ಮಹಾಕವಿ ರನ್ನನ ಗದಾಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ 'ರನ್ನ'ನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.

ಮಹಾಕವಿ ರನ್ನನ ಗದಾಯುದ್ಧ[ಬದಲಾಯಿಸಿ]

  • ’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
  • ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನ ನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.
  • ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯು ತ್ತಿರುವುದಾಗಿ ಹೇಳಿಬಿಡುತ್ತಾನೆ.


ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ ||೧.೩೧||

ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ ||೧.೩೨||

ಮೊದಲೊಳ್ ಬದ್ಧವಿರೋಧದಿಂ ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್ ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ ||೧.೩೩||