ಫ್ರಿನಿವಿಡ್ ಟೆನಿಸನ್ ಜೆಸೀ
ಫ್ರಿನಿವಿಡ್ ಟೆನಿಸನ್ ಜೆಸೀ (1889-1958). ಇಂಗ್ಲಿಷ್ ಕಾದಂಬರಿಕಾರ್ತಿ.
ಬದುಕು
[ಬದಲಾಯಿಸಿ]ಬ್ರಿಟಿಷ್ ನ್ಯಾಯಾಲಯದಲ್ಲಿ ಅಪರಾಧಗಳಿಗೆ ಸಂಬಂಧಿಸಿದ ಕೆಲವು ಪ್ರಸಿದ್ಧ ವಿಚಾರಣೆಗಳ ವರದಿಗಳಿಗೆ ಸಂಪಾದಕತ್ವದ ಜಾಣ್ಮೆಯಿಂದ ಸ್ವಾರಸ್ಯವಾದ ರೂಪಕೊಟ್ಟು ಹಲವು ಸಂಪುಟಗಳಲ್ಲಿ ಪ್ರಕಟಿಸಿರುವುದೇ ಅಲ್ಲದೆ ಕೆಲವು ಗಮನಾರ್ಹವಾದ ನಾಟಕಗಳನ್ನೂ ಬರದಿದ್ದಾಳೆ. ಈಕೆ ವಿಕ್ಟೋರಿಯ ಕಾಲದಲ್ಲಿ ರಾಷ್ಟ್ರಕವಿಯಾಗಿದ್ದ ಟೆನಿಸನ್ನನ ಸೋದರ ಪ್ರಪೌತ್ರಿ. ತಂದೆ ಪಾದ್ರಿ, ಬಾಲ್ಯದಲ್ಲಿ ಚಿತ್ರಕಲೆಯ ಅಧ್ಯಯನ ಈಕೆಯ ವಿಶೇಷ ಆಸಕ್ತಿಯಾಗಿತ್ತು. ಮೊದಲ ಮಹಾಯುದ್ಧದ ಕಾಲದಲ್ಲಿ ಸ್ವತಂತ್ರ ಪತ್ರಿಕಾ ವರದಿಗಾತಿಯಾಗಿದ್ದಳು. ಆಗ ಬರೆದ ಯುದ್ಧ ಸಂಬಂಧಿ ಪತ್ರಮಾಲೆ ಅನಂತರ ಒಂದು ಸಂಗ್ರಹವಾಗಿ ಪ್ರಕಟವಾಯಿತು. ಯೂರೋಪಿನಲ್ಲಿ ಹರ್ಬರ್ಟ್ ಸಿ. ಹೂವರನ ನೇತೃತ್ವದಲ್ಲಿ ರಚಿತವಾದ ರಾಷ್ಟ್ರೀಯ ಪರಿಹಾರ ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದಳು.
ಬರಹ
[ಬದಲಾಯಿಸಿ]ಎರಡನೆಯ ಮಹಾಯುದ್ಧದ ಸಮಯದಲ್ಲಿ ಸತಿಪತಿಗಳೊಂದಾಗಿ ಬರೆದ ಪತ್ರಗುಚ್ಚಗಳು ಲಂಡನ್ ಫ್ರಂಟ್ (1940). ಹ್ವೈಲ್ ಲಂಡನ್ ಬನ್ರ್ಸ್ (1942) ಎಂಬ ಎರಡು ಗ್ರಂಥಗಳಾಗಿ ಹೊರಬಂದವು.
ಈಕೆಯ ಗಂಡ ಎಚ್. ಎಂ. ಹಾರ್‍ವುಡ್ ವೈದ್ಯವೃತ್ತಿಯೊಂದಿಗೆ ನಾಟಕ ಬರೆಯುವ ಹವ್ಯಾಸವನ್ನೂ ಇಟ್ಟುಕೊಂಡಿದ್ದ. ಮದುವೆಯಾದ ಮೇಲೆ ಇಬ್ಬರೂ ಕೂಡಿ ಬಿಲೆಟೆಡ್ (1920), ದಿ ಪೆಲಿಕನ್ (1926) ಹೌ ಟು ಬಿ ಹೆಲ್ತೀ ದೋ ಮ್ಯಾರೀಡ್ (1930) ಮುಂತಾದ ಕೆಲವು ಲಘು ಪ್ರಹಸನಗಳನ್ನು ಬರೆದರು.
ದಿ ಮಿಲ್ಕೀ ವೇ (1913), ದಿ ಹ್ವೈಟ್ ರೈಬ್ಯಾಂಡ್ (1921), ಟಾಮ್ ಪೂಲ್ (1926), ಮೂನ್‍ರೇಕರ್ (1927), ಸೀಕ್ರೆಟ್ ಬ್ರೆಡ್ ಮುಂತಾದ ಕಾದಂಬರಿಗಳಲ್ಲದೆ ಎ ಪಿನ್ ಟು ಸಿ ಎ ಪೀಪ್‍ಷೋ (1934) ಎಂಬ ಸುಪ್ರಸಿದ್ಧ ಪತ್ತೇದಾರಿ ಕಾದಂಬರಿಯನ್ನೂ ರಚಿಸಿದ್ದಾಳೆ.
ಅಪರಾಧಶಾಸ್ತ್ರದಲ್ಲಿ, ಘೋರ ಅಪರಾಧ ಪ್ರಕರಣಗಳ ವೃತ್ತಾಂತಗಳ ವರದಿಗಳಲ್ಲಿ ವಿಶೇಷ ಕುತೂಹಲ, ಆಸಕ್ತಿಗಳಿಂದ ಈಕೆ ಹಲವರ ಗಮನವನ್ನು ಸೆಳೆದ ಅಂಥ ಕೆಲವು ಮೊಕದ್ದಮೆಗಳ ವಿವರಗಳನ್ನು ಸಂಗ್ರಹಿಸಿ ಸ್ವಾರಸ್ಯವಾದ ನಿರೂಪಣೆಯ ಒಪ್ಪ ಕೊಟ್ಟು ಪ್ರಕಟಿಸಿದ್ದಾಳೆ. ಅವುಗಳಲ್ಲಿ ಮ್ಯಾಡ್‍ಲೇನ್ ಸ್ಮಿತ್, ಟಿಮೋತಿ, ಇವ್ಯಾನ್ಸ್ ಮತ್ತು ಜಾನ್ ಕ್ರಿಸ್ಟಿ ಇವರುಗಳಿಗೆ ಸಂಬಂಧಿಸಿದ ಸುಪ್ರಸಿದ್ಧ ಮೊಕದ್ದಮೆಗಳ ಪುಸ್ತಕಗಳು ಅನ್ಯಾದೃಶವಾಗಿದೆ. ದಿ ಹ್ಯಾಪಿ ಬ್ರೈಡ್ (1920) ಎಂಬ ಒಂದೇ ಒಂದು ಕವನ ಸಂಕಲನವೂ ಈಕೆಯ ಸಾಹಿತ್ಯಕೃತಿಗಳಲ್ಲಿ ಒಂದು.