ಮಿರ್ಜಾ ಗಾಲಿಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿರ್ಜಾ ಗಾಲಿಬ್
غالب
Urdu poet of Mughal era
ಮಿರ್ಜಾ ಅಸಾದುಲ್ಲಾ ಬೇಗ್ ಖಾನ್
ಜನನ(೧೭೯೭-೧೨-೨೭)೨೭ ಡಿಸೆಂಬರ್ ೧೭೯೭
ಆಗ್ರಾ, ಮೊಗಲ್ ಸಾಮ್ರಾಜ್ಯ
ಮರಣ15 February 1869(1869-02-15) (aged 71)
ದೆಹಲಿ, Punjab, British India
ಕಾವ್ಯನಾಮAsad, Ghalib
ವೃತ್ತಿಕವಿ
ರಾಷ್ಟ್ರೀಯತೆಬ್ರಿಟಿಷ್ ಇಂಡಿಯಾ
ಕಾಲ'ಮುಘಲ್ ಯುಗ
ಪ್ರಕಾರ/ಶೈಲಿಗಝಲ್, Qasida, Rubai, Qat'aa
ವಿಷಯಲವ್, ಫಿಲಾಸಫಿ, ಮಿಸ್ಟಿಸಿಸಮ್


ಮಿರ್ಜಾ ಗಾಲಿಬ್ (27 ಡಿಸೆಂಬರ್ 1797 – 15 ಫೆಬ್ರವರಿ 1869) ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿರುವ ಪ್ರಸಿದ್ಧ ಕವಿ. ಈತನ ಪುರ್ಣ ಹೆಸರು ಮಿರ್ಜಾ ಅಸದುಲ್ಲಾಹ್ ಬೇಗ್ ಖಾನ್ ಅಲಿಯಾಸ್ ಮಿರ್ಜಾ ನವ್ಷಾಹ್. ಗಾಲಿಬ್ ಎನ್ನುವುದು ಕಾವ್ಯನಾಮ. ಕೊನೆಯ ಮೊಗಲ್ ಚಕ್ರವರ್ತಿ ಬಹಾದುರ್ ಷಾ ಜಾಫರ್ ಈತನಿಗೆ ನಜ್ಮುದ್ ದೌಲ. ದಬೀರ್-ಉಲ್-ಮುಲ್ಕ, ನಿಜಾಮ್ ಜಂಗ್ ಬಹಾದೂರ್-ಎಂಬ ಬಿರುದುಗಳನ್ನು ಕೊಟ್ಟಿದ್ದ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಈತ ಜನಿಸಿದ್ದು ಆಗ್ರದಲ್ಲಿ. ಬಾಲ್ಯದಲ್ಲಿ ಈತನಿಗೆ ಸಮರ್ಥ ವಿದ್ವಾಂಸನೊಬ್ಬನಿಂದ ಪರ್ಷಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ಶಿಕ್ಷಣ ದೊರೆಯಿತು. ಹದಿಮೂರನೆಯ ವರ್ಷದಲ್ಲಿಯೇ ಲೋಹಾರೂ ರಾಜಮನೆತನದ ಕನ್ಯೆಯೊಬ್ಬಳೊಡನೆ ಈತನಿಗೆ ವಿವಾಹವಾಯಿತು. ಹದಿನಾರನೆಯ ವರ್ಷದ ಹೊತ್ತಿಗೆ ದೆಹಲಿಗೆ ಬಂದು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ. ಈತನ ತಂದೆ ಮತ್ತು ಚಿಕ್ಕಪ್ಪ ಸೈನಿಕರಾಗಿದ್ದರು. ಇವರ ಶೌರ್ಯ ಪರಾಕ್ರಮಗಳಿಗಾಗಿ ಬ್ರಿಟಿಷರು ಇವರಿಗೆ ಜಹಗೀರಿಯೊಂದನ್ನು ಕೊಟ್ಟಿದ್ದರು. ಮುಂದೆ ಇದನ್ನು ಕುಟುಂಬ ಪಿಂಚಣಿಯಾಗಿ ಪರಿವರ್ತಿಸಲಾಯಿತು. ಈತನಿಗೂ 750 ರೂ. ಗಳ ವಾರ್ಷಿಕ ಪಿಂಚಣಿ ದೊರೆಯುತ್ತಿತ್ತು. ದೆಹಲಿಯಲ್ಲಿ ಈತನಿಗೆ ಕವಿಗಳ, ವಿದ್ವಾಂಸರ ಮತ್ತು ಸೂಫಿ ಸಂತರ ಸಹವಾಸ ದೊರೆಯಿತು. ಇದು ಈತನ ಕಾವ್ಯ ರಚನೆಯ ಮೇಲೆ ತನ್ನದೇ ಆದ ಪ್ರಭಾವ ಬೀರಿತು. 1850ರಲ್ಲಿ ತೈಮೂರ್ ವಂಶದ ಚರಿತ್ರೆಯನ್ನು ಬರೆಯಲು ಮಾಹೆಯಾನ ಐವತ್ತು ರೂ. ಗಳ ವೇತನದ ಮೇಲೆ ಬಹಾದೂರ ಷಾ ಈತನನ್ನು ನೇಮಕ ಮಾಡಿಕೊಂಡ. ಮಹಾಕವಿ ಜಾಕನ ನಿಧನಾನಂತರ ಬಹಾದುರ್ ಷಾನಿಗೆ ಈತನೇ ಕಾವ್ಯ ಶಿಕ್ಷಾಚಾರ್ಯನಾದ. ಈತನನ್ನು ಆಸ್ಥಾನದ ಮಹಾಕವಿಯನ್ನಾಗಿಯೂ ಮಾಡಲಾಯಿತು. ಮುಂದೆ ಈತ ರಾಜಕುಮಾರರಿಗೆಲ್ಲ ಕಾವ್ಯ ಗುರುವಾದ. ಕೆಂಪುಕೋಟೆಯಲ್ಲಿ ನಡೆಯುತ್ತಿದ್ದ ಕವಿ ಸಮ್ಮೇಳನಗಳಲ್ಲೂ ಈತ ಭಾಗವಹಿಸುತ್ತಿದ್ದ. ಲಖನೌದ ನವಾಬನಾಗಿದ್ದ ವಾಜಿದ್ ಅಲಿ ಷಾನೂ ಈತನ ಪ್ರತಿಭೆಯನ್ನು ಗುರುತಿಸಿ, ಈತನಿಗೆ ವರ್ಷಾಶನವನ್ನು ಗೊತ್ತುಪಡಿಸಿದ. ಲಖನೌ ಕವಿಗಳ ಆಹ್ವಾನದ ಮೇಲೆ 1826ರಲ್ಲಿ ಈತ ಲಖನೌಗೆ ತೆರಳಿ ಅಲ್ಲಿ ಐದು ತಿಂಗಳ ಕಾಲ ತಂಗಿದ್ದ: ಸ್ವಾತಂತ್ರ್ಯದ ಪ್ರಥಮ ಸಮರದ (ಸಿಪಾಯಿದಂಗೆ) ಪರಿಣಾಮವಾಗಿ ಈತ ತುಂಬ ತೊಂದರೆಗೆ ಒಳಗಾದ. ಕೆಲವು ವರ್ಷಗಳಿಂದ ಸರ್ಕಾರ ಪಿಂಚಣಿ ನೀಡಿಕೆಯನ್ನೂ ನಿಲ್ಲಿಸಿತು. ಈ ಅವಧಿಯಲ್ಲಿ ತನ್ನ ಕಾವ್ಯಗುರುವಾಗಿ ನೇಮಿಸಿಕೊಂಡು ಮಾಸಾಶನವನ್ನು ಗೊತ್ತುಪಡಿಸುವುದರ ಮೂಲಕ ರಾಂಪುರದ ನವಾಬ ಈತನ ನೆರವಿಗೆ ಬಂದ; ಕವಿಯ ಆಜೀವಪರ್ಯಂತ ಈ ವ್ಯವಸ್ಥೆ ಮುಂದುವರಿಯಿತು. ಕೆಲವು ವರ್ಷಗಳ ಬಳಿಕ ಬ್ರಿಟಿಷ್ ಸರ್ಕಾರವೂ ಪಿಂಚಣಿ ನೀಡಿಕೆಯನ್ನು ಮತ್ತೆ ಪ್ರಾರಂಭಿಸಿತು. ಇಷ್ಟಾದರೂ ಜೀವನಪರ್ಯಂತ ಈತ ಆರ್ಥಿಕ ಸಂಕಷ್ಟಗಳಿಗೆ ಒಳಗಾಗಿಯೇ ಇದ್ದ. ಬ್ರಿಟಿಷ್ ಸಕಾರದ ಪಿಂಚಣಿ ಮತ್ತು ರಾಂಪುರದ ನವಾಬರು ನೀಡುತ್ತಿದ್ದ ಮಾಸಾಶನ ಇಷ್ಟಲ್ಲದೆ ಇವನಿಗೆ ಬೇರೆ ಆದಾಯವಿರಲಿಲ್ಲ. ಮೊಗಲ್ ಆಸ್ಥಾನದ ವೇತನ, ಲಖನೌ ನವಾಬರ ವರ್ಷಾಸನ, ಕಾವ್ಯ ಶಿಕ್ಷಣವನ್ನು ಪಡೆಯುತ್ತಿದ್ದ ಶಿಷ್ಯವರ್ಗ ತಂದು ಕೊಡುತ್ತಿದ್ದ ಗುರುದಕ್ಷಿಣೆ - ಇವೆಲ್ಲ ತಾತ್ಕಾಲಿಕವೂ ಅಲ್ಪಪ್ರಮಾಣದವೂ ಆಗಿದ್ದುವು. ದೆಹಲಿಯಲ್ಲಿದ್ದಷ್ಟು ಕಾಲವೂ ಸಾಲಿಗರಿಂದ ಅತಿಯಾದ ಬಡ್ಡಿಯ ಮೇಲೆ ಪಡೆದ ಸಾಲದಿಂದಲೇ ಈತ ಜೀವನ ನಿರ್ವಹಿಸಬೇಕಾಯಿತು. ಜೂಜಾಡುತ್ತಿದ್ದುದಕ್ಕಾಗಿ 1847 ರಲ್ಲಿ ಈತನನ್ನು ಮೂರು ತಿಂಗಳ ಕಾಲ ಜೈಲಿಗೆ ಹಾಕಲಾಗಿತ್ತು. ಈತನ ಏಳು ಮಕ್ಕಳೂ ಬಾಲ್ಯದಲ್ಲಿಯೇ ಕಾಲವಾದರು. ಹುಚ್ಚನಾಗಿದ್ದ ಈತನ ಪ್ರೀತಿಯ ಸೋದರ ಮಿರ್ಜಾ ಯೂಸುಫ್ 1857ರಲ್ಲಿ ತೀರಿಕೊಂಡ. ಭಾವಮೈದುನನಂತೂ ತನ್ನ ತಾರುಣ್ಯದಲ್ಲೇ ಗತಿಸಿದ. ಇಂಥ ಸುಖ ದುಃಖಗಳನ್ನು ಕಂಡ ಗಾಲಿಬ್ 1869ರ ಫೆಬ್ರವರಿ 15 ರಂದು ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ವಿಧಿವಶನಾದ. ದೆಹಲಿಯಲ್ಲಿ ಈತನನ್ನು ಸಮಾಧಿ ಮಾಡಲಾಯಿತು.

ಗೌರವಗಳು[ಬದಲಾಯಿಸಿ]

A special commemorative cover of Ghalib released in India.

15 ಫೆಬ್ರವರಿ 1969ರಂದು ಭಾರತದಲ್ಲಿ ಮತ್ತು ವಿಶ್ವದ ಇತರ ವಿದ್ವತ್ ಕೇಂದ್ರಗಳಲ್ಲಿ ಗಾಲಿಬ್ ಶತಮಾನೋತ್ಸವವನ್ನು ಆಚರಿಸಲಾಯಿತು. ಭಾರತೀಯ ಅಂಚೆ ಇಲಾಖೆ ಇದರ ಸ್ಮರಣಾರ್ಥವಾಗಿ ಅಂಚೆಚೀಟಿಯೊಂದನ್ನು ಹೊರಡಿಸಿತು. ಗಾಲಿಬ್ ಅಕಾಡೆಮಿಯೂ ಸೇರಿದಂತೆ ಹಲವಾರು ಸ್ಮಾರಕಗಳನ್ನು ಸ್ಥಾಪಿಸಲಾಯಿತು. ಈತನ ಜೀವನ ಮತ್ತು ಕೃತಿಗಳನ್ನು ಕುರಿತು ಹಲವಾರು ಭಾಷೆಗಳಲ್ಲಿ ಗ್ರಂಥಗಳು ಬೆಳಕು ಕಂಡವು. ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಗಾಲಿಬ್ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಕೆಲವು ಗದ್ಯರಚನೆಗಳು: ಉಳಿದವು ಪದ್ಯರಚನೆಗಳು. ಅವುಗಳಲ್ಲಿ ಮುಖ್ಯವಾದವು ಇವು:

ಸಾಹಿತ್ಯ ರಚನೆ[ಬದಲಾಯಿಸಿ]

  • ಮೆಹ್ರ ಎ ನಿಮ್ ರೋಜ್ (ತೈಮೂರ್ ವಂಶದ ಚರಿತ್ರೆ - ಪರ್ಷಿಯನ್ ಭಾಷೆಯಲ್ಲಿ)
  • ದಸ್ತಂಬೂ - 1857ರಲ್ಲಿ ನಡೆದ ಘಟನೆಗಳು ವಿವರಣೆ
  • ಕಾತಿ ಎ ಬುರ್ಹನ್ - ಪರ್ಷಿಯನ್ ನಿಘಂಟು
  • ಉರ್ದು ಎ ಮು ಅಲ್ಲಾ
  • ಊದ್ ಎ ಹಿಂದಿ

ಇವೆರಡೂ ಗಾಲಿಬ್ ತನ್ನ ಮಿತ್ರರಿಗೆ ಮತ್ತು ಶಿಷ್ಯರಿಗೆ ಬರೆದ ಪತ್ರಗಳ ಸಂಕಲನಗಳು

  • ಕುಲ್ಲಿಯಾತ್ ಎ ನeóï್ಮ ಎ ಫಾರ್ಸಿ - ಪರ್ಷಿಯನ್ ಕವಿತೆಗಳ ಸಂಕಲನ
  • ದೀವಾನ್ - ಉರ್ದು ಕವಿತೆಗಳ ಸಂಕಲನ.

ಮೊಗಲರು ಭಾರತಕ್ಕೆ ಮೂರು ಕೊಡುಗೆಗಳನ್ನು - ಅಂದರೆ, ಉರ್ದು, ತಾಜ್‍ಮಹಲ್ ಮತ್ತು ಗಾಲಿಬ್ - ಬಿಟ್ಟು ಹೋಗಿದ್ದಾರೆಂದು ಹೇಳಿರುವುದು ಸೂಕ್ತವಾಗಿಯೇ ಇದೆ. ಭಾರತದ ಉರ್ದು ಕವಿಗಳಲ್ಲಿ ಗಾಲಿಬ್‍ನಿಗೆ ವಿಶಿಷ್ಟ ಸ್ಥಾನ ದೊರೆತಿದೆ. ಈತ ಸ್ವತಃ ಒಂದು ಮನೋಧರ್ಮ, ಒಂದು ಯುಗ ಮತ್ತು ಒಂದು ಜಗತ್ತೇ ಆಗಿದ್ದ. ಘನ ವಿದ್ವಾಂಸನಾಗಿದ್ದ ಈತನ ಅಧ್ಯಯನ ವ್ಯಾಪ್ತಿ ವಿಶಾಲವಾಗಿತ್ತು. ಅಮೀರ್ ಖುಸ್ರು ಹೊರತಾಗಿ ಭಾರತದ ಬೇರಾವ ಪರ್ಷಿಯನ್ ಕವಿಯನ್ನಾಗಲೀ ಲೇಖಕನನ್ನಾಗಲೀ ಈತ ಮಾನ್ಯ ಮಾಡಿರಲಿಲ್ಲ. ಉರ್ದು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮೀರ್ ಒಬ್ಬನನ್ನೂ ಮಾತ್ರ ಈತ ಗೌರವಿಸುತ್ತಿದ್ದ ಹಾಗೂ ತನ್ನನ್ನೇ ಶಿಷ್ಟತೆಯ ಮಾನದಂಡವೆಂದು ಭಾವಿಸಿದ್ದ. ಪರ್ಷಿಯನ್ ಭಾಷೆಯಲ್ಲಿ ಭವ್ಯವಾದ ಕವನಗಳನ್ನು ರಚಿಸಿದರೂ ಉರ್ದು ಭಾಷೆಯಲ್ಲಿ ರಚಿಸಿದ ಪತ್ರಗಳು ಮತು ಭಾವಗೀತೆಗಳೇ ಈತನಿಗೆ ಸ್ಥಾನಮಾನಗಳನ್ನು ತಂದುಕೊಟ್ಟವು. ಮೀರ್ನನ್ನು ಬಿಟ್ಟರೆ, ಈತನೇ ಉರ್ದು ಸಾಹಿತ್ಯದ ಮಹಾನ್ ಕವಿ. ಉರ್ದು ಪತ್ರಸಾಹಿತ್ಯದಲ್ಲಂತೂ ಈತನದು ಅದ್ವಿತೀಯ ಸ್ಥಾನ. ಮೊದಲಿಗೆ ಈತ ಅಸದ್ ಎಂಬ ಕಾವ್ಯನಾಮದಿಂದ ಬರೆದನಾದರೂ ಮುಂದೆ ಗಾಲಿಬ್ ಎಂಬ ಹೆಸರನ್ನು ಸ್ಥಿರವಾಗಿ ಬಳಸಿದ. ವಾಸ್ತವವಾಗಿ ಇವೆರಡೂ ನಾಲ್ಕನೆಯ ಕಲೀಫ್ ಹಾಗೂ ಪವಿತ್ರ ಪ್ರವಾದಿಯ ಅಳಿಯನಾಗಿದ್ದ ಅಲೀಯ ಬಿರುದುಗಳಾಗಿದ್ದವು. ಮೊದಲಿಗೆ ಈತ ಪ್ರಸಿದ್ಧ ಭಾರತೀಯ ಕವಿಯಾದ ಬೇದಿಲ್ನನ್ನು ಅನುಕರಿಸುತ್ತಿದ್ದ. ಅದರೆ ಈ ಶೈಲಿ ಕೊಂಚ ಗೊಂದಲಕ್ಕೆಡೆಮಾಡಿಕೊಟ್ಟಿತು. ತನ್ನ ಇಪ್ಪತ್ತೈದನೆಯ ವಂiÀÄಸ್ಸಿನಲ್ಲಿ ದೀವಾನ್ ಅನ್ನು ಪರಿಷ್ಕರಿಸಿದ. ಈತನ ಅನೇಕ ಕೃತಿಗಳು ಈತನ ಜೀವಮಾನದಲ್ಲಿಯೇ ಪ್ರಕಟವಾದುವು. ದೀವಾನ್ ಸುಮಾರು ಐದು ಆವೃತ್ತಿಗಳನ್ನು ಕಂಡಿತು. ಇದರಲ್ಲಿ ಎರಡು ಸಾವಿರದ ಪದ್ಯಗಳಿವೆ. ಇದೇ ಈತನ ಅತ್ಯಂತ ಮಹತ್ತ್ವಪುರ್ಣ ಕೃತಿ. ತನ್ನ ಆಶ್ರಯದಾತರು, ಆಂಗ್ಲ ಗವರ್ನರುಗಳು ಮತ್ತು ವಿಕ್ಟೋರಿಯ ಮಹಾರಾಣಿಯವರನ್ನು ಕುರಿತ ಪ್ರಶಂಸಾತ್ಮಕ ಪದ್ಯಗಳನ್ನು ಪರ್ಷಿಯನ್ ಕವಿತೆಗಳ ಸಂಕಲನದಲ್ಲಿ ಕಾಣಬಹುದಾಗಿದೆ.

ಮಹಾಕವಿ[ಬದಲಾಯಿಸಿ]

ಉರ್ದು ಕವಿತೆಗಳು ಈತನಿಗೆ ಉರ್ದು ಸಾಹಿತ್ಯದಲ್ಲಿ ಮಹಾಕವಿಯ ಸ್ಥಾನವನ್ನು ಗಳಿಸಿಕೊಟ್ಟಿವೆ. ಅಷ್ಟೇ ಅಲ್ಲ, ಈತನ ಹಿರಿಮೆ ಮತ್ತು ಖ್ಯಾತಿ ಇತರ ಕವಿಗಳ ಖ್ಯಾತಿಯನ್ನು ನುಂಗಿ ನೀರು ಕುಡಿದುಬಿಟ್ಟವೆ. ತನ್ನ ಸೃಜನಾತ್ಮಕ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಈತ ತನ್ನದೇ ಆದ ಶೈಲಿಯೊಂದನ್ನು ಸೃಷ್ಟಿಸಿದ. ಈ ಶೈಲಿ ಅನನುಕರಣೀಯವಾಗಿದ್ದು ಈತನೊಂದಿಗೇ ಕೊನೆಗೊಂಡಿತು. ಪುರ್ವಕವಿಗಳನ್ನು ಅನುಸರಿಸುವುದು ಈತನಿಗೆ ಒಪ್ಪಿಗೆಯಾಗಿರಲಿಲ್ಲ. ಹೊಸತನವೇ ಈತನ ಕಾವ್ಯದ ಜೀವಾಳ. ಜೀವನವೇ ಈತನ ಕಾವ್ಯದ ವಸ್ತುವಾಗಿದ್ದು, ಜೀವನದ ಉನ್ನತ ಮೌಲ್ಯಗಳನ್ನು ಈತ ತನ್ನ ಕಾವ್ಯದಲ್ಲಿ ಕಂಡರಿಸಿದ್ದಾನೆ. ಕಾವ್ಯ ಸೃಜನಾತ್ಮಕವಾಗಿರಬೇಕೇ ಹೊರತು ಕೇವಲ ಶಬ್ದಾಡಂಬರವಾಗಿ ಬಾರದು ಎಂಬುದೇ ಈತನ ಧ್ಯೇಯ. ಉದಾತ್ತ ಚಿಂತನೆಗಳು, ಉಪಮಾನಗಳ ಅಪುರ್ವತೆ ಮತ್ತು ನವೀನತೆ, ಮೃದುಹಾಸ್ಯ, ಶ್ಲೇಷೆ, ವಸ್ತುವಿನ ನೂತನತೆ, ಅನುಭಾವಿಕತೆ, ಮೃದುಮಧುರ ಶೈಲಿ, ಪ್ರತಿಮಾಯೋಜನೆ, ಸೂಕ್ಷ್ಮ ಪರಿವೀಕ್ಷಣೆ, ಜೀವನದ ಕಟು ಅನುಭವಗಳ ನೈಜನಿರೂಪಣೆ, ಸರಳತೆ, ಅಭಿವ್ಯಕ್ತಿಯ ಪರಿಣಾಮ ರಮಣೀಯತೆ, ಪ್ರೇಮದ ತೀವ್ರತೆ-ಇವು ಈತನ ಕವಿತೆಯ ಪ್ರಾಣ ಹಾಗೂ ಸತ್ತ್ವ. ಈತ ನಿರಾಶಾವಾದಿಯೂ ಹೌದು. ಇಷ್ಟಾದರೂ ಈತನ ಕಾವ್ಯ ಸ್ವಾನುಭವದ ಪ್ರತೀಕವಾಗಿದ್ದು, ಓದುಗರೂ ಆ ಅನುಭವಗಳಲ್ಲಿ ಪಾಲ್ಗೊಳ್ಳುವಂತಾಗುತ್ತದೆ.

ಅದುವರೆಗೆ ಸಂಪ್ರದಾಯದ ಜಾಡಿನಲ್ಲಿಯೇ ಹರಿಯುತ್ತಿದ್ದ ಉರ್ದು ಕಾವ್ಯ ಧಾರೆಯ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಈತನದು. ಹೀಗಾಗಿ, ಆಧುನಿಕ ಉರ್ದು ಕವಿತೆಯ ಪ್ರವರ್ತಕನೆಂದು ಈತನನ್ನು ಗೌರವಿಸಲಾಗಿದೆ. ಉರ್ದು ಕಾವ್ಯದ ಮೇಲೆ ಈತ ಬೀರಿರುವ ಪ್ರಭಾವ ಮಹತ್ತರವಾದುದು. ಈತ ದೇಶಾದ್ಯಂತ ಶಿಷ್ಯರನ್ನು ಪಡೆದಿದ್ದ. ಅಂಚೆಯ ಮೂಲಕ ಶಿಕ್ಷಣ ಪಡೆಯುತ್ತಿದ್ದರು.

ಸರಳ, ಮಧುರ ಮತ್ತು ಪ್ರವಾಹ ಶೀಲ ಶೈಲಿಯಲ್ಲಿ ಬರೆಯಲಾಗಿರುವ ಈತನ ಪತ್ರಗಳು ಅನುಪಮವಾಗಿವೆ. ಇವುಗಳ ಅತ್ಯಂತ ಪ್ರಮುಖ ಲಕ್ಷಣವೆಂದರೆ ಸಂಭಾಷಣಾಶೈಲಿ. 1857ರಲ್ಲಿ ಮತ್ತು ಆ ತರುವಾಯ ರಚಿಸಿದ ಪತ್ರಗಳಲ್ಲಿ ತಾನೇ ಕಣ್ಣಾರೆ ಕಂಡ ದುಃಖದ ಘಟನೆಗಳ ಹೃದಯವಿದ್ರಾವಕ ಚಿತ್ರಗಳನ್ನು ಈತ ನೀಡಿದ್ದಾನೆ. ಉರ್ದು ಗದ್ಯದ ಅತ್ಯುತ್ಕೃಷ್ಟ ರಚನೆಗಳಲ್ಲಿ ಇವುಗಳಿಗೂ ಎಡೆ ದೊರೆತಿದೆ. ಈ ಪತ್ರಗಳು ಈತನ ವಿಶಿಷ್ಟ ವ್ಯಕ್ತಿತ್ವದ ಮೇಲೆ ಬೆಳಕು ಬೀರುತ್ತವೆಯಲ್ಲದೆ ಈತನ ಆತ್ಮಚರಿತ್ರೆಯ ಇಣುಕು ನೋಟವನ್ನೂ ನೀಡುತ್ತವೆ.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: