ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ
ಫೆಬ್ರವರಿ ೨೦೧೫ರಲ್ಲಿ ಭಾರತ ಸರ್ಕಾರದಿಂದ ಈ ಯೋಜನೆ ಆರಂಭವಾಯಿತು. ಈ ಯೋಜನೆಯಡಿಯಲ್ಲಿ ಪ್ರತೀ ರೈತನ ಭೂಮಿಯ ಮಣ್ಣನ್ನು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಬಗ್ಗೆ ಕಾರ್ಡ್ ಒಂದನ್ನು ವಿತರಿಸಲಾಗುತ್ತದೆ. ವಿತರಿಸಲಾದ ಕಾರ್ಡ್ ನಲ್ಲಿ ಆ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಸಲಹೆಗಳಿರುತ್ತವೆ, ಜೊತೆಗೆ ಆ ಬೆಳೆಗೆ ಬಳಸಬೇಕಾದ ರಸಗೊಬ್ಬರ, ನೀಡಬೇಕಾದ ಖನಿಜ ಮಿಶ್ರಣಗಳ ಪ್ರಮಾಣವನ್ನು ನಮೂದು ಮಾಡಲಾಗಿರುತ್ತದೆ. ಇದರಿಂದಾಗಿ ರೈತರು ತಮ್ಮ ಭೂಮಿಯ ಫಲವತ್ತತೆಗೆ ತಕ್ಕುದಾದ ಬೆಳೆಯನ್ನು ಅಧೀಕೃತ ರಸಗೊಬ್ಬರಗಳನ್ನು ಬಳಸುವ ಮೂಲಕ ಬೆಳೆದು ಹೆಚ್ಚುವರಿ ಇಳುವರಿ ಪಡೆಯಲು ಸಹಾಯವಾಗುತ್ತದೆ.
ದೇಶದಾದ್ಯಂತ ಎಲ್ಲಾ ರೈತರ ಸಾಗುವಳಿ ಜಮೀನಿನ ಮಣ್ಣಿನ ಮಾದರಿಯನ್ನು ಪರೀಕ್ಷಿಸಿ ನಂತರ ಅವರಿಗೆ ಮಣ್ಣಿನ ಫಲವತ್ತತೆ ಬಗ್ಗೆ ಕಾರ್ಡ್ ಅನ್ನು ನೀಡಲಾಗುತ್ತದೆ. ಪ್ರತೀ ಜಮೀನಿನ ಮಣ್ಣಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಸೂಕ್ತ ತಜ್ಞರಿಂದ ಮಣ್ಣಿನ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಬಹುಮುಖ್ಯವಾಗಿ ಮಣ್ಣು ಒಳಗೊಂಡಿರುವ ಖನಿಜಗಳು, ರಾಸಾಯನಿಕಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ.ನಂತರ ಆ ಮಣ್ಣಿನ ಜಮೀನು ಯಾವ ಬೆಳೆಗೆ ಸೂಕ್ತ ಹಾಗು ಆ ಬೆಳೆಯ ಹೆಚ್ಚಿನ ಇಳುವರಿಗೆ ಯಾವ ರೀತಿಯ ಹಾಗು ಪ್ರಮಾಣದ ರಸಗೊಬ್ಬರ ಅವಶ್ಯಕ ಎಂಬುದನ್ನು ನಿರ್ಧರಿಸಿ 'ಮಣ್ಣಿನ ಆರೋಗ್ಯ ಕಾರ್ಡ್' ನಲ್ಲಿ ದಾಖಲಿಸಲಾಗುತ್ತದೆ. ದೇಶದಾದ್ಯಂತ ಸುಮಾರು ಹದಿನಾಲ್ಕು ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡುವ ಗುರಿ ಹಾಕಿಕೊಳ್ಳಲಾಗಿದೆ.
ಯೋಜನೆಯ ಸ್ವರೂಪ
[ಬದಲಾಯಿಸಿ]ರೈತರಿಗೆ ಲಾಭವಾಗಬೇಕಾದರೆ ರಸಗೊಬ್ಬರ ಮತ್ತಿತರ ಕೃಷಿ ಬಂಡವಾಳ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ರಸಗೊಬ್ಬರವನ್ನು ಸಮರ್ಪಕ ಬಳಕೆ ಮಾಡಲು ಮಣ್ಣಿನ ಫಲವತ್ತತೆ/ಅರೋಗ್ಯ ಬಹು ಮುಖ್ಯವಾಗುತ್ತದೆ. ಈ ಯೋಜನೆಯಲ್ಲಿ ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ರಸಗೊಬ್ಬರ ಬಳಕೆಯ ಬಗ್ಗೆ ಮಾಹಿತಿ ನೀಡುವುದರಿಂದ ರೈತರು ಕಡಿಮೆ ಪ್ರಮಾಣದ ರಸಗೊಬ್ಬರ ಬಳಕೆ ಮಾಡಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ.
ಅನುದಾನ
[ಬದಲಾಯಿಸಿ]೨೦೧೫ರಲ್ಲಿ ಯೋಜನೆ ಆರಂಭವಾದಾಗ ೫೬೮ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೀಡಲಾಗಿತ್ತು. ಮುಂದೆ ೨೦೧೬ ರ ವಾರ್ಷಿಕ ಬಜೆಟ್ ನಲ್ಲಿ ೧೦೦ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಯೋಜನೆಯ ನಿರ್ವಹಣೆ
[ಬದಲಾಯಿಸಿ]೨೦೧೫ - ೧೬ ನೇ ಸಾಲಿನಲ್ಲಿ ದೇಶದಾದ್ಯಂತ ೮೪ ಲಕ್ಷ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸುವ ಗುರಿಯಿತ್ತು ಆದರೆ ಜುಲೈ ೨೦೧೫ ರ ವೇಳೆಗೆ ೩೪ ಲಕ್ಷ ಕಾರ್ಡ್ ಗಳನ್ನೂ ರೈತರಿಗೆ ವಿತರಿಸಲಾಗಿತ್ತು. ಈ ವಿತರಣೆಯ ಸಮಯದಲ್ಲಿ ಅರುಣಾಚಲ ಪ್ರದೇಶ, ಗೋವಾ,ಗುಜರಾತ್, ಹರಿಯಾಣ, ಕೇರಳ, ಮಿಝೋರಾಂ, ಸಿಕ್ಕಿಂ, ತಮಿಳುನಾಡು, ಉತ್ತರಾಖಂಡ ಹಾಗು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕಾರ್ಡ್ ವಿತರಿಸಲಾಗಿಲ್ಲ. ಫೆಬ್ರವರಿ ೨೦೧೬ ರ ವೇಳೆಗೆ ೧.೧೨ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆಯಾಗಿತ್ತು. ಫೆಬ್ರವರಿ ೨೦೧೬ರ ವೇಳೆಗೆ ೧.೦೪ಕೋಟಿ ಮಣ್ಣಿನ ಮಾದರಿಗಳನ್ನು ಪರೀಕ್ಷಿಸುವ ಗುರಿ ಹಾಕಿಕೊಳ್ಳಲಾಗಿತ್ತು ಆದರೆ ೮೧ ಲಕ್ಷ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು ಹಾಗು ೫೨ ಲಕ್ಷ ಮಾದರಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.
ರೈತರಿಗೆ ಮಾಹಿತಿ
[ಬದಲಾಯಿಸಿ]ಭಾರತ ಸರ್ಕಾರದ ಕೃಷಿ,ಸಹಕಾರ ಹಾಗು ರೈತ ಕಲ್ಯಾಣ ಇಲಾಖೆ ನಿಭಾಯಿಸುತ್ತಿರುವ ಮಣ್ಣಿನ ಕಾರ್ಡ್ ಯೋಜನೆಯನ್ನು ದೇಶದ ಸರ್ವ ರೈತರು ಪಡೆಯಬಹುದು. ಇದಕ್ಕೆಂತಲೇ ಕೇಂದ್ರ ಸರ್ಕಾರ ವೆಬ್ಸೈಟ್ ಒಂದನ್ನು ಆರಂಭಿಸಿದ್ದು ಅದನ್ನು ಇಲ್ಲಿ ನೋಡಬಹುದು. ವೆಬ್ಸೈಟ್ ನಲ್ಲಿ ವಲಯವಾರು ಯೋಜನಾ ನಿರ್ದೇಶಕರನ್ನು ನೋಡಬಹುದಾಗಿದ್ದು ರೈತರು ತಮ್ಮ ವಲಯದ ಅಥವಾ ತಮ್ಮ ವಲಯಕ್ಕೆ ಸಮೀಪದ ನಿರ್ದೇಶಕರ ಅಥವಾ ಕಾರ್ಯಕರ್ತರನ್ನು ಭೇಟಿಯಾಗಿ ಮಣ್ಣಿನ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಮಾಹಿತಿ ಪಡೆಯಬಹುದು ಹಾಗು ಮಣ್ಣಿನ ಅರೋಗ್ಯ ಕಾರ್ಡ್ ಗಾಗಿ ಕೋರಿಕೆಯನ್ನು ಸಲ್ಲಿಸಬಹುದು. ರೈತರ ಜಮೀನಿನಿಂದ ಮಣ್ಣಿನ ಮಾದರಿ ಸಂಗ್ರಹಿಸಿದ ನಂತರ ಮುಂದಿನ ಅಂಶಗಳ ಬಗ್ಗೆ ಸಮಗ್ರವಾಗಿ ವೆಬ್ಸೈಟ್ ನಲ್ಲಿ ಬಿತ್ತರಿಸಲಾಗುತ್ತದೆ.ತಮ್ಮ ಮಾದರಿ ಸಂಖ್ಯೆಯನ್ನು ಹುಡುಕುವ ಮೂಲಕ ರೈತರು ತಮ್ಮ ಮಣ್ಣಿನ ಪರೀಕ್ಷೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು.
ಮಣ್ಣಿನ ಮಾದರಿ ಪರೀಕ್ಷೆಯ ನಂತರ ಕಾರ್ಡ್ ಸಿದ್ಧವಾದಾಗ ಆ ಕಾರ್ಡ್ ಅನ್ನು ವೆಬ್ಸೈಟ್ ನ ಮುಖಾಂತರವೂ ಪಡೆಯಬಹುದು.
ಅದೇ ವೆಬ್ಸೈಟ್ ನಲ್ಲಿ ವಲಯವಾರು, ಜಿಲ್ಲಾವಾರು, ರಾಜ್ಯವಾರು ಮಣ್ಣಿನ ಗುಣಮಟ್ಟ, ರಾಸಾಯನಿಕ-ಖನಿಜ ಅಂಶಗಳ ಮಿಶ್ರಣ ಮುಂತಾದ ಮಾಹಿತಿಗಳನ್ನು ಬಿತ್ತರಿಸಲಾಗಿದೆ. ರೈತರು ಈ ವೆಬ್ಸೈಟ್ ನ ಮೂಲಕ 'ಮಣ್ಣಿನ ಆರೋಗ್ಯ'ದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.