ವಿಷಯಕ್ಕೆ ಹೋಗು

ಬಹುವ್ರೀಹಿ ಸಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.

ಹಣೆಗಣ್ಣ, ಮುಕ್ಕಣ್ಣ, ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ,

  • ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ (ಶಿವ)
  • ಮೂರು + ಕಣ್ಣು ಉಳ್ಳವನು ಯಾರೋ ಅವನು - ಮುಕ್ಕಣ್ಣ (ಶಿವ)
  • ನಿಡಿದು + ಮೂಗನ್ನು ಉಳ್ಳವನು ಯಾರೋ ಅವನು - ನಿಡುಮೂಗ

ಹಣೆಯಲ್ಲಿ + ಕಣ್ಣು ಉಳ್ಳವ - ಈ ಎರಡೂ ಪದಗಳ ಅರ್ಥ ಇಲ್ಲಿ ಮುಖ್ಯವಲ್ಲ. ಈ ಎರಡೂ ಪದಗಳ ಅರ್ಥದಿಂದ ಹೊಳೆಯುವ ಅನ್ಯ ಪದ ಶಿವ ಮುಖ್ಯ. ಇಲ್ಲಿ ಮೂರನೆಯ (ಅನ್ಯ ಪದ) ಪದದ ಅರ್ಥವೇ ಪ್ರಮುಖವಾಗಿ ಗೋಚರಿಸುತ್ತದೆ.

ಮೂರು ಕಣ್ಣು ಉಳ್ಳವ - ಅಂದರೆ ಶಿವ ಎಂಬ ಅರ್ಥ ಮುಖ್ಯ.. ಶಿವನಿಗೆ ಮೂರನೆಯ - ಜ್ಞಾನ ಚಕ್ಷು ಇರುವುದೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅನ್ತೆಯೇ ಹಣೆಗಣ್ಣ ಎಂಬ ಪದ.

ಹೀಗೆ ಸಮಾಸದಲ್ಲಿರುವ ಪದಗಳ ಅರ್ಥಕ್ಕೆ ಪ್ರಾಧಾನ್ಯತೆಯೇ ಇಲ್ಲದೆ ಅನ್ಯವಾದ ಬೇರೊಂದು ಪದವು ಇಲ್ಲಿ ಪ್ರಧಾನವಾಗಿ ಬರುತ್ತದೆ.

ಬಹುವ್ರೀಹಿ ಸಮಾಸದ ವಿಧಗಳು

[ಬದಲಾಯಿಸಿ]
  • ಪೂರ್ವದ ಹಾಗೂ ಉತ್ತರದ ಪದಗಳೆರಡೂ ಸಮಾನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ಸಮಾನಾಧಿಕರಣ ಬಹುವ್ರೀಹಿ ಎಂದು ಹೆಸರು.
  • ಪೂರ್ವದ ಹಾಗೂ ಉತ್ತರದ ಪದಗಳೆರಡೂ ಭಿನ್ನ ಭಿನ್ನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ವ್ಯಧಿಕರಣ ಬಹುವ್ರೀಹಿ ಎಂದು ಹೆಸರು. (ವಿ+ಅಧಿಕರಣ = ವ್ಯಧಿಕರಣ - ವಿಗತವಾದ ಅಧಿಕರಣ)
  • ಕನ್ನಡ - ಕನ್ನಡ ಪದಗಳು
  1. ಮೂರು ಕಣ್ಣು ಉಳ್ಳವ - ಮುಕ್ಕಣ್ಣ (ಸಮಾನಾಧಿಕರಣ ಬಹುವ್ರೀಹಿ) (ಮೂರು, ನಾಲ್ಕು - ಈ ರೀತಿ ಸಂಖ್ಯಾ ವಾಚಕ ಪದವಿದ್ದರೂ ಇವು ದ್ವಿಗು ಸಮಾಸಕ್ಕೆ ಉದಾಹರಣೆಯಾಗುವುದಿಲ್ಲ. ಏಕೆಂದರೆ ಈ ಪದಕ್ಕೆ ವಿಶೇಷವಾದ ಅರ್ಥವಿದೆ )
  2. ನಾಲ್ಕು ಮೊಗ ಉಳ್ಳವ - ನಾಲ್ಮೊಗ (ಸಮಾನಾಧಿಕರಣ ಬಹುವ್ರೀಹಿ) (ಮುಖ - ತತ್ಸಮ : ಮೊಗ - ತದ್ಭವ)
  3. ಕೆಂಪು ಕಣ್ಣು ಉಳ್ಳವ - ಕೆಂಗಣ್ಣ (ಸಮಾನಾಧಿಕರಣ ಬಹುವ್ರೀಹಿ)
  4. ಡೊಂಕು ಕಾಲು ಉಳ್ಳವ - ಡೊಂಕುಗಾಲ (ಸಮಾನಾಧಿಕರಣ ಬಹುವ್ರೀಹಿ)
  5. ಕಡುದಾದ ಚಾಗ ಮಾಡುವವನು - ಕಡುಚಾಗಿ (ಸಮಾನಾಧಿಕರಣ ಬಹುವ್ರೀಹಿ) (ತ್ಯಾಗ - ತತ್ಸಮ : ಚಾಗ - ತದ್ಭವ) (ಕಡು = ವಿಶೇಷವಾಗಿ)
  6. ಹಣೆಯಲ್ಲಿ ಕಣ್ಣು ಉಳ್ಳವ - ಹಣೆಗಣ್ಣ (ವ್ಯಧಿಕರಣ ಬಹುವ್ರೀಹಿ)
  7. ಕಿಚ್ಚು ಕಣ್ಣಿನಲ್ಲಿ ಆವಂಗೋ ಅವನು - ಕಿಚ್ಚುಗಣ್ಣ (ವ್ಯಧಿಕರಣ ಬಹುವ್ರೀಹಿ)
  • ಸಂಸ್ಕೃತ - ಸಂಸ್ಕೃತ ಪದಗಳು
  1. ಇಕ್ಷುವನ್ನು ಕೋದಂಡವಾಗಿ ಉಳ್ಳವನು - ಇಕ್ಷುಕೋದಂಡ (ಸಮಾನಾಧಿಕರಣ ಬಹುವ್ರೀಹಿ)
  2. ಚಕ್ರವು ಪಾಣಿಯಲ್ಲಿ ಆವಂಗೋ ಅವನು - ಚಕ್ರಪಾಣಿ (ವ್ಯಧಿಕರಣ ಬಹುವ್ರೀಹಿ)
  3. ಫಾಲದಲ್ಲಿ ನೇತ್ರವನ್ನು ಉಳ್ಳವನು - ಫಾಲನೇತ್ರ (ವ್ಯಧಿಕರಣ ಬಹುವ್ರೀಹಿ)