ಬೊಗಸೆಯಲ್ಲಿ ಮಳೆ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೊಗಸೆಯಲ್ಲಿ ಮಳೆ
ಲೇಖಕರುಜಯಂತ ಕಾಯ್ಕಿಣಿ
ಮುಖಪುಟ ಕಲಾವಿದವಿಕ್ಟೋರಿಯಾ ಟರ್ಮಿನಸ್ ಚಿತ್ರ (ರೂಪಣೆ : ಅಪಾರ)
ದೇಶಭಾರತ
ಭಾಷೆಕನ್ನಡ
ಪ್ರಕಾರಅಂಕಣ ಬರಹಗಳು
ಪ್ರಕಾಶಕರುಅಂಕಿತ ಪುಸ್ತಕ, ಬೆಂಗಳೂರು
ಪ್ರಕಟವಾದ ದಿನಾಂಕ
೨೦೦೧
ಮಾಧ್ಯಮ ಪ್ರಕಾರಪೇಪರ್ ಬ್ಯಾಕ್
ಪುಟಗಳು೩೧೨

ಬೊಗಸೆಯಲ್ಲಿ ಮಳೆ[೧] ಕನ್ನಡ ಭಾಷೆಯ ಖ್ಯಾತ ಕವಿ,ಕತೆಗಾರ,ಚಿತ್ರ ಸಾಹಿತಿ, ನಾಟಕಕಾರ ಲೇಖಕ ಜಯಂತ ಕಾಯ್ಕಿಣಿ ಯವರ ೨೦೦೧ ರಲ್ಲಿ ಪ್ರಕಟವಾದ ಅಂಕಣ ಬರಹಗಳ ಒಟ್ಟು ಸಂಗ್ರಹದ ಪುಸ್ತಕ ರೂಪದಲ್ಲಿ ಪ್ರಕಟವಾದ ಕೃತಿ.

ಒಳ ಪುಟಗಳಲ್ಲಿ[ಬದಲಾಯಿಸಿ]

೯೧ ಅಧ್ಯಾಯಗಳಲ್ಲಿ ಮೂಡಿ ಬಂದಿರುವ ಬೊಗಸೆಯಲ್ಲಿ ಮಳೆ ಪುಸ್ತಕದಲ್ಲಿ ಜಯಂತ ಕಾಯ್ಕಿಣಿಯವರ ಹಲವು ವರ್ಷಗಳ ಅಲೆಮಾರಿತನದ ಅನುಭವಗಳು ಸೃಜನಶೀಲ ಬಿಂದುಗಳಾಗಿ ಪ್ರತಿಫಲನಗೊಂಡಿವೆ. ಬಹುತೇಕ ಅಧ್ಯಾಯಗಳಲ್ಲಿ ಉತ್ತರ ಕನ್ನಡದ ಅದರಲ್ಲೂ ಗೋಕರ್ಣದ ಜೊತೆಗಿನ ಆಪ್ತತೆ, ದರ್ಶನ, ತತ್ಪರತೆ ತುಡಿತಗಳ ರೂಪವಾಗಿ ರೂಪಗೊಂಡಿವೆ. ಒಂದು ಕಾಲಕ್ಕೆ ಅವರ ಕಾಯಕ ಭೂಮಿಯಾದ ಮುಂಬಯಿ ನಗರದ ಮೇಲಿನ ಅಪ್ಪಟ ಪ್ರೀತಿ ಮತ್ತು ಅಲ್ಲಿನ ಜೀವಯಾನದ ಯಥಾಸ್ಥಿತಿಯನ್ನು ಗತ್ಯಂತರವಿಲ್ಲದೇ ಒಪ್ಪಿಕೊಳ್ಳಬೇಕಾದ ಸಕಾರಾತ್ಮಕ ಅನಿವಾರ್ಯತೆ, ಸಾಮಾಜಿಕ, ನಗರಕೇಂದ್ರಿತ ಸೂಕ್ಷ್ಮಗಳು, ಕ್ರೂರ ಹೃದಯಹೀನ ಶಹರುಗಳ ತಲ್ಲಣಗಳು ಸೂಚ್ಯವಾಗಿ ಇಲ್ಲಿನ ಶಬ್ದಚಿತ್ರಗಳಲ್ಲಿ ಅನಾವರಣಗೊಂಡಿವೆ.

ಮುಂಬಯಿ ಬದುಕಿನ ಆಧುನಿಕ ತಲ್ಲಣಗಳ ವಿಶ್ವರೂಪವನ್ನು ಅನಾವರಣಗೊಳಿಸುತ್ತಲೇ, ಮತ್ತೊಂದರಲ್ಲಿ ಗೋಕರ್ಣದ ಹಾಲ್ಟಿಂಗ್ ಬಸ್ಸಿನ ದೀಪಾವಳಿಯ ವೈಭವವನ್ನು ಲೇಖಕರು ದಾಖಲಿಸುತ್ತಾರೆ.

ಕೃತಿಯ ವಿಶೇಷತೆ[ಬದಲಾಯಿಸಿ]

"ಬೊಗಸೆಯಲ್ಲಿ ಮಳೆ"ಯ ಹಲವಾರು ವೈಶಿಷ್ಟ್ಯಗಳಲ್ಲಿ ನಿರೂಪಣೆಯದು ಪ್ರಮುಖ ಪಾತ್ರ. ಸಣ್ಣ ಸೂಕ್ಷ್ಮ ವಿಷಯಗಳನ್ನಿಟ್ಟುಕೊಂಡು ಅದಕ್ಕೊಂದು ವಿಶಾಲ ಸಾಧ್ಯತೆಯನ್ನು ಕಲ್ಪಿಸಿ ಹೊಸ ಆಶಯವನ್ನು, ಕಲ್ಪನೆಯನ್ನು, ವಿಸ್ತಾರವನ್ನು ಕೊಡುತ್ತ ಆಸಕ್ತಿದಾಯಕ ನಿಲುವಿನಲ್ಲಿ ಭಾಷೆಯನ್ನು ದುಡಿಸಿಕೊಂಡು ವಿವರಣಾತ್ಮಕ ನೆಲೆಗೆ ಕೊಂಡೊಯ್ದು ಅದರಲ್ಲೊಂದು ಅನುಭವ ಪ್ರಜ್ಞೆಯನ್ನು ಜಾಗೃತಗೊಳಿಸುವ, ಆವರಣವನ್ನು ಕಟ್ಟುವ ಪ್ರಕ್ರಿಯೆ ಜಯಂತ ಕಾಯ್ಕಿಣಿಯವರ ಬರಹದ ವಿಶೇಷತೆ.

ಅಯ್ದ ಪುಟಗಳಿಂದ[ಬದಲಾಯಿಸಿ]

ಬಟವಡೆಯಾಗದೇ ಮರಳಿದ ಪತ್ರಗಳು ಮರಣದಂಡನೆಗೆ ಕಾದವರಂತೆ ಪ್ರಧಾನ ಅಂಚೆಕಛೇರಿಯಲ್ಲಿ ಕೂತಿವೆ. ಊರ ಚೌಕಗಳ ಪ್ರತಿಮೆ ಪುತ್ಥಳಿಗಳೆಲ್ಲ ನಿಂತಲ್ಲೇ ತಮ್ಮಷ್ಟಕ್ಕೇ ಏನೋ ಮಾತಾಡುತ್ತಿವೆ. ಕಾಮಾಟಿಪುರದ ಹತ್ತನೇ ಪಂಜರದಲ್ಲಿ ಹೆರಿಗೆ ಆಗಿದೆ. ಹೆಣ್ಣು ಹುಟ್ಟಿದೆ ಎಂದು ಎಲ್ಲಾ ಕುಣಿದಾಡುತ್ತಿದ್ದಾರೆ.ಗಿರಾಕಿಗಳಿಗೂ ಪೇಡೆ ಹಂಚಿದ್ದಾರೆ. ಪಂಜರದ ಪರದೆಗಳು ಸಹಸ್ರ ವರ್ಷಗಳಿಂದ ಹಾಗೇ ತೂಗಿವೆ. ನಿರೋಧದ ಪೊಟ್ಟಣಗಳನ್ನು ಹೂವಿನಂತೆ ಕೈಲಿಹಿಡಿದು, ಪುಟ್ಟಮಕ್ಕಳು ಮಾರಲೆಂದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ಮಕ್ಕಳಿಗೆಂದೇ ರಾತ್ರಿ ತೆರೆವ ಶಿಶುವಿಹಾರದಲ್ಲಿ ಗೊಂಬೆಗಳು ಕಣ್ತೆರೆದು ಮಲಗಿವೆ. ನಗರದ ಜೀವಿಗಳಿಗೆ ಇನ್ನೇನು ಕಣ್ಣು ಹಿಡಿಯುವ ಹೊತ್ತು, ಮೂಡಣದಲ್ಲಿ ಒಂದು ಬಾಂಬು ಸದ್ದಿಲ್ಲದೇ ಸ್ಪೋಟಗೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಅವಧಿಮಾಗ್. ಜಯಂತ ಕಾಯ್ಕಿಣಿ ಮತ್ತು ’ಬೊಗಸೆಯಲ್ಲಿ ಮಳೆ’user2 | March 20, 2014