ಬರ್ಟನ್ ರಿಕ್ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರ್ಟನ್ ರಿಕ್ಟರ್

ಬರ್ಟನ್ ರಿಕ್ಟರ್ (ಮಾರ್ಚ್ 22, 1931 - ಜುಲೈ 18, 2018)[೧][೨] ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಬ್ಬ ಭೌತವಿಜ್ಞಾನಿ. ಹೊಸ ಬಗೆಯ, ಭಾರ ಮೂಲಕಣವೊಂದರ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಿಕ (1976) ಪಡೆದವ.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ನ್ಯೂಯಾರ್ಕಿನಲ್ಲಿ 1931ರಲ್ಲಿ ಜನಿಸಿದ. 1948ರಲ್ಲಿ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟಿಕ್ನಾಲಜಿ (ಎಂಐಟಿ) ಸೇರಿ ಬ್ಯಾಚಲರ್ ಆಫ್ ಸೈನ್ಸ್ ಪದವಿ (1952) ಮತ್ತು ಭೌತವಿಜ್ಞಾನದಲ್ಲಿ ಡಾಕ್ಟೊರೇಟ್ ಪದವಿ (1956) ಪಡೆದ. ಎಂಐಟಿಯಲ್ಲಿದ್ದಾಗ ಮುಂದೆ ರಸಾಯನವಿಜ್ಞಾನವೇ ಭೌತವಿಜ್ಞಾನ ಎಂದು ನಿರ್ಧರಿಸಲಾಗದಿದ್ದಾಗ ಅಲ್ಲಿಯ ಪ್ರಾಧ್ಯಾಪಕ ಫ್ರಾನ್ಸಿಸ್ ಫ್ರೀಡ್‌ಮನ್ ಎಂಬಾತನ ಸಲಹೆ ಮೇರೆಗೆ ಭೌತವಿಜ್ಞಾನ ಅಧ್ಯಯನವನ್ನೇ ಕೈಗೊಂಡ.

ವೃತ್ತಿಜೀವನ[ಬದಲಾಯಿಸಿ]

ಮೂಲಕಣಗಳನ್ನು ಕುರಿತ ಆಸಕ್ತಿ ಮುಂದೆ ಇವನನ್ನು ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯದ ಅಧಿಕ-ಶಕ್ತಿ ಭೌತಪ್ರಯೋಗಾಲಯ ಪ್ರವೇಶಿಸುವಂತೆ ಮಾಡಿತು. ಅಲ್ಲಿ ಎಲೆಕ್ಟ್ರಾನ್-ದಾಸ್ತಾನು ಉಂಗುರಗಳ ಮೊದಲ ಜೋಡಿಯ ರಿಂಗ್ (ಫಸ್ಟ್ ಪೇರ್ ಆಫ್ ಎಲೆಕ್ಟ್ರಾನ್-ಸ್ಟೋರೇಜ್ ರಿಂಗ್ಸ್) ಯಂತ್ರ ನಿರ್ಮಿಸುವ ತಂಡದ ಸದಸ್ಯನಾದ. ಕ್ವಾಂಟಮ್ ಎಲೆಕ್ಟ್ರೋಡೈನಮಿಕ್ ಸಿದ್ಧಾಂತದ ಸಿಂಧುತ್ವ ಅಧ್ಯಯಿಸಲು ನೆರವಾಗುವ ಮತ್ತು ಪರಸ್ಪರ ಡಿಕ್ಕಿ ಹೊಡೆಯುವ ತೀವ್ರ ಸಾಮರ್ಥ್ಯಯುತ ಕಣಗಳ ಉತ್ಪಾದನೆ ಈ ಯಂತ್ರದಲ್ಲಿ ಸಾಧ್ಯವಾಗಿತ್ತು. 1960ರಲ್ಲಿ ಈತ ಸ್ಟ್ಯಾನ್‌ಫರ್ಡ್ ಪಾಸಿಟ್ರಾನ್-ಎಲೆಕ್ಟ್ರಾನ್ ಆಕ್ಸಿಲರೇಟಿಂಗ್ ರಿಂಗ್ ಯಂತ್ರವನ್ನು ಆಲೇಖಿಸಿದ.[೩] ಮತ್ತಷ್ಟು ಅಧಿಕಶಕ್ತಿಯ ಕಣಗಳ ಡಿಕ್ಕಿಗಳನ್ನು ಉಂಟುಮಾಡಬಲ್ಲ ಸಾಮರ್ಥ್ಯ ಇದಕ್ಕಿತ್ತು. ಈತ ಮತ್ತು ಇವನ ಸಹಕಾರ್ಯಕರ್ತರು ಈ ಯಂತ್ರ ಬಳಸಿ 1974ರ ನವೆಂಬರಿನಲ್ಲಿ ಹೊಸ ಬಗೆಯ ಭಾರ ಮೂಲಕಣವೊಂದನ್ನು ಪತ್ತೆಮಾಡಿದರು. ಇದನ್ನು ಪ್ಸೈ (ψ) ಎಂದು ಹೆಸರಿಸಲಾಯಿತು. ಪ್ಸೈ ಎಂಬುದು ಅಜ್ಞಾತ ಕಣವೊಂದನ್ನು ಕುರಿತು ಹೇಳುವ ಗ್ರೀಕ್ ವರ್ಣಮಾಲೆಯ ಅಕ್ಷರ. ಈ ಆವಿಷ್ಕಾರವನ್ನು ಕುರಿತು 35 ಮಂದಿ ಬರೆದು ಸಿದ್ಧಪಡಿಸಿದ ಪ್ರೌಢಪ್ರಬಂಧವನ್ನು ಫಿಜಿಕಲ್ ರಿವ್ಯೂ ಲೆಟರ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಯಿತು. ನೂತನ ಶೋಧವೊಂದು ಉಪಪರಮಾಣವಿಕ ಕಣ. ಇದಕ್ಕೆ ಹೇಡ್ರಾನ್ ಎಂಬ ಹೆಸರು ಕೊಡಲಾಯಿತು. ಇದರ ಅರ್ಧಾಯು ಅದರ ವೀಕ್ಷಿತ ರಾಶಿಗಿಂತಲೂ 1000 ಪಟ್ಟು ಹೆಚ್ಚು. ಇದು ನಾಲ್ಕನೆಯ ಬಗೆಯ ಕ್ವಾರ್ಕಿನಿಂದ ಉಂಟಾಗುವುದರಿಂದ ಇದರ ಆವಿಷ್ಕಾರ ಹೆಚ್ಚಿನ ಮಹತ್ತ್ವ ಪಡೆದಿದೆ. ಇವುಗಳ ಗುಣಲಕ್ಷಣಗಳನ್ನು (ಚಾರ್ಮ್) ಕುರಿತು ಷೆಲ್ಡನ್ ಗ್ಲಾಷೋ ಎಂಬ ಭೌತವಿಜ್ಞಾನಿ ವಿವರಣೆಗಳನ್ನು ಒದಗಿಸಿದ್ದಾನೆ.

ಸರಿಸುಮಾರು ಪ್ಸೈ ಮೂಲಕಣದ ಆವಿಷ್ಕಾರವಾಗುವ ವೇಳೆಗೆ ಲಾಂಗ್ ಐಲೆಂಡಿನ ಬ್ರೂಕ್‌ಹೇವನ್ ಪ್ರಯೋಗಾಲಯದಲ್ಲಿ ಸಾಮ್ಯುಯಲ್ ಟಿಂಗ್ (1936) ಎಂಬ ಭೌತವಿಜ್ಞಾನಿ ಸ್ವತಂತ್ರವಾಗಿ ಬೇರೊಂದು ಪ್ರಯೋಗಮಾಡಿ, ಇದೇ ಕಣದ ಇರುವಿಕೆಯನ್ನು ಪತ್ತೆಮಾಡಿದ್ದ. ಈತ ಮತ್ತು ಟಿಂಗ್ ಇಬ್ಬರೂ ಕಲೆತು ತಮ್ಮ ತಮ್ಮ ಆವಿಷ್ಕಾರವನ್ನು ಕುರಿತು ಚರ್ಚಿಸಿದಾಗ ಇತರ ಪ್ರಯೋಗಾಲಯಗಳಿಂದಲೂ ಈ ಬಗ್ಗೆ ಸಮರ್ಥನೆ ಒದಗಿತು. ಟಿಂಗ್ ಹೊಸ ಕಣಕ್ಕೆ J ಕಣ ಎಂದು ಹೆಸರಿಟ್ಟ. ಇದೇ ತೆರನ ಇನ್ನಿತರ ಕಣಗಳ ಆವಿಷ್ಕಾರವಾಗಿ, ಕಣಗಳ ಒಂದು ಕುಟುಂಬವೇ ಒದಗಿಬಂದಂತಾಯಿತು. ಹೀಗಾಗಿ ದ್ರವ್ಯರಚನೆಯನ್ನು ಕುರಿತು ಹೊಸ ಪ್ರಯತ್ನಗಳನ್ನು ಸಂಯೋಜಿಸುವ ಕಾರ್ಯಕ್ಕೆ ಉತ್ತೇಜನ ಲಭಿಸಿತು. ಈ ಕಾರಣ ಈತ ಮತ್ತು ಟಿಂಗ್ ಇಬ್ಬರಿಗೂ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಸಮವಾಗಿ ಹಂಚಲಾಯಿತು (1976).[೪]

ಈತ 1967ರಿಂದಲೂ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು.[೫] 1984ರಲ್ಲಿ ಈತ ಲೀನಿಯರ್ ಆ್ಯಕ್ಸೆಲರೇಟರ್ ಸೆಂಟರಿನ ನಿರ್ದೇಶಕನಾದ. ನ್ಯೂಕ್ಲಿಯರ್ ಸಂಶೋಧನೆಯನ್ನು ಅವಿರತವಾಗಿ ಮುಂದುವರಿಸಿದ ಉತ್ಸಾಹಿ ಭೌತವಿಜ್ಞಾನಿ ಈತ. 2018 ರಲ್ಲಿ ಬರ್ಟನ್ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. Weil, Martin (21 July 2018). "Obituaries - Burton Richter, Nobel Prize-winning physicist, dies at 87". The Washington Post. Retrieved 15 September 2019.
  2. "Nobel Prize-winning physicist Burton Richter dies at 87". Stanford News (Press release). Stanford News. 2018-07-19. Retrieved 2018-07-20.
  3. Peter C. Allen (Winter 1980). "Deeper and Deeper into the Atom" (PDF). Sandstone and Tile. Stanford Historical Society. 4 (2). Retrieved 15 September 2019.
  4. Crease, Robert P.; Mann, Charles C. (October 26, 1986). "In Search of the Z Particle". The New York Times. Retrieved 2007-10-02. Burton Richter was born in Brooklyn 55 years ago, but grew up in Far Rockaway, Queens.
  5. "Burton Richter | American physicist". Encyclopedia Britannica (in ಇಂಗ್ಲಿಷ್). Retrieved 2019-09-15.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: