ಮಾಠರ ರಾಜವಂಶ
ಮಾಠರ ರಾಜವಂಶ ಪೂರ್ವ ಭಾರತದ ಕಲಿಂಗ ಪ್ರದೇಶದಲ್ಲಿ ಕ್ರಿ.ಶ. ೪ನೇ ಮತ್ತು ೫ನೇ ಶತಮಾನಗಳಲ್ಲಿ ಆಳಿತು. ಇವರ ಪ್ರಾಂತ್ಯ ಆಧುನಿಕ ಒಡಿಶಾದ ಗಂಜಾಮ್ ಜಿಲ್ಲೆ ಮತ್ತು ಆಂಧ್ರ ಪ್ರದೇಶದಲ್ಲಿನ ಶ್ರೀಕಾಕುಲಮ್ ಜಿಲ್ಲೆ ನಡುವಿನ ಪ್ರದೇಶದ ಭಾಗಗಳನ್ನು ಒಳಗೊಂಡಿತ್ತು. ಇವರನ್ನು ಪಿತೃಭಕ್ತ ರಾಜವಂಶವು ಪದಚ್ಯುತಗೊಳಿಸಿತು ಎಂದು ತೋರುತ್ತದೆ.
ಪರಿಚಿತವಿರುವ ಮಾಠರ ವಂಶದ ಸದಸ್ಯರೆಂದರೆ:[೧]
- ಶಂಕರವರ್ಮನ್
- ಶಕ್ತಿವರ್ಮನ್
- ಪ್ರಭಂಜನವರ್ಮನ್
- ಅನಂತಶಕ್ತಿವರ್ಮನ್
ಮಾಠರ ರಾಜರು ನಾರಾಯಣನ (ವಿಷ್ಣು) ಭಕ್ತರಾಗಿದ್ದರು.[೨] ಬಹುಶಃ ಗುಪ್ತ ಸಾಮ್ರಾಟ ಸಮುದ್ರಗುಪ್ತನ ಪಡೆಗಳು ಕಲಿಂಗ ಪ್ರದೇಶದಿಂದ ಹಿಂದೆ ಸರಿದಾಗ ಮಾಠರ ರಾಜವಂಶವು ಈ ಪ್ರದೇಶವನ್ನು ೪ನೇ ಶತಮಾನದ ಮಧ್ಯದಿಂದ ೫ನೇ ಶತಮಾನದ ಅಂತ್ಯದ ವರೆಗೆ ಆಳಿದರು. ಕಲಿಂಗದ ಹಿಡಿತಕ್ಕಾಗಿ ಅವರು ವಾಸಿಷ್ಠರು ಮತ್ತು ಪಿತೃಭಕ್ತರೊಂದಿಗೆ ಹೋರಾಡಿದರು.
ಶಕ್ತಿವರ್ಮನ್ ಈ ರಾಜವಂಶದ ಅತ್ಯಂತ ಮುಂಚಿನ ಅರಸ ಎಂದು ತೋರುತ್ತದೆ, ಮತ್ತು ಕಲಿಂಗಾಧಿಪತಿ ಎಂಬ ಬಿರುದನ್ನು ಹೊಂದಿದ್ದನು. ಇವನ ತಂದೆ ಶಂಕರವರ್ಮನ್ ಯಾವುದೇ ರಾಜ ಬಿರುದನ್ನು ಹೊಂದಿರಲಿಲ್ಲ. ಶಕ್ತಿವರ್ಮನ್‍ನ ಆಳ್ವಿಕೆಯ ೧೩ನೇ ವರ್ಷಕ್ಕೆ ಕಾಲನಿರ್ದೇಶ ಮಾಡಲಾದ ಒಂದು ತಾಮ್ರಫಲಕ ಶಾಸನ ಅವನನ್ನು ಮಹಾರಾಜಸ್ಯ ಶ್ರೀ ಶಕ್ತಿವರ್ಮನಃ ಎಂದು ವರ್ಣಿಸುತ್ತದೆ. ಇದನ್ನು ಅವನ ಅಮಾತ್ಯ ಅರ್ಜುನದತ್ತನು ರಚಿಸಿದ್ದನು. ಈ ಶಾಸನವನ್ನು ಆಧುನಿಕ ಪಿಠಾಪುರಮ್‍ನೊಂದಿಗೆ ಗುರುತಿಸಲಾದ ಪಿಷ್ಠಪುರದಲ್ಲಿ ಪ್ರಕಟಿಸಲಾಯಿತು. ಈ ಶಾಸನ ಬ್ರಾಹ್ಮಣರಿಗೆ ರಕಾಲುವಾ ಪ್ರದೇಶದ ದತ್ತಿಯನ್ನು ದಾಖಲಿಸುತ್ತದೆ. ಈ ಪ್ರದೇಶ ಕಲಿಂಗ ವಿಷಯದಲ್ಲಿ ಸ್ಥಿತವಾಗಿತ್ತು ಎಂದು ವರ್ಣಿಸಲಾಗಿದೆ.
ಈ ಶಾಸನ ಶಕ್ತಿವರ್ಮನ್ ಅನ್ನು ವಾಸಿಷ್ಠಿಯ ಮಗ ಎಂದು ವರ್ಣಿಸುತ್ತದೆ. ಒಬ್ಬ ಇತಿಹಾಸಗಾರ್ತಿಯ ಪ್ರಕಾರ, ಇವನ ತಾಯಿ ವಾಸಿಷ್ಠ ರಾಜವಂಶದಿಂದ ಬಂದವಳು ಎಂದು ಸೂಚಿಸುತ್ತದೆ. ಇಂತಹ ಮಾತೃಜನ್ಯನಾಮಗಳನ್ನು ಸಾತವಾಹನ ರಾಜವಂಶ ಮತ್ತು ಇಕ್ಷ್ವಾಕುಗಳಂತಹ ಮುಂಚಿನ ರಾಜವಂಶಗಳೂ ಬಳಸಿದ್ದವು. ಪಿಷ್ಠಾಪುರ ಮೂಲತಃ ವಾಸಿಷ್ಠ ರಾಜವಂಶದ ನಿಯಂತ್ರಣದಲ್ಲಿತ್ತು, ಮತ್ತು ಬಹುಶಃ ಶಕ್ತಿವರ್ಮನ್‍ನು ತನ್ನ ತಾಯಿಯಿಂದ ಅದನ್ನು ಪಡೆದನು. ಪಿಷ್ಠಾಪುರ ಮಾಠರರ ರಾಜಧಾನಿಯಾಗಿತ್ತು ಎಂದು ಕೆಲವು ವಿದ್ವಾಂಸರು ನಂಬುತ್ತಾರೆ. ಆದರೆ, ಶಕ್ತಿವರ್ಮನ್‍ನ ಯಾವ ವಂಶಸ್ಥರೂ ಪಿಷ್ಠಪುರದಿಂದ ಶಾಸನಪತ್ರಗಳನ್ನು ಪ್ರಕಟಿಸಿದ್ದು ತಿಳಿದುಬಂದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ Snigdha Tripathy 1997, p. 8.
- ↑ Snigdha Tripathy 1997, p. 7.