ವಿಷಯಕ್ಕೆ ಹೋಗು

ಭದ್ರಕಾಳಿ ದೇಗುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ನಾಡಿನ ಪ್ರತಿಯೊಂದು ದೇಗುಲಕ್ಕೂ ವಿಭಿನ್ನ ಇತಿಹಾಸಗಳಿರುತ್ತವೆ. ಪ್ರಾಚೀನ ಕಾಲದಲ್ಲಿ ಸ್ಥಾಪಿತವಾದ ದೇಗುಲಗಳು ಹಲವಾದರೆ ಇನ್ನು ಆಕಸ್ಮಿಕ ಘಟನೆ , ವಿಶೇಷ ಘಟನೆಗಳಿಂದ ಆ ಸ್ಥಳ ದೈವಿಕ ಕ್ಷೇತ್ರವಾಗಿ ವಿಖ್ಯಾತವಾದವುಗಳು ಹಲವು ಇವೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರದ ಹೃದಯ ಭಾಗದಲ್ಲಿರುವ ಶ್ರೀಭದ್ರಕಾಳಿ ದೇವಾಲಯ ಇಂತಹ ವಿಶಿಷ್ಟ ದೇವಾಲಯಗಳಲ್ಲಿ ಒಂದು. ಬೇಡಿದ ಭಕ್ತರ ಮನದಿಂಗಿತ ಪೂರೈಸಿ ಅಭಯ ನೀಡುವ ತಾಯಿ ನಿತ್ಯವೂ ಭಕ್ತರನ್ನು ಸೆಳೆಯುತ್ತಾ ದಿನೇ ದಿನೇ ಪ್ರವರ್ಧನಮಾನಗೊಳ್ಳುತ್ತಿರುವ ಕ್ಷೇತ್ರ ಇದಾಗಿದೆ.

ಬಾವಿಯಲ್ಲಿ ದೊರೆತ ದೇವರ ವಿಗ್ರಹ

ಸಾಗರದ ಗೋಪಾಲಗೌಡ ಬಡಾವಣೆಯ ಈ ಸ್ಥಳ ೧೭ ವರ್ಷಗಳ ಹಿಂದೆ ಖಾಲಿ ಸ್ಥಳವಾಗಿತ್ತು. ಈಗ ದೇವಸ್ಥಾನದ ಮುಖ್ಯಸ್ಥರಾಗಿರುವ ದುರ್ಗಪ್ಪ ಅವರಿಗೆ ಸೇರಿದ ಜಮೀನು ಇದಾಗಿದ್ದು ಈ ಸ್ಥಳದ ಹಿಂಭಾಗದಲ್ಲಿ ಹೊಲಕ್ಕೆ ನೀರಾವರಿ ಒದಗಿಸಲು ವಿಶಾಲವಾದ ಬಾವಿ ತೋಡಿಸುತ್ತಿದ್ದರು. ಸುಮಾರು ೭ - ೮ ಅಡಿ ಆಳ ತೋಡುತ್ತಿದ್ದಂತೆ ಪಂಚಲೋಹದಿಂದ ಮಾಡಿದ ಭದ್ರಕಾಳಿ ಅಮ್ಮನವರ ವಿಗ್ರಹ ದೊರೆಯಿತು. ಅದನ್ನು ಚಿಕ್ಕ ಗುಡಿಸಿಲಿನಲ್ಲಿ ಇಟ್ಟು ಪೂಜಿಸಲು ಆರಂಭಿಸಿದರು. ದೇವರ ಶಕ್ತಿ ಹಾಗೂ ಭಕ್ತರಿಗೆ ಅಭಯ ನೀಡುವ ವಿಶಿಷ್ಟ ಘಟನೆಗಳಿಂದ ಈ ತಾಯಿಯ ಕೀರ್ತಿ ದಿನೇ ದಿನೆ ಪಸರಿಸಲು ಆರಂಭಿಸಲಾಯಿತು. ನಂತರ ಈಗಿನ ದೇವಾಲಯ ನಿರ್ಮಿಸಿ ನಿತ್ಯವೂ ತ್ರಿಕಾಲ ಪೂಜೆ ನೈವೇದ್ಯ ಅರಂಭಿಸಲಾಯಿತು.

ನಿತ್ಯ ಪೂಜೆ:ವರ್ಷವಿಡೀ ಉತ್ಸವ

ಇಲ್ಲಿನ ದೇವರಾದ ಶ್ರೀಭದ್ರಕಾಳಿ ಮತ್ತು ಶ್ರೀವೈಷ್ಣವಿ ಮಾತೆಗೆ ನಿತ್ಯವೂ ತ್ರಿಕಾಲ ಪೂಜೆ, ನೈವೇದ್ಯ ಸಲ್ಲಿಸಲಾಗುತ್ತಿದೆ. ಪ್ರತಿನಿತ್ಯ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಮನಸ್ಸಿನ ದುಗುಡ ತೋಡಿಕೊಂಡು ಅಭಯ ನೀಡಲು ಪ್ರಾರ್ಥಿಸುತ್ತಾರೆ. ಯುಗಾದಿಯಲ್ಲಿ ಆಯನೋತ್ಸವ, ಶ್ರಾವಣ ಮಾಸದಲ್ಲಿ ನಿತ್ಯ ದೇವಿ ಪಾರಾಯಣ ಪೂಜೆ, ಶುಕ್ರವಾರ ಮತ್ತು ಮಂಗಳವಾರ ಉತ್ಸವ ಮೂರ್ತಿಯ ಪ್ರದಕ್ಷಿಣಾ ಸವಾರಿ, ಗೌರಿ ಮತ್ತು ಗಣೇಶ ಚತುರ್ಥಿಯಂದು ವಿಶೇಷ ಅಲಂಕಾರ ಪೂಜೆ, ನವರಾತ್ರಿಯಲ್ಲಿ ನಿತ್ಯವೂ ಪಂಚಾಮೃತ ಅಭಿಷೇಕ, ಸಹಸ್ರನಾಮ ಪೂಜೆ, ಸಪ್ತಶತೀ ಪಾರಾಯಣ ಚಂಡಿಕಾ ಹವನ ನಡೆಸಲಾಗುತ್ತದೆ. ವಿಜಯ ದಶಮಿಯಂದು ಪಲ್ಲಕ್ಕಿ ಉತ್ಸವ ಮಹಾ ಪ್ರಸಾದ ವಿತರಣೆ ನಡೆಯುತ್ತದೆ. ದೀಪಾವಳಿಯಲ್ಲಿ ಮೂರು ದಿನಗಳ ಕಾಲ ವಿಶೇಷ ಉತ್ಸವ,ಅಲಂಕಾರ ಸಹಿತ ಮಹಾಪೂಜೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ಸಾಲಂಕೃತ ದೀಪೋತ್ಸವ ಮಹಾ ನೈವೇದ್ಯ ಸಲ್ಲುತ್ತದೆ. ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬದಂದು ದೇವರಿಗೆ ಪಲ್ಲಕ್ಕಿ ಉತ್ಸವ, ಮಹಾ ಪೂಜೆ ನಡೆಸಲಾಗುತ್ತದೆ. ಆದಿನ ದೇವರ ದರ್ಶನಕ್ಕೆ ಭಕ್ತರ ದಂಡೇ ಸೇರುತ್ತದೆ.

ಪ್ರತಿವರ್ಷ ಮಾಘ ಶುದ್ಧ ಪ್ರತಿಪದೆಯಿಂದ ಬಿಗೆಯ ವರೆಗೆ ಎರಡು ದಿನಗಳ ಕಾಲ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ವೈಭವದಿಂದ ನಡೆಯುತ್ತದೆ. ಆದಿನ ಶತ ಚಂಡಿಕಾ ಹವನ, ದುರ್ಗಾ ಸಪ್ತಶತೀ ಪಾರಾಯಣ, ಪ್ರದಕ್ಷಿಣಾ ಬಲಿ, ಪಲ್ಲಕ್ಕಿ ಉತ್ಸವ ಸಂಜೆ ಸಂಗೀತ, ಭರತನಾಟ್ಯ ಇತ್ಯಾದಿ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗುತ್ತವೆ.

ದೇವರ ಧ್ಯಾನದಿಂದ ಸಂಕಷ್ಟ ಪರಿಹಾರ

ಇಲ್ಲಿನ ಪ್ರಧಾನ ಅರ್ಚಕರಾದ ದುರ್ಗಪ್ಪನವರು ಸದಾ ದೇವರ ಧ್ಯಾನದಲ್ಲಿ ತೊಡಗಿರುತ್ತಾರೆ. ಇವರು ಜಾತಕ, ಕವಡೆ, ಅಕ್ಷತೆ ಕಾಳುಗಳ ಮೂಲಕ ಭೂತ ಭವಿಷ್ಯಗಳ ವಿಶ್ಲೇಷಣೆ ನಡೆಸುತ್ತಾರೆ. ಹಲವು ಸಮಸ್ಯೆಗಳಿಂದ ಬಳಲುತ್ತಿರುವವವರು ಇಲ್ಲಿಗೆ ಆಗಮಿಸಿ ಪರಿಹಾರ ಕೇಳುತ್ತಾರೆ. ದೇವರನ್ನು ಧ್ಯಾನಿಸುತ್ತಾ ದುರ್ಗಪ್ಪನವರು ಸಂಕಷ್ಟಗಳ ಬಗ್ಗೆ ಪರಿಹಾರ ಹೇಳುತ್ತಾರೆ. ಬಾಲಾರಿಷ್ಟ ದೋಷಕ್ಕೆ ತಾಯಿತ ಇತ್ಯಾದಿಗಳನ್ನು ನೀಡಿ ಉತ್ತಮ ಪರಿಹಾರ ನೀಡಲಾಗುತ್ತಿದೆ.ತಾಯಿಯ ಆಶೀರ್ವಾದ ಪಡೆದು ಜನರು ನೆಮ್ಮದಿಯಿಂದ ಹಿಂತಿರುಗುವುದು ನಿತ್ಯದ ದೃಶ್ಯವಾಗಿದೆ. ವಿದ್ಯೆ, ನೌಕರಿ, ವ್ಯಾಪಾರ ವ್ಯವಹಾರ, ಕುಟುಂಬ ಕಲಹ, ಮಾನಸಿಕ ಶಾಂತಿ, ಕೃಷಿ ಮತ್ತು ಗೋ ಸಂಪತ್ತಿನ ಹೆಚ್ಚಳ ,ಶತ್ರು ಭಯ ನಾಶ ಇತ್ಯಾದಿಗಳಿಗಾಗಿ ಜನ ಈ ದೇವರಿಗೆ ಹರಕೆ ಹೊರುತ್ತಾರೆ.ಬಗೆ ಬಗೆಯ ಆಭರಣಗಳನ್ನು ಅರ್ಪಿಸುತ್ತಾರೆ. ಹೋಮಗಳನ್ನು ನಡೆಸುತ್ತಾರೆ. ಹೀಗೆ ನಿತ್ಯವೂ ಈ ದೇಗುಲದಲ್ಲಿ ಭಕ್ತರ ಗುಂಪೇ ನೆರೆದಿರುತ್ತದೆ.