ಮೆಜೋ ಡ ಲಾ ರಾಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೨೭ ರಲ್ಲಿ ಮೆಜೋ ಡ ಲಾ ರಾಷ್

ಮೆಜೋ ಡ ಲಾ ರಾಷ್ (1879-1961). ಕೆನಡದ ಕಾದಂಬರಿಗಾರ್ತಿ.

ಬದುಕು ಮತ್ತು ಬರಹ[ಬದಲಾಯಿಸಿ]

ಹುಟ್ಟಿದ್ದು ಆಂಟೇರಿಯೋದ ನ್ಯೂಮಾರ್ಕೆಟ್‍ನಲ್ಲಿ. ಕಲೆಯಲ್ಲಿ ತರಬೇತಿ ಪಡೆದಿದ್ದರೂ ಈಕೆಯ ಒಲವೆಲ್ಲ ಕಾದಂಬರಿಗಳನ್ನು ಬರೆಯುವುದರ ಕಡೆಗೇ ಇದ್ದಿತು. ಈಕೆಯ ನಾಲ್ಕನೆಯ ಪುಸ್ತಕ ಜಲ್ನಾ ಎಂಬ ಕಾದಂಬರಿ (1927) ಈಕೆಗೆ ಪ್ರಸಿದ್ಧಿ ತಂದುದಲ್ಲದೆ ಹತ್ತುಸಾವಿರ ಡಾಲರುಗಳ ಬಹುಮಾನವನ್ನೂ ಗಳಿಸಿತು. ಇದು ಎಡೆಲ್ಟೆನ್ ಎಂಬ ಕೆಚ್ಚೆದೆಯ ಮಹಿಳೆಯೊಬ್ಬಳ ಯಜಮಾನಿಕೆಗೊಳಗಾದ, ಆಂಟೇರಿಯೋದಲ್ಲಿ ವಾಸವಾಗಿದ್ದ. ಹ್ವೈಟ್ ಓಕ್ ಎಂಬ ಉಗ್ರಾವೇಶದ ಮನೆತನದ ನಾಲ್ಕು ಪೀಳಿಗೆಗಳಿಗೆ ಸಂಬಂಧಿಸಿದ ಕಥಾವಸ್ತುವನ್ನೊಳಗೊಂಡ ಕಾದಂಬರಿಗಳ ಸರಣಿಯಲ್ಲಿ ಮೊದಲನೆಯದು. ಅಲ್ಲಿಯ ಜೀವನದ ಯಥಾವತ್ತಾದ ನಿರೂಪಣೆಯನ್ನು ನಿರೀಕ್ಷಿಸುತ್ತಿದ್ದ ಕೆನಡಿಯನ್ನರಿಗೆ ಇದು ಅಷ್ಟು ರುಚಿಸಲಿಲ್ಲವಾದರೂ ಈ ಕಾದಂಬರಿ ಅಮೆರಿಕ, ಬ್ರಿಟನ್ ಮತ್ತು ಯೂರೋಪುಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಹ್ವೈಟ್ ಓಕ್ ಆಫ್ ಜಲ್ನಾ (1929), ದಿ ಮಾಸ್ಟರ್ ಆಫ್ ಜಲ್ನಾ (1933), ಹ್ವೈಟ್ ಓಕ್ ಹಾರ್ವೆಸ್ಟ್ (1936), ಹ್ವೈಟ್ ಓಕ್ ಹೆರಿಟೇಜ್ (1940), ದಿ ಬಿಲ್ಡಿಂಗ್ ಜಲ್ನಾ (1944), ರಿಟರ್ನ್ ಟು ಜಲ್ನಾ (1944), ದಿ ಹ್ವೈಟ್ ಓಕ್ ಬ್ರದರ್ಸ್ (1953) ಮತ್ತು ಮಾರ್ನಿಂಗ್ ಎಟ್ ಜಲ್ನಾ (1967)-ಇವು ಈ ಸರಣಿಯ ಇತರ ಕಾದಂಬರಿಗಳು. ಈ ಕೃತಿಗಳು ಈಕೆಯನ್ನು ಮನೆತನಗಳಿಗೆ ಸಂಬಂಧಿಸಿದಂತೆ ರಚಿಸುವ ಕಾದಂಬರಿಗಳ ಪ್ರಸಿದ್ಧ ಲೇಖಕರಲಿ ಒಬ್ಬಳನ್ನಾಗಿ ಮಾಡಿವೆ. ರಿಂಗಿಂಗ್ ದಿ ಚೇಂಜಸ್ (1957) ಇದು ಈಕೆಯ ಆತ್ಮಕಥೆ. 1938ರಲ್ಲಿ ಈಕೆಗೆ ಕೆನಡದ ರಾಯಲ್ ಸೊಸೈಟಿಯ ಲಾರ್ನ್ ಪಯರ್ಸ್ ಬಹುಮಾನವನ್ನು ನೀಡಲಾಯಿತು. ನಾಟಕ, ಮಕ್ಕಳ ಸಾಹಿತ್ಯ ಮತ್ತು ಪ್ರವಾಸಿಕಥನಗಳಿಗೆ ಸಂಬಂಧಿಸಿದ ಕೃತಿಗಳು ಈಕೆಯ ಇತರ ಸಾಹಿತ್ಯ ರಚನೆಗಳು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: