ಮೊನಾರ್ಕ್ (ಚಿಟ್ಟೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊನಾರ್ಕ್
ಹೆಣ್ಣು ಚಿಟ್ಟೆ
ಗಂಡು ಚಿಟ್ಟೆ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಪಂಗಡ:
ಕುಲ:
Kluk, 1802
ಪ್ರಜಾತಿ:
D. plexippus
Binomial name
Danaus plexippus
(Linnaeus, 1758)
Synonyms

Danaus archippus (Fabricius, 1793)
Danaus menippe (Hübner, 1816)

ಮೊನಾರ್ಕ್ ಚಿಟ್ಟೆಗಳು ( ಡನಾಸ್ ಪ್ಲೆಕ್ಸಿಪ್ಪಸ್) ಹಾಲ್ರಸದ ಸಸ್ಯಗಳ ಮೇಲೆ ಮೊಟ್ಟೆಯಿಡುವ ಒಂದು ಬಗೆಯ ಚಿಟ್ಟೆಗಳಾಗಿವೆ. ಉತ್ತರ ಅಮೆರಿಕಾದ ಚಿಟ್ಟೆಗಳಲ್ಲೆಲ್ಲ ಇವು ಅತ್ಯಂತ ಹೆಚ್ಚು ಪ್ರಸಿದ್ಧವಾಗಿವೆ. ಇವುಗಳು ಆಸ್ಟ್ರೇಲಿಯಾ, ನ್ಯೂ ಜೀಲ್ಯಾಂಡ್ ಹಾಗೂ ಯೂರೋಪ್ ನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಗಳು ‌ಸುಲಭವಾಗಿ ಗುರುತಿಸಲು ಸಾಧ್ಯವಾಗುವ ಕೇಸರಿ ಹಾಗೂ ಕಪ್ಪು ಬಣ್ಣದ ಚಿತ್ತಾರಗಳಿಂದ ಕೂಡಿದ, ೮.೯-೧೦.೨ ಸೆಂ.ಮೀ ಗಳಷ್ಟು ಅಗಲವಾದ ರೆಕ್ಕೆಗಳಿಂದ ಕೂಡಿವೆ(ವೈಸ್ ರಾಯ್ ಚಿಟ್ಟೆಗಳು ಇಷ್ಟೇ ಅಗಲವಾದ ಹಾಗೂ ಇದೇ ಬಣ್ಣದ ರೆಕ್ಕೆಗಳನ್ನು ಹೊಂದಿದ್ದರೂ, ಹಿಂದಿನ ರೆಕ್ಕೆಯ ಮೇಲಿನ ಒಂದು ವಿಶೇಷವಾದ ಚಿತ್ತಾರದಿಂದ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ). ಹೆಣ್ಣು ಚಿಟ್ಟೆಗಳ ರೆಕ್ಕೆಗಳ ಮೇಲಿನ ಗೆರೆಗಳು ಕಡುಗಪ್ಪಾಗಿರುವುದರಿಂದಲೂ, ಗಂಡು ಚಿಟ್ಟೆಗಳ ಹಿಂದಿನ ರೆಕ್ಕೆಗಳ ನಡುವಿನಲ್ಲಿರುವ ಆಂಡ್ರೋಕೋನಿಯಂ ಎಂದು ಕರೆಯಲ್ಪಡುವ ಕಪ್ಪು ಚುಕ್ಕೆಗಳಿಂದಲೂ ಗುರುತಿಸಬಹುದಾಗಿದೆ. ಹಾಗೆಯೇ ಗಂಡು ಚಿಟ್ಟೆಗಳು ಗಾತ್ರದಲ್ಲಿ ಹೆಣ್ಣು ಚಿಟ್ಟೆಗಳಿಗಿಂತ ದೊಡ್ಡದಾಗಿರುತ್ತವೆ. ಮೊನಾರ್ಕ್ ಚಿಟ್ಟೆಗಳು ಅವುಗಳ ವಲಸೆಗಾಗಿ ಪ್ರಸಿದ್ಧಿಯನ್ನು ಹೊಂದಿವೆ. ಈ ವಲಸೆಯನ್ನು ಮುಗಿಸುವಷ್ಟರಲ್ಲಿ ಅವುಗಳ ಅನೇಕ ತಲೆಮಾರುಗಳೇ ಕಳೆದು ಹೋಗಿರುತ್ತವೆ.

ಲಕ್ಷಣಗಳು[ಬದಲಾಯಿಸಿ]

ಮೊನಾರ್ಕ್ ಗಳ ರೆಕ್ಕೆಗಳು ೮.೯-೧೦.೨ ಸೆಂ.ಮೀ ಗಳಷ್ಟು ಅಗಲವಾಗಿವೆ. ರೆಕ್ಕೆಗಳ ಮೇಲ್ಭಾಗ ಕಂದು ಮಿಶ್ರಿತ ಕೇಸರಿ ಬಣ್ಣದಿಂದ ಕೂಡಿದೆ. ರೆಕ್ಕೆಗಳ ಅಂಚು ಹಾಗೂ ರೆಕ್ಕೆಯಲ್ಲಿರುವ ಗೆರೆಗಳು ಕಡುಗಪ್ಪು ಬಣ್ಣದಿಂದ ಕೂಡಿವೆ. ರೆಕ್ಕೆಗಳ ಅಂಚಿನಲ್ಲಿ ಎರಡು ಸಾಲು ಬಿಳಿ ಚುಕ್ಕಿಗಳಿವೆ. ರೆಕ್ಕೆಗಳ ಕೆಳಬದಿಯೂ ಅಂಚು ಹಳದಿಯಾಗಿದ್ದು ಚುಕ್ಕೆಗಳು ದೊಡ್ಡದಾಗಿರುವುದನ್ನು ಹೊರತುಪಡಿಸಿದರೆ ಸರಿಸುಮಾರು ಮೇಲ್ಬದಿಯಂತೆಯೇ ಇದೆ. ೧೯ನೇ ಶತಮಾನದ ಆದಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಡೋನೇಷಿಯಾ ಮುಂತಾದೆಡೆಗಳಲ್ಲಿ ಇವುಗಳ ವರ್ಣವೈವಿಧ್ಯತೆಯನ್ನೂ ಗುರುತಿಸಲಾಗಿದೆ. ಆದರೆ ಇದು ಅತ್ಯಂತ ಕಡಿಮೆ ಸಂಖ್ಯೆಯದ್ದಾಗಿದೆ. ಉಳಿದೆಲ್ಲಾ ಕೀಟಗಳಂತೆ ಮೊನಾರ್ಕ್ ಗಳು ೬ ಕಾಲುಗಳನ್ನು ಹೊಂದಿದ್ದರೂ, ಕೇವಲ ೪ ಕಾಲುಗಳನ್ನು ಬಳಸುತ್ತವೆ. ಇವುಗಳ ಮೊಟ್ಟೆಗಳು ಕ್ರೀಂ ಬಣ್ಣದಿಂದ ಕೂಡಿದ ಬಿಳಿಯಾಗಿದ್ದು ಕ್ರಮೇಣ ನಸುಹಳದಿಗೆ ತಿರುಗುತ್ತವೆ. ಒಂದು ಮೊಟ್ಟೆಯು ಸರಿಸುಮಾರು ೦.೪೬ ಮಿಲಿ ಗ್ರಾಂ ಗಳಷ್ಟು ತೂಗುತ್ತದೆ. ೧.೨ ಮಿ.ಮೀ ಗಳಷ್ಟು ಉದ್ದವಾಗಿದ್ದು, ೦.೯ ಮಿ.ಮೀ ನಷ್ಟು ಅಗಲವಾಗಿದೆ. ಇವುಗಳ ಮರಿ ಹುಳಗಳು ಹಳದಿ, ಕಪ್ಪು ಹಾಗೂ ಬಿಳಿ ಬಣ್ಣಗಳ ಪಟ್ಟಿಗಳನ್ನು ಹೊಂದಿವೆ. ಇವುಗಳ ದೇಹದ ಎರಡೂ ತುದಿಯಲ್ಲಿ ಸಣ್ಣ ಕಡ್ಡಿಯ ರೀತಿಯ ರಚನೆಗಳಿವೆ. ಕಂಬಳಿಹುಳಗಳು ಸುಮಾರು ೫ ಸೆಂ.ಮೀ ಗಳಷ್ಟು ಉದ್ದಕ್ಕೆ ಬೆಳೆಯುತ್ತವೆ.

ಭೌಗೋಳಿಕ ವ್ಯಾಪ್ತಿ[ಬದಲಾಯಿಸಿ]

ಮೊನಾರ್ಕ್ ಚಿಟ್ಟೆಗಳು ಅಮೇರಿಕಾ ಖಂಡದಲ್ಲಿ ದಕ್ಷಿಣ ಕೆನಡಾ, ದಕ್ಷಿಣ ಅಮೇರಿಕಾದ ಉತ್ತರ ಭಾಗಗಳಲ್ಲಿ ಕಂಡು ಬರುತ್ತವೆ. ಅತ್ಯಂತ ವಿರಳವಾಗಿ ಪಶ್ಚಿಮ ಯೂರೋಪ್ ನಲ್ಲೂ ಕಂಡುಬರುತವೆ. ಹಾಗೆಯೇ ಬರ್ಮುಡಾ, ಹವಾಯಿ, ಸೊಲೋಮನ್ಸ್, ನ್ಯೂ ಕ್ಯಾಲೆಡೋನಿಯಾ, ನ್ಯೂ ಜೀಲ್ಯಾಂಡ್, ಆಸ್ಟ್ರೇಲಿಯಾ, ನ್ಯೂ ಗಿನಿಯಾ, ಸಿಲೋನ್, ಭಾರತ, ಅಝೋರ್ಸ್ ಹಾಗೂ ಕ್ಯಾನರಿ ದ್ವೀಪಗಳಲ್ಲೂ ಕಂಡುಬರುತ್ತವೆ.

ವಲಸೆ[ಬದಲಾಯಿಸಿ]

ಮೊನಾರ್ಕ್ ಗಳು ಮರದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು. ಮರವನ್ನಿಡೀ ಮೊನಾರ್ಕ್ ಗಳು ಆವರಿಸಿರುವುದನ್ನು ಗಮನಿಸಿ
ಮೊನಾರ್ಕ್ ಗಳ ವಲಸೆಯ ಮಾರ್ಗ

ಮೊನಾರ್ಕ್ ಗಳು ಅವುಗಳ ಅತೀ ದೀರ್ಘವಾದ ವಾರ್ಷಿಕ ವಲಸೆಗಾಗಿ ಅತ್ಯಂತ ಪ್ರಸಿದ್ಧವಾಗಿವೆ. ಉತ್ತರ ಅಮೇರಿಕಾದಲ್ಲಿ ಅವು ಅಗೋಸ್ತು ತಿಂಗಳಲ್ಲಿ ಮೊದಲುಗೊಂಡು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣಾಭಿಮುಖವಾದ ವಲಸೆಯನ್ನು ಕೈಗೊಳ್ಳುತ್ತವೆ. ಹಾಗೆಯೇ ವಸಂತ ಋತುವಿನಲ್ಲಿ ಉತ್ತರಾಭಿಮುಖವಾಗಿ ವಲಸೆಯನ್ನು ಕೈಗೊಳ್ಳುತ್ತವೆ. ಮೊನಾರ್ಕ್ ಚಿಟ್ಟೆಗಳು ಪಕ್ಷಿಗಳಂತೆ ಉತ್ತರ ಹಾಗೂ ದಕ್ಷಿಣಾಭಿಮುಖವಾಗಿ ನಿಯಮಿತವಾದ ವಲಸೆಯನ್ನು ಕೈಗೊಳ್ಳುವ ಏಕೈಕ ಜಾತಿಯ ಚಿಟ್ಟೆಗಳಾಗಿವೆ. ಆದರೆ ಕಡಿಮೆ ಜೀವಿತಾವಧಿಯ ಕಾರಣ ಒಂದೇ ಚಿಟ್ಟೆಯು ಪೂರ್ಣ ವಲಸೆಯ ಹಾದಿಯನ್ನು ಕ್ರಮಿಸಲಾರದು. ಹೆಣ್ಣು ಚಿಟ್ಟೆಗಳು ಈ ವಲಸೆಯ ಅವಧಿಯಲ್ಲಿಯೇ ಮೊಟ್ಟೆಗಳನ್ನಿಡುತ್ತವೆ. ಈ ವಲಸೆಯ ಅವಧಿಯು ಬೇಸಿಗೆಯ ಆದಿ ಭಾಗದಲ್ಲಿ ಜನಿಸಿದ ಸಾಮಾನ್ಯ ಮೊನಾರ್ಕ್ ಗಳ ಜೀವಿತಾವಧಿಗಿಂತ (೧-೨ ತಿಂಗಳು) ಹೆಚ್ಚಿರುತ್ತದೆ. ವಲಸೆಯ ಅವಧಿಯ ಕೊನೆಯ ಪೀಳಿಗೆಯ ಚಿಟ್ಟೆಗಳು ಮಾತ್ರ ಡಯಾಪಾಸ್ ಎಂಬ ವಿಶಿಷ್ಟ ಸ್ಥಿತಿಯನ್ನು ತಲುಪುತ್ತವೆ. ಈ ಸ್ಥಿತಿಯಲ್ಲಿ ಅವು ಸುಮಾರು ೭ ತಿಂಗಳುಗಳ ಕಾಲ ಬದುಕುತ್ತವೆ. ಈ ಅವಸ್ಥೆಯಲ್ಲಿ ಅವು ಯಾವುದಾದರೊಂದು ಚಳಿಗಾಲವನ್ನು ಕಳೆಯುವ ತಾಣಗಳಿಗೆ ಹಾರಿ ಹೋಗುತ್ತವೆ. ಈ ಸ್ಥಿತಿಯಲ್ಲಿ ಅವು ಚಳಿಗಾಲ ಮುಗಿಯುವವರೆಗೂ ಸಂತಾನೋತ್ಪತ್ತಿ ಮಾಡದೆ ಇರುತ್ತವೆ. ಒಮ್ಮೆ ವಲಸೆಯನ್ನು ಕೈಗೊಂಡರೆ ಸುಮಾರು ೩-೪ ನೆಯ ಪೀಳಿಗೆಯ ಚಿಟ್ಟೆಗಳು ತಮ್ಮ ಮೂಲ ಆವಾಸಸ್ಥಾನಕ್ಕೆ ಮರಳುತ್ತವೆ. ಅವುಗಳು ತಮ್ಮ ಈ ಸುದೀರ್ಘ ವಲಸೆಗೆ ತಮ್ಮ ಪೂರ್ವಜರು ಬಳಸಿದ ದಾರಿಯನ್ನೇ ಬಳಸುತ್ತವೆ. ಅವುಗಳು ಈ ದಾರಿಯನ್ನು ಪತ್ತೆಹಚ್ಚುವ ಬಗೆ ಮಾತ್ರ ಇನ್ನೂ ಸಂಶೋಧನೆಗೆ ವಸ್ತುವಾಗಿದೆ. ಅವು ದಿಕ್ಕನ್ನು ತಿಳಿಯಲು ಸೂರ್ಯನನ್ನು ಬಳಸಿಕೊಳ್ಳುತ್ತವೆ. ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಅವುಗಳು ದಿಕ್ಕಿಗಾಗಿ ಭೂಮಿಯ ಕಾಂತವಲಯವನ್ನೂ ಬಳಸಿಕೊಳ್ಳಬಲ್ಲವು. ಹುಳವಾಗಿದ್ದಾಗ ತಿನ್ನುವ ಹಾಲ್ರಸದ ಸಸ್ಯಗಳಿಂದಾಗಿ ಅವುಗಳು ಹೆಚ್ಚಿನ ಪ್ರಾಣಿ-ಪಕ್ಷಿಗಳಿಗೆ ವಿಷಕರವಾಗಿವೆ. ಈಮೂಲಕ ಅವು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಮೊನಾರ್ಕ್‌ಗಳ ಕಂಬಳಿಹುಳ
  1. ಹೆಣ್ಣು ಚಿಟ್ಟೆಗಳು ವಸಂತ ಋತುವಿನ ಹಾಗೂ ಬೇಸಿಗೆಯ ಸಂತಾನೋತ್ಪತ್ತಿಯ ಅವಧಿಯಲ್ಲಿ ಮೊಟ್ಟೆಯನ್ನಿಡುತ್ತವೆ. ಹಾಲ್ರಸದ ಸಸ್ಯಗಳ ಎಲೆಯ ಮೇಲೆ ಮೊಟ್ಟೆಯನ್ನಿಡುತ್ತವೆ.
  2. ಸುಮಾರು ೪ ದಿನಗಳ ಬಳಿಕ ಮೊಟ್ಟೆಯೊಡೆದು ಕಂಬಳಿಹುಳಗಳು ಹೊರಬರುತ್ತವೆ. ಅವು ಹಾಲ್ರಸದ ಸಸ್ಯಗಳನ್ನು ತಿಂದು ಕೋಶಾವಸ್ಥೆಗೆ ಬೇಕಾದ ಶಕ್ತಿಯನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸುತ್ತವೆ.
  3. ಪ್ಯೂಪಾ ಸ್ಥಿತಿಯಲ್ಲಿ ಇವುಗಳು ತಮ್ಮ ಸುತ್ತ ನೂಲಿನ ಎಳೆಗಳನ್ನು ಸುತ್ತಿಕೊಂಡು ಕೋಶಾವಸ್ಥೆಗೆ ಹೋಗುತ್ತವೆ. ಈ ಸ್ಥಿತಿಯಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದ ಅವು ಚಿಟ್ಟೆಯಾಗಿ ಬದಲಾಗುತ್ತವೆ.
  4. ಪ್ಯೂಪಾ ಸ್ಥಿತಿಗೆ ಹೋದ ೨ ವಾರದ ಬಳಿಕ ಚಿಟ್ಟೆಯು ಹೊರಬರುತ್ತದೆ. ಎಳೆಯ ರೆಕ್ಕೆಯು ಬಲಿತ ನಂತರ ಅವು ಹಾರಿ ಹೋಗುತ್ತವೆ.