದೇ ಹೆಸರಲ್ಲಿ ೧೯೫೨ರಲ್ಲಿ ಎಸ್ ಎಸ್ ವಾಸನ್ ನಿರ್ಮಿಸಿದ ನಯವಂಚಕನ ಪಾತ್ರ ಮೋತಿಲಾಲರಿಗೆ ಬಹುಖ್ಯಾತಿಯನ್ನು ತಂದಿತು. ೧೯೫೫ರಲ್ಲಿ ಬಿಮಲ್ ರಾಯ್ ನಿರ್ದೇಶನದ ದೇವದಾಸ್ ಚಿತ್ರದ ಚುನ್ನೀಲಾಲ್ ಪಾತ್ರ ಅವರಿಗೆ ಫಿಲ್ಮ್ ಫೇರ್ ನ ಅತ್ಯುತ್ತಮ ಪೋಷಕ ನಟನ ಪ್ರಶಸ್ತಿಯನ್ನು ಕೊಟ್ಟಿತು. ೧೯೬೦ರ ಪಾರಖ್ ಚಿತ್ರದಲ್ಲಿನ ಅಭಿನಯ ಅವರಿಗೆ ಎರಡನೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕ ಮುಕೇಶರನ್ನು ೧೯೪೧ರಲ್ಲಿ ಪರಿಚಯಿಸಿದ ಮೋತೀಲಾಲರ ಮೂರ್ತಿ (೧೯೪೩)ಚಿತ್ರದಲ್ಲಿ ಮುಕೇಶರಿಗೆ ಪ್ರಥಮ ಬಾರಿಗೆ ಹಾಡುವ ಅವಕಾಶ ದೊರೆತಿತ್ತು. ೧೯೪೭ರ ಪಹಲೀ ನಜರ್ ಚಿತ್ರದಲ್ಲಿ ಮುಕೇಶ್ ಹಾಡಿದ ‘ದಿಲ್ ಜಲ್ತಾ ಹೈ ತೋ ಜಲ್ನೇ ದೇ...’ ಹಾಡನ್ನೂ ಮೋತೀಲಾಲರ ಮೇಲೆಯೇ ಚಿತ್ರೀಕರಿಸಲಾಗಿದೆ.

ರಾಜ್ ಕಪೂರರ ಜಾಗ್ತೇ ರಹೋ (೧೯೫೬), ಅಬ್ ದಿಲ್ಲೀ ದೂರ್ ನಹೀಂ (೧೯೫೭), ಪೈಗಾಮ್ (೧೯೫೯), ಇತ್ಯಾದಿ ಮೋತೀಲಾಲರ ಕೆಲವು ಗಮನೀಯ ಚಿತ್ರಗಳು. ಹಮಾರೀ ಬೇಟಿ ಚಿತ್ರದಲ್ಲಿ ಶೋಭನಾ ಸಮರ್ಥರ ಪತಿಯಾಗಿಯೂ ನೂತನಳ ತಂದೆಯಾಗಿಯೂ ನಟಿಸಿದರು. ಅನಾಡಿ(೧೯೫೯)ಯಲ್ಲೂ ನೂತನಳ ಪೋಷಕನ ಪಾತ್ರವನ್ನು ಸ್ಮರಣೀಯವಾಗಿ ನಿರ್ವಹಿಸಿದ್ದರು.

ಶೋಭನಾ ಹಾಗೂ ನಾದಿರಾ ಜತೆ ಮೋತೀಲಾಲರಿಗೆ ಗಾಢವಾದ ಮೈತ್ರಿಯಿತ್ತೆಂದೂ ಆಗಿನ ಪ್ರತೀತಿ.

ವ್ಯಕ್ತಿತ್ವ

[ಬದಲಾಯಿಸಿ]

ಪ್ರಸಿದ್ಧ ಸಿವಿಲ್ ಸರ್ಜನರ ಆಸರೆಯಲ್ಲಿ ಬೆಳೆದ ಮೋತೀಲಾಲ್ ಚಿಕ್ಕಂದಿನಿಂದಲೇ ಉತ್ತಮ ದರ್ಜೆಯ ಜೀವನವನ್ನು ನಡೆಸಿದವರು. ಸದಾ ಶೋಕಿಯ ಉಡುಗೆ-ತೊಡುಗೆಗಳಲ್ಲಿದ್ದು ಸುಸಂಸ್ಕೃತ ನಡೆ-ನುಡಿಗಳ ಅವರು ಉನ್ನತ ಮಟ್ಟದ ಹಾಸ್ಯಪ್ರಿಯರೂ ವಿನೋದಿಗಳೂ ಆಗಿದ್ದರು. ಆದರೆ ದುರದೃಷ್ಟವಶಾತ್ ಈ ವರ್ಗದವರಲ್ಲಿ ಸಾಮಾನ್ಯವಾಗಿದ್ದ ಜೂಜು ಮತ್ತು ಕುದುರೆ ರೇಸಿನ ಚಟ ಮೋತೀಲಾಲರಿಗೂ ಇತ್ತು. ಇದಲ್ಲದೆ ಬಾಳಿನ ಉತ್ತರಾರ್ಧದಲ್ಲಿ ತಮ್ಮ ರಾಜವಂಶ್ ಪ್ರೊಡಕ್ಶನ್ಸ್ ಲಾಂಛನದಲ್ಲಿ ತಯಾರಿಸಿದ ಛೋಟೀ ಛೋಟೀ ಬಾತೇಂ ಚಿತ್ರ ರಾಷ್ಟ್ರಪತಿಯ ಪ್ರಶಸ್ತಿಪತ್ರವನ್ನು ಗಳಿಸಿದರೂ ಗಲ್ಲಾಪೆಟ್ಟಿಗೆಯಲ್ಲಿ ಸೋತು ಅಪಾರ ಹಣ ಕಳೆದುಕೊಂಡರು. ಹೀಗೆ ಸಂಪತ್ತನ್ನು ಕಳೆದುಕೊಂಡ ಇವರು ೧೯೬೫ರಲ್ಲಿ ನಿಧನರಾದಾಗ ನಿರ್ಧನರಾಗಿದ್ದರು!

ವಿವಿಧ ಮೂಲಗಳು

ಉಲ್ಲೇಖಗಳು

[ಬದಲಾಯಿಸಿ]