ವಿಷಯಕ್ಕೆ ಹೋಗು

ಮಹಾಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಳಿ ಬಣ್ಣದಲ್ಲಿರುವುದು ಮಹಾಕೂಟೇಶ್ವರ ದೇವಾಲಯ. ಇದು "ದ್ರಾವಿಡ "ಶೈಲಿಯಲ್ಲಿದ್ದರೆ ಮುಂಭಾಗದಲ್ಲಿರುವುದು ಸಂಗಮೇಶ್ವರ ದೆವಾಲಯ "ನಾಗರ" ಶೈಲಿಯಲ್ಲಿದೆ


.

ದ್ರಾವಿಡ ಶೈಲಿಯಲ್ಲಿರುವ ಮಲ್ಲಿಕಾರ್ಜುನ ದೇವಾಲಯ

ಭಾರತದ ದಕ್ಷಿಣ ಕಾಶಿಯಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರ ಬಾದಾಮಿಯಿಂದ 14ಕಿಮೀ ದೂರ ಕ್ರಮಿಸಿದರೆ ‘ಮಹಾಕೂಟ’ ಸಿಗುತ್ತದೆ. ಪ್ರಾಚೀನ ದೇವಾಲಯಗಳ ಕೂಟವೇ ‘ಮಹಾಕೂಟ’. ಇಲ್ಲಿ ನಿರ್ಮಿತವಾದ ಸುಂದರ, ಹಸಿರಿನಿಂದ ಕೂಡಿದ ಬೆಟ್ಟಗಳ ಮಧ್ಯೆ ಗುಡಿಗಳ ಗುಂಪು ಇದೆ. ಜಲ ಹಾಗೂ ವನಸಿರಿಗಳಿಂದ ಕೂಡಿದ ಈ ಕ್ಷೇತ್ರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನಾ ದೇವರಗಳು ಒಂದೇ ಆವರಣದಲ್ಲಿ ಮೇಳೈಸಿದ್ದು, ಆವರಣದಾಚೆಗೂ ಒಂದೆರಡು ಗುಡಿಗಳಿವೆ. ಹಸಿರು ಹಾಗೂ ಬೆಟ್ಟಗಳ ಮಧ್ಯೆ ಇರುವ ಮಹಾಕೂಟ ಈ ಭಾಗದ ಜನರಿಗೆ ‘ದಕ್ಷಿಣ ಕಾಶಿ’ಯಾಗಿದೆ. ಐತಿಹ್ಯ ಕೋಟಿ ಲಿಂಗಗಳಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ‘ಕಾಶಿ’ಯಾಗುವ ಅವಕಾಶ ಕಳೆದುಕೊಂಡಿತು ಎಂದು ಹೇಳಲಾಗುತ್ತಿದೆ. ನಾನಾ ಲಿಂಗಗಳ ಕೂಟವಾದ ಇದು ‘ಮಹಾಕೂಟ’ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಕಲ್ಯಾಣಿ ‘ವಿಷ್ಣು ಪುಷ್ಕರಣಿ’ ಎಂದು ಹೆಸರುವಾಸಿಯಾಗಿದೆ. ಶಿವ, ವಿಷ್ಣು, ಗೌರಿ, ಸರಸ್ವತಿ, ವೀರಭದ್ರ, ಇನ್ನಿತರ ದೇವತೆಗಳ ಅಪೂರ್ವ ಶಿಲ್ಪಕಲೆ ನೋಡುಗರನ್ನು ಮೂಕವಿಸ್ಮಯ ಮಾಡುವಂತಿದೆ.[]

ಇತಿಹಾಸ

[ಬದಲಾಯಿಸಿ]

ಕ್ರಿ ಶ 602ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ. ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೀಶನ ಶಾಸನವುಳ್ಳ ಅಷ್ಟಕೋನದ ಶಿಲಾಸ್ತಂಭವಿತ್ತು. ಇದು ಈಗ ವಿಜಯಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆ. ಮಂಗಲೀಶ ಕಳಚುರಿ ಮುಂತಾದವರನ್ನು ಗೆದ್ದು ಯುದ್ಧದಲ್ಲಿ ಸಂಗ್ರಹವಾದ ಐಶ್ವರ್ಯವನ್ನು ಚಕ್ರವರ್ತಿಯಾಗಿದ್ದ ತನ್ನ ಅಣ್ಣ ಶಕವರ್ಷ 524ರಲ್ಲಿ ಅರ್ಪಿಸಿದನೆಂದು ಶಾಸನದಲ್ಲಿ ಹೇಳಿದೆ. ಆದ್ದರಿಂದ ಈ ದೇವಾಲಯ 6ನೆಯ ಶತಮಾನದ್ದೆಂದು ತೋರುತ್ತದೆ. ಈ ಶಾಸನವಲ್ಲದೆ ಮಹಾಕೂಟೇಶ್ವರನಿಗೆ ದೇವಾಲಯದ ಕಂಬದ ಮೇಲೆ ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯ ಶಾಸನವೂ ಇದೆ. ಇವಳು ದೇವರಿಗೆ ಚಿನ್ನದಿಂದ ಕಟ್ಟಿದ ಪೀಠ ಮತ್ತು ಬೆಳ್ಳಿ ಕೊಡೆ ಮಾಡಿಸಿದಳೆಂದೂ ಮಂಗಳ ಊರಿನ ಎಂಟು ಕ್ಷೇತ್ರ ಭೂಮಿಯನ್ನು ದಾನ ಮಾಡಿದಳೆಂದೂ ಶಾಸನದಲ್ಲಿದೆ. ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿದಲಾಗಿದೆ. ಮಂಗಲೇಶನ ಶಾಸನವೊಂದು ಇಲ್ಲಿಯ ದೇವರನ್ನು ಮಕುಟೇಶ್ವರನಾಥ ಎಂದು ಹೇಳಲಾಗುತ್ತದೆ. ಅದೇ ‘ಮಹಾಕುಟೇಶ್ವರ’ ಕ್ರಮೇಣ ‘ಮಾಕೂಟೇಶ್ವರ’ನಾಗಿ ನಂತರ ‘ಮಹಾಕೂಟೇಶ್ವ’ನಾಗಿ ಕರೆಯಲ್ಪಡುತ್ತಿದೆ. ಈ ಹೆಸರಿನಿಂದಾಗಿ ಕ್ಷೇತ್ರಕ್ಕೆ ‘ಮಹಾಕೂಟ’ ಎಂದು ಹೆಸರು ಬಂದಿತು.

ಪುಣ್ಯಕ್ಷೇತ್ರವಾಗಿ

[ಬದಲಾಯಿಸಿ]

ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ.ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ.

ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ.

ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು 'ದಕ್ಷಿಣಕಾಶಿ' ಎಂದೇ ಪ್ರಸಿದ್ಧವಾಗಿದೆ. ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ 'ಮಹಾಕೂಟ' ಎಂದು ಹೆಸರು ಬಂದಿದೆ. ಇಲ್ಲಿನ ಮುಖ್ಯ ದೇವಾಲಯವೊಂದರ ಶಾಸನದಲ್ಲಿ 'ಅನ್ಯ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯ ಕ್ಷೇತ್ರಗಳಲ್ಲಿ ತೊಳೆಯಲ್ಪಡುತ್ತದೆ ಆದರೆ ಪುಣ್ಯಕ್ಷೇತ್ರಗಳಲ್ಲಿ ಪಾಪ ಮಾಡಿದರೆ ಅದು ವಜ್ರಲೇಪದಂತೆ' ಎಂದು ಅಪವಿತ್ರಗೊಳಿಸುವ ಭಕ್ತರಿಗೆ ಎಚ್ಚರಿಕೆ ಶಾಸನ ಬರೆಸಲಾಗಿದೆ.

ಗ್ಯಾಲರಿ

[ಬದಲಾಯಿಸಿ]
ಮಹಾಕೂಟದ ಪುಷ್ಕರಿಣಿ

ಟೆಂಪ್ಲೇಟು:Clear all


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. "ದಕ್ಷಿಣ ಕಾಶಿ ಮಹಾಕೂಟ". Vijay Karnataka.
"https://kn.wikipedia.org/w/index.php?title=ಮಹಾಕೂಟ&oldid=1317881" ಇಂದ ಪಡೆಯಲ್ಪಟ್ಟಿದೆ