ಬೆಳೆಗೆರೆ ಕೃಷ್ಣ ಶಾಸ್ತ್ರಿ
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು
ಸುಮಾರು ಒಂದ ದಶಕದ ಹಿಂದೆ ನಿವೃತ್ತನಾಗಿಚಿತ್ರದುರ್ಗದಲ್ಲಿ ಮಗನ ಜೊತೆ ಇದ್ದೆ. ಒಂದು ದಿನ ಬೆಳಗ್ಗೆ ಬಿಳಿ ಜುಬ್ಬತೊಟ್ಟ ಬಿಳಿ ಧೋತರ ಉಟ್ಟ, ತಲೆಗೆ ಬಿಳಿ ಟವೆಲ್ ಸುತ್ತಿಕೊಂಡ ಗಾಂಧೀಜಿಯಂತೆ ಮುಖವೆಲ್ಲ ಮುಗುಳು ನಗೆಯಾದ ಹಲ್ಲಿಲ್ಲದ ಬಾಯಿಯ ,ಕೋಲು ಮುಖದ ಹಿರಿಯರೊಬ್ಬರು ಆಕಾಶವಾಣಿಯ ಬೇಂದ್ರೆ ಮಂಜುನಾಥರ ಜೊತೆಗೆ ಮನೆಗೆ ಬಂದರು. ಕುಳಿತಿದ್ದ ಮಗ ಧಡಕ್ಕನೆ ಎದ್ದು ಅವರಿಗೆ ಕೈ ಮುಗಿದ.,"ಬೆಳೆಗೆರ ಶಾಸ್ತ್ರಿಗಳು ಬರಬೇಕು, ಬರಬೇಕು “ ಎಂದು ಸ್ವಾಗತಿಸಿದ, ಯಾವುದೇ ಬಿಂಕ ಬಿಗುಮಾನ ಇಲ್ಲದೆ ಒಳ ಬಂದು ಕುಳಿತರು. ಹೊಸದಾಗಿ ಬಂದಿರುವಿರಂತೆ ಹೇಗಿದೆ ಜೀವನ ಎಂದು ಉಭಯ ಕುಶಲೋಪರಿ ವಿಚಾರಿಸಿದರು. “ಹಿಂದೂ ಪತ್ರಿಕೆಗೆ ಹೊಸದಾಗಿ ಜಿಲ್ಲಾವರದಿಗಾರರಾಗಿ ಬಂದಿರುವವರಿಗೆ ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿ ಇದೆ. ನಿಮ್ಮನ್ನು ನೋಡ ಬೇಕು ಎಂದರು, ಹಾಗಾದರೆಗ ಸರಿ , ನಾವೇ ಹೋಗೋಣ ಎಂದು ಬಂದೆ" ಎಂದರು. ಸಾಹಿತ್ಯ , ಜೀವನ, ಶಿಕ್ಷಣ ಎಲ್ಲದರ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅವರ ಮಾತಿನ ವ್ಯಾಪ್ತಿಯಲ್ಲಿ ಗಾಧೀಜಿಯವರ ಕೊನೆಯಕ್ಷಣ, ಇಂದಿರಾ ಗಾಂಧಿಯವರ ಕಾಲದ ತುರ್ತು ಪರಿಸ್ಥಿತಿ, ಮಾಸ್ತಿಯವರ ಮೃದುತ್ವ , ಭೈರಪ್ಪನವರ ಅಧ್ಯಯನದ ಹರುವು, ಜಿಡ್ಡು ಕೃಷ್ಣ ಮೂರ್ತಿಯವರ ಜೀವನ ದರ್ಶನ, ಹಲವು ವಿಷಯಗಳು ಓತ ಪ್ರೋತವಾಗಿ ಬಂದವು. ಸುಮಾರು ಒಂದೂವರೆ ತಾಸು ಮಾತನಾಡುವ ವಿಶ್ವ ಕೋಶದ ಮುಂದೆ ಕುಳಿತಂತೆ ಅನಿಸಿತು. ನಮ್ಮ ಮನೆಯಾಕೆ ನೀಡಿದ ತಿಂಡಿ ಬೇಡ ಕಣಮ್ಮ ,ನಾನು ಒಂದೆ ಸಲ ಮಧ್ಯಾಹ್ನ ಊಟ ಮಾಡುವೆ. ವಯಸ್ಸಾಯಿತು, ಮಿತ ಆಹಾರ ಒಳ್ಳೆಯದು,ಎಂದು ಒಂದು ಲೋಟ ಹಾಲು ಮಾತ್ರ ಕುಡಿದರು. ಅವರು ನಮ್ಮ ಜಿಲ್ಲೆ ಬಳ್ಳಾರಿಯ ರವಿಬೆಳಗೆರೆಯವರ ಸೋದರಮಾವನೆಂದು ತಿಳಿದು ಇನ್ನೂ ಹತ್ತಿರವೆನಿಸಿತು. ನಾನು ನಿವೃತ್ತ ಪ್ರಾಂಶುಪಾಲನೆಂದು ಗೊತ್ತಾಗಿ ಒಂದು ಸಲ ನಮ್ಮ ಹಳ್ಳಿಯ ಶಾಲೆ ನೋಡಲು ಬನ್ನಿ ಎಂದು ಆಮಂತ್ರಣ ನೀಡಿದರು.ತಾವಾಗಿಯೇ ಬಂದು ಬಾಯ್ತುಂಬ ಮಾತನಾಡಿದ ಹಿರಿಯ ಜೀವದ ಸರಳತೆ ಮನ ಗೆದ್ದಿತು.
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಎಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ ಮಾತು. ಎಲ್ಲರಿಗೂ ಬೇಕು. ಸಾತ್ವಿಕ ಜೀವನದ ಇನ್ನೊಂದು ಹೆಸರು. ಒಂದು ರೀತಿಯಲ್ಲಿ ನಡೆದಾಡುವ ಗಾಂಧಿ. ಅವರು ವಿಶ್ವ ಕುಟುಂಬಿಗಳು. ಜಾತಿಮತಗಳ ಗೋಜು ಇಲ್ಲ . ಹಿರಿಕಿರಿಯರೆಂಬ ಬೇಧವಿಲ್ಲ. ಯಾವುದೇ ಸಾಹಿತ್ಯ ಕಾರ್ಯಕ್ರಮವಿದ್ದರೆ ಹಾಜರು. ಎತ್ತಿದವರ ಕೈ ಕೂಸು.. ಮಾಕಂ ಸೆಟ್ಟರು, ಕಾಳಿಂಗ ಕೃಷ್ಣ, ಬೇಂದ್ರೆ, ಹುಸೆನ್ ಸಾಬ್, ಸಿದ್ದಯ್ಯ ಬರಮಣ್ಣ ಎಲ್ಲರೂ ತನ್ನವರೆ..ತನ್ನದೆನ್ನುವ ಕುಟುಂಬ ಇಲ್ಲ ,ಹೆಂಡತಿ ಮಕ್ಕಳು ಇಲ್ಲ. ಚಳ್ಳಕೆರೆ ಪಟ್ಟಣಕ್ಕೆ ಹತ್ತು ಕಿಲೋಮೀಟರ್ ದೂರದಲ್ಲಿರುವ ನಾರಾಯಪುರ ಮತ್ತು ಬೆಳಗೆರೆ ಮಧ್ಯ ಅವರು ಪ್ರಾರಂಭಿಸಿದ ಶ್ರೀ ಶಾರದಾವಿದ್ಯಾ ಮಂದಿರ ಶಾಲೆ ಮತ್ತು ಅಲ್ಲಿನ ನೂರಾರು ಮಕ್ಕಳ ಯೋಗಕ್ಷೇಮ, ಊಟ ಬಟ್ಟೆ ವಿದ್ಯೆಯ ಹೊಣೆ ಅವರದು. ತಮಗಿರುವ ಆದಾಯದಲ್ಲಿ ಯಾವುದೇ ಸಾಂಸ್ಥಿಕ ಅಥವಾ ಸರ್ಕಾರದ ನೆರವಿಲ್ಲದೆ ವಿದ್ಯಾರ್ಥಿಗಳಗೆ ಜ್ಞಾನ ದಾಸೋಹದ ಜತೆ ಅನ್ನದಾಸೋಹವನ್ನು ಮಾಡುವರು. ಅದಕ್ಕಾಗಿ ಇಳಿ ವಯಸ್ಸಿನಲ್ಲೂ ಕಳಕಳಿ.
ಮುಂದಿನ ವಾರವೇ ಅವರ ಅಭಿಮಾನಿ ಮಾಕಂ ಸೆಟ್ಟರ ಜೊತೆ ಚಳ್ಳಕೆರೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಂದ ಬೆಳೆಗೆರೆಗೆ ಹೋದೆವು . ಊರ ಮುಂದೆಯೆ ಸುಸಜ್ಜಿತವಾದ ಕಟ್ಟಡದಲ್ಲಿ ಅವರ ಶಾಲೆ. ಅದು ಅವರ ದೊಡ್ಡಪ್ಪ ಸಾಹಿತಿ ಕ್ಷೀರಸಾಗರರರ ಹೆಸರಿನ ಕೊಡುಗೆ. ಹತ್ತಿರದಲ್ಲೆ ಅವರ ಪಿತ್ರಾರ್ಜಿತ ಜಮೀನು. ಅಲ್ಲೊಂದು ತೋಟ. ಪುಟ್ಟ ಪೂರಾ ಕೃಷಿಕರ ಪರಿಸರ. ಕಾಂಕ್ರೀಟ್ ಮನೆಯಲ್ಲ.ಗುಡಿಸಿಲಿಗೆ ಹೊಂದಿಕೊಂಡಂತೆ ಪುಟ್ಟ ಹಳ್ಳಿ ಮನೆ. ಹಲಗೆಯ ಮಂಚ ಕಟ್ಟಿಗೆಯ ಕುರ್ಚಿ ಮತ್ತು ಹಲಗೆ ಜೋಡಿಸಿದ ಬೀರುಗಳಲ್ಲಿ ಪುಸ್ತಕಗಳು. ಅದಿಷ್ಟೇ ಅವರ ಆಸ್ತಿ.. ಒಂದು ರೀತಿಯಲ್ಲಿ ಅದು ಪರ್ಣ ಕುಟೀರ. ಅವರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳಲು ಇರುವ ಹಳ್ಳಿಯ ಯುವತಿಯನ್ನು ಮಗಳೆ, ಎಂದು ಕರೆದು ಅತಿಥಿಗಳು ಬಂದಿರುವರು, ಎಂದರು. ಹೋದ ತುಸು ಹೊತ್ತಿನಲ್ಲಿಯೇ ಬಿಸಿಬಿಸಿ ಉಪ್ಪಿಟ್ಟು ಬಂದಿತು. ಕಾಫಿಯ ಮಾತು ಇಲ್ಲ. ಪ್ರಕೃತಿಯ ಮಡಿಲಲ್ಲಿ ಇರುವ ಆ ಸರಳವ್ಯಕ್ತಿಯ ಹಿರಿಮೆ ಹೇಳ ತೀರದು. ಎಂಥೆಂಥ ಉದ್ದಾಮ ಸಾಹಿತಿಗಳು ಬಂದು ಅಲ್ಲಿ ತಂಗುವರು. ಅವರ ಜೊತೆ ಚರ್ಚೆಮಾಡಿರುವರು . ವಿದೇಶಿ ಸ್ವಯಂ ಸೇವಕರು ಸಮಾಜ ಸೇವೆಯ ಪಾಠಕಲಿಯಲು ಅಲ್ಲಿಗೆ ಬರುವುದು ಸಾಮಾನ್ಯ. ಅವರ ಇಂಗ್ಲಿಷ್ ಭಾಷೆಯ ಪ್ರಭುತ್ವವೂ ಅಚ್ಚರಿ ಮೂಡಿಸಿತು. ಎಲ್ಲ ಸ್ವಅಧ್ಯಯನದ ಫಲ .ಯಾರು ಬಂದರು ಅದೇ ರಾಗಿಮುದ್ದೆ ಅವರು ಕೈಯಾರೆ ಬೆಳೆದ ತರಕಾರಿ ಸಾರು. ನಾವು ಹೋದಾಗಲೇ ಒಬ್ಬ ವಿದೇಶಿಯರೂ ಬಂದಿದ್ದರು. ನಮ್ಮಿಬ್ಬರನ್ನು ತಮ್ಮ ಶಾಲೆಗೆ ಕೆರದುಕೊಂಡುಹೋಗಿ ಅಲ್ಲಿನ ಧ್ಯಾನ ಮಂದಿರ, ವ್ಯಾಯಾಮಶಾಲೆ ತೋರಿಸಿದರು. ಸಂಜೆ ಮಕ್ಕಳ ಸಭೆ ಸೇರಿಸಿ ಎರಡು ಮಾತನಾಡಿ ಎಂದರು. ಬಂದವರು ಇಂಗ್ಲಿಷ್ ನಲ್ಲಿ ಮಾಡಿದ ಭಾಷಣ ನಾನು ಅನುವಾದಿಸ ಬೇಕಾಯಿತು.. ಹಳ್ಳಿಯ ಮಕ್ಕಳಿಗೆ ಅವರ ಭಾಷೆಯ ಶೈಲಿಯನ್ನು ಅನುಸರಿಸುವುದು ಕಷ್ಟಕರವಾಗಿತ್ತು. ಅವರು ಬರಿ ಅಕ್ಷರ ವಿದ್ಯ ಕಲಿತರೆ ಸಾಲದು.ಹೊಸದಕ್ಕೆತೆರೆದುಕೊಳ್ಳ ಬೇಕು ಎಂದು ಅವರ ನಂಬಿಕೆ.ಅವರಿಗೆ “ Spoken English” ಕಲಿಸಲು ಕೋರಿದರು. ನನಗೂ ಆಸಕ್ತಿ ಇತ್ತು. ಆದರೆ ಅಲ್ಲಿಗೆ ಹೋಗಿ ಇರಲಾಗಲಿಲ್ಲ. ಶಾಲೆ ಸುಸಜ್ಜಿತವಾಗಿತ್ತು ಪರಿಸರ ಸ್ವಚ್ಛವಾಗಿತ್ತು. ಅಲ್ಲಿನ ಹೂ ಹಣ್ಣುಗಳ ಗಿಡಗಳು ಮಕ್ಕಳ ಆಸಕ್ತಿಯ ಕಥೆ ಹೇಳುತಿದ್ದವು.ಮಕ್ಕಳಿಗೆ ಯೋಗ, ಧ್ಯಾನ,ಕೃಷಿ , ಹೈನುಗಾರಿಕೆ ಕಲಿಕೆಯ ಒಂದು ಭಾಗ.ಜೊತೆಗೆ ವೃತ್ತಿ ಶಿಕ್ಷಣವೂ ಇದೆ.ಅವರದು ನೂರಾರು ಸದಸ್ಯರು ಇರುವ ದೊಡ್ಡ ಕುಟುಂಬವಾಗಿತ್ತು. ಊರಲ್ಲಿ ಇರುವಾಗ ಮನೆಯ ಹಿರಿಯನಂತೆ ಮಕ್ಕಳ ಜತೆ ಕುಳಿತು ಸಹ ಭೋಜನ.ಅಡುಗೆ ಮನೆಯೂ ಬಹಳ ಅಚ್ಚು ಕಟ್ಟು.ಸರತಿಯ ಮೇಲೆ ಅಡುಗೆಯವರಿಗೆ ಮಕ್ಕಳ ಸಹಾಯ.. ಕೈಗೊಂದು ಕಾಲಿಗೊಂದು ಆಳಿನ ಪ್ರಶ್ನೆಯೇ ಇಲ್ಲ.. ಎಲ್ಲದರಲ್ಲೂ ಸ್ವಾವಲಂಬನೆ.
ಶಾಸ್ತ್ರಿಗಳದು ಅಲೆಮಾರಿ ಜೀವನ. ಇಂದು ದುರ್ಗ ನಾಳೆ ಬೆಂಗಳೂರು. ಮುಂದಿನ ವಾರ ಮೈಸೂರು.. ಯಾವ ಊರಿಗೆ ಹೋದರೂ ಆತ್ಮೀಯ ಸ್ವಾಗತ. ಎಲ್ಲ ಹಿರಿಯ ಸಾಹಿತಿಗಳೂ ಅವರ ಆತ್ಮೀಯರು. ಗಾಂಧೀಜಿಯಿಂದ ಹಿಡಿದು ಬುಡನ್ಸಾಬಿಯವರೆಗ ಒಂದೆ ರೀತಿಯ ಆತ್ಮೀಯ ಒಡನಾಟ.ಅವರಿಗೆ ಮಕ್ಕಳಲ್ಲೂ ಅಷ್ಟೆ ಸಲಿಗೆ.ಅವರು ಬಂದರೆ ತಾತನನ್ನು ಕಂಡ ಮೊಮ್ಮಕ್ಕಳಿಗೆ ಆಗುವಷ್ಟು ಸಂತೋಷ ಮಕ್ಕಳಿಗೆ. ಅವರು ಇತ್ತೀಚಿನವರೆಗೂ ಇಂಗ್ಲಿಷ್ ಪಾಠ ಮಾಡುತಿದ್ದರೆಂಬುದು ಅವರ ಕಾಯಕದ ನಿಷ್ಠೆಯನ್ನು ತೋರುವುದು.
ಊರಿನಲ್ಲಿ ಇರುವಾಗ ಬೆಳಗ್ಗೆ ತೋಟದ ಕೆಲಸವೇ ಅವರಿಗೆ ಆದ್ಯತೆ. ನಂತರ ಶಾಲೆಗೆ ಹೊರಡುವರು. ಶಾಲೆಯಲ್ಲಿ ಅಲ್ಲಿನ ಜವಾನನಿಂದ ಹಿಡಿದು ಪ್ರಾಂಶುಪಾಲರವರೆಗೆ ಎಲ್ಲರ ಕಷ್ಟ ಸುಖಗಳ ವಿಚಾರಣೆ. ಇನ್ನು ಮಕ್ಕಳಿಗಂತೂ ಇನ್ನಿಲ್ಲದ ಅಕ್ಕರೆ. ಅಗತ್ಯವಿದ್ದವರಿಗೆ ವಸತಿ ಸೌಲಭ್ಯ. ಸುಸಜ್ಜಿತವಾದ ಕೊಠಡಿಗಳು, ಅಡಿಗೆ ಮನೆಗೆ ಗೋಬರ್ ಗ್ಯಾಸ್, ಅದಕ್ಕೆ ಸೆಗಣಿ ಒದಗಿಸಲು ನಾಲ್ಕಾರು ದನಗಳು. ಅವುಗಳ ಯೊಗಕ್ಷೇಮ ಮಕ್ಕಳದು. ಅದರ ಉತ್ಪನ್ನಗಳಾದ ಹಾಲು ಮೊಸರು ಮಕ್ಕಳಿಗೆ . ಗುಲ್ಬರ್ಗಾ ರಾಯಚೂರಿನ ದೂರದೂರಿನವರು ಇದ್ದಾರೆ. ಅವರಿಗೆ ಬರಿ ಪುಸ್ತಕದ ವಿದ್ಯೆ ಮಾತ್ರವಲ್ಲ ಕೈ ಕೆಲಸ ಕಲಿಯುವ ಅ ವಕಾಶ. ಅವರು ತಿನ್ನುವುದು ಅವರೇ ಬೆಳೆದ ತರಕಾರಿ.ಅಲ್ಲಿ ಜಾತಿ ಮತ ಬೇಧವಿಲ್ಲ. ಯಾವ ಊರು ಎಂದು ಕೇಳುವುದಿಲ್ಲ. ಅವರಿಗೆ ಸೇರಲು ಇರುವ ಅರ್ಹತೆ ಎಂದರೆ ಬಡತನ ಮತ್ತು ಓದುವ ಹಂಬಲ.. ಇನ್ನು ಉಳಿದ ಯಾವ ಅಂಶಗಳೂ ಲೆಕ್ಕಕ್ಕೆ ಇಲ್ಲ. ಅಲ್ಲಿ ಕೆಲಸಮಾಡುವವರೂ ಅವರಿಂದ ಸ್ಪೂರ್ತಿ ಪಡೆದು ಸೇವಾ ದೀಕ್ಷೆ ತೊಟ್ಟವರೆ. ಬರಿ ಸಂಬಳಕ್ಕಾಗಿ ದುಡಿಯುವವರಲ್ಲ. ಶಾಲೆ ನೋಡಿ ಬಹಳ ಖುಷಿಯಾಯಿತು ನನ್ನದೂ ಕಿರು ಕಾಣಿಕೆ ಇರಲಿ ಎಂದು ತುಸು ಹಣ ಕೊಟ್ಟು ಬಂದೆ.ಮುಂದಿನ ಭಾನುವಾರವೇ ಅವರ ಶಾಲೆಯ ಶಿಕ್ಷಕರೊಬ್ಬರು ಖುದ್ಧು ಮನೆಗೆ ಬಂದು ರಸೀತಿ ಮತ್ತು ಅವರ ಸ್ವಹಸ್ತಲಿಖಿತ ಕೃತಜ್ಞತಾಪತ್ರ ನೀಡಿ ಹೋದರು. ನಾವು ಅಲ್ಲಿರುವ ತನಕ ಕಾರ್ಯಕ್ರಮಗಳ ಮಾಹಿತಿ ಬರುತಿತ್ತು..ಅಷ್ಟು ನಿಖರ ಅವರ ಹಣಕಾಸಿನ. ವ್ಯವಹಾರ. ಕೃಷ್ಣ ಶಾಸ್ತ್ರಿಗಳು ೧೯೧೬, ಮೇ೨೨ ರಂದು ಜನಿಸಿದರು. ಬೆಳಗೆರೆಯಲ್ಲಿ ತಂದೆ ಚಂದ್ರಶೇಖರ ಶಾಸ್ತ್ರಿ ಕಂಚಿಯಲ್ಲಿ ಅಧ್ಯಯನ ಮಾಡಿದವರು. ನಂತರ ಜಾನಪದಕ್ಕೆ ಮಾರುಹೋಗಿ ಆ ರಂಗದಲ್ಲಿ ಸಾಧನೆ ಗೈದರು. ಆಶುಕವಿತೆ ರಚಿಸುವರು. ಸಾಹಿತ್ಯಾರಾಧಕರು. ಸ್ವತಃ ಬರಹಗಾರರು. ಬೇಂದ್ರೆ, ಮಾಸ್ತಿ, ಡಿವಿಜಿ, ವಿಸೀಯರಿಗೆ ನಿಕಟವಾಗಿದ್ದವರು. ಅದೇ ಸಂಪರ್ಕ ಮಗನಿಗೂ ಮುಂದುವರಿಯಿತು ಸಾಹಿತ್ಯಾಸಕ್ತಿ ಕುದುರಿತು.ಶಾಸ್ತ್ರಿಗಳ ತಾಯಿ ಅನ್ನ ಪೂರ್ಣಮ್ಮ.ಸುಸಂಸ್ಕೃತೆ .ದೈವ ಭಕ್ತೆ. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ ನಂತರ ಮೈಸೂರಲ್ಲಿ ಶಿಕ್ಷಕ ತರಬೇತಿ. ಸ್ವಅಧ್ಯಯನವಂತೂ ಜೀವನದ ಉದ್ದಕ್ಕೂ ನಡೆದೇ ಇತ್ತು.
ಹರೆಯದಲ್ಲಿ ಗಾಂಧೀಜಿಯವರ ತತ್ವಗಳಿಂದ ಆಕರ್ಷಿತರಾಗಿ ಚಳುವಳಿ ಸೇರಿದರು. ಸಬರಮತಿ ಆಶ್ರಮದಲ್ಲಿ ಕೆಲಕಾಲ ಇದ್ದು ಬಂದರು.ಚಳುವಳಿ ಮಾಡಿ ಜೈಲು ಸೇರಿದರು. ಅಂದಿನಿಂದ ಅಪ್ಪಟ ಖಾದಿಧಾರಿ ಜತೆಗೆ ಗಾಂಧಿತತ್ವ ಪಾಲಕ. ನಂತರ ವಿನೋಬಾಜಿಯವರೊಂದಿಗೆ ಒಡನಾಟ. ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರು. ಸರಕಾರಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಮದುವೆಯೂ ಆಯಿತು. ಒಂದು ಗಂಡುಮಗುವೂಆಯಿತು. ಮಗುವು ಚಿಕ್ಕದಿರುವಾಗಲೇ ತಾಯಿ ಮಗು ಇಬ್ಬರೂ ಒಂದೇ ದಿನ ಮೃತರಾದರು. ಇನ್ನೂ ವಯಸ್ಸು ಮೀರಿಲ್ಲ . ಮನೆಯಲ್ಲಿ ಮದುವೆಗೆ ಒತ್ತಾಯ. ಎರಡನೆ ಮದುವೆಗೆ ಹುಡುಗಿಗೆ ಹುಡುಕಾಟ.ಶಾಸ್ತ್ರಿಗಳದು ಒಂದೆ ನಿರ್ಧಾರ. ಮದುವೆ ಬೇಡ. ಸಂಸಾರ ಸುಖ ಸಾಕು ಅನಿಸಿತ್ತು. ಒಂದು ದಿನ ಊರಿನಿಂದ ಈ ಸಂಜೆ ಹೆಣ್ಣು ತೋರಿಸಲು ಬರುತ್ತಾರೆ ನೀನು ಊರಿಗೆ ಬರಲೇ ಬೇಕು ಎಂದು ಒತ್ತಾಯಿಸಿ ಕಾಗದ ಬಂತು. ಸರಿ ಊರಿಗೆ ಹೋದರು . “ಏಕೆ ಕಿಟ್ಟಣ್ಣ ಮುಖ ಮುಚ್ಚಿಕೊಂಡಿರುವೆ ,?” ಎಂದಾಗ ಬಾಯಿಗೆ ಅಡ್ಡ ಹಿಡಿದ ಟವಲ್ತೆಗೆದು ನಕ್ಕರು. ಮನೆಯವರು ಇವರ ಹಲ್ಲಿಲ್ಲದ ಬಾಯಿನೋಡಿ ಗಾಬರಿಯಾದರು. ಶಾಸ್ತ್ರಿಗಳು ವೈದ್ಯರಲ್ಲಿಗೆ ಹೋಗಿ ಎಲ್ಲ ಹಲ್ಲು ಕಿತ್ತಿಸಿಕೊಂಡು ಬಂದಿದ್ದರು. ಮದುವೆ ಮಾತು ಅಲ್ಲಿಗೆ ಮುರಿದು ಬಿತ್ತು.
ಅಂದಿನಿಂದ ಸುಮಾರು ಆರೇಳು ದಶಕಗಳ ಕಾಲ ಹಸುಳೆಯ ನಗು ಅವರದಾಯಿತು.ಅವರಿಗೆ ಶಾಲೆಯೆ ಮನೆ. ವಿದ್ಯಾರ್ಥಿಗಳೇ ಮಕ್ಕಳು.ಗ್ರಾಮಸ್ಥರೆ ಬಂಧುಗಳು ವಿದ್ಯಾದಾನವೇ ಕಾಯಕ. ಸಾಹಿತ್ಯವೇ ಹವ್ಯಾಸ.ತಳಕಿನ ವೆಂಕಣ್ಣಯ್ಯ, ಕ್ಷೀರಸಾಗರ,ತರಾಸು ಅವರ ಬಂಧುಗಳು ಬೇಂದ್ರೆ, ಕಾರಂತ ಕುವೆಂಪು ಮಾಸ್ತಿ, ಡಿವಿಜಿ , ವೀಸಿ, ವೆಂಕಟಾಚಲಯ್ಯ ನಿಟ್ಟೂರು ಶ್ರೀನಿವಾಸರಾಯರು, ಮೊದಲಾದ ಘಟಾನುಘಟಿಗಳ ಸಂಪರ್ಕವಿತ್ತು. ತಮ್ಮ ಊರಿನಲ್ಲಿ ಹಳ್ಳಿಗಾಡಾದರೂ ಸಾಹಿತ್ಯ ಸಮಾರಾಧನೆ ಮಾಡುತಿದ್ದರು. ಹಿರಿಯ ಸಾಹಿತಿಗಳನ್ನು ಕರೆಸಿ ಉಪನ್ಯಾಸ ಮಾಡಿಸುತಿದ್ದರು ಭಾರತದಾದ್ಯಂತ ಸುತ್ತಾಡಿದರು ರಮಣ ಮಹರ್ಷಿಗಳ ಅನುಗ್ರಹಕ್ಕೂ ಪಾತ್ರರು. ಮಿರಾಸಾಬಿಹಳ್ಳಿ,ಹೆಗ್ಗೆರೆ, ಕಡೂರು ಹತ್ತಿರದ ದೇವನೂರು ಹೀಗೆ ಹಲವುಕಡೆ ಸೇವೆ ಸಲ್ಲಿಸಿದರು. ಅವರು ಕೆಲಸ ಮಾಡಿದ ಹಳ್ಳಿಗಳಲ್ಲಿ ಅವರ ಪಾಠ ಮಾಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. , ಆಸ್ಪತ್ರೆ ,ಶಾಲೆಯ ಕಟ್ಟಡ, ವಿದ್ಯಾರ್ಥಿನಿಲಯ ಪಾಠೋಪಕರಣ, ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಿದರು.ತಾವೇ ಹಣ ಹಾಕಿದರು, ಅವರು ಕೊನೆಯ ತನಕ ಬಡ ಮೇಷ್ಟ್ರುಆಗಿಯೇ ಉಳಿದರು. ಅವರು ಮಕ್ಕಳಿಗೆ ಮಾತ್ರ ಮೇಷ್ಟ್ರು ಅಲ್ಲ. ಊರಿನಲ್ಲಿ ಸಾಮಾಜಿಕ ಸುಧಾರಣೆ , ಆರ್ಥಿಕ ಪ್ರಗತಿ ಮತ್ತು ಕೋಮು ಸಾಮರಸ್ಯಕ್ಕೆ ಕಾರಣರಾದರು. ಕಡೂರು ತಾಲೂಕಿನಲ್ಲಂತೂ ಮುಕುಂದ ಸ್ವಾಮಿಗಳ ಸಂಪರ್ಕಕ್ಕೆ ಬಂದಮೇಲೆ ಅವರ ಅಧ್ಯಾತ್ಮದ ಅನುಭವ ದಟ್ಟವಾಯಿತು. ಜೀವನ ಇನ್ನು ಪಕ್ವವಾಯಿತು ಅವರಿಗೆ ಎರಡು ಬಾರಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಬಂದಿತ್ತು. ಅದನ್ನು ನಯವಾಗಿಯೇ ನಿರಾಕರಿಸಿದರು. ಮೂರನೆಯ ಬಾರಿಗೆ ಬಂದಾಗ ತಮ್ಮ ಗುರುಗಳ ಒತ್ತಾಯಕ್ಕೆ ಮಣಿದು೧೯೭೧ ರಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮಾಶಾಸನ ಕೊಡಲು ಮನೆತನಕ ಬಂದರೂ ನಯವಾಗಿ ಬೇಡ ಎಂದರು. ನಾನು ನಮ್ಮಮನೆ ದೇಶ ಉಳಿಸಿಕೊಳ್ಳಲು ಚಳುವಳಿ ಮಾಡಿದೆ. ಅದಕ್ಕೆ ಕೂಲಿ ಪಡೆಯುವುದಿಲ್ಲ ಎಂದರು. ಹುಟ್ಟೂರಿನ ಜನರಿಗೆ ಶಿಕ್ಷಣದ ಸೌಲಭ್ಯವಿಲ್ಲ. ಇದು ಹಳ್ಳಿಗಾಡು, ಏನಾದರೂ ಮಾಡು ಎಂಬ ತಂದೆಯವರ ಮಾತಿನಂತೆ ನಿವೃತ್ತರಾದ ಮೇಲೆ ಅಂದರೆ ೧೯೬೭ ರಲ್ಲಿ ಶಾಲೆ ತೆಗೆದರು. ಅದು ಈಗ ಪದವಿ ಪೂರ್ವ ಹಂತಕ್ಕೆ ಬಂದು ನಿಂತಿದೆ. ಓದಲು ಬರುವ ಮಕ್ಕಳಿಗೆ ಮನೆಯಲ್ಲಿ ಮುದ್ದೆಗೂ ಪರದಾಟ. ಕೂಲಿಗೆ ಹೋದರೆ, ದನ ಮೇಯಿಸಿದರೆ ತುಸುವಾದರೂ ಅನುಕೂಲವಾಗುವುದೆಂದು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು. ಅದಕ್ಕಾಗಿ ವಿದ್ಯಾರ್ಥಿನಿಲಯ ತೆಗೆದರು.ಪ್ರೌಢ ಶಾಲಾಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯವಿದೆ. ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಉಚಿತ ಊಟ ಮತ್ತು ವಸತಿ ಸೌಲಭ್ಯ ಅದು ಪ್ರಾರಂಭವಾಗಿ ನಲವತ್ತು ವರ್ಷವಾದರೂ ಸರಕಾರದ ಅನುದಾನ ಇಲ್ಲ. ಅವರ ನಿವೃತ್ತಿ ವೇತನ, ಜಮೀನಿನ ಆದಾಯ ಮತ್ತು ಅಭಿಮಾನಿಗಳ ನೆರವಿನಿಂದ ಮಕ್ಕಳಿಗೆ ಎಲ್ಲ ಅನುಕೂಲ ಮಾಡಿರುವರು. ಅವರಿಗೆ ತಂದೆಯ ಸಾಹಿತ್ಯಾಭಿರುಚಿಯೂ ಮೈಗೂಡಿತ್ತು ಜೊತೆಗೆ ಉದ್ದಾಮ ಸಾಹಿತಿಗಳ ಸಹವಾಸ. ಹಳ್ಳಿಚಿತ್ರ, ಹಳ್ಳಿ ಮೇಷ್ಟ್ರು, ಮರೆಯಲಾದೀತೆ, ಸಾಹಿತಿಗಳ ಸ್ಮೃತಿ, ಎಲೆಮರೆಯ ಅಲರು ಎಂಬ ಕೃತಿಗಳನ್ನು ರಚಿಸಿದ್ದಾರೆ.ಜೊತೆಗೆ ನಾಲ್ಕು ಅನುವಾದಿತ ಕೃತಿಗಳೂ ಬಂದಿವೆ. ಅವರ ಮುಕುಂದೂರು ಸ್ವಾಮಿಗಳ ಕುರಿತಾದ ಕೃತಿ “ಯೇಗ್ದಾಗೆಲ್ಲಾ ಐತೆ’ ಬಹು ಜನಪ್ರಿಯ ಪುಸ್ತಕ.೧೨ ಮರು ಮುದ್ರಣ ಕಂಡಿದೆ. ಅದು ಹಿಂದಿ ತೆಲುಗು ಮರಾಠಿ ಭಾಷೆಗೂ ಅನುವಾದಗೊಂಡಿದೆ, ಅಲ್ಲದೆ ನಾಟಕ ರೂಪದಲ್ಲೂ ರಂಗ ಮಂದಿರದಲ್ಲಿ ಯಶಸ್ಸು ಪಡೆದಿದೆ.
ಮದುವೆ ಮಕ್ಕಳು ಬೇಡವೆಂದರೂ ಅವರು ಜೀವನ್ಮುಖರು. ಮಮತೆಗೆ ಏನೂ ಕೊರತೆ ಇರಲಿಲ. ತಮ್ಮ ಜಮೀನಿನ ಕೆಲಸಕ್ಕೆ ಬರುತಿದ್ದ ಹುಡುಗಿಯೊಬ್ಬಳು ಅನಾಥಳದಾಗ ಇವರೆ ಆಶ್ರಯ ಕೊಟ್ಟರು. ಅವಳು ಮಗಳೇ ಆದಳು. ಶಿಕ್ಷಣ ಕೊಡಿಸಿ ಮದುವೆ ಮಾಡಿಸಿ ನೆಲೆ ನಿಲ್ಲುವಂತೆ ನೋಡಿಕೊಂಡರು. ಈಗ ಗಂಡ ಹೆಂಡರು ಇಬ್ಬರೂಜಮೀನು ಮನೆ ನೋಡಿಕೊಳ್ಳುತಿದ್ದಾರೆ. ಅವರ ಮಗು ಇವರಿಗೆ ಮುದ್ದಿನ ಮೊಮ್ಮಗು .ತಮ್ಮ ನಂತರವೂ ಸಂಸ್ಥೆಯು ಸಾಂಗವಾಗಿ ನಡೆಯಬೇಕೆಂದು. ಆಸ್ತಿ ಮತ್ತು ಶಾಲೆಯ ಹೊಣೆಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿದರು.. ಅದಕ್ಕೆ ಮೊದಲು ತಮ್ಮೊಡನಿರುವ ಸಾಕು ಮಗಳ ಜೀವನೋಪಾಯದ ವ್ವವಸ್ತೆ ಮಾಡಲು ಮರೆಯಲಿಲ್ಲ. ಅವರ ಜೀವನಕ್ಕೆ ಭದ್ರತೆ ಒದಗಿಸಿದುದು ಅವರ ದೂರದೃಷ್ಠಿಗೆ ಮತ್ತು ಮಮತೆಗೆ ಸಾಕ್ಷಿಯಾಗಿದೆ. ಬೆಳೆಗೆರೆಯ ನೂರಾರು ಮಕ್ಕಳಿಗೆ ದಾರಿದೀಪವಾಗಿ, ಸಂಪರ್ಕ ಬಂದವರಿಗೆ ಸಾಕ್ಷಿಪ್ರಜ್ಞೆಯಾಗಿದ್ದ ಕೃಷ್ಣ ಶಾಸ್ತ್ರಿಗಳು ಇನ್ನಿಲ್ಲ.
ಶತಮಾನದ ಗಡಿಯ ಹತ್ತಿರ ಬಂದು ಸಮಾಜ ಬೆಳಗಿ ಸಾರ್ಥಕ ಬಾಳು ಬಾಳಿದ ಧನ್ಯ ಜೀವ ಶನಿವಾರ, ಮಾರ್ಚ್ ೨೩ ರಂದು ೯೭ ನೇ ವಯಸ್ಸಿನಲ್ಲಿ ಬರಿ ನೆನಪಾಗಿ ಉಳಿಯಿತು. ಗಾಂಧಿ ಯುಗದ ಕೊನೆಯ ಕೊಂಡಿ ಕಳಚಿದೆ.