ಬದಾಮಿ ಬನಶಂಕರಿ
ಬದಾಮಿ ಶ್ರೀ ದೇವಿ ಬನಶಂಕರಿ; ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು.
ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ - ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು.
ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು.
ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ.
ವೈಶಾಖ ಮಾಸದಲ್ಲಿ ಬರುವ 'ಆಗಿ ಹುಣ್ಣಿಮೆ' (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾ-ಪಿತೃ ದ್ರೋಹವು, ವೇದನಿಂದ ಪಾತಕವೂ, ಪರಕನ್ಯಾಯಾಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ.
ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು:
ಮಾಲಿನಿ (ಮಲಪ್ರಭಾ ನದಿ) ತೀರ್ಥ ಸರಸ್ವತಿ (ಹಳ್ಳ) ತೀರ್ಥ ಹರಿದ್ರಾ (ದೊಡ್ಡ ಹೊಂಡ) ತೀರ್ಥ ಪದ್ಮ ತೀರ್ಥ ತೈಲ ತೀರ್ಥ ರಂಗ ತೀರ್ಥ ಅಗಸ್ತ್ಯ ತೀರ್ಥ ಅಶ್ವತ್ಥಾಮ ತೀರ್ಥ ಭಾಸ್ಕರ ತೀರ್ಥ ಕೋಟಿ ತೀರ್ಥ ವಿಷ್ಣು ಪುಷ್ಕರಣಿ ನಾಗೇಶ ತೀರ್ಥ
ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು.
ಬಾದಾಮಿ ಬನಶಂಕರಿ ಕ್ಷೇತ್ರವು 'ದಕ್ಷಿಣ ಕಾಶಿ' ಎಂದೂ ಕರೆಯಲ್ಪಡುತ್ತದೆ. ಇಂತಹ ಕ್ಷೇತ್ರದ ಮಹಿಮೆಯನ್ನು ರಾಮಲಿಂಗ ದೇವಸ್ಥಾನವೆಂದು ಕರೆಯಲ್ಪಡುವ ಹಾಸನ ಜಿಲ್ಲೆಯ 'ರಾಮದೇವರಹಳ್ಳಿ' ಎಂಬ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿಯೂ ಸಹ ನೀರು ಉದ್ಭವವಾಗುವಂತಹದ್ದನ್ನು ನೋಡಬಹುದು. ಅದೇ ರೀತಿ ತುಮಕೂರು ಜಿಲ್ಲೆಯ 'ಶಿವಗಂಗೆ' ಪುಣ್ಯಕ್ಷೇತ್ರದಲ್ಲಿ 'ರಾಮ ಚುಲುಮೆ' ಎಂಬ ಪ್ರದೇಶವಿದ್ದು, ಇಲ್ಲಿ ಸದಾ ನೀರನ್ನು ನೋಡಬಹುದು. ಇಂಥಹ ಕ್ಷೇತ್ರಗಳಿಗೆ ಪೌರಾಣಿಕ ವಸ್ತುವನ್ನು ಸೇರಿಸಿ, ಆರಾಧಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
'ಗಂಗಾಸ್ನಾನ - ತುಂಗಾಪಾನ' ಎಂಬುದು ಗಾದೆ ಮಾತು. ಈ ಪವಿತ್ರ ಕ್ಷೇತ್ರಗಳಿಗೆ ಒಂದೊಂದು ನಂಬಿಕೆ, ಆಚರಣೆ ಇರುವುದನ್ನು ನಾವು ಕಾಣಬಹುದು. ಮೂಲ: ಕಹಳೆ