ಮಾವತ್ತೂರು
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಮಾವತ್ತೂರು ಇದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಇರುವ ಒಂದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒಂದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ.
ಮಾವತ್ತೂರು ತನ್ನಲ್ಲಿ ಇರುವ ದೊಡ್ಡ ಕೆರೆಗೂ ಕೂಡ ಪ್ರಸಿದ್ಧಿಯಾಗಿದೆ. ೨200 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೨೦೦ ಕ್ಕೂ ಹೆಚ್ಚು ಎಕರೆ ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕೆರೆಯ ಮೇಲಿನಿಂದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ.
ಮಾವತ್ತೂರು ಕೆರೆ : ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯಂತ ಹಳೆಯದಾದ ಕೆರೆ. ಕ್ರಿ.ಶ ೧೮೮೨ ರಲ್ಲೇ ಮೈಸೂರು ಮಹಾರಾಜರ ಕಾಲದಲ್ಲಿ ಈ ಬೃಹತ್ ಕೆರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಘ ಕಾಮಗಾರಿಯಲ್ಲಿ, ೧೮೯೮ ರಲ್ಲಿ ಉದ್ಘಾಟನೆಯಾಯಿತು. ಸುಮಾರು ೧೧೦೦ ಮೀಟರ್ ಉದ್ದ, ೪೦ ಅಡಿ ಎತ್ತರದ ಮೊದಲ ಹಂತದ ಅದರ ಮೇಲೆ ೧೫ ಅಡಿ ಎತ್ತರದ ಎರಡನೇ ಹಂತದ ಇದರ ಏರಿ ಇಂದಿಗೂ ಬೃಹತ್ ಅಣೆಕಟ್ಟೆಗಳಿಗೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಅಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕೆರೆಯ ಕಾಮಗಾರಿಗೆ, ಸಿಮೆಂಟ್ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕೆರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್ ಕೆರೆ ಕಟ್ಟಲು ಅಂದಿನ ಕಾಲಕ್ಕೆ ಖರ್ಚಾಗಿದ್ದ ಹಣ ₹ ೩,೬೨,೮೪೩/-
ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರೆಯ ತುದಿ ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಟ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕೆರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕೆರೆ ಸಂಪೂರ್ಣವಾಗಿ ಎಂದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ.
೨೮ ಅಡಿ ಆಳದ ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿಂತ ಹಿಂದೆ ಪ್ರತಿ ವರ್ಷವೂ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು.
ಕೆರೆಯ ಮದ್ಯ ಭಾಗದಲ್ಲಿ ಇರುವ ಒಂದು ಸಣ್ಣ ಪಾಳು ಬಿದ್ದ ಕಲ್ಲಿನ ಮಂಟಪವನ್ನು "ಈರ್ಲು ಗುಡಿ" ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಥಳೀಯರ ಅಭಿಪ್ರಾಯ. ಹಾಗೆಯೇ ಕೆರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ೮ ಅಡಿ ಎತ್ತರದ ಒಣಗಿದ ಮಾವಿನ ಮರದ ಅವಶೇಷವು ಇಂದಿಗೂ ಕೊಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕೆರೆ ತುಂಬಿದಾಗ "ಗರುಡಾಚಲ" ನದಿಯು ಮುಂದೆ ಅಕ್ಕಿ ರಾಂಪುರ ಬಳಿ ತಿತಾ ಕೆರೆಯಿಂದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಆಂಧ್ರಪ್ರದೇಶದ ಬಂಗಾಳಕೊಲ್ಲಿ ನದಿಯನ್ನು ಸೇರುತ್ತದೆ.
ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತೆ ಮಾವತ್ತೂರಮ್ಮ, ಹಾಗೂ ಆಂಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊಂಡಿದ್ದರೆಂದು ಹಿರಿಯರು ಹೇಳುತ್ತಾರೆ. ಇದುವರೆಗೂ ಕೆರೆಯ ತಳವನ್ನೇ ಕಾಣಲಾಗಿಲ್ಲ, ಅಂದರೆ ನೂರಾರು ವರ್ಷದಿಂದ ಕೆರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ.
ಸರ್ಕಾರದ, ಅದದಿಕಾರಿಗಳ ನಿರ್ಲಕ್ಷ್ಯ ದಿಂದ ಸಾವಿರಾರು ಮೆಟ್ರಿಕ್ ಟನ್ ಮರಳು ಕಳ್ಳರ ಪಾಲಾಗಿದೆ. ಕೆರೆಯಂಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ದಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ.
ಪ್ರತಿ ಋತುಮಾನ ದಲ್ಲೂ ದೇಶ ವಿದೇಶಗಳಿಂದ ಹಕ್ಕಿ,ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ.
ಪ್ರವಾಸಿ ತಾಣಕ್ಕೆ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊಂಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಇದು ಸೆಳೆಯದೇ ಇರುವುದಿಲ್ಲ.
ಪ್ರತಿ ಭಾನುವಾರ ಇಲ್ಲಿ ನಡೆಯುವ ಸಂತೆಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ.
ಪ್ರಸಿಧ್ಧ ಪುಣ್ಯ ಕ್ಷೇತ್ರ ಗೊರವನಹಳ್ಳಿ (ಲಕ್ಷ್ಮಿ ದೇವಸ್ಥಾನ) ಇಲ್ಲಿಂದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ.