ಮೈಕೆಲ್ ಒ'ಡ್ವೈಯರ್
ಮೈಕೆಲ್ ಒ'ಡ್ವೈಯರ್ | |
---|---|
ಅಧಿಕಾರ ಅವಧಿ 26 May 1913 – 26 May 1919 | |
ವೈಯಕ್ತಿಕ ಮಾಹಿತಿ | |
ಜನನ | 28 April 1864 Barronstown, Limerick Junction, County Tipperary, Ireland |
ಮರಣ | 13 March 1940 Caxton Hall, Westminster, London, England | (aged 75)
ಸಮಾಧಿ ಸ್ಥಳ | Brookwood Cemetery |
ಸಂಗಾತಿ(ಗಳು) | Una Eunice Bord |
ಮಕ್ಕಳು | 2 |
ಅಭ್ಯಸಿಸಿದ ವಿದ್ಯಾಪೀಠ | Balliol College, Oxford |
ವೃತ್ತಿ | Colonial Administrator |
ಸರ್ ಮೈಕೆಲ್ ಒ'ಡ್ವೈಯರ್(28 ಎಪ್ರಿಲ್ 1864 – 13 ಮಾರ್ಚ್ 1940) ಒಂದನೆಯ ಮಹಾಯುದ್ಧದಲ್ಲಿ ಬ್ರಿಟನಿನ ಹಿಂದೆ ನಿಂತು ಅದರ ವಿಜಯಕ್ಕೆ ಎಲ್ಲ ಬಗೆಯ ನೆರವನ್ನೂ ನೀಡಿದ, ಭಾರತೀಯರ ಆಶೋತ್ತರಗಳನ್ನು ಪುರೈಸುವ ಬದಲು ಕ್ರಿಮಿನಲ್ ನ್ಯಾಯ ತಿದ್ದುಪಡಿ ಕಾಯಿದೆಯನ್ನು (ರೌಲತ್ ಕಾಯಿದೆ) ಜಾರಿಗೆ ತಂದ, ಬ್ರಿಟಿಷ್ ಸರ್ಕಾರದ ವಿರುದ್ಧವಾಗಿ ಮಹಾತ್ಮಾ ಗಾಂಧಿಯವರು ಹೂಡಿದ ಸತ್ಯಾಗ್ರಹ ಸಮರವನ್ನು ಹತ್ತಿಕ್ಕುವ ಉದ್ದೇಶದಿಂದ ಪಂಜಾಬ್ ಪ್ರಾಂತ್ಯದ ಜಲಿಯನ್ವಾಲಾಬಾಗಿನಲ್ಲಿ ನಿರಸ್ತ್ರವೂ ಶಾಂತಿಯುತವೂ ಆದ ಗುಂಪಿನ ಮೇಲೆ 1913 ಏಪ್ರಿಲ್ 13ರಂದು ಗುಂಡುಹಾರಿಸಿ ಭೀಕರ ಕೊಲೆ ನಡೆಸಿದ ಬ್ರಿಗೇಡಿಯರ್-ಜನರಲ್ ಡೈಯರಿಗೆ ಬೆಂಬಲವಾಗಿ ಪಂಜಾಬಿನ ಲೆಫ್ಟೆನೆಂಟ್-ಗವರ್ನರ್ ಆಗಿದ್ದಾತ. .[೧]
ಯುದ್ಧಕ್ಕಾಗಿ ಸುಮಾರು ಐದು ಲಕ್ಷ ಮಂದಿಯನ್ನೂ ಅಗಾಧ ಹಣವನ್ನೂ ಸಲ್ಲಿಸಿದ್ದ ಪಂಜಾಬಿನ ಜನರೂ ಬ್ರಿಟಿಷರ ದಮನನೀತಿಯನ್ನು ಪ್ರತಿಭಟಿಸಿದಾಗ, ತಮ್ಮ ಶಕ್ತಿಯೆಷ್ಟೆಂಬುದನ್ನು ತೋರಿಸುವ ಉದ್ದೇಶದಿಂದ ಒಡ್ವ್ಯೆಯರ್ ಈ ಮಾರ್ಗ ಅನುಸರಿಸಿದ. ಗಾಂಧಿಯವರ ಆತ್ಮಶಕ್ತಿಗಿಂತ ಮಿಗಿಲಾದ ಇನ್ನೊಂದು ಶಕ್ತಿಯುಂಟೆಂಬುದು ಈತನ ಅಹಂಕಾರ. ಜನರು ಹಿಂಸೆ ಎಸಗುವುದನ್ನೇ ಈತ ಸ್ವಾಗತಿಸಿದನೆಂದೂ ಹಾಗಾದಲ್ಲಿ ಅವರನ್ನು ಪುಡಿಪುಡಿ ಮಾಡಲು ತನಗೆ ಅವಕಾಶ ಸಿಗುವುದೆಂದು ಭಾವಿಸಿದ್ದನೆಂದೂ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಪಂಜಾಬ್ ಉಪಸಮಿತಿಯ ಕಮಿಷನರ ವರದಿ ತಿಳಿಸುತ್ತದೆ. ಅಮೃತಸರ ಮತ್ತು ಲಾಹೋರ್ಗಳಲ್ಲಿ ಲಷ್ಕರಿ ಕಾಯಿದೆ ಜಾರಿಗೆ ಬರಬೇಕೆಂದು ಒಡ್ವ್ಯೆಯರನಿಗೆ ಜನರಲ್ ಡೈಯರ್ ಬರೆದಿದ್ದನೆಂದೂ ಜಲಿಯನ್ವಾಲಾಬಾಗಿನ ಹತ್ಯಾಕಾಂಡಕ್ಕೆ ಒಡ್ವ್ಯೆಯರನ ಒಪ್ಪಿಗೆಯಿತ್ತೆಂದೂ ಜನರಲ್ ಡೈಯರ್ ಸಾಕ್ಷ್ಯ ನುಡಿದಿದ್ದಾನೆ.
ಒಡ್ವ್ಯೆಯರ್ ಸಾಮ್ರಾಜ್ಯವಾದದ ಉಗ್ರಭಕ್ತ. ಪ್ರತಿಗಾಮಿಶಕ್ತಿಗಳ ಆದರ್ಶ ಮೂರ್ತಿಯಾಗಿ ಮೆರೆಯಬೇಕೆಂಬುದು ಇವನ ಅಭಿಲಾಷೆಯಾಗಿತ್ತು. ಭಾರತದ ಸ್ವಾಯತ್ತೆಯ ಹಕ್ಕಿನ ಬಗ್ಗೆ ಇವನಿಗೆ ಬಲು ತಿರಸ್ಕಾರವಿತ್ತು. ಸರ್ಕಾರದ ಸ್ವರೂಪಗಳಿಗಾಗಿ ಮುಟ್ಠಾಳರು ಸ್ಪರ್ಧಿಸಿ ಕೊಳ್ಳಲಿ-ಎಂದು ಅಭಿನವ ವಿದ್ವಾಂಸನಂತೆ ಈತ ಉದ್ಗಾರ ತೆಗೆದನೆಂದು ವಿ.ಬಿ.ಕುಲ್ಕರ್ಣಿ ತಮ್ಮ ಬ್ರಿಟಿಷ್ ಸ್ಟೇಟ್ಸ್‌ಮೆನ್ ಇನ್ ಇಂಡಿಯ ಪುಸ್ತಕದಲ್ಲಿ ಬರೆದಿದ್ದಾರೆ. ತನ್ನ ಅಭಿಪ್ರಾಯಗಳನ್ನು ಸಮರ್ಥವಾಗಿ ಪ್ರತಿಪಾದಿಸಬಲ್ಲ ಚಿಕ್ಕ ಒರಟು ಐರಿಷ್ ಮನುಷ್ಯನೀತ-ಎಂದು ಮಾಂಟೆಗೊ ಇವನನ್ನು ಬಣ್ಣಿಸಿದ್ದಾನೆ. ಪ್ರತಿಯೊಂದನ್ನೂ ವಿರೋಧಿಸುವ ಇವನ ಸ್ವಭಾವ ಮಾಂಟೆಗೊಗೂ ಹಿಡಿಸುತ್ತಿರಲಿಲ್ಲ. ಪಂಜಾಬಿಗಳು ನಿಷ್ಠಾವಂತರು, ಶೂರರು, ಉತ್ಸಾಹಿಗಳು, ಪ್ರಗತಿಪರರು-ಎಂದು ಒಮ್ಮೆ ಬಣ್ಣಿಸಿದ ಒಡ್ವ್ಯೆಯರನೇ ತನ್ನ ಪ್ರಾಂತ್ಯದಲ್ಲಿ ಲಷ್ಕರಿ ನಿಯಮವನ್ನು ಜಾರಿಗೆ ತರಲು ಸರ್ಕಾರದ ಒಪ್ಪಿಗೆ ಬೇಡಿ ಪಡೆದುಕೊಂಡದ್ದು ಇತಿಹಾಸದ ಒಂದು ವಿಪರ್ಯಾಸ.
ಅಂತ್ಯ
[ಬದಲಾಯಿಸಿ]13 ಮಾರ್ಚ್ 1940 ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷ್ಯನ್ ಸೊಸೈಟಿ (ಈಗ ರಾಯಲ್ ಸೊಸೈಟಿ ಫಾರ್ ಏಷ್ಯನ್ ಅಫೇರ್ಸ್) ಜಂಟಿ ಸಭೆಯಲ್ಲಿ ಅಮೃತಸರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ 75 ವರ್ಷ ವಯಸ್ಸಿನ ಓ'ಡ್ವೈರ್ ನನ್ನು ಭಾರತೀಯ ಕ್ರಾಂತಿಕಾರಿ ಉಧಮ್ ಸಿಂಗ್ ಗುಂಡಿಟ್ಟು ಕೊಂದರು. [೨]
ಉಲ್ಲೇಖಗಳು
[ಬದಲಾಯಿಸಿ]- ↑ Lloyd, Nick (1 December 2010). "Sir Michael O'Dwyer and 'Imperial Terrorism' in the Punjab, 1919". South Asia: Journal of South Asian Studies. 33 (3): 363–380. doi:10.1080/00856401.2010.520648. ISSN 0085-6401. S2CID 143000538.
- ↑ Kaur, Kanwalpreet (2008). Independence (in ಇಂಗ್ಲಿಷ್). New Delhi: Sanbun Publishers. p. 19. ISBN 978-81-89540-80-7.