ಮರೆವು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮರೆವು ಮಿದುಳಿನ ಹಾನಿ, ರೋಗ, ಅಥವಾ ಮಾನಸಿಕ ಆಘಾತದಿಂದ ಉಂಟಾದ ಜ್ಞಾಪಕ ಶಕ್ತಿಯ ಕೊರತೆ.[೧] ವಿವಿಧ ನಿದ್ರಾಜನಕಗಳು ಮತ್ತು ಸಂಮೋಹನ ಔಷದಿಗಳ ಬಳಕೆಯಿಂದಲೂ ತಾತ್ಕಾಲಿಕವಾಗಿ ಮರೆವು ಉಂಟಾಗಬಹುದು. ಉಂಟಾದ ಹಾನಿಯ ವ್ಯಾಪ್ತಿಯ ಕಾರಣ ನೆನಪಿನ ಶಕ್ತಿ ಸಂಪೂರ್ಣವಾಗಿ ಅಥವಾ ಭಾಗಶಃ ನಾಶವಾಗಬಹುದು. ಎರಡು ಮುಖ್ಯ ಪ್ರಕಾರಗಳ ಮರೆವು ಇವೆ: ಹಿಂಚಲನ ಮರೆವು ಮತ್ತು ಮುಂಚಲನ ಮರೆವು. ಹಿಂಚಲನ ಮರೆವು ಒಂದು ನಿರ್ದಿಷ್ಟ ದಿನಾಂಕದ ಮೊದಲು, ಸಾಮಾನ್ಯವಾಗಿ ಅಪಘಾತ ಅಥವಾ ಶಸ್ತ್ರಕ್ರಿಯೆಯ ದಿನಾಂಕದ ಮೊದಲು ಪಡೆದ ಮಾಹಿತಿಯನ್ನು ಪುನಃ ಪಡೆಯುವಲ್ಲಿ ಅಸಾಮರ್ಥ್ಯ. ಕೆಲವು ಪ್ರಕರಣಗಳಲ್ಲಿ ಸ್ಮೃತಿ ಹಾನಿಯು ದಶಕಗಳಷ್ಟು ಹಿಂದಕ್ಕೆ ವಿಸ್ತರಿಸಬಹುದಾದರೆ, ಇತರರಲ್ಲಿ ವ್ಯಕ್ತಿಯು ಕೇವಲ ಕೆಲವು ತಿಂಗಳುಗಳ ನೆನಪನ್ನು ಕಳೆದುಕೊಳ್ಳಬಹುದು. ಮುಂಚಲನ ಮರೆವು ಹೊಸ ಮಾಹಿತಿಯನ್ನು ಅಲ್ಪಾವಧಿ ಸಂಗ್ರಹದಿಂದ ದೀರ್ಘಾವಧಿ ಸಂಗ್ರಹಕ್ಕೆ ವರ್ಗಾಯಿಸುವಲ್ಲಿ ಅಸಾಮರ್ಥ್ಯ. ಈ ಬಗೆಯ ಮರೆವು ಇರುವವರು ದೀರ್ಘ ಅವಧಿಗಳವರೆಗೆ ವಿಷಯಗಳನ್ನು ನೆನಪಿನಲ್ಲಿ ಇಡಲಾರರು. ಮರೆವಿನ ಈ ಎರಡು ಪ್ರಕಾರಗಳು ಪರಸ್ಪರವಾಗಿ ಅನನ್ಯವಲ್ಲ; ಎರಡೂ ಏಕಕಾಲದಲ್ಲಿ ಸಂಭವಿಸಬಹುದು.

ಮರೆವು ವಿಶಿಷ್ಟವಾಗಿ ಕಪೋಲದ ಮಧ್ಯ ಪಾಲಿಗಳಿಗೆ ಆದ ಹಾನಿಗೆ ಸಂಬಂಧಿಸಿದೆ ಎಂದೂ ಪ್ರಕರಣದ ಅಧ್ಯಯನಗಳು ತೋರಿಸುತ್ತವೆ. ಜೊತೆಗೆ, ಹಿಪೊಕ್ಯಾಂಪಸ್‍ನ ನಿರ್ದಿಷ್ಟ ಪ್ರದೇಶಗಳು ಜ್ಞಾಪಕ ಶಕ್ತಿಗೆ ಸಂಬಂಧಿಸಿವೆ. ಡೈಎನ್ಸೆಫ಼ೆಲಾನ್‍ನ ಪ್ರದೇಶಗಳು ಹಾನಿಗೊಂಡಾಗ ಮರೆವು ಉಂಟಾಗಬಹುದು ಎಂದೂ ಸಂಶೋಧನೆ ತೋರಿಸಿಕೊಟ್ಟಿದೆ. ಇತ್ತೀಚಿನ ಅಧ್ಯಯನಗಳು ಆರ್‍ಬಿಎಪಿ೪೮ ಪ್ರೋಟೀನ್‍ನ ಕೊರತೆ ಮತ್ತು ಸ್ಮೃತಿ ಹಾನಿಯ ನಡುವೆ ಪರಸ್ಪರ ಸಂಬಂಧವನ್ನು ತೋರಿಸಿಕೊಟ್ಟಿವೆ. ಮರೆವಿನಿಂದ ನರಳುತ್ತಿರುವವರಲ್ಲಿ, ತಕ್ಷಣದ ಮಾಹಿತಿಯನ್ನು ಮರುಪಡೆಯುವ ಸಾಮರ್ಥ್ಯ ಇನ್ನೂ ಉಳಿದಿರುತ್ತದೆ, ಮತ್ತು ಅವರು ಹೊಸ ನೆನಪುಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ, ಹೊಸ ವಿಷಯವನ್ನು ಕಲಿಯುವ ಮತ್ತು ಹಳೆ ಮಾಹಿತಿಯನ್ನು ಮರುಪಡೆಯುವ ಸಾಮರ್ಥ್ಯದಲ್ಲಿ ತೀವ್ರ ಕಡಿತವನ್ನು ಗಮನಿಸಬಹುದು. ರೋಗಿಗಳು ಹೊಸ ಕಾರ್ಯವಿಧಾನ ಜ್ಞಾನವನ್ನು ಕಲಿಯಬಹುದು. ಹಿಂದಿನ ಕಲಿಕಾ ಪ್ರಸಂಗಗಳಲ್ಲಿ ಎದುರಾದ ನಿರ್ದಿಷ್ಟ ಮಾಹಿತಿಯನ್ನು ನೆನಪಿಸಿಕೊಳ್ಳುವ ಸಾಮರ್ಥ್ಯದಲ್ಲಿ ಗಾಢವಾದ ದುರ್ಬಲತೆಗಳಿದ್ದರೂ, ಮರೆವಿರುವ ರೋಗಿಗಳು ಗಣನೀಯ ಪ್ರಮಾಣದ ಬೌದ್ಧಿಕ, ಭಾಷಿಕ, ಹಾಗೂ ಸಾಮಾಜಿಕ ಕೌಶಲವನ್ನೂ ಉಳಿಸಿಕೊಂಡಿರುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Gazzaniga, M., Ivry, R., & Mangun, G. (2009) Cognitive Neuroscience: The biology of the mind. New York: W.W. Norton & Company.
"https://kn.wikipedia.org/w/index.php?title=ಮರೆವು&oldid=792723" ಇಂದ ಪಡೆಯಲ್ಪಟ್ಟಿದೆ