ವಿಷಯಕ್ಕೆ ಹೋಗು

ಭಾರತದಲ್ಲಿ ನಿರುದ್ಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿನ ನಿರುದ್ಯೋಗದ ಅಂಕಿಅಂಶಗಳನ್ನು ಸಾಂಪ್ರದಾಯಿಕವಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರತಿ ಐದು ವರ್ಷಕ್ಕೊಮ್ಮೆ ಸಂಗ್ರಹಿಸಿ, ಒಟ್ಟುಗೂಡಿಸಿ ಹಂಚುತ್ತದೆ. ಇದು ಮುಖ್ಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯು ನಡೆಸುವ ಮಾದರಿ ಅಧ್ಯಯನಗಳನ್ನು ಆಧರಿಸಿರುತ್ತದೆ.[][] ಈ ಪಂಚವಾರ್ಷಿಕ ಮಾದರಿ ಅಧ್ಯಯನಗಳನ್ನು ಹೊರತುಪಡಿಸಿ, (೨೦೧೭ರಿಂದ ಹೊರತುಪಡಿಸಿ) ಭಾರತವು ಎಂದೂ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಉದ್ಯೋಗ ಮತ್ತು ನಿರುದ್ಯೋಗದ ಅಂಕಿಅಂಶಗಳನ್ನು ವಾಡಿಕೆಯಾಗಿ ಸಂಗ್ರಹಿಸಿಲ್ಲ. ೨೦೧೬ರಲ್ಲಿ, ಮುಂಬಯಿಯಲ್ಲಿ ನೆಲೆಗೊಂಡಿರುವ ಒಂದು ಸರ್ಕಾರೇತರ ಘಟಕವಾದ ಭಾರತೀಯ ಅರ್ಥವ್ಯವಸ್ಥೆ ಮೇಲ್ವಿಚಾರಣಾ ಕೇಂದ್ರವು ಭಾರತದಲ್ಲಿ ನಿರುದ್ಯೋಗದ ಅಂಕಿಅಂಶಗಳ ಮಾಸಿಕ ಮಾದರಿ ಸಂಗ್ರಹಣೆ ಮತ್ತು ಪ್ರಕಟನೆಯನ್ನು ಆರಂಭಿಸಿತು.[]

ವಿಧಾನ ಮತ್ತು ಸಮೀಕ್ಷೆಯ ಆವರ್ತನ

[ಬದಲಾಯಿಸಿ]

ಎನ್ಎಸ್ಎಸ್‍ಒ ಸಮೀಕ್ಷೆಗಳು

[ಬದಲಾಯಿಸಿ]

ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್ಎಸ್ಎಸ್‍ಒ) ಮಾದರಿ ಸಮೀಕ್ಷೆಗಳ ಮೂಲಕ ಉದ್ಯೋಗ, ನಿರುದ್ಯೋಗ ಮತ್ತು ನಿರುದ್ಯೋಗ ದರಗಳನ್ನು ಅಧ್ಯಯನಿಸಲು ಭಾರತದಲ್ಲಿನ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳ ಪ್ರಧಾನ ಸರ್ಕಾರಿ ಸಂಸ್ಥೆಯಾಗಿದೆ. ಇದು ಉದ್ಯೋಗ ಅಥವಾ ನಿರುದ್ಯೋಗದ ಫಲಿತಾಂಶಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ ಪ್ರತಿ ವರ್ಷಕ್ಕೊಮ್ಮೆ ವರದಿ ಮಾಡುವುದಿಲ್ಲ, ಬದಲಾಗಿ ಕೇವಲ ಪ್ರತಿ ೫ ವರ್ಷಗಳಿಗೊಮ್ಮೆ ಸಾಮಾನ್ಯವಾಗಿ ವರದಿಮಾಡುತ್ತದೆ.[] ಉದ್ಯೋಗ ಮತ್ತು ನಿರುದ್ಯೋಗದ ಮೇಲಿನ ಅಧಿಕೃತವಾಗಿ ಬಿಡುಗಡೆ ಮಾಡಲಾದ ಕೊನೆಯ ಮೂರು ಎನ್ಎಸ್ಎಸ್‍ಒ ಸಮೀಕ್ಷೆ ಮತ್ತು ವರದಿಗಳನ್ನು 2004–2005, 2009–2010, ಮತ್ತು 2011–2012ರಲ್ಲಿ ಮುಗಿಸಲಾಯಿತು. 2011-2012ರ ಸಮೀಕ್ಷೆಯನ್ನು ಕಾಂಗ್ರೆಸ್ ನಾಯಕತ್ವದ ಮನ್‍ಮೋಹನ್ ಸಿಂಗ್‍ರ ಸರ್ಕಾರವು ಆರಂಭಿಸಿತು ಏಕೆಂದರೆ 2009–2010ರ ವರದಿಯಲ್ಲಿನ ಹೆಚ್ಚಿನ ನಿರುದ್ಯೋಗದ ಅಂಕಿಅಂಶಗಳು ಕಳಪೆ ಮಳೆಗಾಲಗಳ ಕಾರಣ ಬಾಧಿತವಾಗಿರಬಹುದು, ಮತ್ತು ಒಂದು ಮುಂಚಿತ ಸಮೀಕ್ಷೆಯು ಹೆಚ್ಚು ನಿಖರ ಹಾಗೂ ಉತ್ತಮ ದತ್ತಾಂಶಗಳನ್ನು ನೀಡಬಹುದೆಂದು ಭಾವಿಸಲಾಯಿತು.[] ೨೦೧೨ ಮತ್ತು ೨೦೧೭ರ ನಡುವೆ ಯಾವುದೇ ಎನ್ಎಸ್ಎಸ್‍ಒ ಸಮೀಕ್ಷೆಯಾಗಲಿಲ್ಲ, ಮತ್ತು ಹೊಸ ಸಮೀಕ್ಷೆಯನ್ನು 2017–2018ರಲ್ಲಿ ಆರಂಭಿಸಲಾಯಿತು. ಈ ವರದಿಯನ್ನು ಬಿಜೆಪಿ ನಾಯಕತ್ವದ ನರೇಂದ್ರ ಮೋದಿ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ, ಆದರೆ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ.[]

ಐಎಲ್ಒ ಪ್ರಕಾರ, ಎನ್ಎಸ್ಎಸ್‍ಒ ಸಮೀಕ್ಷೆಗಳು ಭಾರತದ ಅತಿ ವಿಸ್ತಾರವಾದ ಸಮೀಕ್ಷೆಗಳಾಗಿವೆ ಏಕೆಂದರೆ ಇವು ಭಾರತದ ದೂರದ ಮೂಲೆಗಳು ಮತ್ತು ದ್ವೀಪಗಳಲ್ಲಿನ ಸಣ್ಣ ಹಳ್ಳಿಗಳನ್ನು ಒಳಗೊಳ್ಳುತ್ತವೆ.[] ಆದರೆ, ಈ ಸಮೀಕ್ಷೆಯು ಸಂಪ್ರದಾಯಬದ್ಧವಲ್ಲದ ಮತ್ತು ಭಾರತ ನಿರ್ದಿಷ್ಟ ಪರಿಭಾಷೆಯನ್ನು ಬಳಸುತ್ತದೆ. ಇದು ಒಬ್ಬ ವ್ಯಕ್ತಿಯ ಚಟುವಟಿಕೆ ಸ್ಥಾನಮಾನವನ್ನು ವಿಭಿನ್ನ ಕಾರ್ಯವಿಧಾನಗಳಿಂದ ಅಂದಾಜಿಸುತ್ತದೆ ಅಂದರೆ. "ಸಾಮಾನ್ಯ ಸ್ಥಾನಮಾನದ" ನಿರುದ್ಯೋಗ ಮತ್ತು "ಪ್ರಸಕ್ತ ಸ್ಥಾನಮಾನದ" ನಿರುದ್ಯೋಗ. ಒಂದು ಐಎಲ್ಒ ವರದಿಯ ಪ್ರಕಾರ, ಈ ಅಂದಾಜುಗಳು ವಿವಿಧ ರೂಪಗಳ ನಿರುದ್ಯೋಗ ಅಂಕಿಅಂಶಗಳನ್ನು ನೀಡುತ್ತವೆ. ಒಬ್ಬ ವ್ಯಕ್ತಿಯು ವೇತನಕ್ಕಾಗಿ ಅಥವಾ ವೇತನವಿಲ್ಲದೇ "೩೬೫ರ ಸಂದರ್ಭಾವಧಿಯ ವೇಳೆ ಕನಿಷ್ಠಪಕ್ಷ ೩೦ ದಿನಗಳು ಕೆಲಸ ಮಾಡಿದ್ದಾನೆ", "ಸಮೀಕ್ಷೆಯ ದಿನಾಂಕದ ಪೂರ್ವದ ೭ ದಿನಗಳ ಅವಧಿಯ ಯಾವುದೇ ಒಂದು ದಿನದಂದು ಕನಿಷ್ಠಪಕ್ಷ ೧ ಗಂಟೆ ಕೆಲಸ ಮಾಡಿದ್ದಾನೆ", ಮತ್ತು "ಸಂದರ್ಭ ವಾರದಲ್ಲಿ ಕೆಲಸಮಾಡಿದ ವ್ಯಕ್ತಿ ಗಂಟೆಗಳ" ಅಂದಾಜಿನಂತಹ ಅಂಶಗಳನ್ನು ಆಧರಿಸಿ ಮೊತ್ತಗಳು ಅಂಕಿಅಂಶ ವಿಧಾನಗಳ ಪ್ರಕಾರ ಬದಲಾಗುತ್ತವೆ. ಅದರ ಮಾದರಿ ಸಮೀಕ್ಷೆಯಿಂದ, ಅದು ವ್ಯಾಪಕ ಶ್ರೇಣಿಯ ಉದ್ಯೋಗ ಮತ್ತು ನಿರುದ್ಯೋಗದ ಅಂಕಿಅಂಶಗಳನ್ನು, ಜೊತೆಗೆ ರಾಷ್ಟ್ರದ ಜನಸಂಖ್ಯೆ, ಲಿಂಗ ವಿತರಣೆ, ಮತ್ತು ಅನೇಕ ಇತರ ದತ್ತಾಂಶಗಳನ್ನು ಅಂದಾಜಿಸುತ್ತದೆ. ಎನ್ಎಸ್ಎಸ್‍ಒ ವಿಧಾನವು ವಿವಾದಾತ್ಮಕವಾಗಿದೆ. ಇದನ್ನು ಇದರ ವ್ಯಾಪ್ತಿ ಹಾಗೂ ಪ್ರಯತ್ನಕ್ಕಾಗಿ ಪ್ರಶಂಸಿಸಲಾಗಿದೆಯಾದರೂ, ಇದರ "ಅಸಂಬದ್ಧ" ಫಲಿತಾಂಶಗಳು ಮತ್ತು ಅಸಮಂಜಸತೆಗಳಿಗಾಗಿಯೂ ಟೀಕಿಸಲಾಗಿದೆ.[][]

ಕಾರ್ಮಿಕ ಸಂಸ್ಥೆಯ ವರದಿಗಳು

[ಬದಲಾಯಿಸಿ]

ಎನ್ಎಸ್ಎಸ್‍ಒ ಸಮೀಕ್ಷೆಗಳ ಜೊತೆಗೆ, ಭಾರತೀಯ ಕಾರ್ಮಿಕ ಸಂಸ್ಥೆಯು ಪ್ರತಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ವರದಿಗಳ ನಿರುದ್ಯೋಗ ದತ್ತಾಂಶಗಳ ಪರೋಕ್ಷ ವಾರ್ಷಿಕ ಸಂಕಲನಗಳನ್ನು ಪ್ರಕಟಿಸಿದೆ. ಇವುಗಳು ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ಎಎಸ್‍ಐ), ವೃತ್ತಿ ವೇತನಗಳ ಸಮೀಕ್ಷೆಗಳು, ಮತ್ತು ಕಾರ್ಮಿಕ ವರ್ಗದ ಕುಟುಂಬ ಆದಾಯ ಹಾಗೂ ಖರ್ಚುವೆಚ್ಚಗಳ ಸಮೀಕ್ಷೆಗಳು ಮತ್ತು ತೃತೀಯ ಪಕ್ಷಗಳು ಭಾರತದ ಮೇಲೆ ಪ್ರಕಟಿಸಿದ ಇತರ ನಿಯಮಿತ ಹಾಗೂ ತಾತ್ಪೂರ್ತಿಕ ಕ್ಷೇತ್ರ ಸಮೀಕ್ಷೆಗಳು ಹಾಗೂ ಅಧ್ಯಯನಗಳಿಂದ ಜನ್ಯವಾಗಿವೆ.[]

ಸಿಎಂಐಇ ವರದಿಗಳು

[ಬದಲಾಯಿಸಿ]

ಭಾರತೀಯ ಅರ್ಥವ್ಯವಸ್ಥೆ ಮೇಲ್ವಿಚಾರಣಾ ಕೇಂದ್ರ ಪ್ರೈ. ಲಿ. ಪ್ರಕಾರ, ಭಾರತವು ತನ್ನ ಜನರಿಗಾಗಿ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಉದ್ಯೋಗ ಹಾಗೂ ನಿರುದ್ಯೋಗ ದತ್ತಾಂಶಗಳ ಮೇಲೆ ಕಣ್ಣಿಟ್ಟು ಪ್ರಕಟಿಸಿದೆ. ಒಂದು ಸರ್ಕಾರೇತರ ಖಾಸಗಿ ಸಂಸ್ಥೆಯಾದ ಭಾರತೀಯ ಅರ್ಥವ್ಯವಸ್ಥೆ ಮೇಲ್ವಿಚಾರಣಾ ಕೇಂದ್ರವು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ೨೦೧೬ರಲ್ಲಿ ಮಾಸಿಕ ನಿರುದ್ಯೋಗ ದತ್ತಾಂಶಗಳನ್ನು ಸಮೀಕ್ಷಿಸಿ ಪ್ರಕಟಿಸಲು ಆರಂಭಿಸಿತು. ಇದರ ದತ್ತ ಸಂಗ್ರಹ ವಿಧಾನ ಮತ್ತು ವರದಿಗಳು ಎನ್ಎಸ್ಎಸ್‍ಒ ಪ್ರಕಟಿಸಿದವುಗಳಿಂದ ಭಿನ್ನವಾಗಿವೆ.

ಐಎಲ್ಒ ವರದಿಗಳು

[ಬದಲಾಯಿಸಿ]

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಇತರ ದೇಶಗಳ ಜೊತೆಗೆ, ಭಾರತದಲ್ಲಿನ ನಿರುದ್ಯೋಗದ ಬಗ್ಗೆ ತಾನು ಅಳವಡಿಸಿಕೊಂಡ ಅಂತರರಾಷ್ಟ್ರೀಯ ಮಾನದಂಡಗಳನ್ನು ಆಧರಿಸಿ ತನ್ನ ಅಂಕಿಅಂಶಗಳನ್ನು ಪ್ರಕಟಿಸಿದೆ. ೨೦೧೭ರಲ್ಲಿ, ದೇಶಗಳಾದ್ಯಂತ ಕಾರ್ಮಿಕದಳ, ಉದ್ಯೋಗ ಮತ್ತು ನಿರುದ್ಯೋಗ ಪ್ರವೃತ್ತಿಗಳ ಮಾಪನವನ್ನು ಹೆಚ್ಚು ನಿಖರ ಮತ್ತು ಸಮಂಜಸ ಮಾಡಲು ಐಎಲ್ಒ ತನ್ನ ವಿಧಾನಗಳನ್ನು ಆಧುನಿಕಗೊಳಿಸಿತು. ಐಎಲ್ಒ ಎಲ್ಲ ದೇಶಗಳಿಗೆ ಪರಿಷ್ಕರಣೆಗಳು ಮತ್ತು ಕ್ರಮಗಳನ್ನು ಅಳವಡಿಸಿಕೊಂಡಿತು. "ಹೆಚ್ಚುವರಿ ದತ್ತಾಂಶ ಬಿಂದುಗಳ (ಉದಾ. ದೇಶಗಳಿಗೆ ಹೊಸ ಅಥವಾ ಆಧುನಿಕಗೊಂಡ ದತ್ತಾಂಶಗಳು) ಸೇರ್ಪಡೆ, ಹಿಂದೆ ನಿರುದ್ಯೋಗದ ರಾಷ್ಟ್ರ ನಿರ್ದಿಷ್ಟ, ಸಡಿಲವಾದ ವ್ಯಾಖ್ಯಾನಗಳು ವರದಿಯಾದ ದೇಶಗಳಲ್ಲಿ ನಿರುದ್ಯೋಗ ದರಗಳ ಗಣನೆಯಲ್ಲಿ ಅಂತರರಾಷ್ಟ್ರೀಯವಾಗಿ ಒಪ್ಪಲಾದ ಮಾನದಂಡಗಳ ಅನ್ವಯದಿಂದ ಉದ್ಭವಿಸಿದ ಅಸಮಂಜಸ ದತ್ತಾಂಶ ನಮೂದುಗಳು ಮತ್ತು ಪರಿಷ್ಕರಣೆಗಳ ತೆಗೆಯುವಿಕೆ ಒಳಗೊಳ್ಳುವುದು" ಇವುಗಳ ಉದ್ದೇಶವಾಗಿತ್ತು. ಈ ಬದಲಾವಣೆಗಳು ಜಾಗತಿಕ ನಿರುದ್ಯೋಗದ ಅಂಕಿಅಂಶಗಳಿಗೆ ಕೆಳದಿಕ್ಕಿನ ಪರಿಷ್ಕರಣೆಯ ಶೇಕಡ ೮೫ ರಷ್ಟನ್ನು ರೂಪಿಸುತ್ತವೆ". ೨೦೧೭ರಲ್ಲಿ, ಐಎಲ್ಒ ಭಾರತ ಸೇರಿದಂತೆ ಪ್ರತಿಯೊಂದು ದೇಶದ ಒಟ್ಟಾರೆ ಜನಸಂಖ್ಯಾ ದತ್ತಾಂಶ ಅಂದಾಜುಗಳಿಗೆ ಕೂಡ ಬದಲಾವಣೆಗಳನ್ನು ಅಳವಡಿಸಿಕೊಂಡಿತು. ಐಎಲ್ಒ ತನ್ನ ಅಂದಾಜುಗಳನ್ನು ಪಡೆಯಲು ಜನಸಂಖ್ಯೆಯ ಅಂಕಿಅಂಶಗಳು, ಮಾದರಿ ಸಮೀಕ್ಷೆಗಳು ಮತ್ತು ಆರ್ಥಿಕ ಚಟುವಟಿಕಾ ಸೂಚಕಗಳ ಸಂಕೀರ್ಣ ಮತ್ತು ವೈವಿಧ್ಯಮಯ ಸಮೂಹವನ್ನು ಬಳಸುತ್ತದೆ.

ಆವರ್ತಕ ಮಾಪನಗಳಿಗೆ ಬದಲಾವಣೆ

[ಬದಲಾಯಿಸಿ]

೨೦೧೭ರಲ್ಲಿ, ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ (ಎನ್ಎಸ್ಎಸ್ಒ) ಪಂಚವಾರ್ಷಿಕ ಉದ್ಯೋಗ ಸಮೀಕ್ಷೆಗಳ ಅಂತ್ಯಕ್ಕೆ ಉನ್ನತ ಮಟ್ಟದ ತಜ್ಞರ ಸಮಿತಿಯು ಶಿಫಾರಸು ಮಾಡಿದ ನಂತರ "ಭಾರತದಲ್ಲಿನ ಉದ್ಯೋಗ ದತ್ತಾಂಶ ಸಂಗ್ರಹವು ಶೀಘ್ರವೇ ಪ್ರಮುಖ ಪರಿಷ್ಕರಣೆಗೆ ಒಳಗಾಗುವುದು" ಎಂದು ಸರ್ಕಾರ ಘೋಷಿಸಿತು. ಇದರ ಬದಲಿಗೆ ವಾರ್ಷಿಕ ಅಥವಾ ಹೆಚ್ಚು ಪುನರಾವರ್ತಿತ ಹಾಗೂ ವಿಶ್ವಾಸಾರ್ಹ ದತ್ತಂಶ ಸಂಗ್ರಹ ಮತ್ತು ವರದಿಗಳು ಬರಬೇಕು ಎಂದು ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಗರಿಯಾ ನೇತೃತ್ವದ ಸಮಿತಿಯು ಶಿಫಾರಸು ಮಾಡಿತು. ಈ ಸಮಿತಿಯ ಪ್ರಕಾರ, ಎನ್ಎಸ್ಎಸ್ಒ ವಿಧಾನ ಮತ್ತು ಅಭ್ಯಾಸಗಳು "ಸ್ವಉದ್ಯೋಗಿಗಳು ಮತ್ತು ಕೃಷಿ ಕಾರ್ಮಿಕರನ್ನು ಒಳಗೊಳ್ಳದ" ದಾರಿತಪ್ಪಿಸುವ ಮತ್ತು ಪಕ್ಷಪಾತವುಳ್ಳ ದತ್ತಾಂಶಗಳನ್ನು ನೀಡಿವೆ ಮತ್ತು ಕಡಿಮೆ ಅಥವಾ ಅನಿಯಮಿತ ಆವರ್ತನೆ ಹಾಗೂ ದೀರ್ಘಾವಧಿಯ ವಿಳಂಬಗಳಿಂದ ಹಾಳಾಗಿವೆ.

ಅಂಕಿಅಂಶಗಳು

[ಬದಲಾಯಿಸಿ]

ಭಾರತದ ಅರ್ಥವ್ಯವಸ್ಥೆಯಲ್ಲಿ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗಗಳು ಬಹುದೀರ್ಘ ಕಾಲದ ಸಮಸ್ಯೆಯಾಗಿದೆ. ಪ್ರವೀಣ್ ಸಿನ್ಹಾರ ೨೦೧೩ರ ಒಂದು ವರದಿಯ ಪ್ರಕಾರ, ಭಾರತ ಸರ್ಕಾರವು ಭಾರತದ ಕಾರ್ಮಿಕ ಪಡೆಯನ್ನು ಮೂರು ವರ್ಗಗಳಲ್ಲಿ ವರ್ಗೀಕರಿಸಿದೆ:

  • ಗ್ರಾಮೀಣ ವಲಯ, ಕೃಷಿ ಕಾರ್ಮಿಕರನ್ನು ಒಳಗೊಳ್ಳುತ್ತದೆ
  • ನಗರದ ಔಪಚಾರಿಕ ವಲಯ, ಭಾರತೀಯ ಕಾರ್ಮಿಕ ಕಾನೂನುಗಳ ಪ್ರಕಾರ ನಿಯಮಿತ ವೇತನಗಳು ಮತ್ತು ವ್ಯಾಪ್ತಿಯುಳ್ಳ ಕಾರ್ಖಾನೆ ಮತ್ತು ಸೇವಾ ಕೈಗಾರಿಕಾ ಕಾರ್ಮಿಕರನ್ನು ಒಳಗೊಳ್ಳುತ್ತದೆ
  • ನಗರದ ಅನೌಪಚಾರಿಕ ವಲಯ, ಸ್ವಉದ್ಯೋಗ ಮತ್ತು ಸಾಂದರ್ಭಿಕ ಕೂಲಿ ಕಾರ್ಮಿಕರನ್ನು ಒಳಗೊಳ್ಳುತ್ತದೆ

೨೦೧೧ರಲ್ಲಿ, ಭಾರತದ ಕಾರ್ಮಿಕ ಮಾರುಕಟ್ಟೆಯ ಗ್ರಾಮೀಣ ಮತ್ತು ಅನೌಪಚಾರಿಕ ವಲಯಗಳು ಉದ್ಯೋಗದ ೯೩% ನಷ್ಟನ್ನು ರೂಪಿಸಿದವು, ಮತ್ತು ಈ ವೃತ್ತಿಗಳನ್ನು ಆಗ ಅಸ್ತಿತ್ವದಲ್ಲಿದ್ದ ಭಾರತದ ಕಾರ್ಮಿಕ ಕಾನೂನುಗಳು ಒಳಗೊಳ್ಳುತ್ತಿರಲಿಲ್ಲ. ೨೦೧೦ರ ವಿಶ್ವಬ್ಯಾಂಕ್ ವರದಿಯ ಪ್ರಕಾರ, "ಕಡಿಮೆ ಆದಾಯದ, ತುಲನಾತ್ಮಕವಾಗಿ ಅನುತ್ಪಾದಕ, ಅನೌಪಚಾರಿಕ ವಲಯದ ಉದ್ಯೋಗಗಳು [ಭಾರತೀಯ] ಕಾರ್ಮಿಕ ಮಾರುಕಟ್ಟೆಯಲ್ಲಿ ಪ್ರಧಾನವಾಗಿರುವುದು ಮುಂದುವರಿದಿದೆ. "ಅನೌಪಚಾರಿಕ ವಲಯವು ಭಾರತದ ಕಾರ್ಮಿಕ ಮಾರುಕಟ್ಟೆಗಳಲ್ಲಿ ಪ್ರಧಾನವಾಗಿದೆ ಮತ್ತು ಮಧ್ಯಮಾವಧಿಯಲ್ಲಿ ಇದು ಮುಂದುವರಿಯುವುದು", ಎಂದು ವಿಶ್ವಬ್ಯಾಂಕ್ ಹೇಳುತ್ತದೆ, ಮತ್ತು "ಎಲ್ಲ ನಿಯತ ಮತ್ತು ಸಂಬಳ ಪಡೆಯುವ ಕಾರ್ಮಿಕರನ್ನು ಒಳಗೊಳ್ಳುವಂತೆ ಔಪಚಾರಿಕ ವಲಯದ ವ್ಯಾಖ್ಯಾನವನ್ನು ವಿಸ್ತರಿಸಿದರೂ, 2004–5 ರಲ್ಲಿ ಸುಮಾರು 335 ದಶಲಕ್ಷ ಕಾರ್ಮಿಕರು ಅನೌಪಚಾರಿಕ ವಲಯದಲ್ಲಿ ಉದ್ಯೋಗದಲ್ಲಿದ್ದರು.

1980ರ ದಶಕದಿಂದ 2015ರ ವರೆಗೆ

[ಬದಲಾಯಿಸಿ]

೧೯೮೦ರ ದಶಕದಿಂದ ೨೦೧೦ರ ದಶಕದ ಮಧ್ಯದವರೆಗಿನ ಭಾರತ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಎನ್ಎಸ್ಎಸ್ಒ ದತ್ತದ ಮೇಲೆ ಭಾಗಶಃ ಅವಲಂಬಿಸಿ, ಭಾರತದಲ್ಲಿನ ನಿರುದ್ಯೋಗ ದರವು ಸುಮಾರು 2.8 ಪ್ರತಿಶತದಷ್ಟಿದೆ. ಈ ಅಂಕಿಯು ೧೯೮೩ರಿಂದ ಸ್ವಲ್ಪವೇ ಬದಲಾವಣೆಯನ್ನು ತೋರಿಸಿದೆ ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ನಿರ್ದಿಷ್ಟ ದೃಷ್ಟಿಯಿಂದ, ೧೯೮೩ ಮತ್ತು ೨೦೦೫ರ ನಡುವಿನ ವಿವಿಧ ಭಾರತ ಸರ್ಕಾರಗಳ ಪ್ರಕಾರ, ಭಾರತದಲ್ಲಿನ ನಿರುದ್ಯೋಗಿಗಳ ಸಂಖ್ಯೆಯು ೧೯೮೩ರಲ್ಲಿ ಸುಮಾರು ೭.೮ ದಶಲಕ್ಷದಿಂದ 2004–5ರಲ್ಲಿ ೧೨.೩ ದಶಲಕ್ಷಕ್ಕೆ ಸ್ಥಿರವಾಗಿ ಹೆಚ್ಚಿತು. ವಿಶ್ವ ಬ್ಯಾಂಕ್ ಪ್ರಕಾರ, ಈ ಅಧಿಕೃತ ಭಾರತ ಸರ್ಕಾರದ "ಕೆಳ ತೆರೆದ ನಿರುದ್ಯೋಗ ದರಗಳು ಹಲವುವೇಳೆ ದಾರಿತಪ್ಪಿಸಬಲ್ಲವು" ಮತ್ತು ಅಧಿಕೃತ ದತ್ತಾಂಶಗಳು ಭಾರತೀಯ ಜನಸಂಖ್ಯೆಯ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗದ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ.

ದಶಕಳವರೆಗೆ, ಭಾರತ ಸರ್ಕಾರಗಳು ಯಾರನ್ನು "ನಿರುದ್ಯೋಗಿ" ಎಂದು ಪರಿಗಣಿಸುತ್ತದೆ ಎಂಬುದಕ್ಕೆ ಅಸಾಮಾನ್ಯ ಪರಿಭಾಷೆಯನ್ನು ಬಳಸಿದೆ. ಉದಾಹರಣೆಗೆ, "ಕೇವಲ ವರ್ಷದ ಆರು ತಿಂಗಳಿಗಿಂತ ಹೆಚ್ಚು ಕಾಲ ಕಳೆದವರನ್ನು" ಮತ್ತು ಆ ಅವಧಿಯಲ್ಲಿ ಔಪಚಾರಿಕ ಅಥವಾ ಅನೌಪಚಾರಿಕ ವಲಯದಲ್ಲಿ ಸ್ವಲ್ಪವೂ ಕೆಲಸಮಾಡಿಲ್ಲದವರನ್ನು ನಿರುದ್ಯೋಗಿಗಳೆಂದು ಪರಿಗಣಿಸಲಾಗುತ್ತದೆ. ಪ್ರಸಕ್ತ ಸಾಪ್ತಾಹಿಕ ಅಥವಾ ದೈನಂದಿನ ಸ್ಥಾನಮಾನದ ನಿರುದ್ಯೋಗದ ವ್ಯಾಖ್ಯಾನದಂತಹ ಪರ್ಯಾಯ ಮಾಪನಗಳು ಸ್ವಲ್ಪಮಟ್ಟಿಗೆ ಉತ್ತಮವಾಗಿವೆ. ಪ್ರಸಕ್ತ ದೈನಂದಿನ ಸ್ಥಾನಮಾನ ವ್ಯಾಖ್ಯಾನವನ್ನು ಬಳಸಿ, ಭಾರತದಲ್ಲಿನ ನಿರುದ್ಯೋಗ ದರವು 1999–2000ರಲ್ಲಿ ೭.೩ ಪ್ರತಿಶತದಿಂದ 2004–5ರಲ್ಲಿ ೮.೩ ಪ್ರತಿಶತಕ್ಕೆ ಏರಿತ್ತು ಎಂದು ವಿಶ್ವ ಬ್ಯಾಂಕ್‍ನ ವರದಿಯು ಹೇಳುತ್ತದೆ. ಆದರೆ, ಈ "ಉತ್ತಮವಾದ" ಅಧಿಕೃತ ವ್ಯಾಖ್ಯಾನಗಳು ಮತ್ತು ತರುವಾಯದ ಎನ್ಎಸ್ಎಸ್ಒ ದತ್ತಾಂಶಗಳೂ ೧೯೫೦ರ ದಶಕದಿಂದ "ಮುಗಿಯದ ವಿವಾದ"ದ ಮೂಲವಾಗಿವೆ ಎಂದು ರಾಜ್ ಕೃಷ್ಣ ಹೇಳುತ್ತಾರೆ. 1958–59ರಲ್ಲಿ, ಭಾರತ ಸರ್ಕಾರವು ಸಂದರ್ಭ ವಾರದ ಅವಧಿಯಲ್ಲಿ ಕನಿಷ್ಠಪಕ್ಷ ಒಂದು ದಿನದಂದು ವೇತನಕ್ಕಾಗಿ ಅಥವಾ ವೇತನರಹಿತವಾಗಿ ಲಾಭದಾಯಕವಾಗಿ ಸಕ್ರಿಯವಾಗಿರುವ ಯಾವುದೇ ವ್ಯಕ್ತಿಯನ್ನು, ಅವನು ಆ ಲಾಭದಾಯಕವಾಗಿ ಸಕ್ರಿಯವಾಗಿರುವ ದಿನ [ಅಥವಾ ದಿನಗಳಂದು] ಕೆಲಸ ಮಾಡಿರಬಹುದಾದ ಗಂಟೆಗಳನ್ನು ಲೆಕ್ಕಿಸದೆ, ಪ್ರಸಕ್ತ ಸ್ಥಿತಿ ಉದ್ಯೋಗಿ ಎಂದು ವ್ಯಾಖ್ಯಾನಿಸಲು ಆರಂಭಿಸಿತು.[] ೧೯೫೮ರಿಂದ, ಈ ಅಧಿಕೃತ ವಿಧಾನದ ಪ್ರಕಾರ, ಒಬ್ಬ ವ್ಯಕ್ತಿಯು ಆ ಸಂದರ್ಭ ವಾರದಲ್ಲಿ ಸ್ವಲ್ಪವೂ ಲಾಭದಾಯಕವಾಗಿ ಸಕ್ರಿಯವಾಗಿರದಿದ್ದರೆ ಮತ್ತು ಆ ಸಂದರ್ಭ ಅವಧಿಯಲ್ಲಿ ಕನಿಷ್ಠಪಕ್ಷ ಒಂದು ದಿನದಂದು ಕೆಲಸಕ್ಕೆ ಲಭ್ಯವಿದ್ದಿದ್ದರೆ, ಅವನನ್ನು "ಪ್ರಸಕ್ತ ಸ್ಥಿತಿ ನಿರುದ್ಯೋಗಿ" ಎಂದು ಎಣಿಸಲಾಗುತ್ತಿತ್ತು.

ಉದ್ಯೋಗರಹಿತ ಆರ್ಥಿಕ ಬೆಳವಣಿಗೆ

[ಬದಲಾಯಿಸಿ]

ಕಣ್ಣನ್ ಮತ್ತು ರವೀಂದ್ರನ್ ಪ್ರಕಾರ, "ಸಂಘಟಿತ ಉತ್ಪಾದನಾ ವಲಯವು 1980-81 ರಿಂದ 1990-91ರ ಅವಧಿಯಲ್ಲಿ "ಉದ್ಯೋಗರಹಿತ ಬೆಳವಣಿಗೆಯನ್ನು" ದಾಖಲಿಸಿತು ಎಂದು ವಿದ್ವಾಂಸರ ನಡುವೆ ಒಮ್ಮತವಿದೆ; ಈ ಅವಧಿಯಲ್ಲಿ ಒಟ್ಟು ಮೌಲ್ಯದ ಬೆಳವಣಿಗೆಯ ಸರಾಸರಿ ವಾರ್ಷಿಕ ದರವು ಸುಮಾರು 8.66% ರಷ್ಟಿತ್ತು, ಮತ್ತು ಅನುಗುಣವಾದ ಸರಾಸರಿ ವಾರ್ಷಿಕ ಉದ್ಯೋಗ ಬೆಳವಣಿಗೆಯು ಕೇವಲ 0.53% ರಷ್ಟಿತ್ತು." ೧೯೯೦ರ ದಶಕದ ಪ್ರಾರಂಭದಲ್ಲಿ, ಭಾರತೀಯ ಅರ್ಥವ್ಯವಸ್ಥೆಯ ಅವಿನಿಯಮನದ ನಂತರದ ನಾಲ್ಕು ವರ್ಷಗಳಲ್ಲಿ ಔಪಚಾರಿಕ ವಲಯದ ಉದ್ಯೋಗದಲ್ಲಿ ತೇಜಿ ಕಂಡುಬಂದಿತು. ಅದಾದ ನಂತರ, ಭಾರತದ ಅರ್ಥವ್ಯವಸ್ಥೆಯು ಸಂಘಟಿತ ವಲಯದಲ್ಲಿ ಔಪಚಾರಿಕ ಉದ್ಯೋಗದ ಸಮಾನಾಂತರದ ಹೆಚ್ಚಳವಿಲ್ಲದ ಹೆಚ್ಚಿನ ಜಿಡಿಪಿ ಬೆಳವಣಿಗೆಯನ್ನು ಕಂಡಿದೆ.[] ಔಪಚಾರಿಕ ವಲಯದ ಉದ್ಯೋಗದಲ್ಲಿನ ಈ ನಿಷ್ಕ್ರಿಯತೆಗೆ ೧೯೫೦ರ ದಶಕದಿಂದ ಅಳವಡಿಸಿಕೊಳ್ಳಲಾದ ಕಾರ್ಮಿಕ ಕಾನೂನುಗಳು ಮತ್ತು ನಿಯಮಗಳು ಕಾರಣ ಎಂದು ಕೆಲವು ವಿದ್ವಾಂಸರು ನಂಬಿದ್ದಾರೆಂದು ಅವರು ಹೇಳುತ್ತಾರೆ. ಇವು ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಗಳು ಮತ್ತು ಔಪಚಾರಿಕ ವಲಯದ ಉದ್ಯೋಗವನ್ನು ನೀಡುವುದಕ್ಕೆ ಸಂಬಂಧಿಸಿದ ಆರ್ಥಿಕ ಅಪಾಯಗಳನ್ನು ಅನಮ್ಯಗೊಳಿಸುತ್ತವೆ. ಈ ಕಲ್ಪಿತ ಸಿದ್ಧಾಂತವು 1981–82 ಮತ್ತು 2004–2005 ನಡುವೆ ಭಾರತದಲ್ಲಿನ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗ ಪ್ರವೃತ್ತಿಗಳನ್ನು ಸಂಪೂರ್ಣವಾಗಿ ವಿವರಿಸುತ್ತದೆ ಎಂಬುದನ್ನು ಇತರ ವಿದ್ವಾಂಸರು ವಿರೋಧಿಸುತ್ತಾರೆ.

ರುಬೀನಾ ವರ್ಮಾ ಪ್ರಕಾರ, ಭಾರತದ ಅರ್ಥವ್ಯವಸ್ಥೆಯು ಪ್ರಧಾನವಾಗಿ ಕೃಷಿ ಉದ್ಯೋಗಾಧಾರಿತವಾಗಿರುವ ಸ್ಥಿತಿಯಿಂದ ಉದ್ಯೋಗವು ಕೃಷಿ, ಉತ್ಪಾದನೆ ಮತ್ತು ಸೇವೆಗಳ ಮಿಶ್ರಣವಾಗಿರುವ ಸ್ಥಿತಿಗೆ ಸ್ಥಳಾಂತರಗೊಳ್ಳುತ್ತಿದೆಯಾದರೂ, ೧೯೮೦ರ ದಶಕ ಮತ್ತು ೨೦೦೭ರ ನಡುವೆ ಅರ್ಥವ್ಯವಸ್ಥೆಯು ಹೆಚ್ಚಾಗಿ "ಉದ್ಯೋಗರಹಿತ ಬೆಳವಣಿಗೆ"ಯನ್ನು ಕಂಡಿದೆ.[] ಭಾರತದ ಉತ್ಪಾದನೆಯಲ್ಲಿನ ಈ ಉದ್ಯೋಗರಹಿತ ಬೆಳವಣಿಗೆಯು ಗೊಂದಲಮಯವಾಗಿದೆ, ಮತ್ತು ಭಾಗಶಃ ಉತ್ಪಾದಕತೆ ಬೆಳವಣಿಗೆಗೆ ಸಂಬಂಧಿಸಿದೆ ಎಂದು ಸೋನಿಯಾ ಭಾಲೋತ್ರಾ ಹೇಳುತ್ತಾರೆ.[೧೦] ಔಪಚಾರಿಕ ಉದ್ಯೋಗದಲ್ಲಿ ಬೆಳವಣಿಗೆಯನ್ನು ಕಂಡ ಪ್ರಮುಖ ಕೈಗಾರಿಕೆಗಳೆಂದರೆ ರಫ್ತು ಅಭಿಮುಖ ಉತ್ಪಾದನೆ, ತಂತ್ರಾಂಶ ಮತ್ತು ಸ್ಥಳೀಯ ಸೇವೆಗಳು.[೧೧] ಆದರೆ, ಸೇವಾಧಾರಿತ ಉದ್ಯಮವು ವಿಶೇಷವಾಗಿ ಉದ್ಯೋಗ ತೀವ್ರವಾಗಿಲ್ಲ, ಮತ್ತು ಅದರ ವೇಗದ ಬೆಳವಣಿಗೆಯು ಭಾರತದಲ್ಲಿನ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗ ಸಮಸ್ಯೆಗಳನ್ನು ಮತ್ತು 1983 ಹಾಗೂ 2010ರ ನಡುವೆ ಅದರ ಬೆಳೆಯುತ್ತಿರುವ ಜನಸಂಖ್ಯೆಯ ಉದ್ಯೋಗ ಅಗತ್ಯಗಳನ್ನು ನಿರ್ವಹಿಸಿಲ್ಲ ಎಂದು ಅಜೀತ್ ಘೋಸ್ ಹೇಳುತ್ತಾರೆ.[೧೨]

ಸೌಮ್ಯತನು ಮುಖರ್ಜಿ ಪ್ರಕಾರ, ಭಾರತೀಯ ಅರ್ಥವ್ಯವಸ್ಥೆಯ ಔಪಚಾರಿಕ ಸಂಘಟಿತ ವಲಯವು ೨೦೦೦ರ ದಶಕದಲ್ಲಿ ವೇಗವಾಗಿ ಬೆಳೆಯಿತಾದರೂ, ಅದು ಉದ್ಯೋಗಗಳನ್ನು ಸೃಷ್ಟಿಸಲಿಲ್ಲ ಮತ್ತು ಬೆಳವಣಿಗೆಯು ಮುಖ್ಯವಾಗಿ ಬಂಡವಾಳ ಪ್ರಧಾನ ಹೂಡಿಕೆಗಳು ಮತ್ತು ಕಾರ್ಮಿಕ ಉತ್ಪಾದಕತೆ ಲಾಭಗಳ ಮೂಲಕವಾಗಿತ್ತು. ವಾಸ್ತವವಾಗಿ ಸಂಘಟಿತ ವಲಯದ ಉದ್ಯೋಗವು 2004~2005 ಮತ್ತು 2009–2010ರ ನಡುವೆ ಗಣನೀಯವಾಗಿ ತಗ್ಗಿತು, ವಿಶೇಷವಾಗಿ 1999–2004 ಅವಧಿಗೆ ಹೋಲಿಸಿದರೆ, ಅದೂ ಈ ಅವಧಿಗಳ ಎನ್ಎಸ್ಎಸ್ಒ ವರದಿಗಳು ನಿಖರವಾಗಿದ್ದರೆ ಎಂದು ಮುಖರ್ಜಿ ಹೇಳುತ್ತಾರೆ.[೧೩]

2018-2019ರ ವರದಿಗಳು

[ಬದಲಾಯಿಸಿ]

ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ, ಗಣನೀಯ ಪ್ರಮಾಣದ ಬಹುಪಾಲು ಭಾರತೀಯರು ಉದ್ಯೋಗಾವಕಾಶಗಳ ಅಭಾವವು ತಮ್ಮ ದೇಶದಲ್ಲಿನ ಅತಿ ದೊಡ್ಡ ಸಮಸ್ಯೆ ಎಂದು ಪರಿಗಣಿಸುತ್ತಾರೆ. "ಸುಮಾರು 18.6 ದಶಲಕ್ಷ ಭಾರತೀಯರು ನಿರುದ್ಯೋಗಿಗಳಾಗಿದ್ದರು ಮತ್ತು ಬೇರೆ ಇತರ 393.7 ದಶಲಕ್ಷ ಜನರು ಸ್ಥಳಾಂತರಣಕ್ಕೆ ಗುರಿಯಾಗಬಹುದಾದ ಕಳಪೆ ಗುಣಮಟ್ಟದ ವೃತ್ತಿಗಳಲ್ಲಿ ಕೆಲಸ ಮಾಡುತ್ತಾರೆ.

ಬಹಿರಂಗಗೊಂಡ ಎನ್ಎಸ್ಎಸ್ಒ ವರದಿ

[ಬದಲಾಯಿಸಿ]

ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್ಎಸ್ಎಸ್ಒ) ಆವರ್ತಕ ಕಾರ್ಮಿಕಪಡೆ ಸಮೀಕ್ಷೆಯು ತಯಾರಿಸಿದ ನಿರುದ್ಯೋಗದ ಮೇಲಿನ ಒಂದು ವರದಿಯನ್ನು ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಬಿಸಿನೆಸ್ ಟುಡೆ ಪ್ರಕಾರ, ಈ ವರದಿಯು "ಪ್ರಧಾನಿ ನರೇಂದ್ರ ಮೋದಿ ನವೆಂಬರ್ ೨೦೧೬ರಲ್ಲಿ ಅನಾಣ್ಯೀಕರಣ ನಡೆಯನ್ನು ಘೋಷಿಸಿದ ನಂತರ ಒಂದು ಸರ್ಕಾರಿ ಸಂಸ್ಥೆಯು ನಡೆಸಿದ ಮೊದಲ ವಿಸ್ತಾರವಾದ ಸಮೀಕ್ಷೆಯಾಗಿದೆ". ಈ ವರದಿಯ ಪ್ರಕಾರ, ಭಾರತದಲ್ಲಿ 2017–2018ರ "ಸಾಮಾನ್ಯ ಮಾನ್ಯತೆಯ" ನಿರುದ್ಯೋಗ ದರವು 6.1% ನಷ್ಟಿದ್ದು ನಾಲ್ಕು ದಶಕಗಳಲ್ಲಿ ಹೆಚ್ಚಿತ್ತು.[೧೪] ಇದು ಪ್ರಾಯಶಃ ಅನೌಪಚಾರಿಕ ತೆರಿಗೆ ಹಾಕದ ಅರ್ಥವ್ಯವಸ್ಥೆಯನ್ನು ತಗ್ಗಿಸಲು ಉದ್ದೇಶಿತವಾಗಿದ್ದ ೨೦೧೬ರ ದೊಡ್ಡ ಬ್ಯಾಂಕುನೋಟುಗಳ ಅಮಾನ್ಯೀಕರಣದಿಂದುಂಟಾಗಿತ್ತು.[೧೫]

ಈ ವರದಿ ಮತ್ತು ಹೊಸ ಎನ್ಎಸ್ಎಸ್ಒ ವರದಿಯನ್ನು ಬಿಡುಗಡೆಮಾಡುವಲ್ಲಿ ಬಿಜೆಪಿ ಸರ್ಕಾರ ಒಪ್ಪದಿರುವುದನ್ನು ಟೀಕಿಸಲಾಗಿದೆ. ಸುರ್ಜೀತ್ ಭಲ್ಲಾರ ಪ್ರಕಾರ, ಬಿಜೆಪಿ ಸರ್ಕಾರವು ಈ ವರದಿಯನ್ನು ತಡೆಹಿಡಿದಿದ್ದು ಕೆಟ್ಟದಾದ ರಾಜಕೀಯ ನಿರ್ಧಾರವೆಂದು ಹೇಳಿದರು. ಸಮೀಕ್ಷೆಯ ವಿಧಾನವು ದೋಷಪೂರಿತವಾಗಿದೆ ಮತ್ತು ಅದರ ಫಲಿತಾಂಶಗಳು ಅಸಂಬಂದ್ಧವಾಗಿವೆ, ಏಕೆಂದರೆ ಭಾರತದ ಒಟ್ಟಾರೆ ಜನಸಂಖ್ಯೆಯು 2011–12ರಿಂದ 1.2% ನಷ್ಟು ಕಡಿಮೆಯಾಗಿದೆ ಎಂದು ಮಾದರಿ ಸಮೀಕ್ಷೆ ಆಧಾರಿತ ವರದಿಯು ಕಂಡುಕೊಂಡಿತು (ಇದಕ್ಕೆ ವಿರುದ್ಧವಾಗಿ ಜನಸಂಖ್ಯೆಯು 6.7% ನಷ್ಟು ಹೆಚ್ಚಿತು ಎಂದು ಜನಗಣತಿ ದತ್ತವು ಹೇಳುತ್ತದೆ). ಭಾರತದ ಶೇಕಡ ನಗರೀಕರಣ ಮತ್ತು ನಗರ ಕಾರ್ಯಪಡೆಯು ೨೦೧೨ರಿಂದ ತಗ್ಗಿದೆ ಎಂದು ಈ ವರದಿಯು ಕಂಡುಕೊಂಡಿತು. ಇದು ಭಾರತದ ನಗರೀಕರಣದ ಪ್ರವೃತ್ತಿಗಳ ಮೇಲಿನ ಎಲ್ಲ ಇತರ ಅಧ್ಯಯನಗಳಿಗೆ ವಿರುದ್ಧವಾಗಿದೆ ಎಂದು ಭಲ್ಲಾ ಹೇಳುತ್ತಾರೆ. ಎನ್ಎಸ್ಎಸ್ಒ ವರದಿಯ ದತ್ತದ ಪ್ರಕಾರ, "ಮೋದಿ ಸರ್ಕಾರವು ಎಲ್ಲಿಯಾದರೂ ಮತ್ತು ಮಾನವ ಇತಿಹಾಸದಲ್ಲಿ ಯಾವುದೇ ಸಮಯದಲ್ಲಿ ಆದ ಅತ್ಯಂತ ಅಂತರ್ಗತ ಬೆಳವಣಿಗೆಯನ್ನು ತಂದಿದೆ". ಇದು ಅದು ವರದಿಮಾಡುವ ನಿರುದ್ಯೋಗ ದತ್ತದಷ್ಟೇ ನಂಬಲಾರದ್ದಾಗಿದೆ ಎಂದು ಭಲ್ಲಾ ಹೇಳುತ್ತಾರೆ. ಬಿಜೆಪಿ ಸರ್ಕಾರದ ೫ ವರ್ಷಗಳ ಅವಧಿಯಲ್ಲಿ ಹಣದುಬ್ಬರಕ್ಕೆ ಹೊಂದಿಸಿದ ಬಿಡಿಕಾರ್ಮಿಕರ ಉದ್ಯೋಗ ಆದಾಯವು ಗಮನಾರ್ಹವಾಗಿ ಹೆಚ್ಚಿದೆ ಮತ್ತು ಸಂಬಳ ಪಡೆಯುವ ಕೂಲಿ ಕಾರ್ಮಿಕರ ಆದಯವು ಕಡಿಮೆಯಾಗಿದೆ ಎಂದು ಎನ್ಎಸ್ಎಸ್ಒ ವರದಿ ಸೂಚಿಸುತ್ತದೆ. ಹೊಸ ಸುತ್ತಿನಲ್ಲಿ ಎನ್ಎಸ್ಎಸ್ಒ ಮಾದರಿ ಪಡೆಯುವ ವಿಧಾನವನ್ನೂ ಬದಲಾಯಿಸಿದೆ ಎಂದು ಭಲ್ಲಾ ಹಾಗೂ ಅವಿಕ್ ಸರ್ಕಾರ್ ಹೇಳುತ್ತಾರೆ. ಇದು ಅದರ ದೋಷಪೂರಿತ ಅಂಕಿಅಂಶಗಳು ಮತ್ತು ತೀರ್ಮಾನಗಳ ಮೂಲಗಳಲ್ಲಿ ಒಂದಾಗಿರಲು ಸಾಧ್ಯವಿರಬಹುದು.

೨೦೧೭-೧೮ರಲ್ಲಿ ಯುವಕರ ನಿರುದ್ಯೋಗ ದರ ೧೭.೪ ಪ್ರತಿಶತವಿದೆ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ೧೮.೭ ಪ್ರತಿಶತವಿದೆ, ಮತ್ತು ಯುವತಿಯರ ನಿರುದ್ಯೋಗ ದರಗಳು ಅನುಕ್ರಮವಾಗಿ 13.6 ಪ್ರತಿಶತ ಮತ್ತು 27.2 ಪ್ರತಿಶತವಿವೆ ಎಂದು ವರದಿಯು ಹೇಳುತ್ತದೆ. ಆದರೆ ಭಾರತ ಸರ್ಕಾರದ ಚಿಂತಕರ ಚಾವಡಿಯಾದ ನೀತಿ ಆಯೋಗವು ಇವು ಅಧಿಕೃತವಲ್ಲ ಮತ್ತು ದತ್ತವನ್ನು ಇನ್ನೂ ಪರಿಶೀಲಿಸಲಾಗಿಲ್ಲವೆಂದು ಹೇಳುತ್ತದೆ.[೧೬] ಭಾರತದ ಕಾರ್ಮಿಕಪಡೆಯು ವರ್ಷಕ್ಕೆ ೮ ದಶಲಕ್ಷದಷ್ಟು ಬೆಳೆಯುತ್ತಿದೆ ಎಂದು ಅಂದಾಜಿಸಲಾಗಿದೆ, ಆದರೆ ಭಾರತದ ಅರ್ಥವ್ಯವಸ್ಥೆಯು ಪ್ರಸಕ್ತವಾಗಿ ಈ ದರದಲ್ಲಿ ಹೊಸ ಪೂರ್ಣಕಾಲದ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ.[೧೭]

ಎನ್ಎಸ್ಎಸ್ಒ ವರದಿಯು ಅಂತಿಮವಾಗಿರಲಿಲ್ಲವೆಂದು ಬಿಜೆಪಿ ನೇತೃತ್ವದ ಭಾರತ ಸರ್ಕಾರವು ಹೇಳಿದೆ.[೧೮]

ಐಎಲ್ಒ ಅಂದಾಜುಗಳು

[ಬದಲಾಯಿಸಿ]

ವಿಶ್ವಸಂಸ್ಥೆಯ ಒಂದು ಘಟಕವಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಪ್ರಕಾರ, ಭಾರತದಲ್ಲಿ ನಿರುದ್ಯೋಗವು ಏರುತ್ತಿದೆ ಮತ್ತು "ದೇಶದಲ್ಲಿನ ನಿರುದ್ಯೋಗ ದರವು ೨೦೧೮ ಮತ್ತು ೨೦೧೯ರಲ್ಲಿ ಶೇಕಡ ೩.೫ ರಷ್ಟು ಇರುವುದು" – ೨೦೧೭ ಮತ್ತು ೨೦೧೬ರಲ್ಲಿ ಕಂಡುಬಂದ ನಿರುದ್ಯೋಗದ ಮಟ್ಟದಷ್ಟೇ ಇರುತ್ತದೆ ಮತ್ತು ಅದು ಪೂರ್ವದಲ್ಲಿ ಅಂದಾಜಿಸಿದಂತೆ ೩.೪ ಪ್ರತಿಶತಕ್ಕೆ ಇಳಿಯುವುದಿಲ್ಲ. ಐಎಲ್ಒದ ವಿಶ್ವ ಉದ್ಯೋಗ ಸಾಮಾಜಿಕ ದೃಷ್ಟಿಕೋನ ವರದಿಯ ಪ್ರಕಾರ, ಭಾರತ ಸರ್ಕಾರದ ನಾಯಕತ್ವದ 2009–2014ರಲ್ಲಿ ಮತ್ತು ಸರ್ಕಾರದ ನಾಯಕತ್ವದ 2014–2019 ಅವಧಿಗಳಲ್ಲಿ ಭಾರತದಲ್ಲಿನ ನಿರುದ್ಯೋಗ ದರವು 3.4% ರಿಂದ 3.6% ಶ್ರೇಣಿಯಲ್ಲಿದೆ.

ಭಾರತದಲ್ಲಿ ನಿರುದ್ಯೋಗದ ಕಾರಣಗಳು

[ಬದಲಾಯಿಸಿ]

ಅಲಖ್ ಶರ್ಮಾ ಪ್ರಕಾರ, ಭಾರತದಲ್ಲಿ ಹೆಚ್ಚಿನ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗದ ಕಾರಣಗಳು ವಿದ್ವಾಂಸರಲ್ಲಿ ತೀವ್ರವಾದ ಚರ್ಚೆಗೆ ಒಳಪಟ್ಟಿವೆ. ಇದು ಕಾರ್ಮಿಕ ಮಾರುಕಟ್ಟೆಯಲ್ಲಿ ಅನಮ್ಯತೆಯನ್ನು ಸೃಷ್ಟಿಸುವ ನಿರ್ಬಂಧಕ ಕಾರ್ಮಿಕ ಕಾನೂನುಗಳ ಪರಿಣಾಮವಾಗಿದೆ ಎಂದು ವಿದ್ವಾಂಸರ ಒಂದು ಗುಂಪು ಹೇಳುತ್ತದೆ. ಸಂಘಟಿತ ಕಾರ್ಮಿಕ ಒಕ್ಕೂಟಗಳು ಮತ್ತು ವಿದ್ವಾಂಸರ ಮತ್ತೊಂದು ಗುಂಪು ಈ ಪ್ರಸ್ತಾಪಿತ ಸಕಾರಣ ಆಧಾರವನ್ನು ವಿರೋಧಿಸುತ್ತವೆ. ಅರ್ಥಶಾಸ್ತ್ರಜ್ಞ ಪ್ರವಾಕರ್ ಸಾಹೂ ಪ್ರಕಾರ, ಭಾರತವು ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಸುಮಾರು ೨೫೦ ಕಾರ್ಮಿಕ ನಿಯಂತ್ರಣಗಳನ್ನು ಹೊಂದಿವೆ, ಮತ್ತು ಜಾಗತಿಕ ಉತ್ಪಾದನಾ ಕಂಪನಿಗಳಿಗೆ ಭಾರತದ ಕಾರ್ಮಿಕ ಕಾನೂನುಗಳು ಚೈನಾ ಮತ್ತು ಉತ್ಪಾದನಾ ಉದ್ಯೋಗಗಳನ್ನು ಪ್ರೋತ್ಸಾಹಿಸುವ ಇತರ ಅರ್ಥವ್ಯವಸ್ಥೆಗಳಿಗೆ ಹೋಲಿಸಿದರೆ ಅತಿಯಾಗಿ ಸಂಕೀರ್ಣ ಮತ್ತು ನಿರ್ಬಂಧಕವಾಗಿ ತೋರುತ್ತವೆ. ಶರ್ಮಾ ಪ್ರಕಾರ, ಭಾರತದ ಕಾರ್ಮಿಕ ಕಾನೂನುಗಳು ಅಸಂಖ್ಯಾತ, ಸಂಕೀರ್ಣ ಮತ್ತು ಅಸ್ಪಷ್ಟವೂ ಆಗಿರುವುದರಿಂದ ಉದ್ಯೋಗಪರ ಆರ್ಥಿಕ ಪರಿಸರ ಮತ್ತು ನಯವಾದ ಕೈಗಾರಿಕಾ ಸಂಬಂಧಗಳನ್ನು ತಡೆಯುತ್ತವೆ. ಭಾರತಕ್ಕೆ ಉದ್ಯೋಗದಾತರು ಮತ್ತು ಕಾರ್ಮಿಕರು ಇಬ್ಬರ ಅಗತ್ಯಗಳನ್ನು ಗಮನಿಸುವ ಕಾರ್ಮಿಕ ಮಾರುಕಟ್ಟೆ ಸುಧಾರಣೆಗಳು ಬೇಕಿವೆ. ಭಾರತವು ತನ್ನ ಕಾರ್ಮಿಕರನ್ನು ರಕ್ಷಿಸುವಂತೆ, ಉದ್ಯೋಗಗಳ ನಡುವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವಂತೆ, ಮತ್ತು ಕೈಗಾರಿಕೆಗೆ ಅನುಸರಣೆಯನ್ನು ಹೆಚ್ಚು ಸುಲಭ ಮಾಡುವಂತೆ ತನ್ನ ಕಾರ್ಮಿಕ ಕಾನೂನುಗಳನ್ನು ಮರುಬರೆಯಬೇಕಿದೆ.[೧೯] ದ ಇಕಾನಮಿಸ್ಟ್ ಪ್ರಕಾರ, ಭಾರತದ ಕಾರ್ಮಿಕ ಕಾನೂನುಗಳು ಅನಮ್ಯ ಮತ್ತು ನಿರ್ಬಂಧಕವಾಗಿವೆ, ಮತ್ತು ಇದು ದೇಶದ ಕಳಪೆ ಮೂಲಸೌಕರ್ಯದ ಸಂಯೋಜನೆಯೊಂದಿಗೆ ದೇಶದ ನಿರುದ್ಯೋಗದ ಪರಿಸ್ಥಿತಿಗೆ ಕಾರಣವಾಗಿದೆ.

ನಿರುದ್ಯೋಗವು ಭಾರತದಲ್ಲಿ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ. ಸೆಪ್ಟೆಂಬರ್ ೨೦೧೮ರ ವೇಳೆಗೆ, ಭಾರತ ಸರ್ಕಾರದ ಪ್ರಕಾರ, ಭಾರತವು ೩೧ ದಶಲಕ್ಷ ಕೆಲಸವಿಲ್ಲದವರನ್ನು ಹೊಂದಿತ್ತು.[೨೦] ಈ ಅಂಕಿಗಳು ವ್ಯಾಪಕವಾಗಿ ಚರ್ಚಿತವಾಗಿವೆ.

ಸರ್ಕಾರದ ನೀತಿಗಳು

[ಬದಲಾಯಿಸಿ]

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005

[ಬದಲಾಯಿಸಿ]

ನಿರುದ್ಯೋಗ ದರಗಳನ್ನು ಕಡಿಮೆ ಮಾಡಲು ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಉದಾಹರಣೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಾರಂಭ. ಇದು ವರ್ಷದಲ್ಲಿ ಒಬ್ಬ ನಿರುದ್ಯೋಗಿಗೆ ೧೦೦ ದಿನಗಳ ಉದ್ಯೋಗವನ್ನು ಖಾತರಿಪಡಿಸುತ್ತದೆ. ಸರ್ಕಾರವು ಇದನ್ನು ೨೦೦ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದೆ ಮತ್ತು ಮುಂದಕ್ಕೆ ಇದನ್ನು ೬೦೦ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ವ್ಯಕ್ತಿಗೆ ದಿನಕ್ಕೆ ೧೫೦ ರೂ. ನೀಡಲಾಗುವುದು.

ಉದ್ಯೋಗ ವಿನಿಮಯ ಕೇಂದ್ರವಲ್ಲದೆ, ಭಾರತ ಸರ್ಕಾರವು ಉದ್ಯೋಗ ಸುದ್ದಿ ಎಂಬ ಶೀರ್ಷಿಕೆಯ ಒಂದು ಸಾಪ್ತಾಹಿಕ ಸುದ್ದಿಪತ್ರಿಕೆಯನ್ನು ಪ್ರಕಟಿಸುತ್ತದೆ. ಇದು ಪ್ರತಿ ಶನಿವಾರದ ಸಂಜೆ ಬರುತ್ತದೆ ಮತ್ತು ಭಾರತದಾದ್ಯಂತ ಸರ್ಕಾರಿ ಉದ್ಯೋಗಗಳಿಗೆ ಖಾಲಿ ಹುದ್ದೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಖಾಲಿ ಹುದ್ದೆಗಳ ಪಟ್ಟಿಗಳ ಜೊತೆಗೆ, ಇದು ವಿವಿಧ ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಗಳ ಅಧಿಸೂಚನೆಗಳನ್ನು ಕೂಡ ಹೊಂದಿರುತ್ತದೆ.

ಮರೆಮಾಚಿದ ನಿರುದ್ಯೋಗದ ಮೇಲೆ ಕೈಗೊಳ್ಳಲಾದ ಕ್ರಮಗಳು

[ಬದಲಾಯಿಸಿ]

ಕೃಷಿಯು ಅರ್ಥವ್ಯವಸ್ಥೆಯ ಅತಿ ಕಾರ್ಮಿಕ ವಿಲೀನಕ ವಲಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಕೃಷಿಯ ಮೇಲೆ ಜನರ ಅವಲಂಬನೆಯಲ್ಲಿ ಕುಸಿತವಾಗಿದೆ, ಭಾಗಶಃ ಮರೆಮಾಚಿದ ನಿರುದ್ಯೋಗದ ಕಾರಣದಿಂದ. ಕೃಷಿಯಲ್ಲಿನ ಸ್ವಲ್ಪ ಹೆಚ್ಚುವರಿ ಕಾರ್ಮಿಕರು ದ್ವಿತೀಯಕ ಅಥವಾ ತೃತೀಯಕ ವಲಯಕ್ಕೆ ಸ್ಥಳಾಂತರವಾಗಿದ್ದಾರೆ. ದ್ವಿತೀಯಕ ವಲಯದಲ್ಲಿ, ಸಣ್ಣ ಪ್ರಮಾಣದ ಉತ್ಪಾದನೆಯು ಅತಿ ಕಾರ್ಮಿಕ ವಿಲೀನಕವಾಗಿದೆ. ತೃತೀಯಕ ವಲಯದ ವಿಷಯದಲ್ಲಿ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದಂತಹ ವಿವಿಧ ಹೊಸ ಸೇವೆಗಳು ಈಗ ಕಾಣಿಸಿಕೊಳ್ಳುತ್ತಿವೆ. ಈ ವಿಧಾನಗಳಲ್ಲಿನ ಮರೆಮಾಚಿದ ನಿರುದ್ಯೋಗಿಗಳಿಗಾಗಿ ಸರ್ಕಾರವು ಈ ವಲಯಗಳಲ್ಲಿ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ

[ಬದಲಾಯಿಸಿ]

ಭಾರತ ಸರ್ಕಾರವು ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ವೃತ್ತಿ ಸೇವಾ ಪ್ರವೇಶತಾಣ (www.ncs.gov.in) ಎಂಬ ಹೆಸರಿನ ಒಂದು ಅಂತರಜಾಲ ಪ್ರವೇಶತಾಣವನ್ನು ಆರಂಭಿಸಿದೆ. ಈ ಪ್ರವೇಶತಾಣದ ಮೂಲಕ, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು ಉದ್ಯೋಗದ ಮಾಹಿತಿಯನ್ನು ಪಡೆಯಲು ಮತ್ತು ಪರಿಷ್ಕರಿಸಲು ಸಾಮಾನ್ಯ ವೇದಿಕೆಯ ಸೌಕರ್ಯದ ಸಹಾಯ ಪಡೆಯಬಹುದು. ಖಾಸಗಿ ಖಾಲಿ ಹುದ್ದೆಗಳಷ್ಟೇ ಅಲ್ಲದೆ, ಪ್ರವೇಶತಾಣದಲ್ಲಿ ಸರ್ಕಾರಿ ವಲಯದಲ್ಲಿ ಲಭ್ಯವಿರುವ ಒಪ್ಪಂದದ ಉದ್ಯೋಗಗಳೂ ಲಭ್ಯವಿವೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ

[ಬದಲಾಯಿಸಿ]

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವು (ಎನ್ಆರ್‌ಇಪಿ) ಗ್ರಾಮೀಣ ಪ್ರದೇಶದವರಿಗೆ ರಾಷ್ಟ್ರದಾದ್ಯಂತ ಉದ್ಯೋಗಾವಕಾಶಗಳಿಗೆ ಸಮಾನ ಪ್ರಯತ್ನವನ್ನು ಒದಗಿಸುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವವರ ನಡುವೆ ಬೆಳೆಯುತ್ತಿರುವ ವೈಯಕ್ತಿಕ ಹಣಕಾಸಿನ ಅಸಮಾನತೆಯು ಗ್ರಾಮೀಣ ಪ್ರದೇಶದವರು ನಗರ ಪ್ರದೇಶಗಳಿಗೆ ವಲಸೆ ಹೋಗುವುದಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಇದರಿಂದ ನಗರ ನಿರ್ವಹಣೆಯು ಕಷ್ಟವಾಗಿದೆ. ಎನ್ಆರ್‌ಇಪಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿಹೊಂದಿದೆ, ವಿಶೇಷವಾಗಿ ಬರ ಮತ್ತು ಅಂತಹ ಇತರ ಅಭಾವಗಳ ಸಮಯದಲ್ಲಿ.

ದೀನ್ ದಯಾಲ್ ಅಂತ್ಯೋದಯ ಯೋಜನೆ

[ಬದಲಾಯಿಸಿ]

ದೀನ್ ದಯಾಲ್ ಅಂತ್ಯೋದಯ ಯೋಜನೆಯು ಬಡವರಿಗೆ ಔದ್ಯೋಗಿಕವಾಗಿ ಮಾನ್ಯವಾದ ಕೌಶಲಗಳನ್ನು ನೀಡುವ ಮೂಲಕ ಸಹಾಯಮಾಡುವ ಗುರಿಹೊಂದಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ. ಜನರಿಗೆ ಉತ್ತಮ ವೇತನ ತಂದುಕೊಡುವ ಉದ್ಯೋಗಾವಕಾಶಗಳನ್ನು ಹುಡುಕಲು ನೆರವಾಗುವ ಅಗತ್ಯವಾದ ಕೌಶಲಗಳನ್ನು ನೀಡುವ ಮೂಲಕ ದೇಶದಿಂದ ನಗರ ಹಾಗೂ ಗ್ರಾಮೀಣ ಬಡತನ ಎರಡನ್ನೂ ನಿರ್ಮೂಲಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಕೌಶಲ ತರಬೇತಿ ಮತ್ತು ಕೌಶಲ ಉನ್ನತೀಕರಣದ ಮೂಲಕ ಇದನ್ನು ಸಾಧಿಸುವುದು ಗುರಿಯಾಗಿದೆ. ಇದರಿಂದ ಬಡವರು ಸ್ವ-ಉದ್ಯೋಗಿಗಳಾಗುವುದು, ತಮ್ಮನ್ನು ತಾವು ಬಡತನ ರೇಖೆಯ ಮೇಲೆತ್ತುವುದು, ಬ್ಯಾಂಕ್ ಸಾಲಗಳಿಗೆ ಅರ್ಹರಾಗುವುದು, ಇತ್ಯಾದಿ ಸಾಧ್ಯವಾಗುತ್ತದೆ.

ರಾಜಕೀಯ

[ಬದಲಾಯಿಸಿ]

ಭಾರತದ ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ, ನಿರುದ್ಯೋಗವು ಸಮಸ್ಯೆಯಾಗಿತ್ತು.[೨೧][೨೨][೨೩] ಬಡತನ, ನಿರುದ್ಯೋಗ, ಅಭಿವೃದ್ಧಿಯಂತಹ ಆರ್ಥಿಕ ಸಮಸ್ಯೆಗಳು ರಾಜಕೀಯದ ಮೇಲೆ ಪ್ರಭಾವ ಬೀರುವ ಮುಖ್ಯ ಸಮಸ್ಯೆಗಳಾಗಿವೆ. ಗರೀಬಿ ಹಟಾವೊ (ಬಡತನವನ್ನು ತೊಲಗಿಸಿ) ಎಂಬುದು ದೀರ್ಘಕಾಲದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಘೋಷಣಾ ವಾಕ್ಯವಾಗಿದೆ. ಸುಪರಿಚಿತ ಭಾರತೀಯ ಜನತಾ ಪಾರ್ಟಿ ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯ ಘೋಷಣಾ ವಾಕ್ಯವೆಂದರೆ ಸಬ್ಕಾ ಸಾಥ್, ಸಬ್ಕಾ ವಿಕಾಸ್ (ಎಲ್ಲರೊಂದಿಗೆ ಸಹಕಾರ, ಎಲ್ಲರ ಪ್ರಗತಿ). ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಎಲ್ಲರಿಗೂ ಭೂಮಿ, ಕೆಲಸದ ಹಕ್ಕಿನಂತಹ ವಾಮವಾದಿ ರಾಜಕೀಯವನ್ನು ಉತ್ಕಟವಾಗಿ ಬೆಂಬಲಿಸುತ್ತದೆ ಮತ್ತು ಜಾಗತೀಕರಣ, ಬಂಡವಾಳಶಾಹಿ ಮತ್ತು ಖಾಸಗೀಕರಣದಂತಹ ನವ ಉದಾರವಾದಿ ನೀತಿಗಳನ್ನು ಬಲವಾಗಿ ವಿರೋಧಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Papola, TS (1 May 2014). An assessment of labour statistics system in India (PDF). Country office New Delhi: International Labor Organization, United Nations. Retrieved 9 November 2018.
  2. ೨.೦ ೨.೧ Abhishek Shaw (19 October 2013). "Employment Trends in India: An Overview of NSSO's 68th Round". Economic and Political Weekly. 48: 23–25. JSTOR 23528568.
  3. Vyas, Mahesh (2018). "Using Fast Frequency Household Survey Data to Estimate the Impact of Demonetisation on Employment". Review of Market Integration. 10 (3). SAGE Publications: 159–183. doi:10.1177/0974929218816586.
  4. The jobs data mystery: Understanding India's big crisis in a fraught poll season, The Economic Times (10 April 2019)
  5. Indira Hirway (2002). "Employment and Unemployment Situation in 1990s: How Good Are NSS Data?". Economic and Political Weekly. 37.
  6. Yoshifumi Usami; Vikas Rawal (2012). "Some Aspects of the Implementation of India's Employment Guarantee". Review of Agrarian Studies. 2: 74–93.
  7. Raj Krishna (1973). "Unemployment in India". Economic and Political Weekly. 8. JSTOR 4362385.
  8. K. P. Kannan and G. Raveendran (2009). "Growth Sans Employment: A Quarter Century of Jobless Growth in India's Organised Manufacturing". Economic and Political Weekly. 44. JSTOR 40278784.
  9. Verma, Rubina (2012). "Structural Transformation and Jobless Growth in the Indian Economy". In Chetan Ghate (ed.). The Oxford Handbook of the Indian Economy. Oxford University Press. doi:10.1093/oxfordhb/9780199734580.013.0010.
  10. Bhalotra, Sonia R. (1998). "The Puzzle of Jobless Growth in Indian Manufacturing". Oxford Bulletin of Economics and Statistics. 60 (1). Wiley: 5–32. doi:10.1111/1468-0084.00084.
  11. Kambhampati, Uma S. (2002). "The software industry and development: the case of India". Progress in Development Studies. 2 (1). SAGE Publications: 23–45. doi:10.1191/1464993402ps028ra.
  12. K. V. Ramaswamy (2015). Labour, Employment and Economic Growth: The Indian Experience. Cambridge University Press. pp. 57–61, 71–76. ISBN 978-1-107-09680-6.
  13. Mukherjee, Soumyatanu (2014). "Liberalisation and Jobless Growth in Developing Economy" (PDF). Journal of Economic Integration. 29 (3). Center for Economic Integration: 450–469. doi:10.11130/jei.2014.29.3.450.
  14. "India's unemployment rate hit four-decade high of 6.1% in 2017-18, says NSSO survey". businesstoday.in. Retrieved 2019-03-14.
  15. "By hiding unemployment data, the government will not help the economy - or itself". The Telegraph. Calcutta. 17 January 2019. Retrieved 20 February 2019.
  16. Madan Sabnavis (31 January 2019). "NSSO data confirms India's jobs crisis: Unemployment at 45-year high of 6.1 percent, way out is to make economy grow". Retrieved 31 January 2019.
  17. Tandon, Rajguru. "India Needs 10 Million Jobs Per Annum Till 2030 To Counter Unemployment". BW Businessworld (in ಇಂಗ್ಲಿಷ್). Retrieved 2019-02-25.
  18. "Jobs data not finalised: Government after NSSO 'Report'". The Economic Times. 2019-02-01. Retrieved 2019-03-14.
  19. Alakh N. Sharma (2006). "Flexibility, employment and labour market reforms in India". Economic and Political Weekly. 41. JSTOR 4418262.
  20. "Unemployment Statistics". www.labour.gov.in. Ministry of labour and employment. Retrieved 9 November 2018.
  21. Kumar, Nikhil. "Unemployment a key issue as India's Narendra Modi seeks re-election". CNN. Retrieved 10 April 2019.
  22. "Unemployment: Modi's Achilles heel this election". Deccan Herald. 16 April 2019.
  23. "Factbox: Key issues in India's massive general election - Reuters". Reuters. Archived from the original on 2020-09-09. Retrieved 2020-09-24.


ಹೊರಗಿನ ಕೊಂಡಿಗಳು

[ಬದಲಾಯಿಸಿ]