ವಿಷಯಕ್ಕೆ ಹೋಗು

ಮತ್ತಿಘಟ್ಟ ಫಾಲ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮತ್ತಿಘಟ್ಟ ಫಾಲ್ಸ್‌

ಚಿತ್ರ:------ed-1(1).jpg
ಮತ್ತಿಘಟ್ಟ ಫಾಲ್ಸ್‌

ವರ್ಷವಿಡೀ ಧುಮ್ಮಿಕ್ಕುವ ನೀರಿನ ಜಲಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತ್ತಿಘಟ್ಟ ಫಾಲ್ಸ್‌ ಕೂಡ ಒಂದು. ಶಿರಸಿಯಿಂದ ಸುಮಾರು ೪೨ ಕಿ. ಮೀ. (ಹೆಗಡೆಕಟ್ಟಾ-ಯಾಣ ಮಾರ್ಗದಲ್ಲಿ ಸಾಗಬೇಕು) ದೂರದಲ್ಲಿ ಇರುವ ಈ ಜಲಧಾರೆ ಹಸೇಹಳ್ಳದಿಂದ ರೂಪುಗೊಂಡಿದೆ. ಈ ಜಲಪಾತಕ್ಕೆ ಹೇಳಿಕೊಳ್ಳುವಷ್ಟು ಪ್ರಚಾರವೇನೂ ಇಲ್ಲ. ಮತ್ತಿಘಟ್ಟದ ಊರಿನಿಂದ ಈ ಜಲಪಾತ ವೀಕ್ಷಿಸಲು ಮಳೆಗಾಲದ ದಿನಗಳಲ್ಲಿ ತೆರಳುವವರು, ಹಸೇಹಳ್ಳಕ್ಕೆ ಅಡ್ಡವಾಗಿ ಬೊಂಬುಗಳಿಂದ ನಿರ್ಮಿಸಿದ ಕಾಲು ಸಂಕವನ್ನು ದಾಟಬೇಕು. ಈ ಸಂಕದ ಹಾದಿಯ ಸಹವಾಸವೇ ಬೇಡ ಎಂದು ಜಲಪಾತದಿಂದ ದೂರವುಳಿದವರೂ ಇದ್ದಾರೆ. ಆದರೆ, ದಾರಿ ಸವೆಸಿದ ಮೇಲೆ ಸಿಗುವ ಮೋಹಕ ದೃಶ್ಯಕ್ಕೆ ಎಂಥ ದಣಿವನ್ನೂ ಮರೆಸುವ ಮಾಂತ್ರಿಕತೆಯಿದೆ. ಮತ್ತಿಘಟ್ಟದ ಸರ್ಕಾರಿ ಶಾಲೆಯಿಂದ ಅರ್ಧ ಫರ್ಲಾಂಗ್ ದೂರದಲ್ಲಿ ಇರುವಾಗಲೇ ಜಲಧಾರೆಯು ಧುಮುಕುವ ಸದ್ದು ಕೇಳಿಸುತ್ತದೆ. ಅಲ್ಲಿನ ನಾಗಪತಿ ಹೆಗಡೆ ಅವರ ತೋಟದಿಂದ ಈ ಜಲಪಾತವನ್ನು ಅತೀ ಸಮೀಪದಿಂದ ನೋಡಬಹುದು. ಆದರೆ ಅದು ಅಡ್ಡಮುಖವಾಗಿ ಗೋಚರಿಸುತ್ತದೆ. ಸುಮ್ಮನೆ ನೋಡುವುದಾದರೆ ಪರವಾಗಿಲ್ಲ, ಫೋಟೊ ಕ್ಲಿಕ್ಕಿಸಬೇಕೆಂದರೆ ಈ ಜಾಗ ಅಷ್ಟೇನೂ ಪ್ರಶಸ್ತವಲ್ಲ. ಹಾಗಾಗಿ, ಜಲಧಾರೆಯನ್ನು ಎದುರು ಭಾಗದಿಂದ ನೋಡಲು ಪ್ರವಾಸಿಗರು ಹೆಗಡೆ ಅವರ ತೋಟದಿಂದ ಸುಮಾರು ಎರಡು ಕಿ.ಮೀ. ದೂರ ನಡೆಯುವುದು ಅನಿವಾರ್ಯ. ಗುಡ್ಡದ ಮೇಲಿನಿಂದ, ಹಸಿರು ಕ್ಯಾನ್ವಾಸಿನ ನಡುವೆ ಜಲಪಾತ ಬಳುಕುತ್ತಾ ಕೆಳಗಿಳಿಯುವುದು ದೃಶ್ಯಕಾವ್ಯದಂತೆ ಕಾಣಿಸುತ್ತದೆ. ಸುಮಾರು ೬೦೦ ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡಿಯೇ ತಣಿಯಬೇಕು. ಧುಮುಕಿದ ನೀರು ಉತ್ತರಮುಖವಾಗಿ ಹರಿದು ಮುಂದೆ ರಾಮನಗರ ಹತ್ತಿರ ಗಂಗಾವಳಿಯನ್ನು ಸೇರುತ್ತದೆ. ಮತ್ತಿಘಟ್ಟದ ಸುಂದರ ಪರಿಸರದ ಮಧ್ಯೆ ಇರುವ ಈ ಜಲಧಾರೆಯು ಹಾಲಿನಂತೆಯೇ ಧುಮುಕುತ್ತದೆ. ಮಳೆಗಾಲದ ದಿನಗಾಳಲ್ಲಿ ಮೈದುಂಬಿ ಹರಿಯುವ ಈ ಜಲಪಾತ ಬೇಸಿಗೆಯಲ್ಲಿ ಕೊಂಚ ಮಂಕಾದಂತೆ ಕಾಣಿಸುತ್ತದೆ.