ಮೂಕಜ್ಜಿಯ ಕನಸುಗಳು (ಚಲನಚಿತ್ರ)
ಮೂಕಜ್ಜಿಯ ಕನಸುಗಳು | |
---|---|
ಮೂಕಜ್ಜಿಯ ಕನಸುಗಳು ಶಿವರಾಮ ಕಾರಂತರ ಅದೇ ಹೆಸರಿನ ಕಾದಂರಿ ಆಧಾರಿತ ಕನ್ನಡ ಚಲನಚಿತ್ರ.[೧] ಇದು ೨೦೧೮ರ ಕೊನೆಯಲ್ಲಿ ತಯಾರಾಯಿತು. ಇದನ್ನು ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ನವ್ಯಚಿತ್ರ ಕ್ರಿಯೇಶನ್ಸ್‌ನವರು ತಯಾರಿಸಿದ್ದಾರೆ.[೨]
ಕಥೆ
[ಬದಲಾಯಿಸಿ]ಡಾ. ಕೆ. ಶಿವರಾಮ ಕಾರಂತರ ಒಂದು ಪ್ರಮುಖ ಕಾದಂರಿ ಮೂಕಜ್ಜಿಯ ಕನಸುಗಳು. ೧೯೭೭ ರಲ್ಲಿ ಈ ಕೃತಿಗೆ ಭಾರತದ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.[೩] ಈ ಕೃತಿಯನ್ನು ದೃಶ್ಯರೂಪಕ್ಕೆ ತರುವ ಪ್ರಯತ್ನವೇ ಈ ಚಲನಚಿತ್ರ.
ಮೂಕಾಂಬಿಕೆಯದ್ದು ಬಾಲ್ಯವಿವಾಹ. ಲಗ್ನವಾದ ಕೆಲವೇ ದಿನಗಳಲ್ಲಿ ವಿಧವೆಯಾಗಿ ಮಡಿವಂತಿಕೆಯ ಕಟ್ಟಳೆಯಂತೆ ಕೆಂಪು ಸೀರೆಯುಟ್ಟು ಮೂಲೆ ಸೇರುತ್ತಾಳೆ. ವ್ಯಾವಹಾರಿಕ ಜಗತ್ತಿನೊಂದಿಗೆ ತಪ್ಪಿದ ಸಂಪರ್ಕ, ತನ್ಮೂಲಕ ಪ್ರಾಪ್ತವಾದ ಏಕಾಂತತೆ ಹಾಗೂ ಎಳೆವೆಯಿಂದಲೇ ಬೆಳೆಸಿಕೊಂಡ ಸಂವೇದನಾ ಸಾಮರ್ಥ್ಯದಿಂದ ಆಕೆಗೆ ವಸ್ತುಗಳಾಚೆಯ ಸಂಗತಿಗಳು ಕಾಣಿಸತೊಡಗಿ ಅವನ್ನು ನೇರಾವಾಗಿ ಹೇಳಿದ್ದರಿಂದ ಜನ ಮರುಳು ಎಂಬ ಪಟ್ಟ ಕಟ್ಟಿ ಶಿಕ್ಷಿಸುತ್ತಾರೆ. ನೊಂದ ಮೂಕಾಂಬಿಕೆ ಲೌಕಿಕ ಜಗತ್ತಿನೊಂದಿಗೆ ಮಾತುಬಿಟ್ಟು ಮೂಕಿಯಾದವಳು, ವೃದ್ಧೆಯಾದಂತೆ ಮೂಕಜ್ಜಿಯಾಗುತ್ತಾಳೆ. ಈಗ ಮೂಕಜ್ಜಿ ಮೂಡೂರಿನಲ್ಲಿ ತನ್ನ ಸಂಬಂಧಿ ಸುಬ್ರಾಯನ ಆಶ್ರಯದಲ್ಲಿದ್ದಾಳೆ. ಮೂಕಜ್ಜಿಯನ್ನು ಎಲ್ಲರೂ ತಲೆ ಸಮ ಇಲ್ಲದವಳು ಎಂದು ತಿಳಿದಿದ್ದಾಗ, ಆಕೆಗಿರುವ ವಿಶೇಷ ಶಕ್ತಿಯನ್ನು ಚರಿತ್ರೆಯ ವಿದ್ಯಾರ್ಥಿಯಾಗಿರುವ ಸುಬ್ರಾಯ ಗುರುತಿಸಿ ತನಗೆ ಸಿಕ್ಕ ಪ್ರಾಚೀನ ವಸ್ತುಗಳನ್ನು ಅಜ್ಜಿಯ ಕೈಗಿಡುತ್ತಾನೆ. ಅದನ್ನು ಹಿಡಿದು ಕನಸು ಕಾಣುವ ಅಜ್ಜಿ ಪುರಾತನ ಜಗತ್ತನ್ನು ಬಿಚ್ಚಿಡುತ್ತಾಳೆ. ಭಾರತೀಯ ಬದುಕಿನಲ್ಲಿ ಪ್ರಕೃತಿಯ ಪಾತ್ರ, ದೇವರು, ವಿಗ್ರಹ ಪೂಜೆ, ಲೈಂಗಿಕ ಸಂಬಂಧಗಳ ವಿಕಾಸ, ಧರ್ಮಗಳ ಹುಟ್ಟು ಮತ್ತು ತಿಕ್ಕಾಟಗಳ ವಿಕೃತಿ, ಸುಕೃತಿಗಳ ವಿಶ್ಲೇಷಣೆ ನಡೆಸುತ್ತಾಳೆ. ಜೊತೆಗೆ ಚಿತ್ರದಲ್ಲಿ ಬೇರೆ ಉಪಕಥೆಗಳೂ ಇವೆ.
ಅದೇ ಊರಿನ ಗಾಣಿಗ ರಾಮಣ್ಣ ಮತ್ತು ಅವನ ಹೆಂಡತಿ ನಾಗಿಯ ಬದುಕಿನಲ್ಲಿ ಪ್ರವೇಶಿಸುವ ಶೀನಪ್ಪ ನಾಗಿಯನ್ನು ಮರುಳುಮಾಡಿ ಬಳಸಿಕೊಂಡು ಮಗುವಾದ ನಂತರ ಬೀದಿಪಾಲು ಮಾಡುತ್ತಾನೆ. ನಾಗಿ ಎದೆಗುಂದದೆ ಮಗಳನ್ನು ಬೆಳೆಸಿದ್ದಾಳೆ. ಅಪರಿಹಾರ್ಯವೆನಿಸಿದ್ದ ಘಟ್ಟವನ್ನು ಮುಟ್ಟಿದ್ದ ನಾಗಿ ಮತ್ತು ರಾಮಣ್ಣರ ಬದುಕಿನ ಒಡಕನ್ನು ಮುಚ್ಚಲು ಮೂಕಜ್ಜಿ ಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗುತ್ತಾಳೆ.
ಸುಬ್ರಾಯನ ಸ್ನೇಹಿತ ಜನಾರ್ಧನ ಎಡಬಿಡಂಗಿ ವಿದ್ಯಾವಂತ. ಹೆಣ್ಣುಗಳ ಜೊತೆ ಚಕ್ಕಂದವಾಡುತ್ತ ವಿವಾಹ ಜೀವನದ ಜವಾಬ್ದಾರಿಯಿಂದ ದೂರಸರಿಯುವ ಅವನ ಬದುಕಿನ ಪರಿಯನ್ನು ಅರಿತ ಮೂಕಜ್ಜಿ ಅವನನ್ನು ಎಚ್ಚರಿಸುತ್ತಾಳೆ.
ಜೀವನದಲ್ಲಿ ಹೆಣ್ಣಿನ ಸಂಬಂಧವನ್ನು ನಿರಾಕರಿಸುತ್ತಾ ಅಥವಾ ಆ ಬಗೆಯ ಸೋಗನ್ನು ಹಾಕುತ್ತಾ ಡೋಂಗಿ ವೇದಾಂತವನ್ನು ಮುಂದೆ ಮಾಡಿ ಸಮಯಕ್ಕೆ ತಕ್ಕಂತೆ ಪಾರಮಾರ್ಥ ಉಲ್ಲೇಖಿಸುವ ಅನಂತರಾಯನ ಒಳಗನ್ನು ಕಂಡ ಆಕೆ ಆತನಿಗೂ ರಾಮದಾಸನಿಗೂ ಇರುವ ಲೈಂಗಿಕ ಸಂಬಂಧವನ್ನು ಬಯಲಿಗೆಳೆಯುತ್ತಾಳೆ.
ಹೀಗೆ ಆಸ್ತಿಕಳೂ ಅಲ್ಲದ; ನಾಸ್ತಿಕಳೂ ಅಲ್ಲದ ಮೂಕಜ್ಜಿ ಅಸ್ತತ್ವವಾದಿಯಂತೆ ಮಾನವ ಮೌಲ್ಯಗಳನ್ನು ಮೆರೆಯುತ್ತಾ ಮನುಷ್ಯನ ಅನ್ವೇಷಕ ಪ್ರವೃತ್ತಿಯ ಮೂರ್ತರೂಪವಾಗಿದ್ದಾಳೆ.
ನಿರ್ದೇಶಕರ ಮಾತು
[ಬದಲಾಯಿಸಿ]ಮೂಕಜ್ಜಿಯ ಕನಸುಗಳು ಬಗ್ಗೆ ನಿರ್ದೇಶಕ ಪಿ. ಶೇಷಾದ್ರಿಯವರ ಮಾತು:
ನಾನು ‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಮೊದಲಿಗೆ ಓದಿದ್ದು ನನ್ನ ಹೈಸ್ಕೂಲ್ ದಿನಗಳಲ್ಲಿ. ಅಂದಿನ ಓದಿಗೆ ಇದನ್ನು ಸಾದ್ಯಂತವಾಗಿ ದಕ್ಕಿಸಿಕೊಳ್ಳುವ ಶಕ್ತಿಯಿರಲಿಲ್ಲ. ಆದರೆ ಇದರ ಮಹತ್ವದ ಬಗ್ಗೆ ಅರಿವಂತೂ ಮೂಡಿತ್ತು. ಆಗ ಮುಂದೊಂದು ದಿನ ನಾನು ಚಲನಚಿತ್ರರಂಗಕ್ಕೆ ಬರುತ್ತೇನೆ, ಇದನ್ನು ಚಿತ್ರವಾಗಿಸುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ.
ಕೆಲವು ವರ್ಷಗಳ ಹಿಂದೆ ಇದೇ ಲೇಖಕರ ಬೆಟ್ಟದ ಜೀವ ಕೃತಿಯನ್ನು ಸಿನಿಮಾಗೆ ಅಳವಡಿಸುವಾಗ ಮತ್ತೊಮ್ಮೆ ಈ ಕೃತಿಯ ಮೇಲೆ ಕಣ್ಣಾಡಿಸಿದೆ. ಇದರ ಸಾಧ್ಯತೆಗಳು ಮತ್ತಷ್ಟು ತೆರೆದುಕೊಂಡವು. ಆದರೆ ಇದನ್ನು ದೃಶ್ಯಮಾಧ್ಯಮಕ್ಕೆ ಒಗ್ಗಿಸುವುದು ಅಷ್ಟು ಸುಲಭವಲ್ಲ ಎಂದು ಸುಮ್ಮನಾಗಿದ್ದೆ.
ಮೂಕಜ್ಜಿಯ ಕನಸುಗಳು ಕನ್ನಡ ಸಾಹಿತ್ಯಲೋಕದಲ್ಲಿ ಬಹು ಚರ್ಚಿತವಾದಂತಹ ಕೃತಿ. ಇದು ಭಾರತೀಯ ಸಾಹಿತ್ಯಲೋಕದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪುರಸ್ಕಾರವನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದರ ಮರು ಓದು ನನ್ನಲ್ಲಿ ಮತ್ತಷ್ಟು ಒಳನೋಟಗಳನ್ನು ವಿಸ್ತರಿಸಿತು. ಇಂಥ ಪ್ರಸ್ತುತತೆಯಿರುವ ಕೃತಿಯನ್ನು ಇಂದಿನ ಪೀಳಿಗೆಗೆ ನನ್ನ ಮಾಧ್ಯಮದ ಮೂಲಕ ದಾಟಿಸುವುದು ನನ್ನ ಕರ್ತವ್ಯ ಎಂದು ನಿಶ್ಚಯಿಸಿ ಇದನ್ನು ದೃಶ್ಯಮಾಧ್ಯಮಕ್ಕೆ ಒಗ್ಗಿಸುವ ಪ್ರಯತ್ನ ಮಾಡಿದ್ದೇನೆ.
ತಾಂತ್ರಿಕ ಗುಂಪು
[ಬದಲಾಯಿಸಿ]ನಿರ್ದೇಶನ | ಪಿ. ಶೇಷಾದ್ರಿ |
ಮೂಲ ಕಥೆ | ಶಿವರಾಮ ಕಾರಂತ |
ಚಿತ್ರ ಕಥೆ | ಪಿ. ಶೇಷಾದ್ರಿ |
ಛಾಯಾಗ್ರಹಣ | ಜಿ. ಎಸ್. ಭಾಸ್ಕರ್ |
ಸಂಕಲನ | ಬಿ. ಎಸ್. ಕೆಂಪರಾಜು |
ಸಂಗೀತ ನಿರ್ದೇಶನ | ಪ್ರವೀಣ್ ಗೋಡ್ಖಿಂಡಿ |
ನಿರ್ಮಾಪಕರು | ನವ್ಯಚಿತ್ರ ಕ್ರಿಯೇಶನ್ಸ್ |
ಕಲಾವಿದರು
[ಬದಲಾಯಿಸಿ]ಮೂಕಜ್ಜಿ | ಬಿ. ಜಯಶ್ರೀ[೪] |
ಸುಬ್ರಾಯ | ಅರವಿಂದ ಕುಪ್ಲಿಕರ್ |
ಸೀತಾ | ನಂದಿನಿ ವಿಠ್ಠಲ |
ತಿಪ್ಪಜ್ಜಿ | ರಾಮೇಶ್ವರಿ ವರ್ಮ |
ನಾಗಿ | ಪ್ರಗತಿ ಪ್ರಭು |
ಮೂಕಾಂಬಿಕ | ಕಾವ್ಯ ಶಾ |
ರಾಮಣ್ಣ | ಪ್ರಭುದೇವ |
ಗೌರವ, ಪ್ರಶಸ್ತಿ
[ಬದಲಾಯಿಸಿ]- ಮೂಕಜ್ಜಿಯ ಕನಸುಗಳು ಚಲನಚಿತ್ರವು ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ (ಫೆಬ್ರವರಿ ೨೦೧೯) ಕನ್ನಡ ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿತ್ತು.[೫]
- ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧೆ ವಿಭಾಗದಲ್ಲಿ ಪ್ರಥಮ ಬಹುಮಾನ.[೬][೭]
ಉಲ್ಲೇಖ
[ಬದಲಾಯಿಸಿ]- ↑ https://vijaykarnataka.indiatimes.com/entertainment/gossip/mukajjiya-kanasugalu-shooting-starts/articleshow/66472781.cms
- ↑ https://www.thehindu.com/todays-paper/tp-national/tp-karnataka/seshadri-to-make-film-on-mookajjiya-kanasugalu/article17748078.ece
- ↑ epapervijayavani.in/ArticlePage/APpage.php?edn=Vijaya Vihara&articleid=VVAANINEW_VIJ_20181230_1_2&artwidth=221.83999999999997px
- ↑ https://kannada.asianetnews.com/entertainment/chambal-official-trailer-highlights-ias-officer-dk-ravi-receives-amazing-response-pm8ce4
- ↑ Https://biffes.in/pdf/Competition-Final-List-19-Kannada-Cinema.pdf[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.prajavani.net/entertainment/cinema/cinema-awards-bengaluru-618196.html
- ↑ https://www.deccanherald.com/city/movie-kannada-classic-wins-720942.html
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages with lower-case short description
- Short description is different from Wikidata
- Articles using infobox templates with no data rows
- Pages using infobox film with unknown parameters
- Pages using infobox film with missing date
- ಕನ್ನಡ ಚಲನಚಿತ್ರಗಳು
- ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
- ವರ್ಷ-೨೦೧೯ ಕನ್ನಡಚಿತ್ರಗಳು