ಬಿಳಿ-ಹೊಟ್ಟೆಯ ನೀಲಿನೊಣಹಿಡುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಳಿ-ಹೊಟ್ಟೆಯ ನೀಲಿನೊಣಹಿಡುಕ ( ಸಿಯೊರ್ನಿಸ್ ಪ್ಯಾಲಿಡಿಪ್ಸ್ ), ನೊಣಹಿಡುಕ ಕುಟುಂಬವಾದ ಮುಸಿಕಪಿಡೆಯಲ್ಲಿ ಗುರುತಿಸಲ್ಪಟ್ಟ ಒಂದು ಪುಟ್ಟ ಪ್ಯಾಸರೀನ್ ಪಕ್ಷಿಯಾಗಿದೆ . ಇದು ಭಾರತದ ಪಶ್ಚಿಮ ಘಟ್ಟಗಳಲ್ಲಿ (ನೀಲಗಿರಿಯನ್ನೂ ಸೇರಿದಂತೆ) ಜೀವಿಸಿರುವ ಸೀಮಿತ ನೆಲೆಯ ಹಕ್ಕಿಯಾಗಿದೆ. ಗಂಡು ಹಕ್ಕಿಯ ಮೇಲ್ಭಾಗ ಮತ್ತು ಎದೆ ಕಡು ನೀಲಿ, ಹುಬ್ಬು ತೆಳು ನೀಲಿ ಮತ್ತು ಬಿಳಿ ಹೊಟ್ಟೆಯನ್ನು ಹೊಂದಿರುತ್ತದೆ. ಹೆಣ್ಣಿಗೆ ಕೆಂಗಂದು ಕಂಠ ಮತ್ತು ಎದೆ, ಬಿಳಿ ಮುಖ ಮತ್ತು ಮೇಲ್ಭಾಗ ಆಲಿವ್ ಬೂದು ಬಣ್ಣವಿರುತ್ತದೆ.

ವಿವರಣೆ[ಬದಲಾಯಿಸಿ]

ಹೆಣ್ಣು ಹಕ್ಕಿ

ಈ ನೊಣಹಿಡುಕ ಸುಮಾರು ೧೩ ಸೆಂ.ಮೀ. ಉದ್ದವಿದ್ದು ( ೫.೧ ಇಂಚು), ತುಸು ಉದ್ದನೆಯ ಕೊಕ್ಕನ್ನು ಹೊಂದಿದೆ. ಇದು ದಟ್ಟ ಅರಣ್ಯದ ಮೇಲಾವರಣದ ನೆರಳಿನಲ್ಲಿಆಹಾರವನ್ನರಸುತ್ತದೆ, ಇಂತಲ್ಲಿ ಕೀಟಗಳನ್ನು ಹಾರಿ ಹಿಡಿಯುತ್ತವೆ. ಕಂದು ಕೆಂಪು ಬಣ್ಣದ ಬಾಲದಿಂದಾಗಿ ಹೆಣ್ಣನ್ನು ನಿಖರವಾಗಿ ಇತರ ನೊಣಹಿಡುಕಗಳಿಂದ ಪ್ರತ್ಯೇಕಿಸಬಹುದು. ಮಂದ ಬೆಳಕಿನಲ್ಲಿ ಈ ಬಿಳಿ-ಹೊಟ್ಟೆಯ ನೀಲಿನೊಣಹಿಡುಕ, ಪಳನಿ ಬೆಟ್ಟಪ್ರದೇಶದ ಕಾಡುಗಳಲ್ಲಿರುವ ಬಿಳಿ-ಹೊಟ್ಟೆಯ ನೀಲಿ ಚಟಕ (White-bellied blue robin)ದಂತಿದ್ದು ಗುರುತಿಸಲು ಗೊಂದಲವಾಗುತ್ತದೆ, ನೀಲಿ ಚಟಕಕ್ಕೆ ಕಾಲು ಉದ್ದವಿದು ಮತ್ತು ನೆಲದ ಮೇಲಿನ ಹೆಚ್ಚಿನ ಚಟುವಟಿಕೆಯಿಂದಾಗಿ ಪ್ರತ್ಯೇಕಿಸಿ ಹೇಳಬಹುದು. [೧] [೨] [೩] [೪]

ವಿತರಣೆ[ಬದಲಾಯಿಸಿ]

ಗಂಡು ಹಕ್ಕಿ ಸ್ನಾನದ ನಂತರ, ದಾಂಡೇಲಿಯ ಗಣೇಶಗುಡಿಯಲ್ಲಿ ಕಂಡಂತೆ

ಬಿಳಿ-ಹೊಟ್ಟೆಯ ನೀಲಿ ನೊಣಹಿಡುಕ ಪಶ್ಚಿಮ ಘಟ್ಟಗಳಲ್ಲಿನ ದಟ್ಟ ಅರಣ್ಯ ಮತ್ತು ಶೋಲಾ ಕಾಡುಗಳಲ್ಲಿ ಕಂಡುಬರುತ್ತವೆ. ‌ ದಕ್ಷಿಣೋತ್ತರವಾಗಿ ತಮಿಳುನಾಡು ಮತ್ತು ಕೇರಳದಿಂದ ಮಹಾರಾಷ್ಟ್ರದ ಮಹಾಬಲೇಶ್ವರದವರೆಗೆ [೫] ಅಲ್ಲದೆ ಪೂರ್ವ-ಪಶ್ಚಿಮ ಘಟ್ಟಗಳ ಸಮ್ಮಿಲನ ಪ್ರದೇಶವಾದ ನೀಲಗಿರಿ ಮತ್ತು ಬಿಳಿಗಿರಿರಂಗನ ಬೆಟ್ಟಗಳಲ್ಲಿ ಹರಡಿವೆ. [೬] ಇವು ಮುಖ್ಯವಾಗಿ, ನೀಲಗಿರಿಯ ತಪ್ಪಲಿನಿಂದ ಸುಮಾರು 1700 ಮೀ ವರೆಗಿನ ಎತ್ತರದ ಬೆಟ್ಟದ ಕಾಡುಗಳಲ್ಲಿ ಕಂಡುಬರುತ್ತವೆ. [೨]

ನಡವಳಿಕೆ ಮತ್ತು ಪರಿಸರ ವಿಜ್ಞಾನ[ಬದಲಾಯಿಸಿ]

ಬಿಳಿ-ಹೊಟ್ಟೆಯ ನೀಲಿ ನೊಣಹಿಡುಕ ಪ್ರಮುಖವಾಗಿ ದಟ್ಟ ಕಾಡಿನ ಹಸುರು ಮೇಲ್ಛಾವಣಿಯಡಿಯಲ್ಲಿ, ಕೆಳಗಿರುವ ಗಾಢ ನೆರಳಿನಲ್ಲಿ ಆಹಾರವನ್ನರಸುತ್ತವೆಯಾದ್ದರಿಂದ ಅತಿ ನಿಶ್ಯಬ್ಧದಿಂದಿದ್ದು, ನಿಷ್ಕ್ರಿಯವಾಗಿರುತ್ತವೆನೋ ಎಂದು ಅನಿಸುತ್ತದೆ[೭] ಬಹಳ ಹತ್ತಿರದಿಂದ ಮಾತ್ರ ಇವುಗಳ ಕೂಗನ್ನು ಕೇಳಬಹುದು. ಈ ಹಾಡು ಏರಿಳಿತಗಳ ಸರಣಿಯಾಗಿದ್ದು, ನಡುವೆ ಕ್ಲಿಕ್‌ - ಕೀರಲುಗಳ ಅಸಂಬದ್ಧ ಧ್ವನಿಯಂತಿರುತ್ತದೆ. ಸಾಮಾನ್ಯವಾಗಿ ಇವು ಒಂಟಿಯಾಗಿ ಇಲ್ಲವೇ ಜೊತೆಯಾಗಿ ಕಾಣಸಿಗುತ್ತವೆ ಮತ್ತು ಹೆಚ್ಚಾಗಿ ಮಿಶ್ರ-ಜಾತಿಗಳೊಡನೆ ಆಹಾರವನ್ನರಸುವ ಗುಂಪುಗಳನ್ನು ಸೇರುತ್ತವೆ. [೨]

ಪ್ರಮುಖವಾಗಿ ಮುಂಗಾರಿನ ಸಮಯದಲ್ಲಿ ಸಂತಾನೋತ್ಪತ್ತಿ, ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ. ಬಟ್ಟಲಿನಂತಿರುವ ಒರಟಾದ ಗೂಡು, ಒಳಭಾಗದಲ್ಲಿ ಅಚ್ಚುಕಟ್ಟಾಗಿ ಅಂದವಾಗಿ ಪಾಚಿಯಿಂದ ಮಾಡಿದ್ದು; ಪಾಚಿ ಆವೃತ್ತ ಬಂಡೆ, ಮರದ ಪೊಟರೆ ಅಥವಾ ಮಣ್ಣಿನ ದಂಡೆಯಲ್ಲಿ ಗೂಡುಗಳನ್ನು ನಿರ್ಮಿಸುತ್ತವೆ. ಸಾಮಾನ್ಯವಾಗಿ ನಾಲ್ಕು ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು ಮಸುಕಾದ ಸಮುದ್ರ-ಹಸುರಿನ ಬಣ್ಣವಿದ್ದು, ಮೇಲೆಲ್ಲಾ ಕಂದು ಮಚ್ಚೆಗಳಿದ್ದು, ವಿಸ್ತಾರವಾದ ತುದಿಯಲ್ಲಿ ಮಚ್ಚೆಗಳ ಸಾಂದ್ರತೆ ದಟ್ಟವಾಗಿರುತ್ತದೆ. [೨]

ಉಲ್ಲೇಖಗಳು[ಬದಲಾಯಿಸಿ]

  1. Rasmussen PC; JC Anderton (2005). Birds of South Asia. The Ripley Guide. Volume 2. Smithsonian Institution and Lynx Edicions. p. 384.
  2. ೨.೦ ೨.೧ ೨.೨ ೨.೩ Ali, S; S D Ripley (1996). Handbook of the birds of India and Pakistan. Volume 7 (2nd ed.). New Delhi: Oxford University Press. pp. 183–184.Ali, S & S D Ripley (1996).
  3. Oates, EW (1890). The Fauna of British India. Birds. Volume 2. London: Taylor and Francis. p. 22.
  4. Baker, ECS (1924). The Fauna of British India. Birds. Volume 2 (2nd ed.). London: Taylor and Francis. pp. 228–229.
  5. Ali, Salim (1951). "Extension of range of the White-bellied Blue Flycatcher (Muscicapula pallipes pallipes Jerdon)". J. Bombay Nat. Hist. Soc. 49 (4): 785.
  6. Srinivasan, U.; Prashanth, N.S. (2006). "Preferential routes of bird dispersal to the Western Ghats in India: An explanation for the avifaunal peculiarities of the Biligirirangan Hills" (PDF). Indian Birds. 2 (4): 114–119. Archived from the original (PDF) on 2011-08-18. Retrieved 2023-07-12.
  7. Shankar Raman; T. R. (2003). "Assessment of census techniques for interspecific comparisons of tropical rainforest bird densities: a field evaluation in the Western Ghats, India". Ibis. 145: 9–21. doi:10.1046/j.1474-919X.2003.00105.x.