ಬಂಟರು
ಭಾಷೆಗಳು | |
---|---|
ತುಳು ಕನ್ನಡ (Kundagannada dialect) | |
ಧರ್ಮ | |
ಹಿಂದೂ ಜೈನ | |
ಸಂಬಂಧಿತ ಜನಾಂಗೀಯ ಗುಂಪುಗಳು | |
ಜೈನ ಬಂಟ ಸಾಮಂತ ಕ್ಷತ್ರಿಯ |
ಪೀಠಿಕೆ
[ಬದಲಾಯಿಸಿ]ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಜಾತಿಯ ಜನರು ತಮ್ಮದೇ ಆದ ವಿಶಿಷ್ಟ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ಸಂಪ್ರದಾಯ ಹಾಗೂ ಈ ಜಿಲ್ಲೆಯ ಸಂಸ್ಕೃತಿಗನುಸಾರವಾಗಿ ನಡೆದುಕೊಳ್ಳುತ್ತಾರೆ. ನಮ್ಮ ಜಿಲ್ಲೆಯಲ್ಲಿ ಬ್ರಾಹ್ಮಣ, ಗೌಡ, ಪೂಜಾರಿ, ಕುಲಾಲ್, ಅಜಲಾಯ ಎಂಬ ಅನೇಕ ಜಾತಿಗಳಿದ್ದು ಇವರಲ್ಲಿ ಬಂಟ ಜಾತಿಯೂ ಒಂದು. ಬಂಟರು ತಮ್ಮ ಜಾತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುವುದರ ಜೊತೆಗೆ ಸಮಾಜದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸಿಕೊಂಡಿದ್ದಾರೆ. ಬಂಟರು ಇತರ ಜಾತಿಗಳೊಂದಿಗೆ ಅನ್ಯೋನ್ಯತೆಯನ್ನು ಪಡೆದಿದ್ದು ಸ್ಥಳೀಯ ಭೂಗಣೆ ಗುತ್ತು, ಬೀಡುಗಳ ಮಟ್ಟದ ಅಧಿಕಾರಿಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇಂದಿಗೂ ಮಂಗಳೂರು ಉಡುಪಿ, ಕುಂದಾಪುರ ಪ್ರದೇಶಗಳ ಕೆಲವು ಭಾಗಗಳಲ್ಲಿ ಬಂಟರು ಬೀಡು ಗುತ್ತುಗಳ ಮನೆಗಳಿವೆ.
ಬಂಟರ ಇತಿಹಾಸ
[ಬದಲಾಯಿಸಿ]ಬಂಟರ ಇತಿಹಾಸವನನ್ನು ಆಲೂಪರಾಜರ ಆಡಳಿತದ ಕಾಲದಿಂದ ಗುರುತಿಸಲಾಗುತ್ತದೆ. ಆ ಬಳಿಕ ಇವರು ವಿಜಯನಗರ ಸಾಮ್ರಾಜ್ಯದ ಆಡಳಿತಾಧಿಕಾರದಲ್ಲಿ ಭಾಗವಹಿಸಿದರಲ್ಲದೆ, ಭಟರು(ಸೈನಿಕ) ಆಗಿದ್ದರೆಂದು ಅನೇಕ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ಭಟರೇ, ಬಂಟರಾಗಿ ಮಾನ್ಯತೆ ಪಡೆದರೆಂದು ಸರ್ವ ಸಮ್ಮತದಿಂದ ಅಭಿಪ್ರಾಯಕ್ಕೆ ಬರಲಾಗಿದೆ. ಈ ಬಂಟ ಸಮಾಜವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಶಾಲೀ ಜನಾಂಗವೆಂದು ಗುರುತಿಸಬಹುದಾಗಿದೆ. ಇವರು ಸ್ವಾಭಿಮಾನಿಗಳು, ಧೈರ್ಯಶಾಲಿಗಳು, ಇತರ ಪಂಗಡಗಳಿಂದ ಗೌರವಿಸಲ್ಪಡುವವರು. ಇವರು ಬ್ರಟಿಷರ ಕಾಲದಿಂದಲೂ ತುಳುನಾಡಿನಲ್ಲಿ ಸಾಮಂತ ಅರಸರಾಗಿದ್ದರೆಂದು ನಂಬಲಾಗಿದೆ. ಇವರು ಮಾತೃವಂಶೀಯ ಕಟ್ಟಳೆಗಳನ್ನು ಅನುಸರಿಸಿಕೊಂಡು ಬಂದುದರಿಂದ ಸ್ತ್ರೀಯ ಅಧಿಕಾರವನ್ನು ಮನ್ನಿಸಿಕೊಂಡು, ಅದರ ಪ್ರತ್ಯೇಕ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಆದರೆ ಇಲ್ಲಿ ಕೂಡ ಪುರುಷರ ಹಮ್ಮು, ಬಿಗುಮಾನಗಳು ಮತ್ತು ಸ್ತ್ರೀಯರ ಹಕ್ಕು ಸ್ಥಾಪನೆ ಇವುಗಳೊಂದಿಗೆ ನಡೆದ ದೀರ್ಘ ಸಂಘರ್ಷವೇ ತುಳುನಾಡಿನ ಚರಿತ್ರೆಯಾಗಿ ಇಂದಿನವರೆಗೂ ಹರಿದು ಬಂದಿದೆ. ಅಳಿಯ ಕಟ್ಟು ಸಂತಾನ ಬಂಟರಲ್ಲಿ ಮಾತ್ರವಲ್ಲದೆ ಇತರ ಕೆಲವು ಜಾತಿ, ಪಂಗಡಗಳಲ್ಲಿಯೂ ಇದೆ ಎಂಬುದನ್ನು ಗಮನಿಸಬೇಕು.ಇದು ಭೂತಾಳಪಾಂಡ್ಯನಿಂದ ಬಂದುದಾಗಿದೆ. ಆದರೆ ಅಳಿಯ ಕಟ್ಟು ಪದ್ದತಿ ಬಂಟ ಸಮಾಜದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.
ಬಂಟರ ಸಂಪ್ರದಾಯ ಮತ್ತು ಆಚರಣೆ (ಬಂಟರ ಸಾಂಸ್ಕೃತಿಕ ಜೀವನ)
[ಬದಲಾಯಿಸಿ]ಪಾಡ್ದನ, ಸಂಧಿಗಳು, ಜನಪದ ಆಚರಣೆಗಳು, ನಂಬಿಕೆಗಳ ಹಿನ್ನಲೆಯಲ್ಲಿ ಬಂಟರ ಸಾಂಸ್ಕೃತಿಕ ಬದುಕಿನ ಒಳಮುಖಗಳು ಗೋಚರಿಸುತ್ತವೆ. ಇದರಲ್ಲಿ ಒಬ್ಬ ಪೂಂಜ ಬಲ್ಲಾಳ, ಪೆರಗಡೆ, ಒಬ್ಬ ಆಳ್ವ ಇವರೆಲ್ಲರೆ ನಡವಳಿಕೆಗಳು ಸೂಕ್ಷ್ಮವಾಗಿ ಹೆಣೆದುಕೊಂಡಿವೆ . ಬಂಟರು ಮೂಲತಃ ಭೂತಾರಾಧನೆಯ ಜೊತೆಗೆ ಮೃತಾತ್ಮರ “ಆರಾಧಕರೂ” ಹೌದು. ಇದು ತುಳುನಾಡಿನ ಕೆಲವು ವರ್ಗಗಳಲ್ಲೂ ಆಚರಣೆಯಲ್ಲಿದೆ. ಇವರು ಭೂತಾರಾಧನೆಗಿಂತ ಮೊದಲು ನಾಗಾರಾಧಕರಾಗಿದ್ದಿರಬೇಕು ಎನ್ನಲಾಗುತ್ತಿದೆ. ತುಳುನಾಡಿನಲ್ಲಿ ನಾಗಾರಾಧನೆ ವ್ಯಾಪಕವಗಿ ಹಬ್ಬಿದುದರಿಂದಲೇ ಇದನ್ನು ‘ ನಾಗರ ಖಂಡ’ ಎನ್ನುತ್ತಿದ್ದರು. ಸ್ವಲ್ಪ ಭೂಮಿ ಇದ್ದರೆ, ಈ ಭೂಮಿಯಲ್ಲಿ ಒಂದು ನಾಗಬನ ಇದ್ದೇ ಇರುತ್ತದೆ. ಅಲ್ಲದೆ ಕುಟುಂಬದ ಮೂಲಸ್ಥಾನವನ್ನು ನಾಗಾರಾಧನೆಯ ಮೂಲಕವೂ ಗುರುತಿಸುತ್ತಾರೆ.ಇಂದಿಗೂ ಸಹ ಪ್ರಮುಖ ಕುಟುಂಬಗಳು ತಮ್ಮ ತಮ್ಮ ನಾಗ ಮೂಲಸ್ಥಾನವನ್ನು ಹೊಂದಿವೆ. ನಾಗನನ್ನು “ ಬೆಮ್ಮರ್” ಎಂದು ಕೆಲವೊಮ್ಮೆ “ ನಾಗ ಬೆಮ್ಮರ್” ಎಂದೂ ಕರೆಯುತ್ತಾರೆ. ಭೂತಾರಾಧನೆಯ ಹೆಚ್ಚಿನ ಸ್ಥಳಗಳಲ್ಲಿ ಬೆಮ್ಮನೆ ಗುಂಡ ಇದ್ದೇ ಇರುತ್ತದೆ. ಇಲ್ಲಿ ಆರಾಧನೆಯೂ ಸಹ ನಡೆಯುತ್ತದೆ. ಹೆಚ್ಚಿನ ಬಂಟರ ಮನೆಗಳಲ್ಲಿ ಭೂತದ ಮಣಿಯೋ, ಮುಂಡ್ಯ ಮಂಚ, ಉಯ್ಯಾಲೆಗಳು ಇರುತ್ತವೆ. ಇಡೀ ಊರಿನವರು ಭಜಿಸುವ “ರಾಜನ್ ದೈವಗಳು” ಹಲವಾರು ಬಂಟರ ಮನೆತನದ ಮನೆಗಳಲ್ಲಿ ಚಾವಡಿಯು ತೆಂಕು ದಿಕ್ಕಿನ ಕೋಣೆಯೊಳಗಿರುತ್ತದೆ. ಅಲ್ಲಿ ಮಂಚವೊಂದರ ಮೇಲೆ ಮೊಗ ಮೂರ್ತಿ, ಖಡ್ತಲೆ, ಮಣಿಕೂಬೆ ಇತ್ಯಾದಿಗಳಿರುವುದನ್ನು ಕಾಣಬಹುದು. ಆ ಮನೆತನದವರೇ ಸಂಜೆ, ಬೆಳಗ್ಗೆ ದೀಪವಿಟ್ಟು ಹಾಲು ನೀರು ಇರಿಸಿ ಪ್ರಾರ್ಥನೆ ಮಾಡುತ್ತಾರೆ. ಇನ್ನು ಕೆಲವು ದೈವಗಳು ಊರಿಗೆ ಸಂಬಂಧಪಟ್ಟದ್ದರಿಂದ ಅವುಗಳು ಪ್ರತ್ಯೇಕ ದೈವಭಂಡಾರದ ಮನೆತನಗಳು ಹೊಂದಿರುತ್ತದೆ. ಇದಕ್ಕೆಊರವರ ಒಂದೊಂದು ರೀತಿಯ ಸಹಾಯ ಸಹಕಾರದೊಡನೆ ಜಾತ್ರೆ ಉತ್ಸವಾದಿಗಳು ನಡೆಯುತ್ತದೆ. ಈ ಜಿಲ್ಲೆಯ 1995 ರ ಅಂಕಿ ಅಂಶಗಳ ಪ್ರಕಾರ ಬಂಟಜನಾಂಗದ ಕಾರ್ಯ ಚಟುವಟಿಕೆಗಳನ್ನು ಇಲ್ಲಿ ನೀಡಲಾಗಿದೆ.
ಬಂಟರಲ್ಲಿನ ೪ ರೀತಿಗಳು
[ಬದಲಾಯಿಸಿ]ಬಂಟರ ಜಾತಿಯಲ್ಲಿ 4 ರೀತಿಯ ಬಂಟರಿದ್ದಾರೆ.
- ಬಂಟರು ಅಥವಾ ತುಳುನಾಡಿನ ಸಾಮಾನ್ಯ ಬಂಟರು
- ನಾಡವರು ಯಾ ನಾಡ ಬಂಟರು
- ಪರಿವಾರ ಬಂಟರು
- ಜೈನ ಬಂಟರು
ಇವರಲ್ಲಿ ಎದ್ದು ಕಾಣುವ ವ್ಯತ್ಯಾಸಗಳೇನೂ ಕಂಡು ಬರುವುದಿಲ್ಲ ಆದರೆ ಕೆಲವೊಂದು ವ್ಯತ್ಯಾಸಗಳನ್ನು ಅವರ ಆಚರಣೆಯ ಸಂದರ್ಭದಲ್ಲಿ ಗುರುತಿಸಬಹುದು.ಬಂಟರಲ್ಲಿ ಅನೇಕ ಉಪಜಾತಿ (ಕುಲನಾಮ) ಗಳಿವೆ ಒಟ್ಟು 24 ಕುಲನಾಮಗಳಿವೆ. ಅವುಗಳೆಂದರೆ ಆಳ್ವ, ನ್ಯಾಕ್, ಪೂಂಜ, ಗಂಭೀರ್, ಹೆಗ್ಡೆ, ಮಾರ್ಲ, ಮಾರಡಿ, ಕಿಲ್ಲೆ, ಭಂಡಾರಿ, ಚೌಟ, ಬಲ್ಲಾಳ್, ರೈ, ಅಡಪ, ಸೂಡ, ಶೆಟ್ಟಿ, ಅಡ್ಯಂತಾಯ, ಶೇಣವ. ಈ ಕುಲನಾಮಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇದೆ. ಆದರೆ ಇವುಗಳು ಒಂದೆ ಜಾತಿಯಲ್ಲಿ ಬರುತ್ತದೆ. ಆದ್ದರಿಂದ ಈ ಉಪಜಾತಿಗಳೊಂದಿಗೆ ನಿಕಟ ಸಂಬಂಧವಿರುತ್ತದೆ. ಬಂಟರ ಮುಖ್ಯ ವ್ಯಾವಹಾರಿಕ ಭಾಷೆ ತುಳು.ಆಳಿಯ ಕಟ್ಟು ಸಂಪ್ರದಾಯಕ್ಕೆ ಹೆಸರು ವಾಸಿಯಾಗಿರುವ ಬಂಟರು ಮಾತೃ ಕೇಂದ್ರಿತ ಕೌಟುಂಬಿಕ ವ್ಯವಸ್ಥೆಯನ್ನು ಪಾಲಿಸುತ್ತಿದ್ದರು. ಅಳಿಯ ಕಟ್ಟು ಒಂದು ವಿಶಿಷ್ಟವಾದ ಸಂಪ್ರದಾಯ.ಅದರಂತೆ ಮಾವನ ಆಸ್ತಿ,ಅಧಿಕಾರ ಆತನ ಮಗನಿಗಲ್ಲದೆ ಅಳಿಯನಿಗೆ ಸೇರಬೇಕು.ಇದರಲ್ಲಿ ಸ್ತ್ರೀ ಪ್ರಾಧಾನ್ಯತೆಯನ್ನು ಗುರುತಿಸಬಹುದು.ಪಾರಂಪರಾಗತ ಅಧಿಕಾರದ ವಿಷಯದಲ್ಲಿ (ಉದಾಹರಣೆಗೆ ದೈವಸ್ಥಾನಗಳ ಆಡಳಿತ) ಈ ಪದ್ದತಿಯನ್ನು ಇಂದಿಗೂ ಆಚರಿಸಿಕೊಂಡು ಬರಲಾಗಿದೆ.
ಬಂಟರ ಇಂದಿನ ಸ್ಥಿತಿಗತಿಗಳು
[ಬದಲಾಯಿಸಿ]ಬಂಟ ಸಮಾಜವು ವಿಶಾಲವಾಗಿ ವ್ಯಾಪಿಸಿಕೊಂಡಿದೆ. ತಮ್ಮ ಬಾಲ್ಯದಲ್ಲಿ ಕಷ್ಟವಿದ್ದರೂ ಧೈರ್ಯದಿಂದ ಮುನ್ನುಗ್ಗಿ ದೂರದ ಪ್ರದೇಶಗಳಿಗೆ ಹೋಗಿ ಅಲ್ಲಿ ಉದ್ಯಮ ಆರಂಭಿಸಿದವರು ಇದ್ದಾರೆ. ಈ ಉದ್ಯಮದಿಂದ ತಮ್ಮ ಹುಟ್ಟೂರಿನವರ ಉತ್ತಮ ಜೀವನಕ್ಕೆ ಕಾರ್ಯಕರ್ತರಾಗಿದ್ದಾರೆ.ಮುಂಬಯಿಯ ಹೆಚ್ಚಿನ ಹೋಟೇಲ್ ಉದ್ಯಮಿಗಳು ಬಂಟರೆಂದರೆ ನಂಬಲು ಕಷ್ಟವಾಗುತ್ತದೆ,ಆದರೆ ಅದು ಸತ್ಯ,ಮುಂಬಯಿ ಮಾತ್ರವಲ್ಲದೆ ಬೆಂಗಳೂರು ಮತ್ತು ದೂರದ ದುಬೈಯಲ್ಲೂ ಬಂಟ ಸಮುದಾಯದವರು ಸಾಕಷ್ಟು ಮಂದಿಯಿದ್ದಾರೆ. ಬಂಟ ಮುಖಂಡರೆಲ್ಲರೂ ಸೇರಿ ತಮ್ಮ ಜಾತಿಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಅವರು “ ವಿಶ್ವ ಬಂಟರ ಯಾನೆ ನಾಡವರ ಸಂಘ”ವನ್ನು" ಕಟ್ಟಿದ್ದಾರೆ. ಈ ಸಂಘವು ಬಂಟರಿಗಾಗಿ ಅನೇಕ ರೀತಿಯ ಸಹಾಯವನ್ನು ಮಾಡುತ್ತಿದೆ. ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಬಡವರಿಗಾಗಿ ತಮ್ಮಲ್ಲೇ ಉದ್ಯೋಗ ಕೊಟ್ಟು ಅವರ ಮುಂದಿನ ಜೀವನಕ್ಕೆ ದಾರಿ ಮಾಡಿದ್ದಾರೆ. ಬಂಟರು ಇಂದು ಅನೇಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಕೆಲವರಂತೂ ತಮ್ಮ ಸಂಘಕ್ಕಾಗಿ ದುಡಿಯುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಸರಿಸುಮಾರು 21 ಲಕ್ಷದಷ್ಟು ಮಂದಿ ಮಾತ್ರ ಬಂಟರಾಗಿರುತ್ತಾರೆ.(ಏಳು ನೂರು ಕೋಟಿ ಪ್ರಪಂಚದ ಜನಸಂಖ್ಯೆ)
ಬಂಟರಲ್ಲಿ ಮದುವೆ ಮತ್ತು ವರದಕ್ಷಿಣೆ
[ಬದಲಾಯಿಸಿ]ಬಂಟರ ಮದುವೆಗಳು ಅವರ ಜಾತಿಯ ಸಂಪ್ರದಾಯದಂತೆ ನಡೆಯುತ್ತದೆ. ‘ವಿವಾಹ ನಿಶ್ಚಿತಾರ್ಥ’ ಕಾರ್ಯವು ಒಂದು ಮಹತ್ವದ್ದಾಗಿದೆ. ಇಲ್ಲಿ ವಿವಾಹದ ದಿನಾಂಕ ಮಾತ್ರ ನಿಗದಿ ಆಗಿರುತ್ತದೆ. ವರದಕ್ಷಿಣೆ ಮೊದಲೇ ನಿಶ್ಚಯವಾಗಿದ್ದು ಆ ದಿನದಂದು ವರದಕ್ಷಿಣೆಯ ಅರ್ಧದಷ್ಟು ಹುಡುಗಿಯ ಕಡೆಯವರು ಕೊಡುತ್ತಾರೆ. ಹಿಂದಿನ ಕಾಲದಲ್ಲಿ ವಿವಾಹವು ಬಹಳ ಹತ್ತಿರದ ಸಂಬಂಧದಲ್ಲಿ ನಡೆಯುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ದೂರದ ತಾಲೂಕುಗಳೊಳಗೆ ವಿವಾಹ ನಡೆಯುತ್ತದೆ. ಮದುವೆಯ ಸಮಾರಂಭವನ್ನು ಹಿಂದಿನ ಕಾಲದಲ್ಲಿ ವರನ ಅಥವಾ ವಧುವಿನ ಮನೆಯಲ್ಲಿ ನಡೆಸುತ್ತಿದ್ದರು. ನಂತರ ಕ್ರಮೇಣ ಮದುವೆಗಳು “ಕಲ್ಯಾಣ ಮಂಟಪ”ದಲ್ಲಿ ನಡೆಯಲಾರಂಭಿಸಿದವು. ಇದರಿಂದಾಗಿ ಹೊರಜಾತಿಯ ಜನರ ಸಂಪರ್ಕ ಹೆಚ್ಚಾಯಿತು. ವಿವಾಹವು ಬಂಟರ ಸಂಪ್ರದಾಯದಂತೆ ನಡೆಯುತ್ತದೆ. ಮದುವೆಯ ದಿನ ರಾತ್ರಿ ಅಥವಾ ನಂತರದ 2-3 “ಮಾಮಿ ಸೆಕೆ” ಎಂಬ ಕಾರ್ಯಕ್ರಮವಿರುತ್ತದೆ . ಈ ಸಮಾರಂಭದಲ್ಲಿ ವರನು ಅತ್ತೆಯ ಆಥಿತ್ಯವನ್ನು ಸ್ವೀಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಚಿನ್ನದ ಉಂಗುರ ಅಥವಾ ಇನ್ನಾವುದೋ ಕಾಣಿಕೆ ನೀಡುವುದು ಸಂಪ್ರದಾಯ. ಈ ಎಲ್ಲಾ ಕಾರ್ಯಕ್ರಮಗಳ ಖರ್ಚು ವಧುವಿನ ಕಡೆಯವರದ್ದೇ. ಲಕ್ಷಾಂತರ ರೂಪಾಯಿಯ ವೆಚ್ಚದಲ್ಲಿ ನಡೆಯುವ ಮದುವೆ, ಔತಣ ಕೂಟಕ್ಕಾಗಿಯೇ ಹೆಚ್ಚು ವರದಕ್ಷಣೆಯನ್ನು ಕೇಳುತ್ತಾರೆ. ವರದಕ್ಷಿಣೆ ಒಂದು ಸಾಮಾಜಿಕ ಪೀಡೆ ಎಂದು ತಿಳಿದಿರುವ ವಿದ್ಯಾವಂತರೇ ಹೆಚ್ಚು ವರದಕ್ಷಿಣೆಯನ್ನು ಪಡೆಯುವುದು ವಿಪರ್ಯಾಸವೇ ಸರಿ. ಇದು ಸಮಾಜದ ದೊಡ್ಡ ಪಿಡುಗು.ಆದರೆ ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ವರದಕ್ಷಿಣೆಯ ಪಿಡುಗು ಕಡಿಮೆಯಾಗಿದೆ.ವರದಕ್ಷಿಣೆಗೆ ನಗದು ಬೇಡಿಕೆ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.ಇದು ಒಳ್ಳೆಯ ಬೆಳವಣಿಗೆ.ಆದರೆ ಮದುವೆಯ ಐಶಾರಾಮೀ ಛತ್ರಗಳಲ್ಲಿ ಎಲ್ಲಾ ಖರ್ಚೂ ಹುಡುಗಿಯ ಕಡೆಯವರೇ ಹಾಕಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಇದೂ ಸ್ವಲ್ಪ ನಿಯಂತ್ರಣಕ್ಕೆ ಬಂದರೆ ಒಳ್ಳೆಯದು. ಬಂಟರು ಎಲ್ಲೆಡೆ ಕೆಲಸ ಮಾಡುತ್ತಿದ್ದು ಅವರು ಪ್ರತಿಯೊಂದು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಜಿಲ್ಲೆಯ ಹೆಚ್ಚಿನ ಬಂಟರು ಕೃಷಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರಲ್ಲಿ ಅತೀ ಹೆಚ್ಚು ಭೂಮಿ ಇದ್ದು ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗಿದ್ದಾರೆ, ಕೆಲವರು ತಮ್ಮ ಜೀವನಕ್ಕೆ ತಕ್ಕ ಮಟ್ಟಿಗೆ ಸಾಕಾಗುಷ್ಟು ಭೂಮಿ ಹೊಂದಿದವರು ಇದ್ದಾರೆ. ಭೂ ಮಸೂದೆ ಜಾರಿಗೆ ಬಂದುದರಿಂದ ಹಲವು ಕಡೆಗಳಲ್ಲಿ ಜಮೀನಿನ ಒಡೆತನ ತಪ್ಪಿ ಅದೆಷ್ಟೋ ಮಂದಿ ಅನ್ಯ ಉದ್ಯೋಗಗಳನ್ನು ಆಶ್ರಯಿಸಬೇಕಾಯಿತು. ಕೆಲವರು ಬಹಳ ಉತ್ತಮ ಕೃಷಿಕರಾಗಿ , ಕೃಷಿಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಮಂದಿ ತಮ್ಮ ಕೃಷಿ ಕಾರ್ಯದಿಂದಾಗಿ “ ಉತ್ತಮ ಕೃಷಿಕ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಬಂಟರು
[ಬದಲಾಯಿಸಿ]ಬಂಟರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಬಂಟರ ಸಂಘದ’ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನದ ಮೂಲಕ ಕಲಿಯುವ ವಿದ್ಯಾರ್ಥಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಂತೆಯೇ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಒದಗಿಸಿ ಕಲಿಯುವವರಿಗೂ, ಕಲಿಸುವವರಿಗೂ ಅವಕಾಶ ಮಾಡಿಕೊಟ್ಟಿದ್ದರಿಂದ ಜಿಲ್ಲೆಯ ನಾನಾ ಕಡೆಗಳಿಂದ, ಗ್ರಾಮಾಂತರ ಪ್ರದೇಶಗಳಿಂದ ಬಂದು ದೊಡ್ಡ ಸಾಧನೆ ಮಾಡಿದವರಿದ್ದಾರೆ, ಉಡುಪಿ ಜಿಲ್ಲೆಯ ಶಿರ್ವ ಮಂಚಕಲ್ಲಿನಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಮುದ್ದಣ ಶೆಟ್ಟಿಯವರು ಕಂಡ ಕನಸು ನನಸಾಗಿರುವುದನ್ನು ಕಾಣಬಹುದು. ಇಲ್ಲಿ ನರ್ಸರಿ ತರಗತಿಯಿಂದ ಮೊದಲುಗೊಂಡು ಪ್ರಥಮ ದರ್ಜೆ ಕಾಲೇಜಿನ ತನಕ ವಿಸ್ತರಿಸಲ್ಪಟ್ಟು ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ವಿದ್ಯಾಸಂಸ್ಥೆಯಾಗಿ ರಾರಾಜಿಸುತ್ತಿದೆ. ಶಿಕ್ಷಕರಾಗಿ ಹೆಸರು ಪಡೆದ ಕುಶಲ ಶೆಟ್ಟಿ ಅವರು ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ವಿದ್ಯಾಸಂಸ್ಥೆ ಸ್ಥಾಪಿಸಿ ನೂರಾರು ಮಂದಿಯನ್ನು ತರಬೇತಿಗೊಳಿಸಿ ಅನೇಕರಿಗೆ ಆಸರೆಯನ್ನು ನೀಡುದ್ದಾರೆ. ಅತಿ ಕಡಿಮೆ ಕಾಲದಲ್ಲಿ ಉತ್ತುಂಗಗಕ್ಕೇರಿದ ಮಹಾವಿದ್ಯಾಲಯ, ನಿಟ್ಟೆ .ಇಲ್ಲಿ ಆಂಗ್ಲ ಭಾಷಾ ಕೆ.ಜಿ ತರಗತಿಯಿಂದ ಪದವಿ ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣದ ಕೋರ್ಸುಗಳು ಕೂಡ ಇವೆ. ಕಾಸರಗೋಡಿನ ಕನ್ನಡದ ಹೋರಾಟಗಾರ ಕವಿ, ಸಾಹಿತಿ, ವಾಙ್ಮಿ, ಸಮಾಜ ಸೇವಕ ,ಜನಮನದಲ್ಲಿ ಸ್ಥಿರವಾಗಿರುವ ಕಯ್ಯಾರ ಕಿಞ್ಞಣ್ಣರೈಯವರು. ಶಿಕ್ಷಣದ ಎಲ್ಲಾ ಭಾಗಗಳಲ್ಲಿ ಕೈ ಜೋಡಿಸಿ, ರಾಷ್ತ್ರ ರಾಜ್ಯ ಪ್ರಶಸ್ತಿಗಳಿಂದ ಮನ್ನಣೆ ಪಡೆದರು. ಅನೇಕ ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಹೀಗೆ ಬಂಟರು ಶಿಕ್ಷಣದ ಅಭಿವೃದ್ಧಿಗಾಗಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಸಾಹಿತ್ಯ ಮತ್ತು ಬಂಟರು
[ಬದಲಾಯಿಸಿ]ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಂಟರು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಕಯ್ಯಾರ ಕಿಞ್ಞಣ್ಣ ರೈ, ಪ್ರೊ. ವಿವೇಕ ರೈ, ಕುಕ್ಕುಜೆ ರಾಮಯ್ಯ ನಾಯ್ಕರು, ಪೊಳಲಿ ಶೀನಪ್ಪ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರರಾದ ಎನ್ ಎಸ್ಸ್ ಕಿಲ್ಸೆ ಕಳ್ಳಿಗೆ ಮಹಾಬಲ ಭಂಡಾರಿ, ಕೆದಂಬಾಡಿ ಜತ್ತಪ್ಪ ರೈ, ಶ್ರೀಮತಿ ಇಂದಿರಾ ಹೆಗಡೆ ಮೊದಲಾದವರನ್ನು ಇಲ್ಲಿ ನೆನೆಯಬಹುದು. ಗಡಿನಾಡು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟ ನಡೆಸಿದ ಬಂಟ ಜನಾಂಗದ ಕವಿ ಕಯ್ಯಾರ ಕಿಞ್ಞಣ್ಣ ರೈ. ಇವರು ಬಂಟದ ಬಗ್ಗೆ “ಸಂಪರ್ಕ” ಎಂಬ ಪುಸ್ತಕವನ್ನು ಬರೆದರು. “ ಯಾರು ಏನಾದರೂ ಆಗುವುದು ಹುಟ್ಟಿನಿಂದಲ್ಲ; ಕಲಿ ವಿದ್ಯೆಯಿಂದ, ಬೆಳೆಸಿಕೊಂಡ ಸಂಸ್ಕಾರದಿಂದ……” ಎಂದು ಹೇಳಿದರು. ತುಳು ಪಾಡ್ದನಗಳು ಬಾಯಿಂದ ಬಾಯಿಗೆ ಹರಿದು ಬಂದಿರುವುದಲ್ಲದೆ ಲಿಖಿತ ರೂಪದಲ್ಲೇನೂ ಇರಲಿಲ್ಲ. ಅದನ್ನು ಪ್ರೊ. ಬಿ,ಎ ವಿವೇಕ ರೈ ಮುಂತಾದವರು ಸೇರಿ ದಾಖಲಿಸುತ್ತಿದ್ದಾರೆ. ಆದರೆ ಇದರ ರಚನಾಕಾರರು ಯಾರೆಂದು ತಿಳಿದಿಲ್ಲ. ಅವರು ಒಟ್ಟು 119 ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ 67 ಯಕ್ಷಗಾನ ಕೃತಿಗಳು. ಅವರು ಕವಿ, ನಾಟಕಕಾರ, ಭಾಷಾಂತರಕಾರ, ಲೆಖಕ, ಸಮರ್ಥ ಅಧ್ಯಾಪಕ, ಅರ್ಥಧಾರಿ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದಾರೆ. ಅವರ “ರಾಷ್ಟ್ರ ವಿಜಯ” ಭಾರತ ಸರ್ಕಾರದಿಂದ ಬಹುಮಾನಿತ ಕೃತಿ. ದಿ.ಕುಕ್ಕುಜೆ ರಾಮಯ್ಯ ನಾಯ್ಕರೆಂಬವರು ತೊರವೆ ರಾಮಾಯಣ ಗಾತ್ರಕ್ಕೆ ಸಮನಾದ “ ಜ್ಞಾನಾಮೃತ” ವೆಂಬ ಬೃಹತ್ ಭಾಮಿನೀ ಷಟ್ಪದಿ ಗ್ರಂಥವನ್ನು ರಚಿಸಿದ್ದರು. ಯಕ್ಷಗಾನದ ಬಗ್ಗೆ “ಯಶೋಧರ ಚರಿತ್ರೆ” ಎಂಬ ಪುಸ್ತಕವನ್ನು ಯಕ್ಷಗಾನ ಸರಸ್ವತಿ ಎಂದು ಕರೆಯಲ್ಪಡುವ ಕೆ.ಪಿ. ವೆಂಕಪ್ಪ ಶಟ್ಟಿ ರಚಿಸಿದರು. ಪೊಳಲಿ ಶೀನಪ್ಪ ಹೆಗ್ಡೆಯವರು ಹೆಸರಾಂತ ತುಳು ಮತ್ತು ಕನ್ನಡ ಬರಹಗಾರರಾಗಿದ್ದು “ಮಿಥ್ಯನಾರಾಯಣ ಕಥೆ” ಜನಪ್ರಿಯ ಕೃತಿಯ ಕರ್ತೃವಾಗಿದ್ದಾರೆ, ಇದಲ್ಲದೆ “ಪೊಳಲಿ ರಾಜ ರಾಜೇಶ್ವರಿ ಕ್ಷೇತ್ರ ಮಹಾತ್ಮೆ” “ತುಳುವಾಲ ಬಲಿಯೇಂದ್ರ” ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯನ ಅಳಿಯಕಟ್ಟು ಎಂಬ ಕೃತಿಯನ್ನು ರಚಿಸಿದರು. ಸ್ವಾತಂತ್ರ ಪೂರ್ವ ಬಂಟ ಕವಿಗಳಲ್ಲಿ ನಮಗೆ ನೆನಪಿಗೆ ಬರುವುದು ಎನ್. ಎಸ್ ಕಿಲ್ಲೆ. ಇವರು ಕವಿ, ಲೇಖಕ, ಉತ್ತಮ ಮಾತುಗಾರ. ಇವರು ಸರ್ವೋದಯ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಇವರು ಅನೇಕ ಲೆಖನಗಳನ್ನು ಬರೆಯುತ್ತಿದ್ದರು. ಅವುಗಳು “ನವಯುಗ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತೆ ವಿನಃ ಪುಸ್ತಕ ರೂಪದಲ್ಲಿ ದಾಖಲಾಗಿಲ್ಲ. ಕಳ್ಳಿಗೆ ಮಹಾಬಲ ಭಂಡಾರಿ ಅವರು ಕಾನೂನಿನ ಬಗ್ಗೆ ನವಯುಗ, ನವಭಾರತದಲ್ಲಿ ಲೇಖನಗಳನ್ನು ಬರೆಯತ್ತಿದ್ದರು. “ ದೇವರು ಮಾಡಿದ ಕೊಲೆ” ಒಂದು ಮೈನವಿರೇಳಿಸುವ ಕುತೂಹಲಕಾರಿ ಕಾದಂಬರಿ. ಕೆದಂಬಾಡಿ ಜತ್ತಪ್ಪ ರೈ ಯವರು ಬಂಟ ಜನಾಂಗದಲ್ಲಿ ಒಬ್ಬ ಪ್ರಸಿದ್ಧ ಕವಿ. ಇವರು “ಬೇಟೆಯ ನೆನಪುಗಳು” ಎಂಬ ಕೃತಿಯನ್ನು ಬರೆದರು. ಇದಕ್ಕೆ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಸಸ್ತಿ ದೊರೆತಿದೆ. “ಬೇಟೆಯ ಉರುಳು” “ಬಟ್ಟದ ತಪ್ಪಲಿನಿಂದ ಕಡಲಿನವರೆಗೆ”, “ಕರ್ಮಯೊಗಿ” ಕನ್ನಡ ಕೃತಿಯಾದರೆ “ಕುಜಿಲಿ ಪೂಜೆ”, “ ಅಜ್ಜು ಬಿರುತುಳುತ ಪೊಲು”, ಶೂದ್ರ ಏಕಲವ್ಯ ತುಳು ಕೃತಿಯಾಗಿದೆ. ಏರ್ಯ ಲಕ್ಷೀನಾರಾಯಣ ಆಳ್ವರು ಪುರಾಣ ಸಾಹಿತ್ಯ ಮತ್ತು ವೈಚಾರಿಕ ಸಾಹಿತ್ಯ ಎಂಬ ಎರಡು ರೀತಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿರುವ “ಬಂಟ್ಸ್ ಟುಡೆ”ಯ ಸಂಸ್ಥಾಪಕ ಶ್ರೀ ಸಂಜೀವ ಶೆಟ್ಟಿಯವರಾಗಿದ್ದು ಬಂಟ ಲೇಖಕರನ್ನು ಬೆಳೆಸುವಲ್ಲಿ ಸಕ್ರಿಯ ಪಾತ್ರವನ್ನು ಈ ಪತ್ರಿಕೆ ವಹಿಸಿದೆ..
ಯಶಸ್ವಿ ಮಹಿಳಾ ಉದ್ಯಮಿಯಾಗಿ ಗೌರವಕ್ಕೆ ಪಾತ್ರರಾಗಿರುವ ಶ್ರೀಮತಿ ಇಂದಿರಾ ಹೆಗಡೆಯವರು ಬಂಟ ಜನಾಂಗದ ಸ್ತ್ರೀವಾದಿ ಲೇಖಕಿ. ಇವರು ಅನೇಕ ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಅಮಾಯಕ’ ‘ಒಡಲುರಿ’ ‘ಬದಿ’ ಇವು ಇವರ ಕಾದಂಬರಿಗಳು,
ಬಂಟರಿಂದ ಪತ್ರಕೋದ್ಯಮಕ್ಕೆ ಕೊಡುಗೆ
[ಬದಲಾಯಿಸಿ]ಕನ್ನಡ ಪತ್ರಿಕೋದ್ಯಮದಲ್ಲಿ ಬಂಟರ ಬಗ್ಗೆ ವಿವೇಚಿಸಿದಾಗ ನೆನಪಿಗೆ ಬರುವುದು ಹೊನ್ನಯ್ಯ ಶೆಟ್ಟಿಯವರು. ‘ಅವರು ನವಯುಗ’ ಎಂಬ ಕನ್ನಡ ದಿನ ಪತ್ರಿಕೆಯನ್ನು ಆರಂಭಿಸಿದರು. ನಾಡಿನ ಪ್ರಸಿದ್ಧ ಪತ್ರಕರ್ತರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಆದ ದಿ.ಮಟ್ಯಾರು ವಿಠಲ ಹೆಗ್ಡೆಯವರು ದಿ. ಹೊನ್ನಯ್ಯ ಶೆಟ್ಟರ ಜೊತೆಯಲ್ಲೇ ನವಯುಗದ ಪ್ರಾರಂಭದ ಪತ್ರಿಕಾ ವ್ಯವಸ್ಥೆಯನ್ನು ನಡೆಸಿದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ದಿ. ಹೆಗ್ಡೆಯವರು ಮಂಗಳೂರಿನಿಂದ ಒಂದು ಪತ್ರಿಕೆಯನ್ನು ನಡೆಸುತ್ತಿದ್ದರು. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಏಕ ಮಾತ್ರ ಪತ್ರಿಕೆಯಾಗಿದ್ದು ಅದು “ನವಭಾರತ” ಆಗಿತ್ತು. ಇವರು ತಮ್ಮ ಸಂಪಾದಕೀಯವನ್ನು ವಿಶಿಷ್ಟ ಶೈಲಿಯಲ್ಲಿ ಬರೆದು ನಾಡಿನ ಆಗುಹೋಗುಗಳ ಬಗ್ಗೆ ಒತ್ತು ನೀಡಿ ಬರೆಯುತ್ತಿದ್ದರು. ಇದಕ್ಕಾಗಿ ಕರ್ನಾಟಕ ರಾಜ್ಯ ಪತ್ರಕರ್ತ ಸಂಘ ಪ್ರತಿಷ್ಟಿತ ಪಿ. ಆರ್. ರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿತು. ಬಂಟ ಸಮಾಜದಲ್ಲಿ, ಇನ್ನೊಬ್ಬ ಖ್ಯಾತ ಬರಹಗಾರರಾಗಿ, ಪತ್ರಿಕೋದ್ಯಮಿಯಾಗಿ ಮೂಡಿ ಬಂದವರು ವಡ್ಡರ್ಸೆ ರಘು ರಾಮ ಶೆಟ್ಟರು. ಆರಂಭದಲ್ಲಿ ಇವರು ‘ನವಭಾರತ’ ದಲ್ಲಿ ನಂತರ ಬೆಂಗಳೂರಿನ ‘ ತಾಯಿನಾಡು’ ಪತ್ರಿಕೆಯಲ್ಲಿ ದುಡಿದು ತಮ್ಮ ಸಾರ್ಥಕ ಸೇವೆಯನ್ನು ಪ್ರಜಾವಾಣಿಗೆ ಸಲ್ಲಿಸಿದರು. ಇವರ ವರದಿಯ ಶೈಲಿಯೇ ವಿಶಿಷ್ಟವಾಗಿದ್ದು, ಅವರು ಪ್ರತ್ಯೇಕ ಪತ್ರಕರ್ತರಂತೆಕಂಡುಬಂದರು. ಇವರು ಸ್ವಂತ ಪರಿಶ್ರಮದಿಂದ ಮಂಗಳೂರಿನಲ್ಲಿ ‘ಮುಂಗಾರು’ ಕನ್ನಡ ದೈನಿಕದ ಸ್ಥಾಪನೆ ಮಾಡಿದರು.
ಯಕ್ಷಗಾನದಲ್ಲಿ ಬಂಟರು
[ಬದಲಾಯಿಸಿ]ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ತಮ್ಮ ಜೀವನದ ಮುಖ್ಯ ಉದ್ದೇಶಗಳನ್ನು ಬಿಟ್ಟು ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕುಂಬಳೆ ಸೀಮೆಯ ಇಚ್ಲಂಪಾಡಿಗುತ್ತು, ಮಂಗಳೂರಿನ ಕೊಡಿಯಾಲ ಗುತ್ತು ಮುಂತಾದ ಬಂಟ ಮನೆತನಗಳು ಯಕ್ಷಗಾನ ಕಲೆಗೆ ನೀಡಿದ ಪ್ರೋತ್ಸಾಹ ಈ ಇತಿಹಾಸದ ಮಾತಾಗಿದೆ. ಇಚ್ಲಂಪಾಡಿಗುತ್ತಿನವರು ಯಕ್ಷಗಾನ ಕಲಾವಿದರಿಗೆ ಆಶ್ರಯದಾತರಾಗಿದ್ದರು. ಕೊಡಿಯಾಲಗುತ್ತು ಮನೆತನದವರು ಕದ್ರಿ ಮೇಳವನ್ನು ಉತ್ತಮವಾಗಿ ಸಂಘಟಿಸಿದರು. ಜೋಡಾಟ ನಡೆಯುತ್ತಿದ್ದಾಗ ತಾವೇ ಹೋಗುತ್ತಿದ್ದರು. ದಿ. ಕಲ್ಯಾಡಿ ಕೊರಗ ಶೆಟ್ಟಿ ಮತ್ತು ದಿ. ಪಳ್ಳಿ ಸೋಮನಾಥ ಹೆಗ್ಡೆ ಈ ಇಬ್ಬರು ಮಹನೀಯರು ಯಕ್ಷಗಾನ ಕಲೆಯ ಅಭಿವೃದ್ಧಿಗೂ, ಕಲಾವಿದರ ಯೋಗ ಕ್ಷೇಮಕ್ಕೂ ನೀಡಿದ ಕೊಡುಗೆ ಅಪಾರವಾದುದು. ಮೊತ್ತಮೊದಲ ಬಾರಿ ಜನ ಸಾಮಾನ್ಯರ ಬೆಂಬಲದಿಂದಲೇ ಯಕ್ಷಗಾನ ಕಲೆ ಉಳಿಯಲು ಸಾಧ್ಯ ಎಂಬ ಸತ್ಯವನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದಾರೆ.
ಮುಕ್ತಾಯ
[ಬದಲಾಯಿಸಿ]ಇಂದು ಬಂಟರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ರಾಷ್ಟ್ರ ಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಗಳಿಸಿದ ಬಂಟರಿದ್ದಾರೆ. ಆದರೆ ಈ ಸಮುದಾಯದವರು ತಮ್ಮ ಮೂಲ ಆಚರಣೆಗಳನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.ಇಂದಿಗೂ ತಮ್ಮ ಸಂಪ್ರದಾಯವನ್ನು ಮರೆಯದೆ ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.ತಾವು ಜಗತ್ತಿನ ಯಾವುದೇ ಪ್ರದೇಶದಲ್ಲಿರಲಿ,ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ತಮ್ಮ ಪದ್ದತಿಯನ್ನು ಅಲ್ಲಿ ಪಸರಿಸಿದ ಹಿರಿಮೆ ಇವರಿಗೆ ಸೇರಬೇಕು.ಹಾಗೆಯೇ ಸರ್ವ ಧರ್ಮ ಸಹಿಷ್ಣುತೆತಯನ್ನು ಬೆಳೆಸಿಕೊಂಡು ಯಶಸ್ವಿ ಸಾರ್ವಜನಿಕ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ.
- ↑ Aji, Sowmya (16 January 2007). "Abhi could be ghar jamai!". The Times Of India. Archived from the original on 2012-11-03. Retrieved 2014-10-12.