ಬೀಳಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀಳಗಿ
ಬೀಳಗಿ
town
Population
 (2001)
 • Total೧೫,೪೫೪

ಬೀಳಗಿ ಪಟ್ಟಣವು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಇತಿಹಾಸ[ಬದಲಾಯಿಸಿ]

300-400 ವರ್ಷಗಳ ಹಿಂದಿನ ಕೊಳಗಳು ಮತ್ತು ದೇವಾಲಯಗಳೇ ಊರಿನ ಮುಖ್ಯ ಆಕರ್ಷಣೆಗಳೆನಿಸಿವೆ. ಊರಿನ ಉತ್ತರ ಬಾಗಿಲಿನಿಂದ ಸುಮಾರು 180 ಮೀಟರ್ ದೂರದಲ್ಲಿ ಆರೆತ್ತಿನ ಬಾವಿ ಇದೆ. ಇದರ ಒಳಗಡೆ ಮಹದೇವ ಮಂದಿರವಿದೆ. ಇಲ್ಲಿಯ ಕನ್ನಡ, ಮರಾಠಿ, ಪಾರಸೀ ಮತ್ತು ಸಂಸ್ಕøತ ಶಾಸನಗಳ ಪ್ರಕಾರ ಇದು 1708ರಲ್ಲಿ ನಿರ್ಮಿತವಾದದ್ದೆಂದು ತಿಳಿದು ಬರುತ್ತದೆ. ಗ್ರಾಮದ ದಕ್ಷಿಣದಲ್ಲಿ ಸಿದ್ಧೇಶ್ವರ ದೇವಾಲಯವಿದ್ದು ಅದರ ಮುಂದೆ ಏಕಶಿಲೆಯಲ್ಲಿ ಕಡೆದಿರುವ ಒಂದು ದೀಪಸ್ತಂಭವಿದೆ. ಇದನ್ನು 1589ರಲ್ಲಿ ನಿರ್ಮಿಸಿದ್ದೆಂದು ಇಲ್ಲಿಯ ಒಂದು ಶಾಸನದಲ್ಲಿ ಹೇಳಿದೆ.

ಇಲ್ಲಿ ದೇಸಾಯಿ ಮನೆತನಕ್ಕೆ ಸೇರಿದ ಪುರಾತನ ದೇವಾಲಯಗಳು ಹಾಗೂ ಬಾವಿಗಳಿವೆ. ಕ್ರಿ.ಶ.1605ರಲ್ಲಿ ಖಂಡೇರಾವ್‌ ಪಂಡಿತ ಎಂಬುವವನು ಇಲ್ಲಿನ ರಾಯರ ಬಾವಿಯನ್ನು ನಿರ್ಮಿಸಿದನು. ಬಾವಿಯ ಒಳಭಾಗದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ಮಹಾದೇವ ದೇವಾಲಯವನ್ನು ಕ್ರಿ.ಶ.1708ರಲ್ಲಿ ನಿರ್ಮಿಸಲಾಯಿತು. ಕಲ್ಯಾಣ ಚಾಲುಕ್ಯರು ನಿರ್ಮಿಸಿದ ಸಿದ್ದೇಶ್ವರ ದೇವಾಲಯದ ಗರ್ಭಗೃಹದ ಮೇಲೆ ಕದಂಬ ನಾಗರ ಶಿಖರವಿದೆ. ವಿಶಾಲವಾದ ಒಳ ಪ್ರಾಕಾರದ ಅಕ್ಕಪಕ್ಕದಲ್ಲಿ ಪಾರ್ವತಿ, ವೀರಭದ್ರರ ಚಿಕ್ಕ ದೇವಾಲಯಗಳಿವೆ. ಬಲಭಾಗದಲ್ಲಿ ಹಲವಾರು ಲಿಂಗಗಳ ಚಿಕ್ಕ ದೇವಾಲಯಗಳು, ಲಜ್ಜಾಗೌರಿ ಹಾಗೂ ಇತರೆ ಪುರಾತನ ಶಿಲಾಕೃತಿಗಳಿವೆ. ಇಲ್ಲಿ ಹಸನ್‌ ಡೊಂಗ್ರಿ ದರ್ಗಾ ಮತ್ತು ಹೈದರ್‌ ಖಾನ್‌ ನಿರ್ಮಿಸಿದ ಬಾವಿ ಇದೆ.

ಕುಂದರಗಿ: ಕಂಬಳಿ ತಯಾರಿಕೆಗೆ ಪ್ರಸಿದ್ಧಿಯನ್ನು ಪಡೆದ ಈ ಗ್ರಾಮವು ಘಟಪ್ರಭಾ ನದಿ ದಂಡೆ ಮೇಲಿದೆ. ಇಲ್ಲಿ ಚಾಲುಕ್ಯ ಶಿಲ್ಪ ಶೈಲಿಯಲ್ಲಿರುವ ರಾಮಲಿಂಗೇಶ್ವರ, ಕಲ್ಮೇಶ್ವರ ಹಾಗೂ ರಾಮಲಿಂಗಪ್ಪ ದೇವಾಲಯಗಳಿವೆ. ಇಲ್ಲಿ ಕ್ರಿ.ಶ.12ನೇ ಶತಮಾನದ ಜೋಪರಾರ ಎಂಬುವವನಿಗೆ ಸಂಬಂಧಿಸಿದ ಶಿಲಾ ಶಾಸನವೊಂದು ದೊರೆತಿದೆ. ಇಲ್ಲಿ ಆಕರ್ಷಕವಾದ ಹನುಮಾನ್‌ ದೇವಾಲಯವೂ ಇದೆ.

ಭೌಗೋಳಿಕ ಲಕ್ಷಣಗಳು[ಬದಲಾಯಿಸಿ]

ಬೀಳಗಿಯು ಜಿಲ್ಲಾ ಕೇ೦ದ್ರ ಬಾಗಲಕೋಟೆಯಿ೦ದ ಸುಮಾರು ೩೦ ಕಿ.ಮಿ.ದೂರದಲ್ಲಿದೆ. ಈ ತಾಲ್ಲೂಕನ್ನು ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ಬಸವನ ಬಾಗೇವಾಡಿ, ಆಗ್ನೇಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಬಾಗಲಕೋಟೆ, ನೈಋತ್ಯದಲ್ಲಿ ಮುಧೋಳ. ವಾಯವ್ಯದಲ್ಲಿ ಜಮಖಂಡಿ ಮತ್ತು ಉತ್ತರದಲ್ಲಿ ಬಿಜಾಪುರ ತಾಲ್ಲೂಕುಗಳು ಸುತ್ತುವರಿದಿವೆ. ಜಮಖಂಡಿ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನಲ್ಲಿ ಬೀಳಗಿ, ಅನಗವಾಡಿ ಹೋಬಳಿಗಳಿದ್ದು 66 ಗ್ರಾಮಗಳಿವೆ. ವಿಸ್ತೀರ್ಣ 782 ಚಕಿಮೀ. ಜನ ಸಂಖ್ಯೆ 1,41,843 (2001). ಈ ತಾಲ್ಲೂಕಿನ ಭಾಗ ಹಿಂದೆ ಉಪತಾಲ್ಲೂಕಾಗಿ ಜಮಖಂಡಿಗೆ ಒಳಪಟ್ಟಿತ್ತು. 1959ರಲ್ಲಿ ಇದೇ ಒಂದು ಪ್ರತ್ಯೇಕ ತಾಲ್ಲೂಕಾಯಿತು.

ಬೀಳಗಿ ಹೆಚ್ಚಿನ ಮಟ್ಟಿಗೆ ಕರಿ ಎರೆಮಣ್ಣಿನ ಮಟ್ಟಸ ಪ್ರದೇಶ. ತಾಲ್ಲೂಕಿನ ಮಧ್ಯಭಾಗದಲ್ಲಿ ಪಶ್ಚಿಮದ ಎಲ್ಲೆಯಿಂದ ಸುಮಾರು ಬೀಳಗಿ ಪಟ್ಟಣದವರೆಗೆ ಕಣಶಿಲೆಯ ಬೆಟ್ಟಪ್ರದೇಶವಿದೆ. ದಕ್ಷಿಣದ ಎಲ್ಲೆಯಲ್ಲಿ ಸಹ ಘಟಪ್ರಭಾನದಯ ದಂಡೆಗುಂಟ ಚಿಕ್ಕ ಬೆಟ್ಟಗಳ ಸಾಲಿವೆ. ಉತ್ತರ ಗಡಿರೇಖೆಯಾಗಿ ಕೃಷ್ಣಾ ನದಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ದಕ್ಷಿಣ ಮತ್ತು ಪೂರ್ವದ ಗಡಿಯಾಗಿರುವ ಘಟ ಪ್ರಭಾ ನದಿ ತಾಲ್ಲೂಕಿನ ದಕ್ಷಿಣಭಾಗದಲ್ಲಿ ಕೃಷ್ಣಾ ನದಿಯನ್ನು ಸೇರುವುದು.

ಇಲ್ಲಿಯ ವಾರ್ಷಿಕ ಸರಾಸರಿ ಮಳೆ 784 ಮಿಮೀ. ಜೋಳ, ಹತ್ತಿ, ನೆಲಗಡಲೆ, ಗೋದಿ ಮುಖ್ಯ ಬೆಳೆಗಳು. ಸಜ್ಜೆ, ದ್ವಿದಳಧಾನ್ಯಗಳು ಮತ್ತು ಕಬ್ಬನ್ನೂ ಬೆಳೆಸುತ್ತಾರೆ. ಘಟಪ್ರಭಾ ಎಡದಂಡೆ ಯೋಜನೆಯಿಂದ ಹೆಚ್ಚು ಭೂಮಿ ವ್ಯವಸಾಯಕ್ಕೆ ಒಳಪಡಲಿದೆ. ತಾಲ್ಲೂಕಿನಲ್ಲಿ ಹತ್ತಿ ಎಕ್ಕುವ ಕಾರ್ಖಾನೆಗಳೂ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳೂ ಇವೆ. ಅಂಚೆ, ವಿದ್ಯುತ್ ಮುಂತಾದ ಸೌಕರ್ಯಗಳ ಜೊತೆಗೆ ವೈದ್ಯಕೀಯ ಸೌಲಭ್ಯವುಂಟು. ಬಿಜಾಪುರ-ಹುಬ್ಬಳ್ಳಿ ಹೆದ್ದಾರಿ ಈ ತಾಲ್ಲೂಕಿನ ಮಧ್ಯದಲ್ಲಿ ಹಾದು ಹೋಗಿದೆ.

ಗಲಗಲಿ, ಕುಂದರಗಿ, ಸುನಗ, ತೆಗ್ಗಿ, ರೊಳ್ಳಿ, ಅನಗವಾಡಿ ಈ ತಾಲ್ಲೂಕಿನ ದೊಡ್ಡ ಗ್ರಾಮಗಳು, ವಾಯವ್ಯದಲ್ಲಿ ಕೃಷ್ಣಾ ನದಿಯ ಬಲದಂಡೆಯಲ್ಲಿರುವ ಗಲಗಲಿ ಹಿಂದೆ ಗಾಲವ ಕ್ಷೇತ್ರವೆಂದು ಪ್ರಸಿದ್ಧವಾಗಿತ್ತು. ಇಲ್ಲಿ ಗಾಲವ ಮತ್ತು ಇತರ ಋಷಿಗಳಿಗೆ ಸಂಬಂಧಿಸಿದವೆನ್ನಲಾದ ಏಳು ಗುಹೆಗಳಿವೆ. ಎಲ್ಲಮ್ಮನ ಒಂದು ದೇವಾಲಯವೂ ಇದೆ. ಘಟಪ್ರಭಾ ನದಿಯ ಎಡದಂಡೆಯಲ್ಲಿರುವ ಕುಂದರಗಿ ಗ್ರಾಮದ ಕಂಬಳಿಗಳು ಹೆಸರುವಾಸಿಯಾಗಿವೆ. ಇಲ್ಲೊಂದು ಹನುಮಂತ ದೇವಾಲಯವಿದೆ. ಅನಗವಾಡಿಯಲ್ಲಿ ಪ್ರಾಚೀನ ಶಿಲಾಯುಗದ ಅವಶೇಷಗಳು ಕಂಡು ಬಂದಿವೆ.

ಆಡಳಿತ ಕೇಂದ್ರ[ಬದಲಾಯಿಸಿ]

ಬೀಳಗಿ ಈ ತಾಲ್ಲೂಕಿನ ಆಡಳಿತ ಕೇಂದ್ರ. ಬಿಜಾಪುರದ ದಕ್ಷಿಣದಲ್ಲಿದ್ದು ಬಾಗಲಕೋಟೆಯ ವಾಯವ್ಯಕ್ಕೆ 29 ಕಿಮೀ ದೂರದಲ್ಲಿದೆ. ಜನಸಂಖ್ಯೆ 15,464 (2001). ಈ ಊರಿನಲ್ಲಿ ತಾಲ್ಲೂಕು ಕಛೇರಿ, ಪ್ರೌಢಶಾಲೆ, ವೈದ್ಯಕೀಯ ಕೇಂದ್ರ, ಅಂಚೆ ಕಛೇರಿ ಮುಂತಾದವುಗಳಿವೆ.

ವ್ಯವಸಾಯ[ಬದಲಾಯಿಸಿ]

ಇಲ್ಲಿ ಹೆಚ್ಚಾಗಿ ಎಲ್ಲರ ಉದ್ಯೋಗ ವ್ಯವಸಾಯವೆ ಆಗಿದೆ. ಇದರಲ್ಲಿ ಕಬ್ಬು ಬೆಳೆಗಾರರ ಸ೦ಖ್ಯೆಯೇ ಹೆಚ್ಚು. ಇದಕ್ಕೆ ಪೂರಕವಾಗಿಯೇ ಹಲವಾರು ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿ ನಿ೦ತಿವೆ.

ಜನಸ೦ಖ್ಯೆ[ಬದಲಾಯಿಸಿ]

೨೦೦೧ ರ ಗಣತಿಯ ಪ್ರಕಾರ ಬೀಳಗಿಯ ಒಟ್ಟು ಜನಸ೦ಖ್ಯೆ ೧೫,೪೬೪. ಇದರಲ್ಲಿ ಸಮಾನವಾಗಿ ಪುರುಷ ಮತ್ತು ಸ್ತ್ರೀಯರು ೫೦%. ಬೀಳಗಿಯು ಒಟ್ಟಾಗಿ ಶೆಕಡಾ ೫೮ ರಷ್ಟು ಸಾಕ್ಷರತೆಯನ್ನು ಸಾಧಿಸಿದೆ. ಬೀಳಗಿ ಪಟ್ಟಣ ಸಹಕಾರಿ ಬ್ಯಾ೦ಕ ಕಾರ್ಯ ೧೯೯೭ ರಿಂದ ಪ್ರಾರ೦ಭಗೊ೦ಡಿದೆ.

ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

 • ವೀರ ಸಿಂಧೂರ ಲಕ್ಷಣ
 • ಸನಾದಿ ಅಪ್ಪಣ್ಣ
 • ಅಮೀರ್‍ಬಾಯಿ ಕರ್ನಾಟಕಿ - ನಟಿ, ಗಾಯಕಿ
 • ಡಾ ಎಂ.ಸಿ. ಮೋದಿ - ನೇತ್ರ ತಜ್ಞ
 • ಸಂಗನಗೌಡ ಬಸವಂತಗೌಡ ಪಾಟೀಲ - ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ
 • ಕಂದಗಲ್ ಹನುಮಂತರಾಯ - ಸಾಹಿತಿ
 • ಕೃಷ್ಣಮೂತಿ೯ ಪುರಾಣಿಕ - ಕಾದಂಬರಿಕಾರ
 • ಹಣಮಂತರಾಯ ಕಂಠಿ - ಕ್ಯಾತ ನಾಟಕಕಾರರು
 • ಡಿ. ಎಸ್. ಕಣವಿ-ಸಾಹಿತಿಗಳು ಹಾಗೂ ಕ್ಯಾತ ಬರಹಗಾರರು
 • ಡಾ. ಶ್ರೀರಾಮ ಇಟ್ಟಣ್ಣವರ-ಜಾನಪದ ವಿಧ್ವಾಂಸರು ಹಾಗೂ ಸಾಹಿತಿಗಳು
 • ಸಿದ್ದಪ್ಪ ಬಿದರಿ - ಕವಿ
 • ಸದಾನಂದ ಏಳಗಂಟಿ -ಸಾಹಿತಿಗಳು ಹಾಗೂ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು
 • ವೀರೇಂದ್ರ ಶೀಲವಂತ - ಸಾಹಿತಿ, ಪತ್ರಕರ್ತ

ಬೀಳಗಿ ಹೋಬಳಿಯ ಗ್ರಾಮಗಳು[ಬದಲಾಯಿಸಿ]

ಅನಗವಾಡಿ ಹೋಬಳಿಯ ಗ್ರಾಮಗಳು[ಬದಲಾಯಿಸಿ]

ತುಮ್ಮರಮಟ್ಟಿ ಕಡಪಟ್ಟಿ ತೋಳಮಟ್ಟಿ ಮನ್ನಿಕೇರಿ
ಹೆರಕಲ್ ಯಳ್ಳಿಗುತ್ತಿ ಹೊನ್ನಿಹಾಳ ಯತ್ನಟ್ಟಿ
ಬಾದರದಿನ್ನಿ ಕಂದಗಲ್ ಬೀರಕಬ್ಬಿ ಹದರಿಹಾಳ
ಗಿರಿಸಾಗರ ಮುತ್ತಲದಿನ್ನಿ ಕೊಪ್ಪ ಎಸ್ ಆರ್ ಸುನಗ
ಅನಗವಾಡಿ ಕುಂದರಗಿ ಜಾನಮಟ್ಟಿ ಅರಕೇರಿ
ಬಾವಲತ್ತಿ ಕೋವಳ್ಳಿ ಬೂದಿಹಾಳ ಎಸ್ ಎಚ್ ಚಿಕ್ಕಾಲಗುಂಡಿ
ಕೊಪ್ಪ.ಎಸ್.ಕೆ ಕಾತರಕಿ ಶಿರಗುಪ್ಪಿ ಲಿಂಗಾಪೂರ ಎಸ್ ಕೆ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಬೀಳಗಿ&oldid=1201227" ಇಂದ ಪಡೆಯಲ್ಪಟ್ಟಿದೆ