ಭಾರತದಲ್ಲಿನ ಚುನಾವಣೆಗಳು
ಧಫಧದಫಸ್ವಾತಂತ್ರ್ಯ ಬಂದಾಗಿನಿಂದಲೂ, ಭಾರತದಲ್ಲಿನ ಚುನಾವಣೆಗಳು ತಮ್ಮ ವಿಕಸನದಲ್ಲಿ ಸುದೀರ್ಘವಾದ ಹಾದಿಯನ್ನು ಸವೆಸಿವೆಯಾದರೂ, ಅಷ್ಟು ಸಮಯವೂ ಚುನಾವಣೆಗಳು ಸ್ವತಂತ್ರ ಭಾರತದ ಒಂದು ಗಮನಾರ್ಹವಾದ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ.
2004ರಲ್ಲಿ ನಡೆದ ಭಾರತೀಯ ಚುನಾವಣೆಗಳು 670 ದಶಲಕ್ಷಕ್ಕೂ ಹೆಚ್ಚಿನ ಜನರಿರುವ ಮತದಾರ ಸಮುದಾಯವೊಂದನ್ನು ಒಳಗೊಂಡಿದ್ದವು; ಇದು ಮುಂದಿನ ಅತಿದೊಡ್ಡ ಸ್ಥಾನವನ್ನು ಹೊಂದಿರುವ ಯುರೋಪಿನ ಸಂಸತ್ ಚುನಾವಣೆಗಳಿಗೆ ಹೋಲಿಸಿದಾಗ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, 1989ರ ವೆಚ್ಚಗಳಿಗೆ ಹೋಲಿಸಿದಾಗ ಈ ಅವಧಿಯ ಘೋಷಿತ ಖರ್ಚುವೆಚ್ಚವು ಮೂರುಪಟ್ಟು ಹೆಚ್ಚಾಗಿ, ಅದು ಬಹುಮಟ್ಟಿಗೆ 300 ದಶಲಕ್ಷ $ನಷ್ಟು ಪ್ರಮಾಣವನ್ನು ತಲುಪಿತ್ತು ಮತ್ತು ಈ ಚುನಾವಣೆಯಲ್ಲಿ 1 ದಶಲಕ್ಷಕ್ಕೂ ಹೆಚ್ಚಿನ ವಿದ್ಯುನ್ಮಾನ ಮತದಾನ ಯಂತ್ರಗಳು ಬಳಸಲ್ಪಟ್ಟವು.[೧] 2009ರಲ್ಲಿ ನಡೆದ ಚುನಾವಣೆಗಳು ಇನ್ನೂ ದೊಡ್ಡದಾದ ಮತದಾರ ಸಮುದಾಯವನ್ನು ಒಳಗೊಂಡಿದ್ದು, ಮತದಾರರ ಸಂಖ್ಯೆಯು 714 ದಶಲಕ್ಷವನ್ನು[೨] (EU ಮತ್ತು US ಚುನಾವಣೆಗಳೆರಡನ್ನೂ ಸಂಯೋಜಿಸಿದಾಗ[೩] ಆಗುವುದಕ್ಕಿಂತ ದೊಡ್ಡದು) ಮುಟ್ಟಿತ್ತು.
ಚುನಾವಣೆಗಳು ಹಲವಾರು ಹಂತಗಳಲ್ಲಿ ನಡೆಸಲ್ಪಡಬೇಕು ಎಂಬುದನ್ನು ಬೃಹತ್ ಮತದಾರ ಸಮುದಾಯದ ಗಾತ್ರವು ಸೂಚಿಸುತ್ತದೆ (2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಹಂತಗಳಿದ್ದರೆ, 2009ರಲ್ಲಿ ಐದು ಹಂತಗಳಿದ್ದವು). ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ 'ಮಾದರಿ ನೀತಿಸಂಹಿತೆ'ಯನ್ನು ಜಾರಿಗೆ ತರುವ ಭಾರತದ ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕಗಳು ಪ್ರಕಟಣೆಯಾಗುವುದರಿಂದ ಮೊದಲ್ಗೊಂಡು, ಫಲಿತಾಂಶಗಳ ಪ್ರಕಟಣೆ, ಯಶಸ್ವೀ ಉಮೇದುವಾರರ ಪಟ್ಟಿಯನ್ನು ರಾಜ್ಯ ಅಥವಾ ಕೇಂದ್ರದ ಕಾರ್ಯಕಾರಿ ಮುಖ್ಯಸ್ಥರಿಗೆ ಸಲ್ಲಿಸುವುದರವರೆಗಿನ ಹಲವಾರು ಹಂತ-ಹಂತದ ಪ್ರಕ್ರಿಯೆಗಳನ್ನು ಇದು ಒಳಗೊಂಡಿರುತ್ತದೆ. ಫಲಿತಾಂಶಗಳ ಸಲ್ಲಿಕೆಯು ಚುನಾವಣೆ ಪ್ರಕ್ರಿಯೆಯು ಕೊನೆಗೊಂಡಿದ್ದನ್ನು ಗುರುತು ಮಾಡುತ್ತದೆ, ಹಾಗೂ ತನ್ಮೂಲಕ ಹೊಸ ಸರ್ಕಾರದ ರಚನೆಗಾಗಿ ದಾರಿಮಾಡಿಕೊಡುತ್ತದೆ.
ರಾಷ್ಟ್ರೀಯ ಚುನಾವಣೆಗಳ ಪಟ್ಟಿ
[ಬದಲಾಯಿಸಿ]ರಾಜ್ಯ ಶಾಸನಸಭಾ ಚುನಾವಣೆಗಳು (ಮತದಾರ ಸಮುದಾಯ → ವಿಧಾನಸಭೆ ಹಾಗೂ ನಾಮಕರಣಗಳು → ರಾಜ್ಯಸಭೆ)
[ಬದಲಾಯಿಸಿ]ರಾಜ್ಯಸಭೆಯ ಸದಸ್ಯರು ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ, ಮತ್ತು ಬಹುಮಟ್ಟಿಗೆ ಪ್ರತ್ಯೇಕ ರಾಜ್ಯಗಳ ಶಾಸನಸಭೆಯ (ವಿಧಾನಸಭೆ) ಸದಸ್ಯರಿಂದ ಸಂಪೂರ್ಣವಾಗಿ ಚುನಾಯಿಸಲ್ಪಡುತ್ತಾರೆ. ಅಷ್ಟೇ ಅಲ್ಲ, 12 ಸದಸ್ಯರು ಭಾರತದ ರಾಷ್ಟ್ರಪತಿಯವರಿಂದ ನಾಮಕರಣ ಮಾಡಲ್ಪಡುತ್ತಾರೆ ಹಾಗೂ ವಾಡಿಕೆಯಂತೆ ಇದಕ್ಕೆ ಅವರು ಭಾರತದ ಪ್ರಧಾನಮಂತ್ರಿಯವರಿಂದ ಸಲಹೆ ಮತ್ತು ಒಪ್ಪಿಗೆಯನ್ನು ಪಡೆದಿರುತ್ತಾರೆ. ರಾಜ್ಯಸಭೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ತಾಣದಲ್ಲಿ ಪಡೆಯಬಹುದು: http://rajyasabha.nic.in/rsnew/about_parliament/rajya_sabha_introduction.asp
ಅಧ್ಯಕ್ಷೀಯ ಚುನಾವಣೆಗಳು (ಲೋಕಸಭೆ ಮತ್ತು ರಾಜ್ಯಸಭೆ ಹಾಗೂ ವಿಧಾನಸಭೆ → ರಾಷ್ಟ್ರಪತಿ)
[ಬದಲಾಯಿಸಿ]ಭಾರತದ ರಾಷ್ಟ್ರಪತಿಯವರು 5 ವರ್ಷಗಳ ಒಂದು ಅವಧಿಗಾಗಿ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸಂಸತ್ ಸದಸ್ಯರು, ಮತ್ತು ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸನಸಭೆಗಳ (ವಿಧಾನಸಭೆಗಳ) ಸದಸ್ಯರು ತಮ್ಮ ತಮ್ಮ ಮತವನ್ನು ನೀಡುವ ವ್ಯವಸ್ಥೆಯಿರುವ ಅಧ್ಯಕ್ಷ ಚುನಾಯಕ ಸಮುದಾಯವನ್ನು ಇಲ್ಲಿ ಬಳಸಲಾಗುತ್ತದೆ.
ಭಾರತದ ಚುನಾವಣಾ ವ್ಯವಸ್ಥೆ
[ಬದಲಾಯಿಸಿ]ರಾಷ್ಟ್ರದ ಮುಖ್ಯಸ್ಥರಾದ ಭಾರತದ ರಾಷ್ಟ್ರಪತಿ ಹಾಗೂ ಶಾಸನಸಭೆಗಳಾಗಿರುವ ಎರಡು ಸದನಗಳನ್ನು ಭಾರತದ ಸಂಸತ್ತು ಒಳಗೊಳ್ಳುತ್ತದೆ. ಭಾರತದ ರಾಷ್ಟ್ರಪತಿಯು ಐದು-ವರ್ಷಗಳ ಒಂದು ಅವಧಿಗಾಗಿ ಚುನಾಯಿಸಲ್ಪಡುತ್ತಾರೆ ಹಾಗೂ ಕೇಂದ್ರ ಸರ್ಕಾರದ ಮತ್ತು ರಾಜ್ಯ ಶಾಸನಸಭೆಗಳ ಸದಸ್ಯರನ್ನು ಒಳಗೊಂಡಿರುವ ಅಧ್ಯಕ್ಷ ಚುನಾಯಕ ಸಮುದಾಯವೊಂದು ಇವರನ್ನು ಚುನಾಯಿಸುತ್ತದೆ. ಭಾರತದ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಜನಪ್ರತಿನಿಧಿಗಳ ಸದನವು (ಲೋಕಸಭೆ ) 545 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 543 ಸದಸ್ಯರು ಏಕ-ಸ್ಥಾನದ ಚುನಾವಣಾ ಕ್ಷೇತ್ರಗಳಲ್ಲಿ ಐದು-ವರ್ಷಗಳ ಒಂದು ಅವಧಿಗಾಗಿ ಚುನಾಯಿಸಲ್ಪಟ್ಟರೆ, ಆಂಗ್ಲ-ಭಾರತೀಯ ಸಮುದಾಯವನ್ನು (ಭಾರತದ ಸಂವಿಧಾನವು ರೂಪಿಸಿರುವಂತೆ, ಸದ್ಯಕ್ಕೆ ಲೋಕಸಭೆಯ ಸದಸ್ಯರ ಸಂಖ್ಯೆಯು 545ರಷ್ಟಿದ್ದು ಅವರ ಪೈಕಿ 543 ಮಂದಿ 5-ವರ್ಷಗಳ ಒಂದು ಅವಧಿಗಾಗಿ ಚುನಾಯಿಸಲ್ಪಡುತ್ತಾರೆ ಹಾಗೂ ಇಬ್ಬರು ಸದಸ್ಯರು ಆಂಗ್ಲ-ಭಾರತೀಯ ಸಮುದಾಯವನ್ನು ಪ್ರತಿನಿಧಿಸುತ್ತಾರೆ) ಪ್ರತಿನಿಧಿಸಲೆಂದು ಇಬ್ಬರು ಸದಸ್ಯರು ನೇಮಿಸಲ್ಪಡುತ್ತಾರೆ. ಸಾಪೇಕ್ಷ ಬಹುಮತದ ('ಬಹುಶಃ ಪೂರ್ಣಮತದಿಂದಲ್ಲದೆ ಇದ್ದರೂ ಹೆಚ್ಚು ಮತಗಳಿಂದ ಗೆದ್ದ') ಚುನಾವಣಾ ವ್ಯವಸ್ಥೆಯ ಅಡಿಯಲ್ಲಿ 550 ಸದಸ್ಯರು ಚುನಾಯಿಸಲ್ಪಡುತ್ತಾರೆ.
ರಾಜ್ಯಗಳ ಮಂಡಳಿಯು (ರಾಜ್ಯಸಭೆ ) 245 ಸದಸ್ಯರನ್ನು ಹೊಂದಿದ್ದು, ಅವರ ಪೈಕಿ 233 ಸದಸ್ಯರು ಆರು-ವರ್ಷಗಳ ಒಂದು ಅವಧಿಗೆ ಚುನಾಯಿಸಲ್ಪಡುತ್ತಾರೆ ಹಾಗೂ ಪ್ರತಿ ಎರಡು ವರ್ಷಗಳಿಗೆ ಮೂರನೇ ಒಂದು ಭಾಗದಷ್ಟು ಮಂದಿ ನಿವೃತ್ತಿಹೊಂದುತ್ತಾರೆ. ರಾಜ್ಯದ ಮತ್ತು (ಕೇಂದ್ರ ಸರ್ಕಾರದ) ಕೇಂದ್ರಾಡಳಿತ ಪ್ರದೇಶಗಳ ಶಾಸಕರಿಂದ ಸದಸ್ಯರು ಚುನಾಯಿಸಲ್ಪಡುತ್ತಾರೆ. ಚುನಾಯಿತ ಸದಸ್ಯರು ದಾಮಾಷಾ ಪ್ರಾತಿನಿಧ್ಯದ (ಪ್ರಪೋಷನಲ್ ರೆಪ್ರೆಸೆಂಟೇಷನ್) ವ್ಯವಸ್ಥೆಯ ಅಡಿಯಲ್ಲಿ ಏಕ ವರ್ಗಾವಣಾಭಿಮತದ ವಿಧಾನದ ಮೂಲಕ ಆರಿಸಲ್ಪಡುತ್ತಾರೆ. ನಾಮಕರಣಗೊಂಡ ಹನ್ನೆರಡು ಸದಸ್ಯರು ಸಾಮಾನ್ಯವಾಗಿ, ಶ್ರೇಷ್ಠ ಕಲಾವಿದರು (ನಟ-ನಟಿಯರನ್ನು ಒಳಗೊಂಡಂತೆ), ವಿಜ್ಞಾನಿಗಳು, ನ್ಯಾಯಶಾಸ್ತ್ರಜ್ಞರು, ಕ್ರೀಡಾಪಟುಗಳು, ವಾಣಿಜ್ಯೋದ್ಯಮಿಗಳು ಮತ್ತು ಪತ್ರಕರ್ತರು ಹಾಗೂ ಸಾಮಾನ್ಯ ಜನರ ಒಂದು ಸಾರಸಂಗ್ರಹಿ ಮಿಶ್ರಣವಾಗಿರುತ್ತಾರೆ.
ಭಾರತದಲ್ಲಿನ ಚುನಾವಣೆಗಳ ಇತಿಹಾಸ
[ಬದಲಾಯಿಸಿ]This article may be unbalanced towards certain viewpoints. (December 2010) |
ಭಾರತದ ಮೊದಲ ಲೋಕಸಭೆಯು 1952ರ ಏಪ್ರಿಲ್‌ನಲ್ಲಿ ಅಸ್ತಿತ್ವಕ್ಕೆ ಬಂದಿತು; ಇದಕ್ಕೆ ಪೂರ್ವಭಾವಿಯಾಗಿ ಮೊದಲ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಸಮಾಪ್ತಿಯಾಗಿದ್ದವು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-INC) ಪಕ್ಷವು ತನ್ನ ತೆಕ್ಕೆಯಲ್ಲಿ 245 ಸ್ಥಾನಗಳನ್ನು ತುಂಬಿಸಿಕೊಳ್ಳುವುದರೊಂದಿಗೆ ಅಧಿಕಾರಕ್ಕೆ ಬಂದಿತು. ಲೋಕಸಭೆಯ ಅಧಿಕಾರಾವಧಿಗಳ ಒಂದು ಸಂಕ್ಷಿಪ್ತ ಇತಿಹಾಸ ಇಲ್ಲಿದೆ...
ಲೋಕಸಭೆಯು ಜನತಾ ಪ್ರತಿನಿಧಿಗಳಿಂದ ರೂಪುಗೊಂಡಿದ್ದು, ಪ್ರಾಪ್ತವಯಸ್ಕರ ಮತದಾನದ ಹಕ್ಕಿನ ಆಧಾರದ ಮೇಲಿನ ನೇರ ಚುನಾವಣೆಯ ಮೂಲಕ ಈ ಪ್ರತಿನಿಧಿಗಳು ಆರಿಸಲ್ಪಡುತ್ತಾರೆ. ಸಂವಿಧಾನವು ರೂಪಿಸಿರುವಂತೆ ಸದನದ ಗರಿಷ್ಟ ಬಲವು 552 ಆಗಿದ್ದು, ಇದರ ಪೈಕಿ ರಾಜ್ಯಗಳನ್ನು ಪ್ರತಿನಿಧಿಸುವ 530 ಸದಸ್ಯರು, ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 20ರವರೆಗಿನ ಸದಸ್ಯರು ಚುನಾವಣೆಯ ಮೂಲಕ ಆರಿಸಿಬರುತ್ತಾರೆ; ಒಂದು ವೇಳೆ ಆಂಗ್ಲ-ಭಾರತೀಯ ಸಮುದಾಯವು ಸದನದಲ್ಲಿ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿಲ್ಲ ಎಂಬ ಅಭಿಪ್ರಾಯವು ರಾಷ್ಟ್ರಪತಿಯವರಲ್ಲಿ ಮೂಡಿದರೆ, ಆ ಸಮುದಾಯಕ್ಕೆ ಸೇರಿದ ಇಬ್ಬರಿಗಿಂತ ಹೆಚ್ಚಿಲ್ಲದ ಸದಸ್ಯರು ರಾಷ್ಟ್ರಪತಿಯವರಿಂದ ನಾಮಕರಣ ಮಾಡಲ್ಪಡುತ್ತಾರೆ.
1ನೇ ಲೋಕಸಭೆ (1952)
[ಬದಲಾಯಿಸಿ]ಮೊದಲ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಸಮಾಪ್ತಿಯಾದ ನಂತರ, 1952ರ ಏಪ್ರಿಲ್‌ನಲ್ಲಿ ದೇಶವು ತನ್ನ ಪ್ರಥಮ-ಪ್ರವೇಶದ ಲೋಕಸಭೆಯನ್ನು ಹೊಂದಿತು. ಮೊದಲ ಲೋಕಸಭಾ ಚುನಾವಣೆಗಳಲ್ಲಿ 364 ಸ್ಥಾನಗಳನ್ನು ಪಡೆಯುವುದರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿಕಾರಕ್ಕೆ ಲಗ್ಗೆಹಾಕಿತು. ಇದರೊಂದಿಗೆ, ಚಲಾಯಿಸಲ್ಪಟ್ಟ ಒಟ್ಟು ಮತಗಳ ಪೈಕಿ 45 ಪ್ರತಿಶತದಷ್ಟು ಪಾಲನ್ನು ಗಳಿಸುವಲ್ಲಿ ಪಕ್ಷವು ಸಮರ್ಥವಾಯಿತು. ಚುನಾಯಕ ಸಮುದಾಯದ 44.87 ಪ್ರತಿಶತದಷ್ಟು ಪ್ರಮಾಣದ ಒಂದು ಪಾಲ್ಗೊಳ್ಳುವಿಕೆಯು ಭಾರತದ ಉದ್ದಗಲದಿಂದ ವರದಿಮಾಡಲ್ಪಟ್ಟಿತು. ಪಂಡಿತ್ ಜವಹರಲಾಲ್ ನೆಹರೂ ದೇಶದ ಮೊದಲ ಚುನಾಯಿತ ಪ್ರಧಾನಮಂತ್ರಿ ಎನಿಸಿಕೊಂಡರು ಹಾಗೂ ಚಲಾವಣೆಯಾದ ಮತಗಳ ಪೈಕಿ 75.99%ನಷ್ಟನ್ನು (47,665,951) ಗೆಲ್ಲುವ ಮೂಲಕ ಅವರ ಪಕ್ಷವು ಎದುರಾಳಿಗಳನ್ನು ನಿಚ್ಚಳವಾಗಿ ಸೋಲಿಸಿತ್ತು. 1952ರ ಏಪ್ರಿಲ್ 17ರಂದು ರಚಿಸಲ್ಪಟ್ಟ ಈ ಲೋಕಸಭೆಯು, 1957ರ ಏಪ್ರಿಲ್ 4ರವರೆಗಿನ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಿತು.
ಸ್ವತಂತ್ರ ಭಾರತವು ಜನಾಭಿಪ್ರಾಯ ಸಂಗ್ರಹಣೆಗಳಿಗೆ ಹೋಗುವುದಕ್ಕೆ ಮುಂಚಿತವಾಗಿ, INCಯ ಪರಮಾಧಿಕಾರಕ್ಕೆ ಸವಾಲು ಎಸೆಯುವ ಸಲುವಾಗಿ ನೆಹರೂರವರ ಹಿಂದಿನ ಸಂಪುಟದ ಇಬ್ಬರು ಸಹೋದ್ಯೋಗಿಗಳು ಪ್ರತ್ಯೇಕ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿದರು. 1951ರ ಅಕ್ಟೋಬರ್‌ನಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರು ಜನಸಂಘವನ್ನು ಸಂಸ್ಥಾಪಿಸಲು ಮುಂದಾದರೆ, ಪರಿಶಿಷ್ಟ ಜಾತಿಗಳ ಒಕ್ಕೂಟಕ್ಕೆ (ನಂತರದಲ್ಲಿ ಇದಕ್ಕೆ ಗಣತಂತ್ರವಾದಿ ಪಕ್ಷ ಎಂದು ಹೆಸರಿಸಲಾಯಿತು) ದಲಿತ ನಾಯಕ B. R. ಅಂಬೇಡ್ಕರ್ ಪುನಶ್ಚೈತನ್ಯ ನೀಡಿದರು. ಮುಂಚೂಣಿಗೆ ಬರಲು ಆರಂಭಿಸಿದ ಇತರ ಪಕ್ಷಗಳಲ್ಲಿ ಆಚಾರ್ಯ ಕೃಪಲಾನಿಯವರನ್ನು ಪ್ರಧಾನ ಪ್ರೇರಕಶಕ್ತಿಯಾಗಿ ಹೊಂದಿದ್ದ ಕಿಸಾನ್ ಮಜ್ದೂರ್ ಪ್ರಜಾ ಪರಿಷದ್, ರಾಂ ಮನೋಹರ್ ಲೋಹಿಯಾ ಮತ್ತು ಜಯ್‌ಪ್ರಕಾಶ್ ನಾರಾಯಣ್‌ರವರಂಥ ಹೆಮ್ಮೆಪಡುವ ಮುತ್ಸದ್ದಿಗಳ ನಾಯಕತ್ವವನ್ನು ಹೊಂದಿದ್ದ ಸಮಾಜವಾದಿ ಪಕ್ಷ ಹಾಗೂ ಭಾರತದ ಕಮ್ಯುನಿಸ್ಟ್ ಪಕ್ಷಗಳು ಸೇರಿದ್ದವು. ಆದಾಗ್ಯೂ, ಕಾಂಗ್ರೆಸ್‌ನಂಥ ಪಕ್ಷದ ವಿರುದ್ಧ ನಿಲ್ಲುವುದು ನಿಜವಾಗಿಯೂ ಈಡೇರುವ ಸಂಗತಿಯಲ್ಲ ಎಂಬುದು ಈ ಸಣ್ಣ ಸಣ್ಣ ಪಕ್ಷಗಳಿಗೆ ಗೊತ್ತಿತ್ತು.
489 ಚುನಾವಣಾ ಕ್ಷೇತ್ರಗಳಿಗಾಗಿ ನಡೆಸಲ್ಪಟ್ಟ ಮೊದಲ ಸಾರ್ವತ್ರಿಕ ಚುನಾವಣೆಗಳು 26 ಭಾರತೀಯ ರಾಜ್ಯಗಳನ್ನು ಪ್ರತಿನಿಧಿಸಿದವು. ಆ ಸಮಯದಲ್ಲಿ, ಕೆಲವು ಎರಡು-ಸ್ಥಾನಗಳ ಮತ್ತು ಅಷ್ಟೇ ಏಕೆ ಮೂರು-ಸ್ಥಾನಗಳ ಚುನಾವಣಾ ಕ್ಷೇತ್ರಗಳು ಅಸ್ತಿತ್ವದಲ್ಲಿದ್ದವು. 1960ರ ದಶಕದಲ್ಲಿ ಅನೇಕ-ಸ್ಥಾನದ ಚುನಾವಣಾ ಕ್ಷೇತ್ರಗಳನ್ನು ಸ್ಥಗಿತಗೊಳಿಸಲಾಯಿತು.
ಶ್ರೀ G.V. ಮಾವಲಂಕರ್‌ರವರು ಮೊದಲ ಲೋಕಸಭೆಯ ಸಭಾಪತಿಯಾಗಿದ್ದರು. ಮೊದಲ ಲೋಕಸಭೆಯು 677 ಅಧಿವೇಶನಗಳಿಗೂ (3,784 ಗಂಟೆಗಳು) ಸಾಕ್ಷಿಯಾಯಿತು; ಇದು ಅಧಿವೇಶನಗಳ ಸಂಖ್ಯೆಗೆ ಸಂಬಂಧಿಸಿದಂತೆ ದಾಖಲಿಸಲ್ಪಟ್ಟ ಅತಿಹೆಚ್ಚಿನ ಎಣಿಕೆಯಾಗಿದೆ. ಈ ಲೋಕಸಭೆಯು 1952ರ ಏಪ್ರಿಲ್ 17ರಿಂದ 1957ರ ಏಪ್ರಿಲ್ 4ರವರೆಗಿನ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಿತು.
2ನೇ ಲೋಕಸಭೆ (1957)
[ಬದಲಾಯಿಸಿ]1952ರಲ್ಲಿನ ತನ್ನ ಯಶೋಗಾಥೆಯನ್ನು 1957ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಗಳಲ್ಲಿ ಪುನರಾವರ್ತಿಸುವಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮರ್ಥವಾಯಿತು. ರಾಜಕೀಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಒಟ್ಟು 490 ಉಮೇದುವಾರರ ಪೈಕಿ 371 ಸ್ಥಾನಗಳನ್ನು ಗೆಲ್ಲುವಲ್ಲಿ INC ಸಮರ್ಥವಾಯಿತು. ಒಟ್ಟಾರೆಯಾಗಿ 57,579,589 ಮತಗಳನ್ನು ಗೆಲ್ಲುವ ಮೂಲಕ ಪಕ್ಷವು 47.78 ಪ್ರತಿಶತದಷ್ಟು ಬಹುಮತವನ್ನೂ ಗಳಿಸಿತು. ಒಂದು ಅನುಕೂಲಕರ ಬಹುಮತದೊಂದಿಗೆ ಪಂಡಿತ್ ಜವಹರಲಾಲ್ ನೆಹರೂ ಅಧಿಕಾರಕ್ಕೆ ಮರಳಿದರು. 1957ರ ಮೇ 11ರಂದು, ಹೊಸ ಲೋಕಸಭೆಯ ಸ್ಪಿಕರ್ ಆಗಿ M. ಅನಂತಶಯನಂ ಅಯ್ಯಂಗಾರ್‌ರವರು ಅವಿರೋಧವಾಗಿ ಚುನಾಯಿಸಲ್ಪಟ್ಟರು. ಅವರ ಹೆಸರು ಪ್ರಧಾನಮಂತ್ರಿ ನೆಹರೂರವರಿಂದ ಪ್ರಸ್ತಾವಿಸಲ್ಪಟ್ಟಿತು ಹಾಗೂ ಶ್ರೀಮಾನ್ ಸತ್ಯನಾರಾಯಣ್ ಸಿನ್ಹಾರಿಂದ ಅನುಮೋದಿಸಲ್ಪಟ್ಟಿತು.
ಕಾಂಗ್ರೆಸ್ ಸದಸ್ಯ ಫಿರೋಜ್ ಗಾಂಧಿಯವರ (PM ನೆಹರೂರವರ ಮಗಳು ಇಂದಿರಾರನ್ನು ಇವರು ಮದುವೆಯಾದರು) ರಾಜಕೀಯ ಉನ್ನತಿಗೂ ಈ ಚುನಾವಣೆಗಳು ಸಾಕ್ಷಿಯಾದವು. ತಮ್ಮ ಅತ್ಯಂತ ಸಮೀಪದ ಎದುರಾಳಿ ನಂದಕಿಶೋರ್‌ರವರನ್ನು 29,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಫಿರೋಜ್ ಗಾಂಧಿ, ಉತ್ತರ ಪ್ರದೇಶದ ರಾಯ್‌ಬರೇಲಿ ಚುನಾವಣಾ ಕ್ಷೇತ್ರದಲ್ಲಿನ ಸಾಮಾನ್ಯ ಸ್ಥಾನವನ್ನು ಗೆದ್ದರು.
ಕುತೂಹಲಕರವೆಂಬಂತೆ, 1957ರ ಜನಾಭಿಪ್ರಾಯ ಸಂಗ್ರಹಣೆಗಳಲ್ಲಿ ಒಬ್ಬ ಮಹಿಳಾ ಉಮೇದುವಾರರೂ ಚುನಾವಣಾ ಕಣದಲ್ಲಿರಲಿಲ್ಲ. 1957ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು 19 ಪ್ರತಿಶತದಷ್ಟು ಮತವನ್ನು ಪಡೆದರು. 1962ರ ಮಾರ್ಚ್ 31ರಂದು 2ನೇ ಲೋಕಸಭೆ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಿತು.
3ನೇ ಲೋಕಸಭೆ (1962)
[ಬದಲಾಯಿಸಿ]1957 ಚುನಾವಣೆಗಳಲ್ಲಿನ ಒಂದು ಬಹುಮತದ ಗೆಲುವಿನೊಂದಿಗೆ ಜವಹರಲಾಲ್ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ಈ ಕಾಂಗ್ರೆಸ್ ನಾಯಕ ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ಅಭಿವೃದ್ಧಿ ಮತ್ತು ಬೆಳವಣಿಗೆಯ ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು. ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನಾಯುಕ್ತವಾಗಿ ಬಳಸುವ ಮೂಲಕ ಜನರ ಜೀವನ ಮಟ್ಟಗಳನ್ನು ಸುಧಾರಿಸುವ ಕಡೆಗೆ ಈ ಕಾರ್ಯಕ್ರಮವು ಗುರಿಯಿಟ್ಟುಕೊಂಡಿತ್ತು. ದೇಶವು ಮುಂದಕ್ಕೆ ಜಿಗಿಯಬೇಕು ಎಂಬುದಾಗಿ ನೆಹರೂ ಬಯಸಿದ್ದ ನಾನಾಬಗೆಯ ವಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ವಲಯ, ಸಂವಹನೆಗಳು ಸೇರಿದ್ದವು. ಭವಿಷ್ಯವಾದದಲ್ಲಿ ವಿಶ್ವಾಸವಿಟ್ಟಿದ್ದ ಭಾರತದ ಪ್ರಧಾನಿಯು, ಉಕ್ಕಿನ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳಾಗಿ ನೋಡುವಂಥ ಯೋಜನೆಗಳನ್ನು ಹೊಂದಿದ್ದರು.
1962ರ ಏಪ್ರಿಲ್‌ನಲ್ಲಿ ಮೂರನೇ ಲೋಕಸಭೆಯು ರೂಪುಗೊಂಡಿತು. ಆ ಸಮಯದಲ್ಲಿ, ಪಾಕಿಸ್ತಾನದ ಜೊತೆಗಿನ ಬಾಂಧವ್ಯಗಳು ನಿರುತ್ಸಾಹಕರವಾಗಿ ಉಳಿದುಕೊಂಡಿದ್ದವು. 1962ರ ಅಕ್ಟೋಬರ್‌ನಲ್ಲಿ ಗಡಿ ಯುದ್ಧವು ಶುರುವಾಗುವುದರೊಂದಿಗೆ, ಚೀನಾದೊಂದಿಗಿನ 'ಸ್ನೇಹಶೀಲ' ಬಾಂಧವ್ಯಗಳು ಒಂದು ರೀತಿಯಲ್ಲಿ ಆ ಪರಿಭಾಷೆಯು ತಪ್ಪಾಗಿ ಬಳಕೆಯಾಗಿರುವುದನ್ನು ಸಾಬೀತುಮಾಡಿದವು. ಟಿಬೆಟ್‌ನ ಸ್ವಲ್ಪವೇ ಪಶ್ಚಿಮಕ್ಕೆ ಅಕ್ಸಾಯ್ ಚೀನಾದ ವಿವಾದಿತ ಪ್ರದೇಶದಲ್ಲಿ 1956-57ರಲ್ಲಿ ಚೀನಿಯರ ಸೇನಾ ಹೆದ್ದಾರಿಯೊಂದನ್ನು ನಿರ್ಮಿಸಿದ್ದೇ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಘರ್ಷಣೆಯ ಹಿಂದಿದ್ದ ಪ್ರಮುಖ ವಿವಾದಾಂಶವಾಗಿತ್ತು ಎಂದು ಹೇಳಲಾಗುತ್ತದೆ. 1962ರ ಬೇಸಿಯಲ್ಲಿ ಚಕಮಕಿಗಳೊಂದಿಗೆ ಆರಂಭವಾದ ಈ ಯುದ್ಧವು 1962ರ ಅಕ್ಟೋಬರ್ ಮತ್ತು ನವೆಂಬರ್ ವೇಳೆಗೆ, ವ್ಯಾಪಕವಾಗಿ ಪ್ರತ್ಯೇಕಿಸಲ್ಪಟ್ಟಿದ್ದ ಮೂರು ರಂಗಗಳ ಉದ್ದಕ್ಕೂ ಗಮನಾರ್ಹ ಗಾತ್ರಗಳನ್ನು ತಳೆಯಿತು. ಬಲವಾಗಿದ್ದ ಮತ್ತು ಸುಸಜ್ಜಿತವಾಗಿದ್ದ ಚೀನಿಯರ ಸೇನೆಯು ಭಾರತೀಯ ಸೇನೆಯನ್ನು ಮೀರಿಸಿತು.
ರಕ್ಷಣೆಗೆ ತಮ್ಮ ಸರ್ಕಾರವು ನೀಡಿದ ಅಸಮರ್ಪಕ ಗಮನಕ್ಕಾಗಿ ವ್ಯಾಪಕವಾಗಿ ಟೀಕೆಗೊಳಗಾದ ನೆಹರೂ, ಅಂದಿನ ರಕ್ಷಣಾ ಸಚಿವ ಕೃಷ್ಣ ಮೆನನ್‌ರನ್ನು ಬಲವಂತವಾಗಿ ತೆಗೆದುಹಾಕಿ, U.S. ಸೇನಾ ನೆರವನ್ನು ಸ್ವೀಕರಿಸಬೇಕಾಗಿ ಬಂತು. ನೆಹರೂರವರ ಆರೋಗ್ಯ ಒಂದೇ ಸಮನಾಗಿ ಕುಸಿಯಲು ಪ್ರಾರಂಭಿಸಿತು, ಹಾಗೂ 1963ರ ವರ್ಷದುದ್ದಕ್ಕೂ ಅವರು ಕಾಶ್ಮೀರದಲ್ಲಿ ಚೇತರಿಸಿಕೊಳ್ಳುವುದಕ್ಕೆಂದೇ ತಿಂಗಳುಗಟ್ಟಲೆ ಕಾಲವನ್ನು ವಿನಿಯೋಗಿಸಬೇಕಾಗಿ ಬಂತು. 1964ರ ಮೇ ತಿಂಗಳಲ್ಲಿ ಕಾಶ್ಮೀರದಿಂದ ಹಿಂದಿರುಗಿದ ನಂತರ ನೆಹರೂ ಪಾರ್ಶ್ವವಾಯು ಪೀಡಿತರಾದರು ಮತ್ತು ನಂತರ ಹೃದಯಾಘಾತಕ್ಕೂ ಈಡಾಗಿ 1964ರ ಮೇ 27ರಂದು ಮರಣಿಸಿದರು. 1962ರಲ್ಲಿ ಚೀನಾ ದೇಶವು ಭಾರತದ ಗಡಿಗಳನ್ನು ಅತಿಕ್ರಮಿಸಿದ್ದು ಹಾಗೂ ಪಾಕಿಸ್ತಾನಕ್ಕೆ ಮುಖಾಮುಖಿಯಾಗಿದ್ದ ಪ್ರಕೃತ ಸಂದರ್ಭಗಳು ಕೊನೆಗಾಲದಲ್ಲಿ ನೆಹರೂರವರ ಮನಸ್ಸನ್ನು ಕಹಿಗೊಳಿಸಿದ್ದವು ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.
ಅನುಭವಿ ಕಾಂಗ್ರೆಸ್ ನಾಯಕ ಗುಲ್ಜಾರಿಲಾಲ್ ನಂದಾ, ನೆಹರೂರವರ ಮರಣದಿಂದ ನಂತರ ಎರಡು ವಾರಗಳ ಅವಧಿಯವರೆಗೆ ಅಧಿಕಾರ ವಹಿಸಿಕೊಂಡರು. ಓರ್ವ ಹೊಸ ನಾಯಕರಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕಾಂಗ್ರೆಸ್ ಚುನಾಯಿಸುವವರೆಗೆ ಅವರು ಹಂಗಾಮಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಪ್ರಧಾನ ಮಂತ್ರಿಯ ಹುದ್ದೆಗೆ ಶಾಸ್ತ್ರಿಯವರದು ಒಂದು ಅಸಂಭವ ಆಯ್ಕೆ ಎನಿಸಿತ್ತು; ಅವರು ಪ್ರಾಯಶಃ ಅನಿರೀಕ್ಷಿತವಾಗಿ, 1965ರಲ್ಲಿ ಪಾಕಿಸ್ತಾನದ ವಿರುದ್ಧ ವಿಜಯವನ್ನು ಹೊಂದುವೆಡೆಗೆ ದೇಶವನ್ನು ಮುನ್ನಡೆಸಿದರು. ಶಾಸ್ತ್ರಿ ಮತ್ತು ಪಾಕಿಸ್ತಾನದ ವಿನೀತ ರಾಷ್ಟ್ರಾಧ್ಯಕ್ಷ ಮುಹಮ್ಮದ್ ಅಯೂಬ್ ಖಾನ್, 1966ರ ಜನವರಿ 10ರಂದು ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ತಾಷ್ಕೆಂಟ್‌ನಲ್ಲಿ ಶಾಂತಿ ಒಡಂಬಡಿಕೆಯೊಂದಕ್ಕೆ ಸಹಿಹಾಕಿದರು. ಆದಾಗ್ಯೂ, ತಾವು ಸಾಧಿಸಿದ ಗೆಲುವಿನ ಪ್ರಯೋಜನಗಳನ್ನು ಶಾಸ್ತ್ರಿಯವರು ಬಹಳ ದಿನ ನೋಡಲಾಗಲಿಲ್ಲ.
ಶಾಸ್ತ್ರಿಯವರ ಮರಣದಿಂದ ಸೃಷ್ಟಿಸಲ್ಪಟ್ಟ ನಿರ್ವಾತವನ್ನು ಅನುಸರಿಸಿ ಕಾಂಗ್ರೆಸ್ ಸ್ವತಃ ಒಂದು ನಾಯಕ-ರಹಿತ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂತು. ನಂದಾ ಮತ್ತೊಮ್ಮೆ ಹಂಗಾಮಿ ಪ್ರಧಾನಮಂತ್ರಿಯ ಸ್ಥಾನವನ್ನು ಅಲಂಕರಿಸಿದರು; ಈ ಬಾರಿಯೂ ಅವರದು ಒಂದು ತಿಂಗಳಿಗಿಂತ ಕಡಿಮೆಯಿದ್ದ ಅಧಿಕಾರಾವಧಿಯಾಗಿತ್ತು ಹಾಗೂ ನಂತರ ಇವರ ಉತ್ತರಾಧಿಕಾರಿಯಾಗಿ ನೆಹರೂರವರ ಮಗಳಾದ ಇಂದಿರಾ ಗಾಂಧಿಯವರು ಅಧಿಕಾರ ವಹಿಸಿಕೊಂಡರು. ಇಂದಿರಾಗಾಂಧಿಯವರು ಶಾಸ್ತ್ರಿಯವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರಖಾತೆಯ ಸಚಿವೆಯಾಗಿದ್ದರು. 1966ರಲ್ಲಿ ಪ್ರಧಾನ ಮಂತ್ರಿಗಿರಿಯ ಸ್ಥಾನಕ್ಕೆ ಇಂದಿರಾರವರನ್ನು ಏರಿಸುವಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ K. ಕಾಮರಾಜ್ ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದರು. ಅನುಭವಿ ಕಾಂಗ್ರೆಸ್ ನಾಯಕರಾದ ಮೊರಾರ್ಜಿ ದೇಸಾಯಿಯವರಿಂದ ಹೊರಹೊಮ್ಮಿದ ಪಟ್ಟುಬಿಡದ ವಿರೋಧದ ನಡುವೆಯೂ, 1966ರ ಜನವರಿ 24ರಂದು ಇಂದಿರಾ ಗಾಂಧಿ ಪ್ರಧಾನಮಂತ್ರಿಯಾದರು. ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಅವು ಆ ಪಕ್ಷಕ್ಕೆ ನಿಜವಾಗಿಯೂ ಒಳ್ಳೆಯ ದಿನಗಳಾಗಿರಲಿಲ್ಲ. ಪಕ್ಷವು ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು ಹಾಗೂ ನಿಕಟವಾಗಿ ಹೋರಾಡಲ್ಪಟ್ಟ ಎರಡು ಯುದ್ಧಗಳಿಂದ ಸ್ವತಃ ದೇಶವೇ ಚೇತರಿಸಿಕೊಳ್ಳುತ್ತಿತ್ತು. ಆರ್ಥಿಕತೆಯು ತೊಂದರೆಗೆ ಸಿಲುಕಿಸಿತ್ತು, ಸಾರ್ವತ್ರಿಕ ಭಾವನೆಯು ತಗ್ಗಿತ್ತು. ಮಿಜೋ ಬುಡಕಟ್ಟಿನ ದಂಗೆಗಳು, ಕ್ಷಾಮ, ಕಾರ್ಮಿಕ ಕ್ಷೋಭೆ ಮತ್ತು ರೂಪಾಯಿ ಅಪಮೌಲ್ಯೀಕರಣದ ಪರಿಣಾಮವಾಗಿ ಬಡಜನರು ಎದುರಿಸುತ್ತಿದ್ದ ದುರವಸ್ಥೆ ಇವೆಲ್ಲವೂ ಲೋಕಸಭೆಗೆ ಅಪ್ಪಳಿಸಿದ ಇತರ ವಿವಾದಾಂಶಗಳಲ್ಲಿ ಸೇರಿದ್ದವು. ಭಾಷಾಸಂಬಂಧವಾಗಿ ಮತ್ತು ಧಾರ್ಮಿಕ ಪ್ರತ್ಯೇಕತಾವಾದದ ಕುರಿತಂತೆ ಪಂಜಾಬ್‌ನಲ್ಲಿಯೂ ಸಹ ಭಾರೀ ತಳಮಳ ಹುಟ್ಟಿಕೊಂಡಿತ್ತು.
4ನೇ ಲೋಕಸಭೆ (1967)
[ಬದಲಾಯಿಸಿ]1967ರ ಏಪ್ರಿಲ್‌ನಲ್ಲಿ, ಸ್ವಾತಂತ್ರ್ಯಾನಂತರದ ಚುನಾವಣಾ ವೇದಿಕೆಯಲ್ಲಿನ ತನ್ನ ನಾಲ್ಕನೇ ಬಯಲುಸ್ಪರ್ಧೆಗೆ ದೇಶವು ಸಾಕ್ಷಿಯಾಯಿತು. ಅದುವರೆಗೂ ಸಂಸತ್ತಿನಲ್ಲಿನ ಸ್ಥಾನಗಳ ಪೈಕಿ 73 ಪ್ರತಿಶತಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಎಂದಿಗೂ ಗೆದ್ದಿರದಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಕೆಟ್ಟ ಸುದ್ದಿಯು ಕಾದಿತ್ತು.
1967 ಚುನಾವಣೆಗಳ ಫಲಿತಾಂಶಗಳಲ್ಲಿ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಮುಖಕ್ಕೆ ರಾಚುವಂತಿತ್ತು. ಮೊಟ್ಟಮೊದಲ ಬಾರಿಗೆ ಪಕ್ಷವು ಕೆಳಮನೆಯಲ್ಲಿ ಸರಿಸುಮಾರು 60 ಸ್ಥಾನಗಳನ್ನು ಸೋತಿತು ಹಾಗೂ 283 ಸ್ಥಾನಗಳನ್ನಷ್ಟೇ ಗೆಲ್ಲಲು ಅದಕ್ಕೆ ಸಾಧ್ಯವಾಯಿತು. 1967ರವಗಿನ ಶಾಸನಸಭಾ ಚುನಾವಣೆಗಳಲ್ಲಿಯೂ ಈ ಭರ್ಜರಿ ಹಳೆಯ ಪಕ್ಷವು 60 ಪ್ರತಿಶತಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದ ನಿದರ್ಶನಗಳಿರಲಿಲ್ಲ. ಬಿಹಾರ, ಕೇರಳ, ಒಡಿಶಾ, ಮದ್ರಾಸ್, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ಸೇತರ ಮಂತ್ರಿಮಂಡಲಗಳು ಸ್ಥಾಪಿಸಲ್ಪಟ್ಟಿದ್ದೂ ಸಹ ಇದಕ್ಕೆ ಒಂದು ಪ್ರಮುಖ ಹಿನ್ನಡೆಯಾಗಿತ್ತು. ಇವೆಲ್ಲದರ ಮಧ್ಯೆ, ರಾಯ್‌ಬರೇಲಿ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದ ಇಂದಿರಾ ಗಾಂಧಿಯವರು ಮಾರ್ಚ್ 13ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಭಿನ್ನಮತೀಯ ಧ್ವನಿಗಳನ್ನು ನಿರುಪಾಯದ ಸ್ಥಿತಿಯಲ್ಲಿ ಇರಿಸುವ ದೃಷ್ಟಿಯಿಂದ, ಮೊರಾರ್ಜಿ ದೇಸಾಯಿಯವರನ್ನು ಆಕೆ ಭಾರತದ ಉಪ-ಪ್ರಧಾನಿ ಮತ್ತು ಭಾರತದ ಹಣಕಾಸು ಸಚಿವರಾಗಿ ನೇಮಿಸಿದರು; ನೆಹರೂರವರ ಮರಣದ ನಂತರ ಪ್ರಧಾನಮಂತ್ರಿ ಹುದ್ದೆಗೆ ಅವರ ಉಮೇದುವಾರಿಕೆ ಪ್ರಸ್ತಾಪವಾದಾಗ ಇದೇ ಮೊರಾರ್ಜಿ ದೇಸಾಯಿಯವರೇ ಅದನ್ನು ವಿರೋಧಿಸಿದ್ದರು ಎಂಬುದಿಲ್ಲಿ ಗಮನಾರ್ಹ ಸಂಗತಿ.
ಚುನಾವಣೆಯಲ್ಲಿನ ಕಾಂಗ್ರೆಸ್‌ನ ನಿರಾಶಾದಾಯಕ ಪ್ರದರ್ಶನದಿಂದಾಗಿ ಆಕೆ ಹಠವಾದಿಯಾಗಬೇಕಾಗಿ ಬಂತು; ಅಷ್ಟೇ ಅಲ್ಲ, ಅವರು ಆರಿಸಿಕೊಂಡ ಆಯ್ಕೆಗಳ ಒಂದು ಸರಣಿಯು ಅವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ ವಿರುದ್ಧವಾಗಿ ನಿಲ್ಲಿಸಿತು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚುತ್ತಲೇ ಹೋದವು. 1969ರ ನವೆಂಬರ್ 12ರಂದು "ಅಶಿಸ್ತಿನ" ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್ ಪಕ್ಷವು ಉಚ್ಚಾಟಿಸಿತು, ಈ ಕ್ರಮದಿಂದಾಗಿ ಪಕ್ಷವು ಎರಡು ಬಣಗಳಾಗಿ ಒಡೆಯಿತು: 'ಸಂಘಟನೆ' (ಆರ್ಗನೈಸೇಷನ್) ಎಂಬುದರ ಸೂಚಿಯಾಗಿದ್ದ ಕಾಂಗ್ರೆಸ್ (O) ಬಣಕ್ಕೆ ಮೊರಾರ್ಜಿ ದೇಸಾಯಿಯವರ ನೇತೃತ್ವ ದೊರೆತರೆ, 'ಇಂದಿರಾ' ಎಂಬುದರ ಸೂಚಿಯಾಗಿದ್ದ ಕಾಂಗ್ರೆಸ್ (I) ಬಣಕ್ಕೆ ಇಂದಿರಾ ಗಾಂಧಿಯವರ ನೇತೃತ್ವ ದೊರೆಯಿತು. CPI(M) ವತಿಯಿಂದ ದೊರೆತ ಬೆಂಬಲದೊಂದಿಗಿನ ಒಂದು ಅಲ್ಪಮತದ ಸರ್ಕಾರದ ನೇತೃತ್ವವನ್ನು 1970ರ ಡಿಸೆಂಬರ್‌ವರೆಗೂ ಇಂದಿರಾ ಮುಂದುವರಿಸಿಕೊಂಡು ಹೋದರು. ಅಲ್ಪಮತದ ಸರ್ಕಾರವನ್ನು ಮತ್ತಷ್ಟು ಅವಧಿಯವರೆಗೆ ತೂಗಿಸಿಕೊಂಡು ಹೋಗುವುದನ್ನು ಬಯಸದ ಆಕೆ ಲೋಕಸಭೆಗೆ ಒಂದು ಮಧ್ಯಾವಧಿ ಚುನಾವಣೆಯನ್ನು ಘೋಷಿಸಿದರು; ಇದು ಪೂರ್ಣ ಒಂದು ವರ್ಷದ ನಂತರ ಕೈಗೊಳ್ಳಬೇಕಿದ್ದ ಕಾರ್ಯಸೂಚಿಯಾಗಿತ್ತು.
ಐದನೇ ಸಾರ್ವತ್ರಿಕ ಚುನಾವಣೆಗಳಿಗಾಗಿ ದೇಶವು ಸಜ್ಜುಗೊಳ್ಳತೊಡಗಿತು.
5ನೇ ಲೋಕಸಭೆ (1971)
[ಬದಲಾಯಿಸಿ]1971ರಲ್ಲಿ ಕಾಂಗ್ರೆಸ್ ಪಕ್ಷವನ್ನು ಒಂದು ಪ್ರಚಂಡ-ಬಹುಮತದ ವಿಜಯದೆಡೆಗೆ ಇಂದಿರಾ ಗಾಂಧಿಯವರು ಮನ್ನಡೆಸಿದರು."ಗರೀಬಿ ಹಟಾವೊ" (ಬಡತನವನ್ನು ನಿರ್ಮೂಲಗೊಳಿಸಿ) ಎಂಬ ಘೋಷಣೆಯನ್ನು ಆಧಾರವಾಗಿಟ್ಟುಕೊಂಡು ಚುನಾವಣಾ ಪ್ರಚಾರವನ್ನು ನಡೆಸುವ ಮೂಲಕ 352 ಸ್ಥಾನಗಳನ್ನು ಗಳಿಸಿ ಆಕೆ ಸಂಸತ್ತಿಗೆ ಮರಳಿದರು; ಹಿಂದಿನ ಚುನಾವಣೆಯಲ್ಲಿ 283 ಸ್ಥಾನಗಳನ್ನಷ್ಟೇ ಗಳಿಸಿ ಕಳಪೆ ಪ್ರದರ್ಶನವನ್ನು ಮೆರೆದಿದ್ದ ಪಕ್ಷವು, ಸ್ಥಾನದಲ್ಲಿನ ಹೆಚ್ಚಳದ ಮೂಲಕ ಒಂದು ಗಮನಾರ್ಹ ಸುಧಾರಣೆಯನ್ನು ದಾಖಲಿಸಿತ್ತು.
1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ದಿಟ್ಟ ತೀರ್ಮಾನಗಳನ್ನು ಕೈಗೊಂಡಿದ್ದರ ಕಾರಣದಿಂದಾಗಿ ಬಾಂಗ್ಲಾದೇಶದ ವಿಮೋಚನೆಯಾಗಲು ಸಾಧ್ಯವಾಯಿತು. 1971ರ ಡಿಸೆಂಬರ್‌ನಲ್ಲಿ ದಾಖಲಿಸಲ್ಪಟ್ಟ ಭಾರತದ ವಿಜಯವನ್ನು ಎಲ್ಲಾ ಭಾರತೀಯರೂ ಅಭಿನಂದಿಸಿದರು. ಚೀನಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳೆರಡರಿಂದಲೂ ಹೊರಹೊಮ್ಮಿದ ರಾಜತಾಂತ್ರಿಕ ವಿರೋಧಕ್ಕೆ ಪ್ರತಿಯಾಗಿ ಈ ವಿಜಯವನ್ನು ಸಾಧಿಸಿದ್ದೇ ಈ ಹೆಮ್ಮೆಗೆ ಕಾರಣವಾಗಿತ್ತು. ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಪೌರಸ್ತ್ಯ ಬಣದ ದೇಶಗಳನ್ನು ಹೊರತುಪಡಿಸಿ ಬಹುಮಟ್ಟಿಗೆ ಬೇರಾವುದೇ ದೇಶವೂ ಯಾವುದೇ ಅಂತರರಾಷ್ಟ್ರೀಯ ಬೆಂಬಲವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಿಲ್ಲ.
ಆದರೆ ಇಂದಿರಾ ಮತ್ತು ಕಾಂಗ್ರೆಸ್‌ಗೆ ಸಂಬಂಧಿಸಿ ಅಲ್ಲಾಗಲೇ ಇತರ ಸಮಸ್ಯೆಗಳು ಸಿದ್ಧವಾಗಿದ್ದವು. ಭಾರತ-ಪಾಕ್ ಯುದ್ಧದ ಅಗಾಧವಾದ ಆರ್ಥಿಕ ವೆಚ್ಚ, ವಿಶ್ವದ ತೈಲ ಬೆಲೆಗಳಲ್ಲಿನ ಹೆಚ್ಚಳ, ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಕಂಡುಬಂದ ಕುಸಿತ ಇವುಗಳಿಂದಾಗಿ ಆರ್ಥಿಕ ದಾರಿದ್ರ್ಯಗಳು ಮತ್ತಷ್ಟು ಹೆಚ್ಚಾದವು.
ಚುನಾಯಣೆಗಳಲ್ಲಿನ ಅಕ್ರಮಗಳ ಆಧಾರದ ಮೇಲೆ 1975ರ ಜೂನ್ 12ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅವರ 1971ರ ಚುನಾವಣೆಯನ್ನು ಅಸಿಂಧುಗೊಳಿಸಿತು. ರಾಜೀನಾಮೆ ನೀಡುವ ಬದಲಿಗೆ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯೊಂದನ್ನು ಘೋಷಿಸಿದರು ಮತ್ತು ವಿರೋಧ ಪಕ್ಷದ ಸಮಸ್ತರನ್ನೂ ಸೆರೆವಾಸಕ್ಕೆ ಕಳಿಸಿದರು.
ತುರ್ತು ಪರಿಸ್ಥಿತಿಯು 1977ರ ಮಾರ್ಚ್‌ವರೆಗೂ ಮುಂದುವರೆಯಿತು. 1977ರಲ್ಲಿ ನಡೆಸಲಾದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನತಾ ಮೋರ್ಚಾ ಎಂದು ಕರೆಯಲ್ಪಟ್ಟ ಪಕ್ಷಗಳ ಒಕ್ಕೂಟವೊಂದರಿಂದ ಆಕೆ ಸಂಪೂರ್ಣವಾಗಿ ಸೋಲಿಸಲ್ಪಟ್ಟರು. ಕಾಂಗ್ರೆಸ್ ಪಕ್ಷವು ಒಂದು ಗಂಭೀರ ಸೋಲನ್ನು ಎದುರಿಸಿದ್ದು ಇದೇ ಮೊದಲ ಬಾರಿಗೆ ಎನ್ನಬೇಕು.
6ನೇ ಲೋಕಸಭೆ (1977)
[ಬದಲಾಯಿಸಿ]ಕಾಂಗ್ರೆಸ್ ಸರ್ಕಾರದ ವತಿಯಿಂದ ಘೋಷಿಸಲ್ಪಟ್ಟ ತುರ್ತು ಪರಿಸ್ಥಿತಿಯು 1977 ಚುನಾವಣೆಗಳಲ್ಲಿ ಒಂದು ಪ್ರಧಾನ ವಿವಾದಾಂಶವಾಗಿ ಹೊರಹೊಮ್ಮಿತು. 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ಜಾರಿಯಲ್ಲಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕ ಕ್ರಿಯಾ ಸ್ವಾತಂತ್ರ್ಯಗಳು ರದ್ದುಪಡಿಸಲ್ಪಟ್ಟವು ಮತ್ತು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಅಗಾಧವಾದ ಅಧಿಕಾರ-ಶಕ್ತಿಯನ್ನು ತಮ್ಮದಾಗಿಸಿಕೊಂಡರು.
ಇಂದಿರಾ ಗಾಂಧಿಯವರು ತಮ್ಮ ಈ ತೀರ್ಮಾನದಿಂದಾಗಿ ಜನಪ್ರಿಯತೆಯನ್ನು ಕಳೆದುಕೊಂಡರು ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅವರು ಇದರ ಬೆಲೆಯನ್ನು ತೆರಬೇಕಾಗಿ ಬಂತು. ಮಾರ್ಚ್ ತಿಂಗಳಲ್ಲಿ ತಾಜಾ ಚುನಾವಣೆಗಳು ನಡೆಯಲಿವೆ ಎಂಬುದಾಗಿ ಜನವರಿ 23ರಂದು ಘೋಷಿಸಿದ ಗಾಂಧಿಯವರು, ಎಲ್ಲಾ ರಾಜಕೀಯ ಸೆರೆಯಾಳುಗಳನ್ನು ಬಿಡುಗಡೆಮಾಡಿದರು. ನಾಲ್ಕು ವಿರೋಧಪಕ್ಷಗಳಾದ ಸಂಸ್ಥಾ ಕಾಂಗ್ರೆಸ್, ಜನಸಂಘ, ಭಾರತೀಯ ಲೋಕದಳ ಮತ್ತು ಸಮಾಜವಾದಿ ಪಕ್ಷಗಳು ಒಂದು ಏಕಪಕ್ಷವಾಗಿ ಚುನಾವಣೆಗಳಲ್ಲಿ ಹೋರಾಡಲು ನಿರ್ಧರಿಸಿದವು; ಈ ಒಕ್ಕೂಟಕ್ಕೆ ಜನತಾಪಕ್ಷ ಎಂದು ಹೆಸರಿಸಲಾಯಿತು.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆಸಲಾದ ಕಡ್ಡಾಯ ಸಂತಾನಶಕ್ತಿಹರಣ ಚಿಕಿತ್ಸೆ ಮತ್ತು ರಾಜಕೀಯ ನಾಯಕರ ಸೆರೆವಾಸದಂಥ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಜನತಾಪಕ್ಷವು ಮತದಾರರಿಗೆ ನೆನಪಿಸಿತು. ಭಾರತವು ಹೊಂದಲಿರುವುದು "ಪ್ರಜಾಪ್ರಭುತ್ವವನ್ನೋ ಅಥವಾ ಸರ್ವಾಧಿಕಾರವನ್ನೋ" ಎಂಬುದನ್ನು ಚುನಾವಣೆಗಳು ನಿರ್ಧರಿಸಲಿವೆ ಎಂಬುದಾಗಿ ಜನತಾಪಕ್ಷದ ಪ್ರಚಾರಾಂದೋಲನವು ಹೇಳಿಕೊಂಡಿತು. ಕಾಂಗ್ರೆಸ್ ಭಯಗ್ರಸ್ತವಾದಂತೆ ಕಂಡುಬಂದಿತು: ಕೃಷಿ ಮತ್ತು ನೀರಾವರಿ ಸಚಿವರಾಗಿದ್ದ ಬಾಬು ಜಗಜೀವನ್ ರಾಂ ಪಕ್ಷವನ್ನು ತ್ಯಜಿಸಿದರು, ಮತ್ತು ಹಾಗೆ ಪಕ್ಷ ಬಿಟ್ಟ ಅನೇಕರಲ್ಲಿ ಅವರು ಒಬ್ಬರಾಗಿದ್ದರು.
ಒಂದು ಬಲವಾದ ಸರ್ಕಾರದ ಅಗತ್ಯವಿರುವುದರ ಕುರಿತಾಗಿ ಮಾತನಾಡುವ ಮೂಲಕ ಮತದಾರರ ಮನವೊಲಿಸಲು ಕಾಂಗ್ರೆಸ್ ಪ್ರಯತ್ನಿಸಿತು, ಆದರೆ ಅಲೆಯು ಅದರ ವಿರುದ್ಧವಾಗಿತ್ತು.
ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಚುನಾವಣೆಗಳನ್ನು ಸೋತಿತು ಹಾಗೂ ಚುನಾವಣೆಗಳು ನಡೆಯುವುದಕ್ಕೆ ಎರಡು ತಿಂಗಳುಗಳು ಮುಂಚಿತವಾಗಷ್ಟೇ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಜನತಾಪಕ್ಷದ ನಾಯಕ ಮೊರಾರ್ಜಿ ದೇಸಾಯಿಯವರು 298 ಸ್ಥಾನಗಳನ್ನು ಗೆದ್ದರು. ಮಾರ್ಚ್ 24ರಂದು ದೇಸಾಯಿಯವರು ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾದರು.
ಕಾಂಗ್ರೆಸ್ ಪಕ್ಷವು ಸರಿಸುಮಾರು 200 ಸ್ಥಾನಗಳನ್ನು ಸೋತಿತು. 1966ರಿಂದಲೂ ಸರ್ಕಾರದಲ್ಲಿದ್ದ ಇಂದಿರಾ ಗಾಂಧಿ, ಮತ್ತು ಅವರ ಮಗ ಸಂಜಯ್ ಇಬ್ಬರೂ ಚುನಾವಣೆಯಲ್ಲಿ ಸೋತರು.
7ನೇ ಲೋಕಸಭೆ (1980)
[ಬದಲಾಯಿಸಿ]ಕಾಂಗ್ರೆಸ್ ವಿರುದ್ಧವಾಗಿ ನೆಲೆಗೊಂಡಿದ್ದ ಸಾರ್ವಜನಿಕ ಕೋಪ ಹಾಗೂ ತುರ್ತು ಪರಿಸ್ಥಿತಿಯಂಥ ಅಂಶಗಳ ಮೇಲೆ ಸವಾರಿಮಾಡಿಕೊಂಡು ಜನತಾಪಕ್ಷವು ಅಧಿಕಾರಕ್ಕೆ ಬಂದಿತಾದರೂ, ಅದರ ನೆಲೆಗಟ್ಟು ಅಥವಾ ಸ್ಥಾನವು ದುರ್ಬಲವಾಗಿತ್ತು. ಲೋಕಸಭೆಯಲ್ಲಿ ಪಕ್ಷವು 270 ಸ್ಥಾನಗಳನ್ನು ಹೊಂದಿತ್ತು ಮತ್ತು ಅಧಿಕಾರದ ಮೇಲೆ ಎಂದಿಗೂ ಒಂದು ಬಲವಾದ ಹಿಡಿತವನ್ನು ಹೊಂದಿರಲಿಲ್ಲ.
ಭಾರತೀಯ ಲೋಕದಳದ ನಾಯಕ ಚರಣ್‌ಸಿಂಗ್ ಮತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದ ಜಗಜೀವನ್ ರಾಂರವರುಗಳು ಜನತಾ ಒಕ್ಕೂಟದ ಸದಸ್ಯರಾಗಿದ್ದರೂ ಸಹ, ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿಯವರೊಂದಿಗೆ ಅವರ ತಾಳ-ಮೇಳ ಹೊಂದುತ್ತಿರಲಿಲ್ಲ; ಪರಸ್ಪರರ ಮಾತನ್ನೊಪ್ಪದೆ ವಾದಮಾಡುವುದೇ ಅವರ ಪ್ರವೃತ್ತಿಯಾಗಿತ್ತು.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದಿದ್ದ ಮಾನವ ಹಕ್ಕುಗಳ ದುರುಪಯೋಗಗಳ ಕುರಿತು ತನಿಖೆಮಾಡಲು ಸರ್ಕಾರವು ಸ್ಥಾಪಿಸಿದ್ದ ನ್ಯಾಯಮಂಡಲಿಗಳು ಪ್ರತೀಕಾರ ಸ್ವರೂಪವನ್ನು ಹೊಂದಿದ್ದು, ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯವರ ವಿರುದ್ಧ 'ಮಾಟಗಾತಿ-ಬೇಟೆ'ಯ ಶೈಲಿಯಲ್ಲಿ ಬೆಂಬತ್ತುವಂತೆ ಕಂಡುಬಂದವು; ಇಂದಿರಾ ಗಾಂಧಿಯವರು ತಮ್ಮನ್ನು ಓರ್ವ ಕಿರುಕುಳಕ್ಕೊಳಗಾದ ಮಹಿಳೆಯಂತೆ ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲಿಲ್ಲ.
ಸಮಾಜವಾದಿಗಳು ಮತ್ತು ಹಿಂದೂ ರಾಷ್ಟ್ರೀಯತಾವಾದಿಗಳ ಒಂದು ಮಿಶ್ರಣವಾಗಿದ್ದ ಜನತಾಪಕ್ಷವು 1979ರಲ್ಲಿ ಒಡೆಯಿತು; ಈ ಸಂದರ್ಭದಲ್ಲಿ ಭಾರತೀಯ ಜನಸಂಘದ (BJS) ನಾಯಕರಾದ A.B. ವಾಜಪೇಯಿ ಮತ್ತು L.K. ಅಡ್ವಾನಿಯವರು ಒಕ್ಕೂಟವನ್ನು ತ್ಯಜಿಸಿದರು ಮತ್ತು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು BJS ಹಿಂತೆಗೆದುಕೊಂಡಿತು.
ಸಂಸತ್ತಿನಲ್ಲಿ ವಿಶ್ವಾಸಮತವನ್ನು ಪಡೆಯುವಲ್ಲಿ ಸೋತ ದೇಸಾಯಿಯವರು ರಾಜೀನಾಮೆ ನೀಡಿದರು. ಜನತಾ ಒಕ್ಕೂಟದ ಒಂದಷ್ಟು ಪಾಲುದಾರರನ್ನು ಉಳಿಸಿಕೊಂಡಿದ್ದ ಚರಣ್‌ಸಿಂಗ್, ಪ್ರಧಾನಮಂತ್ರಿಯಾಗಿ 1979ರ ಜೂನ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಂಸತ್ತಿನಲ್ಲಿ ಸಿಂಗ್‌ರವರಿಗೆ ಬೆಂಬಲ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತಾದರೂ, ನಂತರದಲ್ಲಿ ಹಿಂಜರಿಯಿತು. 1980ರ ಜನವರಿಯಲ್ಲಿ ಚುನಾವಣೆಗಳು ನಡೆಯುವುದರ ಕುರಿತು ಅವರು ಘೋಷಿಸಿದರು, ಮತ್ತು ಸಂಸತ್ತನ್ನು ಎದುರಿಸದ ಏಕೈಕ ಪ್ರಧಾನಮಂತ್ರಿ ಎನಿಸಿಕೊಂಡರು. ಜನತಾಪಕ್ಷ ನಾಯಕರ ನಡುವೆ ಕಂಡುಬಂದ ಹೋರಾಟ ಮತ್ತು ದೇಶದಲ್ಲಿನ ರಾಜಕೀಯ ಅಸ್ಥಿರತೆಯಂಥ ಅಂಶಗಳು ಕಾಂಗ್ರೆಸ್ (I) ಪಕ್ಷಕ್ಕೆ ಅನುಕೂಲಕರವಾಗಿ ಕೆಲಸಮಾಡಿದವು; ಇಂದಿರಾ ಗಾಂಧಿಯವರು ನೀಡಿದ ಬಲವಾದ ಸರ್ಕಾರದ ಕುರಿತಾಗಿ ಕಾಂಗ್ರೆಸ್ ಮತದಾರರಿಗೆ ನೆನಪಿಸಿತು.
351 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡರೆ, ಜನತಾಪಕ್ಷ ಅಥವಾ ಒಕ್ಕೂಟದ ಪೈಕಿ ಏನು ಉಳಿದುಕೊಂಡಿತ್ತೋ ಆ ಭಾಗವು 32 ಸ್ಥಾನಗಳನ್ನು ಗೆದ್ದುಕೊಂಡಿತು.
ವರ್ಷಗಳಾಗುತ್ತಿದ್ದಂತೆ ಜನತಾಪಕ್ಷವು ಒಡೆಯುತ್ತಲೇ ಹೋಯಿತಾದರೂ, ದೇಶದ ರಾಜಕೀಯ ಇತಿಹಾಸದಲ್ಲಿ ಅದು ಒಂದು ಪ್ರಮುಖ ಹೆಗ್ಗುರುತನ್ನು ಅದು ದಾಖಲಿಸಿತ್ತು: ಅದೊಂದು ಪಕ್ಷಗಳ ಒಕ್ಕೂಟವಾಗಿತ್ತು ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿದೆ ಎಂಬುದನ್ನು ಅದು ಸಾಬೀತು ಮಾಡಿತ್ತು.
8ನೇ ಲೋಕಸಭೆ (1984-85)
[ಬದಲಾಯಿಸಿ]1984ರ ಅಕ್ಟೋಬರ್ 31ರಂದು ನಡೆದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯು, ಕಾಂಗ್ರೆಸ್ ಪರವಾಗಿ ಒಂದು ಅನುಕಂಪದ-ಅಲೆಯ ಮತವನ್ನು ಸೃಷ್ಟಿಸಿತು. ಇಂದಿರಾರವರ ಮರಣಾನಂತರ ಲೋಕಸಭೆಯು ವಿಸರ್ಜಿಸಲ್ಪಟ್ಟಿತು ಮತ್ತು ಮಧ್ಯಂತರ ಪ್ರಧಾನಮಂತ್ರಿಯಾಗಿ ರಾಜೀವ್ ಗಾಂಧಿಯವರು ಪ್ರಮಾಣವಚನ ಸ್ವೀಕರಿಸಿದರು.
1984ರ ನವೆಂಬರ್‌ನಲ್ಲಿ ಚುನಾವಣೆಗಳು ನಡೆಯುತ್ತವೆಯೆಂದು ಪ್ರಕಟಿಸಲಾಯಿತು ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಕುಟುಂಬವು ನೀಡಿದ ಕೊಡುಗೆಯನ್ನು ರಾಜೀವ್ ಜನರಿಗೆ ನೆನಪಿಸಿದರು ಹಾಗೂ ಓರ್ವ ಸುಧಾರಕನ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಂಡರು.
ಪ್ರಚಂಡ-ಬಹುಮತದ ವಿಜಯವೊಂದನ್ನು ಕಾಂಗ್ರೆಸ್ ದಾಖಲಿಸಿತು. 409 ಲೋಕಸಭೆ ಸ್ಥಾನಗಳನ್ನು ಮತ್ತು 50 ಪ್ರತಿಶತಕ್ಕಿಂತ ಹೆಚ್ಚಿನ ಜನಪ್ರಿಯ ಮತವನ್ನು ಇದು ಗೆದ್ದುಕೊಂಡಿತು; ಇದು ಪಕ್ಷದ ಅದುವರೆಗಿನ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮವೆನಿಸಿಕೊಂಡಿತು.ತೆಲುಗುದೇಶಂ ಪಕ್ಷವು 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಸಂಸತ್ತಿನಲ್ಲಿನ ಎರಡನೇ ಅತಿದೊಡ್ಡ ಪಕ್ಷ ಎನಿಸಿಕೊಂಡಿತು. ಒಂದು ಪ್ರಾದೇಶಿಕ ಪಕ್ಷವು ಮುಖ್ಯ ವಿರೋಧಪಕ್ಷವಾಗಿ ಹೊರಹೊಮ್ಮಿದ್ದು, ಭಾರತೀಯ ಸಂಸತ್ತಿನ ಇತಿಹಾಸದಲ್ಲಿನ ಅಪರೂಪ ದಾಖಲೆಗಳಲ್ಲಿ ಒಂದೆನಿಸಿದೆ.
9ನೇ ಲೋಕಸಭೆ (1989)
[ಬದಲಾಯಿಸಿ]9ನೇ ಲೋಕಸಭಾ ಚುನಾವಣೆಗಳು ಅನೇಕ ವಿಧಗಳಲ್ಲಿ ಭಾರತೀಯ ಚುನಾಯಕ ರಾಜಕಾರಣದಲ್ಲಿನ ಒಂದು ಸಂಧಿಕಾಲವಾಗಿದ್ದವು. ರಾಜಕಾರಣಿಗಳು ಮತದಾರರಿಗೆ ಸಮೀಪವಾಗುವ ಅಥವಾ ಅವರನ್ನು ಸಂಪರ್ಕಿಸುವ ವಿಧಾನವನ್ನೇ ಈ ಚುನಾವಣೆಗಳು ಬದಲಾಯಿಸಿದವು; ಏಕೆಂದರೆ ಯಾವುದೇ ಕಾಲಘಟ್ಟದಲ್ಲಿ ಜಾತಿ ಮತ್ತು ಧರ್ಮಗಳು ಕೇಂದ್ರಬಿಂದುವಾಗಿ ಪರಿಣಮಿಸುವಲ್ಲಿ ಸಾಧಾರಣ ಭಾರತೀಯ ಮತದಾರರಿಂದ ಹಿಂದೆ ಸರಿಯುತ್ತಿರಲಿಲ್ಲ. ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984-85ರಲ್ಲಿ ನಡೆಸಲಾಗಿದ್ದ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ರಾಜೀವ್ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಪ್ರಚಂಡ-ಬಹುಮತದ ಗೆಲುವನ್ನು ಸಾಧಿಸಿತ್ತು ಮತ್ತು ಲೋಕಸಭೆಯಲ್ಲಿ 400ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು.
ಆದಾಗ್ಯೂ, 1989ರ ಸಾರ್ವತ್ರಿಕ ಚುನಾವಣೆಗಳಲ್ಲಿ ಹೋರಾಡುವ ಹೊತ್ತಿಗೆ ಯುವಕ ರಾಜೀವ್‌ರವರು ಒಳಗಿನ ಮತ್ತು ಹೊರಗಿನ ಹಲವಾರು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದ್ದರು, ಮತ್ತು ಕಾಂಗ್ರೆಸ್ ಸರ್ಕಾರವು ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿತ್ತು.
ಬೋಫೋರ್ಸ್ ಹಗರಣ, ಪಂಜಾಬ್‌ನಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದನೆ, LTTE ಮತ್ತು ಶ್ರೀಲಂಕಾದ ಸರ್ಕಾರದ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧ ಇವುಗಳೆಲ್ಲವೂ ರಾಜೀವ್‌ರವರ ಸರ್ಕಾರದೆಡೆಗೆ ಕೆಂಗಣ್ಣು ಬೀರಿದ ಕೆಲವೊಂದು ಸಮಸ್ಯೆಗಳಾಗಿದ್ದವು. ರಾಜೀವ್ ಗಾಂಧಿಯವರ ಸರ್ಕಾರದಲ್ಲಿ ಹಣಕಾಸು ಖಾತೆ ಮತ್ತು ರಕ್ಷಣಾ ಖಾತೆಗಳನ್ನು ಹೊಂದಿದ್ದ ವಿಶ್ವನಾಥ್ ಪ್ರತಾಪ್ ಸಿಂಗ್, ರಾಜೀವ್‌ರವರ ಅತಿದೊಡ್ಡ ಟೀಕಾಕಾರರಾಗಿದ್ದರು. ಸಿಂಗ್‌ರವರು ರಕ್ಷಣಾ ಮಂತ್ರಿಯಾಗಿದ್ದ ಅವಧಿಯಲ್ಲಿ, ರಾಜೀವ್ ಗಾಂಧಿಯವರ ಪ್ರಸಿದ್ಧಿಯನ್ನು ನಾಶಪಡಿಸಬಲ್ಲಂಥ ಬೋಫೋರ್ಸ್ ರಕ್ಷಣಾ ವ್ಯವಹಾರದ ಕುರಿತಾದ ಹಾನಿಕಾರಕ ಮಾಹಿತಿಯನ್ನು ಸಿಂಗ್ ಹೊಂದಿದ್ದರು ಎಂಬ ಗಾಳಿಸುದ್ದಿಯು ಹರಡಿತ್ತು.
ಆದರೆ ಕೆಲವೇ ದಿನಗಳಲ್ಲಿ ಸಿಂಗ್‌ರವರನ್ನು ಸಂಪುಟದಿಂದ ತೆಗೆದುಹಾಕಲಾಯಿತು; ಕಾಂಗ್ರೆಸ್ ಪಕ್ಷ ಮತ್ತು ಲೋಕಸಭೆಯಲ್ಲಿನ ತಮ್ಮ ಸದಸ್ಯತ್ವಗಳಿಗೆ ಆಮೇಲೆ ಅವರು ರಾಜೀನಾಮೆ ನೀಡಿದರು. ಅರುಣ್ ನೆಹರೂ ಮತ್ತು ಅರಿಫ್ ಮೊಹಮ್ಮದ್ ಖಾನ್‌ರವರ ಜೊತೆಗೆ ಸೇರಿಕೊಂಡು ಅವರು ಜನಮೋರ್ಚಾವನ್ನು ರೂಪಿಸಿದರು ಹಾಗೂ ಅಲಹಾಬಾದ್ ಕ್ಷೇತ್ರದಿಂದ ಲೋಕಸಭೆಯನ್ನು ಮರು-ಪ್ರವೇಶಿಸಿದರು.
ರಾಜೀವ್ ಗಾಂಧಿ ಸರ್ಕಾರಕ್ಕೆ ವಿರುದ್ಧವಾಗಿ ನಿಂತಿದ್ದ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ದೃಷ್ಟಿಯಿಂದ, ಜನಮೋರ್ಚಾ, ಜನತಾಪಕ್ಷ, ಲೋಕದಳ ಮತ್ತು ಕಾಂಗ್ರೆಸ್ (S) ಪಕ್ಷಗಳನ್ನು ವಿಲೀನಗೊಳಿಸಿ, 1988ರ ಅಕ್ಟೋಬರ್ 11ರಂದು ಜನತಾದಳವನ್ನು ರೂಪಿಸಲಾಯಿತು. ಕೆಲವೇ ದಿನಗಳಲ್ಲಿ DMK, TDP, ಮತ್ತು AGPಗಳನ್ನು ಒಳಗೊಂಡಂತೆ ಜನತಾದಳದ ಸುತ್ತ ಅನೇಕ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿಸಲ್ಪಟ್ಟವು ಹಾಗೂ ಈ ರೀತಿಯಲ್ಲಿ ರಾಷ್ಟ್ರೀಯರಂಗವು ರೂಪುಗೊಂಡಿತು. ಎರಡು ಕಮ್ಯುನಿಸ್ಟ್ ಪಕ್ಷಗಳಾದ ಭಾರತದ ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್‌ವಾದಿ (CPI-M) ಹಾಗೂ ಭಾರತದ ಕಮ್ಯುನಿಸ್ಟ್ ಪಕ್ಷ (CPI), ಮತ್ತು ಭಾರತೀಯ ಜನತಾಪಕ್ಷ (BJP) ಇವುಗಳೊಂದಿಗೆ ಕೈಜೋಡಿಸಿದ ನಂತರ, 1989ರಲ್ಲಿ ನಡೆದ ಚುನಾವಣಾ ಕಣಕ್ಕೆ ಐದು-ಪಕ್ಷಗಳ ರಾಷ್ಟ್ರೀಯರಂಗವು ಧುಮುಕಿತು.
ಲೋಕಸಭೆಯಲ್ಲಿನ 525 ಸ್ಥಾನಗಳಿಗಾಗಿ ಎರಡು ಹಂತಗಳಲ್ಲಿ ಚುನಾವಣೆಗಳನ್ನು ಆಯೋಜಿಸಲಾಯಿತು: 1989ರ ನವೆಂಬರ್ 22 ಮತ್ತು ನವೆಂಬರ್ 26ರಂದು ಚುನಾವಣೆಗಳು ನಡೆದವು. ಲೋಕಸಭೆಯಲ್ಲಿ ಒಂದು ಸರಳ ಬಹುಮತವನ್ನು ಗಳಿಸುವಲ್ಲಿ ರಾಷ್ಟ್ರೀಯರಂಗವು ಯಶಸ್ವಿಯಾಯಿತು ಹಾಗೂ ಎಡರಂಗ ಮತ್ತು BJPಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ರಾಷ್ಟ್ರೀಯರಂಗದ ಅತಿದೊಡ್ಡ ಘಟಕವಾಗಿದ್ದ ಜನತಾದಳವು 143 ಸ್ಥಾನಗಳನ್ನು ಗೆದ್ದರೆ, CPI-M ಮತ್ತು CPIಗಳು ಕ್ರಮವಾಗಿ 33 ಮತ್ತು 12 ಸ್ಥಾನಗಳನ್ನು ಗಳಿಸಿದವು. ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರ ಸಣ್ಣದಾದ ಪಕ್ಷಗಳಿಗೆ ಸೇರಿದವರು 59 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಆದಾಗ್ಯೂ, 197 MPಗಳನ್ನು ಹೊಂದುವುದರೊಂದಿಗೆ ಕಾಂಗ್ರೆಸ್ ಪಕ್ಷವು ಆಗಲೂ ಸಹ ಲೋಕಸಭೆಯಲ್ಲಿನ ಏಕೈಕ ಅತಿದೊಡ್ಡ ಪಕ್ಷವೆನಿಸಿಕೊಂಡಿತ್ತು. BJPಯು ಈ ಚುನಾವಣೆಗಳಲ್ಲಿ ಅತಿದೊಡ್ಡ ಪ್ರಯೋಜನ ಪಡೆದ ಪಕ್ಷ ಎನಿಸಿಕೊಂಡಿತು. ಏಕೆಂದರೆ, 1984ರ ಚುನಾವಣೆಗಳಲ್ಲಿ ಕೇವಲ ಎರಡು ಸ್ಥಾನವನ್ನಷ್ಟೇ ಗಳಿಸಿದ್ದ BJPಯು ತನ್ನ ಒಟ್ಟು ಗೆಲ್ಲಂಕವನ್ನು 85 MPಗಳಿಗೆ ಹೆಚ್ಚಿಸಿಕೊಂಡಿತ್ತು. ಸಿಂಗ್ ಭಾರತದ 10ನೇ ಪ್ರಧಾನಮಂತ್ರಿಯಾದರೆ, ದೇವಿಲಾಲ್ ಉಪ-ಪ್ರಧಾನಮಂತ್ರಿಯಾದರು. 1989ರ ಡಿಸೆಂಬರ್ 2ರಿಂದ 1990ರ ನವೆಂಬರ್ 10ರವರೆಗೆ ಸಿಂಗ್ ಅಧಿಕಾರದಲ್ಲಿದ್ದರು. ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಕುರಿತಾಗಿ BJP ನಾಯಕ L.K. ಅಡ್ವಾನಿಯವರು ರಥಯಾತ್ರೆಯನ್ನು ಆರಂಭಿಸಿ, ಬಿಹಾರದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಲಾಲು ಯಾದವ್‌ರಿಂದ ಬಂಧಿಸಲ್ಪಟ್ಟ ನಂತರ, VP ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು BJP ಪಕ್ಷವು ಹಿಂತೆಗೆದುಕೊಂಡಿತು. ವಿಶ್ವಾಸಮತ ಯಾಚನೆಯಲ್ಲಿ ಸೋಲನುಭವಿಸಿದ ನಂತರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
64 MPಗಳೊಂದಿಗೆ ಚಂದ್ರಶೇಖರ್ ಜನತಾದಳದಿಂದ ಬೇರ್ಪಟ್ಟರು ಮತ್ತು ಸಮಾಜವಾದಿ ಜನತಾಪಕ್ಷವನ್ನು ರೂಪಿಸಿದರು. ಅವರಿಗೆ ಕಾಂಗ್ರೆಸ್‌ನಿಂದ ಬಾಹ್ಯ ಬೆಂಬಲ ಸಿಕ್ಕಿತು ಮತ್ತು ಅವರು ಭಾರತದ 11ನೇ ಪ್ರಧಾನಮಂತ್ರಿಯಾದರು. ಅವರ ಸರ್ಕಾರವು ರಾಜೀವ್ ಗಾಂಧಿಯವರ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಆಪಾದಿಸಿದ ನಂತರ, 1991ರ ಮಾರ್ಚ್ 6ರಂದು ಅವರು ಅಂತಿಮವಾಗಿ ರಾಜೀನಾಮೆ ನೀಡಿದರು.
10ನೇ ಲೋಕಸಭೆ (1991)
[ಬದಲಾಯಿಸಿ]ಹಿಂದಿನ ಲೋಕಸಭೆಯು ಸರ್ಕಾರ ರಚನೆಯ ನಂತರ ಕೇವಲ 16 ತಿಂಗಳುಗಳಲ್ಲಿ ವಿಸರ್ಜಿಸಲ್ಪಟ್ಟಿತ್ತಾದ್ದರಿಂದ, 10ನೇ ಲೋಕಸಭಾ ಚುನಾವಣೆಗಳು ಒಂದು ಮಧ್ಯಾವಧಿ ಚುನಾವಣೆ ಎನಿಸಿಕೊಂಡಿದ್ದವು. ಒಂದು ಧ್ರುವೀಕರಣಗೊಂಡ ಪರಿಸರದಲ್ಲಿ ಈ ಚುನಾವಣೆಗಳು ನಡೆಸಲ್ಪಟ್ಟವು. ಮಂಡಲ್ ಆಯೋಗದ ಉಪ-ಪರಿಣಾಮಗಳು ಮತ್ತು ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಂಥ, ಚುನಾವಣೆಯಲ್ಲಿ ಪ್ರಸ್ತಾವಿಸಲ್ಪಡಬಹುದಾದ ಎರಡು ಅತ್ಯಂತ ಪ್ರಮುಖ ವಿವಾದಗಳ ನಂತರ ಈ ಚುನಾವಣೆಗಳು ನಡೆದಿದ್ದರಿಂದ ಇವು 'ಮಂಡಲ್-ಮಂದಿರ್' ಚುನಾವಣೆಗಳು ಎಂದೂ ಸಹ ಉಲ್ಲೇಖಿಸಲ್ಪಟ್ಟವು.
VP ಸಿಂಗ್ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸಲ್ಪಟ್ಟ ಮಂಡಲ್ ಆಯೋಗದ ವರದಿಯು ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳಿಗೆ (OBCಗಳು) 27 ಪ್ರತಿಶತದಷ್ಟು ಮೀಸಲಾತಿಯನ್ನು ನೀಡಿ, ಮುಂದುವರಿದ ಜಾತಿಗಳಿಂದ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದ ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಕಾರಣವಾದರೆ, ಭಾರತೀಯ ಜನತಾಪಕ್ಷವು ತನ್ನ ಪ್ರಮುಖ ಚುನಾವಣಾ ಉದ್ದೇಶವಾಗಿ ಬಳಸಿಕೊಳ್ಳುತ್ತಿದ್ದ, ಅಯೋಧ್ಯಾದಲ್ಲಿನ ವಿವಾದಿತ ಬಾಬ್ರಿ ಮಸೀದಿ ರಚನೆಯ ಕುರಿತಾದ ಗಲಭೆಯನ್ನು 'ಮಂದಿರ' ಎಂಬ ಶಬ್ದವು ಪ್ರತಿನಿಧಿಸಿತು.
ದೇಶದ ಅನೇಕ ಭಾಗಗಳಲ್ಲಿ ದೊಂಬಿಗಳು ನಡೆಯುವುದಕ್ಕೆ ಮಂದಿರ ವಿವಾದವು ಕಾರಣವಾಯಿತು ಹಾಗೂ ಜಾತಿ ಮತ್ತು ಧಾರ್ಮಿಕ ಧೋರಣೆಗಳ ಮೇಲೆ ಮತದಾರ ಸಮುದಾಯವು ಧ್ರುವೀಕರಣಗೊಂಡಿತು. ರಾಷ್ಟ್ರೀಯರಂಗವು ಅವ್ಯವಸ್ಥೆಯ ಹಾದಿಯನ್ನು ತುಳಿಯುವುದರೊಂದಿಗೆ, ಕಾಂಗ್ರೆಸ್ ತನ್ನ ಪುನರಾಗಮನದ ಜಾಡಿನಲ್ಲಿರುವುದು ಕಂಡುಬಂತು.
1991ರ ಮೇ 20, ಜೂನ್ 12 ಮತ್ತು ಜೂನ್ 15ರಂದು ಮೂರು ಹಂತಗಳಲ್ಲಿ ಚುನಾವಣೆಗಳು ನಡೆದವು. ಇದು ಕಾಂಗ್ರೆಸ್, BJP ಮತ್ತು ರಾಷ್ಟ್ರೀಯರಂಗ-ಜನತಾದಳ (S)-ಎಡರಂಗ ಒಕ್ಕೂಟದ ನಡುವಿನ ಒಂದು ತ್ರಿಕೋನೀಯ ಹೋರಾಟವಾಗಿತ್ತು.
ಮೇ 20ರಂದು ನಡೆದ ಮೊದಲ ಸುತ್ತಿನ ಮತದಾನದ ಒಂದು ದಿನದ ನಂತರ, ಹಿಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು ಶ್ರೀಪೆರಂಬುದೂರ್ ಎಂಬಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಂ ಗುಂಪಿಗೆ ಸೇರಿದವರಿಂದ ಹತರಾದರು. ಜೂನ್-ಮಧ್ಯಭಾಗದವರೆಗೆ ಉಳಿದ ಚುನಾವಣಾ ದಿನಗಳು ಮುಂದೂಡಲ್ಪಟ್ಟವು. ಜೂನ್ 12 ಮತ್ತು ಜೂನ್ 15ರಂದು ಅಂತಿಮವಾಗಿ ಮತದಾನವು ನಡೆಯಿತು. ಸಂಸತ್ತಿನ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆಯಿತು; ಕೇವಲ 53 ಪ್ರತಿಶತದಷ್ಟು ಮತದಾರರು ತಮ್ಮ ವಿಶೇಷಾಧಿಕಾರವನ್ನು ಚಲಾಯಿಸಿದರು.
ಕಾಂಗ್ರೆಸ್ ಪಕ್ಷವು 232 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 120 ಸ್ಥಾನಗಳನ್ನು ಪಡೆದ BJP ಎರಡನೇ ಸ್ಥಾನದಲ್ಲಿ ನಿಂತಿತು. ಹೀಗಾಗಿ ಸದರಿ ಫಲಿತಾಂಶಗಳು ಒಂದು ತೂಗುಯ್ಯಾಲೆಯ ಸಂಸತ್ತಿಗೆ (ಅನಿಶ್ಚಿತ ಸಂಸತ್ತಿಗೆ) ಕಾರಣವಾದವು. ಕೇವಲ 59 ಸ್ಥಾನಗಳನ್ನು ಗಳಿಸಿದ ಜನತಾದಳ ದೂರದ ಒಂದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜೂನ್ 21ರಂದು, ಕಾಂಗ್ರೆಸ್‌ನ P.V. ನರಸಿಂಹ ರಾವ್ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವರಾಗಿರದೆ ಪ್ರಧಾನಮಂತ್ರಿಯಾದ ಕಾಂಗ್ರೆಸ್ಸಿಗರಲ್ಲಿ ರಾವ್ ಕೇವಲ ಎರಡನೆಯವರಾಗಿದ್ದರು. ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವರಾಗಿರದೆ ಪ್ರಧಾನಮಂತ್ರಿಯಾದ ಕಾಂಗ್ರೆಸ್ಸಿಗರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಿಗರಾಗಿದ್ದರು.
11ನೇ ಲೋಕಸಭೆ (1996)
[ಬದಲಾಯಿಸಿ]11ನೇ ಲೋಕಸಭಾ ಚುನಾವಣೆಗಳು ಒಂದು ತೂಗುಯ್ಯಾಲೆಯ ಸಂಸತ್ತನ್ನು ಉಂಟುಮಾಡಿದವು ಹಾಗೂ ಎರಡು ವರ್ಷಗಳ ಅವಧಿಯ ರಾಜಕೀಯ ಅಸ್ಥಿರತೆಗೂ ಇವು ಕಾರಣವಾದವು. ಈ ಅಸ್ಥಿರ-ಅವಧಿಯಲ್ಲೇ ದೇಶವು ಮೂವರು ಪ್ರಧಾನಮಂತ್ರಿಗಳನ್ನು ಕಾಣಬೇಕಾಗಿ ಬಂತು.
ಪ್ರಧಾನಮಂತ್ರಿ P.V. ನರಸಿಂಹ ರಾವ್‌ರವರ ಕಾಂಗ್ರೆಸ್ (I) ಸರ್ಕಾರವು
ಸುಧಾರಣೆಗಳ ಒಂದು ಸರಣಿಯನ್ನೇ ಅನುಷ್ಠಾನಗೊಳಿಸಿತ್ತು; ಇದರ ದೆಸೆಯಿಂದ ದೇಶದ ಆರ್ಥಿಕತೆಯು ವಿದೇಶಿ ಹೂಡಿಕೆದಾರರಿಗೆ ಮುಕ್ತವಾಗಿ ತೆರೆದುಕೊಳ್ಳುವಂತಾಯಿತು. ದೇಶದ ಆರ್ಥಿಕತೆಯನ್ನು ಉಳಿಸಿದ ಮತ್ತು ದೇಶದ ವಿದೇಶಿ ಕಾರ್ಯನೀತಿಯನ್ನು ಚೈತನ್ಯಗೊಳಿಸಿದ ಕೀರ್ತಿಯನ್ನು ನರಸಿಂಹ ರಾವ್‌ರವರಿಗೆ ಅವರ ಬೆಂಬಲಿಗರು ನೀಡಿದರಾದರೂ, ಅವರ ಸರ್ಕಾರವು ದುರ್ಬಲವಾಗಿತ್ತು ಹಾಗೂ ಏಪ್ರಿಲ್–ಮೇ ತಿಂಗಳಲ್ಲಿನ ಚುನಾವಣೆಗಳಿಗೆ ಮುಂಚಿತವಾಗಿ ಅದು ಅನಿಶ್ಚಿತ ಸ್ಥಿತಿಯಲ್ಲಿತ್ತು.
1995ರ ಮೇ ತಿಂಗಳಿನಲ್ಲಿ, ಹಿರಿಯ ನಾಯಕರಾದ ಅರ್ಜುನ್ ಸಿಂಗ್ ಮತ್ತು ನಾರಾಯಣ್ ದತ್ ತಿವಾರಿಯವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ, ತಮ್ಮದೇ ಆದ ಪಕ್ಷವನ್ನು ರಚಿಸಿದರು. ಹರ್ಷದ್ ಮೆಹ್ತಾ ಹಗರಣ, ರಾಜಕಾರಣದ ಅಪರಾಧೀಕರಣದ ಕುರಿತಾದ ವೋರಾ ವರದಿ, ಜೈನ್ ಹವಾಲಾ ಹಗರಣ ಮತ್ತು 'ತಂದೂರ್ ಕೊಲೆ' ಪ್ರಕರಣ ಇವೇ ಮೊದಲಾದವುಗಳು ರಾವ್ ಸರ್ಕಾರದ ವಿಶ್ವಾಸಾರ್ಹತೆಗೆ ಹಾನಿಯುಂಟುಮಾಡಿದ್ದವು.
BJP ಮತ್ತು ಅದರ ಮಿತ್ರಪಕ್ಷಗಳಷ್ಟೇ ಅಲ್ಲದೇ, ಎಡರಂಗ ಮತ್ತು ಜನತಾದಳವನ್ನು ಒಳಗೊಂಡಿದ್ದ ಒಂದು ಒಕ್ಕೂಟವಾದ ಸಂಯುಕ್ತರಂಗ ಇವುಗಳು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮುಖ್ಯ ಎದುರಾಳಿಗಳಾಗಿದ್ದವು.
ಮೂರು-ವಾರಗಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ತಾವು ಅನುಷ್ಠಾನಗೊಳಿಸಿದ್ದ ಆರ್ಥಿಕ ಸುಧಾರಣೆಗಳನ್ನು ಬೆನ್ನಿಗಿಟ್ಟುಕೊಂಡು ರಾವ್ ಮತದಾರರನ್ನು ಪುಸಲಾಯಿಸಿದರೆ, ಮತದಾರರ ಮನವೊಲಿಸಲು BJPಯು ಹಿಂದುತ್ವ ಮತ್ತು ರಾಷ್ಟ್ರೀಯ ಭದ್ರತೆಯ ಮಂತ್ರಗಳನ್ನು ಬಿಗಿಯಾಗಿ ಹಿಡಿದುಕೊಂಡಿತು.
ಈ ಎರಡೂ ಪಕ್ಷಗಳ ಮನವೊಲಿಕೆಗಳಿಂದ ಮತದಾರರು ಪ್ರಭಾವಿತರಾದಂತೆ ಕಾಣಲಿಲ್ಲ. BJPಯು 161 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಪಕ್ಷವು 140 ಸ್ಥಾನಗಳನ್ನು ಗೆದ್ದುಕೊಂಡಿತು; ಸಂಸತ್ತಿನಲ್ಲಿನ ಅರೆಮಟ್ಟದ-ಗುರುತು 271 ಸ್ಥಾನಗಳಾಗಿದ್ದವು.
BJP ನಾಯಕ A.B. ವಾಜಪೇಯಿಯವರು ಸಂಸತ್ತಿನಲ್ಲಿನ ಏಕೈಕ ಅತಿದೊಡ್ಡ ಪಕ್ಷದ ಮುಖ್ಯಸ್ಥರಾಗಿದ್ದರಿಂದ, ಸರ್ಕಾರವನ್ನು ರಚಿಸಲು ಅವರನ್ನು ರಾಷ್ಟ್ರಪತಿಯವರು ಆಹ್ವಾನಿಸಿದರು.
ಮೇ 16ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಾಜಪೇಯಿಯವರು, ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳಿಂದ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ತಮ್ಮ ಪ್ರಯತ್ನದಲ್ಲಿ ಅವರು ವಿಫಲಗೊಂಡರು ಮತ್ತು 13 ದಿನಗಳ ನಂತರ ರಾಜೀನಾಮೆ ನೀಡಿದರು.
ಜನತಾದಳದ ನಾಯಕರಾದ ದೇವೇಗೌಡರು ಜೂನ್ 1ರಂದು ಸಂಯುಕ್ತರಂಗದ ಒಕ್ಕೂಟ ಸರ್ಕಾರವೊಂದನ್ನು ರಚಿಸಿದರು. ಅವರ ಸರ್ಕಾರವು 18 ತಿಂಗಳುಗಳವರೆಗೆ ಅಧಿಕಾರವನ್ನು ನಡೆಸಿತು.
ಸಂಯುಕ್ತರಂಗದ ಹೊಸ ಸರ್ಕಾರವೊಂದಕ್ಕೆ ಹೊರಗಿನಿಂದ ಬೆಂಬಲಿಸಲು ಕಾಂಗ್ರೆಸ್ ಸಮ್ಮತಿಸಿದ ನಂತರ, ಗೌಡರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ I.K. ಗುಜ್ರಾಲ್ 1997ರ ಏಪ್ರಿಲ್‌ನಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಗುಜ್ರಾಲ್‌ರ ಅಧಿಕಾರ ಸ್ವೀಕಾರವು ಒಂದು ಹಂಗಾಮಿ ವ್ಯವಸ್ಥೆಯಾಗಿತ್ತು. 1998ರಲ್ಲಿ ದೇಶವು ಮತ್ತೊಮ್ಮೆ ಚುನಾವಣೆಗಳನ್ನು ಕಾಣಬೇಕಾಗಿ ಬಂತು.
12ನೇ ಲೋಕಸಭೆ (1998)
[ಬದಲಾಯಿಸಿ]11ನೇ ಲೋಕಸಭೆಯು ಕೇವಲ ಒಂದೂವರೆ ವರ್ಷಗಳಷ್ಟು ಅವಧಿಯವರೆಗೆ ಸಾಗಿದ ಒಂದು ಅಲ್ಪಕಾಲಿಕ ಸಂಸತ್ತು ಎನಿಸಿಕೊಂಡಿತು. 1996ರ ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಿನಿಂದ, 18 ತಿಂಗಳುಗಳಲ್ಲಿ ಸಂಯುಕ್ತರಂಗದ ವತಿಯಿಂದ ರಚಿಸಲ್ಪಟ್ಟ ಎರಡನೇ ಸರ್ಕಾರವಾದ ಇಂದರ್ ಕುಮಾರ್ ಗುಜ್ರಾಲ್‌ರವರ ಅಲ್ಪಮತದ ಸರ್ಕಾರವು, 1997ರ ನವೆಂಬರ್ 28ರಂದು ಕುಸಿಯಿತು; 1991ರಲ್ಲಿ ನಡೆದ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾಗಿರುವಿಕೆಯನ್ನು ಸುತ್ತುವರೆದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಸೀತಾರಾಂ ಕೇಸರಿ ನೇತೃತ್ವದ ಕಾಂಗ್ರೆಸ್ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಈ ಸನ್ನಿವೇಶ ಎದುರಾಯಿತು.
ಹೊಸ ಚುನಾವಣೆಗಳು ಪ್ರಕಟಿಸಲ್ಪಟ್ಟವು ಮತ್ತು 1998ರ ಮಾರ್ಚ್ 10ರಂದು 12ನೇ ಲೋಕಸಭೆಯು ರೂಪುಗೊಂಡಿತು; ನಂತರದ ಒಂಬತ್ತು ದಿನಗಳಲ್ಲಿ BJPಯ ಅನುಭವಿ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಒಕ್ಕೂಟವೊಂದು ಅಧಿಕಾರದ ಪ್ರಮಾಣವಚನ ಸ್ವೀಕರಿಸಿತು. 12ನೇ ಲೋಕಸಭೆಯು 413 ದಿನಗಳ ಒಂದು ಜೀವನಾವಧಿಯನ್ನು ಹೊಂದಿತ್ತು ಮತ್ತು ಇದು ಇದುವರೆಗಿನ ಅತಿ ಮೊಟಕಾದ ಅವಧಿಯಾಗಿದೆ.
ಏಪ್ರಿಲ್ 17ರಂದು ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 13-ತಿಂಗಳಷ್ಟು-ವಯಸ್ಸಿನ ಭಾರತೀಯ ಜನತಾಪಕ್ಷ-ನೇತೃತ್ವದ ಸರ್ಕಾರವು ಕೇವಲ ಒಂದು ಮತದಿಂದ ಪದಚ್ಯುತಗೊಂಡ ನಂತರ, ಒಂದು ಕಾರ್ಯಸಾಧ್ಯ ಪರ್ಯಾಯದ ಅನುಪಸ್ಥಿತಿಯಲ್ಲಿ ಲೋಕಸಭೆಯು ವಿಸರ್ಜನೆಗೊಂಡಿತು. ಲೋಕಸಭೆಯು ತನ್ನ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಮೊದಲೇ ವಿಸರ್ಜಿಸಲ್ಪಟ್ಟ ನಿದರ್ಶನಗಳಲ್ಲಿ ಇದು ಐದನೆಯದಾಗಿತ್ತು.
1997ರ ಡಿಸೆಂಬರ್ 4ರಂದು ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಾದುದನ್ನು ಅನುಸರಿಸಿ ಲೋಕಸಭೆಯ ಎಲ್ಲಾ ಸ್ಥಾನಗಳಿಗಾಗಿ ಚುನಾವಣೆಗಳು ನಡೆಸಲ್ಪಟ್ಟವು. ಇದಕ್ಕೂ ಮುಂಚೆ 1996ರ ಏಪ್ರಿಲ್/ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು.
ಚುನಾವಣಾ-ನಂತರದ ಒಕ್ಕೂಟದ ಕಾರ್ಯತಂತ್ರವು, BJP-ನೇತೃತ್ವದ ಒಕ್ಕೂಟಕ್ಕೆ 265 ಸ್ಥಾನಗಳಷ್ಟಿದ್ದ ಒಂದು ಕಾರ್ಯಾನುಕೂಲದ ಬಹುಮತವನ್ನು ನೀಡಿತು. ಈ ಸನ್ನಿವೇಶದಲ್ಲಿ, ಮುಂದಿನ ಸರ್ಕಾರವನ್ನು ರಚಿಸಲು ಮಾರ್ಚ್ 15ರಂದು ರಾಷ್ಟ್ರಪತಿ ನಾರಾಯಣನ್‌ರವರು ವಾಜಪೇಯಿಯವರನ್ನು ಆಹ್ವಾನಿಸಿದರು. ಮಾರ್ಚ್ 19ರಂದು, ವಾಜಪೇಯಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು.
13ನೇ ಲೋಕಸಭೆ (1999)
[ಬದಲಾಯಿಸಿ]1999ರ ಏಪ್ರಿಲ್ 17ರಂದು, ಲೋಕಸಭೆಯಲ್ಲಿನ ವಿಶ್ವಾಸಮತ ಯಾಚನೆಯಲ್ಲಿ ವಾಜಪೇಯಿ ಸೋತರು ಮತ್ತು ತರುವಾಯದಲ್ಲಿ ತಮ್ಮ ಒಕ್ಕೂಟ ಸರ್ಕಾರದ ರಾಜೀನಾಮೆಯನ್ನು ಸಲ್ಲಿಸಿದರು. 24-ಪಕ್ಷಗಳನ್ನು ಒಳಗೊಂಡಿದ್ದ ತಮ್ಮ ರಾಷ್ಟ್ರೀಯ ಪ್ರಜಾಪ್ರಭುತ್ವವಾದಿ ಒಕ್ಕೂಟದಲ್ಲಿ (ನ್ಯಾಷನಲ್ ಡೆಮಾಕ್ರಟಿಕ್ ಅಲಯೆನ್ಸ್-NDA) ಒಟ್ಟಾಗಿರುವಿಕೆಯ ಕೊರತೆಯೊಂದು ಕಂಡುಬಂದಿದ್ದೇ ತಮ್ಮ ಸರ್ಕಾರ ಸೋಲಿಗೆ ಕಾರಣ ಎಂದು ಅವರು ಉಲ್ಲೇಖಿಸಿದರು. BJP ನೇತೃತ್ವದ ಒಕ್ಕೂಟದ ಪಾಲುದಾರರಲ್ಲಿ ಒಂದಾದ ಜಯಲಲಿತಾ ನೇತೃತ್ವದ AIADMK ಪಕ್ಷವು ಬೆಂಬಲ ಹಿಂತೆಗೆದುಕೊಂಡ ಕಾರಣದಿಂದ, BJPಗೆ ಏಕೈಕ ಮತದ ಕೊರತೆ ಕಂಡುಬಂತು.
ಒಂದು ವೇಳೆ ತಮ್ಮ ನಿಶ್ಚಿತ ಬೇಡಿಕೆಗಳು ಈಡೇರದಿದ್ದ ಪಕ್ಷದಲ್ಲಿ, ಪ್ರೀತಿಪಾತ್ರವಾಗಿದ್ದ ಹಾಗೂ ಆಡಳಿತ ನಡೆಸುತ್ತಿದ್ದ ಒಕ್ಕೂಟಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಜಯಲಲಿತಾ ಏಕಪ್ರಕಾರವಾಗಿ ಬೆದರಿಕೆ ಹಾಕಿದ್ದರು; ಅದರಲ್ಲೂ ನಿರ್ದಿಷ್ಟವಾಗಿ, ಮೂರು ವರ್ಷಗಳ ಹಿಂದೆಯೇ ತಮ್ಮ ನಿಯಂತ್ರಣದಿಂದ ಕೈಬಿಟ್ಟು ಹೋಗಿದ್ದ ತಮಿಳುನಾಡು ಸರ್ಕಾರವನ್ನು ತೆಗೆದುಹಾಕಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಭ್ರಷ್ಟಾಚಾರದ ಆರೋಪಗಳ ಒಂದು ಸರಣಿಗೆ ಸಂಬಂಧಿಸಿದ ಸ್ಥಾಯಿ ವಿಚಾರಣೆಯನ್ನು ತಪ್ಪಿಸುವ ಸಲುವಾಗಿ ಜಯಲಲಿತಾ ಈ ರೀತಿಯ ಬೇಡಿಕೆಗಳು ಮುಂದಿಡುತ್ತಿದ್ದರು ಎಂಬುದಾಗಿ BJP ಆಪಾದಿಸಿತು; ಪಕ್ಷಗಳ ನಡುವೆ ಯಾವುದೇ ತೆರನಾದ ಒಪ್ಪಂದವು ಮೂಡಲಿಲ್ಲವಾದ್ದರಿಂದ, ಅದು ಸರ್ಕಾರದ ಪತನಕ್ಕೆ ಕಾರಣವಾಯಿತು.
ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು ಮತ್ತು ವಾಮಪಂಥದ ಗುಂಪುಗಳ ನೆರವಿನೊಂದಿಗೆ ಒಂದು ಬಹುಮತದ ಸರ್ಕಾರವನ್ನು ರಚಿಸಲು ಸಾಕಾಗುವಷ್ಟು ಬೆಂಬಲವನ್ನು ಒಟ್ಟುಗೂಡಿಸುವಲ್ಲಿ ಅಸಮರ್ಥವಾಗಿತ್ತು. ಏಪ್ರಿಲ್ 26ರಂದು ಭಾರತದ ಅಂದಿನ ರಾಷ್ಟ್ರಪತಿಯಾಗಿದ್ದ ದಿವಂಗತ K.R. ನಾರಾಯಣನ್‌ರವರು ಲೋಕಸಭೆಯನ್ನು ವಿಸರ್ಜಿಸಿ, ಅವಧಿಪೂರ್ವ ಚುನಾವಣೆಗಳಿಗಾಗಿ ಕರೆನೀಡಿದರು. ಮತದಾನವು ನಡೆಯುವವರೆಗೂ ಒಂದು ಮಧ್ಯಂತರ ಆಡಳಿತ ವ್ಯವಸ್ಥೆಯಾಗಿ BJPಯು ಆಡಳಿತವನ್ನು ಮುಂದುವರಿಸಿತು; ಮತದಾನದ ದಿನಾಂಕಗಳನ್ನು ಚುನಾವಣಾ ಆಯೋಗವು ಮೇ 4ರಂದು ಪ್ರಕಟಿಸಿತು.
ಸಾರ್ವತ್ರಿಕ ಚುನಾವಣೆಗಳು ಹಿಂದೆ 1996 ಮತ್ತು 1998ರಲ್ಲಿ ನಡೆಸಲ್ಪಟ್ಟಿದ್ದರಿಂದಾಗಿ, 1999ರ ಚುನಾವಣೆಗಳು 40 ತಿಂಗಳುಗಳ ಅವಧಿಯಲ್ಲಿ ನಡೆದ ಮೂರನೇ ಚುನಾವಣೆಗಳು ಎನಿಸಿಕೊಂಡವು. ಚುನಾವಣಾ ಅಕ್ರಮ ಮತ್ತು ಹಿಂಸಾಚಾರವನ್ನು ನಿರೋಧಿಸುವ ಸಲುವಾಗಿ ದೇಶದ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉದ್ದಗಲಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸುವುದಕ್ಕಾಗಿ ಅವಕಾಶ ನೀಡಲು, ಚುನಾವಣಾ ದಿನಾಂಕಗಳನ್ನು ಐದು ವಾರಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು. ಲೋಕಸಭೆಯ 543 ಸ್ಥಾನಗಳಿಗಾಗಿ ಒಟ್ಟಾರೆಯಾಗಿ 45 ಪಕ್ಷಗಳು (ಆರು ರಾಷ್ಟ್ರೀಯ ಪಕ್ಷಗಳು, ಉಳಿದವು ಪ್ರಾದೇಶಿಕ ಪಕ್ಷಗಳು) ಸ್ಪರ್ಧಿಸಿದವು.
ಪಾಕಿಸ್ತಾನದೊಂದಿಗಿನ ಕಾಶ್ಮೀರ ಗಡಿ ಬಿಕ್ಕಟ್ಟಿನ ನಿಭಾಯಿಸುವಿಕೆಯನ್ನೂ ಒಳಗೊಂಡಂತೆ, ಆರ್ಥಿಕ ಮತ್ತು ವಿದೇಶಿ ಕಾರ್ಯನೀತಿಯ ವಿವಾದಾಂಶಗಳ ಕುರಿತಾಗಿ BJP ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯ ಸುದೀರ್ಘ ಪ್ರಚಾರಾಂದೋಲನದ ಸಮಯದಲ್ಲಿ ಸಾಮಾನ್ಯವಾಗಿ ಸಮ್ಮತಿಸಿದವು. ವಾಜಪೇಯಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಡುವಿನ ಒಂದು ವೈಯಕ್ತಿಕ ಹೋಲಿಕೆಗಷ್ಟೇ ಅವರ ಪೈಪೋಟಿಯ ಸಾರಾಂಶವು ಇಳಿಯಿತು.
ಹೋಲಿಕೆಯ ದೃಷ್ಟಿಯಿಂದ ಓರ್ವ ಹೊಸಬರಾಗಿದ್ದು 1998ರಲ್ಲಿ ಪಕ್ಷದ ಅಧ್ಯಕ್ಷಗಿರಿಗೆ ಚುನಾಯಿಸಲ್ಪಟ್ಟಿದ್ದ ಸೋನಿಯಾ ಗಾಂಧಿಯವರ ಪ್ರವೇಶವನ್ನು ಮಹಾರಾಷ್ಟ್ರದ ಆಗಿನ ಕಾಂಗ್ರೆಸ್ ನಾಯಕ ಶರದ್ ಪವಾರ್ ಪ್ರಶ್ನಿಸಿ ಸವಾಲೆಸೆದಿದ್ದರು; ಸೋನಿಯಾ ಇಟಲಿ-ಸಂಜಾತರಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ನೊಳಗಡೆ ಒಂದು ಬಿಕ್ಕಟ್ಟು ಸೃಷ್ಟಿಯಾಗಲು ಇದು ಕಾರಣವಾಯಿತು ಮತ್ತು BJPಯು ಇದನ್ನು ಒಂದು ಚುನಾವಣಾ ಚರ್ಚಾವಿಷಯವಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡಿತು.
ಸಾಮಾನ್ಯವಾಗಿ ಸಕಾರಾತ್ಮಕ ದೃಷ್ಟಿಕೋನವನ್ನೇ ಹೊಂದಿರುತ್ತಿದ್ದ ವಾಜಪೇಯಿಯವರು ಕಾರ್ಗಿಲ್ ಯುದ್ಧವನ್ನು ನಿಭಾಯಿಸಿದ್ದು BJPಯ ಪರವಾಗಿ ಚಾಲ್ತಿಯಲ್ಲಿದ್ದ ಮತ್ತೊಂದು ಚರ್ಚಾವಿಷಯವಾಗಿತ್ತು; ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಮುಂಚಿತವಾಗಿ ಕಾರ್ಗಿಲ್ ಯುದ್ಧ ಮುಗಿದಿತ್ತು ಹಾಗೂ ಕಾಶ್ಮೀರದಲ್ಲಿನ ಭಾರತದ ಸ್ಥಾನವನ್ನು ಅದು ದೃಢೀಕರಿಸಿತ್ತು ಹಾಗೂ ಬಲಗೊಳಿಸಿತ್ತು. ಅಷ್ಟೇ ಅಲ್ಲ, ಹಿಂದಿನ ಎರಡು ವರ್ಷಗಳಲ್ಲಿ ಆರ್ಥಿಕ ಉದಾರೀಕರಣ ಮತ್ತು ಹಣಕಾಸಿನ ಸುಧಾರಣೆಗಳ ಆಧಾರದ ಮೇಲೆ ಭಾರತವು ಒಂದು ಬಲವಾದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿತ್ತು. ಹಣದುಬ್ಬರವು ಕಡಿಮೆ ಪ್ರಮಾಣದಲ್ಲಿದ್ದುದು ಹಾಗೂ ಕೈಗಾರಿಕಾ ವಿಸ್ತರಣೆಯು ಹೆಚ್ಚಿನ ಪ್ರಮಾಣದಲ್ಲಿದ್ದುದೂ ಸಹ ಈ ಅವಧಿಯಲ್ಲೇ ದಾಖಲಿಸಲ್ಪಟ್ಟಿತ್ತು.
BJP ಮತ್ತು ಅದರ ಮಿತ್ರಪಕ್ಷಗಳು ಏಕರೂಪದ ಬೆಳವಣಿಗೆಯನ್ನು ಕಂಡ ಅವಧಿಯೊಂದಕ್ಕೆ 1991, 1996, ಮತ್ತು 1998ರ ಚುನಾವಣೆಗಳು ಸಾಕ್ಷಿಯಾಗಿದ್ದವು. ಹಿಂದಿನ ನಿದರ್ಶನಗಳಲ್ಲಿ ತಮ್ಮ ಒಕ್ಕೂಟದ ಅಂಗವಾಗಿರದಿದ್ದ ಇತರ ಪಕ್ಷಗಳೊಂದಿಗೆ ಬಲವಾದ ಮತ್ತು ವಿಶಾಲವಾದ ನೆಂಟಸ್ತಿಕೆಯನ್ನು ಅಭಿವೃದ್ಧಿಪಡಿಸುವ ರೂಪದಲ್ಲಿದ್ದ ರಾಜಕೀಯ ವಿಸ್ತರಣೆಗಳ ಮೇಲೆ ಈ ಬೆಳವಣಿಗೆಯು ಪ್ರಧಾನವಾಗಿ ಆಧರಿಸಿತ್ತು; ಇಷ್ಟೇ ಅಲ್ಲ, NDAಯು ಸ್ಪರ್ಧಾತ್ಮಕ ಸ್ವರೂಪವನ್ನು ತಳೆದುದನ್ನು ಹಾಗೂ ಒಡಿಶಾ, ಆಂಧ್ರಪ್ರದೇಶ ಮತ್ತು ಅಸ್ಸಾಂನಂಥ ಹಿಂದೆ ಕಾಂಗ್ರೆಸ್‌ನ ಪ್ರಾಬಲ್ಯವಿದ್ದ ಕ್ಷೇತ್ರಗಳಲ್ಲಿ ಅತಿಹೆಚ್ಚಿನ ಮತಗಳಿಸುವ ಸ್ಥಿತಿಯನ್ನು ತಳೆದುದನ್ನು ಕಂಡಿದ್ದ ಪ್ರಾದೇಶಿಕ ವಿಸ್ತರಣೆಯನ್ನೂ ಸಹ ಈ ಚುನಾವಣೆಗಳು ಕಂಡವು. ಈ ಅಂತಿಮ ಅಂಶಗಳು 1999ರ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕವೆಂದು ಸಾಬೀತಾಗಬೇಕಿದ್ದವು.
ಅಕ್ಟೋಬರ್ 6ರಂದು ಪ್ರಾರಂಭವಾದ ಫಲಿತಾಂಶವು NDAಗೆ 298 ಸ್ಥಾನಗಳನ್ನು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ 136 ಸ್ಥಾನಗಳನ್ನು ನೀಡಿತು. ಅಕ್ಟೋಬರ್ 13ರಂದು ವಾಜಪೇಯಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
14ನೇ ಲೋಕಸಭೆ (2004)
[ಬದಲಾಯಿಸಿ]ಅಟಲ್ ಬಿಹಾರಿ ವಾಜಪೇಯಿಯವರನ್ನು ಪ್ರಧಾನಮಂತ್ರಿಯಾಗಿ ಹೊಂದಿದ್ದ BJP-ನೇತೃತ್ವದ NDA ಸರ್ಕಾರವು 2004ರಲ್ಲಿ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿತು ಹಾಗೂ 2004ರ ಏಪ್ರಿಲ್ 20 ಮತ್ತು ಮೇ 10ರ ನಡುವೆ ನಾಲ್ಕು ಹಂತಗಳಲ್ಲಿ ಚುನಾವಣೆಗಳು ನಡೆದವು.
'ಹಿತಾನುಭವ ಅಂಶ' ಹಾಗೂ ತನ್ನ ಚುನಾವಣಾ ಪ್ರಚಾರಾಂದೋಲನಲ್ಲಿ ಬಳಸಿಕೊಳ್ಳಲಾದ 'ಭಾರತ ಪ್ರಕಾಶಿಸುತ್ತಿದೆ' ಎಂಬ ಪದಗುಚ್ಛದ ಮೇಲೆ ಸವಾರಿಮಾಡುವ ಮೂಲಕ NDA ಸ್ಥಾನಿಕತ್ವ-ವಿರೋಧಿ ಶಕ್ತಿಗಳನ್ನು ಬಗ್ಗುಬಡಿದು ನಿಚ್ಚಳ ಬಹುಮತವನ್ನು ಗೆಲ್ಲಲಿದೆ ಎಂಬುದಾಗಿ ಬಹುಪಾಲು ವಿಶ್ಲೇಷಕರು ನಂಬಿದರು. BJP ಆಳ್ವಿಕೆಯ ಸಂದರ್ಭದಲ್ಲಿ ಆರ್ಥಿಕತೆಯು ಸ್ಥಿರ ಬೆಳವಣಿಗೆಯನ್ನು ತೋರಿಸಿತ್ತು ಹಾಗೂ ಸಾರ್ವಜನಿಕ ವಲಯದ ಘಟಕಗಳಲ್ಲಿನ (PSUಗಳು) ಬಂಡವಾಳ ಹಿಂತೆಗೆತವು ಸರಿಯಾದ ಹಾದಿಯಲ್ಲಿತ್ತು. ಭಾರತದ ವಿದೇಶಿ ವಿನಿಮಯದ ಮೀಸಲುಗಳು 100 ಶತಕೋಟಿ $ಗೂ ಹೆಚ್ಚಿನ ಮಟ್ಟದಲ್ಲಿ ನಿಂತಿದ್ದವು (ವಿಶ್ವದಲ್ಲಿನ ಏಳನೇ ಅತಿದೊಡ್ಡದು ಮತ್ತು ಭಾರತಕ್ಕೆ ಸಂಬಂಧಿಸಿದ ಒಂದು ದಾಖಲೆ). ಸೇವಾವಲಯವೂ ಸಹ ಅಗಾಧವಾಗಿ ಉದ್ಯೋಗಗಳನ್ನು ಸೃಷ್ಟಿಸಿತ್ತು.
1990ರ ದಶಕದ ಉಳಿದೆಲ್ಲಾ ಲೋಕಸಭೆ ಚುನಾವಣೆಗಳಿಗೆ ಹೋಲಿಸಿದಾಗ ಈ ಚುನಾವಣೆಗಳಲ್ಲಿ ಮೂರನೇ ರಂಗದ ಯಾವುದೇ ಕಾರ್ಯಸಾಧ್ಯ ಪರ್ಯಾಯವು ಇರಲಿಲ್ಲವಾದ್ದರಿಂದ, ಹೆಸರಾಂತ ವ್ಯಕ್ತಿಗಳ (ವಾಜಪೇಯಿ ಮತ್ತು ಸೋನಿಯಾ ಗಾಂಧಿ) ನಡುವಿನ ಮುಖಾಮುಖಿ ಸೆಣಸಾಟವನ್ನು ಹೆಚ್ಚು ಪ್ರಮಾಣದಲ್ಲಿ ಕಂಡಿತು. ಒಂದೆಡೆಯಿದ್ದ BJP ಮತ್ತು ಅದರ ಮಿತ್ರಪಕ್ಷಗಳು ಹಾಗೂ ಮತ್ತೊಂದೆಡೆಯಿದ್ದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಡುವೆ ಹೋರಾಟವಿತ್ತು. ಆದಾಗ್ಯೂ, ರಾಷ್ಟ್ರೀಯ ರಂಗಸ್ಥಲದಲ್ಲಿ ಪ್ರಾದೇಶಿಕ ಭಿನ್ನಾಭಿಪ್ರಾಯಗಳು ಹೊರಹೊಮ್ಮಿದವು.
NDAಯ ಭಾಗವಾಗಿ BJPಯು ಈ ಚುನಾವಣೆಗಳಲ್ಲಿ ಹೋರಾಟ ನಡೆಸಿತಾದರೂ, NDAಯಿಂದ ಹೊರಗಿದ್ದ ಶಕ್ತಿಶಾಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಇದರ ಒಂದಷ್ಟು ಸ್ಥಾನ-ಹಂಚಿಕೆಯ ಒಪ್ಪಂದಗಳು ನಡೆದಿದ್ದವು; ಆಂಧ್ರಪ್ರದೇಶದಲ್ಲಿನ ತೆಲುಗುದೇಶಂ ಪಕ್ಷ ಮತ್ತು ತಮಿಳುನಾಡಿನಲ್ಲಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಇಂಥ ಪಕ್ಷಗಳಲ್ಲಿ ಸೇರಿದ್ದವು.
ಚುನಾವಣೆಗಳು ಎದುರಿಗಿರುವಂತೆಯೇ ಕಾಂಗ್ರೆಸ್-ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಜಂಟಿ ವಿರೋಧಿರಂಗವೊಂದನ್ನು ರೂಪಿಸುವ ಪ್ರಯತ್ನಗಳೂ ನಡೆದಿದ್ದವು. ಕೊನೆಗೆ ಯಾವುದೇ ಒಪ್ಪಂದಕ್ಕೆ ತಲುಪಲು ಸಾಧ್ಯವಾಗದಿದ್ದರೂ, ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ನೆಂಟಸ್ತಿಕೆಗಳು ಏರ್ಪಟ್ಟವು. ಸಂಸತ್ತಿನ ಚುನಾವಣೆಯೊಂದರಲ್ಲಿ ಇಂಥದೊಂದು ಸ್ವರೂಪದ ಒಕ್ಕೂಟಗಳೊಂದಿಗೆ ಕಾಂಗ್ರೆಸ್ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಗೆ ಎನ್ನಬೇಕು.
ಎಡಪಕ್ಷಗಳು, ಅದರಲ್ಲೂ ಅತ್ಯಂತ ಗಮನಾರ್ಹವಾಗಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷಗಳು, ತಮ್ಮ ಪ್ರಬಲಕೇಂದ್ರಗಳಾದ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು NDA ಪಡೆಗಳಿಗೆ ಅಭಿಮುಖವಾಗಿ ಸ್ವಂತ್ರವಾಗಿ ಸ್ಪರ್ಧಿಸಿದವು. ಪಂಜಾಬ್ ಮತ್ತು ಆಂಧ್ರಪ್ರದೇಶದಂಥ ಇತರ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆಗಿನ ಸ್ಥಾನ ಹಂಚಿಕೆಗಳಲ್ಲಿ ಅವು ತೊಡಗಿಸಿಕೊಂಡವು. ತಮಿಳುನಾಡಿನಲ್ಲಿ ಅವು DMK-ನೇತೃತ್ವದ ಪ್ರಜಾಪ್ರಭುತ್ವವಾದಿ ಪ್ರಗತಿಪರ ಒಕ್ಕೂಟದ ಭಾಗವಾಗಿದ್ದವು.
ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದಂಥ ಎರಡು ಪಕ್ಷಗಳು ಕಾಂಗ್ರೆಸ್ ಜೊತೆಗಾಗಲೀ ಅಥವಾ BJPಯ ಜೊತೆಗಾಗಲೀ ಕೈಜೋಡಿಸಲು ನಿರಾಕರಿಸಿದವು. ಭಾರತದ ಅತಿ ಹೆಚ್ಚಿನ ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಈ ಎರಡೂ ಪಕ್ಷಗಳು ತಮ್ಮ ಮೂಲವನ್ನು ಹೊಂದಿವೆ.
BJPಗೆ ಒಂದು ಪ್ರಚಂಡ ಬಹುಮತ ದೊರೆಯಲಿದೆ ಎಂಬುದಾಗಿ ಚುನಾವಣಾ-ಪೂರ್ವದ ಊಹೆಗಳು ತಿಳಿಸಿದ್ದವಾದರೂ, ನಿರ್ಗಮನದ ಜನಾಭಿಪ್ರಾಯ ಸಂಗ್ರಹಣೆಗಳು (ಚುನಾವಣೆಗಳು ಆದ ತತ್‌ಕ್ಷಣದಲ್ಲಿ ಮತ್ತು ಎಣಿಕೆಯು ಆರಂಭವಾಗುವುದಕ್ಕೆ ಮುನ್ನ ಸಂಗ್ರಹಿಸಿದಂಥವು) ಒಂದು ತೂಗುಯ್ಯಾಲೆಯ ಸಂಸತ್ತು ಹೊರಹೊಮ್ಮುವುದರ ಕುರಿತು ಊಹಿಸಿದವು. ಆದಾಗ್ಯೂ, ನಿರ್ಗಮನದ ಜನಾಭಿಪ್ರಾಯ ಸಂಗ್ರಹಣೆಗಳೂ ಸಹ ಸಾರ್ವತ್ರಿಕ ಒಲವನ್ನು ಮಾತ್ರವೇ ಸೂಚಿಸಿದ್ದವೇ ಹೊರತು, ಅವುಗಳ ಊಹೆಯು ಅಂತಿಮ ಅಂಕಿ-ಅಂಶಗಳಿಗೆ ಹತ್ತಿರಕ್ಕೂ ಬರಲಿಲ್ಲ. ಚುನಾವಣಾ ಸಂದರ್ಭದ ಘಟನೆಗಳು ಸಂಪೂರ್ಣವಾಗಿ ತನ್ನ ಪರವಾಗಿ ಮುಂದುವರಿಯದಿರಬಹುದು ಎಂಬುದು BJPಗೆ ಅರಿವಾಗುತ್ತಿದ್ದಂತೆ, ಅದು 'ಭಾರತ ಪ್ರಕಾಶಿಸುತ್ತಿದೆ' ಎಂಬ ತನ್ನ ಪ್ರಚಾರಾಂದೋಲನದ ಶೈಲಿಯಿಂದ ಸ್ಥಿರತೆಯ ಚರ್ಚಾವಿಷಯಗಳ ಕಡೆಗೆ ಗಮನವನ್ನು ಬದಲಾಯಿಸಿತು ಎಂಬ ಸಾರ್ವತ್ರಿಕ ಗ್ರಹಿಕೆಯೂ ಅಲ್ಲಲ್ಲಿ ಕೇಳಿಬರುತ್ತದೆ. ಆಡಳಿತಾರೂಢ BJPಯ ವತಿಯಿಂದ "ಹಳೆಯ-ಶೈಲಿಯ" ಪಕ್ಷ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ಕಾಂಗ್ರೆಸ್‌ಗೆ ಬಡಜನರು, ಗ್ರಾಮೀಣ ಪ್ರದೇಶದ, ಕೆಳ-ಜಾತಿಯ ಮತ್ತು ಅಲ್ಪಸಂಖ್ಯಾತ ಮತದಾರರು ಬಹುತೇಕವಾಗಿ ಬೆಂಬಲ ನೀಡಿದರು; ಇವರೆಲ್ಲರೂ ಬೃಹತ್ತಾದ ಒಂದು ಶ್ರೀಮಂತ ಮಧ್ಯಮವರ್ಗವನ್ನು ಸೃಷ್ಟಿಸಿದ, ಹಿಂದಿನ ವರ್ಷಗಳ ಆರ್ಥಿಕ ಉತ್ಕರ್ಷದಲ್ಲಿ ಪಾಲ್ಗೊಂಡವರಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಚಂಡ ವಿಜಯವನ್ನು ದಾಖಲಿಸಿತು.
ಚುನಾವಣಾ-ಪೂರ್ವ ಸಮೀಕ್ಷೆಯಲ್ಲಿ ಮೂಡಿದ್ದ ಅಭಿಪ್ರಾಯಗಳೆಲ್ಲಾ ವ್ಯತಿರಿಕ್ತವಾಗಿದ್ದಕ್ಕೆ, ದೃಷ್ಟಿಕೋನವನ್ನು ಅವಲಂಬಿಸಿದ ನಾನಾಬಗೆಯ ಕಾರಣಗಳನ್ನು ಹೊಣೆಮಾಡಲಾಗಿದೆ. ರಾಷ್ಟ್ರೀಯ ವಿವಾದಾಂಶಗಳು ಅಥವಾ ಚರ್ಚಾವಿಷಯಗಳಿಗಿಂತ ಹೆಚ್ಚಾಗಿ ನೀರು ಕೊರತೆ, ಬರಗಾಲ ಇತ್ಯಾದಿಗಳಂಥ ತಮ್ಮ ತತ್‌ಕ್ಷಣ ಪರಿಸರದ ಚರ್ಚಾವಿಷಯಗಳ ಕುರಿತಾಗಿ ಜನರು ಹೆಚ್ಚು ಕಾಳಜಿ-ಕಳವಳಗಳನ್ನು ಹೊಂದಿದ್ದರು ಮತ್ತು ಅಧಿಕಾರಸ್ಥ-ವಿರೋಧಿ ಅಂಶಗಳು BJP ಮಿತ್ರಪಕ್ಷಗಳ ಪರವಾಗಿ ಕೆಲಸಮಾಡಿದವು.
ಮೇ 13ರಂದು BJPಯು ಸೋಲನ್ನು ಒಪ್ಪಿಕೊಂಡಿತು ಮತ್ತು 543 ಸದಸ್ಯರ ಪೈಕಿ 335ಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡ (BSP, SP, MDMK ಮತ್ತು ಎಡರಂಗ ಇವೇ ಮೊದಲಾದವುಗಳಿಂದ ಸಿಕ್ಕ ಬಾಹ್ಯ ಬೆಂಬಲವನ್ನು ಒಳಗೊಂಡಂತೆ) ಒಂದು ಅನುಕೂಲಕರ ಬಹುಮತವನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಅದರ ಮಿತ್ರಪಕ್ಷಗಳ ನೆರವು ಹಾಗೂ ಸೋನಿಯಾ ಗಾಂಧಿಯವರ ನಿರ್ದೇಶನ ದೊರೆಯಿತು. ಚುನಾವಣಾ-ನಂತರದ ಈ ಒಕ್ಕೂಟವನ್ನು ಸಂಯುಕ್ತ ಪ್ರಗತಿಪರ ಒಕ್ಕೂಟ (ಯುನೈಟೆಡ್ ಪ್ರೋಗ್ರೆಸಿವ್ ಅಲಯೆನ್ಸ್-UPA)ಎಂದು ಕರೆಯಲಾಯಿತು.
ಆದಾಗ್ಯೂ, ದೇಶದ ಹೊಸ ಪ್ರಧಾನಮಂತ್ರಿಯಾಗುವುದಕ್ಕೆ ದೊರೆತ ಅವಕಾಶವನ್ನು ನಿರಾಕರಿಸುವ ಮೂಲಕ, ಬಹುಮಟ್ಟಿಗೆ ಎಲ್ಲಾ ವೀಕ್ಷಕರನ್ನೂ ಸೋನಿಯಾ ಗಾಂಧಿಯವರು ಅಚ್ಚರಿಗೊಳಿಸಿದರು. ಅದರ ಬದಲಿಗೆ, ಅಧಿಕಾರವನ್ನು ವಹಿಸಿಕೊಳ್ಳುವಂತೆ ಹಿಂದಿನ ಹಣಕಾಸು ಮಂತ್ರಿ ಡಾ. ಮನಮೋಹನ್ ಸಿಂಗ್‌ರವರಿಗೆ ಆಕೆ ಕೇಳಿಕೊಂಡರು. 1990ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪ್ರಧಾನಮಂತ್ರಿ ನರಸಿಂಹ ರಾವ್‌ರವರ ಅಡಿಯಲ್ಲಿ ಡಾ. ಸಿಂಗ್ ಹಿಂದೆ ಕಾರ್ಯನಿರ್ವಹಿಸಿದ್ದರು; ಸನ್ನಿಹಿತವಾಗಿದ್ದ ರಾಷ್ಟ್ರೀಯ ಹಣಕಾಸಿನ ಬಿಕ್ಕಟ್ಟೊಂದನ್ನು ನಿವಾರಿಸಿದ್ದ, ಭಾರತದ ಮೊದಲ ಆರ್ಥಿಕ ಉದಾರೀಕರಣ ಯೋಜನೆಯ ಶಿಲ್ಪಿಗಳ ಪೈಕಿ ಅವರೂ ಒಬ್ಬರು ಎಂಬುದಾಗಿ ಈ ಅವಧಿಯಲ್ಲಿ ಪರಿಗಣಿಸಲಾಗಿತ್ತು.
15ನೇ ಲೋಕಸಭೆ (2009)
[ಬದಲಾಯಿಸಿ]2009ರ ಮೇ ತಿಂಗಳಿನಲ್ಲಿ, 15ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಇದರಲ್ಲಿ ಕಾಂಗ್ರೆಸ್-ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟವು (UPA) ಲೋಕಸಭೆಯನ್ನು ನಡೆಸಿಕೊಂಡು ಹೋಗಲು ಅಗತ್ಯವಾಗಿದ್ದ ಜನಾದೇಶವನ್ನು ಗೆದ್ದುಕೊಂಡಿತ್ತು. ಶ್ರೀಮತಿ ಮೀರಾ ಕುಮಾರ್ ಸಭಾಪತಿಯಾಗಿ ಆಯ್ಕೆಯಾದರು.
ರಾಜಕೀಯ ಪಕ್ಷಗಳ ಇತಿಹಾಸ
[ಬದಲಾಯಿಸಿ]ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಇತರ ಎಲ್ಲಾ ಪ್ರಮುಖ ಪಕ್ಷಗಳ ಒಂದು 'ಅಸಂಭವ ಒಕ್ಕೂಟ'ವು ಸೋಲಿಸುವುದರೊಂದಿಗೆ, 1977ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಬಲ್ಯವು ಮೊಟ್ಟಮೊದಲ ಬಾರಿಗೆ ಮುರಿಯಲ್ಪಟ್ಟಿತು. 1975–1977ರ ಅವಧಿಯಲ್ಲಿ ವಿವಾದಾತ್ಮಕವಾದ ತುರ್ತು ಪರಿಸ್ಥಿತಿಯೊಂದರ ಹೇರಿಕೆ ಮಾಡಿದ್ದರ ವಿರುದ್ಧ ಈ ಎಲ್ಲಾ ಪ್ರಮುಖ ಪಕ್ಷಗಳು ಪ್ರತಿಭಟಿಸಿದ್ದವು. ಸ್ಥಾನಿಕ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರಿಂದ ಎಸಗಲ್ಪಟ್ಟ ಭ್ರಷ್ಟಾಚಾರದ ಕುರಿತಾದ ಪ್ರಮುಖ ಆರೋಪಗಳನ್ನು ಪ್ರಸ್ತಾವಿಸಿದ್ದರ ಫಲವಾಗಿ, VP ಸಿಂಗ್ ನೇತೃತ್ವದ ಇದೇ ರೀತಿಯ ಒಕ್ಕೂಟವೊಂದು 1989ರಲ್ಲಿ ಅಧಿಕಾರವನ್ನು ತನ್ನದಾಗಿಸಿಕೊಂಡಿತ್ತು. ಇದೂ ಸಹ ತನ್ನ ಶಕ್ತಿಯನ್ನು 1990ರಲ್ಲಿ ಕಳೆದುಕೊಂಡಿತು.
ಅಲ್ಲಿಯವರೆಗೂ ಏಕ-ಪಕ್ಷ-ಪ್ರಾಬಲ್ಯದ ರಾಜಕಾರಣವನ್ನು ಕಂಡಿದ್ದ ಭಾರತವು 1992ರಲ್ಲಿ ಒಕ್ಕೂಟ ವ್ಯವಸ್ಥೆಯೊಂದಕ್ಕೆ ಹಾದಿಕಲ್ಪಿಸಿತು. ಸರ್ಕಾರವೊಂದನ್ನು ರಚಿಸುವುದಕ್ಕೆ ಅಗತ್ಯವಾದ ಬಹುಮತವನ್ನು ಸಂಸತ್ತಿನಲ್ಲಿ ನಿರೀಕ್ಷಿಸುವುದಕ್ಕೆ ಯಾವೊಂದು ಏಕ ಪಕ್ಷಕ್ಕೂ ಆಗದಂಥ ವ್ಯವಸ್ಥೆ-ಸನ್ನಿವೇಶ ಅದಾಗಿತ್ತು. ಆದರೆ, ಬಣವೊಂದನ್ನು ರೂಪಿಸುವುದಕ್ಕಾಗಿ ಹಾಗೂ ಸರ್ಕಾರ ರಚನೆಗೆ ಆಹ್ವಾನಿಸಲ್ಪಡುವುದಕ್ಕೆ ಒಂದು ಬಹುಮತವನ್ನು ಸಾಧಿಸುವುದಕ್ಕಾಗಿ ಇತರ ಪಕ್ಷಗಳೊಂದಿಗೆ ಸೇರಿಕೊಂಡು ಒಕ್ಕೂಟವನ್ನು ಕಟ್ಟುವ ಪ್ರಕ್ರಿಯೆಯನ್ನು ಅವಲಂಬಿಸುವುದು ಈ ವ್ಯವಸ್ಥೆಯ ಶೈಲಿಯಾಗಿತ್ತು. ಇದು ಪ್ರಾದೇಶಿಕ ಮಹತ್ವಾಕಾಂಕ್ಷೆಗಳ ಬೆನ್ನಿನ ಮೇಲೆ ಸವಾರಿ ಮಾಡುವ ಶಕ್ತಿಶಾಲಿ ಪ್ರಾದೇಶಿಕ ಪಕ್ಷಗಳ ಒಂದು ಪರಿಣಾಮವಾಗಿದೆ. TDP ಮತ್ತು AIADMKಯಂಥ ಪಕ್ಷಗಳು ಸಾಂಪ್ರದಾಯಿಕವಾಗಿ ಬಲವಾಗಿರುವ ಪ್ರಾದೇಶಿಕ ಸ್ಪರ್ಧಿಗಳಾಗಿದ್ದರೆ, ಲೋಕದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಜನತಾದಳದಂಥ ಇತರ ಪ್ರಾದೇಶಿಕ ಪಕ್ಷಗಳ ಹೊರಹೊಮ್ಮುವಿಕೆಯನ್ನು 1990ರ ದಶಕವು ಕಂಡಿತು. ಈ ಪಕ್ಷಗಳು ಪ್ರಾದೇಶಿಕ ಮಹತ್ವಾಕಾಂಕ್ಷೆಗಳ ಮೇಲೆ ಸಾಂಪ್ರದಾಯಿಕವಾಗಿ ಆಧರಿಸಿದ್ದು, ತೆಲಂಗಾಣ ರಾಷ್ಟ್ರ ಸಮಿತಿಯು ಇದಕ್ಕೊಂದು ಉದಾಹರಣೆಯಾಗಿದೆ; ಅಥವಾ ಜಾತಿ ಪರಿಗಣನೆಗಳಿಂದ ಈ ಪಕ್ಷಗಳು ಬಲವಾಗಿ ಪ್ರಭಾವಿಸಲ್ಪಟ್ಟಿದ್ದು, ದಲಿತ ಸಮುದಾಯವನ್ನು ಪ್ರತಿನಿಧಿಸುವುದಾಗಿ ಸಮರ್ಥಿಸಿಕೊಳ್ಳುವ ಬಹುಜನ ಸಮಾಜ ಪಕ್ಷವು ಇದಕ್ಕೆ ಉದಾಹರಣೆಯಾಗಿದೆ.
ಪ್ರಸಕ್ತವಾಗಿ, ಕಾಂಗ್ರೆಸ್ ಪಕ್ಷದ ಸಂಯುಕ್ತ ಪ್ರಗತಿಪರ ಒಕ್ಕೂಟವು ಅಧಿಕಾರದಲ್ಲಿದ್ದರೆ, ರಾಷ್ಟ್ರೀಯ ಪ್ರಜಾಪ್ರಭುತ್ವವಾದಿ ಒಕ್ಕೂಟವು ವಿರೋಧಪಕ್ಷವೆನಿಸಿಕೊಂಡಿದೆ. ಮನಮೋಹನ್ ಸಿಂಗ್‌ರವರು ಮರು-ಚುನಾಯಿಸಲ್ಪಟ್ಟರು.
ಚುನಾವಣಾ ಆಯೋಗ
[ಬದಲಾಯಿಸಿ]ಭಾರತೀಯ ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಸೃಷ್ಟಿಸಲ್ಪಟ್ಟ ಪ್ರಾಧಿಕಾರವಾಗಿರುವ ಭಾರತದ ಚುನಾವಣಾ ಆಯೋಗದಿಂದ ಭಾರತದಲ್ಲಿನ ಚುನಾವಣೆಗಳು ನಡೆಸಲ್ಪಡುತ್ತವೆ. ಚುನಾವಣಾ ಪ್ರಕ್ರಿಯೆಯು ಒಮ್ಮೆ ಪ್ರಾರಂಭವಾಯಿತೆಂದರೆ, ಚುನಾವಣಾ ಆಯೋಗದಿಂದ ಫಲಿತಾಂಶಗಳು ಘೋಷಿಸಲ್ಪಡುವವರೆಗೂ ಯಾವುದೇ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತೆ ಇಲ್ಲದಿರುವುದು ಒಂದು ಸುಸ್ಥಾಪಿತ ನಡೆವಳಿಕೆಯಾಗಿದೆ. ಚುನಾವಣೆಗಳ ಸಂದರ್ಭದಲ್ಲಿ, ಚುನಾವಣಾ ಆಯೋಗಕ್ಕೆ ಅಗಾಧ ಅಧಿಕಾರಗಳನ್ನು ನಿಯೋಜಿಸಲಾಗುತ್ತದೆ; ಅಗತ್ಯವಾದಲ್ಲಿ ಅದು ಒಂದು ನಾಗರಿಕ ನ್ಯಾಯಾಲಯದಂತೆ ಕಾರ್ಯನಿರ್ವಹಿಸಬಹುದಾದ ಮಟ್ಟಿಗೆ ಅದಕ್ಕೆ ಅಧಿಕಾರವಿರುತ್ತದೆ.
ಚುನಾವಣಾ ಪ್ರಕ್ರಿಯೆ
[ಬದಲಾಯಿಸಿ]ಭಾರತದಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯು, ರಾಜ್ಯ ಶಾಸನಸಭಾ ಚುನಾವಣೆಗಳಿಗಾದರೆ ಕನಿಷ್ಟಪಕ್ಷ ಒಂದು ತಿಂಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ; ಸಾರ್ವತ್ರಿಕ ಚುನಾವಣೆಗಳಿಗಾದರೆ ಈ ಅವಧಿಯು ಮತ್ತಷ್ಟು ಹೆಚ್ಚಾಗುತ್ತದೆ. ಮತದಾರರ ಅಧಿಕೃತ ಪಟ್ಟಿಗಳ ಪ್ರಕಟಿಸುವಿಕೆಯು ಒಂದು ಪ್ರಮುಖ ಪ್ರಕ್ರಿಯೆಯಾಗಿದ್ದು, ಇದು ಚುನಾವಣೆಗಳಿಗೆ ಮುಂಚಿತವಾಗಿ ನಡೆಯುತ್ತದೆ ಹಾಗೂ ಭಾರತದಲ್ಲಿನ ಚುನಾವಣೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಮತದಾನ ಮಾಡಲು ಓರ್ವ ವ್ಯಕ್ತಿಯು ಹೊಂದಿರಬೇಕಾದ ಅರ್ಹತೆಯನ್ನು ಭಾರತೀಯ ಸಂವಿಧಾನ ನಿಗದಿಪಡಿಸಿದೆ. ಭಾರತದ ಓರ್ವ ನಾಗರಿಕನಾಗಿರುವ ಮತ್ತು 18 ವರ್ಷ ವಯಸ್ಸಿಗಿಂತ ಮೇಲಿರುವ ಯಾವುದೇ ವ್ಯಕ್ತಿಯು ಮತದಾರರ ಅಧಿಕೃತ ಪಟ್ಟಿಗಳಲ್ಲಿ ಓರ್ವ ಮತದಾರನಾಗಿ ದಾಖಲಿಸಿಕೊಳ್ಳಲು ಅರ್ಹನಾಗಿರುತ್ತಾನೆ. ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳುವುದು ಅರ್ಹ ಮತದಾರರ ಹೊಣೆಗಾರಿಕೆಯಾಗಿರುತ್ತದೆ. ಸಾಮಾನ್ಯವಾಗಿ, ಉಮೇದುವಾರರು ನಾಮಪತ್ರ ಸಲ್ಲಿಸುವುದಕ್ಕಾಗಿರುವ ಕೊನೆಯ ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ಇತ್ತೀಚಿನ ಮತದಾರ ನೋಂದಣಿಗಳಿಗೆ ಅವಕಾಶ ನೀಡಲಾಗುತ್ತದೆ.
ಚುನಾವಣಾ-ಪೂರ್ವದ ಪ್ರಕ್ರಿಯೆಗಳು
[ಬದಲಾಯಿಸಿ]ಚುನಾವಣೆಗಳಿಗೆ ಮುಂಚಿತವಾಗಿ ಮೊದಲಿಗೆ, ನಾಮಪತ್ರ ಸಲ್ಲಿಸುವ ದಿನಾಂಕ, ಮತದಾನದ ದಿನಾಂಕ ಮತ್ತು ಎಣಿಕೆಯ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ. ದಿನಾಂಕಗಳು ಪ್ರಕಟಿಸಲ್ಪಟ್ಟ ದಿನದಿಂದಲೇ ಮಾದರಿ ನೀತಿಸಂಹಿತೆಯು ಜಾರಿಗೆ ಬರುತ್ತದೆ.
ಚುನಾವಣಾ ಪ್ರಚಾರವನ್ನು ನಡೆಸುವುದಕ್ಕಾಗಿ ಯಾವ ಪಕ್ಷವೂ ಸರ್ಕಾರಿ ಸಂಪನ್ಮೂಲಗಳನ್ನು ಬಳಸುವಂತಿರುವುದಿಲ್ಲ. ಮತದಾನ ನಡೆಯುವ ದಿನಕ್ಕೆ 48 ಗಂಟೆಗಳಷ್ಟು ಮುಂಚಿತವಾಗಿ ಚುನಾವಣಾ ಪ್ರಚಾರಗಳನ್ನು ನಿಲ್ಲಿಸಬೇಕು ಎಂಬುದಾಗಿ ನೀತಿಸಂಹಿತೆಯು ಷರತ್ತು ಹಾಕುತ್ತದೆ. ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಒಂದು ಚುನಾವಣಾ-ಪೂರ್ವ ಪ್ರಕ್ರಿಯೆಯು ಅಗತ್ಯವಾಗಿದೆ.
ಮತದಾನದ ದಿನ
[ಬದಲಾಯಿಸಿ]ಮತದಾನದ ದಿನದ ಮುಂಚಿನ ದಿನಕ್ಕೆ ಚುನಾವಣಾ ಪ್ರಚಾರಗಳು ಕೊನೆಗೊಳ್ಳುತ್ತವೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳನ್ನು ಮತದಾನ ಕೇಂದ್ರಗಳಾಗಿ ಆರಿಸಲಾಗುತ್ತದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಯು ಮತದಾನ ಪ್ರಕ್ರಿಯೆಯ ಉಸ್ತುವಾರಿಯನ್ನು ಹೊತ್ತಿರುತ್ತಾನೆ. ಅನೇಕ ಮತದಾನ ಕೇಂದ್ರಗಳಿಗೆ ಸರ್ಕಾರಿ ನೌಕರರನ್ನು ನೇಮಿಸಲಾಗುತ್ತದೆ. ಭಾರತದ ನಿಶ್ಚಿತ ಭಾಗಗಳಲ್ಲಿ ಅತೀವವಾಗಿ ಚಾಲ್ತಿಯಲ್ಲಿರುವ, ಮತಗಟ್ಟೆ ವಶಪಡಿಸಿಕೊಳ್ಳುವಿಕೆಯ ಮೂಲಕ ನಡೆಯುವ ಚುನಾವಣಾ ಅಕ್ರಮವನ್ನು ತಡೆಗಟ್ಟಲೆಂದು ಮತಪೆಟ್ಟಿಗೆಗಳ ಬದಲಿಗೆ ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್-EVMಗಳು) ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಮೈಸೂರ್ ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ವತಿಯಿಂದ ತಯಾರಿಸಲ್ಪಟ್ಟ ಒಂದು ಅಳಿಸಲಾಗದ ಮಸಿಯನ್ನು ಮತದಾರರ ಎಡಗೈ ತೋರುಬೆರಳಿನ ಮೇಲೆ ಸಾಮಾನ್ಯವಾಗಿ ಹಚ್ಚಲಾಗುತ್ತದೆ. ಮತದಾರನು ತನ್ನ ಮತವನ್ನು ನೀಡಿದ್ದಾನೆ ಎಂಬುದಕ್ಕೆ ಇದು ಒಂದು ಸೂಚಕವಾಗಿದೆ. ಅಕ್ರಮ ಮತದಾನವನ್ನು ತಡೆಗಟ್ಟುವುದಕ್ಕಾಗಿ ಈ ಪರಿಪಾಠವನ್ನು 1962ರ ಸಾರ್ವತ್ರಿಕ ಚುನಾವಣೆಗಳಿಂದಲೂ ಅನುಸರಿಸಿಕೊಂಡು ಬರಲಾಗಿದೆ.
ಚುನಾವಣಾ-ನಂತರದ ಪ್ರಕ್ರಿಯೆಗಳು
[ಬದಲಾಯಿಸಿ]ಚುನಾವಣಾ ದಿನದ ನಂತರ, ಭಾರೀ ಭದ್ರತೆಯ ಅಡಿಯಲ್ಲಿ ಒಂದು ಭದ್ರಾಗಾರದಲ್ಲಿ EVMಗಳನ್ನು ಶೇಖರಿಸಿಡಲಾಗುತ್ತದೆ. ಚುನಾವಣೆಗಳ ವಿಭಿನ್ನ ಹಂತಗಳು ಸಂಪೂರ್ಣಗೊಂಡ ನಂತರ, ಮತಗಳನ್ನು ಎಣಿಕೆಮಾಡಲು ಒಂದು ದಿನವನ್ನು ನಿಗದಿಪಡಿಸಲಾಗುತ್ತದೆ. ಮತಗಳನ್ನು ತಾಳೆ ಲೆಕ್ಕದಲ್ಲಿ ವಿಶಿಷ್ಟವಾಗಿ ದಾಖಲುಮಾಡಲಾಗುತ್ತದೆ ಹಾಗೂ ಕೆಲವೇ ಗಂಟೆಗಳಲ್ಲಿ ಜನರು ನೀಡಿದ ತೀರ್ಮಾನವು ಹೊರಬೀಳುತ್ತದೆ. ಬಹುಪಾಲು ಮತಗಳನ್ನು ಒಟ್ಟುಗೂಡಿಸಿದ ಉಮೇದುವಾರನನ್ನು ಆಯಾ ಚುನಾವಣಾ ಕ್ಷೇತ್ರದ ವಿಜಯಿ ಎಂದು ಘೋಷಿಸಲಾಗುತ್ತದೆ.
ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷ ಅಥವಾ ಒಕ್ಕೂಟವನ್ನು ಹೊಸ ಸರ್ಕಾರದ ರಚನೆಗೆಂದು ರಾಷ್ಟ್ರಪತಿಯವರು ಆಹ್ವಾನಿಸುತ್ತಾರೆ. ಸದನದಲ್ಲಿ ಮತಗಳ ಒಂದು ಸರಳ ಬಹುಮತವನ್ನು (ಕನಿಷ್ಟ 50%) ಗಳಿಸುವ ಮೂಲಕ, ಸದರಿ ಗೆದ್ದ ಒಕ್ಕೂಟ ಅಥವಾ ಪಕ್ಷವು ವಿಶ್ವಾಸಮತ ಯಾಚನೆಯಲ್ಲಿ ಸದನದ (ಲೋಕಸಭೆ) ಅಂಗಣದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.
ಮತದಾರರ ನೋಂದಣಿ
[ಬದಲಾಯಿಸಿ]ಭಾರತದಲ್ಲಿನ ಕೆಲವೇ ನಗರಗಳಿಗೆ ಸಂಬಂಧಿಸಿದಂತೆ, ಮತದಾರ ನೋಂದಣಿಯ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಸೃಷ್ಟಿಸಬಹುದಾಗಿದೆ ಮತ್ತು ಅತ್ಯಂತ ಸಮೀಪದ ಚುನಾವಣಾ ಕಚೇರಿಗೆ ಸಲ್ಲಿಸಬಹುದಾಗಿದೆ.www.jaagore.comನಂಥ ಸಾಮಾಜಿಕವಾಗಿ ಸುಸಂಬದ್ಧವಾಗಿರುವ ಕೆಲವೊಂದು ವೆಬ್‌ಸೈಟುಗಳು ಮತದಾರರ ನೋಂದಣಿಯ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಉತ್ತಮ ಜಾಗ ಎನಿಸಿಕೊಂಡಿವೆ.
We also use the www.ceo.kar.nic.in to inclusion the voters.
ಅನುಪಸ್ಥಿತ ಮತದಾನ
[ಬದಲಾಯಿಸಿ]ಸದ್ಯದ ಸನ್ನಿವೇಶವನ್ನು ಪರಿಗಣಿಸಿದರೆ, ಭಾರತವು ಒಂದು ಅನುಪಸ್ಥಿತ ಮತದಾನ ವ್ಯವಸ್ಥೆಯನ್ನು ಹೊಂದಿಲ್ಲ. ಓರ್ವ ವ್ಯಕ್ತಿಯು 18 ವರ್ಷ ವಯಸ್ಸನ್ನು ಮೀರಿದವರಾಗಿದ್ದು, ವಾಸಿಸುತ್ತಿರುವ ಚುನಾವಣಾ ಕ್ಷೇತ್ರದ ಓರ್ವ 'ಸಾಧಾರಣ ನಿವಾಸಿ'ಯಾಗಿದ್ದಲ್ಲಿ, ಅಂದರೆ ಹಾಲಿ ವಿಳಾಸದಲ್ಲಿ 6 ತಿಂಗಳುಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಿಂದ ವಾಸಿಸುತ್ತಿದ್ದಲ್ಲಿ, ಅಂಥವರು ಮತದಾನಕ್ಕೆ ನೋಂದಾಯಿಸಿಕೊಳ್ಳಲು 1950ರ ಜನತಾ ಪ್ರಾತಿನಿಧ್ಯದ ಕಾಯಿದೆಯ (RPA)[೪] ಖಂಡ 19 ಅವಕಾಶ ಕಲ್ಪಿಸುತ್ತದೆ. ಓರ್ವ ಅನಿವಾಸಿ ಭಾರತೀಯನು (NRI) ಮತದಾರರ ಅಧಿಕೃತ ಪಟ್ಟಿಗಳಲ್ಲಿ ತನ್ನ ಹೆಸರನ್ನು ನೊಂದಾಯಿಸುವುದನ್ನು ಮೇಲಿನ ಕಾಯಿದೆಯ ಖಂಡ 20 ಅನರ್ಹಗೊಳಿಸುತ್ತದೆ. ತರುವಾಯದಲ್ಲಿ, ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಓರ್ವ NRI ತನ್ನ ಮತವನ್ನು ನೀಡದಂತೆಯೂ ಇದು ತಡೆಗಟ್ಟುತ್ತದೆ.
NRIಗಳಿಗೆ ಮತದಾನ ಹಕ್ಕುಗಳ ಅವಕಾಶ ನೀಡುವ 2010ರ ಜನತಾ ಪ್ರಾತಿನಿಧ್ಯದ (ತಿದ್ದುಪಡಿ) ಮಸೂದೆಯು 2010ರ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮತ್ತು 2010ರ[೫] ನವೆಂಬರ್ 24ರಂದು ಆದ ತರುವಾಯದ ರಾಜ್ಯಪತ್ರ ಪ್ರಕಟಣೆಗಳಲ್ಲಿ ಅನುಮೋದಿಸಲ್ಪಟ್ಟಿತು. ಇದರೊಂದಿಗೆ ಭಾರತೀಯ ಚುನಾವಣೆಗಳಲ್ಲಿ ಮತದಾನ ಮಾಡಲು NRIಗಳಿಗೆ ಈಗ ಅವಕಾಶವಿದೆಯಾದರೂ, ಮತದಾನದ ಸಮಯದಲ್ಲಿ ಅವರು ಭೌತಿಕವಾಗಿ ಹಾಜರಿರಬೇಕಾಗುತ್ತದೆ . NRIಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿರುವ ಜನರು ಅನುಪಸ್ಥಿತ ಮತದಾನ ವ್ಯವಸ್ಥೆಯ[೬][೭] ಮೂಲಕ ತಮ್ಮ ಮತವನ್ನು ನೀಡುವುದಕ್ಕೆ ಅವಕಾಶ ನೀಡಲು RPA ಕಾಯಿದೆಯನ್ನು ತಿದ್ದುಪಡಿ ಮಾಡುವಂತೆ ನಾಗರಿಕ ಸಮಾಜದ ಹಲವಾರು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. NRI ಮತದಾನದ [೮] ಒಂದು ಕಾರ್ಯಸಾಧ್ಯ ವಿಧಾನವಾಗಿ ಅಂತರಜಾಲ ಮತದಾನ ಮತ್ತು ಅಂಚೆಯ ಮತದಾನವನ್ನು ಸಕ್ರಿಯವಾಗಿ ಮುಂದಕ್ಕೆ ತಳ್ಳುವಲ್ಲಿ ಪೀಪಲ್ ಫಾರ್ ಲೋಕ್‌ಸತ್ತಾ ಎಂಬ ಸಂಘಟನೆಯು ತನ್ನನ್ನು ತೊಡಗಿಸಿಕೊಂಡಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- 'ಮತವಿಲ್ಲ' ನೋಟಾ('No Vote') ಎಂದೇ ಜನಪ್ರಿಯವಾಗಿ ಪರಿಚಿತವಾಗಿರುವ 49-O
- ಭಾರತದಲ್ಲಿನ ಸಾರ್ವತ್ರಿಕ ಚುನಾವಣೆಗಳು
- ಭಾರತದಲ್ಲಿನ ರಾಜ್ಯ ಶಾಸನಸಭಾ ಚುನಾವಣೆಗಳು
ಸ್ವತಂತ್ರ ಭಾರತದ ಮೊದಲ ಮತದಾರ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಇಂಡಿಯನ್ ಜನರಲ್ ಇಲೆಕ್ಷನ್ ಎಕ್ಸ್‌ಪೆಂಡಿಚರ್, ECI ವೆಬ್‌ಸೈಟಿನಿಂದ ಪಡೆದದ್ದು Archived 2005-02-08 at Archive.is 2006ರ ಮೇ 14ರಂದು ಸಂಪರ್ಕಿಸಲಾಯಿತು.
- ↑ Shashi Tharoor (2009-04-16). "The recurring miracle of Indian democracy". New Straits Times.
- ↑ EU (25 states) electorate = 350mn (http://news.bbc.co.uk/2/hi/europe/3715399.stm), US electorate=212 mm (http://elections.gmu.edu/preliminary_vote_2008.html Archived 2008-11-13 ವೇಬ್ಯಾಕ್ ಮೆಷಿನ್ ನಲ್ಲಿ.)
- ↑ "1950ರ ಜನತಾ ಪ್ರಾತಿನಿಧ್ಯದ ಕಾಯ್ದೆ" (PDF). Archived from the original (PDF) on 2018-12-25. Retrieved 2011-02-25.
- ↑ ರಾಜ್ಯಪತ್ರದ ಪ್ರಕಟಣೆಗಳು
- ↑ "ಭಾರತೀಯ ಚುನಾವಣೆಗಳಲ್ಲಿನ ಅನುಪಸ್ಥಿತ ಮತದಾನಕ್ಕೆ ಸಂಬಂಧಿಸಿದ ಮನವಿ". Archived from the original on 2009-04-16. Retrieved 2011-02-25.
- ↑ ಮುಂಬರಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿನ ಅನಿವಾಸಿ ಭಾರತೀಯರ ಮತದಾನ ಹಕ್ಕುಗಳು
- ↑ "ಪೀಪಲ್ ಫಾರ್ ಲೋಕ್‌ಸತ್ತಾ- NRI ವೋಟಿಂಗ್ ಕ್ಯಾಂಪೇನ್". Archived from the original on 2019-01-26. Retrieved 2011-02-25.
- ಸುಬ್ರತಾ K. ಮಿತ್ರ ಮತ್ತು V.B. ಸಿಂಗ್. 1999. ಡೆಮಾಕ್ರಸಿ ಅಂಡ್ ಸೋಷಿಯಲ್ ಚೇಂಜ್ ಇನ್ ಇಂಡಿಯಾ: ಎ ಕ್ರಾಸ್-ಸೆಕ್ಷನಲ್ ಅನಾಲಿಸಿಸ್ ಆಫ್ ದಿ ನ್ಯಾಷನಲ್ ಇಲೆಕ್ಟೊರೇಟ್ . ನವದೆಹಲಿ: ಸೇಜ್ ಪಬ್ಲಿಕೇಷನ್ಸ್. ISBN 81-7036-809-X (ಭಾರತ HB) ISBN 0-7619-9344-4 (U.S. HB).
- ಸುಬ್ರತಾ K. ಮಿತ್ರ, ಮೈಕ್ ಎನ್‌ಸ್ಕಾಟ್, ಕ್ಲೆಮೆನ್ಸ್ ಸ್ಪೀಸ್ (ಸಂಪಾದಕರು). 2004. ಪೊಲಿಟಿಕಲ್ ಪಾರ್ಟೀಸ್ ಇನ್ ಸೌತ್ ಏಷ್ಯಾ . ಗ್ರೀನ್‌ವುಡ್: ಪ್ರೇಗರ್.
- ಸುಬ್ರತಾ K. ಮಿತ್ರ/ಮೈಕ್ ಎನ್‌ಸ್ಕಾಟ್/V.B. ಸಿಂಗ್. 2001. ಇಂಡಿಯಾ , ಇದರಲ್ಲಿರುವಂಥದ್ದು: ನೊಹ್ಲೆನ್, ಡೈಟರ್ (ಸಂಪಾದಿತ). ಇಲೆಕ್ಷನ್ಸ್ ಇನ್ ಸೌತ್ ಏಷ್ಯಾ ಅಂಡ್ ದಿ ಪೆಸಿಫಿಕ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಭಾರತದಲ್ಲಿನ ಚುನಾವಣೆಗಳು Archived 2011-05-27 ವೇಬ್ಯಾಕ್ ಮೆಷಿನ್ ನಲ್ಲಿ. ಇತಿಹಾಸ ಮತ್ತು ಮಾಹಿತಿ
- ಭಾರತದ ಚುನಾವಣಾ ಆಯೋಗ
- BBC ರೂಪಕಚಿತ್ರ: ಇಂಡಿಯನ್ ಇಲೆಕ್ಷನ್ಸ್ 1999
- ಆಡಮ್ ಕಾರ್ನ ಚುನಾವಣಾ ದಾಖಲೆಸಂಗ್ರಹ
- ಇಂಡಿಯಾ ಇಲೆಕ್ಷನ್ಸ್ 2009 ಸ್ಪೆಷಲ್ಸ್ ಕವರೇಜ್
- ಭಾರತದಲ್ಲಿನ 2009ರ ಚುನಾವಣೆಗಳಿಗೆ ಸಂಬಂಧಿಸಿದ ಸುದ್ದಿ
- 2009ರ ಭಾರತೀಯ ಚುನಾವಣೆಗಳ ಕುರಿತಾದ ಸಾಮಾಜಿಕ ಮಾಧ್ಯಮಗಳ ಮಾತುಕತೆಗಳು
- ಭಾರತದಲ್ಲಿನ ಚುನಾವಣೆಗಳ ಕುರಿತಾದ ಮಾಹಿತಿ Archived 2019-01-13 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತದ ಚುನಾವಣೆಗಳು
- Pages using the JsonConfig extension
- Webarchive template archiveis links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using duplicate arguments in template calls
- Articles with hatnote templates targeting a nonexistent page
- Articles needing more viewpoints from December 2010
- Articles with invalid date parameter in template
- ಭಾರತದಲ್ಲಿನ ಚುನಾವಣೆಗಳು
- ಚುನಾವಣೆ
- ಭಾರತ
- ಭಾರತದ ಚುನಾವಣೆಗಳು
- ಕೇಂದ್ರ ಮಂತ್ರಿಗಳು
- ರಾಜಕಾರಣಿಗಳು
- ಗುಜರಾತ್
- ಭಾರತದ ಪ್ರಧಾನ ಮಂತ್ರಿಗಳು
- Pages using ISBN magic links