ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಹೆಣ್ಣಿನ ಮಹತ್ವ
[ಬದಲಾಯಿಸಿ]ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತಾಮಯಿ, ಕರುಣಾಳು,ವಾತ್ಸಲ್ಯ,ಅಕ್ಕರೆಗಳುಳ್ಳ ಕ್ಷಮಾಯಾಧರಿತ್ರಿ, ಭೂಮಿತೂಕದವಳು ಎಂದೆಲ್ಲಾ ಹಿರಿಯ ವಿದ್ವಾಂಸರು ಅವಳನ್ನು ಹಾಡಿ ಹೊಗಳಿದ್ದಾರೆ. ಹಾಗಾದರೆ ನಿಜವಾಗಲು ಸ್ತ್ರೀ ಒಂದು ಶಕ್ತಿಯೇ? ಪ್ರೀತಿಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹಳಷ್ಟು ಜನ ಹೇಳುವುದು ಸ್ತ್ರೀ ಒಂದು ಶಕ್ತಿಯೊ ಹೌದು, ಪ್ರೀತಿಯೊ ಹೌದು. ಜೊತೆಗೆ ಸಮಸ್ತಲೋಕದ ಆರೋಗ್ಯದಾತೆಯೊ ಸ್ತ್ರೀಯೆ ಆಗಿದ್ದಾಳೆ. ಪುಟ್ಟ ಮಗು ಹೆಂಗಸಾಗುವವರೆಗಿನ ಪ್ರಕ್ರಿಯೆಗಳನ್ನು ಗಮನಿಸುವಾಗ, ಆಕೆಯ ಶಾರೀರಿಕ ವಿಕಾಸಗಳು,ಮನಸ್ಸಿನ ವಿಕಸನ, ವಿಚಾರಗಳು ಪ್ರತಿಯೊಂದು ಹಂತದಲ್ಲೂ ಭನ್ನವಾಗಿರುವುದನ್ನ ಕಾಣಬಹುದಾಗಿದೆ. ಪ್ರಕೃತಿಯ ಹಿನ್ನೆಲೆಯಲ್ಲಿ, ಕೌಟುಂಬಿಕ ವಲಯದಲ್ಲಿ ಪೋಷಿಸಲ್ಪಡುವ ಹೆಣ್ಣು ಪ್ರೀತಿ, ವಿಶ್ವಾಸದ ಪ್ರತೀಕವಾಗಿ ಬೆಳೆದರೆ, ಬೇರೊಂದು ಮನೆಯ ಬೆಳಕಾಗಿ ಪ್ರಶಾಂತ ಪರಿಸ್ಥಿತಿಯ ನಿರ್ಮಾತೃವಾಗುತ್ತಾಳೆ.
ಮಕ್ಕಳಿಲ್ಲದವರ ಸಂಕಟ
[ಬದಲಾಯಿಸಿ]ನಮ್ಮ ಹಿಂದೂ ಪರಿಕಲ್ಪನೆಯಲ್ಲಿ ಮದುವೆಯಾದ ಹೆಣ್ಣಿಗೆ ಮಕ್ಕಳಾಗದಿದ್ದರೆ ಆ ವಂಶಕ್ಕೆ ಸದ್ಗತಿಯಿಲ್ಲ ಎನ್ನಲಾಗಿದೆ. ಮನೆಯನ್ನು ಮನವನ್ನು ಬೆಳಗಲು ಬರುವ ಹೆಣ್ಣು ವಂಶ ವನ್ನು ಬೆಳಗಬೇಕೆಂದು ಆಶಿಸುತ್ತಾರೆ. ಮಕ್ಕಳಾಗದಿರುವುದಕ್ಕೆ ಪೂರ್ವಜನ್ಮದ ಪಾಪಕರ್ಮಗಳೇ ಕಾರಣವೆಂದು ನಂಬಲಾಗಿದೆ. ಹೆಣ್ಣು ಗರ್ಭಿಣಿಯಾಗದಿರಲೂ ದೋಷಪೂರಿತ ಗಂಡನೇ ಕಾರಣವಿದ್ದರೂ, ಸಮಾಜ ದೂಷಿಸುವುದು ಹೆಣ್ಣನ್ನೇ! ಯಾರೂ ಗಂಡಸನ್ನು "ಬಂಜ"ನೆಂದು ಕರೆಯುವುದಿಲ್ಲ. ನೆಟ್ಟ ಮರಗಳೆಲ್ಲ ಫಲ ಬಿಡುವುದಿಲ್ಲ. ಸಾಕಿದ ಪಾಣಿ-ಪಕ್ಷಿಗಳೆಲ್ಲ ಮರಿ ಹಾಕುವುದಿಲ್ಲ. ಅಂತೆಯೇ ಪ್ರತಿ ಹೆಣ್ಣು ತಾಯ್ತನದ ಸುಖವನ್ನು ಅನುಭವಿಸುತ್ತಾಳೆಂದು ಹೇಳಲು ಬರುವುದಿಲ್ಲ. ಮದುವೆಯಾದ ಹೆಣ್ಣುಗಳಲ್ಲಿ ಶೇಕಡಾ ನೂರಕ್ಕೆ ೫%ರಷ್ಟು ಜನರು ನಾ ನಾ ಕಾರಣಗಳಿಂದ ಮಕ್ಕಳಿಲ್ಲದೆ ನಲುಗಿ, ಮನೋವೇದನೆಯಿಂದ ನರಳುತ್ತಾರೆ. ಬಂಜೆ ಎಂಬ ಪದ ಕೂರಲಗಿನಂತೆ ಆಕೆಯ ಮನಸ್ಸನ್ನು ಘಾಸಿಗೊಳಿಸುತ್ತದೆ. ಸಮಾಜದ ಅವಕೃಪೆ, ಕುಟುಂಬದವರ ಚುಚ್ಚು ಮಾತುಗಳಿಂದ ಅವಳು ಜೀವಚ್ಛವದಂತಾಗುತ್ತಾಳೆ.
ಜನಪದ ಗೀತೆಗಳಲ್ಲಿ ಬಂಜೆತನ
[ಬದಲಾಯಿಸಿ]- ೧.ಕಂದನ ಕೊಡೊ ಶಿವನೆ ಬಂಧನ ಬಿಡಲಾರೆ
ಹಂಗೀನ ಬಾನ ಉಣಲಾರೆ/ಮರ್ತ್ಸದಾಗ
ಬಂಜೆಂಬ ಶಬುದ ಹೊರಲಾರೆ
- ೨.ಸಂಜೆಗೆ ಕೊಟ್ಟು ಮುಂಜಾನೆ ಕೊಳ್ಳಯ್ಯ ಬಂಜೆಂಬ
ಶಬುದ ಬಿಡಿಸಯ್ಯ ಆಗಲೇ ಕೊಟ್ಟು/ ಆಗಲೇ
ಕೊಳ್ಳಯ್ಯ ಬಂಜೆಂಬ ಶಬುದ ಬಿಡಿಸಯ್ಯ
- ೩.ಬಂಜೆ ಬಾಗಿಲ ಮುಂದೆ ಅಂಜೂರ ಗಿಡ ಹುಟ್ಟಿ
ಟೊಂಗಿ ಟೊಂಗೆಲೆಲ್ಲಾ ಗಿಣಿ ಕೂತು/ಹೇಳ್ಯಾವ
ಬಂಜೆ ನಿನ್ನ ಬದುಕು ಹೆರವರಿಗೆ
- ೪.ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದಂಗೆ/ಬಾಳೆಲೆಯ
ಹಾಸ್ಯುಂಡು ಬೀಸಿ ಒಗೆದಾಂಗ
- ೫.ಬಾಲಕರಿಲ್ಲದ ಬಾಳ್ವೆ ಬಾಳೆಯಿಲ್ಲದ ತೋಟ
ಗಂಧ ಕಸ್ತೂರಿ ಪರಿಮಳ/ಒಳಗಿದ್ದು
ರಂಭೆ ನೀ ಬಾಳಿ ಫಲವಿಲ್ಲ
- ೬.ಪಟ್ಟೆ ಉಟ್ಟರೇನು ಮುತ್ತು ಕೊಟ್ಟರೇನು
ಹೊಟ್ಟೇಲಿ ಒಂದು ಫಲವಿಲ್ಲ/ಮೇಲೇನು
ಪಟ್ಟೆ ಉಟ್ಟುದಕೆ ಫಲವೇನು
- ೭.ವಿಠಲನ ಗುಡಿಯಾಗ ಎಷ್ಟೋತ್ತು ನಿಂತಿರಲೆ
ಬಟ್ಟೆ ಕುಂಕುಮ ಬೆವತಾವ/ವಿಠಲ
ಟೊಪ್ಪೀಗೆ ಮಗನ ದಯಮಾಡೋ
- ೮.ಬಂಜಿಯ ಬಾಗಿಲ ಮುಂದ ಬಂಗಾರದೊಳಕಲ್ಲು
ಬಂದು ಕುಟ್ಟಾಕ ಸೊಸೊಯಿಲ್ಲ /ಮಾನಾಮಿ
ಬನ್ನಿ ಮುಡಿಯಾಕ ಮಗನಿಲ್ಲ
- ೯.ಮಕ್ಕಳನ ಬೇಡುವರು ಪಟ್ಟಣಕೆ ನಡಿರೆವ್ವ
ಪಟ್ಟಣದ ಕೆಳಗೆ ಅರಲೇರಿ /ಅಮ್ಮಗಸಿದ್ದ
ತೊಟ್ಟೀಲ ಕೊಟ್ಟು ಕಳುಹ್ಯಾನ
- ೧೦.ಎಲ್ಲರಿಗೂ ಮಕ್ಕಳ ಕೊಟ್ಯಲ್ಲೊ
ನಾನೇನು ಕರ್ಮವ ಮಾಡಿದ್ದೆ/ನನಗೊಂದು
ಕೊನೆಯ ಕೊಡಬಾರ್ದೆ
- ೧೧.ಸಾಲು ಸೀರೆ ಉಟ್ಟರೇನು ತೋಳಲ್ಲಿ
ಒರಗೋ ಮಗನಿಲ್ಲ ಪಟ್ಟೆಸೀರೆಯ/ಉಟ್ಟರೇನು
ಮೆಟ್ಟಿ ನಿಲ್ಲೊ ಮಗನಿಲ್ಲ
- ೧೨.ಬಾಲನೆ ಇಲ್ಲದ ಧರಣಿ ನಾನು
ಬಾಲನ ಸಪುನ ಕಂಡೆನಲ್ಲ/ಮಕ್ಕಳೆ ಇಲ್ಲದ
ಪಾಪಿ ನಾನು ಮಕ್ಕಳ ಸಪುನ ಕಂಡೆನಲ್ಲ
- ೧೩.ಆರು ಲೋಕವ ಆಳಿದರೇನು ಬಂಜೆಯ
ಬಾಳು ಬಾಳಲ್ಲ ಮೂರು ಲೋಕವ/ಆಳಿದರೇನು
ಬರುಡರ ಬಾಳು ಬಾಳಲ್ಲ
- ೧೪.ಮುಕ್ಕಣ್ಣಯ್ಯನ ಬಳಿಯಲ್ಲಿ ಅಷ್ಟ ಭಾಗ್ಯವ
ತಂದವಳು ಅಷ್ಟ ಭಾಗ್ಯವ/ತಂದರೇನು
ಮಕ್ಕಳ ಭಾಗ್ಯವ ತರಲಿಲ್ಲ
- ೧೫.ನಮ್ಮಪ್ಪನ ಮನೆಗೆ ಒಲಿದವನೇ ಕಪಿನೀ
ಪತಿಯೇ ನಂಜಯ್ಯ ನಾ ತಪ್ಪದೆ/ಜಾತ್ರೆಗೆ
ಬರುತೀನಿ ಮಕ್ಕಳ ಫಲವ ಕೊಡು ತಂದೆ
ಬಂಜೆ ಹೊನ್ನಮ್ಮನ ಕಥೆ
[ಬದಲಾಯಿಸಿ]- ಜನಪದದಲ್ಲಿ ಬಂಜೆ ಹೊನ್ನಮ್ಮನ ಕಥನಗೀತೆ ತುಂಬಾ ಪ್ರಸಿದ್ದವಾದುದು. ಮಕ್ಕಳಿಲ್ಲದ ಹೆಣ್ಣಿನ ನೋವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ. ಹೊನ್ನಮ್ಮ ಏಳುಜನ ಅಕ್ಕತಂಗಿಯರಲ್ಲಿ ಕೊನೆಯವಳು. ಎಲ್ಲಾ ಅಕ್ಕಂದಿರಿಗೂ ಮದುವೆಯಾಗಿ ಮಕ್ಕಳಿರುತ್ತಾರೆ. ಆದರೆ ಹೊನ್ನಮ್ಮನಿಗೆ ಮಕ್ಕಳಿರುವುದಿಲ್ಲ. ಅವಳು ಕಂಡ ಕಂಡ ದೇವರಿಗೆಲ್ಲಾ ಕೈಮುಗಿದು ಬೇಡಿದರೂ ಮಕ್ಕಳ ಫಲವೇ ಕಾಣುವುದಿಲ್ಲ.
- ಹೊನ್ನಮ್ಮ ಸ್ವಭಾವತ: ಮೃದು ಮನಸ್ಸಿನ, ವಿಶಾಲ ಮನೋಭಾವದ ಹೆಣ್ಣು. ಅಕ್ಕಂದಿರ ಮಕ್ಕಳನ್ನೇ ತನ್ನ ಮಕ್ಕಳೆಂದು ತಿಳಿದು ಅವರನ್ನೇಲ್ಲ ಸಾಕಿ ಸಲಹುತ್ತಾಳೆ. ಆ ಮಕ್ಕಳಿಗೆ ಬೇಕು ಬೇಕಾದ ತಿಂಡಿ ತಿನಿಸುಗಳನ್ನು, ಒಡವೆ ವಸ್ತ್ರಗಳನ್ನು ಕೊಟ್ಟು ಅವರೊಡನೆ ಇರುತ್ತಾಳೆ.
ಪುಣ್ಯಕಾರ್ಯಗಳನ್ನೇನಾದರೂ ಮಾಡಿದರೆ ಮಕ್ಕಳಾಗಬಹುದೆಂದು ಪರಿಭಾವಿಸಿ ಬಾವಿ ತೆಗೆಸುತ್ತಾಳೆ. ಹಣ್ಣಿನ ತೋಟವನ್ನು ಬೆಳೆಸುತ್ತಾಳೆ.
- ಒಮ್ಮೆ ಮೂಡಲ ಸೀಮೆಯಿಂದ ಬಂದ ಪಶು, ಪಕ್ಷಿ, ಜನಗಳು ಹೊನ್ನಮ್ಮ ತೆಗೆಸಿದ ಬಾವಿಯಲ್ಲಿ ನೀರು ಕುಡಿಯುವುದಿಲ್ಲ. ಅವಳ ರಸಭರಿತ ತೋಟಕ್ಕೂ ಲಗ್ಗೆ ಇಡುವುದಿಲ್ಲ. ಆಕೆ ಬೆಳೆಸಿದ ಮರದ ನೆರಳಿಗೂ ಬರುವುದಿಲ್ಲ. ಅವಳು ಭಿಕ್ಷೆ ಹಾಕಲು ಹೋದರೆ ಯಾವ ಭಿಕ್ಷುಕನೂ ಅವಳ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ. ಊರ ಮಕ್ಕಳನ್ನು ಮುದ್ದಿಸಲು ಹೋದರೆ ಜನ ಅಸ್ಪೃಶ್ಯಳನ್ನು ಕಂಡಂತೆ ದೂರ ಸರಿಯುತ್ತಾರೆ.
- ಹೊನ್ನಮ್ಮ ಮಾಡಿದ ಜನೋಪಕಾರಕ್ಕಾಗಲಿ, ಸಮಾಜೋಪಾಕಾರಕ್ಕಾಗಲಿ ಪ್ರತಿಫಲ ಸಿಗುವುದಿಲ್ಲ. ಆಗ ಹೊನ್ನಮ್ಮ ಜನರನ್ನ ನಂಬಿ ನಾನು ಕೆಟ್ಟೆ. ನನಗಾರೂ ಬೇಡ ದೈವವೂಂದೇ ಸಾಕು ಎಂದು ನಿಶ್ಚಲ ಮನಸ್ಸಿನಿಂದ ವ್ರತವೂಂದನ್ನು ಮಾಡಲು ನಿಶ್ಚಯಿಸಿ, ಮೊದಲು ಗಂಗೆ ಪೂಜೆ ಮಾಡಲು ಅಣಿಯಾಗಿ, ಮನೆ ಮಠಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಪಟ್ಟೆಸೀರೆ ಉಟ್ಟು, ಚಿಗಳಿ ತಂಬಿಟಿನುಂಡೆ ಮಾಡಿ, ಹಣ್ಣು-ಕಾಯಿ, ಕರ್ಪೂರ-ಗಂಧದ ಕಡ್ಡಿಯೊಂದಿಗೆ ಗಂಗೆಪೂಜೆಯನ್ನು ಬಹಳ ಭಯ ಭಕ್ತಿಯಿಂದ ಮಾಡುವಾಗ ಇದ್ದ ಗಂಗೆಯು ಬತ್ತಿ ಹೋಗುತ್ತಾಳೆ.
- ಇದನ್ನು ಕಂಡ ಹೊನ್ನಮ್ಮನ ಅಕ್ಕಂದಿರು ಮನೆಯೊಳಗೆ ಅವಳಿಗೆ ಚಿತ್ರಹಿಂಸೆಕೊಟ್ಟು, ಅವಳನ್ನು ಹೊಡೆದು ಬಡಿದು ಮನೆಯಾಚೆಗೆ ನೂಕಿ ಕೊರಕಲಿಗೆ ತಳ್ಳುತ್ತಾರೆ. ಅಕ್ಕಂದಿರ ವರ್ತನೆಯಿಂದ ಮನನೊಂದ ಹೊನ್ನಮ್ಮ ತಾನು ಪತಿವ್ರತೆಯಾಗಿದ್ದರೆ ತನ್ನ ಅಕ್ಕಂದಿರು ಅವರ ಮಕ್ಕಳೆಲ್ಲರೂ ಹುಳು-ಉಪ್ಪಟೆಗಳಾಗಲಿ ಎಂದು ಶಾಪಕೊಡುತ್ತಾಳೆ. ಅವಳ ಶಾಪ ಕ್ಷಣಮಾತ್ರದಲ್ಲಿ ನಿಜವಾಗುತ್ತದೆ. ಅವರೆಲ್ಲ ಅವಳ ಕಣ್ಮುಂದೆ ಹುಳು-ಉಪ್ಪಟೆಗಳಾಗುತ್ತಾರೆ.
- ಇದನ್ನ ಕಂಡ ಹೊನ್ನಮ್ಮ ಮನ ಬಿರಿಯುವಂತೆ ರೋದಿಸುತ್ತಾಳೆ. ಹೊನ್ನಮ್ಮ ಹೃದಯ ಬಿರಿಯುವಂತೆ ಅಳುವ ಸಂದರ್ಭದಲ್ಲಿ ಕೈಲಾಸದಲ್ಲಿದ್ದ ಶಿವ-ಪಾರ್ವತಿಯರಿಗೆ ಅವಳ ಆರ್ತನಾದ ಕೇಳಿ ಅವರು ಭೂಲೋಕಕ್ಕೆ ಧಾವಿಸಿ ಬಂದು, ಹೊನ್ನಮ್ಮನ ಪರಿಸ್ಥಿತಿ ಕಂಡು, ಸಾವಿನ ಅಂಚಿನಲ್ಲಿದ್ದ ಅವಳನ್ನು ರಕ್ಷಿಸಿ ಅವಳಿಗೆ ಮಕ್ಕಳ ಫಲವನ್ನು ಕೊಟ್ಟು ಸಲಹುತ್ತಾರೆ.
ತಾಯ್ತನದ ಪ್ರಸ್ತುತತೆ
[ಬದಲಾಯಿಸಿ]ವೈಜ್ಞಾನಿಕಯುಗ ಮುಂದುವರೆದಂತೆಲ್ಲಾ ಆಧುನಿಕ ಆವಿಷ್ಕಾರಗಳು ಹುಟ್ಟಿಕೊಂಡು ವ್ಯಕ್ತಿ ಬಯಸಿದ್ದಕ್ಕಿಂತ ಹೆಚ್ಚಿನ ಸೌಲಭ್ಯಗಳು ನಮಗೆ ದಕ್ಕಿವೆ. ಮಕ್ಕಳಿಲ್ಲದ ಹೆಣ್ಣಿನ ಬದುಕು ನಿಷ್ಪ್ರಯೋಜಕ ಆಕೆ ಜೀವಿಸಲು ಅರ್ಹಳೆ ಅಲ್ಲವೆಂಬ ಕಾಲವೀಗ ಸರಿದು ಹೋಗಿದೆ. ತಾಯ್ತನ ಎಂಬುದು ಬಯಸಿದಾಗ ಕೈಗೆ ಸಿಗುವ ವಸ್ತುವಾಗಿ ಬಿಟ್ಟಿದೆ. ಈ ಜಗತ್ತಿನಲ್ಲಿ ಬಂಜೆಯರೇ ಇಲ್ಲವಾಗುವಂತಹ ದಿನಗಳು ಸನಿಹದಲ್ಲೇ ಇವೆ. ಇಂದಿನ ಸ್ತ್ರೀ ಪುರುಷನ ಸ್ಪರ್ಶವಿಲ್ಲದೆ ಮಕ್ಕಳನ್ನ ಹೆರಲು ಸಮರ್ಥಳಾಗಿದ್ದಾಳೆ. ಯಾರಿಗೆ ಯಾರೂ ಅನಿವಾರ್ಯವಾಗುತ್ತಿಲ್ಲ. ಟೆಸ್ಟ್ ಟ್ಯೂಬ್ ಮಕ್ಕಳು ಹುಟ್ಟುತ್ತಿರುವುದು ಈ ದಿಶೆಯಲ್ಲೇ! ಸಾರೋಗೆಟ್ ಮದರ್/ಬಾಡಿಗೆ ತಾಯ್ತನ ಇಂದು ಸಹಜವೆನಿಸುವಷ್ಟರ ಮಟ್ಟಿಗೆ ನಮ್ಮ ಸಮಾಜವನ್ನು ವ್ಯಾಪಿಸಿ ಬಿಟ್ಟಿದೆ. ಹಾಗಾಗಿ ಭಾವನಾತ್ಮಕ ಸಂಬಂಧಗಳೆಲ್ಲ ಹಲಸಿನ ಹಣ್ಣಿನ ತೊಳೆಗಳಂತಾಗುತ್ತಿವೆ.
ಗ್ರಂಥ ಋಣ
[ಬದಲಾಯಿಸಿ]- ಜೀವಧಾರೆ - ಡಾ.ಕೆ.ಸೌಭಾಗ್ಯವತಿ
- ಜನಪದ ಕಾವ್ಯ ಕಥೆಗಳು -ಜೀ.ಶಂ.ಪ
ಉಲ್ಲೇಖಗಳು
[ಬದಲಾಯಿಸಿ]- ↑ https://www.facebook.com/kannadasampada/posts/887832821279041
- ↑ "ಆರ್ಕೈವ್ ನಕಲು". Archived from the original on 2016-03-06. Retrieved 2015-05-31.
- ↑ "ಆರ್ಕೈವ್ ನಕಲು". Archived from the original on 2016-03-06. Retrieved 2015-05-31.