ಭಾರತೀಯ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೋಬಲ್ ಪ್ರಶಸ್ತಿ ಪಡೆದ ಭಾರತದ ಸಾಹಿತಿ ರವೀಂದ್ರನಾಥ ಠಾಗೋರ್

ಭಾರತೀಯ ಸಾಹಿತ್ಯ ಪದವು ೧೯೪೭ರ ವರೆಗೆ ಭಾರತೀಯ ಉಪಖಂಡದಲ್ಲಿ ಮತ್ತು ಅಲ್ಲಿಂದ ಮುಂದೆ ಭಾರತದ ಗಣರಾಜ್ಯದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ನಿರ್ದೇಶಿಸುತ್ತದೆ. ಭಾರತದ ಗಣರಾಜ್ಯವು ೨೨ ಅಧಿಕೃತವಾಗಿ ಮಾನ್ಯಮಾಡಲಾದ ಭಾಷೆಗಳನ್ನು ಹೊಂದಿದೆ.[೧]

ಭಾರತೀಯ ಸಾಹಿತ್ಯದ ಅತ್ಯಂತ ಮುಂಚಿನ ಗ್ರಂಥಗಳು ಮೌಖಿಕವಾಗಿ ಪ್ರಸಾರ ಮಾಡಲಾಗಿದ್ದವು. ಸಂಸ್ಕೃತ ಸಾಹಿತ್ಯವು ಕ್ರಿ.ಪೂ. ೧೫೦೦-ಕ್ರಿ.ಪೂ. ೧೨೦೦ರ ಕಾಲಮಾನದ ಧಾರ್ಮಿಕ ಋಕ್ಕುಗಳ ಸಂಗ್ರಹವಾದ ಋಗ್ವೇದದಿಂದ ಪ್ರಾರಂಭವಾಗುತ್ತದೆ.

ಹಿನ್ನಲೆ[ಬದಲಾಯಿಸಿ]

ಭಾರತದ ಮೊಟ್ಟ ಮೊದಲಸಂಸ್ಕೃತ ಸಾಹಿತ್ಯ ಋಗ್ವೇದ ವರ್ಷ ೧೫೦೦ ರಿಂದ ೧೨೦೦ ಮಧ್ಯೆ ರಚನೆಯಾಗಿರಬಹುದಾದ, ಋಗ್ವೇದ ಮಂತ್ರಗಳನ್ನು ಒಳಗೊಂಡಿದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಮೊದಲ ಸಹಸ್ರಮಾನದ ಅಂತ್ಯದಲ್ಲಿ ರಚನೆಯಾಗಿರಬಹುದು ಎಂಬುದೊಂದು ಅಂದಾಜು. ಪ್ರಾಚೀನ ಸಂಸ್ಕೃತ ಸಾಹಿತ್ಯ ಮೊದಲ ಸಹಸ್ರಮಾನದ ಆರಂಭಿಕ ಶತಮಾನಗಳಲ್ಲಿ ಸಮೃದ್ಧವಾಗಿ ಬೆಳೆಯಿತು.

ತಮಿಳಿನ ಸಂಗಮ್‌ ಸಾಹಿತ್ಯ ಇದೇ ಹಂತದಲ್ಲಿ ರಚನೆಯಾಯಿತು. ಮಧ್ಯಕಾಲೀನ ಅವಧಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಆರಂಭವಾಯಿತು. ಕನ್ನಡದಲ್ಲಿ 9ನೇ ಶತಮಾನದಲ್ಲೂ, ತೆಲುಗಿನಲ್ಲಿ ೧೧ನೇ ಶತಮಾನದಲ್ಲೂ ಮೊದಲ ಸಾಹಿತ್ಯ ಕೃತಿಗಳು ರಚನೆಯಾದವು. ಅದೇ ರೀತಿ ೧೨ನೇ ಶತಮಾನದಲ್ಲಿ ಮೊದಲ ಮಲಯಾಳಂ ಭಾಷಾ ಸಾಹಿತ್ಯ ಕಾಣಿಸಿಕೊಂಡಿತು. ಬಂಗಾಳಿ, ಮರಾಠಿ, ಹಿಂದಿಯ ಉಪಭಾಷೆಗಳು ಹಾಗೂ ಪರ್ಷಿಯನ್‌ ಮತ್ತು ಉರ್ದು ಭಾಷೆಗಳಲ್ಲಿ ಮೊದಲ ಸಾಹಿತ್ಯ ಕಾರ್ಯಗಳು ಇದೇ ಅವಧಿಯಲ್ಲಿ ಕಾಣಿಸಿಕೊಂಡವು. ರವೀಂದ್ರನಾಥ ಟಾಗೋರ್‌, ರಾಮ್‌ಧಾರಿ ಸಿಂಗ್‌ ’ದಿನಕರ್‌’, ಸುಬ್ರಮಣಿಯ ಭಾರತಿ, ಕುವೆಂಪು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮೈಕೇಲ್‌ ಮಧುಸೂದನ ದತ್, ಮುನ್ಷಿ ಪ್ರೇಮಚಂದ್‌, ಮಹಮ್ಮದ್‌ ಇಕ್ಬಾಲ್‌ ಮತ್ತು ದೇವಕಿ ನಂದನ್‌ ಖತ್ರಿ ಇವರು ಭಾರತ ಕಂಡ ಅತ್ಯಂತ ಮಹತ್ವದ ಸಾಹಿತಿಗಳು.

ಗಿರೀಶ್‌ ಕಾರ್ನಾಡ್‌, ಆಗ್ಯೇಯ, ನಿರ್ಮಲ್‌ ವರ್ಮ, ಕಮಲೇಶ್ವರ್‌, ವೈಕೋಮ್ ಮಹಮ್ಮದ್‌ ಬಷೀರ್‌, ಇಂದಿರಾ ಗೋಸ್ವಾಮಿ, ಮಹಾಶ್ವೇತಾ ದೇವಿ, ಅಮೃತಾ ಪ್ರೀತಮ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಖುರ್ರಾತುಲೇನ್‌ ಹೈದರ‍್ ಮತ್ತು ತಕಾಝಿ ಶಿವಶಂಕರ ಪಿಳ್ಳೈ ಹಾಗೂ ಇನ್ನೂ ಮುಂತಾದವರು ಸಮಕಾಲೀನ ಭಾರತದಲ್ಲಿ ಹೆಚ್ಚಿನ ಪ್ರಶಂಸೆಗೆ ಮತ್ತು ಮಹತ್ವದ ಚರ್ಚೆಗೊಳಗಾಗಿರುವ ಪ್ರಮುಖ ಸಾಹಿತಿಗಳು. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್‌ ಆಧುನಿಕ ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುವ ಸೇವೆಯನ್ನು ಪರಿಗಣಿಸಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಾಗಿವೆ. ಕನ್ನಡ ಭಾಷೆಗೆ ದೇಶದಲ್ಲೇ ಅತಿ ಹೆಚ್ಚಿನ ೮ ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿವೆ.

(ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾನಾ೯ಡ್, ಚಂದ್ರಶೇಖರ ಕಂಬಾರ). ಅದೇ ರೀತಿ ಹಿಂದಿಗೆ ಆರು, ಬಂಗಾಳಿಗೆ ಐದು, ಮಲಯಾಳಂ ಸಾಹಿತ್ಯಕ್ಕೆ ನಾಲ್ಕು ಹಾಗೂ ಮರಾಠಿ, ಗುಜರಾತಿ, ಉರ್ದು ಮತ್ತು ಒರಿಯಾ ಸಾಹಿತ್ಯಕ್ಕೆ ತಲಾ ಮೂರು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.

ಕಾವ್ಯ[ಬದಲಾಯಿಸಿ]

ಕುರುಕ್ಷೇತ್ರ ಯುದ್ಧದ ಸಚಿತ್ರ ವಿವರಣೆ ೭೪೦೦೦ಕ್ಕೂ ಹೆಚ್ಚಿನ ಸಾಲುಗಳು, ಉದ್ದನೆಯ ಗದ್ಯ ಭಾಗಗಳು ಮತ್ತು ಒಟ್ಟು ಸುಮಾರು ೧.೮ ದಶಲಕ್ಷ ಪದಗಳಿರುವ ಮಹಾಭಾರತ ವಿಶ್ವದ ಅತ್ಯಂತ ಬೃಹತ್‌ ಮಹಾಕಾವ್ಯ.

ಋಗ್ವೇದ ಕಾಲದಿಂದಲೂ ಭಾರತ ಕಾವ್ಯ ಮತ್ತು ಗದ್ಯದ ಬಲಿಷ್ಠ ಪರಂಪರೆಯನ್ನು ಹೊಂದಿದೆ. ಕಾವ್ಯ ಎಂಬ ಸಾಹಿತ್ಯ ಪ್ರಕಾರ ಸಂಗೀತ ಸಂಪ್ರದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಧಾರ್ಮಿಕ ಜಾಗೃತಿಗಾಗಿ ಪ್ರಮುಖ ಅಸ್ತ್ರವಾಗಿಯೂ ಇದನ್ನು ಬಳಸಲಾಗಿದೆ. ಲೇಖಕರು ಮತ್ತು ತತ್ವಜ್ಞಾನಿಗಳು ಸಾಮಾನ್ಯವಾಗಿ ಪ್ರತಿಭಾವಂತ ಕವಿಗಳೂ ಆಗಿರುತ್ತಾರೆ. ಆಧುನಿಕ ಯುಗದಲ್ಲಿ, ಅಂದರೆ ಭಾರತ ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ಕಾವ್ಯ ರಾಷ್ಟ್ರೀಯತೆಯ ಅಹಿಂಸಾ ಅಸ್ತ್ರವಾಗಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಆಧುನಿಕ ಕಾಲದಲ್ಲಿ ರವೀಂದ್ರನಾಥ ಟಾಗೋರ್‌ ಮತ್ತು ಕೆ. ನರಸಿಂಹಸ್ವಾಮಿ ಅವರ ಕಾವ್ಯದಲ್ಲಿ ಈ ಸಂಪ್ರದಾಯಕ್ಕೆ ಅತ್ಯುತ್ತಮ ಉದಾಹರಣೆಗಳು ದೊರೆಯುತ್ತವೆ. ಅದೇರೀತಿ ಮಧ್ಯಕಾಲೀನ ಅವಧಿಯ ಬಸವಣ್ಣನ (ವಚನಗಳು ), ಕಬೀರ್‌ ಮತ್ತು ಪುರಂದರದಾಸರ (ಪದಗಳು ಅಥವಾ ದೇವರ ನಾಮಗಳು ) ಕೀರ್ತನೆಗಳು ಮತ್ತು ಪ್ರಾಚೀನ ಕಾಲದ ಮಹಾಕಾವ್ಯಗಳಲ್ಲೂ ಇದಕ್ಕೆ ಕುರುಹುಗಳು ಕಾಣಸಿಗುತ್ತವೆ. ಟಾಗೋರರ ಗೀತಾಂಜಲಿ ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಒದಗಿಸಿರುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ರಾಮಾಯಣ ಮತ್ತು ಮಹಾಭಾರತಗಳು ಭಾರತದ ಅತ್ಯಂತ ಪ್ರಾಚೀನ ಮತ್ತು ಇಂದಿಗೂ ಅತ್ಯಂತ ಜನಪ್ರಿಯ ಮಹಾಕಾವ್ಯಗಳು. ಥಾಯ್ಲೆಂಡ್‌, ಮಲೇಷ್ಯಾ ಮತ್ತು ಇಂಡೊನೇಷ್ಯಾಗಳು ಇವುಗಳ ವಿವಿಧ ಆವೃತ್ತಿಗಳನ್ನು ಹೊಂದಿದ್ದು ಅವುಗಳನ್ನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳ ಮಹಾಕಾವ್ಯ ಎಂದು ಬಣ್ಣಿಸಿವೆ. ಇವುಗಳ ಜೊತೆಗೆ ಪ್ರಾಚೀನ ತಮಿಳು ಭಾಷೆಯಲ್ಲಿ ಶಿಲಪ್ಪದಿಗಾರಂ, ಮಣಿಮೇಗಲೈ, ಸಿವಕ ಚಿಂತಾಮಣಿ, ತಿರುಟಕ್ಕತೇವರ್‌, ಕುಂದಲಕೇಸಿ ಎಂಬ ಐದು ಮಹಾಕಾವ್ಯಗಳಿವೆ. ರಾಮಾಯಣ, ಮಹಾಭಾರತಗಳ ಪ್ರಾದೇಶಿಕ ಅವತರಿಣಿಕೆಗಳು ನೂರಾರಿವೆ. ಇವು ಮಹಾಕಾವ್ಯದ ವಸ್ತು ಹೊಂದಿದ್ದರೂ ಮಹಾಕಾವ್ಯಗಳಲ್ಲ. ಅವುಗಳೆಂದರೆ, ತಮಿಳಿನ ಕಂಬ ರಾಮಾಯಣ, ಕನ್ನಡದಲ್ಲಿ ಆದಿಕವಿ ಪಂಪ ಬರೆದ ಪಂಪ ಭಾರತ, ಕುಮಾರ ವಾಲ್ಮೀಕಿ ಬರೆದ ತೊರವೆ ರಾಮಾಯಣ ಮತ್ತು ಕುಮಾರವ್ಯಾಸ ವಿರಚಿತ ಕರ್ನಾಟ ಭಾರತ ಕಥಾ ಮಂಜರಿ, ಹಿಂದಿಯ ರಾಮಚರಿತಮಾನಸ, ಮಲಯಾಳಂನ ಆಧ್ಯಾತ್ಮರಾಮಾಯಣಮ್‌ ಇನ್ನೂ ಮುಂತಾದವು.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]