ಮಡಿಕೆ ಕಾಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಡಿಕೆ ಕಾಳು ಬರವನ್ನು ತಡೆದುಕೊಳ್ಳಬಲ್ಲ ಒಂದು ದ್ವಿದಳಧಾನ್ಯ ಸಸ್ಯ. ಇದನ್ನು ಸಾಮಾನ್ಯವಾಗಿ ಭಾರತದ ಶುಷ್ಕ ಹಾಗೂ ಅರೆ ಶುಷ್ಕ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಈ ಬೆಳೆಯ ಬೀಜಕೋಶಗಳು, ಮೊಳಕೆಗಳು ಮತ್ತು ಪ್ರೋಟೀನ್ ಸಮೃದ್ಧ ಬೀಜಗಳನ್ನು ಭಾರತದಲ್ಲಿ ಸೇವಿಸಲಾಗುತ್ತದೆ. ಮಡಿಕೆ ಕಾಳನ್ನು ಅನೇಕ ಪ್ರಕಾರಗಳ ಮಣ್ಣಿನಲ್ಲಿ ಬೆಳೆಯಬಹುದು, ಮತ್ತು ಇದು ಮೇವು ಸಸ್ಯವಾಗಿಯೂ ಕಾರ್ಯನಿರ್ವಹಿಸಬಹುದು.

ಮಡಿಕೆ ಕಾಳು ಸುಮಾರು ೪೦ ಸೆ.ಮಿ. ಎತ್ತರ ಬೆಳೆಯುವ ಒಂದು ಮೂಲಿಕೆಯಂಥ ತೆವಳುವ ವಾರ್ಷಿಕ ಸಸ್ಯ. ಅದರ ರೋಮಗಳುಳ್ಳ, ದಟ್ಟವಾಗಿ ಜೋಡಿಸಲ್ಪಟ್ಟ ಶಾಖೆಗಳ ಮೇಲಿನ ಹಳದಿ ಹೂವುಗಳು ೨ ರಿಂದ ೩ ಅಂಗುಲ ಉದ್ದದ ಹಳದಿ-ಕಂದು ಬೀಜಕೋಶಗಳಾಗಿ ಬೆಳೆಯುತ್ತವೆ.[೧] ಈ ಬೀಜಕೋಶಗಳಲ್ಲಿರುವ ಬೀಜಗಳು ಸುಮಾರು ಶೇಕಡ ೨೨-೨೪ರಷ್ಟು ಪ್ರೋಟೀನನ್ನು ಹೊಂದಿರುತ್ತವೆ.

ಬರವನ್ನು ತಡೆದುಕೊಳ್ಳಬಲ್ಲ ಇದರ ಗುಣಗಳು, ಮಣ್ಣಿನ ಸವಕಳಿಯನ್ನು ಪ್ರತಿರೋಧಿಸಬಲ್ಲ ಸಾಮರ್ಥ್ಯ ಮತ್ತು ಇದರಲ್ಲಿರುವ ಹೆಚ್ಚಿನ ಪ್ರೋಟೀನ್ ಪ್ರಮಾಣದ ಕಾರಣ, ಮಡಿಕೆ ಕಾಳನ್ನು ಸಂಭಾವ್ಯವಾಗಿ ಭವಿಷ್ಯದಲ್ಲಿನ ಒಂದು ಹೆಚ್ಚು ಮಹತ್ವದ ಆಹಾರ ಮೂಲವೆಂದು ಗುರುತಿಸಲಾಗಿದೆ.

ಮಡಿಕೆ ಕಾಳನ್ನು ಮಾನವ ಸೇವನೆ ಮತ್ತು ಮೇವು ಬೆಳೆ ಎರಡಕ್ಕೂ ಬೆಳೆಯಲಾಗುತ್ತದೆ. ಭಾರತದಲ್ಲಿ ಪ್ರಸಕ್ತವಾಗಿ, ಮಡಿಕೆ ಕಾಳನ್ನು ಒಂದೇ ಬೆಳೆಯಲಾಗುತ್ತದೆ ಅಥವಾ ಸಜ್ಜೆಯಂತಹ ಇತರ ಧಾನ್ಯಗಳೊಂದಿಗೆ ಅಂತರಬೆಳೆಯಾಗಿ ಬೆಳೆಯಲಾಗುತ್ತದೆ. ಇದನ್ನು ಮೇವಿಗಾಗಿ ಹತ್ತಿಯೊಂದಿಗೆ ಸರದಿ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಮೇವು ಬೆಳೆಯಾಗಿ ಬೆಳೆಯಲಾದಾಗ, ಹೆಕ್ಟೇರ್‌ಗೆ ೭-೩೪ ಕೆ.ಜಿ. ನೆಡಲಾಗುತ್ತದೆ, ಮತ್ತು ಏಕ ಬೆಳೆಯಾಗಿ ಬೆಳೆಯಲಾದಾಗ ಹೆಕ್ಟೇರ್‌ಗೆ ೧೦-೨೦ ಕೆ.ಜಿ. ನೆಡಲಾಗುತ್ತದೆ. ಸಾಲುಗಳ ನಡುವೆ ಅಂತರ ೩೦-೯೦ ಸೆ.ಮಿ. ಇರಬೇಕು, ಮತ್ತು ಬೀಜಗಳನ್ನು ೨.೫-೪ ಸೆ.ಮಿ. ಆಳದಲ್ಲಿ ನೆಡಬೇಕು. ಮಡಿಕೆ ಕಾಳು ಬಲಿಯಲು ೭೫-೯೦ ದಿನಗಳು ಬೇಕಾಗುತ್ತದೆ, ಮತ್ತು ಇದನ್ನು ಆಗಾಗ್ಗೆ ಮಳೆಗಾಲದ ಕೊನೆಯಲ್ಲಿ ನೆಡಲಾಗುತ್ತದೆ.

ಇಡೀ ಅಥವಾ ಸೀಳಿದ ಮೊಳಕೆ ಕಾಳಿನ ಬೀಜಗಳನ್ನು ಬೇಯಿಸಬಹುದು ಅಥವಾ ಕರಿಯಬಹುದು. ಭಾರತದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ, ಮಡಿಕೆ ಕಾಳುಗಳನ್ನು ಬೇಯಿಸುವ ಮೊದಲು ಮೊಳಕೆ ಎಬ್ಬಿಸಲಾಗುತ್ತದೆ ಮತ್ತು ಉಸಳಿಯನ್ನು ತಯಾರಿಸಲು ಬಳಸಲಾಗುತ್ತದೆ. ಇವನ್ನು ತಿಂಡಿ ಅಥವಾ ಇತರ ಊಟಗಳಿಗೆ ಬಳಸಬಹುದು. ಉಸಳಿಯು ಜನಪ್ರಿಯ ಭಕ್ಷ್ಯವಾದ ಮಿಸಳ್ ಪಾವ್‍ನ ಅಗತ್ಯದ ಭಾಗವಾಗಿದೆ. ಕರಿಯಲಾದ ಸೀಳಿದ ಕಾಳುಗಳನ್ನು ತಿನ್ನಲು ಸಿದ್ಧವಾದ ಸಾಂಪ್ರದಾಯಿಕ ನಮ್‍ಕೀನ್ ಆಗಿ ಬಳಸಲಾಗುತ್ತದೆ, ಖಾರವನ್ನೂ ಸೇರಿಸಬಹುದು ಮತ್ತು ಸಾಂಪ್ರದಾಯಿಕ ದಾಲ್ ಮಾಡಲು ಬಳಸಬಹುದು. ಮಡಿಕೆ ಕಾಳಿನ ಬೀಜಕೋಶಗಳನ್ನು ಬೇಯಿಸಿ ತಿನ್ನಬಹುದು, ಮತ್ತು ಬೀಜಗಳನ್ನು ಹಿಟ್ಟಾಗಿ ಬೀಸಬಹುದು. ಹಿಟ್ಟನ್ನು ಮತ್ತೊಂದು ಸಾಂಪ್ರದಾಯಿಕ ನಮ್‍ಕೀನ್ ಆದ ಭುಜಿಯಾಕ್ಕಾಗಿ ಬಳಸುತ್ತಾರೆ. ಬೀಜಗಳ ಸೇವನೆಯು ಜ್ವರವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Brink, M. & Jansen, P.C.M., 2006. Vigna aconitifolia (Jacq.) Maréchal. [Internet] Record from PROTA4U. Brink, M. & Belay, G. (Editors). PROTA (Plant Resources of Tropical Africa / Ressources végétales de l’Afrique tropicale), Wageningen, Netherlands. <"Archived copy". Archived from the original on November 8, 2013. Retrieved October 20, 2013. {{cite web}}: Unknown parameter |dead-url= ignored (help)CS1 maint: archived copy as title (link)>. Accessed 15 November 2013.