ಮೈಸೂರು ಮಹಾದೇವಪ್ಪ

ವಿಕಿಪೀಡಿಯ ಇಂದ
Jump to navigation Jump to search
ಮೈಸೂರು ಮಹಾದೇವಪ್ಪ
ಜನನ
ಕೊಳ್ಳೆಗಾಲ ತಾಲ್ಲೂಕಿನ ಮುಡಿಗುಂಡಂ
ವೃತ್ತಿಸಂಗೀತ ವಿದ್ವಾಂಸರು, ಸಂಗೀತ ಪ್ರಾಧ್ಯಾಪಕರು, ಮಹಾನ್ ಪಿಟೀಲು ವಾದಕರು

ಮೈಸೂರು ಮಹಾದೇವಪ್ಪ ಅವರು ಪಿಟೀಲು ವಾದಕರಾಗಿ, ಸಂಗೀತ ವಿದ್ವಾಂಸರಾಗಿ, ಸಂಗೀತ ಪ್ರಾಧ್ಯಾಪಕರಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಪುತ್ರರಾದ ಎಂ. ನಾಗರಾಜ್ ಮತ್ತು ಎಂ. ಮಂಜುನಾಥ್ ಸಹಾ ವೈಯಕ್ತಿಕವಾಗಿ ಮತ್ತು ಜೋಡಿ ಪಿಟೀಲು ವಾದಕರಾಗಿ ಸಂಗೀತಲೋಕದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದಾರೆ.

ಯಾರೀ ಹುಡುಗ?[ಬದಲಾಯಿಸಿ]

ಒಮ್ಮೆ ಮೈಸೂರು ಆಸ್ಥಾನ ವಿದ್ವಾನ್ ಟಿ. ಪುಟ್ಟಸ್ವಾಮಯ್ಯ ಅವರ ಗಾಯನ ಕಛೇರಿ ಕೊಳ್ಳೆಗಾಲದ ಚಿಕ್ಕಲೂರು ಜಾತ್ರೆಯಲ್ಲಿ ಏರ್ಪಾಟಾಗಿತ್ತು. ವಯೊಲಿನ್ ಸಾಥ್ ಕೊಡುವ ಕಲಾವಿದ ಕಾರಣಾಂತರಗಳಿಂದ ಬಂದಿರಲಿಲ್ಲ. ನಾಟಕಗಳಲ್ಲಿ ಪಿಟೀಲು ನುಡಿಸುತ್ತಿದ್ದ ಹುಡುಗನೊಬ್ಬನನ್ನು ಪುಟ್ಟಸ್ವಾಮಯ್ಯನವರ ಪಕ್ಕದಲ್ಲಿ ಕೂರಿಸಲಾಯಿತು. ಪಿಟೀಲು ಸಾಥ್ ಇಲ್ಲ ಎಂಬ ಅಳುಕಿನಂದಲೇ ಗಾಯನ ಆರಂಭಿಸಿದ ಪುಟ್ಟಸ್ವಾಮಯ್ಯನವರನ್ನು ಆ ನಾಟಕದ ಹುಡುಗ ಬೆರಗುಗೊಳಿಸಿದ.

ಆ ನುಡಿಸಾಣಿಕೆಗೆ ಪುಟ್ಟಸ್ವಾಮಯ್ಯನವರು ಭಾವಪರವಶರಾದರು. ಬಿಲಹರಿ ಮತ್ತು ಹರಿಕಾಂಬೋಧಿ ರಾಗಗಳನ್ನು ಆ ಹುಡುಗ ಪರಿಶುದ್ಧವಾಗಿ ನುಡಿಸಿದ. ಪುಟ್ಟಸ್ವಾಮಯ್ಯನವರ ಗಾಯನ ಮಾಧುರ್ಯಕ್ಕೆ ಆ ಹುಡುಗ ಸೌಂದರ್ಯ ತುಂಬಿದ. ಕಛೇರಿ ಮುಗಿದ ಮೇಲೆ ಪುಟ್ಟಸ್ವಾಮಯ್ಯ ಹೇಳಿದರು; ನೀನು ಇಲ್ಲಿದ್ದುಕೊಂಡು ಏನು ಮಾಡುತ್ತೀಯ, ಪಿಟೀಲು ಎತ್ತಿಕೊಂಡು ಮೈಸೂರಿಗೆ ಬರುತ್ತಿರು....

ಮೊದಲ ಕಛೇರಿಯಲ್ಲೇ ದೊಡ್ಡ ವಿದ್ವಾಂಸರೊಬ್ಬರ ಮನಗೆದ್ದ ಆ ಬಾಲಕ ಅವರ ಆದೇಶದಂತೆ ಕಂಕುಳಲ್ಲಿ ಪಿಟೀಲು ಡಬ್ಬಿ ಇಟ್ಟುಕೊಂಡು ಮೈಸೂರಿಗೆ ಬಂದ. ಪುಟ್ಟಸ್ವಾಮಯ್ಯನವರ ಮನೆಯಲ್ಲೇ ವಾಸ್ತವ್ಯ. ಅಗ್ರಹಾರದ ಖ್ಯಾತನಹಳ್ಳಿ ಹಾಸ್ಟೆಲ್ (ಜೆಎಸ್‌ಎಸ್)ನಲ್ಲಿ ಊಟದ ವ್ಯವಸ್ಥೆ. ಬೆಳಿಗ್ಗೆ ಪಿಟೀಲು ಹಿಡಿದು ಕುಳಿತರೆ ರಾತ್ರಿವರೆಗೂ ಕಠಿಣ ಸಂಗೀತಾಭ್ಯಾಸ. ಗುರುಕುಲ ಮಾದರಿಯ ಕಲಿಕೆ. ಗುರುಗಳ ಸೇವೆಯ ಜೊತೆಗೆ ಸಂಗೀತ ಪಾಠ. ಮೈಸೂರಿಗೆ ಬಂದ ಮೂರು ತಿಂಗಳಲ್ಲಿ ಆ ಯುವಕನ ವಯೊಲಿನ್ ಸಾಥ್ ಮತ್ತೆ ಆರಂಭವಾಯಿತು. ಗುರುಗಳ ಆದೇಶದಂತೆ ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿ ಸೇವೆಯೊಂದಿಗೆ ಅವನ ಸಂಪ್ರದಾಯಬದ್ಧ ಸಂಗೀತ ಕಛೇರಿ ಶುರುವಾಯಿತು. ಆಮೇಲೆ ಆ ಯುವಕ ಹಿಂದೆ ತಿರುಗಿ ನೋಡಿದ್ದಿಲ್ಲ....

ಅವರು ಬೇರಾರೂ ಅಲ್ಲ, ೬೦ ರ ದಶಕದಲ್ಲಿ ಮೈಸೂರಿನ ಎಲ್ಲ ಗಾಯನ ಕಛೇರಿಗಳಿಗೆ ಪಿಟೀಲು ಸಾಥ್ ಕೊಡುತ್ತಿದ್ದ ವಿದ್ವಾಂಸ ಮೈಸೂರು ಮಹಾದೇವಪ್ಪ..

ಬಾಲ್ಯದಲ್ಲಿ[ಬದಲಾಯಿಸಿ]

ಕೊಳ್ಳೆಗಾಲ ತಾಲ್ಲೂಕಿನ `ಮುಡಿಗುಂಡಂ' ಗ್ರಾಮದ ಮಹಾದೇವಪ್ಪ ಸಂಗೀತ ವಿದ್ವಾಂಸರಾದದ್ದು ಒಂದು ಆಕಸ್ಮಿಕ. ನಾಟಕಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದ ತಂದೆ ಸುಬ್ಬಪ್ಪಗೆ ಮಗನನ್ನು ಸಂಗೀತ ಕ್ಷೇತ್ರಕ್ಕೆ ಎಳೆಯುವ ಮನಸ್ಸಿರಲಿಲ್ಲ. ಆದರೆ ಮಹಾದೇವಪ್ಪನವರ ಸಂಗೀತಾಸಕ್ತಿ ಆಗಾಗ ಅಭಿವ್ಯಕ್ತಗೊಳ್ಳುತ್ತಿತ್ತು. ಶಾಲೆಯಲ್ಲಿ ಪದ್ಯಗಳನ್ನು ರಾಗವಾಗಿ ಹಾಡುವಾಗ ಶಿಕ್ಷಕರು, ನೀನು ಸಂಗೀತ ಕಲಿ ಎನ್ನುತ್ತಿದ್ದರು. ನಾಟಕವೊಂದರಲ್ಲಿ `ಬಾಲರಾಜ'ನ ಪಾತ್ರಕ್ಕೆ ಬಣ್ಣ ಹಚ್ಚಿ ಕಂದವೊಂದನ್ನು ಸುಂದರವಾಗಿ ಹಾಡಿ `ಒನ್ಸ್‌ಮೋರ್' ಗಿಟ್ಟಿಸಿಕೊಂಡಿದ್ದರು. ಆ ನಾಟಕದ ಮೇಸ್ಟ್ರು ಸಿದ್ದಶೆಟ್ಟಿ ಅವರಿಗೆ ಒಂದಷ್ಟು ಸಂಗೀತ ಜ್ಞಾನವೂ ಇದ್ದ ಕಾರಣ ಮಹಾದೇವಪ್ಪಗೆ `ವರ್ಣ'ಗಳವರೆಗೆ ಪಾಠ ಹೇಳಿಕೊಟ್ಟಿದ್ದರು. ಮಹಾದೇವಪ್ಪನವರೊಳಗಿದ್ದ ಸಂಗೀತ ಪ್ರತಿಭೆ ಪುಟ್ಟಸ್ವಾಮಯ್ಯನವರ ಪ್ರಜ್ಞೆಗೆ ಸಿಕ್ಕಿದ್ದೇ ತಡ, ಪ್ರತಿಭೆ ಪ್ರಭೆಯಾಗಿ ನಾಡಿಗೆ ಬೆಳಕು ನೀಡಿತು.

ಮಹಾನ್ ಸಂಗೀತಗಾರರಿಗೆ ಸಾಥ್[ಬದಲಾಯಿಸಿ]

ಆಗಷ್ಟೇ ಆರಂಭವಾಗಿದ್ದ (೧೯೫೪) ಬೆಂಗಳೂರು ಆಕಾಶವಾಣಿ ಮೈಸೂರು ಮಹಾದೇವಪ್ಪನವರನ್ನು ಕೈಬೀಸಿ ಕರೆಯಿತು. ನಿಲಯದಲ್ಲಿ ಹಾಡುತ್ತಿದ್ದ ಖ್ಯಾತನಾಮ ಸಂಗೀತಗಾರರಿಗೆಲ್ಲ ಮಹಾದೇವಪ್ಪ ಪಿಟೀಲು ನುಡಿಸುತ್ತಿದ್ದರು. ಮೈಸೂರಿನಲ್ಲಿ ಆಗ ಪಿಟೀಲು ನುಡಿಸುವವರು ಬಹಳ ಮಂದಿ ಇರಲಿಲ್ಲ. ಹಾಗಾಗಿ ಮಹಾದೇವಪ್ಪ ಬಹು ಬೇಡಿಕೆಯ ಮತ್ತು ಪ್ರಬುದ್ಧ ಪಿಟೀಲು ವಾದಕರಾಗಿದ್ದರು. ಮೈಸೂರು ದಸರಾ ಸೇರಿದಂತೆ ಇತರ ಸಂಗೀತ ಉತ್ಸವಗಳಿಗೆ ಮೈಸೂರಿಗೆ ಬರುತ್ತಿದ್ದ ಮದ್ರಾಸ್ ಸಂಗೀತಗಾರರಿಗೆಲ್ಲಾ ಮಹಾದೇವಪ್ಪ ಸಾಥ್ ಕೊಡುತ್ತಿದ್ದರು.

ಬಾಲಮುರಳಿ ಕೃಷ್ಣರಿಂದ ಹಿಡಿದು ಡಿ.ಕೆ. ಜಯರಾಮನ್, ಮಣಕ್ಕಾಲ್ ರಂಗರಾಜನ್, ಟಿ.ಆರ್. ಸುಬ್ರಮಣ್ಯಂ, ಪಾತೂರು ಸುಬ್ರಮಣ್ಯ, ಟಿ.ಕೆ. ರಂಗಾಚಾರ್ಯ, ಪಿಟೀಲು ಟಿ ಚೌಡಯ್ಯ ಮುಂತಾದವರ ಜೊತೆ ಮಹಾದೇವಪ್ಪ ಪಿಟೀಲು ನುಡಿಸಿದ್ದಾರೆ. ಗೌರಿಕುಪ್ಪಸ್ವಾಮಿ ಮತ್ತು ಆರ್. ಶ್ರೀನಿವಾಸನ್ ಮೈಸೂರಿಗೆ ಬಂದರೆ ಸಾಕು, ಕಡ್ಡಾಯವಾಗಿ ಮಹಾದೇವಪ್ಪ ಅವರೇ ಪಿಟೀಲಿಗೆ ಬೇಕಾಗಿತ್ತು.

ಜೊತೆಗೆ ಅವರ ಕಛೇರಿಗಳಿಗೆ ಜೊತೆಯಾಗಿ ದೇಶದ ಮುಖ್ಯ ಸಂಗೀತ ಸಭಾಗಳಲ್ಲಿ ಪಿಟೀಲು ನುಡಿಸಿದ್ದಾರೆ. ಮದ್ರಾಸ್, ತಿರುವಯ್ಯಾರ್, ಹೈದರಾಬಾದ್, ದೆಹಲಿ, ತಂಜಾವೂರು, ಕೊಯಮತ್ತೂರು, ಮುಂಬೈಗಳಲ್ಲಿ ಮಹಾದೇವಪ್ಪನವರ ಪಿಟೀಲಿನ ನಾದ ಸುಧೆ ಹರಿದಿದೆ.

ವಿಶ್ವವಿದ್ಯಾಲಯದಲ್ಲಿ[ಬದಲಾಯಿಸಿ]

೧೯೬೫ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭವಾದ ಲಲಿತ ಕಲಾ ಕಾಲೇಜಿನ `ಪಿಟೀಲು ವಿಭಾಗ'ಕ್ಕೆ ಮಹಾದೇವಪ್ಪ ವಿಭಾಗ ಮುಖ್ಯಸ್ಥರಾಗಿ ೨೬ ವರ್ಷ ದುಡಿದಿದ್ದಾರೆ. ಮೈಸೂರಿನಲ್ಲಿ ಮಹಾದೇವಪ್ಪ ಕಟ್ಟಿ ಬೆಳೆಸಿದ ಜೆಎಸ್‌ಎಸ್ ಸಂಗೀತ ಸಭಾ ಸಾಂಸ್ಕೃತಿಕ ರಾಜಧಾನಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಮದ್ರಾಸ್‌ನಲ್ಲಿ ನಡೆಯುತ್ತಿದ್ದ ಸಂಗೀತ ವಿಚಾರ ಸಂಕಿರಣ, ಸಮ್ಮೇಳನ, ಮಾತುಕತೆಗಳನ್ನು ಮಹಾದೇವಪ್ಪ ಈ ಸಭಾದ ಮೂಲಕ ಮೈಸೂರಿಗೂ ತಂದರು. ಸಂಗೀತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿದರು.

ಒಳಗಿದ್ದ ಬೇಸರ ಹೊಮ್ಮಿಸಿದ ಭವ್ಯತೆ[ಬದಲಾಯಿಸಿ]

ಮೈಸೂರು ಮಹಾದೇವಪ್ಪ ಅವರ ಮನಸ್ಸಿನಲ್ಲಿ ಆಗಾಗ ಬೇಸರವೊಂದು ಕಾಣಿಸಿಕೊಳ್ಳುತ್ತಿತ್ತು. ಮೈಸೂರು ಭಾಗದ ಸಂಗೀತಗಾರರ ಮೇಲೆ ಮದ್ರಾಸ್ ಸಂಗೀತ ಮಂದಿಗಿದ್ದ ನಿರ್ಲಕ್ಷ್ಯ ಧೋರಣೆಯಿಂದ ಅವರು ಬೇಸತ್ತಿದ್ದರು. `ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ಮದ್ರಾಸ್' ಎನ್ನುವ ದುರ್ನುಡಿಯನ್ನು ಮುರಿಯುವ ಗುರಿ ಅವರೊಳಗಿತ್ತು. ಮದ್ರಾಸ್‌ನವರನ್ನು ದುಡ್ಡು ಕೊಟ್ಟು ಇಲ್ಲಿಗೆ ಕರೆಸುವ ಹಾಗೆ, ಇಲ್ಲಿಯ ಕಲಾವಿದರನ್ನೂ ಅಲ್ಲಿಗೆ ಕರೆಸುವಂತಾಗಬೇಕು ಎನ್ನುವ ಉದ್ದೇಶ ಅವರ ಮನದೊಳಗಿತ್ತು. ಅದಕ್ಕಾಗಿ ಅವರು ತಮ್ಮಿಬ್ಬರು ಮಕ್ಕಳನ್ನು ತಯಾರು ಮಾಡಿದರು. ವಿಶ್ವ ಸಂಗೀತ ಲೋಕದಲ್ಲಿ ಇಂದು ತಾರೆಗಳಾಗಿ ಮಿಂಚುತ್ತಿರುವ ಮೈಸೂರು ನಾಗರಾಜ-ಡಾ. ಮಂಜುನಾಥ ಸಹೋದರರು ಮಹಾದೇವಪ್ಪನವರ ಮಕ್ಕಳು.

ಈ ಮಕ್ಕಳ ಪಾಲಿಗೆ ಮಹಾದೇವಪ್ಪ ಎಲ್ಲ ಅಪ್ಪಂದಿರಂತಿರಲಿಲ್ಲ. ಮಕ್ಕಳು ಇಂಗ್ಲಿಷ್ ಕಾನ್ವೆಂಟಿಗೆ ಹೋಗಿ ಎಲ್ಲಿ ಸಂಗೀತ ಮರೆತು ಬಿಡುತ್ತಾರೋ ಎಂಬ ಆತಂಕದಿಂದ ಅವರನ್ನು ದೊಡ್ಡ ಶಾಲೆಗಳಿಗೆ ಸೇರಿಸಲಿಲ್ಲ, ಸಮೀಪದ ಸರ್ಕಾರಿ ಶಾಲೆಗೆ ಹಾಕಿದರು. ಶಾಲೆ ಕಲಿಕೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮಕ್ಕಳ ಪಿಟೀಲು ಕಲಿಕೆಯ ಬಗ್ಗೆ ತಮ್ಮ ಕಛೇರಿಗಳನ್ನು ಬದಿಗೊತ್ತಿ ತರಬೇತಿಯಲ್ಲಿ ತೊಡಗಿದರು.

ಮಕ್ಕಳಿಬ್ಬರು ಹತ್ತನ್ನೆರಡು ತುಂಬುವಷ್ಟರಲ್ಲೇ ವಿಶ್ವ ವಿಖ್ಯಾತಿಯಾದರು. ಮದ್ರಾಸ್ ಸಂಗೀತಗಾರರು ಮುಟ್ಟದ ಗಟ್ಟಿ ರಾಗಗಳನ್ನು ಲೀಲಾಜಾಲವಾಗಿ ನುಡಿಸಿ ತೋರಿಸಿದರು. ಮಕ್ಕಳ ಕಛೇರಿ ಇದೆ ಅಂದರೆ ಮಹಾದೇವಪ್ಪನವರು ರಾತ್ರಿಯಿಡೀ ನಿದ್ದೆ ಮಾಡುತ್ತಿರಲಿಲ್ಲ, ಅವರ ಹೃದಯ ಬಡಿತ ಇಮ್ಮಡಿಯಾಗುತ್ತಿತ್ತು. ಅವರ ಮನೆಗೆ ಮದ್ರಾಸ್‌ನಿಂದ ಕಛೇರಿಯ ಕರೆಯೋಲೆಗಳು ಬಂದವು. ಮದ್ರಾಸ್ ಜನ ನಾಗರಾಜ-ಮಂಜುನಾಥರನ್ನು ಆರಾಧಿಸಿದರು. ಅಲ್ಲಿಗೆ ಮೈಸೂರು ಮಹಾದೇವಪ್ಪನವರ ಕನಸು ನನಸಾಗಿತ್ತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಮಹಾದೇವಪ್ಪ ಅವರ ಸಂಗೀತ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಸಂಗೀತ ಕಲಾನಿಧಿ, ಪಳನಿ ಸುಬ್ರಮಣ್ಯ ಪಿಳ್ಳೈರಾಷ್ಟ್ರೀಯ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ವಿದ್ಯಾನಿಧಿ, ರಾಜ್ಯೋತ್ಸವ ಪ್ರಶಸ್ತಿ (1993) ಅವರನ್ನು ಅರಸಿ ಬಂದಿವೆ. ಇತ್ತೀಚೆಗೆ ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿ ಅವರ ಮುಡಿಗೇರಿದೆ.

ಮಾಹಿತಿ ಕೃಪೆ[ಬದಲಾಯಿಸಿ]

ಮೈಸೂರು ಮಹಾದೇವಪ್ಪನವರ ಬಗೆಗಿನ ಯೋಗೇಶ್ ಮಾರೇನಹಳ್ಳಿ ಅವರ ಪ್ರಜಾವಾಣಿಯಲ್ಲಿನ ಲೇಖನ